Site icon Vistara News

ರಾಜ ಮಾರ್ಗ ಅಂಕಣ | ವಯಸ್ಸಿನ ಬಗ್ಗೆ ಅವನು ಅಚಿಂತ! 40ನೇ ವಯಸ್ಸಲ್ಲಿ ಕೈಯಲ್ಲಿತ್ತು ನಾಲ್ಕು ಪದಕ

sharath kamal

ಆತನ ವಯಸ್ಸು ಬರೋಬ್ಬರಿ 40! ಈ ವಯಸ್ಸಲ್ಲಿ ಆತ 2022ರ ಬರ್ಮಿಂಗ್ಹಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿ ಟೇಬಲ್ ಟೆನ್ನಿಸ್‌ನಲ್ಲಿ ಮೂರು ಚಿನ್ನದ ಪದಕ ಸಹಿತ ಒಟ್ಟು ನಾಲ್ಕು ಪದಕ ಗೆಲ್ಲುತ್ತಾನೆ ಅಂದರೆ ಆತನ ಸಾಧನೆಯ ಹಸಿವು ಎಷ್ಟು ತೀವ್ರವಾಗಿರಬೇಕು ಅಲ್ಲವೇ? ಅದರಲ್ಲಿ ಕೂಡ ಒಂದು ಮೆನ್ಸ್‌ ಸಿಂಗಲ್ಸ್ ಚಿನ್ನ ಅಂದರೆ ಆತ ಇನ್ನೂ ಗ್ರೇಟ್! ಈ ಸಾಧನೆಗೆ ಕೈಗನ್ನಡಿ ಆಗಿ ಆತನ ಕೈಗೆ ಕಾಮನ್ವೆಲ್ತ್ ಸಮಾರೋಪ ಕಾರ್ಯಕ್ರಮದ ಪಥ ಸಂಚಲನದ ಹೊತ್ತಿಗೆ ಭಾರತದ ಧ್ವಜ ಬಂದಿತ್ತು!

ಆತ ಅಚಂತಾ ಶರತ್ ಕಮಲ್ ಎಂಬ ಕಮಾಲ್! ಆತನ ತಂದೆ ಮತ್ತು ಚಿಕ್ಕಪ್ಪ ಇಬ್ಬರೂ ರಾಜ್ಯ ಮಟ್ಟದ ಆಟಗಾರರು ಮತ್ತು ನ್ಯಾಷನಲ್ ಕೋಚ್ ಆದ ಕಾರಣ ಆತ ಸ್ಲೇಟ್ ಹಿಡಿಯುವ ಮೊದಲೇ ಆತನ ಕೈಗೆ ಟಿಟಿ ಬ್ಯಾಟ್ ಬಂದಿತ್ತು!

ಕಳೆದ ಇಪ್ಪತ್ತು ವರ್ಷಗಳ ಹಿಂದೆ ವೃತ್ತಿಪರ ಟಿಟಿ ಆಟಗಾರನಾಗಿ ಬ್ಯಾಟ್ ಹಿಡಿದ ಅಚಂತಾ ಹಿಂದೆ ನೋಡುವ ಪ್ರಸಂಗವೇ ಬರಲಿಲ್ಲ! ಕಳೆದ ಹತ್ತು ವರ್ಷಗಳಿಂದ ಆತ ನಿರಂತರವಾಗಿ ಟಿಟಿಯಲ್ಲಿ ನ್ಯಾಷನಲ್ ಚಾಂಪಿಯನ್ ಆಗಿದ್ದಾನೆ! ಅದೊಂದು ಅದ್ಭುತವಾದ ದಾಖಲೆ.
ಕಾಮನವೆಲ್ತ್ ಕೂಟಗಳಲ್ಲಿ 2006ರಿಂದ ಭಾಗವಹಿಸುತ್ತಿರುವ ಅಚಂತಾ ಈವರೆಗೆ ಒಮ್ಮೆ ಕೂಡ ಬರಿಗೈಯಿಂದ ಬಂದದ್ದೇ ಇಲ್ಲ! 2006ರ ಮೆಲ್ಬೋರ್ನ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2 ಚಿನ್ನದಿಂದ ಆರಂಭಿಸಿ 2010ರಲ್ಲಿ ಒಂದು ಗೋಲ್ಡ್, 2018ರಲ್ಲಿ ಒಂದು ಗೋಲ್ಡ್… ಹೀಗೆ ಸಾಗುತ್ತದೆ ಅವರ ಜೈತ್ರಯಾತ್ರೆ!

ಈ ಬಾರಿಯಂತೂ ಬರ್ಮಿಂಗ್ಹಮ್‌ನಲ್ಲಿ ಮೂರು ಚಿನ್ನ ಮತ್ತು ಒಂದು ಸಿಲ್ವರ್ ಗೆಲ್ಲುವುದರ ಮೂಲಕ ಅಚಂತಾ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ.

ಈ ಬಾರಿ ಅವರಿಗೆ ಹಿಂದಿಗಿಂತ ಹೆಚ್ಚು ಸವಾಲುಗಳು ಇದ್ದವು. ಹೇಳಿ ಕೇಳಿ ಟಿಟಿ ಅಂದರೆ ಭಾರೀ ಚುರುಕಿನ ಆಟ. ಏಕಾಗ್ರತೆ, ತಾಳ್ಮೆ, ಪಾದಗಳ ಚಲನೆ, ಕಣ್ಣೋಟ, ಕೈಗಳ ಚಲನೆ, ದೇಹದ ಸಮತೋಲನ, ಶಕ್ತಿಶಾಲಿ ಹಿಂಗೈ ಹೊಡೆತಗಳು, ಫಿಟ್ನೆಸ್‌ ಇಲ್ಲದಿದ್ದರೆ ಪಂದ್ಯವನ್ನು ಗೆಲ್ಲುವುದು ಕಷ್ಟ. ಈ ನಲ್ವತ್ತರ ಹರೆಯದಲ್ಲಿ ಕೂಡ ಈ ರೀತಿಯ ತೀವ್ರವಾದ ಚಲನೆ ಮತ್ತು ಕಸುವು ಅವರು ಉಳಿಸಿಕೊಂಡಿದ್ದಾರೆ ಎಂದಾದರೆ ಅಚಂತಾ ಶರತ್ ಅವರ ಮಹತ್ವವು ನಮಗೆ ತಿಳಿಯುತ್ತದೆ. ಅದರಲ್ಲಿಯೂ ಈ ಬಾರಿಗೆ ಕೊರೊನಾ ಸಾಂಕ್ರಾಮಿಕ ಕಾಯಿಲೆಯ ಕಾರಣಕ್ಕೆ ಎರಡೂವರೆ ವರ್ಷಗಳಿಂದ ಯಾವುದೇ ಅಂತಾರಾಷ್ಟ್ರೀಯ ಟಿಟಿ ಇವೆಂಟ್ ನಡೆದಿರಲಿಲ್ಲ.

ಆರು ಆಡಿಗಿಂತ ಹೆಚ್ಚು ಎತ್ತರದ ಮತ್ತು 82ಕೆಜಿ ದೇಹ ತೂಕ ಇರುವ ಅಚಂತಾ ಶರತ್ ಅವರ ಆಟವನ್ನು ನೋಡುವಾಗ ಅವರ ಸಾಧನೆಯ ಹಸಿವು ಕಣ್ಣ ಮುಂದೆ ಬರುತ್ತದೆ. ಬರ್ಮಿಂಗ್ಹಮ್‌ನಲ್ಲಿ ಈ ಬಾರಿ ಶೆಡ್ಯೂಲ್ ತುಂಬಾ ಬಿಗು ಇದ್ದ ಕಾರಣ ಮೂರು ದಿನಗಳ ಅವಧಿಯಲ್ಲಿ 16 ಪಂದ್ಯಗಳನ್ನು ಆತ ಆಡಬೇಕಾಯಿತು. ಅದರಲ್ಲಿಯೂ ಸಿಂಗಲ್ಸ್, ಡಬ್ಬಲ್, ಮಿಕ್ಸ್‌ಡ್ ಡಬಲ್ಸ್, ಟೀಮ್ ಪಂದ್ಯಗಳು ಒಂದರ ಹಿಂದೆ ಒಂದು ಇದ್ದವು. ಉಸಿರು ತೆಗೆದುಕೊಳ್ಳಲು ವ್ಯವಧಾನ ಇರಲಿಲ್ಲ. ಹಾಗಿದ್ದರೂ ಅಚಂತಾ ಶರತ್ ಗೆದ್ದಿದ್ದಾರೆ ಅಂದರೆ ಅದು ಗ್ರೇಟ್.

ಏಕಾಗ್ರತೆ ಮತ್ತು ಫಿಟ್ನೆಸ್‌ಗಾಗಿ ಯೋಗ ಮತ್ತು ಪ್ರಾಣಾಯಾಮ ತರಬೇತು ಪಡೆಯುತ್ತಿರುವ ಅವರು ಈ ಬಾರಿ ನಾಲ್ಕು ಪದಕ ಗೆದ್ದು ಭಾರತಕ್ಕೆ ಹಿಂದೆ ಬಂದಾಗ ಪತ್ರಕರ್ತರು ಅವರಿಗೆ ಪ್ರಶ್ನೆ ಕೇಳಿದ್ದರು – ನಿಮಗೆ 40 ವರ್ಷ ಆಯ್ತು. ಇನ್ನು ನಿವೃತ್ತಿ ಪಡೆಯುತ್ತೀರಾ?

ಅದಕ್ಕೆ ಅಚಂತಾ ಕೊಟ್ಟ ಉತ್ತರ ಮಾರ್ಮಿಕ ಆಗಿತ್ತು. ‘ಚಾಂಪಿಯನ್ ಎಂದರೆ ನಿರಂತರ ಗೆಲ್ಲುವವನು. ನನಗ್ಯಾಕೆ ನಿವೃತ್ತಿ? ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ ಮುಗಿಯುವವರೆಗೂ ನನ್ನ ಹತ್ತಿರ ನಿವೃತ್ತಿಯ ಪ್ರಶ್ನೆ ಕೇಳಬೇಡಿ!’

ಊರಿಗೆ ಬಂದ ಮರುದಿನವೇ ಅಚಂತಾ ಶರತ್ ಟಿಟಿ ರಾಕೆಟ್ ಹಿಡಿದು ಪ್ರಾಕ್ಟೀಸ್‌ಗೆ ಹೊರಟ ಸುದ್ದಿ ಬಂದಿದೆ. ಚಾಂಪಿಯನ್ ಎಂದಿಗೂ ನಿವೃತ್ತಿ ಹೊಂದುವುದೇ ಇಲ್ಲ!

ಇದನ್ನೂ ಓದಿ| ರಾಜ ಮಾರ್ಗ | ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!

Exit mobile version