ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia Versus England) ನಡುವಿನ ಪ್ರತಿಷ್ಠಿತ ಆ್ಯಶಸ್ ಸರಣಿಯ (Ashes Cricket series) ಕೊನೆಯ ಪಂದ್ಯದ ಕೊನೆಯ ದಿನ ಇಡೀ ಮೈದಾನದಲ್ಲಿ ಸ್ಟ್ಯಾಂಡಿಂಗ್ ಓವೇಷನ್ ಪಡೆದು, ತನ್ನ ಸಹ ಆಟಗಾರರಿಂದ ಗಾರ್ಡ್ ಆಫ್ ಆನರ್ ಪಡೆದು ಒಬ್ಬ ಕ್ರಿಕೆಟರ್ ನಿವೃತ್ತಿ ಪಡೆಯುತ್ತಾನೆ ಅಂದರೆ ಆತ ಖಂಡಿತವಾಗಿ ಲೆಜೆಂಡ್ ಆಗಿರಬೇಕು! ಹೌದು, ಈ ಸೋಮವಾರ ಕ್ರಿಕೆಟ್ ಗ್ರೌಂಡ್ ಪೂರ್ತಿ ಎಮೋಷನಲ್ ಆಗಿ ಬದಲಾಗಿತ್ತು. ಅದಕ್ಕೆ ಕಾರಣ ಆದದ್ದು ಇಂಗ್ಲಿಷ್ ಬೌಲರ್ ಸ್ಟುವರ್ಟ್ ಬ್ರಾಡ್ (Stuart Broad) ಅವರ ನಿವೃತ್ತಿ! (ರಾಜ ಮಾರ್ಗ ಅಂಕಣ)
ಭಾರತೀಯರಿಗೆ ಈ ಹೆಸರು ಯಾವತ್ತೂ ಮರೆತು ಹೋಗುವುದಿಲ್ಲ!
ಅದಕ್ಕೆ ಕಾರಣ 2007ರ ಐಸಿಸಿ T20 ವಿಶ್ವಕಪ್. ಅಂದು ಭಾರತದ ಯುವರಾಜ್ ಸಿಂಗ್ ಮೈಯಲ್ಲಿ ಆವೇಶ ಬಂದ ಹಾಗೆ ಒಂದು ಓವರಿನಲ್ಲಿ ಆರು ಸಿಕ್ಸ್ ಚಚ್ಚಿದ್ದು ಇದೇ ಸ್ಟುವರ್ಟ್ ಬ್ರಾಡ್ ಓವರಿಗೆ! ಆ ಒಂದು ಓವರ್ ಮುಗಿದಾಗ ಯುವರಾಜ್ ಹೀರೋ ಆಗಿದ್ದರು ಮತ್ತು ಸ್ಟುವರ್ಟ್ ಬ್ರಾಡ್ ಇಂಗ್ಲೆಂಡಿಗೆ ವಿಲನ್ ಆಗಿದ್ದರು! ಇಂದು ಅದೇ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟಿನಲ್ಲಿ 602 ವಿಕೆಟ್ ಪಡೆದು ನಿವೃತ್ತನಾಗುತ್ತಿದ್ದಾನೆ.
ಯುವರಾಜ್ ಅವರಿಂದ ಹಾಗೆ ಚಚ್ಚಿಸಿಕೊಳ್ಳುವಾಗ ಸ್ಟುವರ್ಟ್ ಬ್ರಾಡ್ ವಯಸ್ಸು ಕೇವಲ 21 ಆಗಿತ್ತು. ಆನಂತರ ನಾನು ಕ್ರಿಕೆಟ್ ಮೈದಾನದಲ್ಲಿ ತುಂಬಾ ಕಲಿತೆ ಎಂದು ಸ್ಟುವರ್ಟ್ ಬ್ರಾಡ್ ಹೇಳಿದ್ದಾನೆ. ಅವನಲ್ಲಿ ನಾನು ಕಂಡ ಆ ಟ್ರಾನ್ಸ್‌ಫಾರ್ಮೇಶನ್ ನಿಜಕ್ಕೂ ಅದ್ಭುತ ಎಂದೇ ನನ್ನ ಭಾವನೆ.
ಆತನ ತಂದೆ ಕೂಡ ಟೆಸ್ಟ್ ಕ್ರಿಕೆಟ್ ಆಡಿದ್ದರು
ಸ್ಟುವರ್ಟ್ ಬ್ರಾಡ್ ತಂದೆ ಕ್ರಿಸ್ ಬ್ರಾಡ್ 1984-89ರ ಅವಧಿಯಲ್ಲಿ ಅದೇ ಇಂಗ್ಲೆಂಡ್ ಪರವಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದರು. ಈ ಸ್ಟುವರ್ಟ್ ಹುಟ್ಟುವಾಗ 12 ವಾರಗಳ ಪ್ರಿಮೆಚ್ಯೂರ್ ಬೇಬಿ ಆಗಿದ್ದವನು. ಆಗ ಅವನನ್ನು ಡಾಕ್ಟರ್ ಜಾನ್ ಎಂಬ ವೈದ್ಯ ಬದುಕಿಸಿಕೊಟ್ಟವರು. ಅದರಿಂದಾಗಿ ಸ್ಟುವರ್ಟ್ ಬ್ರಾಡ್ ಹೆಸರಿನ ಮಧ್ಯದಲ್ಲಿ ಜಾನ್ ಅಂಟಿಕೊಂಡಿತು. ಹದಿನಾರು ವರ್ಷದವರೆಗೆ ಕೇವಲ ಹಾಕಿ ಆಡಿಕೊಂಡು ಇದ್ದವನು ಸ್ಟುವರ್ಟ್. ಆತನು ತಂಡದ ಗೋಲ್ ಕೀಪರ್ ಆಗಿದ್ದನು. ಆದರೆ ಯಾವುದೋ ಒಂದು ಮಾಯೆಗೆ ಒಳಗಾಗಿ ಅಪ್ಪನಿಂದ ಸ್ಫೂರ್ತಿ ಪಡೆದು ಮುಂದೆ ಕ್ರಿಕೆಟ್ ಜಗತ್ತನ್ನು ಪ್ರವೇಶ ಮಾಡಿದ್ದನು. ಮುಂದೆ 2006ರಿಂದ 2023ರ ವರೆಗೆ 17 ವರ್ಷಗಳ ಕಾಲ ಆತನು ಇಂಗ್ಲೆಂಡ್ ಪರವಾಗಿ ಆಡಿದ್ದು ಒಂದು ದಾಖಲೆ.
6 ಅಡಿ ಐದು ಇಂಚು ಎತ್ತರದ ಹುಡುಗ ಸ್ಟುವರ್ಟ್
ಈ ಎತ್ತರವು ಆತನಿಗೆ ದೈವದತ್ತವಾಗಿ ಬಂದಿತ್ತು. ಇನ್ನೂ ಒಂದು ವಿಶೇಷ ಎಂದರೆ ಆತನು ಎಡಗೈ ಬೌಲರ್, ಬಲಗೈ ಬ್ಯಾಟ್ಸ್‌ಮನ್! ಅವನದ್ದೇ ಇಂಗ್ಲೆಂಡ್ ತಂಡದ ಇನ್ನೊಬ್ಬ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಜೊತೆಗೆ 111 ಟೆಸ್ಟ್ ಪಂದ್ಯ ಆಡಿದ ದಾಖಲೆ ಕೂಡ ಆತನ ಹೆಸರಲ್ಲಿ ಇದೆ. ಜಗತ್ತಿನ ಅತ್ಯಂತ ಯಶಸ್ವೀ ವೇಗದ ಬೌಲರ್‌ಗಳು ಒಂದೇ ತಂಡದ ಭಾಗವಾಗಿರುವುದು ಕೂಡ ಉಲ್ಲೇಖನೀಯ. ಸ್ಟುವರ್ಟ್ 165 ಟೆಸ್ಟ್ ಪಂದ್ಯ ಆಡಿ 602 ವಿಕೆಟ್ ಪಡೆದರೆ ಇದೇ ಜೇಮ್ಸ್ ಆಂಡರ್ಸನ್ 689 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿ ಇದ್ದಾರೆ.
ಟೆಸ್ಟ್ ಕ್ರಿಕೆಟಿನಲ್ಲಿ 600+ ವಿಕೆಟ್ ಪಡೆದವರು ಕೇವಲ ಐದು ಜನರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದರೆ, ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್ ಪಡೆದವರು. ನಮ್ಮದೇ ಭಾರತದ ಅನಿಲ್ ಕುಂಬ್ಳೆ 619 ವಿಕೆಟ್ ಪಡೆದಿದ್ದಾರೆ. ಅವರು ಮೂರೂ ಜನ ಸ್ಪಿನ್ ಬೌಲರ್‌ಗಳು . ಉಳಿದವರು ಸ್ಟುವರ್ಟ್ ಮತ್ತು ಆಂಡರ್ಸನ್ ಇಬ್ಬರೂ ವೇಗದ ಬೌಲರಗಳು. ಅದರಲ್ಲಿ ಸ್ಟುವರ್ಟ್ ಬ್ರಾಡ್ ಈಗ ಆ್ಯಶಸ್ ಸರಣಿಯ ಕೊನೆಯಲ್ಲಿ ನಿವೃತ್ತಿ ಘೋಷಣೆ ಮಾಡಿದ್ದಾನೆ.
ಸ್ಟುವರ್ಟ್ ಬ್ರಾಡ್ ವಿಲನ್ ಆದದ್ದು ಅದೇ ಮೊದಲು ಅಲ್ಲ!
ಈ ಸ್ಟುವರ್ಟ್ ಬ್ರಾಡ್ 2007ರಲ್ಲಿ ಯುವರಾಜ್ ಸಿಂಗ್ ಕೈಯ್ಯಲ್ಲಿ ಹೊಡೆಸಿಕೊಂಡು ವಿಲನ್ ಆದದ್ದು ನಮಗೆ ಗೊತ್ತೇ ಇದೆ. ಇನ್ನೊಮ್ಮೆ 2009ರಲ್ಲಿ ದುರ್ಬಲ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಕೈಗೆ ಎತ್ತಿಕೊಂಡು ಏಳು ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಸ್ಟುವರ್ಟ್ ಬ್ರಾಡ್ ವಿಫಲನಾಗಿದ್ದ. ಆ ಓವರಿನಲ್ಲಿ ಎರಡು ರನ್ ಔಟ್ ಅವಕಾಶ ಮತ್ತು ಒಂದು ಸುಲಭದ ಕ್ಯಾಚ್ ಕೈ ಚೆಲ್ಲಿ ಆತನು ಎರಡನೇ ಬಾರಿಗೆ ವಿಲನ್ ಆಗಿದ್ದನು. ಇಷ್ಟೆಲ್ಲ ಆದರೂ ಆತನ ಟೀಮ್ ಮ್ಯಾನೇಜ್‌ಮೆಂಟ್ ಆತನನ್ನು 17 ವರ್ಷ ಆಡಿಸಿತು ಎಂದರೆ ಅದು ನಿಜವಾಗಿಯೂ ಗ್ರೇಟ್ ಆಗಿರಬೇಕು.
ಸ್ಟುವರ್ಟ್ ಬ್ರಾಡ್ ದಾಖಲೆಗಳು ನಿಜವಾಗಿಯೂ ಅದ್ಭುತ
ಆ ಎರಡು ಘಟನೆಗಳನ್ನು ಬಿಟ್ಟರೆ ಸ್ಟುವರ್ಟ್ ಹಲವಾರು ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್ ತೋರಿದ್ದಾನೆ. ಅತ್ಯಂತ ಕಠಿಣವಾದ ಆ್ಯಶಸ್ ಸರಣಿಯಲ್ಲಿ ಸ್ಟುವರ್ಟ್ ಎಂದಿಗೂ ಹಿಂದೆ ಬಿದ್ದದ್ದು ಇಲ್ಲವೇ ಇಲ್ಲ! 165 ಟೆಸ್ಟ್ ಪಂದ್ಯಗಳಲ್ಲಿ 602 ವಿಕೆಟ್ ಅಂದರೆ ಅದು ನಿಜಕ್ಕೂ ಅದ್ಭುತ ಸಾಧನೆ. 20 ಬಾರಿ ಐದು ವಿಕೆಟ್ ಗೊಂಚಲು, 3 ಬಾರಿ ಹತ್ತು ವಿಕೆಟ್ ಗೊಂಚಲು ಪಡೆದ ದಾಖಲೆಯು ಖಂಡಿತವಾಗಿ ಸಣ್ಣದು ಅಲ್ಲ. 15/8 ಅವರ ಬೆಸ್ಟ್ ಫಿಗರ್. ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ ಹ್ಯಾಟ್ರಿಕ್ ಸಾಧನೆ ಕೂಡ ಆತನ ಹೆಸರಲ್ಲಿ ಇದೆ. ಪಾಕ್ ವಿರುದ್ಧ ನಂಬರ್ 9 ಬ್ಯಾಟ್ಸ್‌ಮನ್ ಆಗಿ ಕ್ರೀಸಿಗೆ ಬಂದು 169 ರನ್ ಚಚ್ಚಿದ್ದು ಕೂಡ ಅವನ ದಾಖಲೆಯ ಭಾಗ!
ನಂಬರ್ 9 ಅಥವಾ ನಂಬರ್ 10 ಬ್ಯಾಟ್ಸ್‌ಮನ್ ಆಗಿ ಕ್ರೀಸಿಗೆ ಬಂದು ಅತೀ ಹೆಚ್ಚು ಹೊತ್ತು ಕ್ರೀಸಿನಲ್ಲಿ ಒಂದೇ ಒಂದು ಸ್ಕೋರ್ ಮಾಡದೆ ನಿಂತ (103 ನಿಮಿಷ) ದಾಖಲೆ ಕೂಡ ಸ್ಟುವರ್ಟ್ ಬ್ರಾಡ್ ಹೆಸರಲ್ಲಿ ಇದೆ. ಡೇವಿಡ್ ವಾರ್ನರ್‌ನನ್ನು 17 ಬಾರಿ ಔಟ್ ಮಾಡಿದ ದಾಖಲೆ ಕೂಡ ಅದ್ಭುತವಾಗಿದೆ.
ಅಸ್ತಮಾ ಜೊತೆ ಕೂಡಾ ಫೈಟ್
ಆತನ ಬೌಲಿಂಗ್ ಆ್ಯಕ್ಷನ್ ತುಂಬಾ ಚಂದ. ಸ್ಟುವರ್ಟ್ ಬ್ರಾಡ್ ತುಂಬಾ ದೂರದಿಂದ ಓಡಿಕೊಂಡು ಬರುವುದಿಲ್ಲ. ಆದರೆ ಆತನು ಅತ್ಯುತ್ತಮ ಸ್ವಿಂಗ್ ಬೌಲರ್. ಹೆಚ್ಚಿನ ಎಸೆತಗಳು ಗುಡ್ ಲೆಂಗ್ತ್ ಆಗಿದ್ದು ಬ್ಯಾಟ್ಸ್‌ಮನ್‌ಗಳು ಗೊಂದಲಕ್ಕೆ ಈಡಾಗುತ್ತಾರೆ ಅನ್ನುವುದೇ ಆತನ ನಿಖರತೆಯ ಪ್ರಮಾಣ ಪತ್ರ.
ಬಾಲ್ಯದಿಂದಲೂ ಕಾಡುತ್ತಿದ್ದ ಅಸ್ತಮಾ ಜೊತೆ ಕೂಡ ಅವನು ದೀರ್ಘ ಕಾಲ ಫೈಟ್ ಮಾಡಬೇಕಾಯಿತು. ಎಷ್ಟೋ ಬಾರಿ ಮೈದಾನದಲ್ಲಿ ಉಸಿರು ಕಟ್ಟಿದ ಅನುಭವ ಆಗಿ ಸ್ಟುವರ್ಟ್ ಕುಸಿದು ಹೋದ ಸಂದರ್ಭಗಳು ಇವೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಕ್ರಿಕೆಟಿನ ಡಾನ್ ಬ್ರಾಡ್ಮನ್! ಕೊನೆಯ ಇನಿಂಗ್ಸ್‌ನಲ್ಲಿ 1 ಬೌಂಡರಿ ಬಾರಿಸಿದ್ದರೆ ಕಥೆಯೇ ಬೇರೆ ಆಗ್ತಿತ್ತು!
ಹಾಗೆ ಸ್ಟುವರ್ಟ್ ಬ್ರಾಡ್ ಇಂದು ವಿಶ್ವವಿಜಯೀ ಆಗಿದ್ದಾನೆ. ಇಂಗ್ಲೆಂಡ್ ಗೆದ್ದಿರುವ ಪ್ರತೀ ಕ್ರಿಕೆಟ್ ಸರಣಿಗಳಲ್ಲಿ ಮತ್ತು ವಿಶ್ವಕಪ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಗೆಲ್ಲಿಸಿಕೊಟ್ಟ ಕೀರ್ತಿಯಲ್ಲಿ ಒಂದು ಭಾಗವು ಸ್ಟುವರ್ಟ್ ಬ್ರಾಡ್‌ಗೆ ಖಂಡಿತ ದೊರೆಯಬೇಕು. ಇನ್ನೂ ತನ್ನಲ್ಲಿ ಒಂದೆರಡು ವರ್ಷ ಕ್ರಿಕೆಟ್ ಇದೆ ಎನ್ನುವಾಗಲೇ ಈ 37 ವರ್ಷದ ವೇಗಿ ನಿವೃತ್ತಿ ಘೋಷಣೆ ಮಾಡಿದ್ದಾನೆ.
ಆತನ ODI ಮತ್ತು T20 ದಾಖಲೆಗಳೂ ತುಂಬಾ ಚೆನ್ನಾಗಿವೆ. ಅಂತಹ ಚಾಂಪಿಯನ್ ಆಟಗಾರ ಇನ್ನು ಇಂಗ್ಲೆಂಡ್ ಪರವಾಗಿ ಆಡುವುದಿಲ್ಲ ಅನ್ನುವಾಗ ಒಂದು ಶೂನ್ಯ ಕ್ರಿಯೇಟ್ ಆಗುತ್ತದೆ. ಆ ಶೂನ್ಯವನ್ನು ಸದ್ಯಕ್ಕೆ ತುಂಬುವುದು ಯಾರು? ವಿಲನ್ ಆಗಿ ಕ್ರಿಕೆಟ್ ಆರಂಭ, ಲೆಜೆಂಡ್ ಆಗಿ ನಿರ್ಗಮನ ಅನ್ನುವ ಮಾತು ಅದು ಸ್ಟುವರ್ಟ್ ಬ್ರಾಡ್ ಅವನಿಗೆ ಖಂಡಿತವಾಗಿ ಹೊಂದಿಕೆ ಆಗುತ್ತದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ: You Cant believe, ಅವನು ಮೊದಲ ರನ್ ಗಳಿಸಲು ಆರು ಇನಿಂಗ್ಸ್ ಒದ್ದಾಡಿದ್ದ!