Site icon Vistara News

ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-6, ನಿಮ್ಮದೂ ಒಂದು ಯಶೋಗಾಥೆ ಯಾಕಾಗಬಾರದು?

Koushik Acharya

#image_title

ಪ್ರೀತಿಯ ವಿದ್ಯಾರ್ಥಿಗಳೇ,
ರ‍್ಯಾಂಕ್ ಪಡೆದವರಿಗೆ ಹತ್ತು ತಲೆ, ಹತ್ತು ಮೆದುಳು ಖಂಡಿತವಾಗಿ ಇರುವುದಿಲ್ಲ! ದಿನಕ್ಕೆ 48 ಘಂಟೆಗಳೂ ಇರುವುದಿಲ್ಲ! ಅವರು ನಿಮ್ಮ, ನಮ್ಮ ಹಾಗೆ ಸಾಮಾನ್ಯ ವಿದ್ಯಾರ್ಥಿಗಳು. ಆದರೆ ಅವರು ಬೇಗನೇ ಹೊಸ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾರೆ. ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳನ್ನು ಚೆನ್ನಾಗಿ ಓದುವ ಸಾಮರ್ಥ್ಯ ಹೊಂದಿರುತ್ತಾರೆ. ಪರೀಕ್ಷಾ ಕೊಠಡಿಯ ಒತ್ತಡವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಾರೆ. ಪ್ರಶ್ನೆಗಳಿಗೆ ಟು ದ ಪಾಯಿಂಟ್ ಉತ್ತರ ಬರೆಯುತ್ತಾರೆ. ಬರೆದಾದ ನಂತರ ತುಂಬಾನೇ ಜಾಗರೂಕತೆಯಿಂದ ಉತ್ತರವನ್ನು ಚೆಕ್ ಮಾಡುತ್ತಾರೆ. ಪರೀಕ್ಷಾ ಕೊಠಡಿಯಲ್ಲಿ ತುಂಬಾ ಚೆನ್ನಾಗಿ ಸಮಯ ನಿರ್ವಹಣೆ ಮಾಡುತ್ತಾರೆ. ತುಂಬಾ ಅದ್ಭುತವಾದ ಆತ್ಮವಿಶ್ವಾಸ ಹೊಂದಿರುತ್ತಾರೆ ಅಷ್ಟೇ!

ಇದು ನಿಮ್ಮಿಂದಲೂ ಸಾಧ್ಯ ಇದೆ ಅಂದರೆ ನೀವು ನನ್ನ ಮುಂದಿನ ವರ್ಷಗಳ ತರಬೇತಿಯಲ್ಲಿ ಎಸ್ಸೆಸ್ಸೆಲ್ಸಿ ಯಶೋಗಾಥೆಗಳಾಗಿ ಸ್ಥಾನ ಪಡೆಯುತ್ತೀರಿ.

ಇನ್ನಷ್ಟು ಯಶೋಗಾಥೆಗಳು ನಿಮ್ಮ ಮುಂದೆ…..

11) ಅವರೆಲ್ಲ ನೃತ್ಯ, ಸಂಗೀತ, ನಾಟಕ ಎಲ್ಲದರಲ್ಲೂ ಇದ್ದರು.. ಕಲಿಕೆಯಲ್ಲೂ!
ಕಳೆದ ವರ್ಷ ಮೂಡಬಿದ್ರೆಯ ಆಳ್ವಾಸ್ ಪ್ರೌಢಶಾಲೆಯಿಂದ ಐದು ವಿದ್ಯಾರ್ಥಿಗಳು 625/625 ಅಂಕ ಪಡೆದರು. ಅವರೆಲ್ಲರೂ ಇಡೀ ವರ್ಷ ನೃತ್ಯ, ಸಂಗೀತ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ವಿಭಾಗಗಳಲ್ಲಿ ಸಕ್ರಿಯರಾಗಿ ಇದ್ದವರು. ಕ್ರೀಡೆಯಲ್ಲಿಯೂ ಸಾಧನೆ ಮಾಡಿದ್ದರು. ಅದ್ಯಾವುದೂ ಅವರಿಗೆ ಅಂಕ ಪಡೆಯಲು ಹಿನ್ನಡೆ ಆಗಲಿಲ್ಲ!

12) ಅಮ್ಮನ ಹೆಣ ಡಿಕ್ಕಿಯಲ್ಲಿತ್ತು, ಅಪ್ಪ ಕಾರಿನಲ್ಲಿ ಸುತ್ತಾಡಿಸುತ್ತಿದ್ದ!
ಶಿವಮೊಗ್ಗದ ಒಬ್ಬ ಅದ್ಭುತ ಹುಡುಗಿ 625/625 ಅಂಕಗಳನ್ನು ಪಡೆದು ಭಾರಿ ದೊಡ್ಡ ಸಾಧನೆ ಮಾಡಿದ್ದಳು. ದೊಡ್ಡ ಸಾಧನೆ ಏನೆಂದರೆ ಅವಳ ಜೀವನದಲ್ಲಿ ಆ ವರ್ಷ ದುರಂತ ಒಂದು ನಡೆದು ಹೋಗಿತ್ತು. ಅವಳ ಅಪ್ಪ ಆ ಊರಿನ ಬಹಳ ದೊಡ್ಡ ಸರ್ಜನ್ ಆಗಿದ್ದವನು ತನ್ನ ಹೆಂಡತಿಯನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿದ್ದನು. ಹೆಂಡತಿಯ ಹೆಣವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಹಾಸ್ಟೆಲಿನಿಂದ ಮಗಳನ್ನು ಕರೆದುಕೊಂಡು ಇಡೀ ರಾತ್ರಿ ಕಾರಿನಲ್ಲಿ ಸುತ್ತಾಡಿಸಿದ್ದಾನೆ. ಡಿಕ್ಕಿಯಲ್ಲಿ ಅಮ್ಮನ ಹೆಣ ಇರುವುದು ಮಗಳಿಗೆ ಗೊತ್ತೇ ಇರಲಿಲ್ಲ! ಬೆಳಿಗ್ಗೆ ಅಪ್ಪ ಅರೆಸ್ಟ್ ಆಗಿದ್ದಾನೆ!
ಅಮ್ಮನ ಹೆಣವನ್ನು ಅಂಗಳದಲ್ಲಿ ಇಟ್ಟುಕೊಂಡು ಇಡೀ ಕುಟುಂಬ ಕಣ್ಣೀರು ಹಾಕಿತ್ತು. ಹುಡುಗಿ ಚೇತರಿಸಿಕೊಳ್ಳಲು ಮೂರು ದಿನಗಳು ಬೇಕಾದವು. ಮುಂದೆ ಅಜ್ಜಿಯ ಪ್ರೀತಿ ಪಡೆದ ಆ ಹುಡುಗಿ ಅಮ್ಮನ ಫೋಟೋವನ್ನು ದೇವರ ಫೋಟೋದ ಪಕ್ಕ ಇಟ್ಟುಕೊಂಡು ನಮಸ್ಕಾರ ಮಾಡಿ ಓದಲು ಆರಂಭ ಮಾಡಿದ್ದಳು. ಆಕೆಗೂ 625/625 ಅಂಕ ಬಂತು! ನಾನು ನೋಡಿದ್ದ ಅತೀ ದೊಡ್ಡ ಮಿರಾಕಲ್ ಅದು!

13) ಅವನಿಗೆ ಕಣ್ಣೇ ಕಾಣುತ್ತಿರಲಿಲ್ಲ! ಆದರೆ ರಾಜ್ಯಕ್ಕೆ 10ನೇ ರ‍್ಯಾಂಕ್‌!
ಇನ್ನೊಬ್ಬ ಮಿರಾಕಲ್ ನಿಮಗೆ ಪರಿಚಯ ಮಾಡಬೇಕು. ಆತ ನನ್ನ ಟಿವಿ ಕಾರ್ಯಕ್ರಮಕ್ಕೆ ಸಂದರ್ಶನಕ್ಕೆ ಬಂದಿದ್ದ. 615/625 ಅಂಕಗಳು. ರಾಜ್ಯಕ್ಕೆ ಹತ್ತನೇ ರ‍್ಯಾಂಕ್. ಆಶ್ಚರ್ಯ ಅಂದರೆ ಅವನಿಗೆ ಎರಡೂ ಕಣ್ಣು ಕಾಣುತ್ತಲೇ ಇರಲಿಲ್ಲ. ಆತ ಹುಟ್ಟು ಕುರುಡ. ಆತನ ತಂಗಿ ಕೂಡ ಕುರುಡಿ. ಅಮ್ಮ ಆ ಇಬ್ಬರು ಮಕ್ಕಳನ್ನು ಬಹಳ ಕಷ್ಟದಲ್ಲಿ ಬೆಳೆಸಿದವರು. ಆಗ ಡಾಕ್ಟರ್ ಮೋಹನ್ ಆಳ್ವ ಆ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದರು.

ಇವನ ಕಷ್ಟಗಳ ಮುಂದೆ ನಮ್ಮದೇನೂ ಇಲ್ಲ.. ಆದರೆ ಅವನಿಗೆ ಇದು ಏನೂ ಅಲ್ಲ!

ಅವನು ಹೇಳುವ ಪ್ರಕಾರ ಆತನಿಗೆ ಬೋರ್ಡ್ ಕಾಣಿಸುತ್ತಿರಲಿಲ್ಲ. ಅವನು ಮೊದಲ ಬೆಂಚಿನಲ್ಲಿ ಕೂತು ಪಾಠವನ್ನು ಕೇಳುತ್ತ ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡುತ್ತಿದ್ದನು. ಆಗಲೇ ಅವನು ಟೇಪ್ ರೆಕಾರ್ಡರ್ ಬಳಸಿಕೊಂಡು ಅವನು ಅಧ್ಯಾಪಕರ ಪಾಠವನ್ನು ಪೂರ್ತಿ ರೆಕಾರ್ಡಿಂಗ್ ಮಾಡಿಕೊಳ್ಳುತ್ತಿದ್ದ. ಹಾಸ್ಟೆಲ್ ರೂಮಿಗೆ ಹೋಗಿ ಆ ಪಾಠವನ್ನು ಮತ್ತೆ ಮತ್ತೆ ಕೇಳುತ್ತಾ ಲಾಪ್‌ಟಾಪ್ ನಲ್ಲಿ ಬ್ರೈಲ್ ಲಿಪಿಯಲ್ಲಿ ನೋಟ್ಸ್ ಮಾಡುತ್ತಿದ್ದನು. ಸತತ ಸಾಧನೆಯ ಮೂಲಕ ಅವನು ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ಪಡೆದಿದ್ದಾನೆ!

14) ಅವಳಿಗೆ ಅಪ್ಪ ಇಲ್ಲ. ಅಮ್ಮನ ಮಾನಸಿಕ ಆರೋಗ್ಯವೇ ಸರಿ ಇಲ್ಲ
ಉಡುಪಿಯ ಕೋಟಾ ವಿವೇಕ ಪದವಿಪೂರ್ವ ಕಾಲೇಜಿನ ಒಬ್ಬಳು ಹುಡುಗಿ 623/625 ಅಂಕ ಪಡೆದು ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದಿದ್ದಳು. ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದಳು. ಅವಳಿಗೆ ಅಪ್ಪ ಇಲ್ಲ. ಅಮ್ಮ ಹಲವು ಮನೆಗಳಲ್ಲಿ ಕೆಲಸ ಮಾಡಿ ಮಗಳನ್ನು ಸಾಕುತ್ತಿದ್ದಾರೆ. ಸಣ್ಣ ಒಂದು ಬಾಡಿಗೆ ಮನೆ ಅವರದ್ದು. ಅವಳ ಅಮ್ಮ ಜೀವನದಲ್ಲಿ ಹೆಚ್ಚು ನೋವನ್ನು ತೆಗೆದುಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ನನಗೆ ಆ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದರು. ಅವರ ಮನೆಯವರಿಗೆ ಅಧ್ಯಾಪಕರು ಬಿಟ್ಟರೆ ಬೇರೆ ಯಾರೂ ಸಪೋರ್ಟ್ ಇಲ್ಲ. ಆದರೂ ಆ ಹುಡುಗಿ ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದಿದ್ದಾಳೆ!

15) ಅವಳಿಗೆ ಒಂದು ವಾಕ್ಯ ಮಾತನಾಡಲು ಎರಡು ನಿಮಿಷ ಬೇಕು.. ಆದರೆ,
ಇನ್ನೊಬ್ಬ ಹುಡುಗಿ ಅಂಕೋಲಾ ತಾಲೂಕಿನವಳು. ಅತ್ಯಂತ ಸುಂದರವಾದ ಹುಡುಗಿ. ಪ್ರೈಮರಿ ಶಾಲೆಯ ಶಿಕ್ಷಕಿಯ ಮಗಳು. 616/625 ಅಂಕ ಪಡೆದ ಅವಳು ರಾಜ್ಯಕ್ಕೇ ಒಂಬತ್ತನೇ ರಾಂಕ್. ಆಶ್ಚರ್ಯ ಅಂದರೆ ಅವಳಿಗೆ ಎರಡೂ ಕಿವಿಗಳು ಕೇಳುವುದಿಲ್ಲ! ತುಂಬಾ ಉಗ್ಗುವಿಕೆ ಇರುವ ಕಾರಣ ಮಾತು ತುಂಬಾ ನಿಧಾನ! ಒಂದು ವಾಕ್ಯ ಪೂರ್ತಿ ಮಾಡಲು ಅವಳು ಕನಿಷ್ಠ ಒಂದೆರಡು ನಿಮಿಷ ತೆಗೆದುಕೊಳ್ಳುತ್ತಾಳೆ! ಆದರೆ ಸಮಸ್ಯೆ ಇರುವುದು ಕಿವಿಯದ್ದು. ಅವಳ ಅಮ್ಮ ಹೇಳುವ ಪ್ರಕಾರ ಅವಳಿಗೆ 10% ಮಾತ್ರ ಕಿವಿ ಕೇಳುತ್ತದೆ. ಸ್ಪೆಷಲ್ ಇಯರ್ ಫೋನ್ ಹಾಕಿದಾಗ 20-30% ಮಾತ್ರ ಕೇಳುತ್ತದೆ! ಅದಕ್ಕಾಗಿ ಅವಳು ಮುಂದಿನ ಬೆಂಚಿನಲ್ಲಿ ಕುಳಿತು ಮೊಬೈಲಿನಲ್ಲಿ ಶಿಕ್ಷಕರು ಮಾಡಿದ ಪಾಠ ರೆಕಾರ್ಡ್ ಮಾಡಿಕೊಳ್ಳುತ್ತಾಳೆ. ಮನೆಗೆ ಹೋಗಿ ಆ ಪಾಠವನ್ನು ಹಲವಾರು ಬಾರಿ ಕೇಳಿ ನೋಟ್ಸ್ ಮಾಡುತ್ತಾಳೆ. ಮುದ್ದಾದ ಅಕ್ಷರ ಅವಳದ್ದು. ಆ ಹುಡುಗಿಯನ್ನು ಕೂಡ ನಾನು ಮಿರಾಕಲ್ ಎಂದು ಕರೆಯುತ್ತೇನೆ!

ಕಿವಿ ಕೇಳದಿದ್ದರೇನಂತೆ.. ಬದುಕಿನ ಗುರಿ ಸ್ಪಷ್ಟವಿದೆ.

16) ಕುರಿ ಮೇಯಿಸುತ್ತಿದ್ದ ಹುಡುಗ ಶಾಲೆ ಆರಂಭಿಸಿದ್ದೇ ಮೂರನೇ ಕ್ಲಾಸಿಂದ!
ಇನ್ನೊಬ್ಬ ಹುಡುಗ ಬಯಲು ಸೀಮೆಯವನು. ಅವನ ಅಪ್ಪ ಅಮ್ಮ ಇಬ್ಬರೂ ಅನಕ್ಷರಸ್ಥರು. ಅವನೂ ಒಂಬತ್ತು ವರ್ಷಗಳವರೆಗೆ ಕುರಿಗಳನ್ನು ಮೇಯಿಸಿಕೊಂಡು ಇದ್ದವನು. ಮುಂದೆ ಯಾರೋ ಅವನನ್ನು ಶಾಲೆಗೆ ಕರೆದುಕೊಂಡು ಮೂರನೇ ತರಗತಿಗೆ ಸೇರಿಸುತ್ತಾರೆ. ಅದು ಸರಕಾರಿ ಶಾಲೆ, ಕನ್ನಡ ಮಾಧ್ಯಮ. ಆದರೆ ಆ ಹುಡುಗ ಅದ್ಭುತವಾಗಿ ಚೇತರಿಸಿಕೊಂಡ. ಕಲಿಯುವ ಸಾಮರ್ಥ್ಯವು ಹೆಚ್ಚಾಯಿತು. ಅಧ್ಯಾಪಕರ ಪ್ರೋತ್ಸಾಹ ದೊರೆಯಿತು. ಆ ಹುಡುಗನು 618/625 ಅಂಕ ತೆಗೆದುಕೊಂಡ ವರದಿ ಬಂದಿದೆ!

17) ಕನಿಷ್ಠ ಪರೀಕ್ಷೆ ಬರೆಯಲೂ ಅವನಿಗೆ ಕೈಗಳೇ ಇರಲಿಲ್ಲ!
ಕರಾವಳಿ ಜಿಲ್ಲೆಯ ಒಬ್ಬ ಹುಡುಗನಿಗೆ ಎರಡೂ ಕೈಗಳು ಇಲ್ಲದೆ ಹೋದಾಗ ಅವನು ತನ್ನ ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಎಸೆಸೆಲ್ಸಿ ಪರೀಕ್ಷೆಗೆ ಬರೆದು ಉತ್ತಮ ಅಂಕ ಪಡೆದಿದ್ದ. ಎಲ್ಲ ಪತ್ರಿಕೆಗಳಲ್ಲಿಯು ಅದು ಮುಖಪುಟ ನ್ಯೂಸ್ ಆಗಿತ್ತು. ಸ್ವತಃ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಆತನ ಮನೆಗೆ ಬಂದು ಆತನನ್ನು ಅಭಿನಂದನೆ ಮಾಡಿ ಹೋಗಿದ್ದರು.

ಭರತವಾಕ್ಯ – ನನ್ನ ಹತ್ತಿರ ಈ ರೀತಿಯ ನೂರಾರು ಯಶೋಗಾಥೆಗಳು ಇವೆ. ನನ್ನ ತರಬೇತಿ ಕಾರ್ಯಕ್ರಮದಲ್ಲಿ ನನಗೆ ಪ್ರತೀ ಊರಲ್ಲಿಯೂ ಇಂತಹ ಪ್ರತಿಭೆಗಳು ದೊರೆಯುತ್ತವೆ. ಅವರಿಗೆಲ್ಲ ನಮ್ಮದೊಂದು ಸೆಲ್ಯೂಟ್ ಇರಲಿ. ಮುಂದಿನ ವರ್ಷದ ನನ್ನ ತರಬೇತಿಯಲ್ಲಿ ನಿಮ್ಮ ಸಾಧನೆಯೂ ಒಂದು ಅದ್ಭುತ ಯಶೋಗಾಥೆಯಾಗಿ ಸ್ಥಾನವನ್ನು ಪಡೆಯಲಿ!
(ಮುಂದುವರಿಯುವುದು)

ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು

Exit mobile version