ಸ್ತ್ರೀ ಎಂದರೆ ಭಗವಂತನ ಅದ್ಭುತ ಸೃಷ್ಟಿ! ನಮ್ಮೊಳಗಿನ ಅನೂಹ್ಯವಾದ ಪ್ರೇರಣಾ ಶಕ್ತಿ! ಸದಾಕಾಲ ಚೈತನ್ಯಶಾಲಿ ಆಗಿ ನಿಲ್ಲುವ ಒಂದು ಪವರ್ ಹೌಸ್! ನಮ್ಮೆಲ್ಲರನ್ನೂ ಮುನ್ನಡೆಸುವ ಒಂದು ಅಂತಃಶಕ್ತಿ! ಇನ್ನೂ ಏನೇನೋ!
ಈ ಸಮಾಜ ಯಾವತ್ತೂ ಪುರುಷ ಪ್ರಧಾನವಾಗಿ ಯೋಚನೆ ಮಾಡುತ್ತದೆ. ಅಷ್ಟಾದರೂ ಸ್ತ್ರೀಯರನ್ನು ದೇವಿಯಾಗಿ ಪೂಜೆ ಮಾಡಿದ ನಮ್ಮ ಹಿರಿಯರು ನಮಗೆ ಸ್ತ್ರೀಯನ್ನು ‘ಸ್ವಯಂಭೂ ಶಕ್ತಿ ಸ್ವರೂಪಿಣಿ ‘ ಎಂದು ಪರಿಚಯ ಮಾಡಿದರು! ಆಕೆ ಅಮ್ಮನಾಗಿ, ಅಜ್ಜಿಯಾಗಿ, ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಹೆಂಡತಿಯಾಗಿ, ಗೆಳತಿಯಾಗಿ, ಪ್ರೇಮಿಯಾಗಿ… ಹೀಗೆ ಹಲವು ಆಯಾಮಗಳಲ್ಲಿ ಸಮಾಜದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುತ್ತಾರೆ. ಅಂತಹ ಸ್ತ್ರೀಯಲ್ಲಿ ಈ ಹತ್ತು ಸಾಮರ್ಥ್ಯಗಳು ಪುರುಷರಿಗಿಂತ ಅಧಿಕವಾಗಿರುವುದು ನನಗೆ ಕನ್ವಿನ್ಸ್ ಆಗಿದೆ! ಅವುಗಳನ್ನು ಓದುತ್ತಾ ಸಮಸ್ತ ಸ್ತ್ರೀ ಶಕ್ತಿಗೆ ಒಂದು ಸಲಾಂ ಹೊಡೆಯೋಣ!
೧) ದೀರ್ಘಾಯುಷ್ಯ
ದೀರ್ಘಾಯುಷ್ಯದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದೆ ಇರುತ್ತಾರೆ! ನೀವು ಪತ್ರಿಕೆಗಳಲ್ಲಿ ನಾಲ್ಕು ತಲೆಮಾರು, ಐದು ತಲೆಮಾರು ಆದ ಸ್ತ್ರೀಯರ ಫೋಟೊಗಳನ್ನು ನೋಡುತ್ತೀರಿ. ಆದರೆ ಒಂದಾದರೂ ಐದು ತಲೆಮಾರಿನ ಪುರುಷರ ಫೋಟೊ ನೋಡಿದ್ದೀರಾ? ಅದಕ್ಕೆ ಕಾರಣ ಸ್ತ್ರೀಯರ ಮೈಂಡ್ ಸೆಟ್. ಅವರು ಎಲ್ಲ ಭಾವನೆಗಳನ್ನು ಒಳಗೆ ಇಟ್ಟುಕೊಳ್ಳದೆ ಹೊರ ಹಾಕುತ್ತಾರೆ. ಅಳಬೇಕು ಅನ್ನಿಸಿದಾಗ ಅತ್ತು ಒತ್ತಡವನ್ನು ಹೊರಹಾಕುತ್ತಾರೆ. ಪುರುಷರು ತಾವು ಸ್ಟ್ರಾಂಗ್ ಎಂದು ಪ್ರೂವ್ ಮಾಡಲು ಹೋಗಿ ಕಣ್ಣೀರು ಒಳಗೇ ಇಟ್ಟುಕೊಳ್ಳುತ್ತಾರೆ! ಮತ್ತು ಹೃದಯದ ಮೇಲೆ ಒತ್ತಡ ಜಾಸ್ತಿ ಮಾಡಿಕೊಳ್ಳುತ್ತಾರೆ.
೨) ಸೌಂದರ್ಯ ಪ್ರಜ್ಞೆ
ಸ್ತ್ರೀಯರಲ್ಲಿ ಸಹಜ ಸೌಂದರ್ಯ ಪ್ರಜ್ಞೆ ಇರುವ ಕಾರಣ ಕನ್ನಡಿಯು ಸೃಷ್ಟಿ ಆಯಿತು. ಇಂದು ಚಿನ್ನದ ಅಂಗಡಿಗಳು, ಬಟ್ಟೆ ಅಂಗಡಿಗಳು, ಬ್ಯೂಟಿ ಪಾರ್ಲರ್‌ಗಳು ಬದುಕುತ್ತಿರುವುದೇ ಈ ಸೌಂದರ್ಯ ಪ್ರಜ್ಞೆಯ ಬಂಡವಾಳದ ಮೇಲೆ!
೩) ಕ್ಷಮಾ ಗುಣ
ಆಕೆಯನ್ನು ನಮ್ಮ ಹಿರಿಯರು ‘ಕ್ಷಮಯಾ ಧರಿತ್ರಿ’ ಎಂದು ಕರೆದರು. ಅಂದರೆ ಭೂಮಿಯಷ್ಟು ಕ್ಷಮಾ ಗುಣ ಆಕೆಯದ್ದು ಎಂದರ್ಥ! ಇದಕ್ಕೆ ನೂರಾರು ಉದಾಹರಣೆ ಕೊಡಬಹುದು. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಒಂದು ಲೈಂಗಿಕ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಅಮೆರಿಕನ್ ಟಿವಿ ಕ್ಯಾಮೆರಾದ ಮುಂದೆ ಕಣ್ಣೀರು ಹಾಕುತ್ತಿದ್ದಾಗ ಅತನ ತಲೆ ಸವರುತ್ತ ‘ಅಳಬೇಡ ಬಿಲ್, ನಾನಿದ್ದೇನೆ’ ಎಂದು ಧೈರ್ಯ ತುಂಬಿದ ಪತ್ನಿ ಹಿಲರಿ ಕ್ಲಿಂಟನ್ ನನಗೆ ಮರೆತುಹೋಗುವುದಿಲ್ಲ!
೪) ಮಲ್ಟಿ ಟಾಸ್ಕಿಂಗ್
ಒಂದೇ ಹೊತ್ತಿನಲ್ಲಿ ಹತ್ತಾರು ಕೆಲಸಗಳನ್ನು ಅಷ್ಟೇ ಕ್ಷಮತೆಯಿಂದ ಮಾಡುವ ಸ್ತ್ರೀ ನಮಗೆ ನಿಜವಾಗಿ ಅದ್ಭುತ! ಬೆಳಗಿನ ಹೊತ್ತು ಎಲ್ಲ ಮನೆಯಲ್ಲಿ ಗಮನಿಸಿದಾಗ ಈ ಸತ್ಯ ನಿಮಗೆ ಅರ್ಥ ಆಗುತ್ತದೆ. ಅದರಲ್ಲಿ ಕೂಡ ಕೆಲಸಕ್ಕೆ ಹೋಗುವ ಪತ್ನಿ ಇದ್ದರೆ ಆಕೆಯ ಮಲ್ಟಿ ಟಾಸ್ಕಿಂಗ್ ಶಕ್ತಿ ಇನ್ನೂ ಹೆಚ್ಚು ಪವರಫುಲ್ ಆಗಿರುತ್ತದೆ!
೫) ಫೋಕಸ್
ಒಂದು ಕಾಲದಲ್ಲಿ ಸ್ತ್ರೀಯರನ್ನು ‘ಚಿತ್ತ ಚಂಚಲೆ’ ಎಂದು ಕರೆಯುತ್ತಿದ್ದರು. ಆದರೆ ಈ ಬದಲಾದ ವ್ಯವಸ್ಥೆಯಲ್ಲಿ ಸ್ತ್ರೀ ಹೆಚ್ಚು ಫೋಕಸಡ್ ಆಗಿದ್ದಾರೆ. ಒಂದು ಲಕ್ಷ್ಯವನ್ನು ಕಣ್ಣು ಮುಂದೆ ಇಟ್ಟುಕೊಂಡು ಕೆಲಸ ಮಾಡಲು ಆರಂಭ ಮಾಡಿದರೆ ಅದು ಪೂರ್ತಿ ಆಗುವತನಕ ಆಕೆ ಕ್ವಿಟ್ ಮಾಡಿದ ಉದಾಹರಣೆಯೇ ಇಲ್ಲ! ಅದರಿಂದಾಗಿ ಇಂದು ಹುಡುಗಿಯರು ಹುಡುಗರಿಗಿಂತ ಹೆಚ್ಚು ರ‍್ಯಾಂಕ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ! ಗೆಲ್ಲುತ್ತಿದ್ಧಾರೆ!
೬) ಉಳಿತಾಯ ಪ್ರವೃತ್ತಿ
ನೆಹರೂ ಪ್ರಧಾನಿ ಆಗಿದ್ದಾಗ ಪಾರ್ಲಿಮೆಂಟನ ಬಜೆಟ್ ಅಧಿವೇಶನದಲ್ಲಿ ಹೇಳಿದ ಮಾತು – ‘ನಮ್ಮ ದೇಶದ ಎಕಾನಮಿ ನಿಂತಿರುವುದು ನಮ್ಮ ಅಡುಗೆ ಮನೆಯ ಸಕ್ಕರೆ ಡಬ್ಬ ಮತ್ತು ಸಾಸಿವೆ ಡಬ್ಬಗಳಲ್ಲಿ’ ಎಂದು! ಸಾಮಾನ್ಯವಾಗಿ ಪುರುಷರು ಒಂದು ರೂಪಾಯಿ ಸಂಪಾದನೆ ಮಾಡಿದರೆ ಎರಡು ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಮಹಿಳೆಯರು ಒಂದು ರೂಪಾಯಿ ಸಂಪಾದನೆ ಮಾಡುತ್ತಾರೆ ಮತ್ತು ಗಂಡನ ಕಿಸೆಯಿಂದ ಖರ್ಚು ಮಾಡಿಸುತ್ತಾರೆ ಎನ್ನುತ್ತಾರೆ ಬೀಚಿ! ಇಂದು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮೂಲಕ ಆಗುತ್ತಿರುವ ಆರ್ಥಿಕ ಕ್ರಾಂತಿಯನ್ನು ನೋಡಿದಾಗ ನೀವು ಸ್ತ್ರೀಯರ ಉಳಿತಾಯ ಶಕ್ತಿಯನ್ನು ಒಪ್ಪಿಕೊಳ್ಳುತ್ತೀರಿ!
೭) ಪ್ರೇರಣೆ ಕೊಡುವ ಶಕ್ತಿ!
ಸಮಾಜಕ್ಕೆ ಪ್ರೇರಣೆ ಕೊಡುವ ಶಕ್ತಿಯಲ್ಲಿ ಖಂಡಿತವಾಗಿ ಮಹಿಳೆಯೇ ಮುಂದೆ ಇರುತ್ತಾರೆ. ಅದಕ್ಕೂ ನೂರಾರು ಉದಾಹರಣೆ ಕೊಡಬಹುದು. ಒಬ್ಬ ತಾಯಿಯಾಗಿ ಜೀಜಾಬಾಯಿ ಶಿವಾಜಿಗೆ ಕೊಟ್ಟ ಪ್ರೇರಣೆ ಅದ್ಭುತ! ರನ್ನನ ಕಾವ್ಯ ಶಕ್ತಿಗೆ ಇಂಬಾಗಿ ನಿಂತ ಅತ್ತಿಮಬ್ಬೆ, ಕಾಳಿದಾಸನ ಕಾವ್ಯಶಕ್ತಿಗೆ ಪ್ರೇರಣೆ ನೀಡಿದ ವಿದ್ಯಾಧರೆ, ನಾರಾಯಣ ಮೂರ್ತಿ ಅವರ ಔದ್ಯಮಿಕ ಸಾಧನೆಗೆ ಸ್ಫೂರ್ತಿಯಾಗಿ ನಿಂತ ಸುಧಾಮೂರ್ತಿ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ! ಪ್ರತಿಯೊಬ್ಬ ಸಾಧಕ ಪುರುಷರ ಜೊತೆಗೆ ಒಬ್ಬ ಮಹಿಳೆಯು ಖಂಡಿತ ಇರುತ್ತಾರೆ!
೮) ನಾಯಕತ್ವ ಗುಣ!
ನೀವು ಒಪ್ಪುತ್ತೀರೋ ಬಿಡುತ್ತೀರೋ ಆದರೆ ನಾಯಕತ್ವದ ಗುಣಗಳಲ್ಲಿ ಸ್ತ್ರೀಯರು ಮುಂದೆ ಇರುತ್ತಾರೆ. ಒಂದು ರಾಣಿ ಜೇನು ಇಡೀ ಜೇನು ಗೂಡಿನ ಸಾವಿರಾರು ನೊಣಗಳನ್ನು ಎಷ್ಟೊಂದು ಅದ್ಭುತವಾಗಿ ನಿಯಂತ್ರಣ ಮಾಡುತ್ತದೆ ಎಂದೊಮ್ಮೆ ಗಮನಿಸಿ. ಇಂದಿರಾ ಗಾಂಧಿ ನಮ್ಮ ದೇಶದ ಪ್ರಧಾನಿ ಆಗಿ ಅಧಿಕಾರ ನಡೆಸಿದ ಪರಿಯನ್ನು ಒಮ್ಮೆ ಗಮನಿಸಿ. ಸುಧಾ ಮೂರ್ತಿ, ರೀಟಾ ಫರಿಯ, ಕಿರಣ್ ಮಜುಂದಾರ್, ಇಂದ್ರ ನೂಯಿ ಮೊದಲಾದ ಉದ್ಯಮ ರಂಗದ ಮಹಿಳಾ ಸಾಧಕರನ್ನು ಗಮನಿಸಿ. ಸ್ತ್ರೀಯರಿಗೆ ನಾಯಕತ್ವದ ಅವಕಾಶಗಳನ್ನು ಕೊಟ್ಟು ನೋಡಿದಾಗ ನೀವು ನನ್ನ ಮಾತನ್ನು ಒಪ್ಪಿಕೊಳ್ಳುತ್ತೀರಿ!
೯) ಸ್ಪರ್ಧಾತ್ಮಕ ಗುಣ!
ಸ್ತ್ರೀಯರಲ್ಲಿ ಸಹಜವಾದ ಮಾತ್ಸರ್ಯವು ಅವರನ್ನು ಯಾವಾಗಲೂ ಗೆಲುವಿನ ಹಳಿಯಲ್ಲಿ ನಿಲ್ಲಿಸುತ್ತದೆ! ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ತ್ರೀಯರು ಹೆಚ್ಚು ಯಶಸ್ವೀ ಆಗುತ್ತಿದ್ದಾರೆ. ಇಂದು ಸಾಧನೆಯ ಯಾವ ಕ್ಷೇತ್ರವನ್ನು ಆರಿಸಿದರೂ ಅದರಲ್ಲಿ ಮಹಿಳಾ ಸಾಧಕರು ಇದ್ದೇ ಇರುತ್ತಾರೆ! ಜಿದ್ದಿಗೆ ಬಿದ್ದರೆ ಸ್ತ್ರೀಯರು ಯುದ್ಧವನ್ನು ಗೆಲ್ಲದೇ ಶಸ್ತ್ರವನ್ನು ಕೆಳಗಿಟ್ಟ ಉದಾಹರಣೆಯೇ ಇಲ್ಲ! ರಾಣಿ ಚೆನ್ನಮ್ಮ, ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬೆಳವಡಿ ಮಲ್ಲಮ್ಮ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರು ಭಾರತವನ್ನು ಗೆಲ್ಲಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ!
೧೦) ಅಯ್ಯೋ ಪಾಪ ಎನ್ನುವ ಅಂತಃಕರಣ.
ಬೇರೆಯವರ ಕಷ್ಟಗಳಿಗೆ ಸ್ತ್ರೀಯರು ಬೇಗ ಕರಗುತ್ತಾರೆ ಮತ್ತು ಸಹಾಯ ಮಾಡಲು ಮುಂದಾಗುತ್ತಾರೆ. ಈ ಪ್ರೀತಿ, ಅನುಕಂಪ, ಸಹಾನುಭೂತಿ, ಕಾಳಜಿ ಮೊದಲಾದ ಗುಣಗಳು ಅವರಲ್ಲಿ ಸಹಜವಾಗಿ ಬಂದಿರುತ್ತದೆ!
ಖ್ಯಾತ ಲೇಖಕ ರವಿ ಬೆಳಗೆರೆ ಅವರನ್ನು ಯಾರೋ ಕೇಳಿದರಂತೆ. ಈ ಚಂದ ಚಂದವಾದ ಹೆಣ್ಣು ಮಕ್ಕಳು ಯಾಕೆ ಕೆಟ್ಟುಹೋದ ಹುಡುಗರನ್ನು ಪ್ರೀತಿ ಮಾಡುತ್ತಾರೆ ಎಂದು? ಅದಕ್ಕೆ ಬೆಳಗೆರೆ ಕೊಟ್ಟ ಉತ್ತರ ತುಂಬಾ ಮಾರ್ಮಿಕ ಆಗಿತ್ತು ‘ಯಾಕೆಂದರೆ ಪ್ರತೀ ಹೆಣ್ಣು ಮಗಳಲ್ಲಿ ಒಬ್ಬಳು ಒಳ್ಳೆಯ ತಾಯಿ ಇರುತ್ತಾಳೆ!’
ಈ ಗುಣಗಳಿಂದ ಇಂದು ಸ್ತ್ರೀಯರು ಎಲ್ಲ ಸಾಧನೆಯ ರಂಗಗಳಲ್ಲಿ ದಾಪುಗಾಲು ಇಟ್ಟು ಮುಂದೆ ಹೋಗುತ್ತಿರುವುದು! ಇನ್ನಷ್ಟು ಅವಕಾಶಗಳು ಮತ್ತು ಕುಟುಂಬದ ಬೆಂಬಲ ದೊರೆತರೆ ಆಕೆ ಇನ್ನಷ್ಟು ಪ್ರಕಾಶಿಸುತ್ತಾಳೆ! ಅಂತಹ ಸ್ವಯಂಭೂ ಸ್ತ್ರೀ ಶಕ್ತಿಗೆ ನಮ್ಮದೊಂದು ಸಲಾಂ ಇರಲಿ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಇಂಗ್ಲಿಷ್ ಎಂಎ ಮಾಡಿ ಕ್ಯಾಬ್ ಓಡಿಸುತ್ತಿದ್ದ ಆ ಯುವಕ ಹೇಳಿದ ಒಂದು ಅದ್ಭುತ ಪಯಣದ ಕಥೆ