Site icon Vistara News

ರಾಜ ಮಾರ್ಗ ಅಂಕಣ :‌ ಯಾವತ್ತಾದ್ರೂ ತುಂಬ ಡಿಪ್ರೆಸ್‌ ಆದಾಗ ನೀವು ಈ ಕಪ್ಪು ಜಿಂಕೆ ಕಥೆ ಓದಿಬಿಡಿ ಸಾಕು!

wilma rudolph american sprinter

ವರ್ಣ ದ್ವೇಷದ ಬೆಂಕಿಯ ಕುಲುಮೆಯಲ್ಲಿ (Fire of apartheid) ಚಂದವಾಗಿ ಅರಳಿದ ಒಂದು ಅದ್ಭುತವಾದ ಕ್ರೀಡಾ ಪ್ರತಿಭೆಯನ್ನು ತಮಗೆ ಇಂದು ಪರಿಚಯಿಸಲು ತುಂಬಾ ಹೆಮ್ಮೆ ಪಡುತ್ತಿರುವೆ. ಆಕೆಯನ್ನು ಜಗತ್ತು ‘ಕಪ್ಪು ಜಿಂಕೆ’ (Black deer) ಎಂದು ಕರೆಯಿತು. ಆಕೆಯ ಸಾಧನೆಯು ಮುಂದೆ ಸಾವಿರ ಸಾವಿರ ಕಪ್ಪು ವರ್ಣದ ಸಾಧಕರಿಗೆ ಪ್ರೇರಣೆ ನೀಡಿತು. ಆಕೆ ವಿಲ್ಮಾ ರುಡಾಲ್ಫ್ (Wilma Rudolph). ನಾನು ತುಂಬ ಡಿಪ್ರೆಸ್‌ ಆದಾಗ ಓದುವ ಕಥೆಗಳಲ್ಲಿ ಇದೂ ಒಂದು (ರಾಜ ಮಾರ್ಗ ಅಂಕಣ).

ಆಕೆಯು ಬಾಲ್ಯದಲ್ಲಿ ಎಲ್ಲರಿಗೂ ಬೇಡವಾದ ಮಗು ಆಗಿದ್ದಳು!

ಆಕೆ ಹುಟ್ಟಿದ್ದು ಅಮೆರಿಕಾದ ಸೈಂಟ್ ಬೆಥ್ಲೆಹೆಮ್ ಎಂಬ ಪುರಾತನ ಪುಟ್ಟ ನಗರದಲ್ಲಿ. ಅವಳು Premature Baby ಆಗಿ ಹುಟ್ಟಿದವಳು. ಹುಟ್ಟುವಾಗ ಅವಳ ತೂಕ ನಾಲ್ಕೂವರೆ ಪೌಂಡ್ ಮಾತ್ರ ಆಗಿತ್ತು. ಮಗು ಬದುಕುವ ಭರವಸೆ ವೈದ್ಯರಿಗೆ ಇರಲಿಲ್ಲ! ಅವಳ ಅಪ್ಪ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿದ್ದರು. ತೀವ್ರ ಬಡತನ. ಜೊತೆಗೆ ಅಪ್ಪನಿಗೆ ಎರಡು ಮದುವೆ ಆಗಿತ್ತು. ಆತನಿಗೆ ಹುಟ್ಟಿದ್ದು 22 ಮಕ್ಕಳು! ಅದರಲ್ಲಿ ವಿಲ್ಮಾ 20ನೆಯ ಮಗು! ಆದ್ದರಿಂದ ಅವಳು ಅಪ್ಪನಿಗೆ ಬೇಡವಾದ ಮಗಳು. ಅಮ್ಮನ ಮುದ್ದಿನ ಮಗಳು.

ಕಾಯಿಲೆಗಳೇ ತುಂಬಿದ್ದ ಮಗು ಮುಂದೆ ಬೆಳೆದ ಬಗೆಯೇ ಅಚ್ಚರಿ

ಬಾಲ್ಯದಲ್ಲಿ ಅಮರಿತು ಸಾಲು ಸಾಲು ಕಾಯಿಲೆಗಳು!

ಅಂತಹ ಹುಡುಗಿಗೆ ಬಾಲ್ಯದಲ್ಲಿ ಸಾಲು ಸಾಲು ಕಾಯಿಲೆಗಳ ಸರಮಾಲೆಯೇ ಎದುರಾಯಿತು. ಎರಡು ವರ್ಷದಲ್ಲಿ ಪುಟ್ಟ ಮಗುವಿಗೆ ನ್ಯೂಮೋನಿಯಾ ಬಂದು ಅವಳ ಅರ್ಧ ಶಕ್ತಿಯನ್ನು ತಿಂದು ಹಾಕಿತ್ತು. ಚೇತರಿಸಲು ಅವಕಾಶ ಕೊಡದೆ ಬೆನ್ನಿಗೆ ಬಂದದ್ದು ಸ್ಕಾರ್ಲೆಟ್ ಜ್ವರ. ಮೈ ಮೇಲೆ ರಕ್ತ ವರ್ಣದ ಗುಳ್ಳೆಗಳು ಬಂದು ಕೀವು ತುಂಬುವ ಖಾಯಿಲೆ ಅದು. ಅಮ್ಮ ಮಗಳ ಆರೈಕೆ ಮಾಡಿ ಹೈರಾಣಾಗಿ ಬಿಟ್ಟರು! ಸರಿಯಾಗಿ ಐದನೇ ವರ್ಷ ತುಂಬುವ ಹೊತ್ತಿಗೆ ಮಗುವಿಗೆ ಮತ್ತೆ ತೀವ್ರ ಜ್ವರ ಬಂತು. ಪರೀಕ್ಷೆ ಮಾಡಿದಾಗ ವೈದ್ಯರು ಪತ್ತೆ ಹಚ್ಚಿದ್ದು ಪೋಲಿಯೋ (Childhood Polio) ಎಂಬ ಮಹಾ ಕಾಯಿಲೆ! ಆಗಿನ ಕಾಲದಲ್ಲಿ ಭಯ ಹುಟ್ಟಿಸುವ ಕಾಯಿಲೆ ಅದು!

Motivational Story of Wilma rudolph

ಪೋಲಿಯೋಗ್ರಸ್ತ ತೆವಳುವ ಮಗು

ಅವಳ ವಯಸ್ಸಿನ ಬೇರೆ ಮಕ್ಕಳು ಶಾಲೆಗೆ ಹೋಗಲು ಆರಂಭ ಮಾಡಿದ್ದರು. ಆದರೆ ವಿಲ್ಮಾ ನೆಲದಲ್ಲಿ ತೆವಳುತಿದ್ದಳು. ವಾಶ್ ರೂಮಿಗೆ ಅವಳನ್ನು ಅಮ್ಮ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು ! ಅವರಿದ್ದ ನಗರದಲ್ಲಿ ಆಗ ನೀಗ್ರೋಗಳಿಗೆ ಆಸ್ಪತ್ರೆಗಳಿಗೆ ಪ್ರವೇಶ ಇರಲಿಲ್ಲ. ಎಲ್ಲ ವೈದ್ಯಕೀಯ ಸೌಲಭ್ಯಗಳೂ ಬಿಳಿ ಚರ್ಮದವರಿಗೆ ಮೀಸಲು! ಆದ್ದರಿಂದ ಅವಳ ಚಿಕಿತ್ಸೆಗೆ ಅಮ್ಮ ಅವಳನ್ನು 50 ಮೈಲು ದೂರದ ನಗರಕ್ಕೆ ಹೋಗಿ ಬರಬೇಕಾಯಿತು. ಅದೂ ಸತತ ಎರಡು ವರ್ಷ! ಏಳು ವರ್ಷದ ಮಗಳನ್ನು ಆ ಮಹಾ ತಾಯಿಯು ಸೊಂಟದ ಮೇಲೆ ಕೂರಿಸಿ ಆಸ್ಪತ್ರೆಯ ವಾರ್ಡಿನಿಂದ ವಾರ್ಡಿಗೆ ಎಡತಾಕುವುದನ್ನು ನೋಡಿದವರಿಗೆ ‘ಅಯ್ಯೋ ಪಾಪ’ ಅನ್ನಿಸುತಿತ್ತು.

‘ಅಮ್ಮಾ, ನನ್ನ ಮಂಚವನ್ನು ಕಿಟಕಿಯ ಪಕ್ಕ ಸರಿಸು. ಹೊರಗೆ ಮಕ್ಕಳು ಆಡುವುದನ್ನು ನೋಡಬೇಕು’ ಎಂದು ಹೇಳಿದಾಗ ಪ್ರೀತಿಯ ಅಮ್ಮ ಹಾಗೆ ಮಾಡಿದ್ದರು. ಈ ಹುಡುಗಿಯು ಕಿಟಕಿಯಿಂದ ಹೊರಗೆ ಮೈದಾನದಲ್ಲಿ ಮಕ್ಕಳು ಆಡುವುದನ್ನು, ಓಡುವುದನ್ನು ನೋಡುತ್ತಾ ಸಂಭ್ರಮಿಸುವುದು, ಖುಷಿಪಡುವುದನ್ನು ನೋಡುತ್ತಾ ಅಮ್ಮನ ಮುಖದಲ್ಲಿ ಅಪರೂಪದ ನಗುವಿನ ಗೆರೆಯು ಚಿಮ್ಮುತ್ತಿತ್ತು! ಮನೆಯ ಒಳಗೆ ಗೋಡೆ ಹಿಡಿದುಕೊಂಡು ನಡೆಯಲು ಮೊದಲ ಪ್ರಯತ್ನ ನಡೆಯಿತು. ಅದರೊಂದಿಗೆ ಆರ್ಥೋಪೆಡಿಕ್ ಚಿಕಿತ್ಸೆಗಳು ನಡೆದವು. ದೀರ್ಘ ಕಾಲ ಫಿಸಿಯೋ ತೆರೆಪಿಯು ನಡೆದು ಬಲಗಾಲಿನ ಶಕ್ತಿ ಮರಳಿತು. ಆದರೆ ಎಡಗಾಲಿನ ಶಕ್ತಿಯು ಕುಂಠಿತವಾಗಿತ್ತು. ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಅವಳ ಪಾದಗಳು ಅಸಮ ಆಗಿದ್ದವು. ಅವಳ ಸೈಜಿನ ಶೂಗಳು ಎಲ್ಲಿಯೂ ಸಿಗುತ್ತಿರಲಿಲ್ಲ!

Motivational Story of Wilma rudolph

ಈ ಸಮಸ್ಯೆಗಳ ನಡುವೆ ಅಮ್ಮನಿಗೆ ಮಗಳ ಶಾಲೆಯ ಚಿಂತೆ. ಅವಳು ಏಳು ವರ್ಷ ಪ್ರಾಯದಲ್ಲಿ ನೇರವಾಗಿ ಎರಡನೇ ತರಗತಿಗೆ ಸೇರ್ಪಡೆ ಆದವಳು. ಅವಳು ಎಡಗಾಲನ್ನು ಕೊಂಚ ಎಳೆದುಕೊಂಡು ನಡೆಯುವ ರೀತಿಯನ್ನು ನೋಡಿ ಅವಳ ಓರಗೆಯ ಮಕ್ಕಳಿಗೆ ಒಂಥರಾ ತಮಾಷೆ ಅನ್ನಿಸುತ್ತಿತ್ತು. ಅಣಕು, ಕೀಟಲೆ ಮಾಡಿ ಅವಳ ಕಣ್ಣಲ್ಲಿ ನೀರು ತರಿಸುತ್ತಿದ್ದರು.

ಇದರಿಂದ ನೊಂದುಕೊಂಡ ವಿಲ್ಮಾ ತರಗತಿಗಳಿಗೆ ಚಕ್ಕರ್ ಹೊಡೆದು ಮೈದಾನದಲ್ಲಿ ಹೆಚ್ಚು ಹೊತ್ತನ್ನು ಕಳೆಯುವುದನ್ನು ಅಭ್ಯಾಸ ಮಾಡಿದಳು. ಅದೇ ರೀತಿ ಎಡಗಾಲಿಗೆ ಆಧಾರವನ್ನು ಕೊಡುವ ಲೆಗ್ ಬ್ರೇಸ್ ಹಾಕಿ ವೇಗವಾಗಿ ನಡೆಯಲು ಆರಂಭ ಮಾಡಿದಳು. ಅವಳ ಒಳಗೆ ಅದಮ್ಯವಾದ ಒಂದು ಚೈತನ್ಯ ಇರುವುದನ್ನು ಒಬ್ಬ ಕೋಚ್ ದಿನವೂ ನೋಡುತ್ತಿದ್ದರು. ಅವರ ಹೆಸರು ಎಡ್ ಟೆಂಪಲ್.

Motivational Story of Wilma rudolph

ಓಡು ಕಪ್ಪು ಜಿಂಕೆ, ಓಡು!

ಅವಳಿಗೆ ದೇವರು ಅದ್ಭುತವಾದ ಎತ್ತರವನ್ನು ಕೊಟ್ಟಿದ್ದರು (5 ಅಡಿ 11 ಇಂಚು). ಪ್ರೌಢಶಾಲೆಯ ಹಂತಕ್ಕೆ ಬಂದಾಗ ಎಡಗಾಲಿನ ಶಕ್ತಿಯು ಮರಳಿತ್ತು. ನಡೆಯುವಾಗ ಒಂದು ಸಣ್ಣ ಜರ್ಕ್ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸವೂ ಕಾಣುತ್ತಿರಲಿಲ್ಲ. ಮೊದಲ ಬಾರಿಗೆ ಪ್ರತಿಷ್ಠಿತ ಕಾಲೇಜಿನ ಬಾಸ್ಕೆಟ್‌ ಬಾಲ್ ಟೀಮಿಗೆ (Basketball team) ಅವಳು ಆಯ್ಕೆ ಆದಾಗ ಕುಣಿದು ಸಂಭ್ರಮ ಪಟ್ಟಿದ್ದಳು.

ಇಡೀ ಬಾಸ್ಕೆಟ್ಬಾಲ್ ಕೋರ್ಟಲ್ಲಿ ಅವಳು ಮಿಂಚಿನಂತೆ ಓಡುವುದನ್ನು ನೋಡಿದ ಕೋಚ್ ಅವಳನ್ನು ಅಥ್ಲೆಟಿಕ್ಸ್‌ ತಂಡಕ್ಕೆ ಸೇರಿಸಿ ಕೋಚಿಂಗ್ ಆರಂಭಿಸಿದರು. ಎಡ್ ಟೆಂಪಲ್ ಎಂಬ ಆ ಕೋಚ್ ಅವಳಲ್ಲಿ ಇದ್ದ ಅದ್ಭುತವಾದ ಕ್ರೀಡಾ ಪ್ರತಿಭೆಯನ್ನು ಪುಟವಿಟ್ಟ ಚಿನ್ನದಂತೆ ಹೊರತಂದರು. ಅವಳು ಮೊದಲ ಬಾರಿ ಭಾಗವಹಿಸಿದ ಓಪನ್ ಕ್ರೀಡಾಕೂಟದಲ್ಲಿ ಎಲ್ಲಾ ಒಂಬತ್ತು ಸ್ಪರ್ಧೆಗಳಲ್ಲಿ ಕೂಡ ಚಿನ್ನದ ಪದಕವನ್ನು (American sprinter) ಗೆದ್ದಿದ್ದಳು! ಅವಳ ಒಳಗೆ ಎಂದಿಗೂ ದಣಿಯದ, ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದ, ಬಿದ್ದಲ್ಲಿಂದ ಪುಟಿದು ಮತ್ತೆ ಎದ್ದುಬರುವ ಚೈತನ್ಯ ಶಕ್ತಿ ಇತ್ತು!

ಎಲ್ಲರ ಮನಸ್ಸಲ್ಲಿ ಶಾಶ್ವತ ಪ್ರತಿಮೆಯಾದಳು ವಿಲ್ಮಾ ರುಡಾಲ್ಫ್

ಬಾಲ್ಯದಲ್ಲಿ ತೆವಳುತ್ತಿದ್ದ ಮಗು ಒಲಿಂಪಿಕ್ಸ್ ಮೆಡಲ್ ಪಡೆಯಿತು!

1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಕಣದಲ್ಲಿ ಅವಳು ಅಮೆರಿಕವನ್ನು ಪ್ರತಿನಿಧಿಸಿ ರಿಲೇ ಓಟದಲ್ಲಿ ಒಂದು ಕಂಚಿನ ಪದಕ ಮಾತ್ರ ಗೆದ್ದಳು. ಆಗ ಅವಳಿಗೆ ಕೇವಲ 16 ವರ್ಷ! ಮತ್ತೆ ಸ್ಪಷ್ಟ ಗುರಿಯೊಂದಿಗೆ ಪ್ರಾಕ್ಟೀಸ್ ಮಾಡಿ ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗೆ ಪ್ರವೇಶ ಪಡೆದಳು.

ಅದು 1960ರ ರೋಮ್ ಒಲಿಂಪಿಕ್ಸ್. ಜಗತ್ತಿನಾದ್ಯಂತ ಟಿವಿ ಕವರೇಜ್ ಆಗ ತಾನೇ ಆರಂಭ ಆಗಿತ್ತು! ಆದ್ದರಿಂದ ಸಹಜವಾಗಿ ಒಲಿಂಪಿಕ್ಸ್ ಕ್ರೇಜ್ ಹೆಚ್ಚಿತ್ತು. ಮೈದಾನದಲ್ಲಿ ಕೂಡ 43 ಡಿಗ್ರಿ ಉಷ್ಣತೆ ಇತ್ತು! ಆ ಒಲಿಂಪಿಕ್ಸ್ ಕಣದಲ್ಲಿ ವಿಲ್ಮಾ ರುಡಾಲ್ಫ್ ಬಿರುಗಾಳಿಯ ಹಾಗೆ ಓಡಿದಳು. 100 ಮೀಟರ್ ಚಿನ್ನದ ಪದಕ ಪಡೆದು ಜಗತ್ತಿನ ಅತ್ಯಂತ ವೇಗದ ಮಹಿಳೆ ಎಂಬ ಕೀರ್ತಿ ಆಕೆ ಪಡೆದರು! ಟೈಮಿಂಗ್ 11.2 ಸೆಕೆಂಡ್ಸ್! ಅದು ಆ ಕಾಲದ ವಿಶ್ವದಾಖಲೆ ಆಗಿತ್ತು! 200 ಮೀಟರ್ ಓಟದಲ್ಲಿ ಮತ್ತೆ ವಿಶ್ವ ದಾಖಲೆಯ ಜೊತೆಗೆ ಚಿನ್ನದ ಪದಕ! ಟೈಮಿಂಗ್ 22.9 ಸೆಕೆಂಡ್ಸ್! ಮತ್ತೆ 4X100 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ! ಹೀಗೆ ಮೂರು ಚಿನ್ನದ ಪದಕ ಒಂದೇ ಕೂಟದಲ್ಲಿ ಪಡೆದ ವಿಶ್ವದ ಮೊದಲ ಮಹಿಳಾ ಅಥ್ಲೆಟ್ ಎಂಬ ಕೀರ್ತಿಯು ಅವಳಿಗೆ ದೊರೆಯಿತು!

ವಿಲ್ಮಾ ರುಡಾಲ್ಫ್ ಸ್ಥಾಪಿಸಿದ ಎರಡು ವಿಶ್ವಮಟ್ಟದ ದಾಖಲೆಗಳು ಮುಂದೆ ಹಲವು ವರ್ಷಗಳ ಕಾಲ ಅಬಾಧಿತವಾಗಿ ಉಳಿದವು. ಆ ಎತ್ತರದ ಸಾಧನೆಯ ನಂತರ ವಿಲ್ಮಾ ವಿಶ್ವ ಮಟ್ಟದ ಹಲವು ಕೂಟಗಳಲ್ಲಿ ನಿರಂತರವಾಗೀ ಓಡಿದಳು ಮತ್ತು ಓಡಿದ್ದಲ್ಲೆಲ್ಲ ಪದಕಗಳನ್ನು ಸೂರೆ ಮಾಡಿದಳು.

ತನ್ನ 22ನೆಯ ವರ್ಷದಲ್ಲಿ ಕೀರ್ತಿಯ ಶಿಖರದಲ್ಲಿ ಇರುವಾಗಲೇ ವಿಲ್ಮಾ ಕ್ರೀಡೆಗೆ ವಿದಾಯ ಕೋರಿದರು! 1964ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಇದ್ದರೂ ಕೂಡ ಸ್ಪರ್ಧೆ ಮಾಡಲೇ ಇಲ್ಲ!

ವಿಲ್ಮಾ ರುಡಾಲ್ಫ್ – ಶತಮಾನದ ಕ್ರೀಡಾಪಟು

ತನ್ನ ಬಾಲ್ಯದಲ್ಲಿ ಪೋಲಿಯೋ ಎಂಬ ಮಾರಿಯಿಂದ ಪೀಡಿತವಾದ, ಕಪ್ಪುವರ್ಣ ಎಂಬ ಕಾರಣಕ್ಕೆ ಅಪಮಾನ ಮತ್ತು ತಿರಸ್ಕಾರಕ್ಕೆ ಒಳಗಾದ ವಿಲ್ಮಾ ತನ್ನ ಕ್ರೀಡಾ ಸಾಧನೆಗಳ ಮೂಲಕ ಇತಿಹಾಸ ಬರೆದಳು! ಮುಂದೆ ಅವಳನ್ನು ‘ಶತಮಾನದ ಕ್ರೀಡಾಪಟು’ ಎಂದು ಒಂದು ಪತ್ರಿಕೆ ಕರೆಯಿತು. ಅವಳ ಆತ್ಮಚರಿತ್ರೆ ‘ವಿಲ್ಮಾ- The Story of Wilma Rudolph’ ಲಕ್ಷಾಂತರ ಮಂದಿಗೆ ಪ್ರೇರಣೆ ಕೊಟ್ಟಿತು. ಅವಳ ಸಾಧನೆಗಳ ಬಗ್ಗೆ 21 ಪ್ರಸಿದ್ಧ ಲೇಖಕರು ಪುಸ್ತಕಗಳನ್ನು ಬರೆದಿದ್ದಾರೆ. ಅವಳ ಬದುಕಿನ ಕಥೆ ಅಮೆರಿಕ ಮತ್ತು ಇತರ ದೇಶಗಳ ಕಾಲೇಜಿನ ಪಠ್ಯ ಪುಸ್ತಕಗಳಲ್ಲಿ ಮುಂದೆ ಸ್ಥಾನ ಪಡೆಯಿತು. ಈಗ ಹೇಳಿ ವಿಲ್ಮಾ ಗ್ರೇಟ್ ಹೌದಾ?

ಇದನ್ನೂ ಓದಿ: ರಾಜ ಮಾರ್ಗ ಅಂಕಣ : The POWER of GRATITUDE, ಕೃತಜ್ಞತೆ ಎಂಬ ಮಹಾಶಕ್ತಿ; ನಿಮಗೆ ಬೂಮರಾಂಗ್‌ ಆಟ ಗೊತ್ತಾ?

Exit mobile version