ಅಂದಾಜು ಎರಡು ದಶಕಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತದ ಮಹಿಳಾ ತಂಡವು ಒಂದು ಟೆಸ್ಟ್ ಮ್ಯಾಚ್ ಆಡುತ್ತಿತ್ತು. ಕನ್ನಡಿಗರೇ ಆದ ಶಾಂತಾ ರಂಗಸ್ವಾಮಿ ಅವರು ಭಾರತದ ಕ್ಯಾಪ್ಟನ್ ಆಗಿದ್ದರು. ಪ್ರವೇಶ ಶುಲ್ಕ ಇರಲಿಲ್ಲ. ಒಂದಿಷ್ಟು ಜನರು ಸೇರಲಿ ಎಂಬ ಕಾರಣಕ್ಕೆ ಕರ್ನಾಟಕ ಸರಕಾರವು ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು! ಆದರೆ ಇಡೀ ದಿನ ಗ್ರೌಂಡಿಗೆ ನೂರು ಪ್ರೇಕ್ಷಕರೂ ಬರಲಿಲ್ಲ ಅನ್ನೋದು ದುರಂತ!
ಈಗ ಮಹಿಳಾ ಕ್ರಿಕೆಟ್‌ನ ದೆಸೆಯೇ ಬದಲಾದ ಹಾಗಿದೆ!
ಆದರೆ ಈಗ ಭಾರತದ ಮಹಿಳಾ ಕ್ರಿಕೆಟ್‌ಗೆ ಶುಕ್ರ ದೆಸೆ ಬಂದ ಹಾಗೆ ಅನ್ನಿಸುತ್ತಿದೆ. ಈ ಗುರುವಾರ ನಡೆದ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಇಡೀ ಭಾರತವು ಕಣ್ಣು ಬಿಟ್ಟು ನೋಡಿತು ಮತ್ತು ಆ ಪಂದ್ಯವು ಕ್ರಿಕೆಟಿನ ಎಲ್ಲ ಉದ್ವೇಗವನ್ನು ಒಳಗೊಂಡಿತ್ತು! ಭಾರತ ತಂಡವು ಆಸ್ಟ್ರೇಲಿಯಾ ಎದುರು ಸೋತಾಗ ಭಾರತೀಯರು ನಿಜಕ್ಕೂ ವ್ಯಥೆ ಪಟ್ಟರು!
ಸ್ವಲ್ಪ ದಿನಗಳಲ್ಲಿ ವಿಮೆನ್ ಪ್ರೀಮಿಯರ್ ಲೀಗ್ ಆರಂಭ ಆಗಲಿದ್ದು ಮಹಿಳಾ ಕ್ರಿಕೆಟರ್‌ಗಳ ಬಿಕರಿ ಈಗ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ತಂಡವು ಒಬ್ಬ ಮಹಿಳಾ ಕ್ರಿಕೆಟರನ್ನು 3.4 ಕೋಟಿ ಕೊಟ್ಟು ಖರೀದಿ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ! ಈ ಕೀರ್ತಿಗೆ ಭಾಜನರಾದವರು ಸ್ಮೃತಿ ಮಂಧಾನಾ!
ಸ್ಮೃತಿ ಮಂಧಾನಾ – ಆಕೆ ಸಾಮಾನ್ಯ ಆಟಗಾರ್ತಿ ಅಲ್ಲ!
ಆಕೆ ಮೂಲತಃ ಮಹಾರಾಷ್ಟ್ರದ ಆಟಗಾರ್ತಿ. ಬಿಸಿಸಿಐ ಮತ್ತು ಐಸಿಸಿಯಿಂದ ವರ್ಷದ ಅತ್ಯುತ್ತಮ ಕ್ರಿಕೆಟರ್ ಪ್ರಶಸ್ತಿಗಳನ್ನು ಆಕೆ ಈಗಾಗಲೇ ಪಡೆದಾಗಿದೆ. ಎಡಗೈ ಬಲಿಷ್ಠ ಬ್ಯಾಟರ್ ಮತ್ತು ಆಫ್ ಬ್ರೇಕ್ ಬೌಲರ್ ಆಗಿರುವ ಆಕೆಯ ನೆರವಿಗೆ ಆಕೆಯ ಇಡೀ ಕುಟುಂಬವೇ ನಿಂತಿದೆ. ಆಕೆಯ ತಂದೆ ಶ್ರೀನಿವಾಸ್ ಒಬ್ಬ ಉದ್ಯಮಿ. ಮಗಳ ಕ್ರಿಕೆಟ್ ಕನಸುಗಳಿಗೆ ಅವರೇ ಅತೀ ದೊಡ್ಡ ಸಪೋರ್ಟರ್! ತಾಯಿ ಸ್ಮಿತಾ ಆಕೆಯ ಡಯಟ್, ಫಿಸಿಕಲ್ ಫಿಟ್ನೆಸ್ ಇತ್ಯಾದಿಗಳ ಹೊಣೆ ಹೊತ್ತಿದ್ದಾರೆ. ಸಹೋದರ ಶ್ರವಣ ಆಕೆಯ ಬೆಸ್ಟ್ ಫ್ರೆಂಡ್. ಮಹಾರಾಷ್ಟ್ರದ U16 ತಂಡದಲ್ಲಿ ಆಡಿದ ಅನುಭವ ಪಡೆದವನು. ಆತನ ಆಟವೇ ಆಕೆಗೆ ಸ್ಫೂರ್ತಿ ಆಗಿದ್ದು. ಈಗ ನೆಟ್‌ನಲ್ಲಿ ಬೆವರು ಬಸಿದು ಆಕೆಯ ತರಬೇತಿಗೆ ನಿರಂತರ ಬೌಲಿಂಗ್ ಮಾಡುವುದು ಅದೇ ಶ್ರವಣ!
ಮಹಾರಾಷ್ಟ್ರ ತಂಡಕ್ಕೆ ಆಯ್ಕೆ ಆಗುವಾಗ ಆಕೆಯ ವಯಸ್ಸು ಕೇವಲ 9!
ಮಹಾರಾಷ್ಟ್ರ U15 ಕ್ರಿಕೆಟ್ ತಂಡಕ್ಕೆ ಆಯ್ಕೆ ಆದಾಗ ಆಕೆಯ ವಯಸ್ಸು ಕೇವಲ 9! ಆದರೆ ಆಕೆಯ ಭಯವಿಲ್ಲದ ಆಟ, ಆಕ್ರಮಣಕಾರಿ ಮನೋಭಾವ ಮತ್ತು ಟೆಕ್ನಿಕಲ್ ಆಟಗಳು ಎಲ್ಲರ ಗಮನ ಸೆಳೆದಿತ್ತು. ಮುಂದೆ U19 ಟೀಮಿಗೆ ಆಯ್ಕೆ ಆಗುವಾಗ ಆಕೆಯ ವಯಸ್ಸು ಕೇವಲ 11! ಆಕೆಯ ವಿಸ್ಫೋಟಕ ಆಟವು ಆಕೆಗೆ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪ್ರವೇಶವನ್ನು ನೀಡಿತು.
2013ರಿಂದ ಭಾರತದ ಮಹಿಳಾ ರಾಷ್ಟ್ರೀಯ ತಂಡದ ಭಾಗವಾಗಿರುವ ಸ್ಮೃತಿ ಮೂರೂ ಫಾರ್ಮಾಟ್‌ಗಳಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟನಲ್ಲಿ ಆಕೆಯ ಸರಾಸರಿ 46.42.
ಏಕದಿನದ ಆಕೆಯ ದಾಖಲೆಗಳು ಇನ್ನೂ ಅತ್ಯುತ್ತಮ ಆಗಿವೆ. 77 ಏಕದಿನ ಪಂದ್ಯಗಳನ್ನು ಆಡಿರುವ ಸ್ಮೃತಿ ಒಟ್ಟು 3073 ಸ್ಕೋರ್ ದಾಖಲಿಸಿದ್ದಾರೆ. ಸರಾಸರಿ 43.48! ಏಕದಿನದ ಪಂದ್ಯಗಳಲ್ಲಿ ದ್ವಿಶತಕ ದಾಖಲಿಸಿದ ಮೊದಲ ಮಹಿಳಾ ಸ್ಟಾರ್ ಅಂದರೆ ಸ್ಮೃತಿ! 150 ಎಸೆತಗಳಲ್ಲಿ 224 ರನ್ ಸಿಡಿಸಿದಾಗ ಆಕೆಯ ವಯಸ್ಸು ಕೇವಲ 17 ಅಂದರೆ ನಮಗೆ ನಂಬಲು ಕಷ್ಟ ಆಗಬಹುದು!
ಟಿ 20 ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಕೂಡ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 115 ಟಿ 20 ಪಂದ್ಯಗಳನ್ನು ಆಡಿರುವ ಆಕೆ 2800 ರನ್ ಪರ್ವತವನ್ನು ಈಗಲೇ ಏರಿ ಆಗಿದೆ! ಮೂರೂ ಫಾರ್ಮಾಟ್‌ಗಳಲ್ಲಿ ಆರಂಭಿಕ ಆಟಗಾರ್ತಿಯಾಗಿ ಒತ್ತಡ ನಿರ್ವಹಣೆ ಮಾಡುವುದು, ದೊಡ್ಡ ಇನ್ನಿಂಗ್ಸ್ ಕಟ್ಟುವುದು ಆಕೆಗೆ ಸಲೀಸು ಎಂಬಂತೆ ಆಗಿದೆ.
ಸೌಂದರ್ಯ ಮತ್ತು ಪ್ರತಿಭೆ ಎರಡೂ ಸೇರಿದರೆ ಅದು ಸ್ಮೃತಿ ಮಂಧಾನಾ ಎಂಬುದು ಭಾರತೀಯ ಕ್ರಿಕೆಟನ ಈಗಿನ ಸಮೀಕರಣ!
ಆಕೆಯ ಆಟವೇ ಈಗ ನಿರ್ಣಾಯಕ ಆಗುತ್ತಿದೆ!
2017ರ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಫೈನಲ್ ಪ್ರವೇಶ ಮಾಡಲು ಆಕೆಯ ಆಟವೇ ನಿರ್ಣಾಯಕ ಆಗಿತ್ತು. ಈ ವಾರ ನಡೆದ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತ ಸೆಮಿಫೈನಲ್ ತಲುಪಲು ಕೂಡ ಆಕೆಯು ತಂಡಕ್ಕೆ ಸ್ಫೂರ್ತಿ ಆಗಿದ್ದರು. ಆಕೆಯು ಭಾರತೀಯ ತಂಡದ ಅತ್ಯಂತ ಮೌಲ್ಯಯುತ ಆಟಗಾರ್ತಿ ಎಂದು ತಂಡದ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಹೇಳಿದ್ದಾರೆ. ಅವರಿಬ್ಬರೂ ಸೇರಿ ಭಾರತವನ್ನು ಹಲವು ಪಂದ್ಯಗಳಲ್ಲಿ ಗೆಲ್ಲಿಸಿದ ಉದಾಹರಣೆಯು ನಮ್ಮ ಕಣ್ಣ ಎದುರು ಇದೆ. ಹಲವು ದೇಶೀಯ ಮತ್ತು ವಿದೇಶದ ಲೀಗ್ ಕೂಟಗಳಲ್ಲಿ ಮಿಂಚು ಹರಿಸಿರುವ ಸ್ಮೃತಿ ಮಂಧಾನಾ ತಾನು ಪ್ರತಿನಿಧಿಸುವ ರೆಡ್ ಇಂಡಿಯಾ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಸಾಧನೆ ಮಾಡಿದ್ದಾರೆ. ಸತತವಾಗಿ ಮೂರು ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಸಿಡಿಸಿ ಆಕೆ ದಾಖಲೆ ಮಾಡಿದ್ದರು.
ಭಾರತದಲ್ಲಿ ಮಹಿಳಾ ಕ್ರಿಕೆಟ್ ಈಗ ಜನಪ್ರಿಯ ಆಗುತ್ತಿದೆ. WPL ಈ ಬಾರಿ ಭಾರತದಲ್ಲಿ ಮಿಂಚು ಹರಿಸುವುದು ಖಂಡಿತ. ಅದರ ಸ್ಫೂರ್ತಿ ದೇವತೆಯಾಗಿ ನಿಲ್ಲುವ ಅರ್ಹತೆಯು ಖಂಡಿತ ಸ್ಮೃತಿ ಮಂಧಾನಾ ಅವರಿಗೆ ಇದೆ.
ಆಲ್ ದ ಬೆಸ್ಟ್ ಸ್ಮೃತಿ ಮಂಧಾನಾ!
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮಹತ್ವಾಕಾಂಕ್ಷೆಯ ಮತ್ತೊಂದು ಹೆಸರು; ಹ್ಯಾಪಿ ಬರ್ತ್‌ಡೇ ಪುರಚ್ಚಿ ತಲೈವಿ ಜಯಲಲಿತಾ!