ಕೇರಳದ ಪ್ರಸಿದ್ಧ ಯುದ್ಧ ಕಲೆ ಕಲರಿ ಪಯಟ್ಟು ಇಂದು ಜಗತ್ತಿನ ಗಮನ ಸೆಳೆದಿದೆ. ಅದರ ಮೂಲದ ಬಗ್ಗೆ ಒಂದಿಷ್ಟು ಗೊಂದಲವಿದ್ದರೂ ಕೇರಳವು 3,000 ವರ್ಷಗಳಿಂದ ಅದನ್ನು ಬಹಳ ದೊಡ್ಡ ಮಟ್ಟದಲ್ಲಿ ಪೋಷಿಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಅದೊಂದು ವೈಜ್ಞಾನಿಕವಾದ ಆತ್ಮರಕ್ಷಣೆಯ ಕಲೆ. ಕೇರಳದಲ್ಲಿ ಅದನ್ನು ಇಂದಿಗೂ ಗುರುಕುಲ ಪದ್ಧತಿಯಲ್ಲಿ ಮಾತ್ರ ಕಲಿಸಿ ಕೊಡುತ್ತಿದ್ದಾರೆ. ಆ ಕಲೆಯನ್ನು ಸಾಂಪ್ರದಾಯಿಕವಾಗಿ ಕಲಿಸುವ ಮಹಾಗುರುಗಳು ಇಂದಿಗೂ ಅಲ್ಲಿ ಇದ್ದಾರೆ. ಅಂಥವರಲ್ಲಿ ಮೀನಾಕ್ಷಿ ಅಮ್ಮ ಕೂಡ ಒಬ್ಬರು.
ಅವರ ವಯಸ್ಸು ಈಗ ಕೇವಲ 81 ವರ್ಷ!
ಮೀನಾಕ್ಷಿ ಅಮ್ಮ ಅವರು ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ಯುದ್ಧ ಕಲೆಯ ಶಿಕ್ಷಕಿ ಎಂದು ಹೆಸರು ಪಡೆದಿದ್ದಾರೆ!
ಅವರು ತಮ್ಮ ಐದನೆಯ ವರ್ಷದಲ್ಲಿ ನೃತ್ಯದೊಂದಿಗೆ ಕಲರಿ ಕಲಿಯಲು ಆರಂಭ ಮಾಡಿದ್ದರು. ಆಗ ಇಡೀ ಕಲರಿ ಕಲಿಯುವ ತಂಡದಲ್ಲಿ ಅವರೊಬ್ಬರೇ ಹುಡುಗಿ! ಆದರೆ ಆಕೆಗೆ ಅಪಾರವಾದ ಧೈರ್ಯ ಮತ್ತು ಸಾಧನೆಯ ಹಸಿವು ಇತ್ತು. ಅವರ ಗುರು ರಾಘವನ್ ಮಾಸ್ಟರ್. ಮುಂದೆ 17ನೆಯ ವಯಸ್ಸಿನಲ್ಲಿ ಅವರು ಅದೇ ಗುರುವಿನ ಜೊತೆ ಮದುವೆಯಾದರು. ಕಲರಿ ಕಲೆಯಲ್ಲಿ ಅಪಾರವಾದ ಪರಿಣತಿಯನ್ನು ಪಡೆದರು.
ಕಲರಿ ಗುರುಕುಲವನ್ನು ಆರಂಭ ಮಾಡಿದರು ಮೀನಾಕ್ಷಿ ಅಮ್ಮ
1950ರಲ್ಲಿ ಗಂಡ, ಹೆಂಡತಿ ಸೇರಿ ವಡಕರ ಎಂಬಲ್ಲಿ ಒಂದು ಕಲರಿ ಗುರುಕುಲವನ್ನು ತೆರೆಯುತ್ತಾರೆ. ಸಾವಿರ ಸಾವಿರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕಲರಿ ವಿದ್ಯೆಯನ್ನು ಧಾರೆ ಎರೆಯುತ್ತಾರೆ. 2007ರಲ್ಲಿ ಗಂಡ ತೀರಿ ಹೋದ ನಂತರ ಹೆಂಡತಿಯೇ ಮುಂದೆ ನಿಂತು ಕಲರಿ ಗುರುಕುಲವನ್ನು ಮುಂದೆ ತೆಗೆದುಕೊಂಡು ಹೋದರು. ಈಗ ವರ್ಷಕ್ಕೆ 150-200 ಎಲ್ಲಾ ವಯೋಮಾನದ ಹುಡುಗ, ಹುಡುಗಿಯರು ಆಸಕ್ತಿಯಿಂದ ಕಲಿಯಲು ಬರುತ್ತಾರೆ. ಇತ್ತೀಚೆಗೆ ವಿದೇಶದ ವಿದ್ಯಾರ್ಥಿಗಳು ಕೂಡ ಕಲರಿ ಕಲಿಯಲು ಬರುತ್ತಾರೆ. ಗುರುಕುಲವಾದ ಕಾರಣ ವಿದ್ಯೆಗೆ ಗುರುಗಳು ಶುಲ್ಕವನ್ನು ತೆಗೆದುಕೊಳ್ಳಲು ಅವಕಾಶವಿಲ್ಲ. ಶಿಕ್ಷಣ ಪೂರ್ತಿಯಾದ ನಂತರ ಶಿಷ್ಯರು ಒಂದಿಷ್ಟು ಗುರುದಕ್ಷಿಣೆ ಕೊಟ್ಟು ಹೋಗುತ್ತಾರೆ. ಆದರೆ ಈ ಅಜ್ಜಿ ಕಳೆದ 69 ವರ್ಷಗಳಿಂದ ಅದೇ ಶೃದ್ಧೆ ಮತ್ತು ಪ್ರೀತಿಯಿಂದ ಕಲರಿಯನ್ನು ಕಲಿಸುತ್ತಾ ಬಂದಿದ್ದಾರೆ.
ಕಲರಿಯು ತುಂಬಾ ಕಠಿಣವಾದ ಸಮರಕಲೆ
ಕಲರಿಯು ತುಂಬಾ ಕಷ್ಟಕರವಾದ ಯುದ್ಧ ಕಲೆ. ಅದಕ್ಕೆ ಕಣ್ಣುಗಳು, ಕಾಲು, ಕೈಗಳು, ಇಡೀ ದೇಹ ಮತ್ತು ಮನಸ್ಸಿನ ಸಂತುಲನಗಳು ಅಗತ್ಯ. ಕೋಲನ್ನು ಮತ್ತು ಕತ್ತಿಯಂತಹ ಹರಿತವಾದ ಆಯುಧಗಳನ್ನು ಬಳಕೆ ಮಾಡುವುದರಿಂದ ಅಪಾಯ ಹೆಚ್ಚು. ದೈಹಿಕ ಮತ್ತು ಮಾನಸಿಕ ಒತ್ತಡ ಹೆಚ್ಚು. ಕಲರಿ ಕಲಿಯುವ ಸಂದರ್ಭದಲ್ಲಿ ಗಾಯಗಳು ಆಗುವ ಸಾಧ್ಯತೆಗಳು ಹೆಚ್ಚು. ಅಂತಹ ಯುದ್ಧಕಲೆಯಲ್ಲಿ ಮೀನಾಕ್ಷಿ ಅಮ್ಮ ಈ ಪ್ರಾಯದಲ್ಲಿ ಕೂಡ ಮಾಡುವ ಹೋರಾಟಗಳನ್ನು ನೋಡುವಾಗ ರೋಮಾಂಚನ ಆಗುತ್ತದೆ.
ಭಾರೀ ಗಟ್ಟಿಗಿತ್ತಿ ಈ ಕಲರಿ ಅಜ್ಜಿ!
ಅವರು ಸೀರೆಯುಟ್ಟು ಕಲರಿ ಕಣಕ್ಕೆ ಇಳಿಯುತ್ತಾರೆ. ಆದರೂ ಅವರ ಚುರುಕಿನ ಪಾದ ಚಲನೆ, ಕೈಗಳ ವೇಗ, ದೃಷ್ಟಿಯ ಚುರುಕು, ದೇಹ ತ್ರಾಣ, ಪಾಸಿಟಿವ್ ಎನರ್ಜಿ ನೋಡುವಾಗ ಅಚ್ಚರಿ ಆಗುತ್ತದೆ. 81ರ ವಯಸ್ಸಿನ ಅಜ್ಜಿ ಮೊಮ್ಮಕ್ಕಳ ಪ್ರಾಯದ ತರುಣ, ತರುಣಿಯರ ಜೊತೆ ಸೆಣಸುವ ವಿಡಿಯೋಗಳನ್ನು ನೋಡಿ ನಾನಂತೂ ಮೂಕವಿಸ್ಮಿತ ಆಗಿದ್ದೇನೆ! ಈ ಅವಧಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಕೂಡ ಅಜ್ಜಿ ಗೆದ್ದು ಬಂದಿದ್ದಾರೆ! ಈಗ ತನ್ನ ಶಿಷ್ಯರನ್ನು ಗೆಲ್ಲಿಸುತ್ತಿದ್ದಾರೆ. ಅವರ ಒಬ್ಬ ಮಗ ಈಗ ಅವರ ಕಲರಿ ಗುರುಕುಲವನ್ನು ಗುರುವಾಗಿ ಮುನ್ನಡೆಸುತ್ತಿದ್ದಾರೆ. ಆದರೆ ಈ ಅಜ್ಜಿಯು ಇಂದಿಗೂ ಕಲರಿ ಪಾಠ ಮಾಡುವುದನ್ನು ಬಿಟ್ಟಿಲ್ಲ.
ಕಲರಿ ಅಜ್ಜಿಗೆ ಒಲಿಯಿತು ಪದ್ಮಶ್ರೀ ಪ್ರಶಸ್ತಿ
ಕಲರಿ ಯುದ್ಧ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅವರು ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ತನ್ನ ಕೊನೆಯ ಉಸಿರಿನವರೆಗೆ ಕಲರಿ ಬಿಡುವುದಿಲ್ಲ ಎಂದು ಅವರು ಹೇಳುತ್ತಾರೆ. ಅವರ ನಾಲ್ಕು ಮಕ್ಕಳು, ಮೊಮ್ಮಕ್ಕಳು ಕೂಡ ಕಲರಿ ಕಲಿತಿದ್ದಾರೆ. ಮೀನಾಕ್ಷಿ ಅಮ್ಮನ ಸಾಧನೆ ಬಗ್ಗೆ ಇಂದು ಅವರ ಕುಟುಂಬ ಮಾತ್ರವಲ್ಲ ಇಡೀ ಕೇರಳ ಹೆಮ್ಮೆ ಪಡುತ್ತಿದೆ. ಅವರೇ ಅಭಿನಯಿಸಿದ ‘ಲುಕ್ ಬ್ಯಾಕ್ ‘ ಎಂಬ ಸಿನೆಮಾವು ಚಿತ್ರೀಕರಣ ಮುಗಿಸಿದ್ದು ಈಗ ಬಿಡುಗಡೆಗೆ ಸಿದ್ದವಾಗಿದೆ. ಅಂದ ಹಾಗೆ ಅವರಿಗೆ ದೇಶವು 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಕಲರಿಯ ಮಹಾಮಾತೆ ಮೀನಾಕ್ಷಿ ಅಮ್ಮನಿಗೆ ನಾವೆಲ್ಲರೂ ಒಂದು ಸಲಾಂ ಹೇಳೋಣ ಅಲ್ಲವೇ!
ಇದನ್ನೂ ಓದಿ: ರಾಜ ಮಾರ್ಗ ಅಂಕಣ: ಬಂಜರು ಭೂಮಿಯಲ್ಲಿ ದಾಳಿಂಬೆ ಬೆಳೆದು ಲಕ್ಷ ಲಕ್ಷ ಗಳಿಸಿದ ಸಂತೋಷಿ ದೇವಿ!