ನನ್ನ ತರಬೇತಿಗಳಲ್ಲಿ ಮತ್ತು ಉಪನ್ಯಾಸಗಳಲ್ಲಿ ಅತೀ ಹೆಚ್ಚು ಬಾರಿ ಉಲ್ಲೇಖ ಪಡೆದ ಈಕೆಯ ಸಾಧನೆಯ ಬಗ್ಗೆ ನನಗೆ ಅಚ್ಚರಿ ಮತ್ತು ಅಭಿಮಾನ! ತುಂಬಾ ಚಂದವಾಗಿ ಹಾಡುವ ತನ್ನ ಪ್ರತಿಭೆಯನ್ನು ಬಂಡವಾಳವಾಗಿ ಮಾಡಿಕೊಂಡು ಆಕೆ ಮಾಡುತ್ತಿರುವ ಮಾನವೀಯ ಅಂತಃಕರಣದ ಸಮಾಜಸೇವೆಯನ್ನು ನೆನೆದಾಗ ನನಗೆ ನಿಜವಾಗಿಯೂ ಖುಷಿ ಮತ್ತು ರೋಮಾಂಚನ ಮೂಡುತ್ತದೆ.
ಆಕೆಯ ಹೆಸರು ಪಲಕ್ ಮುಚ್ಚಲ್! (Palak Mucchal)
ಆಕೆಯ ಸಾಧನೆಯನ್ನು ಆಕೆಯ ಮಾತುಗಳಲ್ಲಿಯೇ ಕೇಳುತ್ತಾ ಮುಂದೆ ಹೋಗೋಣ. ಓವರ್ ಟು ಪಲಕ್ ಮುಚ್ಚಲ್!
ನನ್ನ ಹೆಸರು ಪಲಕ್ ಮುಚ್ಚಲ್. ಮಧ್ಯಪ್ರದೇಶದ ಇಂದೋರ್ ನಗರದ ಸೆರಗಿನಲ್ಲಿ ಇದೆ ನನ್ನ ಸಣ್ಣ ಊರು. ನನಗೆ ಬಾಲ್ಯದಿಂದಲೂ ಸಂಗೀತ ಅಂದರೆ ಪ್ರಾಣ. ನನ್ನ ತಂದೆ ಮತ್ತು ತಾಯಿ ನನ್ನನ್ನು ಬಹಳ ಸಣ್ಣ ಪ್ರಾಯದಲ್ಲಿಯೇ ಸಂಗೀತ ಕಲಿಯಲು ಕಳುಹಿಸಿದರು. ಏಳನೇ ವಯಸ್ಸಿನಲ್ಲಿ ನಾನು ವೇದಿಕೆಗಳಲ್ಲಿ ಹಾಡಲು ಆರಂಭ ಮಾಡಿದ್ದೆ. ನಾನು ತುಂಬಾ ಚೆನ್ನಾಗಿ ಹಾಡುತ್ತೇನೆ ಎಂದು ಎಲ್ಲರೂ ಹೇಳುತ್ತಿದ್ದರು.
1999ರ ಹೊತ್ತಿಗೆ ದೇಶದಲ್ಲಿ ಕಾರ್ಗಿಲ್ ಯುದ್ಧ ನಡೆಯಿತು. ಭಾರತವು ಈ ಯುದ್ಧವನ್ನು ಅದ್ಭುತ ಆಗಿ ಗೆದ್ದಿತು. ನನಗೆ ಯುದ್ಧ ಎಂದರೆ ಏನು ಎಂದು ಕೂಡ ಗೊತ್ತಿರಲಿಲ್ಲ. ಆದರೆ ಯುದ್ಧ ಮುಗಿದಾಗ ನೂರಾರು ಸೈನಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಸಾವಿರಾರು ಸೈನಿಕರು ತೀವ್ರವಾದ ಗಾಯಗಳನ್ನು ಪಡೆದರು. ನೂರಾರು ಕುಟುಂಬಗಳು ಸಂತ್ರಸ್ತವಾಗಿ ಬಿಟ್ಟಿದ್ದವು.
ಕಾರ್ಗಿಲ್ ಸಂತ್ರಸ್ತರ ಕುಟುಂಬಕ್ಕೆ ನೆರವಾದಾಗ ಆಕೆಗೆ 7 ವರ್ಷ!
ಆಗ ದೇಶದ ಪ್ರಧಾನಿಯಾಗಿದ್ದ ವಾಜಪೇಯಿಜೀ ಅವರು ಸೈನಿಕರ ಕುಟುಂಬಕ್ಕೆ ನೆರವಾಗಲು ಒಂದು ನಿಧಿಯನ್ನು ಸ್ಥಾಪನೆ ಮಾಡಿ ಅದಕ್ಕೆ ಧನಸಹಾಯ ಮಾಡಲು ದೇಶಕ್ಕೆ ಕರೆ ನೀಡಿದರು. ಅದು ದೇಶದ ಎಲ್ಲ ಪ್ರಮುಖ ಪತ್ರಿಕೆಗಳ ಮುಖಪುಟದ ಸುದ್ದಿ ಆಯಿತು.
ಏಳು ವರ್ಷದ ಹುಡುಗಿ ಬೀದಿಗೆ ಬಂದು ಹಾಡಿದ್ದಳು!
ಆಗ ನನಗೆ ಏಳು ವರ್ಷ ಪ್ರಾಯ! ನನಗೆ ದೇಶದ ಧೀರ ಸೈನಿಕರಿಗೆ ಏನಾದರೂ ಸಹಾಯ ಮಾಡಬೇಕು ಅಂತ ಅನ್ನಿಸಿತು. ಆದರೆ ಹೇಗೆ ಎಂದು ಗೊತ್ತಿರಲಿಲ್ಲ. ಹೋಗಿ ಅಮ್ಮನ ಹತ್ತಿರ ಹೇಳಿದಾಗ ಅಮ್ಮ ಹೇಳಿದ್ದು ಒಂದೇ ಮಾತು – ನಿನಗೆ ಸಂಗೀತ ಕಲಿಸಿದ್ದು ಯಾಕೆ? ಅದನ್ನು ಬಂಡವಾಳ ಮಾಡಿ ದುಡ್ಡು ಸಂಗ್ರಹ ಮಾಡು ಎಂದು!
ನನಗೆ ಎಲ್ಲವೂ ಅರ್ಥ ಆಗಿತ್ತು.
ಒಂದು ವಾರ ಶಾಲೆಗೆ ರಜೆ ಹಾಕಿ ನಾನು ಬೀದಿಗೆ ಇಳಿದಿದ್ದೆ. ರಸ್ತೆ ರಸ್ತೆಯಲ್ಲಿ, ಬೀದಿ ಬೀದಿಯಲ್ಲಿ ಮತ್ತು ಅಂಗಡಿಗಳ ಮುಂಭಾಗದಲ್ಲಿ ನಾನು ಮೈ ಮರೆತು ದೇಶಭಕ್ತಿಯ ಹಾಡುಗಳನ್ನು ಹಾಡಲು ತೊಡಗಿದೆ. ದುಡ್ಡಿಗಾಗಿ ಪ್ರಾರ್ಥನೆ ಮಾಡಿದೆ. ಆರಂಭದಲ್ಲಿ ಜನರು ಅಪಮಾನ ಮಾಡಿದರು. ಬೈದವರೂ ಇದ್ದಾರೆ. ಆದರೆ ಕ್ರಮೇಣ ಅವರಿಗೆ ನನ್ನ ಉದ್ದೇಶವು ಅರ್ಥ ಆಗಿತ್ತು. ಪ್ರತಿಯೊಬ್ಬರು ಯಥಾಶಕ್ತಿ ದುಡ್ಡಿನ ಸಹಾಯವನ್ನು ಮಾಡಿದರು. ಆ ಕಾಲಕ್ಕೆ ಸುಮಾರು 25,000 ರೂ. ನಿಧಿ ಸಂಗ್ರಹ ಆಗಿತ್ತು! ಅದನ್ನು ಪ್ರಧಾನಿಯವರ ನಿಧಿಗೆ ಕಳುಹಿಸಿ ಬಂದಾಗ ಏನೋ ಧನ್ಯತೆಯ ಭಾವ! ಮುಂದೆ ನನ್ನ ಜೀವನದ ದಾರಿಯು ಸ್ಪಷ್ಟ ಆಗಿತ್ತು.
ನನ್ನನ್ನು ಅಲ್ಲಾಡಿಸಿ ಬಿಟ್ಟ ಘಟನೆ ಅದು!
ನನ್ನ ಇಡೀ ಜೀವನವನ್ನು ಅಲ್ಲಾಡಿಸಿ ಬಿಟ್ಟ ಇನ್ನೊಂದು ಘಟನೆಯು ಮುಂದೆ ನಡೆಯಿತು.
ಆಗ ನನಗೆ ಕೇವಲ 14 ವರ್ಷ. ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಾ ಇದ್ದೆ. ಒಂದು ದಿನ ನನ್ನ ಒಬ್ಬ ಸಹಪಾಠಿ, ಲೋಕೇಶ್ ಎಂದು ಅವನ ಹೆಸರು, ಒಂದು ವಾರದಿಂದ ಶಾಲೆಗೆ ರಜೆ ಮಾಡಿದ್ದ. ಅವನು ಶಾಲೆಗೆ ಮತ್ತೆ ಬಂದಾಗ ಅಧ್ಯಾಪಕರು ಕಾರಣ ಕೇಳಿದರು.
ತನಗೆ ಎದೆ ನೋವು ಬಂದಿತ್ತು, ವೈದ್ಯರು ಪರೀಕ್ಷೆಯನ್ನು ಮಾಡಿ ಹೃದಯದಲ್ಲಿ ಒಂದು ರಂಧ್ರ ಕಂಡುಬಂದಿದೆ, ತುರ್ತಾಗಿ ಆಪರೇಶನ್ ಮಾಡಬೇಕು, ಆರು ಲಕ್ಷ ರೂ. ದುಡ್ಡು ಬೇಕು ಎಂದು ವೈದ್ಯರು ತಿಳಿಸಿದ್ದಾರೆ, ತನ್ನ ಅಪ್ಪ ಒಂದು ಶೂ ಅಂಗಡಿಯಲ್ಲಿ ಸಣ್ಣ ಕೆಲಸ ಮಾಡ್ತಾ ಇದ್ದಾರೆ. ನಮಗೆ ಅಷ್ಟೊಂದು ಹಣ ಹೊಂದಿಸುವುದು ಕಷ್ಟ ಎಂದು ಅಪ್ಪ ಹೇಳುತ್ತಿದ್ದಾರೆ ಅಂದ.
ನನಗೆ ಅಮ್ಮ ಹೇಳಿದ ಮಾತು ಮತ್ತೆ ನೆನಪಾಯಿತು. ನಾನು ನನ್ನ ಗೆಳೆಯರು ಸೇರಿ ಒಂದು ಸಂಗೀತ ಕಛೇರಿ ನಡೆಸಲು ಮುಂದಾದೆವು. ಒಂದು ಸಭಾಂಗಣ ಬುಕ್ ಮಾಡಿದೆವು. ನನ್ನ ಗೆಳೆಯರು ಇಂದೋರ್ ನಗರದ ಗಲ್ಲಿ ಗಲ್ಲಿಗಳಲ್ಲಿ ಟಿಕೆಟ್ ಮಾರಿದರು. ಉದ್ದೇಶ ಚೆನ್ನಾಗಿ ಇದ್ದ ಕಾರಣ ಜನಸಾಗರವೇ ಹರಿದು ಬಂದಿತು. ನಾನು ವೇದಿಕೆಯಲ್ಲಿ ಅಂದು ಮೈ ಮರೆತು ಹಾಡಿದ್ದೆ. ನನ್ನ ಕೊನೆಯ ಹಾಡಿನ ಮೊದಲು ನಾನು ಪ್ರೇಕ್ಷಕರನ್ನು ಮತ್ತೆ ವಿನಂತಿ ಮಾಡಿದೆ. ನನ್ನ ಗೆಳೆಯನ ನೆರವಿಗೆ ನಿಲ್ಲಲು ಕೈ ಜೋಡಿಸಿ ಪ್ರಾರ್ಥನೆ ಮಾಡಿದೆ.
ನನ್ನ ಸಹಪಾಠಿಗಳು ಖಾಲಿ ಬಕೆಟ್ ಹಿಡಿದು ಜನರ ಮಧ್ಯೆ ಹೋದರು. ಅರ್ಧ ಗಂಟೆಯ ಅವಧಿಯಲ್ಲಿ ಬಕೆಟ್ ದುಡ್ಡಿನಿಂದ ತುಂಬಿ ತುಳುಕಿತು. ಟಿಕೆಟ್ ಹಣ ಮತ್ತು ಬಕೆಟ್ ಹಣ ಸೇರಿ ಆರು ಲಕ್ಷ ಸಂಗ್ರಹ ಆಗಿತ್ತು! ಅದನ್ನು ನಾನು ಅದೇ ವೇದಿಕೆಯಲ್ಲಿ ನನ್ನ ಗೆಳೆಯನಿಗೆ ಡೊನೇಟ್ ಮಾಡಿದ್ದೆ.
ಇದು ಎಲ್ಲಾ ಪತ್ರಿಕೆಗಳ ಹೆಡ್ ಲೈನ್ ನ್ಯೂಸ್ ಆಗಿತ್ತು. ರಾಷ್ಟ್ರ ಮಟ್ಟದ ನ್ಯೂಸ್ ಚಾನಲ್‌ಗಳು ಜಿದ್ದಿಗೆ ಬಿದ್ದು ಈ ಮಾನವೀಯ ನೆಲೆಯ ಈ ವಾರ್ತೆಯನ್ನು ಪ್ರಕಟ ಮಾಡಿದರು. ಈ ನ್ಯೂಸ್ ಆಗ ಬೆಂಗಳೂರಿನಲ್ಲಿದ್ದ ಖ್ಯಾತ ಹೃದಯ ತಜ್ಞರಾದ ಡಾಕ್ಟರ್ ದೇವಿ ಶೆಟ್ಟಿ ಅವರಿಗೆ ತಲುಪಿತು. ಅವರ ಮನಸ್ಸು ಕರಗಿತು. ಅವರು ಆ ಹುಡುಗನನ್ನು ಸ್ವತಃ ಬೆಂಗಳೂರಿಗೆ ಕರೆಸಿಕೊಂಡು ತಮ್ಮದೇ ಆಸ್ಪತ್ರೆಯಲ್ಲಿ ಉಚಿತವಾದ ಹೃದಯದ ಶಸ್ತ್ರ ಚಿಕಿತ್ಸೆಯನ್ನು ಮಾಡಿದರು. ಲೋಕೇಶ್ ಬದುಕಿ ಬಂದ. ಆ ಆರು ಲಕ್ಷ ರೂಪಾಯಿ ನನಗೆ ವಾಪಸ್ ಕೊಟ್ಟ!
ಈಗ ನನ್ನ ನಿಜವಾದ ಸಮಸ್ಯೆ ಆರಂಭ ಆಯಿತು. ಈ ದುಡ್ಡು ಏನು ಮಾಡುವುದು? ದಾನಿಗಳು ಯಾರೂ ದುಡ್ಡು ಹಿಂದೆ ತೆಗೆದುಕೊಳ್ಳಲು ಒಪ್ಪಲಿಲ್ಲ.
ಆಗ ನಾನು ನನ್ನ ಗುರುಗಳ ಸಲಹೆ ಪಡೆದು ಒಂದು ಪತ್ರಿಕಾ ಜಾಹೀರಾತು ಕೊಟ್ಟೆ. ಹತ್ತು ವರ್ಷದ ಒಳಗಿನ ಯಾವುದೇ ಮಗುವಿಗೆ ಹೃದಯ ಸಮಸ್ಯೆ ಇದ್ದರೆ ನಾವು ಖರ್ಚು ಭರಿಸಿ ಶಸ್ತ್ರಚಿಕಿತ್ಸೆ ಮಾಡಲು ರೆಡಿ ಇದ್ದೇವೆ. ಅಗತ್ಯ ಇದ್ದವರು ಸಂಪರ್ಕ ಮಾಡಿ ಎಂದು.
ಒಟ್ಟು ಎಂಟು ನೊಂದ ಬಡ ಕುಟುಂಬಗಳು ನನ್ನನ್ನು ಸಂಪರ್ಕ ಮಾಡಿದವು. ಎಲ್ಲವೂ ಅದೇ ರೀತಿಯ ಸಮಸ್ಯೆಯನ್ನು ಹೊಂದಿದ್ದ ಕುಟುಂಬಗಳು. ನಮ್ಮ ಹತ್ತಿರ ಅಷ್ಟು ದುಡ್ಡು ಇರಲಿಲ್ಲ. ಆಗ ಮತ್ತೆ ನನ್ನ ಶಾಲೆಯ ಗುರುಗಳು ಹೊಸ ಯೋಚನೆಯ ಜೊತೆಗೆ ನನ್ನ ನೆರವಿಗೆ ನಿಂತರು.
ಅವರ ಸಲಹೆಯಂತೆ ನಾನು ಇಂದೋರ್ ನಗರದಲ್ಲಿ ಇದ್ದ ಎಲ್ಲಾ ಸಂಘ ಸಂಸ್ಥೆಗಳನ್ನು ಸಂಪರ್ಕ ಮಾಡಿದೆ. ನನಗಾಗಿ ನಿಧಿ ಸಂಗ್ರಹ ಸಂಗೀತ ಕಾರ್ಯಕ್ರಮ ನಡೆಸಿ ಕೊಡಿ, ನಾನು ಬಂದು ಉಚಿತವಾಗಿ ಹಾಡುತ್ತೇನೆ, ನನಗೆ ಒಂದು ಗೊಂಬೆಯನ್ನು ಕೊಟ್ಟರೆ ಸಾಕು ಎಂದು ವಿನಂತಿ ಮಾಡಿದೆ. ಇದರ ಹಿಂದೆ ಇದ್ದ ಉದ್ದೇಶವು ಎಲ್ಲರಿಗೂ ಕನೆಕ್ಟ್ ಆಯಿತು. ಎಲ್ಲರೂ ನಮ್ಮ ನೆರವಿಗೆ ನಿಂತರು. ಆ ಎಂಟು ಮಕ್ಕಳ ಶಸ್ತ್ರಚಿಕಿತ್ಸೆಗಳು ಯಶಸ್ವೀ ಆದವು. ನನ್ನ ಶೋಕೇಸಲ್ಲಿ ಹತ್ತಾರು ಚಂದದ ಗೊಂಬೆಗಳು ಬಂದು ಕೂತವು!
ಇಂದೋರ್ ನಗರದಲ್ಲಿ ಅಂದು ಇತಿಹಾಸ ನಿರ್ಮಾಣ ಆಗಿತ್ತು!
ಮಾಧ್ಯಮಗಳು ನನ್ನ ಬಗ್ಗೆ ತುಂಬಾನೇ ವಿಸ್ತಾರವಾಗಿ ಬರೆದವು. ಆಗ ಹುಟ್ಟಿದ್ದೇ ‘ಪಲಕ್ ಹಾರ್ಟ್ ಫೌಂಡೇಶನ್ ‘ ಎಂಬ ಚಾರಿಟಿ ಫೌಂಡೇಶನ್! ಪ್ರಚಾರ ದೊರೆತಂತೆ ನೂರಾರು ಹೃದಯ ರೋಗಿ ಬಡ ಮಕ್ಕಳ ಕುಟುಂಬಗಳು ನನ್ನನ್ನು ಸಂಪರ್ಕ ಮಾಡಿದವು. ನಾನು ಕಷ್ಟ ಪಟ್ಟು ಭಾರತದ 17 ಭಾಷೆಗಳನ್ನು ಕಲಿತೆ. ಕಾಲಿಗೆ ಚಕ್ರ ಕಟ್ಟಿದ ಹಾಗೆ ನಾನು ಇಡೀ ಭಾರತದಾದ್ಯಂತ ಓಡಾಡಿದೆ. ಬೆಂಗಳೂರಿಗೆ ಕೂಡ ಬಂದಿದ್ದೆ. ಸಂಗೀತ ಕಛೇರಿ ಮತ್ತು ನಿಧಿ ಸಂಗ್ರಹ ಕಾರ್ಯಕ್ರಮಗಳು ಜೊತೆ ಜೊತೆ ಆಗಿ ನಡೆದವು.
ನಾನು ಲಂಡನ್, ದುಬಾಯಿ, ಬ್ಯಾಂಕಾಕ್, ಬೆಲ್ಜಿಯಂ ಮೊದಲಾದ ಹೊರದೇಶಕ್ಕೂ ಹೋಗಿ ಬಂದೆ. ಎಲ್ಲಾ ಕಡೆ ನನ್ನ ಸಂಗೀತ ಕಾರ್ಯಕ್ರಮಗಳು ನಡೆದವು. ನನ್ನ ತಮ್ಮ ಕೂಡ ನನ್ನ ಕಾರ್ಯಕ್ರಮಗಳಲ್ಲಿ ಮಿಮಿಕ್ರಿಯನ್ನು ಮಾಡಿ ನೆರವಿಗೆ ನಿಂತ. ಸಾವಿರಾರು ಬಡ ಮಕ್ಕಳ ಹೃದಯದ ಚಿಕಿತ್ಸೆಗಳು ಯಶಸ್ವೀ ಆಗಿ ನಡೆದವು. ನನ್ನ ಉದ್ದೇಶ ಅರ್ಥ ಮಾಡಿಕೊಂಡು ದೊಡ್ಡ ಆಸ್ಪತ್ರೆಗಳು ಕೂಡ ನನ್ನ ಫಲಾನುಭವಿಗಳಿಗೆ ರಿಯಾಯಿತಿಯನ್ನು ನೀಡಿದವು. ನಮ್ಮ ‘ಫಲಕ್ ಹಾರ್ಟ್ ಫೌಂಡೇಶನ್’ ದೇಶದಾದ್ಯಂತ ಸಂಚಲನ ಉಂಟು ಮಾಡಿತು.
ಹಾಡಲು ಹೋದ ನನ್ನನ್ನು ಜಜ್ ಆಗಿ ಕೂರಿಸಿದರು!
ಇದರಿಂದ ನನಗೆ ಭಾರೀ ಜನಪ್ರಿಯತೆಯು ಬಂತು. ಸರಿಗಮಪ ವೇದಿಕೆಯಲ್ಲಿ ನಾನು ಹಾಡಲು ಹೋದಾಗ ನನಗೆ ಹಾಡಲು ಅವಕಾಶ ಕೊಡದೆ ನನ್ನನ್ನು ಸೆಲೆಬ್ರಿಟಿ ಜಜ್ ಆಗಿ ಕೂರಿಸಿದರು! ಅಬ್ದುಲ್ ಕಲಾಂ, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಶೇಖರ್ ಕಪೂರ್ ನನ್ನ ಕಾರ್ಯಕ್ರಮಕ್ಕೆ ಬಂದು ಬೆನ್ನು ತಟ್ಟಿ ಹೋದರು. ನನಗೆ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರವು’ ದೊರೆಯಿತು ಎಂದು ಹೇಳುತ್ತ ಫಲಕ್ ಮಾತು ಮುಗಿಸಿದರು. ಇನ್ನು ಸಾಯುವ ತನಕ ಇದೇ ಉದ್ದೇಶಕ್ಕೆ ಹಾಡುತ್ತೇನೆ ಎಂದು ಆಕೆ ವೇದಿಕೆಯಲ್ಲಿ ಹೇಳಿದ್ದಾರೆ.
ಆಕೆಯ ಸಂಗ್ರಹದಲ್ಲಿ ಇವೆ 2500 ಗೊಂಬೆಗಳು!
ಆಕೆಗೆ ಈಗ 30 ವರ್ಷ. ಏಳನೇ ವರ್ಷದಿಂದ ಈವರೆಗೆ ಆಕೆ ಚಾರಿಟಿಯ ಉದ್ದೇಶಕ್ಕೆ ಪ್ರತೀ ದಿನ ಎಂಬಂತೆ ಹಾಡಿದ್ದಾರೆ. ಅದರಿಂದ ಬಂದ ದುಡ್ಡಿನ ಮೂಲಕ ಆಕೆ ಇದುವರೆಗೆ 2500 ಬಡ ಮಕ್ಕಳ ಹೃದಯದ ಚಿಕಿತ್ಸೆಗೆ ನೆರವಾಗಿದ್ದಾರೆ!
ಅವರ ಈ ಸಾಧನೆ ಲಿಮ್ಕಾ ಮತ್ತು ಗಿನ್ನೆಸ್ ದಾಖಲೆಯ ಪುಸ್ತಕಕ್ಕೆ ಸೇರ್ಪಡೆ ಆಗಿದೆ. ಆಕೆಯ ಶೋಕೇಸಲ್ಲಿ ಈ ವರ್ಷದ ಸೆಪ್ಟೆಂಬರ್ ತಿಂಗಳ ಹೊತ್ತಿಗೆ 2500ಕ್ಕೂ ಅಧಿಕ ಚಂದವಾದ ಗೊಂಬೆಗಳು ಸಂಗ್ರಹ ಆಗಿವೆ! ಪ್ರತೀ ಒಂದು ಗೊಂಬೆ ಕೂಡ ಒಂದೊಂದು ಮಾನವೀಯ ಅಂತಃಕರಣದ ಮಹಾ ಯಶೋಗಾಥೆಯನ್ನು ನೆನಪು ಮಾಡುತ್ತದೆ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಸ್ವಚ್ಛ ಭಾರತ: ಗಾಂಧಿ ಕಂಡ ಕನಸು, ಮೋದಿ ಕಾಲದಲ್ಲೂ ನನಸಾಗುತ್ತಿಲ್ಲ; ಅಡ್ಡಿ ಆಗಿರುವುದು ಯಾರೆಂದರೆ…