Site icon Vistara News

Raja Marga Column : ಬ್ರಿಜ್‌ ಮ್ಯಾನ್‌ ಆಫ್‌ ಇಂಡಿಯಾ!; ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್

Girish Bharadhwaj Bridge Man of India

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರು ಎಂಬ ಅತ್ಯಂತ ಸಣ್ಣ ಗ್ರಾಮದಲ್ಲಿ ಹುಟ್ಟಿದ ಗಿರೀಶ್ ಭಾರದ್ವಾಜ್ (73) ಅವರು ದೇಶದಾದ್ಯಂತ ತೂಗು ಸೇತುವೆಗಳ ಸರದಾರ (Hanging Bridge) ಎಂದು ದೊಡ್ಡ ಹೆಸರು ಮಾಡಿದ್ದಾರೆ. ಜನರು ಅವರನ್ನು ಪ್ರೀತಿಯಿಂದ ಬ್ರಿಜ್ ಮ್ಯಾನ್ ಆಫ್ ಇಂಡಿಯಾ (Bridge Man of India) ಎಂದು ಕರೆಯುತ್ತಿದ್ದಾರೆ. ಈಗಾಗಲೇ ಶ್ರೇಷ್ಠವಾದ ಪದ್ಮಶ್ರೀ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿದೆ. ಗಿರೀಶ್ ಭಾರದ್ವಾಜ್ (Girish Bharadhwaj) ಅವರ ಬದುಕೇ ಒಂದು ಅದ್ಭುತ ಯಶೋಗಾಥೆ! (Raja Marga Column)

ಅವರ ತಂದೆ ಸಣ್ಣ ಕೃಷಿಕರು. ಮಗನನ್ನು ಬಹಳ ಕಷ್ಟ ಪಟ್ಟು ಎಂಜಿನಿಯರಿಂಗ್ ಓದಿಸಿದರು. ಮಗ ಮಂಡ್ಯದ PES ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ ಬಂದಾಗ ಅಪ್ಪ ಬಾಲಕೃಷ್ಣ ಭಟ್ ಹೇಳಿದ್ದು ಒಂದೇ ಮಾತು – ಕಂಪೆನಿಯ ಕೆಲಸಕ್ಕೆ ಹೋಗುವುದೇ ಬೇಡ. ಅದು ಭಿಕ್ಷೆಗೆ ಸಮಾನ. ನಮ್ಮ ಊರಲ್ಲೇ ಏನಾದರೂ ಮಾಡು!

ಆದರೆ ಮಗನ ಮನಸ್ಸಿನಲ್ಲಿ ಬೇರೆ ಏನೋ ಇತ್ತು. ಮಗ ಹಠ ಹಿಡಿದು ಬೆಂಗಳೂರಿಗೆ ಕಂಪೆನಿಯ ಸಂದರ್ಶನಕ್ಕೆ ಹೊರಟಾಗ ಅಪ್ಪ ಆಶೀರ್ವಾದ ಮಾಡಿದ್ದು ಹೀಗೆ!: ‘ನಿನಗೆ ಈ ಕೆಲಸವು ದೊರೆಯದೇ ಹೋಗಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ʼ ಎಂದು! ಅಪ್ಪನ ಆಶೀರ್ವಾದವೇ ನಿಜವಾಯಿತು. ಮಗ ಮತ್ತೆ ಹಳ್ಳಿಗೆ ಬಂದ.

ಒಮ್ಮೆ ಮನೆಯ ಪಂಪ್ ಸೆಟ್ ಹಾಳಾಗಿ ರಿಪೇರಿ ಮಾಡಲು ಪುತ್ತೂರಿಗೆ ಕಳುಹಿಸಿದಾಗ ಅಪ್ಪ ಮತ್ತೆ ಬಾಯಲ್ಲಿ ಗೊಣಗಿದರು: ‘ಮನೆಯಲ್ಲಿ ಎಂಜಿನಿಯರ್ ಇದ್ದು ಏನು ಪ್ರಯೋಜನ ಇಲ್ಲ! ‘

ಮಗನಿಗೆ ಎಲ್ಲವೂ ಅರ್ಥವಾಗಿ ಹೋಯಿತು. ತಾನು ಒಬ್ಬ ಎಂಜಿನಿಯರ್ ಆಗಿದ್ದು ಮೆಕ್ಯಾನಿಕ್ ಕೆಲಸವನ್ನು ಮಾಡುವುದೇ? ಎಂಬ ಅಹಂ ನಾಶವಾಗಿತ್ತು. ಕಂಪನಿಯ ಕೆಲಸದ ಆಸೆಯನ್ನು ಬಿಟ್ಟು ಊರಿನಲ್ಲೇ ವರ್ಕ್‌ ಶಾಪ್ ತೆರೆದರು. ವ್ಯಾಪಾರವೂ ಚೆನ್ನಾಗಿತ್ತು. ಆದರೆ 1989ರ ಹೊತ್ತಿಗೆ ಅವರ ಜೀವನದಲ್ಲಿ ಇನ್ನೊಂದು ಟರ್ನಿಂಗ್ ಪಾಯಿಂಟ್ ಬಂದೇ ಬಿಟ್ಟಿತ್ತು!

ಒಬ್ಬ ರೇಂಜ್ ಫಾರೆಸ್ಟ್ ಆಫೀಸರ್ ಅವರನ್ನು ಕೊಡಗಿನ ನಿಸರ್ಗ ಧಾಮದಲ್ಲಿ ಒಂದು ತೂಗುಸೇತುವೆ ಕಟ್ಟಿ ಕೊಡಲು ಸಾಧ್ಯವೇ? ಎಂದು ಕೇಳಿದರು. ಗಿರೀಶರಿಗೆ ಅದರ ಬಗ್ಗೆ ಏನೇನೂ ಗೊತ್ತಿರಲಿಲ್ಲ. ತೂಗು ಸೇತುವೆಗಳ ತಂತ್ರಜ್ಞಾನದ ಅರಿವು ಇರಲಿಲ್ಲ. ‘ತೂಗುಸೇತುವೆ ನಿರ್ಮಿಸುವುದು ಸಿವಿಲ್ ಇಂಜಿನಿಯರ್ ಕೆಲಸ, ನಾನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಲಿತವನು’ ಎಂದು ಅವರು ಸುಮ್ಮನಿದ್ದರೆ ಇಂದು ನಾನು ಅವರ ಬಗ್ಗೆ ಬರೆಯುತ್ತಿರಲಿಲ್ಲ.

ಆದರೆ ಒಂದಿಷ್ಟು ಪುಸ್ತಕಗಳ ಮೂಲಕ ಅಪಾರ ಜ್ಞಾನವನ್ನು ಸಂಪಾದಿಸಿದ ಗಿರೀಶರು ಹಿಂದೆ ಮುಂದೆ ಯೋಚನೆ ಮಾಡದೆ ಹೊಸದಾದ ತೂಗು ಸೇತುವೆಯ ಕೆಲಸಕ್ಕೆ ಇಳಿದರು. ಡಿಸೈನ್ ಕೂಡ ಸಿದ್ಧವಾಯಿತು.

ಅವರ ಹುಟ್ಟಿದ ಊರು ಆರಂಬೂರಿನಲ್ಲಿಯೇ ಒಂದು ತೂಗುಸೇತುವೆಯ ಅಗತ್ಯವಿತ್ತು. ಪಯಸ್ವಿನಿ ನದಿಯು ಅತ್ಯಂತ ರಭಸವಾಗಿ ಹರಿದು ಅವರ ಊರನ್ನು ಆರು ತಿಂಗಳ ಕಾಲ ದ್ವೀಪ ಮಾಡುತ್ತಿತ್ತು. ಮಳೆಗಾಲದಲ್ಲಿ ಜೀವನ ಬಲು ಕಷ್ಟ. ಪೇಟೆಗೆ ಹೋಗಿ ಬರಲು ಸುತ್ತಿ ಬಳಸಿ ಹೋಗಬೇಕು. ರೈತರು ಕೃಷಿ ಉತ್ಪನ್ನಗಳನ್ನು ಸುಳ್ಯ ಅಥವಾ ಪುತ್ತೂರು ಮಾರುಕಟ್ಟೆಗೆ ಸಾಗಿಸುವುದು ತ್ರಾಸದ ಕೆಲಸ ಆಗಿತ್ತು.

ಅರಂಬೂರು ತೂಗು ಸೇತುವೆ

ಹಳ್ಳಿಯಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಬಂದರೆ ದೇವರೇ ಕಾಪಾಡಬೇಕು. ಶಾಲೆಗೆ ಹೋಗುವ ಮಕ್ಕಳು ಕಷ್ಟ ಪಡುತ್ತಿದ್ದರು. ಅದಕ್ಕಾಗಿ ಅವರು ತಮ್ಮ ಊರು ಆರಂಬೂರಿನಲ್ಲಿ ಮೊದಲ ತೂಗುಸೇತುವೆಯ ನಿರ್ಮಾಣಕ್ಕೆ ತೊಡಗಿದರು.

ಆದರೆ ಗ್ರಾಮ ಪಂಚಾಯತ್ ಅದಕ್ಕೆ ಅನುಮತಿಯನ್ನು ನೀಡಲು ಒಪ್ಪಲೇ ಇಲ್ಲ! ತೂಗು ಸೇತುವೆಗಳು ಬಾಳಿಕೆ ಬರುವುದಿಲ್ಲ. ಅದು ಆರ್ಮಿಯವರು ಮಾತ್ರ ಕಟ್ಟುವ ತಾತ್ಕಾಲಿಕ ಸೇತುವೆ. ಅದಕ್ಕೆ ದುಡ್ಡನ್ನು ಹಾಕುವುದು ವ್ಯರ್ಥ ಅಂದಿತು ಪಂಚಾಯತ್!

ಆದರೆ ಗಿರೀಶ ಭಾರದ್ವಾಜರಿಗೆ ತನ್ನ ಸಾಮರ್ಥ್ಯ ಮತ್ತು ಸಂಶೋಧನೆಯ ಮೇಲೆ ಅಪರಿಮಿತವಾದ ನಂಬಿಕೆ ಇತ್ತು. ಕೊನೆಗೂ ಪಂಚಾಯತ್ ಅನುಮತಿ ಪಡೆದರು. ಕಾಮಗಾರಿ ಆರಂಭ ಆಗಿ ಕೇವಲ ಮೂರೇ ತಿಂಗಳ ಅವಧಿಯ ಒಳಗೆ ಅತ್ಯಂತ ಬಲಿಷ್ಠವಾದ ಆರಂಬೂರು ತೂಗು ಸೇತುವೆಯ (1989) ಕಾಮಗಾರಿಯು ಪೂರ್ತಿ ಆದಾಗ ಊರವರಿಗೆ ಖುಷಿಯೋ ಖುಷಿ. ಗಿರೀಶರ ಅಪ್ಪನಿಗಂತೂ ತಡೆಯಲಾರದ ಖುಷಿ!

ಅಲ್ಲಿಂದ ಆರಂಭವಾಯಿತು ಭಾರದ್ವಾಜ್ ಅವರ ಯಶಸ್ಸಿನ ಯಾತ್ರೆ!

ಮೂವತ್ತೈದು ವರ್ಷಗಳ ಅವಧಿಯಲ್ಲಿ ಬಲಿಷ್ಠವಾದ 150ಕ್ಕಿಂತ ಅಧಿಕ ಸಂಖ್ಯೆಯ ತೂಗು ಸೇತುವೆಗಳನ್ನು ಅವರು ನಿರ್ಮಿಸಿ ದಾಖಲೆ ಮಾಡಿದ್ದಾರೆ. ಈಗಲೂ ಹಲವು ಕಡೆ ಸೇತುವೆಗಳು ನಿರ್ಮಾಣ ಹಂತದಲ್ಲಿವೆ. ಭಾರತದಲ್ಲಿ ಅಷ್ಟೊಂದು ತೂಗು ಸೇತುವೆಗಳನ್ನು ಮಾಡಿದವರು ಯಾರೂ ಇಲ್ಲ!

ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ, ಅಸ್ಸಾಂ ಇತ್ಯಾದಿ ರಾಜ್ಯಗಳಲ್ಲಿ ಈ ಸೇತುವೆಗಳನ್ನು ಅವರು ಕಟ್ಟಿದ್ದಾರೆ. 90ಕ್ಕೂ ಹೆಚ್ಚು ಸೇತುವೆಗಳು ನಮ್ಮ ಕರ್ನಾಟಕದಲ್ಲೇ ಇವೆ. 100ನೆಯ ಸೇತುವೆಯು ಸುಳ್ಯ ತಾಲೂಕಿನ ಇನ್ನೊಂದು ಗ್ರಾಮವಾದ ಮಂಡೆಕೋಲಿನಲ್ಲಿ ಇದೆ.

ಅದರ ಜೊತೆಗೆ ನೇಪಾಳ, ಭೂತಾನ್, ಶ್ರೀಲಂಕಾ ಮುಂತಾದ ರಾಷ್ಟ್ರಗಳಲ್ಲಿ ಭಾರದ್ವಾಜರು ಸುತ್ತಾಡಿ ಬಂದಿದ್ದಾರೆ. ಅಲ್ಲೆಲ್ಲ ಅವರ ತೂಗುಸೇತುವೆಗಳಿಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗ್ತಾ ಇದೆ.

128ನೆಯ ಸೇತುವೆಯು ಅಂಕೋಲಾ ತಾಲೂಕಿನ ಡೊಂಗ್ರಿ ಎಂಬಲ್ಲಿದ್ದು 135 ಮೀಟರಿನಷ್ಟು ಉದ್ದವಿದೆ.

ಅವರ ತೂಗುಸೇತುವೆಗಳ ಕೆಲವು ವೈಶಿಷ್ಟ್ಯಗಳು

1.ಸರಕಾರವು ನಿರ್ಮಿಸುವ ಸಾಂಪ್ರದಾಯಿಕ ಸೇತುವೆ ನಿರ್ಮಾಣಕ್ಕೆ ಕನಿಷ್ಠ ಮೂರು ವರ್ಷಗಳು ಬೇಕು. ಆದರೆ ಇವರ ತೂಗುಸೇತುವೆಗಳು ಕೇವಲ 3 ಅಥವಾ 4 ತಿಂಗಳಲ್ಲಿ ಪೂರ್ತಿಯಾಗಿ ಬಿಡುತ್ತವೆ. ಪರಿಸರ ಸ್ನೇಹಿ ಕೂಡ.

ಹರಿವ ನದಿಯ ಮೇಲೆ ತೂಗು ಸೇತುವೆ ನಿರ್ಮಾಣ ಸುಲಭವಲ್ಲ

2.ಸಾಂಪ್ರದಾಯಿಕ ಸೇತುವೆಗಳ ನಿರ್ಮಾಣದ ವೆಚ್ಚಕ್ಕಿಂತ ಇವುಗಳ ನಿರ್ಮಾಣ ವೆಚ್ಚ ತುಂಬಾ ಕಡಮೆ. ಕೇವಲ ಹತ್ತನೇ ಒಂದರಷ್ಟು! ದೇಲಂಪಾಡಿ ಗ್ರಾಮದ ತೂಗುಸೇತುವೆಯ ನಿರ್ಮಾಣ ವೆಚ್ಚವು ಕೇವಲ 21.5 ಲಕ್ಷ ರೂಪಾಯಿಗಳು! ಅದು 105 ಮೀ. ಉದ್ದವಿದೆ.

3.ಸ್ಥಳೀಯ ಕಾರ್ಮಿಕರ ಕೈಗೆ ಉದ್ಯೋಗಗಳನ್ನು ನೀಡುವುದರಿಂದ ನಿರ್ಮಾಣ ವೆಚ್ಚವು ತುಂಬಾ ಕಡಿಮೆ ಆಗುತ್ತದೆ. ದುಡಿಯುವ ಕೈಗಳಿಗೆ ಉದ್ಯೋಗವೂ ದೊರೆಯುತ್ತದೆ.

4.ನಿರ್ವಹಣಾ ವೆಚ್ಚ ಕೂಡ ತುಂಬಾ ಕಡಿಮೆ. ಎರಡು ವರ್ಷಕ್ಕೊಮ್ಮೆ ಗ್ರೀಸಿಂಗ್ ಮತ್ತು 50 ವರ್ಷಕ್ಕೊಮ್ಮೆ ಹಗ್ಗ ಬದಲಾಯಿಸಿದರೆ ಮುಗಿಯಿತು. ಬೈಕ್ ಮುಂತಾದ ದ್ವಿಚಕ್ರ ವಾಹನಗಳು ಸೇತುವೆಯ ಮೇಲೆ ಸಲೀಸಾಗಿ ಹಾದು ಹೋಗುತ್ತವೆ.

ಎಷ್ಟು ಕಷ್ಟವಿದೆ ನೋಡಿ..

5.ಧಾರಣಾ ಸಾಮರ್ಥ್ಯವು ತುಂಬಾ ಅದ್ಭುತ. ಬಾಳಿಕೆ ದೀರ್ಘಾವಧಿ. ಅವರು ಕಟ್ಟಿದ 150ಕ್ಕಿಂತ ಅಧಿಕ ಸೇತುವೆಗಳಲ್ಲಿ ಇದುವರೆಗೆ ಯಾವುದೂ ಮುರಿದುಬಿದ್ದಿಲ್ಲ. ಅವಘಡ ಸಂಭವಿಸಿಲ್ಲ.

ಇದನ್ನೂ ಓದಿ : Raja Marga Column: ಆಧುನಿಕ ಭಾರತದ ನವದುರ್ಗೆಯರು; ಇವರ ಹೋರಾಟ ಒಂದು ಮಹಾಚರಿತ್ರೆ

ಅಕ್ಟೋಬರ್‌ 28ರಂದು ಜೇಸಿಐ ಪ್ರಶಸ್ತಿ ಪ್ರದಾನ

ಭಾರತದಲ್ಲಿ ಇಷ್ಟೊಂದು ತೂಗು ಸೇತುವೆ ಬೇರೆ ಯಾರೂ ನಿರ್ಮಿಸಿದ ಉದಾಹರಣೆ ಇಲ್ಲ! ಅವರನ್ನು
‘ ಸುಳ್ಯದ ವಿಶ್ವೇಶ್ವರಯ್ಯ’ ಎಂದು ಜನರು ಪ್ರೀತಿಯಿಂದ ಕರೆಯುತ್ತಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಭಾರತ ಸರಕಾರವು 2017ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅವರಿಗೆ ಅತ್ಯಂತ ಪ್ರತಿಷ್ಠಿತವಾದ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿಯು ದೊರೆತಿದೆ. ಇದೇ ಅಕ್ಟೋಬರ್ 28ರಂದು ಅಂತಾರಾಷ್ಟ್ರೀಯ ಜೇಸಿಐ ಸಂಸ್ಥೆಯು ಅವರನ್ನು ಪುತ್ತೂರಿನಲ್ಲಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ.

ನಿರ್ಭಯ ಓಡಾಟದ ರಹದಾರಿ

“ಇದಕ್ಕಿಂತ ನನ್ನ ತೂಗು ಸೇತುವೆಗಳ ಫಲಾನುಭವಿಗಳ ಪ್ರೀತಿಯೇ ಬಹುದೊಡ್ಡ ಪ್ರಶಸ್ತಿ” ಎಂದು ಗಿರೀಶ್ ಭಾರದ್ವಾಜ್ ಹೇಳುತ್ತಾರೆ. ಅವರ ಸಾರ್ಥಕ ಬದುಕು ವಿದ್ಯಾವಂತರಾಗಿ ಕಂಪನಿಗಳ ಕೆಲಸವನ್ನು ಹುಡುಕುತ್ತಾ ಕಾದು ಕುಳಿತಿರುವ ಸಾವಿರಾರು ಉತ್ಸಾಹದ ಯುವಕ ಯುವತಿಯರಿಗೆ ಖಂಡಿತ ಪ್ರೇರಣೆಯನ್ನು ನೀಡುತ್ತದೆ. ಗಿರೀಶ್ ಭಾರದ್ವಾಜ್ ಅವರಿಗೆ ನಮ್ಮ ಹಾರ್ದಿಕ ಅಭಿನಂದನೆಗಳು.

Exit mobile version