Site icon Vistara News

Raja Marga Column: 800 – ಮುರಳೀಧರನ್‌ ಬಯೋಪಿಕ್‌; ಕುಲುಮೆಯಿಂದ ಎದ್ದುಬಂದ ಕಪ್ಪು ವಜ್ರದ ಕಥೆ!

ನಮ್ಮ ಓದುಗರಿಗೆ ಮುತ್ತಯ್ಯ ಮುರಳೀಧರನ್ (Muttiah Muralitharan) ಅವರನ್ನು ವಿಸ್ತಾರವಾಗಿ ಪರಿಚಯಿಸುವ ಅಗತ್ಯವೇ ಇಲ್ಲ. ವಿಶ್ವ ಕಂಡ ಅತ್ಯಂತ ಯಶಸ್ವೀ ಬೌಲರ್ ಅಂದರೆ ಅದು ಮುರಳಿ. ಆತನ 800 ಟೆಸ್ಟ್ ಕ್ರಿಕೆಟ್ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯಲು ಸಾಧ್ಯವಿಲ್ಲ. ಆ ದಾಖಲೆ ಸೂರ್ಯ ಚಂದ್ರರು ಇರುವವರೆಗೆ ಅಭಾದಿತ ಆಗಿರುತ್ತದೆ. ಬ್ಯಾಟಿಂಗ್ ಎಂದಾಗ ಡಾನ್ ಬ್ರಾಡ್ಮನ್, ಬೌಲಿಂಗ್ ಅಂದಾಗ ಮುರಳಿ ಇಬ್ಬರೂ ಲೆಜೆಂಡ್ ಆಟಗಾರರು ಹೌದು.

ಬದುಕೇ ಒಂದು ಹೋರಾಟ

ಆದರೆ ಆತನ ಬದುಕಿನ ಹೋರಾಟಗಳ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅವುಗಳನ್ನು ಸ್ಫೂರ್ತಿದಾಯಕವಾಗಿ ತೆರೆದಿಡುವ ಈ ಸಿನಿಮಾ 800 (800 Movie) ಅಕ್ಟೋಬರ್ ಆರರಂದು ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಒಂದೆಡೆ ಜನಾಂಗೀಯ ದ್ವೇಷ, ಮತ್ತೊಂದೆಡೆ ಭಯೋತ್ಪಾದನೆ, ಇನ್ನೊಂದೆಡೆ ವರ್ಣ ತಾರತಮ್ಯ, ಮಗದೊಂದು ಕಡೆ ಬಾಲ್ ಚೆಕಿಂಗ್ ಆರೋಪ… ಹೀಗೆ ನೂರಾರು ಅಪಮಾನ, ಆರೋಪಗಳನ್ನು ಎದುರಿಸಿ ಮುರಳಿ ಹೇಗೆ ವಿಶ್ವದಾಖಲೆಗಳನ್ನು ಮಾಡಿದರು ಅನ್ನುವುದನ್ನು ಈ ಸಿನಿಮಾದಲ್ಲಿ ಅದ್ಭುತವಾಗಿ ತೆರೆದು ತೋರಿಸುವ ಪ್ರಯತ್ನ ಮಾಡಿದ್ದು ಅದು ನಿಜಕ್ಕೂ ಶ್ಲಾಘನೀಯ.

ತಮಿಳುನಾಡಿನಿಂದ ಲಂಕೆಗೆ ವಲಸೆ ಹೋದ ಕುಟುಂಬ

ಮುರಳಿಯ ಹಿರಿಯರು ಟೀ ತೋಟಗಳಲ್ಲಿ ದುಡಿಯುವ ಆಸೆಯಿಂದ ಶ್ರೀಲಂಕಾಕ್ಕೆ ವಲಸೆ ಹೋದ ತಮಿಳು ಕುಟುಂಬದವರು. ಮುರಳಿ ಹುಟ್ಟಿದ್ದು ಏಪ್ರಿಲ್ 17, 1972ರಂದು ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ. ಆಗ ತಮಿಳರು ಮತ್ತು ಲಂಕಾ ನಿವಾಸಿಗಳ ನಡುವೆ ಭಾರೀ ಘರ್ಷಣೆ ನಡೆಯುತ್ತಿದ್ದ ದಿನಗಳು. ತಮಿಳು ಜನರನ್ನು ಲಂಕಾ ನಿವಾಸಿಗಳು ಕಾಲಿನ ಕಸದಂತೆ ಕಾಣುತ್ತಿದ್ದರು. ಅದೇ ಹೊತ್ತಿಗೆ ಲಂಕಾದಲ್ಲಿ LTTE ಭಯೋತ್ಪಾದನೆ ಹೊತ್ತಿ ಉರಿಯುತ್ತಿತ್ತು.

ಘಾತಕ ಬೌಲಿಂಗ್‌ ಸ್ಟೈಲ್

ಒಮ್ಮೆ ಜಾಫ್ನಾ ನಗರದಲ್ಲಿ ಬಾಲಕ ಮುರಳಿ ಕಣ್ಣ ಮುಂದೆಯೇ ಬಹಳ ದೊಡ್ಡ ಬಾಂಬ್ ಸ್ಫೋಟ ಆಗಿದ್ದು ಆತನನ್ನು ಬೆಚ್ಚಿ ಬೀಳಿಸಿತ್ತು. ಆದರೆ ಮುಂದೆ ಶಿಕ್ಷಣ ಪಡೆಯಬೇಕು ಎಂಬ ಆಸೆಯಿಂದ ಒಂದು ಕ್ರಿಶ್ಚಿಯನ್ ಶಾಲೆಗೆ ಮುರಳಿ ಸೇರಿದನು. ಆರು ವರ್ಷ ಪ್ರಾಯದಲ್ಲಿ ಮೊತ್ತ ಮೊದಲಾಗಿ ಕ್ರಿಕೆಟ್ ಬಾಲ್ ಕೈಯ್ಯಲ್ಲಿ ಹಿಡಿದು ರೋಮಾಂಚನ ಪಟ್ಟವನು ಇದೇ ಮುರಳಿ. ಅಲ್ಲಿ ಅವನ ಮೈಯಲ್ಲಿ ಕ್ರಿಕೆಟ್ ಆವೇಶ ಬಂದು ಕೂತಿತು. ಆತನ ತಂದೆ ಶ್ರೀಲಂಕಾದಲ್ಲಿ ಬಿಸ್ಕಿಟ್ ಫ್ಯಾಕ್ಟರಿ ನಡೆಸುತ್ತಿದ್ದರು.

ಹೆಜ್ಜೆ ಹೆಜ್ಜೆಗೂ ಅಪಮಾನ

ಹೋರಾಟ ಮುರಳಿಯ ರಕ್ತದಲ್ಲಿ ಬಂದಿತ್ತು ಅನಿಸುತ್ತದೆ. ಶ್ರೀಲಂಕಾದ ಪಾಲಿಟಿಕ್ಸ್, ಭಯೋತ್ಪಾದನೆ, ಜನಾಂಗೀಯ ದ್ವೇಷ, ವರ್ಣ ತಾರತಮ್ಯ ವ್ಯವಸ್ಥೆ ಎಲ್ಲದರ ವಿಕ್ಟಿಮ್ ಆದದ್ದು ಇದೇ ಮುರಳಿ. ನೀನು ತಮಿಳನೋ, ಸಿಂಹಳಿಯೋ, ಯಾರು ನೀನು? ಎಂದು ಗಟ್ಟಿಯಾಗಿ ಕೇಳುವಾಗ ನಾನು ಕ್ರಿಕೆಟರ್ ಎಂದು ತಣ್ಣಗಿನ ಧ್ವನಿಯಲ್ಲಿ ಹೇಳುವಾಗಲೂ ಆತನ ಕಣ್ಣಲ್ಲಿ ಬೆಂಕಿ ಉಗುಳುತ್ತಿತ್ತು.

ಲಂಕೆಯಲ್ಲಿ LTTE ಭಯೋತ್ಪಾದನೆ ತಾಂಡವ ಆಡುತ್ತಾ ಇರುವಾಗ ಮುರಳಿ ತನ್ನ ಬಾಲ್ಯವನ್ನು ಕಳೆದಿದ್ದ. ಕಪ್ಪು ಚರ್ಮದ ತಮಿಳರನ್ನು ಲಂಕಾ ನಿವಾಸಿಗಳು ಹೆಜ್ಜೆ ಹೆಜ್ಜೆಗೂ ದ್ವೇಷ ಮಾಡುತ್ತಿದ್ದರು. ಸರಕಾರ ಕೂಡ ಲಂಕನ್ನರ ಪರವಾಗಿತ್ತು. ಸಿನಿಮಾದಲ್ಲಿ ಅದನ್ನು ತುಂಬಾ ಚೆನ್ನಾಗಿ ನಿರ್ದೇಶಕ ಎಂ.ಎಸ್ ಶ್ರೀಪತಿ ತೋರಿಸುತ್ತಾ ಹೋಗಿದ್ದಾರೆ.

ಅಂತಹ ನೆಗೆಟಿವ್ ಪ್ರಭಾವಗಳ ನಡುವೆ ಕೂಡ ಮುರಳಿ ತನ್ನ ಅಗಾಧವಾದ ಪ್ರತಿಭೆಯ ಬಲದಿಂದ ಲಂಕಾ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದ! ಅಲ್ಲಿ ಕೂಡ ಕ್ರಿಕೆಟ್ ಕಂಟ್ರೋಲ್ ಬೋರ್ಡ್ ಕೃಪೆಯು ಅವನಿಗೆ ದೊರೆಯದೆ ಪದೇ ಪದೇ ಡ್ರಾಪ್ ಆಗುತ್ತಿದ್ದ. ಆದರೆ ಅರ್ಜುನ್ ರಣತುಂಗಾ ಕ್ಯಾಪ್ಟನ್ ಆಗಿ ಬಂದ ನಂತರ ಮುರಳಿ ಮ್ಯಾಜಿಕ್ ಆರಂಭ ಆಯಿತು. ತನ್ನ ರಿಸ್ಟ್ ತಿರುಗಿಸಿ ಮುರಳಿ ಎಸೆಯುತ್ತಿದ್ದ ಘಾತಕ ಚೆಂಡುಗಳು ಜಗತ್ತಿನ ಎಲ್ಲ ತಂಡಗಳನ್ನು ನಡುಗಿಸಿದವು. ಎಲ್ಲ ಸ್ಟಾರ್ ಆಟಗಾರರು ಮುರಳಿ ಬೌಲಿಂಗ್ ಅಸ್ತ್ರಕ್ಕೆ ಹೆದರುವ ಸನ್ನಿವೇಶವು ನಿರ್ಮಾಣ ಆಯಿತು.

ಮುರಳಿಗೆ ಎದುರಾಯ್ತು ಬಾಲ್ ಚೆಕಿಂಗ್ ಆರೋಪ

ಒಂದಲ್ಲ , ಎರಡಲ್ಲ, ಹಲವು ಬಾರಿ ಮುರಳಿ ಬೌಲಿಂಗ್ ಆಕ್ಷನ್ ಸರಿ ಇಲ್ಲ, ಆತನು ಬಾಲ್ ಚೆಕ್ ಮಾಡುತ್ತಾನೆ ಎನ್ನುವ ಆರೋಪಗಳು ಮುರಳಿಯ ಉತ್ಸಾಹವನ್ನು ಖಾಲಿ ಮಾಡಿದವು. ಅಂಪೈಯರ್ ಡೆರಿಲ್ ಹೇರ್ ಆತನಿಗೆ ಸತತವಾಗಿ ನೋ ಬಾಲ್ ಕೊಟ್ಟದ್ದು, ಆಸ್ಟ್ರೇಲಿಯಾದ ಬ್ಯಾಟರ್‌ಗಳು ಆತನನ್ನು ಬಹಿಷ್ಕರಿಸಬೇಕು ಎಂದು ಐಸಿಸಿಗೆ ದೂರು ನೀಡಿದ್ದು ಎಲ್ಲವೂ ನಡೆದುಹೋಯಿತು. ಒಮ್ಮೆ 1998-99ರ ಆಸ್ಟ್ರೇಲಿಯಾ ODI ಸರಣಿಯಲ್ಲಿ ಅಂಪಾಯರ್ ಮುರಳಿ ಬೌಲಿಂಗನ್ನು ತಡೆದಾಗ ಕ್ಯಾಪ್ಟನ್ ಅರ್ಜುನ್ ರಣತುಂಗಾ ಪ್ರತಿಭಟನೆ ಮಾಡಿ ತನ್ನ ಇಡೀ ತಂಡವನ್ನು ಕರೆದುಕೊಂಡು ಗ್ರೌಂಡಿನಿಂದ ಹೊರನಡೆದಿದ್ದ.

ಮುತ್ತಯ್ಯ ಮುರಳೀಧರನ್‌ಗಾಗಿ ಅಂಪಾಯರ್‌ ಜತೆ ಜಗಳವಾಡುತ್ತಿರುವ ಅರ್ಜುನ್‌ ರಣತುಂಗಾ

ಆಗೆಲ್ಲ ಐಸಿಸಿ ಒಂದು ತನಿಖಾ ಸಮಿತಿ ರಚನೆ ಮಾಡಿ ಮುರಳಿ ಬೌಲಿಂಗ್ ಆಕ್ಷನ್ ಬಯೋ ಮೆಕಾನಿಕಲ್ ವಿಶ್ಲೇಷಣೆ ಮಾಡಿ ಆತನಿಗೆ ಕ್ಲೀನ್ ಚಿಟ್ ಕೊಟ್ಟಿತ್ತು. ಈ ವಿಚಾರಣೆ ಹಲವು ಬಾರಿ ನಡೆಯಿತು. ಆಗೆಲ್ಲ ಬೂದಿಯಿಂದ ಎದ್ದು ಬಂದ ಫೀನಿಕ್ಸ್ ಹಕ್ಕಿಯ ಹಾಗೆ ಮುರಳಿ ಬೌನ್ಸ್ ಬ್ಯಾಕ್ ಮಾಡುತ್ತಿದ್ದ. ಅರ್ಜುನ್ ರಣತುಂಗಾ ನೀಡಿದ ನೈತಿಕ ಬೆಂಬಲವನ್ನು ಮುರಳಿ ಎಂದಿಗೂ ಮರೆಯಲಿಲ್ಲ.

ಮುರಳಿ ಬೌಲಿಂಗ್ ಕಮಾಲ್

ಜಗತ್ತಿನ ಅತ್ಯಂತ ಯಶಸ್ವೀ ರಿಸ್ಟ್ ಸ್ಪಿನ್ನರ್ ಆಗಿ ಮುರಳಿ ಪಡೆದದ್ದು 137 ಟೆಸ್ಟ್ ಪಂದ್ಯಗಳಲ್ಲಿ ಬರೋಬ್ಬರಿ 800 ವಿಕೆಟುಗಳನ್ನು! ಅದು ಸಾರ್ವತ್ರಿಕ ದಾಖಲೆ. ಆತನ ಬೌಲಿಂಗ್ ಸರಾಸರಿ 22.72. ಎರಡನೇ ಸ್ಥಾನದಲ್ಲಿ ಇನಿಂಗ್ಸ್ ಮುಗಿಸಿದ ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್ ಪಡೆದಿದ್ದಾನೆ. ಈಗ ಆಡುತ್ತಿರುವ ಬೇರೆ ಯಾವ ಬೌಲರ್ ಕೂಡ ಮುರಳಿಯ ದಾಖಲೆಯ ಹತ್ತಿರವೂ ಬರಲು ಈವರೆಗೆ ಸಾಧ್ಯ ಆಗಿಲ್ಲ. ಈಗ ಟೆಸ್ಟ್ ಪಂದ್ಯಗಳು ಅಪರೂಪ ಆಗಿರುವ ಕಾರಣ ಆ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯಲು ಸಾಧ್ಯವಿಲ್ಲ .

ಶೇನ್‌ ವಾರ್ನ್‌ ಜತೆಗೆ ಮುತ್ತಯ್ಯ ಮುರಳೀಧರನ್

ಬರೋಬ್ಬರಿ 67 ಬಾರಿ ಐದು ವಿಕೆಟ್ ಗೊಂಚಲನ್ನು ಪಡೆದ ವಿಶ್ವದಾಖಲೆಯು ಆತನ ಹೆಸರಿನಲ್ಲಿ ಇದೆ. 1711 ದಿನಗಳ ಕಾಲ ವಿಶ್ವದ ನಂಬರ್ ಒನ್ ರ‍್ಯಾಂಕಿಂಗ್ ಪಡೆದಿದ್ದು ಕೂಡ ದಾಖಲೆಯೇ. ಟೆಸ್ಟ್ ಪಂದ್ಯಗಳಲ್ಲಿ ಹತ್ತು ವಿಕೆಟ್ ಬೇಟೆಯನ್ನು ಸತತವಾಗಿ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಮಾಡಿದ್ದು, ಅದೂ ಎರಡು ಬಾರಿ ಮಾಡಿದ್ದು ಮುರಳಿ ದಾಖಲೆ! ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಪ್ರತೀ ರಾಷ್ಟ್ರದ ವಿರುದ್ಧವೂ 50+ ವಿಕೆಟ್ ಹಾರಿಸಿದ್ದು ಕೂಡ ದಾಖಲೆ. ಹೆಚ್ಚಿನ ವಿಕೆಟ್ ಬೌಲ್ಡ್ ಮಾಡಿ ಪಡೆದದ್ದು ಅದೂ ದಾಖಲೆ!

ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು 2010 ಜುಲೈ ತಿಂಗಳಲ್ಲಿ ಆಡಿ ಕೊನೆಯ ಎಸೆತದಲ್ಲಿ ಕೊನೆಯ ವಿಕೆಟ್ (800) ಪಡೆದದ್ದು ಕೂಡ ದಾಖಲೆಯೇ! ಐಸಿಸಿ ಹಾಲ್ ಆಫ್ ಫ್ರೇಮ್ ಗೌರವವನ್ನು ಪಡೆದ ಲಂಕಾದ ಮೊದಲ ಆಟಗಾರ ಅದು ಮುರಳಿ.

ಸಿನಿಮಾದಲ್ಲಿ ನಟ ಮಧುರ್‌ ಮಿತ್ತಲ್‌ ಮತ್ತು ಮುರಳೀಧರನ್

ಏಕದಿನ ಪಂದ್ಯಗಳಲ್ಲಿ 350 ಪಂದ್ಯ ಆಡಿ ಮುರಳಿ ಹಾರಿಸಿದ್ದು 534 ವಿಕೆಟುಗಳನ್ನು. ಅಲ್ಲಿ ಕೂಡ ಆತ ಮ್ಯಾಜಿಕ್ ಮಾಡಿದ್ದಾನೆ. ಐಪಿಎಲ್ ಪಂದ್ಯಗಳಲ್ಲಿ RCB, ಕೊಚ್ಚಿನ್ ಮತ್ತು CSK ತಂಡಗಳ ಪರವಾಗಿ ಮುರಳಿ ಹಲವು ವರ್ಷ ಆಡಿದ್ದಾನೆ. ಈಗ ಭಾರತದಲ್ಲಿಯೇ ಉದ್ಯಮಗಳನ್ನು ತೆರೆದಿರುವ ಆತ ಭಾರತೀಯರಿಗೆ ತುಂಬಾ ಹತ್ತಿರ ಆಗಿದ್ದಾನೆ.

ಇದನ್ನೂ ಓದಿ: Raja Marga Column : ನೀವು ಉತ್ತಮ ಭಾಷಣಕಾರರು ಆಗಬೇಕೆ? ಈ 25 TIPS ಪಾಲಿಸಿ

800- ಸ್ಮರಣೀಯ ಬಯೋಪಿಕ್!

ಸಚಿನ್, ಧೋನಿ, ಮೇರಿ ಕೋಂ, ಮಿಲ್ಖಾ ಸಿಂಗ್ ಮೊದಲಾದವರ ಬಯೋಪಿಕ್ ನೋಡಿ ಸ್ಫೂರ್ತಿ ಪಡೆದ ಭಾರತೀಯರಿಗೆ ಈ ಸಿನಿಮಾ ಕೂಡ ಖುಷಿ ನೀಡುತ್ತದೆ. ಮಧುರ್ ಮಿತ್ತಲ್ ಎಂಬ ಯುವ ನಟ ಮುರಳಿಯ ಪಾತ್ರವನ್ನು ಆವಾಹನೆ ಮಾಡಿದ ಹಾಗೆ ಆಕ್ಟಿಂಗ್ ಮಾಡಿದ್ದಾನೆ. ಕಿಂಗ್ ರತ್ನಮ್ ಎಂಬ ಶ್ರೀಲಂಕಾ ನಟ ಅರ್ಜುನ್ ರಣತುಂಗಾ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದ್ದಾನೆ. ಕ್ರಿಕೆಟ್ ಮತ್ತು ಮುರಳಿಯನ್ನು ಪ್ರೀತಿ ಮಾಡುವ ಮಂದಿ ನೋಡಲೇ ಬೇಕಾದ ಸಿನಿಮಾ ಇದು.

Exit mobile version