Site icon Vistara News

Raja Marga column : ಸಾವನ್ನು ಹೆಗಲ ಮೇಲೆ ಹೊತ್ತುಕೊಂಡೇ ತಿರುಗುತ್ತಿದ್ದ ಮಹಾಯಾನಿ ಕೊಲಂಬಸ್!

Christopher Columbus

1442 ಆಗಸ್ಟ್ 3ರಂದು ಮೂರು ನಾವೆಗಳಲ್ಲಿ (ನಾವೆ ಅಂದರೆ ದೊಡ್ಡ ದೋಣಿ, ಸಣ್ಣ ಹಡಗು) ನೂರು ಜನ ಸಹಯಾತ್ರಿಕರ ಜೊತೆಗೆ ಆ ನಾವಿಕನು ಬಹಳ ದೊಡ್ಡ ಕನಸನ್ನು ಹೊತ್ತು ಸ್ಪೇನ್‌ನ ಪಾಲೋಸ್ ಬಂದರಿನಿಂದ ಹೊರಟಿದ್ದನು. ಇದುವರೆಗೂ ಯಾರೂ ತಲುಪದ ನೆಲವನ್ನು ತಲುಪುವುದು ಅವನ ಉದ್ದೇಶ ಆಗಿತ್ತು. ಅದಕ್ಕಾಗಿ ದೈತ್ಯ ಅಲೆಗಳ ಅಟ್ಲಾಂಟಿಕ್ ಸಾಗರವನ್ನು ದಾಟಬೇಕಿತ್ತು. ನೂರಾರು ಸವಾಲುಗಳನ್ನು ಉತ್ತರಿಸಬೇಕಿತ್ತು.(Raja Marga column)

ಆತನ ಹೆಸರು ಕ್ರಿಸ್ಟೋಫರ್ ಕೊಲಂಬಸ್!
(Christopher Columbus, Italian explorer)

ಅವನು ಜಿನೀವಾ ನಗರದಲ್ಲಿ ಹುಟ್ಟಿದವನು. ಚಿಕ್ಕಂದಿನಿಂದ ಸಾಗರದ ಅಲೆಗಳ ಜೋಕಾಲಿಯ ಮೇಲೆ ತೊನೆಯುತ್ತ ಮುಂದುವರಿಯುತ್ತಿದ್ದ ಹಡಗು ನೋಡುತ್ತಾ ದೂರಯಾನದ ಕನಸು ಕಂಡವನು ಅವನು. ಯಾವ ಸಾಹಸಕ್ಕೆ ಕೂಡ ಎದೆ ಒಡ್ಡಿ ಮುನ್ನಡೆಯುವ ಗಟ್ಟಿ ಎದೆ ಆತನಿಗೆ ಇತ್ತು. ಆದರೆ ದೂರ ಪ್ರಯಾಣಕ್ಕೆ ಹಡಗು ಬೇಕು. ಅದಕ್ಕೆ ದುಡ್ಡು ಬೇಕು! ಕನಸೇನೋ ದೊಡ್ಡದಿತ್ತು. ಆದರೆ ಕಿಸೆ ಬರಿದಾಗಿತ್ತು.

ಸ್ಪೇನ್ ರಾಣಿಯನ್ನು ಒಲಿಸಲು ಏಳು ವರ್ಷ ತಗುಲಿತು!

ತನ್ನ ಸಣ್ಣ ಪ್ರಾಯದ ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಕೊಲಂಬಸ್ ಸ್ಪೇನ್ ದೇಶಕ್ಕೆ ಬಂದಿದ್ದ. ಸ್ಪೇನ್ ರಾಣಿಯಾದ ಇಸಬೆಲ್ಲಾ ಆತನ ಕನಸಿಗೆ ಬೆಂಬಲ ನೀಡಬಹುದು ಎಂದು ಅವನು ಆಸೆ ಪಟ್ಟಿದ್ದ. ಆದರೆ ಆಕೆ ನೂರಾರು ಷರತ್ತುಗಳನ್ನು ಮುಂದಿಟ್ಟುಕೊಂಡು ಅವನನ್ನು ದಿನವೂ ನಿರಾಸೆ ಮಾಡುತ್ತ ಹೋದಳು.

“ನಾನು ಅಟ್ಲಾಂಟಿಕ್ ಸಾಗರ ದಾಟಿ ಹೊಸ ಭೂಭಾಗವನ್ನು ಹುಡುಕಿ ಅಲ್ಲಿ ಸ್ಪೇನ್ ದೇಶದ ಧ್ವಜವನ್ನು ನೆಟ್ಟು ಬರುತ್ತೇನೆ. ನನ್ನ ಮೇಲೆ ಭರವಸೆ ಇಟ್ಟು ಧನಸಹಾಯ ಮಾಡಿ” ಎಂದು ಗೋಗರೆದ. ಯಾರ್ಯಾರಿಂದಲೋ ಶಿಫಾರಸ್ಸನ್ನು ಮಾಡಿಸಿದ. ಏಳು ವರ್ಷಗಳ ತೀವ್ರವಾದ ಪ್ರಯತ್ನದ ನಂತರ ರಾಣಿ ಇಸಾಬೆಲ್ಲಾ ಒಪ್ಪಿ ದುಡ್ಡು ಕೊಟ್ಟಳು.

ಒಂದು ಫೈನ್ ಡೇ ಮೂರು ನಾವೆಗಳು ಸ್ಪೇನಿನಿಂದ ಹೊರಟವು. ಅದರಲ್ಲಿ ನೂರು ಜನ ಸಹಪ್ರಯಾಣಿಕರು ಕೂಡ ಸಿದ್ಧರಾದರು.

ಕೊಲಂಬಸ್‌ ಬಳಸಿದ ನಾವೆಯ ಮಾದರಿ

ಅದು ಎಂತಹ ಪ್ರಯಾಣ ಅಂತೀರಿ?

ಅವರನ್ನು ಬೀಳ್ಕೊಡಲು ಬಂದವರು ಯಾರೂ ಶುಭ ಕೋರಲಿಲ್ಲ! ಏಕೆಂದರೆ ಇವರ್ಯಾರೂ ಹಿಂದೆ ಬರುವ ಬಗ್ಗೆ ಅಲ್ಲಿದ್ದ ಯಾರಿಗೂ ಭರವಸೆ ಇರಲಿಲ್ಲ! ಅವನ ಜೊತೆ ಹಡಗನ್ನು ಏರಿದ ನೂರು ಜನ ನಾವಿಕರು ಸ್ಪೇನ್ ದೇಶದ ಸೆರೆಮನೆಯಲ್ಲಿ ಜೀವಾವಧಿ ಅಥವ ಮರಣದಂಡನೆಯ ಶಿಕ್ಷೆಯನ್ನು ಎದುರಿಸುತ್ತಿದ್ದ ಕೈದಿಗಳು ಆಗಿದ್ದರು!

ಅವರ್ಯಾರಿಗೂ ಸಮುದ್ರ ಪ್ರಯಾಣದ ಸಣ್ಣ ಅನುಭವ ಕೂಡ ಇರಲಿಲ್ಲ. ಸ್ವತಃ ಅವರ್ಯಾರಿಗೂ ಮರಳಿ ಬರುವ ಭರವಸೆ ಇರಲಿಲ್ಲ. ಅದಕ್ಕಾಗಿ ಅವರನ್ನು ಬೀಳ್ಕೊಡಲು ಬಂದವರು, ನಾವಿಕರು ಎಲ್ಲರೂ ಕಣ್ಣೀರು ಸುರಿಸುತ್ತಾ ಹಡಗನ್ನು ಏರಿದವರು.

ಕಣ್ಣೀರು ಹಾಕದವನು ಕೇವಲ ಒಬ್ಬನೇ, ಅವನು ಕೊಲಂಬಸ್! ಗುರಿಯನ್ನು ತಲುಪುವ ಭರವಸೆ ಅದರಲ್ಲಿ ಯಾರಿಗೂ ಇರಲಿಲ್ಲ, ಒಬ್ಬನನ್ನು ಬಿಟ್ಟು…

ಅಟ್ಲಾಂಟಿಕ್ ಗೆಲ್ಲುವುದು ಸುಲಭ ಅಲ್ಲವೇ ಅಲ್ಲ.

ಬೆಟ್ಟದಷ್ಟು ಎತ್ತರದ ಅಲೆಗಳನ್ನು ಸೀಳಿ ನಾವೆ ಮುಂದೆ ಹೋಗುತ್ತಿತ್ತು. ಶಾರ್ಕ್‌ನಂಥ ದೊಡ್ಡ ದೊಡ್ಡ ಮೀನುಗಳು ಅಲ್ಲಲ್ಲಿ ರಕ್ತ ಸಿಕ್ತ ಹಲ್ಲುಗಳನ್ನು ಚಾಚಿ ಸವಾಲು ಎಸೆದವು! ಅಲೆಗಳ ಹೊಡೆತಕ್ಕೆ ನಾವೆ ಒಡೆದುಹೋಗುವ ಭಯ ಒಂದೆಡೆ! ಬರೇ ಸಮುದ್ರದ ನೀಲಿ ಬಣ್ಣವನ್ನು ಮಾತ್ರ ನೋಡುವ ಏಕತಾನತೆಯು ಇನ್ನೊಂದು ಕಡೆ! ಅತ್ಯಂತ ಆಳವಾದ ಸಾಗರ ಅದು. ಅದರಲ್ಲಿ ಅಲ್ಲಲ್ಲಿ ತಲೆ ಎತ್ತಿ ನಿಂತ ನೀರ್ಗಲ್ಲುಗಳು.

ನೂರಾರು ಸವಾಲುಗಳು, ಹಸಿದ ಹೊಟ್ಟೆಗಳು!

ಅವರ ಹತ್ತಿರ ಮೂರು ತಿಂಗಳಿಗೆ ಬೇಕಾದ ಆಹಾರ ಮತ್ತು ನೀರು ಮಾತ್ರ ಸಂಗ್ರಹ ಇತ್ತು. ಎರಡು ತಿಂಗಳು ಆಗಲೇ ಕಳೆದುಹೋಗಿದ್ದವು. ಯಾವ ದಿಕ್ಕಲ್ಲಿ ನೋಡಿದರೂ ನೀಲಿ ನೀಲಿ ನೀರು. ಆಕಾಶದಲ್ಲಿ ಹಾರಾಡುವ ಒಂದು ಹಕ್ಕಿ ಕೂಡ ಇಲ್ಲ. ಬಕಾಸುರ ಹಸಿವಿನ ಆ ನಾವಿಕರಿಗೆ ಆಹಾರ ಮುಗಿದರೆ ಏನು ಗತಿ? ಎಂಬ ಯೋಚನೆಯು ಅಲ್ಲಾಡಿಸಿಬಿಟ್ಟಿತ್ತು. ಕೊಲಂಬಸನಿಗೆ ಅವರಿಗೆ ಧೈರ್ಯ ತುಂಬಿಸಿ ತುಂಬಿಸಿ ಸಾಕಾಗಿ ಹೋಗಿತ್ತು. ಅವರೆಲ್ಲರಿಗೆ ರಾತ್ರಿ, ಹಗಲುಗಳ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ. ಹಡಗಿನಲ್ಲಿ ಇದ್ದ ಒಂದೇ ಒಂದು ದಿಕ್ಸೂಚಿಯು ಪಶ್ಚಿಮದ ದಿಕ್ಕನ್ನು ತೋರಿಸುತ್ತಿತ್ತು.

Christopher Columbus

ಆದರೆ ಒಂದು ಮುಂಜಾನೆ ಎಲ್ಲ ನಾವಿಕರು ಧೈರ್ಯವನ್ನು ಕಳೆದುಕೊಂಡರು. ‘ಇನ್ನು ಸಾಕು, ಹಿಂದೆ ಹೋಗೋಣ’ ಎಂಬ ಕೂಗು ಎದ್ದಿತ್ತು. ಅವರೆಲ್ಲರೂ ಕೊಲಂಬಸ್ ಮೇಲೆ ಹಸಿದ ಹದ್ದುಗಳ ಹಾಗೆ ಎರಗಲು ಸಿದ್ಧರಾದರು. ಆದರೂ ಕೂಡ ಕೊಲಂಬಸ್ ತಾಳ್ಮೆ ಕೆಡಲಿಲ್ಲ. ಭರವಸೆ ತುಂಬುವ ಕೆಲಸ ಬಿಡಲಿಲ್ಲ!

“ಇನ್ನು ಮೂರು ದಿನ ಕಾಯೋಣ ಗೆಳೆಯರೇ, ಭೂಭಾಗ ಸಿಗದೆ ಹೋದರೆ ಹಿಂದೆ ಹೋಗೋಣ” ಎಂದು ಬಿಟ್ಟ. ಹಸಿದ ನಾವಿಕರು “ಸರಿ, ಮೂರೇ ದಿನ. ಹೌದು ಮೂರೇ ದಿನ. ಮತ್ತೆ ಭೂಭಾಗ ಸಿಗದೆ ಹೋದರೆ ನಿನ್ನನ್ನೇ ಎತ್ತಿ ಸಮುದ್ರಕ್ಕೆ ಎಸೆಯುತ್ತೇವೆ!” ಎಂದರು. ಕೊಲಂಬಸ್ ಮಾತಾಡಲಿಲ್ಲ.

ನೀರವ ಮೌನದಲ್ಲಿ ಅವರ ಪ್ರಯಾಣವು ಮುಂದುವರೆಯಿತು.

ಆದರೆ ಆ ದಿನವು ಬಂದೇ ಬಿಟ್ಟಿತು

ಅವರು ಹೊರಟು ಮೂರು ತಿಂಗಳ ನಂತರ ಅಕ್ಟೋಬರ್ 11ರಂದು ಕೊಲಂಬಸ್ ದುರ್ಬೀನ್ ಮೂಲಕ ನೋಡುತ್ತಾ ಇರುವಾಗ ದೂರದಲ್ಲಿ ಹಕ್ಕಿಗಳು ಹಾರಿ ಬರುವ ದೃಶ್ಯ ಕಂಡಬಂದಿತು. ಮತ್ತೂ ದೂರದಲ್ಲಿ ಒಂದು ಬೆಳಕಿನ ಕಿರಣ, ಒಂದು ಹಸಿರು ಕಾಡು ಕಂಡು ಬಂತು. ಕೊಲಂಬಸನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವನ ಜೊತೆಗೆ ಇದ್ದ ಎಲ್ಲ ನಾವಿಕರು ಕುಣಿದು ಕುಪ್ಪಳಿಸಿ ಬಿಟ್ಟಿದ್ದರು. ಅವರು ತಲುಪಿದ ದ್ವೀಪವು ಅದುವರೆಗೆ ಯಾರಿಗೂ ಎಟುಕದ ಭೂಭಾಗವೇ ಆಗಿತ್ತು!

ಆ ದ್ವೀಪಕ್ಕೆ ‘ಸಾನ್ ಎಲ್ವದೊರ್’ ಎಂದವರು ನಾಮಕರಣವನ್ನು ಮಾಡಿದರು. ಅಲ್ಲಿ ಸ್ಪೇನ್ ದೇಶದ ಧ್ವಜವನ್ನು ನೆಟ್ಟರು. ಕಾಡಿನ ಎಲ್ಲ ಮೂಲೆಗೂ ಓಡಾಡಿದ ಅವರು ಅಪರೂಪದ ಹಣ್ಣು ಕಿತ್ತು ತಿಂದರು. ಜರಿ ತೊರೆಗಳಲ್ಲಿ ಮಿಂದರು. ಗಟ್ಟಿ ಆಗಿ ಕೂಗಿದರು. ಪುಟ್ಟ ಪುಟ್ಟ ಮಕ್ಕಳಂತೆ ಕುಣಿದಾಡಿದರು. ಆ ವರ್ಣನಾತೀತ ಅನುಭವಕ್ಕೆ ಸಾಕ್ಷಿ ಆದರು.

ಆ ದ್ವೀಪದಲ್ಲಿದ್ದ ಕಾಡಿನ ಜನರನ್ನು ಒಲಿಸಿಕೊಳ್ಳುವುದು ಕೊಲಂಬಸನಿಗೆ ಇನ್ನೊಂದು ದೊಡ್ಡದಾದ ಸವಾಲಾಗಿತ್ತು. ಆದಿವಾಸಿಗಳು ಆ ದ್ವೀಪದ ಮೂಲ ನಿವಾಸಿಗಳು. ಅವರು ಸುಲಭದಲ್ಲಿ ಭೂಮಿಯನ್ನು ಬಿಟ್ಟು ಕೊಟ್ಟಾರೆಯೆ? ಆ ಎಲ್ಲ ಸವಾಲುಗಳನ್ನು ಗೆದ್ದ ಕೊಲಂಬಸ್ ಮುಂದೆ ಹಯಾಟಿ ಮತ್ತು ಕ್ಯುಬಾ ದ್ವೀಪಗಳನ್ನು ಕೂಡ ಕಂಡುಹಿಡಿದನು. ಮತ್ತೆ ಸ್ಪೇನ್ ದೇಶಕ್ಕೆ ಹಿಂದಿರುಗಿದನು.

ದಣಿವರಿಯದ ಸಂಶೋಧಕ, ದುರಂತ ನಾಯಕ!

ಈ ಯಶಸ್ವೀ ಪ್ರಯಾಣದ ನಂತರವೂ ಆತನ ಸಾಧನೆಯ ಹಸಿವು ನೀಗಲಿಲ್ಲ! ಮುಂದೆ ಇನ್ನೂ ಮೂರು ಬಾರಿ ಅವನು ಸ್ಪೇನ್ ದೇಶದಿಂದ ಅಮೆರಿಕಾದ ಕಡೆಗೆ ಪ್ರಯಾಣವನ್ನು ಮಾಡಿದನು. ಜಮೈಕಾ, ಡೊಮಿನಿಕಾ ಮೊದಲಾದ ಹೊಸ ದ್ವೀಪಗಳನ್ನು ಕಂಡುಹಿಡಿದನು. ಒಮ್ಮೆ ಅವನ ಜೊತೆಗಿದ್ದ ಸಹನಾವಿಕರು ಆದಿವಾಸಿಗಳನ್ನು ಆತನ ಕಣ್ಣ ಮುಂದೆಯೇ ಕತ್ತರಿಸಿ ಹಾಕಿ ನರಮೇಧ ಮಾಡಿದಾಗ ಹತಾಶೆಯಿಂದ ನೋಡುತ್ತಾ ನಿಂತನು. ಆ ನರಮೇಧವು ಇತಿಹಾಸದಲ್ಲಿ ಅತ್ಯಂತ ದೊಡ್ಡ ಕ್ರೌರ್ಯ ಎಂದು ದಾಖಲಾಗಿದೆ.

ಮುಂದೊಂದು ದಿನ ರಾಣಿ ಇಸಬೆಲ್ಲಾ ಅವನಿಗೆ ಕೊಟ್ಟ ಎಲ್ಲ ಸೌಲಭ್ಯಗಳನ್ನು ಹಿಂದೆ ಪಡೆದಳು. ಕೊನೆಗೆ ತನ್ನ ಇಡೀ ಜೀವಮಾನವನ್ನು ಸಾಗರದಲ್ಲಿಯೆ ಕಳೆದ ಒಬ್ಬ ಮಹಾ ನಾವಿಕನು ನಿರ್ಗತಿಕನಾಗಿ 1502ರಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡನು. ಆತನ ಬದುಕು ಒಂದು ದುರಂತ ಕಥೆ ಆಯಿತು. ಸಾಯುವಾಗ ಆ ಮಹಾ ನಾವಿಕನ ಬಳಿ ಒಂದು ಕವಡೆ ಕೂಡ ಇರಲಿಲ್ಲ!

ಅವನ ಕೊನೆಯ ಕನಸು ನನಸಾಗಲಿಲ್ಲ!

ಸಾಯುವಾಗ ಅವನು ಹೇಳಿದ ಕೊನೆಯ ಮಾತು ತುಂಬಾ ಅದ್ಭುತವಾಗಿದೆ – ಅಯ್ಯೋ ದೇವರೆ, ನನಗೆ ಭಾರತಕ್ಕೆ ಜಲಮಾರ್ಗವನ್ನು ಹುಡುಕಲು ಆಗಲೇ ಇಲ್ಲ!

Exit mobile version