Site icon Vistara News

ರಾಜ ಮಾರ್ಗ ಅಂಕಣ | ಕಂಫರ್ಟ್ ಝೋನಿಂದ ಹೊರಬನ್ನಿ:ರೇಷ್ಮೆ ಹುಳದಿಂದ ಕಲಿಯಬೇಕಾದ ಜೀವನ ಪಾಠ!

silk cocoon

ನನ್ನ ಯುವ ಗೆಳೆಯನೊಬ್ಬ ನನ್ನ ಬಳಿ ಬಂದು ನನಗೆ ನಿಮ್ಮ ಸಲಹೆ ಬೇಕು ಎಂದ. ಯಾವುದರ ಬಗ್ಗೆ? ಎಂದು ಕೇಳಿದೆ.

ಅವನು ನನ್ನ ಕೆರಿಯರ್ ಕಟ್ಟುವ ಬಗ್ಗೆ ಗೊಂದಲ ಇದೆ. ನೀವೇ ಪರಿಹಾರ ಮಾಡಬೇಕು ಅಂದ. ಏನು ಗೊಂದಲ? ಎಂದು ನಾನು ಕೇಳಿದೆ. ಅವನು ತನ್ನ ಕತೆ ಹೇಳುತ್ತಾ ಹೋದ.

ಸರ್, ನಾನು MBA ಮಾಡಿದ್ದೇನೆ. ಒಳ್ಳೆ ಮಾರ್ಕ್ಸು ಇದೆ. ನನಗೆ ಹಲವು ಕಂಪೆನಿಗಳ ಆಫರ್ ಇದೆ. ಒಳ್ಳೆ ಪ್ಯಾಕೇಜ್ ಇದೆ. ಆದರೆ ನನ್ನ ಅಪ್ಪ ಯಾವ ಕಂಪನಿ ಜಾಬ್ ಯಾವುದೂ ಬೇಡ, ನಮ್ಮ ಬಿಸಿನೆಸ್ ನೋಡಿಕೊಂಡರೆ ಸಾಕು. ನಮಗೆ ಆನುವಂಶೀಯವಾಗಿ ಬಂದ ವ್ಯಾಪಾರ ಇದೆ. ನೋಡಿಕೋ ಎನ್ನುತ್ತಾರೆ. ನನಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ ಅಂದನು.

ನಾನು ಅವನನ್ನು ನನ್ನ ಮುಂದೆ ಕೂರಿಸಿ ಅವನಿಗೆ ರೇಷ್ಮೆ ಹುಳದ ಕತೆಯನ್ನು ಹೇಳುತ್ತಾ ಹೋದೆ. ಒಂದು ರೇಷ್ಮೆ ಹುಳವು ತನ್ನ ಇಡೀ ಜೀವನದಲ್ಲಿ ಹಿಪ್ಪುನೇರಳೆ ಸೊಪ್ಪು ತಿಂದು ಕೊಬ್ಬುತ್ತ ಹೋಗುತ್ತದೆ. ಒಮ್ಮೆ ಗರಿಷ್ಠ ಗಾತ್ರ ತಲುಪಿದ ನಂತರ ಇನ್ನು ತಿನ್ನುವುದು ಸಾಕು ಎಂದು ನಿರ್ಧಾರ ಮಾಡುತ್ತದೆ.

ಆಗ ತನ್ನ ದೇಹದಿಂದ ಹೊರಬರುವ ಒಂದು ನೂಲಿನಿಂದ ಒಂದು ಸುಂದರವಾದ ಗೂಡನ್ನು ತನ್ನ ಸುತ್ತಲೂ ನೇಯಲು ಆರಂಭ ಮಾಡುತ್ತದೆ. ಗೂಡು ಪೂರ್ತಿ ಆದ ನಂತರ ಆ ಗೂಡಿನ ಒಳಗೆ ಕೂತು ಮೈಯನ್ನು ಮಡಚಿ ಸುಂದರವಾದ ಕನಸು ಕಾಣುತ್ತದೆ.

ಆ ರೇಷ್ಮೆ ಹುಳದ ಹತ್ತಿರ ಎರಡು ಆಯ್ಕೆಗಳು ಇವೆ. ಒಂದು ಅದೇ ಗೂಡಿನ ಒಳಗೆ ಉಸಿರು ಕಟ್ಟಿಕೊಂಡು ಇರುವುದು. ಆಗ ಆ ಕೋಶವನ್ನು ಬಿಸಿನೀರಿಗೆ ಹಾಕಿ ಹುಳವನ್ನು ಸಾಯಿಸುತ್ತಾರೆ. ಆ ನೂಲಿನಿಂದ ರೇಷ್ಮೆ ಸೀರೆ
ನೇಯುತ್ತಾರೆ. ಆ ಸೀರೆ ಪಡೆಯಬೇಕಾದರೆ ಹುಳವು ಸಾಯಲೇ ಬೇಕು! ಇದು ಒಂದು ಆಯ್ಕೆ.

ಎರಡನೇ ಆಯ್ಕೆ ಎಂದರೆ ಆ ಗೂಡನ್ನು ಒಡೆದು ಹುಳವು ಹೊರಬರುವುದು. ಆಗ ಅದು ಹುಳ ಆಗಿರುವುದಿಲ್ಲ. ಅದು ಸುಂದರವಾದ ಬಣ್ಣ ಬಣ್ಣದ ರೇಷ್ಮೆ ಚಿಟ್ಟೆ ಆಗಿರುತ್ತದೆ. ಇದು ಎರಡನೇ ಆಯ್ಕೆ ಎಂದೆ.

ಉದಾಹರಣೆಯನ್ನು ಮುಗಿಸಿ ನಾನವನಿಗೆ ಕೇಳಿದೆ – ನಿನ್ನ ಆಯ್ಕೆ ಯಾವುದು?
ಅವನು ಹೇಳಿದ ನನ್ನ ಆಯ್ಕೆ ಎರಡನೆಯದು ಎಂದು!

ಈಗ ನಾನು ಹೇಳುತ್ತಾ ಹೋದೆ – ನನ್ನ ಪ್ರೀತಿಯ ಹುಡುಗ, ನಿನಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ನಿನ್ನ ಕಂಫರ್ಟ್ ವಲಯದಿಂದ ಹೊರಬರಬೇಕು. ಈಗ ನಿನ್ನ ಅಪ್ಪನ ಬಿಸಿನೆಸ್ ಅದು ಕಂಫರ್ಟ್ ಝೋನ್. ರಿಸ್ಕ್ ಕಡಿಮೆ. ನೀನು ಸುಮ್ಮನೆ ಕೂತರೂ ಬಿಸಿನೆಸ್ ರನ್ ಆಗುತ್ತದೆ. ನೀನು ಹೆಚ್ಚೆಂದರೆ ಇನ್ನೊಂದೆರಡು ಮಳಿಗೆ ಜೋಡಿಸಿ ಅದನ್ನು ವಿಸ್ತರಿಸಬಹುದು. ಆದರೆ ಅದು ಅಪ್ಪ ಮಾಡಿದ್ದು. ಅದು ನಿನ್ನ ಸಾಧನೆ ಆಗುವುದಿಲ್ಲ!

ಇನ್ನು ನಿನ್ನ ಎರಡನೇ ಆಯ್ಕೆ ಕಂಪೆನಿಯ ಜಾಬ್. ಅದು ಇನ್ನೊಂದು ಕಂಫರ್ಟ್ ಝೋನ್! ಏಕೆಂದರೆ ಯಾರದ್ದೋ ಕನಸು ಪೂರ್ತಿ ಮಾಡಲು ಜೀವನ ಪೂರ್ತಿ ನೀನು ಮಾಡುವ ಜೀತ ಅದು! ಮುಂದೆ ನಿನ್ನ ಕನಸು ಖಾಲಿ ಮಾಡಿಕೊಳ್ಳುತ್ತೀ! ನಿನಗೆ ನಿನ್ನ ಯೋಚನೆಗಳನ್ನು ಅನುಷ್ಠಾನ ಮಾಡಲು ಅವಕಾಶ ಇದೆಯಾ? ಖಂಡಿತ ಇಲ್ಲ. ಯಾವುದೋ ಕಂಪೆನಿಯ ಲಾಪ್ ಟಾಪ್ ಮುಂದೆ ಕೂತು ನೀನು ಸಾಧಿಸುವುದು ಏನು ಎಂದು ಕೇಳಿದೆ. ಅವನು ನನ್ನ ಮುಖ ನೋಡುತ್ತ ಕೂತ.

ಅವನಿಗೆ ಅರ್ಥ ಆಗಲು ಇನ್ನೂ ಎರಡು ಪ್ರಶ್ನೆ ಕೇಳಿದೆ.

ನಿಮ್ಮ ಅಜ್ಜ ಈ ಬಿಸಿನೆಸ್ ಆರಂಭ ಮಾಡಿದಾಗ ಎಷ್ಟು ಮಂದಿಗೆ ಕೆಲಸ ಕೊಟ್ಟಿದ್ದರು? ಅವನೊಂದು ಸಂಖ್ಯೆ ಹೇಳಿದ. ಅವರು ಎಷ್ಟು ಬಂಡವಾಳ ಹಾಕಿದ್ದರು ಎಂದು ಕೇಳಿದೆ? ಅದನ್ನು ಕೂಡ ಹೇಳಿದ.

ನಿಮ್ಮ ಅಜ್ಜನ ನಂತರ ನಿಮ್ಮ ಅಪ್ಪ ಎಷ್ಟು ಮಂದಿಗೆ ಕೆಲಸ ಕೊಟ್ಟರು ಅಂದೆ. ಎಷ್ಟು ಬಂಡವಾಳ ಹಾಕಿದ್ದರು ಎಂದೆ. ಅವನು ಎರಡೂ ಪ್ರಶ್ನೆಗೂ ಇಲ್ಲ ಅಂದ.

ಹಾಗಾದರೆ ನಿನ್ನ ಆಯ್ಕೆ ಯಾವುದು ಎಂದೆ.

ಅವನು ಬುದ್ಧಿವಂತ ಹುಡುಗ. ಅವನಿಗೆ ಈಗ ಎಲ್ಲವೂ ಅರ್ಥ ಆಯಿತು. ಅವನು ಹೇಳುತ್ತಾ ಹೋದ – ಸರ್, ನನ್ನ ಅಜ್ಜ ಸೊನ್ನೆ ಬಂಡವಾಳ ಹಾಕಿಕೊಂಡು ಇಪ್ಪತ್ತು ಮಂದಿಗೆ ಕೆಲಸ ಕೊಟ್ಟು ಒಂದು ಉದ್ಯಮ ಆರಂಭ ಮಾಡಿದ್ದರು. ನನ್ನ ಅಪ್ಪ ನನ್ನ ಅಜ್ಜ ಮಾಡಿದ್ದನ್ನೇ ಬೆಳೆಸಿದರು. ಹೊಸತು ಏನೂ ಮಾಡಲಿಲ್ಲ! ನಾನು ಕಂಪೆನಿ ಜಾಬ್ ಹಿಡಿದುಕೊಂಡು ನನ್ನ ಕನಸುಗಳನ್ನು ಇನ್ನೊಬ್ಬರಿಗೆ ಮಾರುವುದಿಲ್ಲ. ನನಗೆ ನನ್ನದೇ ಕನಸುಗಳು ಬೇಕು. ಸ್ವಲ್ಪ ರಿಸ್ಕ್ ಇದೆ. ಆದರೆ ರಿಸ್ಕ್ ಈಗ ತೆಗೆದುಕೊಳ್ಳದೆ ಮುಂದೆ ಯಾವಾಗ ತೆಗೆದುಕೊಳ್ಳುವುದು?…ಅವನು ಹೇಳುತ್ತಾ ಹೋದ. ನಾನು ಅವನ ಕಣ್ಣುಗಳನ್ನೇ ನೋಡುತ್ತಾ ಕೂತೆ.

ನಾನು ನನ್ನದೇ ಬಂಡವಾಳ ಹೂಡಿಕೆ ಮಾಡಿ ಕನಿಷ್ಠ ಇನ್ನೂರು ಮಂದಿಗೆ ಉದ್ಯೋಗ ನೀಡಬೇಕು ಸರ್. ನನ್ನದೇ ಸಾಮ್ರಾಜ್ಯ ಕಟ್ಟಬೇಕು ಎಂದು ಹೇಳಿ ಎದ್ದು ನನಗೆ ನಮಸ್ಕಾರ ಮಾಡಿ ಹೊರಟ. ಅವನ ಕಣ್ಣಲ್ಲಿ ಈಗ ಸ್ಪಷ್ಟತೆ ಇತ್ತು.

ಅವನೀಗ ಉದ್ಯಮಶೀಲತೆಯ ತರಬೇತು ಪಡೆದು, ಕೇಂದ್ರ ಸರಕಾರದ ಮುದ್ರಾ ಯೋಜನೆಯ ಲಾಭವನ್ನು ಪಡೆದು ಅವನದೇ ಆದ ಸ್ವಂತ ಉದ್ಯಮವನ್ನು ಆರಂಭ ಮಾಡಿದ್ದಾನೆ. ಅವನಿಗೆ ಒಳ್ಳೆದಾಗಲಿ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅವನಿಯ ಕಾಲುಗಳಲ್ಲಿ ಶಕ್ತಿಯೇ ಇಲ್ಲ; ಆದರೆ, ಇಡೀ ದೇಶ ಎದ್ದು ನಿಂತು ಸಲಾಂ ಅನ್ನುತ್ತಿದೆ!

Exit mobile version