ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮತ್ತು ಶಾಸ್ತ್ರ ಬದ್ದವಾದ ಭಜನೆಗಳು ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳುವ ಸುಲಭ ಮಾಧ್ಯಮ ಎಂಬ ನಂಬಿಕೆ ಇದೆ. ಭಜನೆಗಳ ಮೂಲಕ ಅನೇಕ ದಾಸರು ದೇವರನ್ನು ನಲಿಸಿದ, ಕುಣಿಸಿದ, ಒಲಿಸಿದ ನಿದರ್ಶನಗಳು ದೊರೆಯುತ್ತವೆ.
ಹಳ್ಳಿಗಳಲ್ಲಿ, ನಗರಗಳಲ್ಲಿ ಕೂಡ, ಮನೆ ಮನೆಯಲ್ಲಿ ದಿನವೂ ನಡೆಯುತ್ತಿದ್ದ ಭಜನೆಗಳು ಸಂಜೆಯ ಹೊತ್ತನ್ನು ಶ್ರೀಮಂತ ಗೊಳಿಸುತ್ತಿದವು. ಮೂರು ತಲೆಮಾರುಗಳು ಸೇರಿ ವಿಭಜನೆ ಇಲ್ಲದೆ ನಿತ್ಯಭಜನೆ ಮಾಡುವ ಮನೆಗಳು ಈಗಲೂ ಇವೆ. ಟಿವಿ ಧಾರಾವಾಹಿಗಳು, ಮೊಬೈಲ್ ಹಾವಳಿಗಳ ನಡುವೆ ಕೂಡ ನಿತ್ಯ ಭಜನೆಗಳು ನಡೆಯುತ್ತಲೇ ಇವೆ.
ಊರಿನಲ್ಲಿ ಊರಿನ ಹಿರಿಯರ ಧರ್ಮ ಶ್ರದ್ಧೆಯ ಹಾಗೂ ನಂಬಿಕೆಯ ಪ್ರತೀಕವಾಗಿ ಹಲವು ಭಜನಾ ಮಂದಿರಗಳು ಉದಯವಾದವು. ಭಜನಾ ಮಂಡಳಿಗಳು ಹುಟ್ಟಿದವು. ನಿತ್ಯ ಭಜನೆ, ವಾರಕ್ಕೊಮ್ಮೆ ಭಜನೆ.. ಹೀಗೇ ಊರವರು ಸೇರಿಕೊಂಡು ದೀಪ ಹಚ್ಚಿ ಭಜನೆ ಮಾಡುವುದು ವಾಡಿಕೆ ಆರಂಭವಾಯಿತು. ವರ್ಷಕ್ಕೊಮ್ಮೆ ನಡೆಯುವ ಭಜನಾ ಮಂಗಲಕ್ಕೆ ಊರಿನ ಪರವೂರಿನ ಭಜನಾ ಮಂಡಳಿಗಳು ಬಂದು ತಮಗೆ ನೀಡಿದ ಅವಧಿಯಲ್ಲಿ ಭಜನೆ ಹಾಡುವುದು, ಕೊನೆಗೆ ಪ್ರಸಾದ ಪಡೆಯುವುದು ಸಂಪ್ರದಾಯ.
ಭಜನಾ ಮಂದಿರ ಇಲ್ಲದ ಊರುಗಳಲ್ಲಿ ದೇವಸ್ಥಾನಗಳಲ್ಲಿ ಊರವರು ಸೇರಿ ಸಂಜೆಯ ಹೊತ್ತು ಭಜನೆ ಮಾಡುವುದು ಕೂಡ ಇದೆ. ಈ ಎಲ್ಲ ಭಜನೆಗಳು ಶಾಸ್ತ್ರೋಕ್ತವಾಗಿಯೇ ನಡೆಯುತ್ತವೆ. ಹಾರ್ಮೋನಿಯಂ, ಮದ್ದಳೆ, ತಬಲಾ, ತಾಳಗಳ ಹಿನ್ನೆಲೆಯನ್ನು ಈ ಹಾಡುಗಳನ್ನು ಕೇಳುವುದೇ ಚಂದ. ಗಣಪತಿಯ ಸ್ತುತಿಯೊಂದಿಗೆ ಆರಂಭವಾಗುವ ಈ ಭಜನೆಗಳು ಸಾಮಾನ್ಯವಾಗಿ ಮಧ್ಯಮಾವತಿ ಅಥವ ಭೈರವಿ ರಾಗದೊಂದಿಗೆ ಮುಗಿಯುತ್ತವೆ.
ದಾಸರ ಕೀರ್ತನೆಗಳು, ಮರಾಠಿ ಭಾಷೆಯ ಅಭಂಗಗಳು, ಕೀರ್ತನೆಗಳು, ಕನ್ನಡ, ಕೊಂಕಣಿ ಮತ್ತು ತುಳು ಭಾಷೆಯ ಭಜನೆಗಳು ಇಲ್ಲಿ ಹಾಡಲ್ಪಡುತ್ತವೆ. ಯಾವ ದೇವಾಲಯದಲ್ಲಿ ಭಜನೆ ಹಾಡುತ್ತಾರೆಯೋ ಆ ದೇವರ ಹಾಡುಗಳನ್ನು ಮುಖ್ಯವಾಗಿ ಹಾಡಲಾಗುತ್ತದೆ. ಭಜನಾ ಮಂಡಳಿಯ ಗಾಯಕರಿಗೆ ಸಮವಸ್ತ್ರದ ಒತ್ತಾಯ ಇಲ್ಲದಿದ್ದರೂ ವಸ್ತ್ರ ಸಂಹಿತೆಯು ಖಂಡಿತವಾಗಿಯೂ ಇದೆ. ಪುರುಷರೇ ಆಗಲಿ, ಸ್ತ್ರೀಯರೇ ಆಗಲಿ ಮಡಿ ಮತ್ತು ಮೈಲಿಗೆಗಳನ್ನು ಖಂಡಿತವಾಗಿ ಆಚರಣೆ ಮಾಡುತ್ತಾರೆ.
ಅಷ್ಟೇ ಶ್ರದ್ಧೆಯಿಂದ ಕುಣಿತ ಭಜನೆಯ ಪರಂಪರೆ ಆರಂಭ ಆಯಿತು. ಗ್ರಾಮೀಣ ಭಾಗದ ಯುವಕ ಯುವತಿಯರು ಈ ಪರಂಪರೆಯ ಕಡೆ ಹೆಚ್ಚು ಒಲವು ತೋರಿದರು. ಇಂದು ಗ್ರಾಮಾಂತರ ಭಾಗದಲ್ಲಿ ನೂರಾರು ಕುಣಿತ ಭಜನಾ ಮಂಡಳಿಗಳು ಇವೆ.
ಮುಂದೆ ಸಾರಸ್ವತರ ಕೊಡುಗೆಯಾಗಿ ನಗರ ಭಜನೆಗಳು ಆರಂಭ ಆದವು. ದೇವಸ್ಥಾನದಿಂದ ಅಥವಾ ಭಜನಾ ಮಂದಿರದಿಂದ ಭಜನೆ ಹಾಡುತ್ತಾ ಹೊರಟು ನಗರದ ಎಲ್ಲ ಮನೆಗಳಿಗೆ ಹೋಗಿ ಅವರ ತುಳಸಿಕಟ್ಟೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಕುಳಿತು ಅಥವ ಕುಣಿದು ಭಜನೆ ಹಾಡುತ್ತಾ ಕೊನೆಗೆ ಮನೆಯವರು ಕೊಟ್ಟ ಉಚಿತವಾದ ಉಪಾಹಾರವನ್ನು ಅಥವಾ ಫಲಾಹಾರವನ್ನು ಪ್ರಸಾದದ ರೂಪದಲ್ಲಿ ಸ್ವೀಕಾರ ಮಾಡುವುದು ಮತ್ತು ಅವರು ಸ್ವಯಂ ಇಚ್ಛೆಯಿಂದ ಕಾಣಿಕೆಯನ್ನು ಕೊಟ್ಟರೆ ಸ್ವೀಕಾರ ಮಾಡಿ ಹಿಂದೆ ಬರುವುದು ಉದಾತ್ತವಾದ ಆಶಯ.
ನನ್ನ ಜಿಜ್ಞಾಸೆಗಳು, ತಿಳಿದವರು ಉತ್ತರಿಸಬೇಕು
ಇತ್ತೀಚೆಗೆ ಭಜನೆಗಳು ಆರಾಧನೆಯ ರೂಪದಿಂದ ಮನೋರಂಜನೆಯ ವಸ್ತುಗಳಾಗಿ ಬದಲಾಗಿವೆ ಅನ್ನುವುದು ನನ್ನ ಅನಿಸಿಕೆ.
1) ಯಾವ್ಯಾವುದೋ ಮೆರವಣಿಗೆಯಲ್ಲಿ ಭಜನಾ ತಂಡಗಳು ಕುಣಿಯುವುದು ಬೇಕಾ?
2) ಸಿನಿಮಾ ರಾಗದಲ್ಲಿ ಭಜನೆ ಹಾಡುವುದು ಸರಿಯಾ?
3) ಕುಣಿತ ಭಜನೆಯ ಆವೇಶವನ್ನು ಹೆಚ್ಚಿಸಲು ಭಜನೆಯ ಮಧ್ಯದಲ್ಲಿ ಬ್ಯಾಂಡ್ ಸೆಟ್, ಚಂಡೆ ಮೇಳಗಳು ಬೇಕಾ? ಹಾಗಿದ್ದರೆ ಏಕಾಗ್ರತೆ ಇರುತ್ತದೆಯೇ?
4.) ಇತ್ತೀಚೆಗೆ ದೈವದ ನೇಮಗಳ ಪೂರ್ವಭಾವಿ ಆಗಿ ದೈವದ ಗುಡಿಗಳ ಮುಂದೆ ಭಜನೆ ಹಾಡಲು ಮಂಡಳಿಗಳು ಹೋಗುವುದು ಸರಿಯಾ? ಅದು ದೈವಗಳಿಗೆ ಸಮ್ಮತವೆ?
5.) ತೀರಾ ಇತ್ತೀಚಿನ ಬೆಳವಣಿಗೆಯಲ್ಲಿ ಮದುವೆಯ ಹಿಂದಿನ ದಿನ ನಡೆಯುವ ಮದರಂಗಿ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಗಳು ಭಜನೆ ಹಾಡಲು ಹೋಗುವುದು ಸರಿ ಅಲ್ಲ ಎಂದು ನನ್ನ ಭಾವನೆ. ಅಲ್ಲಿನ ಜನರ ಮೂಡ್ ಬೇರೆ ಆಗಿರುತ್ತದೆ. ಹಾಗೆಯೇ ಭಜನೆ ಹಾಡುವವರು ಮತ್ತು ಆಲಿಸುವ ಶ್ರೋತೃಗಳಿಗೆ ಪೂರಕವಾದ ವಾತಾವರಣವು ಇರುವುದಿಲ್ಲ. ಅಂತಹ ಕಡೆ ಭಜನೆಗಳು ಬೇಕಾ?
6.) ಇತ್ತೀಚೆಗೆ ಹಲವು ಸಂಘ ಸಂಸ್ಥೆಗಳು ಭಜನಾ ಸ್ಪರ್ಧೆಗಳನ್ನು ನಡೆಸುತ್ತಿವೆ. ಗೆದ್ದ ತಂಡಗಳಿಗೆ ಬಹುಮಾನ, ಪಾರಿತೋಷಕ ಇರುತ್ತವೆ. ಇದು ಬೇಕಾ? ಭಜನೆ ಸ್ಪರ್ಧೆಗೆ ಯಾವುದು ಮಾನದಂಡ?
7) ಭಜನಾ ಕಾರ್ಯಕ್ರಮದಲ್ಲಿ ದೇವರ ನಿಂದಾ ಸ್ತುತಿಯ ಹಾಡುಗಳು ಬೇಕಾ?
ಮಾರ್ಗದರ್ಶನದ ಅಗತ್ಯ ಇದೆ
ಕರಾವಳಿಯ ಎರಡೂ ಜಿಲ್ಲೆಗಳಲ್ಲಿ ಬಹಳ ಪ್ರಬಲವಾದ ಭಜನಾ ಮಂಡಳಿಯ ಒಕ್ಕೂಟಗಳು ಇವೆ. ಅವರು, ಹಿರಿಯರು, ವಿಶೇಷವಾಗಿ ಧಾರ್ಮಿಕ ಮುಖಂಡರು, ಸ್ವಾಮೀಜಿಗಳು, ಅದರ ಬಗ್ಗೆ ತುಂಬಾ ತಿಳಿದವರು ಒಂದೆಡೆ ಕೂತು ಭಜನೆಗಳಿಗೆ, ಮಂಡಳಿಗಳಿಗೆ ಒಂದು ಸಂಹಿತೆ ರೂಪಿಸುವ ಅಗತ್ಯ ಇದೆ. ಅಲ್ಲವೇ?
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಸಿನಿಮಾ ಲೋಕದ ಮೊದಲ ಸೂಪರ್ ಸ್ಟಾರ್; ಜಗತ್ತಿಗೆ ನಗುವನ್ನು ಕಲಿಸಿದ ಚಾರ್ಲಿ ಬದುಕಲ್ಲಿ ನಗುವೇ ಇರಲಿಲ್ಲ!