ಒಬ್ಬ ಸಭ್ಯ ಗೃಹಸ್ಥನು ಒಬ್ಬ ಸ್ವಾಮೀಜಿಯ ಬಳಿಗೆ ಬಂದು ತನ್ನ ಅಳಲನ್ನು ಈ ರೀತಿ ತೋಡಿಕೊಂಡನು.
“ನಾನು ನೂರಾರು ಜನರಿಗೆ ಸಹಾಯ ಮಾಡಿದ್ದೇನೆ, ನೂರಾರು ಮಂದಿಯ ಬದುಕಿನಲ್ಲಿ ಬೆಳಕು ತುಂಬಿದ್ದೇನೆ. ಯಾವುದೇ ಸ್ವಾರ್ಥ ಇಲ್ಲದೆ ಅವರ ಏಳಿಗೆಗಾಗಿ ದುಡಿದಿದ್ದೇನೆ. ಆದರೆ ಅವರೆಲ್ಲರೂ ನನಗೆ ದ್ರೋಹ ಬಗೆದು ಬೆನ್ನು ತಿರುಗಿಸಿ ಹೋಗಿದ್ದಾರೆ. ಒಬ್ಬರಿಗೂ ಮನಸ್ಸಿನಲ್ಲಿ ಕೃತಜ್ಞತೆ ಇಲ್ಲ. ತುಂಬಾ ನೋವಾಗುತ್ತಿದೆ” ಎಂದು ಕಣ್ಣೀರು ಹಾಕಿದರು. ಆತನ ಕಣ್ಣೀರು ಒರೆಸುತ್ತಾ ಸನ್ಯಾಸಿಯು ತನ್ನದೇ ಜೀವನದ ಒಂದು ಕತೆಯನ್ನು ಹೇಳಲು ಆರಂಭ ಮಾಡಿದರು.
ಒಮ್ಮೆ ನಾನು ದೋಣಿಯಲ್ಲಿ ಕುಳಿತು ನದಿಯಲ್ಲಿ ಪ್ರಯಾಣ ಮಾಡುತ್ತಿದ್ದೆ. ಆಗ ನನಗೆ ನೀರಲ್ಲಿ ಮುಳುಗುತ್ತಿದ್ದ ಒಂದು ಚೇಳು ಕಂಡಿತು. ನನಗೆ ಕನಿಕರ ಬಂದು ಆ ಚೇಳನ್ನು ತನ್ನ ಬೆರಳ ತುದಿಯಿಂದ ಮೇಲಕ್ಕೆತ್ತಿದೆ. ನನ್ನ ಉದ್ದೇಶ ಅದನ್ನು ಬದುಕಿಸುವುದು ಆಗಿತ್ತು. ಆದರೆ ಅದು ಬೆರಳನ್ನು ಜೋರಾಗಿ ಕುಟುಕಿತು. ನಾನು ಅಯ್ಯೋ ಎಂದು ಕಿರುಚಿ ಕೈಬಿಟ್ಟೆ. ಚೇಳು ಮತ್ತೆ ನೀರಿಗೆ ಬಿದ್ದಿತು.
ಸ್ವಲ್ಪ ಹೊತ್ತಿನ ನಂತರ ಮತ್ತೆ ನಾನು ಚೇಳನ್ನು ಬೆರಳಿನ ತುದಿಯಿಂದ ಮೇಲೆ ಎತ್ತಲು ಪ್ರಯತ್ನ ಮಾಡಿದೆ. ಚೇಳು ಮತ್ತೆ ಕಚ್ಚಿತು. ನಾನು ಮತ್ತೆ ನೋವಿನಿಂದ ಕೈ ಬಿಟ್ಟೆ.
ಚೇಳು ಮತ್ತೆ ನೀರಿಗೆ ಬಿದ್ದಿತು! ಇದು ಸುಮಾರು ಸಲ ಮುಂದುವರಿಯಿತು. ನಾನು ನನ್ನ ಪ್ರಯತ್ನವನ್ನು ಕೈಬಿಡಲಿಲ್ಲ!
ಇದನ್ನು ನೋಡುತ್ತಾ ಇದ್ದ ಮತ್ತೊಬ್ಬ ಸಹನಾವಿಕರು ನನ್ನನ್ನು ಉದ್ದೇಶಿಸಿ ಕೇಳಿದರು – ಸ್ವಾಮೀಜಿ, ಅದು ನಿಮ್ಮ ಬೆರಳನ್ನು ಪದೇಪದೆ ಕಚ್ಚುತ್ತಿದೆ. ನಿಮಗೆ ನೋವು ಕೊಡುತ್ತಿದೆ. ಆದರೂ ನೀವು ಯಾಕೆ ಅದನ್ನು ಎತ್ತುವ ಪ್ರಯತ್ನ ಮಾಡುತ್ತಿರುವಿರಿ?
ಆಗ ನಾನು ನಗುತ್ತ ಹೇಳಿದೆ, “ಕಚ್ಚುವುದು ಅದರ ಧರ್ಮ. ಬದುಕಿಸುವುದು ನನ್ನ ಧರ್ಮ! ಅದು ಅದರ ಧರ್ಮವನ್ನು ಬಿಡುವುದಿಲ್ಲ. ನಾವು ನಮ್ಮ ಧರ್ಮವನ್ನು ಬಿಡಬಾರದು!”
ಈ ಕತೆಯನ್ನು ಹೇಳಿದ ಸನ್ಯಾಸಿ ಆ ಗೃಹಸ್ಥನಿಗೆ ಕೇಳಿದರು – “ಯಾರೋ ಮೆಚ್ಚುತ್ತಾರೆ, ಯಾರೋ ಮೆಚ್ಚುವುದಿಲ್ಲ, ಯಾರೋ ನೆನಪಲ್ಲಿ ಇಡುತ್ತಾರೆ, ಯಾರೋ ನೆನಪಲ್ಲಿ ಇಡುವುದಿಲ್ಲ ಎಂಬ ಕಾರಣಕ್ಕೆ ನಮ್ಮ ಧರ್ಮವನ್ನು, ಒಳ್ಳೆಯ ಕೆಲಸಗಳನ್ನು ಬಿಡಬಾರದು. ಒಳ್ಳೆಯ ಕೆಲಸಗಳನ್ನು ನಿಮ್ಮ ಆತ್ಮ ತೃಪ್ತಿಗೆ ಮಾಡುತ್ತಾ ಹೋದಂತೆ ನಿಮ್ಮ ವಿಷಾದ, ಬೇಸರ, ಸಿಟ್ಟು ಕಡಿಮೆ ಆಗುತ್ತವೆ” ಎಂದರು. ಆ ಗೃಹಸ್ಥರು ಆ ಸನ್ಯಾಸಿಗೆ ನಮಸ್ಕಾರ ಮಾಡಿ ಮುಂದಿನ ಸತ್ಕಾರ್ಯಕ್ಕೆ ಹೊರಟರು.
ಇದನ್ನೂ ಓದಿ| ರಾಜ ಮಾರ್ಗ ಅಂಕಣ| ಟೈಮಿಂಗ್ ಅಂತೀವಲ್ಲಾ.. ಏನಿದು? ಜಿಂಕೆಗೂ, ವಿರಾಟ್ ಕೊಹ್ಲಿಗೂ ಏನು ಸಂಬಂಧ?