ಭಾರತದಲ್ಲಿ ಈಗ ಉಳಿದಿರುವ ಪುರಾತನ ಫಿಲ್ಮ್ ಸ್ಟುಡಿಯೋ (Oldest Film Studio) ಕಟ್ಟಿದವರು (1945) ಯಾರು?
ಭಾರತದಲ್ಲಿ ಮೊದಲ ಫಿಲ್ಮ್ ಡಬ್ ಮಾಡಿದವರು ಯಾರು?
ಐದು ಭಾಷೆಗಳಲ್ಲಿ (ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಸಿಂಹಳೀಸ್) 175 ಸಿನಿಮಾ ನಿರ್ಮಾಣ ಮಾಡಿ ವಿಶ್ವ ದಾಖಲೆ ಮಾಡಿದವರು ಯಾರು?
ಐದು ಜನ ಮುಖ್ಯಮಂತ್ರಿಗಳನ್ನು ಸೇರಿಸಿಕೊಂಡು ಸಿನಿಮಾ ಮಾಡಿದವರು ಯಾರು?
ಭಾರತದಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ಹಿನ್ನೆಲೆ ಗಾಯಕರನ್ನು ಬಳಸಿಕೊಂಡದ್ದು ಯಾರು?
ಅತೀ ಹೆಚ್ಚು ಪ್ರಯೋಗಾತ್ಮಕ ಮತ್ತು ಕ್ರಾಂತಿಕಾರಿ ಸಿನಿಮಾಗಳನ್ನು ಮಾಡಿದವರು ಯಾರು?
ಭಾರತದ ಮೊತ್ತ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದವರು ಯಾರು?
ಕಮಲಹಾಸನ್, ವೈಜಯಂತಿ ಮಾಲಾ, ಶಿವಾಜಿ ಗಣೇಶನ್, ಮಹಾಲಿಂಗಂ, ಎಂ ಜಿ ಆರ್, ಜಯಲಲಿತ ಮೊದಲಾದವರನ್ನು ತನ್ನ ಸಿನಿಮಾಗಳ ಮೂಲಕ ಸೂಪರ್ ಸ್ಟಾರ್ ಮಾಡಿದವರು ಯಾರು?
ಕಪ್ಪು ಬಿಳುಪಿನ ಸಿನಿಮಾಗಳಿಂದ ಆರಂಭಿಸಿ ಅತ್ಯಾಧುನಿಕ ತಂತ್ರಜ್ಞಾನದ ಸಿನೆಮಾಗಳವರೆಗೆ ಮಾಡಿ ಗೆದ್ದವರು ಯಾರು?
3,000 ರೂ. ಬಜೆಟ್ ಸಿನಿಮಾದಿಂದ ಆರಂಭಿಸಿ 100 ಕೋಟಿ ರೂ. ಬಜೆಟಿನವರೆಗಿನ ಸಿನಿಮಾ ನಿರ್ಮಾಣ ಮಾಡಿದವರು ಯಾರು?
ಈ ಎಲ್ಲಾ ಪ್ರಶ್ನೆಗಳಿಗೆ ಇರುವುದು ಒಂದೇ ಉತ್ತರ. ಅದು ಎ.ವಿ. ಮೇಯಪ್ಪನ್ ಚೆಟ್ಟಿಯಾರ್ (AV Meiyappan Chettiyar)! ಅವರು ಭಾರತೀಯ ಸಿನಿಮಾ ರಂಗದ ದೈತ್ಯ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕ! ಅವರ ಬದುಕು (ರಾಜ ಮಾರ್ಗ ಅಂಕಣ) ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲಿ ಒಂದು ಸ್ವರ್ಣ ಯುಗವೇ ಆಗಿದೆ.
ಕೊಡಕ್ ಫಿಲ್ಮ್ ರೀಲ್, ಗ್ರಾಮಾಫೋನ್ ರೆಕಾರ್ಡ್ ಇತ್ಯಾದಿ
1907ರ ಜುಲೈ 28ರಂದು ತಮಿಳುನಾಡಿನ ಕಾರೈಕುಡಿ ಎಂಬಲ್ಲಿ ಹುಟ್ಟಿದ AV ಮೇಯಪ್ಪನ್ ಚೆಟ್ಟಿಯಾರ್ ಬಾಲ್ಯದಿಂದಲೂ ದೊಡ್ಡ ಕ್ಯಾನ್‌ವಾಸ್ ಕನಸು ಕಂಡವರು. ಮೊದಲು ಕೋಡಕ್ ಫಿಲ್ಮ್ ರೀಲ್ ಮಾರಾಟ ಮಾಡುತ್ತಿದ್ದ ಅವರು ನಂತರ ಚೆನ್ನೈಗೆ ಬಂದು ಗ್ರಾಮಾಪೋನ್ ರೆಕಾರ್ಡ್ ಮಾರಾಟ ಮಾಡಲು ತೊಡಗಿದರು. ತನ್ನ ಗೆಳೆಯನ ಪ್ರೇರಣೆಯಿಂದ ಸಿನಿಮಾ ನಿರ್ಮಾಣ ಮಾಡಲು ತೊಡಗಿದರು. ತಮಿಳುನಾಡಿನಲ್ಲಿ ಆಧುನಿಕ ಸ್ಟುಡಿಯೋ ಇಲ್ಲದ ಕಾರಣ ಕೊಲ್ಕೊತಾಗೆ ಹೋಗಿ ಶೂಟಿಂಗ್ ಮಾಡಬೇಕಾಯಿತು. ಮೊದಲ ಮೂರು ಸಿನಿಮಾಗಳು ಫ್ಲಾಪ್ ಆಗಿ ಸಾವಿರಾರು ರೂಪಾಯಿ ಕಳೆದುಕೊಂಡರು. ಅದರ ಜೊತೆಗೆ ದೊಡ್ಡ ದುರಂತ ಎಂದರೆ ಕೊಲ್ಕತ್ತ ಸ್ಟುಡಿಯೋದ ಬೆಳಕಿನ ಪ್ರಖರತೆಯಿಂದ ಅವರ ಸಿನಿಮಾ ಹೀರೋ ಎರಡೂ ಕಣ್ಣು ಕಳೆದುಕೊಂಡಿದ್ದ! ಇದು ಬಹಳ ದೊಡ್ಡ ಪೊಲೀಸ್ ಕೇಸ್ ಆಗಿ ಎವಿಎಂ ಅವರಿಗೆ ದೊಡ್ಡ ಹಿನ್ನಡೆ ಆಯ್ತು. ಆದರೆ ಇದಕ್ಕೆಲ್ಲ ಸೋಲು ಒಪ್ಪಿಕೊಳ್ಳುವ ಬಡಪೆಟ್ಟಿಗೆ ಅವರು ಅಲ್ಲವೇ ಅಲ್ಲ!
ಎವಿಎಂ ಸ್ಟುಡಿಯೋ ಸ್ಥಾಪನೆ
ಬೇರೆ ಕಡೆ ಆದ ಹಿನ್ನಡೆಗಳಿಂದ ನಿರಾಶರಾಗದೆ ಚೆಟ್ಟಿಯಾರ್ ಅವರು ತಮಿಳುನಾಡಿನಲ್ಲಿಯೇ ಫಿಲ್ಮ್ ಸ್ಟುಡಿಯೋ ಕಟ್ಟಿದರು. ಅದು AVM ಸ್ಟುಡಿಯೋ. ಅದಕ್ಕೆ ಬೇಕಾದ ಕ್ಯಾಮೆರಾ ಇತ್ಯಾದಿ ಎಲ್ಲ ಸಲಕರಣೆಗಳನ್ನು ಯುರೋಪಿನಿಂದ ಆಮದು ಮಾಡಿದರು. ಆದರೆ ಆಗ ಎರಡನೇ ವಿಶ್ವ ಸಮರ ಸ್ಫೋಟ ಆಯಿತು. ದೇಶದಾದ್ಯಂತ ಆರ್ಥಿಕ ಮುಗ್ಗಟ್ಟು ಎದುರಾಯಿತು. ಮುಖ್ಯವಾಗಿ ಮದರಾಸಿನಲ್ಲಿ ವಿದ್ಯುತ್ ಉತ್ಪಾದನೆ ಭಾರಿ ಕಡಿಮೆ ಆಗಿ ನಿರಂತರ ಪವರ್ ಕಟ್ ಆದಾಗ ಅವರು ಸ್ಟುಡಿಯೋವನ್ನು ಕೊಡಂಬಾಕ್ಕಂ ಎಂಬಲ್ಲಿಗೆ ಸ್ಥಳಾಂತರ ಮಾಡಬೇಕಾಯಿತು. ಆ ಸ್ಟುಡಿಯೋ ಭಾರತದ ಎರಡನೇ ಫಿಲ್ಮ್ ಸ್ಟುಡಿಯೋ ಆಗಿದ್ದು 25 ಎಕರೆ ವಿಸ್ತೀರ್ಣವನ್ನು ಹೊಂದಿದೆ! ಮತ್ತು ಈಗ ಉಳಿದಿರುವ ಸ್ಟುಡಿಯೋಗಳಲ್ಲಿ ಅದು ಅತ್ಯಂತ ಪುರಾತನ ಎಂಬ ದಾಖಲೆ ಇದೆ. ಅದರಿಂದಾಗಿ ಮುಂದೆ ದಕ್ಷಿಣ ಭಾರತದಲ್ಲಿ ಸಿನೆಮಾ ನಿರ್ಮಾಣವು ಭಾರಿ ದೊಡ್ಡ ಉದ್ಯಮವಾಗಿ ಬೆಳೆಯಿತು. ಅದರ ಎಲ್ಲ ಶ್ರೇಯಸ್ಸು ಚೆಟ್ಟಿಯಾರ್ ಅವರಿಗೆ ಸಲ್ಲಬೇಕು. AVM ಭಾರತದ ಅತೀ ದೊಡ್ಡ ಫಿಲ್ಮ್ ಪ್ರೊಡಕ್ಷನ್ ಹೌಸ್ ಆಗಿ ರೂಪುಗೊಂಡಿತು.
ಬರೋಬ್ಬರಿ 175 ಸಿನಿಮಾ ನಿರ್ಮಾಣ – ರಾಷ್ಟ್ರೀಯ ದಾಖಲೆ!
ಚೆಟ್ಟಿಯಾರ್ ಅವರ AVM ಸಂಸ್ಥೆ ನಿರ್ಮಾಣ ಮಾಡಿದ 175 ಸಿನಿಮಾಗಳ ಬಗ್ಗೆ ನಾನು ಬರೆದರೆ ಅದು ಬಹಳ ದೊಡ್ಡ ಗ್ರಂಥವೇ ಆದೀತು! ನಾನು ಅದರ ಕೆಲವು ಮುಖ್ಯಾಂಶಗಳನ್ನು ಮಾತ್ರ ಬರೆಯುತ್ತೇನೆ.
ಆರಂಭದಲ್ಲಿ ಅವರು ಮಾಡಿದ್ದು ಪುರಾಣದ ಕಥೆ ಆಧಾರಿತವಾದ ಸಿನಿಮಾಗಳನ್ನು. ಸತ್ಯ ಹರಿಶ್ಚಂದ್ರ, ಪರಾಶಕ್ತಿ, ಭೂಕೈಲಾಸ, ನಂದ ಕುಮಾರ, ಭಕ್ತ ಪ್ರಹ್ಲಾದ ಮೊದಲಾದ ಸಿನಿಮಾಗಳಲ್ಲಿ ಭಾರಿ ಎನ್ನುವ ಸೆಟ್ ಗಳನ್ನು ನಿರ್ಮಿಸಿ ಸಿನಿಮಾಗಳನ್ನು ಅವರು ಗೆಲ್ಲಿಸಿದರು. ಮೊದಲು ತೆಲುಗಿನಲ್ಲಿ ಸಿನಿಮಾಗಳನ್ನು ಮಾಡಿ, ನಂತರ ತಮಿಳು, ಕನ್ನಡ, ಹಿಂದಿಗಳಿಗೆ ಸಿನಿಮಾ ಡಬ್ ಮಾಡಿ ಪ್ರದರ್ಶನ ಮಾಡಿದರು. ಭಾರತದಲ್ಲಿ ಮೊದಲ ಡಬ್ಬಿಂಗ್ ಫಿಲಂ ಮಾಡಿದ್ದು ಅವರೇ!
ಅದುವರೆಗೆ ಸಿನಿಮಾದ ಹಾಡುಗಳನ್ನು ಅಭಿನಯಿಸುವ ಕಲಾವಿದರೇ ಹಾಡುವ ಸಂಪ್ರದಾಯ ಇತ್ತು. ಅದನ್ನು ಮುರಿದು ಹಿನ್ನೆಲೆ ಗಾಯಕರ ಸಂಪ್ರದಾಯ ಆರಂಭ ಮಾಡಿದ ಮೊದಲಿಗರು ಅವರೇ!
ಒಂದೇ ಸಿನಿಮಾದಲ್ಲಿ ತಮಿಳು ನಿರ್ಮಾಪಕ, ಕನ್ನಡದ ನಟರು, ತೆಲುಗಿನ ಭಾಷೆ, ಮರಾಠಿಯ ನಿರ್ದೇಶಕರನ್ನು ಜೋಡಿಸಿ ಭಾರತದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದೇ ಅವರು!
ದಕ್ಷಿಣ ಭಾರತದ ಐದು ಜನ ಮುಖ್ಯಮಂತ್ರಿಗಳ ಜೊತೆಗೆ ಸಿನಿಮಾ ಮಾಡಿದ ದಾಖಲೆ ಕೂಡ ಅವರ ಹೆಸರಿನಲ್ಲಿ ಇದೆ. ಅಣ್ಣಾ ದೊರೈ (ಚಿತ್ರಕಥೆ), ಕರುಣಾನಿಧಿ (ಸಂಭಾಷಣೆ), ಎಂಜಿಆರ್, ಜಯಲಲಿತಾ, ಎನ್ಟಿಆರ್ (ಅಭಿನಯ) ಇವರನ್ನು ಜೋಡಿಸಿಕೊಂಡು ಸಿನಿಮಾ ಮಾಡಿದ್ದು ಅವರೇ!
3,000 ರೂಪಾಯಿ ಬಜೆಟ್‌ನಿಂದ ಹಿಡಿದು 100 ಕೋಟಿ ಬಜೆಟ್‌ವರೆಗೆ ಸಿನಿಮಾ ಮಾಡಿದ ದಾಖಲೆ ಕೂಡ ಆವರ ಹೆಸರಿನಲ್ಲಿ ಇದೆ. ರಜನೀಕಾಂತ್ ಅಭಿನಯದ ‘ಶಿವಾಜಿ – ದ ಬಾಸ್ ‘ AVM ಸಂಸ್ಥೆ ನಿರ್ಮಾಣ ಮಾಡಿದ ಅತ್ಯಂತ ದುಬಾರಿ ಸಿನಿಮಾ ಆಗಿದೆ!
ಪ್ರತಿಭೆಗಳನ್ನು ಹುಡುಕುವುದರಲ್ಲಿ ಮತ್ತು ಅವರನ್ನು ಸ್ಟಾರ್ ಮಾಡುವಲ್ಲಿ ಚೆಟ್ಟಿಯಾರ್ ಅವರನ್ನು ಮೀರಿಸುವವರಿಲ್ಲ. ಕಮಲಹಾಸನ್ (ಕಳತ್ತೂರ್ ಕಣ್ಣಮ್ಮ) ವೈಜಯಂತಿ ಮಾಲಾ, ಶಿವಾಜಿ ಗಣೇಶನ್, ಜಯಲಲಿತ ಮೊದಲಾದವರನ್ನು ತನ್ನ ಸಿನಿಮಾಗಳ ಮೂಲಕ ಸ್ಟಾರ್ ಮಾಡಿದ್ದು ಇದೇ ಚೆಟ್ಟಿಯಾರ್! ಮಕ್ಕಳ ಸಿನೆಮಾ (ಹಮ್ ಪಂಚೀ ಇಕ್ ಡಾಲ್ ಕೇ) ನಿರ್ಮಾಣ ಮಾಡಿ ರಾಷ್ಟ್ರಪತಿ ಪದಕ ಪಡೆದ ಮೊದಲಿಗರು ಇದೇ ಚೆಟ್ಟಿಯಾರ್.
1979ರ ಆಗಸ್ಟ್ 12ರಂದು ತನ್ನ 72ನೇ ವಯಸ್ಸಿನಲ್ಲಿ ನಿಧನರಾದ ಚೆಟ್ಟಿಯಾರ್ ಇಡಿ ಭಾರತೀಯ ಸಿನಿಮಾ ರಂಗದ ‘ಮೆಗ್ನಮಾಪಸ್ ನಿರ್ಮಾಪಕ’ ಎಂಬ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಕೂಡ ಇಲ್ಲ. ಅವರ ನಂತರ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿ ಚೆಟ್ಟಿಯಾರ್ ಅವರ ಸಿನೆಮಾ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಚೆಟ್ಟಿಯಾರ್ ಅವರ ಜನ್ಮ ಶತಮಾನದ ವರ್ಷ ಅವರ ಪ್ರತಿಮೆಯನ್ನು ಸ್ಥಾಪಿಸಿ ತಮಿಳುನಾಡು ಸರಕಾರವು ಅವರಿಗೆ ಶ್ರದ್ಧಾಂಜಲಿಯನ್ನು ಕೊಟ್ಟಿತು. ಭಾರತ ಸರಕಾರವು ಅವರ ನೆನಪಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಇನ್ನೂ ಯಾಕೆ ದೊರೆತಿಲ್ಲ ಅನ್ನುವುದು ಜಿಜ್ಞಾಸೆ.
ಇಂದು (ಜುಲೈ 28) ಅವರ ಹುಟ್ಟಿದ ಹಬ್ಬ ಅನ್ನೋದು ಈ ಲೇಖನ ಬರೆಯಲು ಪ್ರೇರಣೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಶೋಕ ಗೀತೆಗಳ ಸಾಮ್ರಾಟ ಮುಕೇಶ್ 100ರ ನೆನಪು; ಅದು ನೋವಿನಲ್ಲಿ ಅದ್ದಿ ತೆಗೆದ ಧ್ವನಿ