Site icon Vistara News

ರಾಜ ಮಾರ್ಗ ಅಂಕಣ : ಭನ್ವಾರಿ ದೇವಿ ಎಂಬ ಅನಕ್ಷರಸ್ಥೆ ಕೋಟ್ಯಂತರ ಮಹಿಳೆಯರ ಮಾನ ಕಾಪಾಡಿದ ಕಥೆ

Raja Marga Bhanwari devi story

ಇತ್ತೀಚೆಗೆ ನನ್ನನ್ನು ತುಂಬಾ ಗಾಢವಾಗಿ ಕಾಡಿದ ಓರ್ವ ಹಳ್ಳಿಯ ಹೆಣ್ಣಿನ ಕೆಚ್ಚೆದೆಯ ಹೋರಾಟದ ಕಥೆಯನ್ನು ಇಂದು ತಮ್ಮ ಮುಂದೆ ಇಡುತ್ತಿದ್ದೇನೆ (ರಾಜ ಮಾರ್ಗ ಅಂಕಣ). ಅದು ಸಾವಿರಾರು ಮಂದಿಗೆ ಪ್ರೇರಣೆ (Motivation) ಆಗುವುದು ಖಂಡಿತ. ಆಕೆ ಭನ್ವಾರಿ ದೇವಿ (Bhanvari devi). ರಾಜಸ್ಥಾನದ ಜೈಪುರದಿಂದ 50 ಕಿ.ಮೀ. ದೂರ ಇರುವ ಭತೇರಿ ಎಂಬ ಗ್ರಾಮದವರು. ಅನಕ್ಷರಸ್ಥರು. ಅವರ ಗಂಡ ಮೋಹನ್ ಲಾಲ್. ತುಂಬಾ ಬಡವರು. ವೃತ್ತಿಯಲ್ಲಿ ಕುಂಬಾರರು. ಮದುವೆಯಾದಾಗ ಆಕೆಯ ವಯಸ್ಸು 6 ವರ್ಷ. ಗಂಡನ ವಯಸ್ಸು 8 ವರ್ಷ. ಅವರ ಹಳ್ಳಿಯು ಬಾಲ್ಯವಿವಾಹದ (Child Marriage) ಕಾರಣಕ್ಕೆ ಅಪಕೀರ್ತಿ ಪಡೆದಿತ್ತು. ಜೊತೆಗೆ ಅವರಿದ್ದ ಊರಲ್ಲಿ ಶ್ರೀಮಂತ ಮೇಲ್ವರ್ಗದ ಗುಜ್ಜರ್ ಜನಾಂಗದ (Gujjar community) ದೌರ್ಜನ್ಯ ಕೂಡ ಮೇರೆ ಮೀರುತ್ತಿತ್ತು.

ನಡೆಯಬಾರದ ಘಟನೆ ಅಂದು ನಡೆದು ಹೋಯಿತು!

ಆಕೆ ರಾಜಸ್ಥಾನ್ ಸರಕಾರದ ಮಹಿಳಾ ಸಬಲೀಕರಣ ಕಾರ್ಯಕ್ರಮದ (WDP) ಕಾರ್ಯಕರ್ತೆ ಆಗಿದ್ದರು. ಮನೆ ಮನೆಗೆ ಹೋಗಿ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸುವುದು ಆಕೆಯ ಕೆಲಸ. ಒಮ್ಮೆ ತನ್ನ ಕರ್ತವ್ಯದ ಭಾಗವಾಗಿ ಆಕೆ ಗುಜ್ಜರ್ ಜನಾಂಗದ ಒಂದು ಬಾಲ್ಯ ವಿವಾಹವನ್ನು ತಡೆದಿದ್ದರು. ಅದು ಮೇಲ್ವರ್ಗದವರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಂದು ಸೆಪ್ಟೆಂಬರ್ 22,1992. ಸಂಜೆ ಭನ್ವಾರಿ ಅವರು ತನ್ನ ಗಂಡನ ಜೊತೆಯಲ್ಲಿ ಜಮೀನ್ದಾರರ ಗದ್ದೆಯಲ್ಲಿ ಕೃಷಿಯ ಕೆಲಸದಲ್ಲಿ ತೊಡಗಿದ್ದರು. ಆಗ ಕೋಲು ಹಿಡಿದು ಬಂದ ಐದು ಜನ ಗುಜ್ಜರ್ ರೌಡಿಗಳು ಅವರ ಮೇಲೆ ಆಕ್ರಮಣ ಮಾಡಿದರು. ಗಂಡನನ್ನು ಹೊಡೆದರು. ಕೊನೆಗೆ ಅವರೆಲ್ಲರೂ ಸೇರಿ ಗಂಡನ ಎದುರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದರು! ಅವರ ಆರ್ತನಾದ ಯಾರ ಕಿವಿಗೂ ಕೇಳಲಿಲ್ಲ. ಅಂದು ಭೀಕರವಾದ ದೌರ್ಜನ್ಯ ನಡೆದು ಹೋಗಿತ್ತು.

ಆಕೆ ಜನರ ಬೆಂಬಲವನ್ನು ಪಡೆದು ಹೋರಾಟಕ್ಕೆ ಇಳಿದರು

ಬೇರೆ ಯಾವ ಹೆಣ್ಣು ಮಗಳಾದರೂ ತಲೆ ತಗ್ಗಿಸಿ ಸುಮ್ಮನೆ ಕೂತು ಬಿಡುತ್ತಿದ್ದರು, ಅಥವಾ ಕಣ್ಣೀರ ಶಾಪ ಹಾಕುತ್ತಿದ್ದರು. ಆದರೆ ಆಕೆ ಗಟ್ಟಿಗಿತ್ತಿ! ಗಂಡನ ಪೂರ್ಣ ಬೆಂಬಲ ಪಡೆದು ಹೋರಾಟಕ್ಕೆ ಇಳಿದರು. ನ್ಯಾಯ ಪಡೆಯುವ ಸಂಕಲ್ಪ ಮಾಡಿದರು. ಜೈಪುರ ಮೂಲದ ಹಲವು ಮಹಿಳಾ ಹೋರಾಟಗಾರರು ಆಕೆಯ ಬೆಂಬಲಕ್ಕೆ ನಿಂತರು. ಪೊಲೀಸರಿಗೆ ದೂರು ನೀಡಿದಾಗ ಕೇಸನ್ನು ಮುಚ್ಚಿ ಹಾಕುವ ಎಲ್ಲಾ ಪ್ರಯತ್ನಗಳೂ ನಡೆದವು. ರೇಣುಕಾ ಪಮೇಲಾ ಎಂಬ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಗಟ್ಟಿ ಧ್ವನಿಯಲ್ಲಿ ಹೋರಾಟದ ಕಿಡಿ ಹಚ್ಚಿದರು.

ಈ ಒಂದು ಪ್ರಕರಣವು ಉಂಟು ಮಾಡಿದ ಇಂಪ್ಯಾಕ್ಟ್ ಅದ್ಭುತ ಆಗಿತ್ತು! ರಾಜ್ಯದ ಎಲ್ಲಾ ನಗರಗಳಲ್ಲಿ ಮಹಿಳಾಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡಿದವು. ರಾಷ್ಟ್ರಮಟ್ಟದ ಮಾಧ್ಯಮಗಳು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡವು. ಕೊನೆಗೂ ಆ ಐದು ರೌಡಿಗಳ ಬಂಧನ ಆಯಿತು!

ಭನ್ವಾರಿ ದೇವಿ

ನ್ಯಾಯಾಂಗ ವಿಚಾರಣೆ ಆರಂಭ ಆಯ್ತು

ಕೆಳಗಿನ ಕೋರ್ಟಲ್ಲಿ ವಿಚಾರಣೆಗಳು ಆರಂಭ ಆದವು. ಸಾಕ್ಷಿಗಳ ವಿಚಾರಣೆಯ ನಾಟಕಗಳು ನಡೆದವು. ದುಡ್ಡು ಇದ್ದವರು ಕಾನೂನನ್ನು ಖರೀದಿ ಮಾಡುವ ಕಾಲ ಅದು. ಈ ಪ್ರಕರಣದಲ್ಲಿ ಸರಿಯಾದ ಸಾಕ್ಷಿಗಳು ದೊರೆಯಲಿಲ್ಲ. ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಅತ್ಯಾಚಾರ ನಡೆದ 24 ಘಂಟೆಯ ಒಳಗೆ ವೈದ್ಯಕೀಯ ಪರೀಕ್ಷೆಗಳು ನಡೆಯಬೇಕಾಗಿತ್ತು. ಆದರೆ ಆಕೆಯ ವೈದ್ಯಕೀಯ ಪರೀಕ್ಷೆಯು ನಡೆದಾಗ 52 ಘಂಟೆ ಆಗಿ ಹೋಗಿತ್ತು. ಆಕೆಯ ಮೈಮೇಲಿನ ಗಾಯಗಳನ್ನು ಸರಿಯಾಗಿ ಗುರುತು ಕೂಡ ಮಾಡಿರಲಿಲ್ಲ. ಅದರಿಂದಾಗಿ ಕೆಳಗಿನ ಕೋರ್ಟಲ್ಲಿ ಅವರಿಗೆ ನ್ಯಾಯ ಸಿಗಲಿಲ್ಲ. ಆ ಗುಜ್ಜರ್ ರೌಡಿಗಳು ಬಿಡುಗಡೆ ಆಗಿ ಹೊರಬಂದರು!

ಹೈಕೋರ್ಟ ಆಕೆಗೆ ಸಾಂತ್ವನ ಹೇಳಿತು, ಆದರೆ ನ್ಯಾಯ ಸಿಗಲಿಲ್ಲ

ಆಕೆಯ ಮನಸ್ಸಿಗೆ ಘಾಸಿ ಆಗಿತ್ತು. ಅವರ ಕುಟುಂಬಕ್ಕೆ ಎಲ್ಲಾ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದರು. ಅವರು ಕಷ್ಟಪಟ್ಟು ಮಾಡಿದ ಮಡಕೆಯನ್ನು ಯಾರೂ ಖರೀದಿಸುತ್ತಿರಲ್ಲಿಲ್ಲ. ಗಂಡ,ಹೆಂಡತಿಯನ್ನು ಊರಿನ ಯಾವ ಶುಭ ಸಮಾರಂಭಗಳಿಗೆ ಕರೆಯುತ್ತಿರಲಿಲ್ಲ. ಗುಜ್ಜರ್‌ ರೌಡಿಗಳ ಅಟ್ಟಹಾಸವನ್ನು ಯಾರು ಕೂಡ ತಡೆಯುವವರು ಇರಲಿಲ್ಲ.

ಆದರೆ ಮಹಿಳಾ ಸಂಘಟನೆಗಳು ಈ ಪ್ರಕರಣ ಅಲ್ಲಿಗೆ ಬಿಡಲಿಲ್ಲ. 1995 ಡಿಸೆಂಬರ್ 15ರಂದು ಇಡೀ ರಾಜ್ಯದಲ್ಲಿ ಮತ್ತೆ ಹೋರಾಟ ಆರಂಭವಾಯಿತು. ಜೈಪುರದಲ್ಲಿ ನಡೆದ ಬೃಹತ್ ಜಾಥಾ ದಾಖಲೆ ಬರೆಯಿತು. ಸ್ವತಃ ಸಂತ್ರಸ್ತೆ ಭನ್ವಾರಿ ದೇವಿ ಬೀದಿಗೆ ಬಂದು ಜಾಥಾದ ಮುಂದೆ ನಿಂತರು.

‘ಮಾನ ಅನ್ನುವುದು ಶ್ರೀಮಂತರಿಗೆ ಬೇರೆ, ಬಡವರಿಗೆ ಬೇರೆ ಅಲ್ಲ. ನನಗೆ ನ್ಯಾಯ ಕೊಡಿ. ಇಲ್ಲವಾದರೆ ವಿಷ ಕೊಡಿ’ ಎಂದು ಸಿಂಹ ಘರ್ಜನೆ ಮಾಡಿದರು! ಅದು ಯಾರೋ ಬರೆದುಕೊಟ್ಟ ಭಾಷಣ ಆಗಿರಲಿಲ್ಲ. ಈಗ ರಾಜ್ಯ ಸರಕಾರ ಅಕ್ಷರಶಃ ನಡುಗಿತು ಮತ್ತು ಕೇಸನ್ನು ಸಿಬಿಐಗೆ ಒಪ್ಪಿಸಿ ಸುಮ್ಮನೆ ಕೂತಿತು. ಮತ್ತೆ ವಿಚಾರಣೆಯ ನಾಟಕ, ಉಳ್ಳವರ ದರ್ಬಾರು, ಸಾಕ್ಷಿಗಳ ಕೊರತೆ, ಹಳ್ಳಿಯ ಹೆಂಗಸಿನ ಅಸಹಾಯಕತೆ ಎಲ್ಲವೂ ಸೇರಿ ನಿರಾಸೆಯೇ ಆಯಿತು. ಆಕೆಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ. ಅಷ್ಟು ಹೊತ್ತಿಗೆ ಇಬ್ಬರು ಆರೋಪಿಗಳು ಸತ್ತು ಹೋಗಿದ್ದರು! ಉಳಿದವರಿಗೆ ಕೇವಲ ಒಂಬತ್ತು ತಿಂಗಳ ಜೈಲು ಶಿಕ್ಷೆ ಆಯಿತು!

ಸಾರ್ವಜನಿಕ ಹಿತಾಸಕ್ತಿ ದಾವೆ

ಆಗ ಕೊನೆಯ ಅಸ್ತ್ರವಾಗಿ ಜೈಪುರದ ಕೆಲವು ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದರು! ಆರೋಪಿಗಳಿಗೆ ಈ ಬಾರಿ ರಕ್ಷಣೆ ಸಿಗಲಿಲ್ಲ. ಸಾವಿರ ಸಾವಿರ ಮಹಿಳಾ ಹೋರಾಟಗಾರರು ಕೇಸು ಬಿಗಿಯಾಗುವಂತೆ ನೋಡಿಕೊಂಡರು. 1997ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಐತಿಹಾಸಿಕವಾಗಿ ಮೂಡಿಬಂದಿತ್ತು! ವಿಶಾಖಾ ಎಂಬ ಹೆಸರಿನ NGO ಸುಪ್ರೀಂ ಕೋರ್ಟಿನ ಮುಂದೆ ಬಲವಾದ ಮಾರ್ಗದರ್ಶಿ ಸೂತ್ರಗಳನ್ನು ಮಂಡಿಸಿತು. ಅದನ್ನು ಸುಪ್ರೀಂ ಕೋರ್ಟು ಮಾನ್ಯ ಮಾಡಿ ತೀರ್ಪು ನೀಡಿತು.

‘ವಿಶಾಖಾ ಮಾರ್ಗದರ್ಶಿ ಸೂತ್ರ’ ರೂಪಿತವಾಯಿತು!

ವಿಶಾಖಾ ಮಾರ್ಗದರ್ಶಿ ಸೂತ್ರ ಎಂದೇ ಕರೆಯಲ್ಪಡುವ ಈ ತೀರ್ಪಿನ ಆಧಾರದಲ್ಲಿ ಓರ್ವ ಮಹಿಳೆಗೆ ಅವಳು ಕೆಲಸ ಮಾಡುವ ಸ್ಥಳದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯದಿಂದ ಸಂರಕ್ಷಣೆ ಪಡೆಯುವ ಹಕ್ಕು ದೊರೆತಿತ್ತು. ನಮ್ಮ ದೇಶದ ಯಾವುದೇ ಕೋರ್ಟಲ್ಲಿ ಮಹಿಳೆಯರ ಪರವಾಗಿ ಬಂದ ಅತ್ಯಂತ ಪ್ರಬಲವಾದ ತೀರ್ಪು ಅದಾಗಿತ್ತು! ಅದಕ್ಕೆ ಕಾರಣ ಭನ್ವಾರಿ ದೇವಿ ಎಂಬ ಹಳ್ಳಿಯ ಮಹಿಳೆ!

ಆಕೆಗೆ ಕೊನೆಗೂ ನ್ಯಾಯ ದೊರಕಿತು

ಮುಂದೆ 2013ರಲ್ಲಿ ನಮ್ಮ ದೇಶದ ಪಾರ್ಲಿಮೆಂಟ್ ಭನ್ವಾರಿ ದೇವಿ ತೀರ್ಪಿನ ಮುಂದುವರೆದ ಭಾಗವಾಗಿ ಒಂದು ಐತಿಹಾಸಿಕ ವಿಧೇಯಕವನ್ನು ಮಂಡಿಸಿ ಬಹುಮತದಿಂದ ಪಾಸ್ ಮಾಡಿತು. ಯಾವುದೇ ಮಹಿಳೆಗೆ ಅವಳು ಕೆಲಸ ಮಾಡುವ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳದಿಂದ ರಕ್ಷಣೆ ಕೊಡುವ ಕಾನೂನು ಅದು! ಆ ದಿನ ಸ್ಪೀಕರ್ ತನ್ನ ತೀರ್ಪಲ್ಲಿ ಭನ್ವಾರಿ ದೇವಿಯ ಹೆಸರನ್ನು ಉಲ್ಲೇಖಿಸಿದ್ದು ಸ್ಮರಣೀಯ ಆಗಿತ್ತು ಮತ್ತು ಆಕೆಗೆ ಪೂರ್ಣ ಪ್ರಮಾಣದ ನ್ಯಾಯವು ದೊರಕಿತ್ತು! ಆಕೆಯ 21 ವರ್ಷಗಳ ನ್ಯಾಯಾಂಗದ ಹೋರಾಟವು ಅಂದಿಗೆ ತಾರ್ಕಿಕ ಅಂತ್ಯವನ್ನು ಕಂಡಿತು.

ಆಕೆಗೆ ವಿಶ್ವಸಂಸ್ಥೆಯು ತನ್ನ ನಾಲ್ಕನೇ ಮಹಿಳಾ ಸಮ್ಮೇಳನದಲ್ಲಿ ‘ಅಪ್ರತಿಮ ಶೌರ್ಯ ಮತ್ತು ಹೋರಾಟಕ್ಕಾಗಿ ನೀರಜಾ ಭಾನೊಟ್ ಅಂತಾರಾಷ್ಟ್ರೀಯ ಪ್ರಶಸ್ತಿ’ ನೀಡಿ ಗೌರವಿಸಿತು. ಅವರಿಗೆ ರಾಜಸ್ಥಾನ್ ಸರಕಾರವು ಸ್ವಂತ ಮನೆಯನ್ನು ಕಟ್ಟಿ ಕೊಟ್ಟಿದೆ. ಆಕೆಯ ಬದುಕಿನ ಹೋರಾಟವನ್ನು ಚಿತ್ರೀಕರಿಸಿದ ‘ಬವಂದರ್ ‘ ಸಿನಿಮಾ ಬಂದು ತುಂಬಾ ಜನಪ್ರಿಯ ಆಯಿತು. ಬವಂದರ್ ಅಂದರೆ ಸುಂಟರಗಾಳಿ ಎಂದು ಅರ್ಥ.

ಅಂದ ಹಾಗೆ ಗಂಡ, ಹೆಂಡತಿ ಇಂದಿಗೂ ಅದೇ ಗ್ರಾಮದಲ್ಲಿ ಇದ್ದಾರೆ. ದುಷ್ಟ ಗುಜ್ಜರರ ಮುಂದೆ ತಲೆ ಎತ್ತಿಕೊಂಡು ಓಡಾಡುತ್ತಾರೆ. ಅವರ ಕಣ್ಣಲ್ಲಿ ಅಂದು ಭಯ ಇತ್ತು. ಇಂದು ಬೆಂಕಿ ಇದೆ! ತನ್ನ ಪ್ರಕರಣದಿಂದ ದೇಶದ ಸಾವಿರ ಸಾವಿರ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಸಿಕ್ಕಿತು ಎಂಬ ಖುಷಿ ಅವರ ಕಣ್ಣಲ್ಲಿ ಎದ್ದು ಕಾಣುತ್ತಿದೆ!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಶಿವ ನಾಡಾರ್‌; ದೇಶದ ಈ 4ನೇ ಶ್ರೀಮಂತನಿಗೆ ಇಂಗ್ಲಿಷೇ ಅರ್ಥ ಆಗುತ್ತಿರಲಿಲ್ಲ!

Exit mobile version