Site icon Vistara News

ರಾಜ ಮಾರ್ಗ ಅಂಕಣ |ಮೌಲ್ಯಗಳನ್ನು ಬೋಧನೆ ಮಾಡದೆ ಅವುಗಳನ್ನೇ ಬದುಕಿದ ಮಹಾ ಗುರು ಪ್ರೊ. ಎಚ್.‌ ನರಸಿಂಹಯ್ಯ

H Narasimhaiah

ಗೌರಿಬಿದನೂರು ತಾಲೂಕಿನ ಹೊಸೂರಿನಲ್ಲಿ 1920 ಜೂನ್ 6ರಂದು ಹುಟ್ಟಿದ ಎಚ್. ನರಸಿಂಹಯ್ಯ ವಿದ್ಯೆಯನ್ನು ಪಡೆಯುವ ಹಂಬಲದಿಂದ 53 ಮೈಲು ದೂರವನ್ನು ಖಾಲಿ ಹೊಟ್ಟೆಯಲ್ಲಿ ಮತ್ತು ಬರಿಗಾಲಿನಲ್ಲಿ ನಡೆದು ಬೆಂಗಳೂರು ತಲುಪಿದ್ದು ಒಂದು ಭಾರೀ ಹೋರಾಟ!

ಮುಂದೆ ಅತ್ಯಂತ ಕಠಿಣ ಪರಿಶ್ರಮದಿಂದ ಅವರು ಎಂ.ಎಸ್ಸಿ ಓದಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಂದೆ ಪ್ರಿನ್ಸಿಪಾಲ್ ಆಗಿ, ಅದರ ನಂತರ ಬೆಂಗಳೂರು ವಿವಿಯ ಗೌರವಾನ್ವಿತ ಉಪಕುಲಪತಿ ಕೂಡ ಆದರು. ಅವರ ಅಧಿಕಾರದ ಅವಧಿಯಲ್ಲಿ ವಿವಿಯು ಭಾರೀ ದೊಡ್ಡ ಸಾಧನೆಗಳನ್ನು ಮಾಡಿತು. ವಿದ್ಯಾರ್ಥಿಗಳ ಮೆಚ್ಚಿನ ಪ್ರೊಫೆಸರ್ ಅವರು. “ಪ್ರೊಫೆಸರ್ ಅಂತ ಕರೀ ಬೇಡ್ರೋ, ಮೇಷ್ಟ್ರುಅಂದರೆ ಸಾಕು!” ಅಂತ ತನ್ನ ವಿದ್ಯಾರ್ಥಿಗಳಿಗೆ ದಿನವೂ ಹೇಳುವವರು ಅವರು!

ಸರಳತೆಯ ಪ್ರತಿರೂಪ ನಮ್ಮ ಸರ್!
ಯಾವ ಹುದ್ದೆಗೆ ಏರಿದರೂ ಅತ್ಯಂತ ಸರಳ ಜೀವನ ಮತ್ತು ಅಪಾರ ಪ್ರಾಮಾಣಿಕತೆ ಅವರ ಬ್ರಾಂಡ್‌ಗಳು ! ಬಿಳಿ ಪಂಚೆ, ಬಿಳಿ ಶರ್ಟು, ಗಾಂಧಿ ಟೋಪಿ, ಕಾಲಿಗೆ ಒಂದು ಜೋಡಿ ಹಳೆಯ ಚಪ್ಪಲಿ, ಬಿಸಿಲಿಗೆ ಒಂದು ಮರದ ಬೊಡ್ಡೆಯ ಕೊಡೆ ಇವಿಷ್ಟೇ ಅವರ ಸಂಗಾತಿಗಳು. ಜೀವನ ಇಡೀ ಮದುವೆ ಆಗದ ಬ್ರಹ್ಮಚಾರಿ. ಕೊನೆಯವರೆಗೆ ಒಂದು ಸಣ್ಣ ಕೊಠಡಿಯಲ್ಲಿ ವಾಸ, ನೆಲದ ಮೇಲೆ ಕೂತು ಓದು ಅವರದ್ದು! ತನ್ನ ಬಟ್ಟೆಗಳನ್ನು ತಾನೇ ತೊಳೆದುಕೊಳ್ಳುವ ಮತ್ತು ತನ್ನ ಅಡುಗೆ ತಾನೇ ಮಾಡಿ ಉಣ್ಣುವ ಸ್ವಾವಲಂಬನೆ ಅವರದ್ದು! ಈ ಅವರ ಚಹರೆಯು ಕೊನೆಯವರೆಗೆ ಬದಲಾದದ್ದೆ ಇಲ್ಲ! ಇದೆಲ್ಲ ಅವರು ಆರಾಧನೆ ಮಾಡಿದ ಗಾಂಧೀಜಿಯ ಪ್ರಭಾವ! ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದ ಹೋರಾಟಗಾರ ಅವರು.

ಮೌಲ್ಯಗಳನ್ನು ಬದುಕುವುದು ಹೀಗೆ!
ಅವರ ಆತ್ಮಚರಿತ್ರೆಯ ಪುಸ್ತಕವಾದ ‘ಹೋರಾಟದ ಹಾದಿ’ 450 ಪುಟಗಳ ಒಂದು ಬ್ರಹತ್ ಗ್ರಂಥ! ಪ್ರತಿಯೊಬ್ಬ ಶಿಕ್ಷಕರೂ ಓದಲೇ ಬೇಕಾದ ಪುಸ್ತಕ ಅದು! ಅದರಲ್ಲಿ ನನಗೆ ಪ್ರೇರಣೆ ನೀಡಿದ ನೂರಾರು ಘಟನೆಗಳು ಇವೆ. ಅವುಗಳಲ್ಲಿ ಒಂದೆರಡನ್ನು ಮಾತ್ರ ಇಂದಿನ ಈ ಅಂಕಣದಲ್ಲಿ ಹಂಚಿಕೊಳ್ಳಲು ನನಗೆ ಸಾಧ್ಯ ಆಗುತ್ತಿದೆ.

ಒಮ್ಮೆ ಅವರು ಬೆಂಗಳೂರು ವಿವಿಯ ಉಪಕುಲಪತಿ ಆಗಿದ್ದಾಗ ಅಮೆರಿಕಾದ ಒಂದು ನಿಯೋಗವು ವಿವಿಗೆ ಭೇಟಿ ಕೊಟ್ಟಿತು (1972). ಸಂಜೆ ಆ ನಿಯೋಗದ ಸದಸ್ಯರಿಗೆ ಬೆಂಗಳೂರಿನ ವೆಸ್ಟ್ ಎಂಡ್ ಹೋಟೆಲಿನಲ್ಲಿ ವಾಸ್ತವ್ಯ ಮತ್ತು ಊಟದ ವ್ಯವಸ್ಥೆ ಆಯಿತು. ಎಚ್ ಎನ್ ಸರ್ ಅವರು ಗಾಂಧೀವಾದಿ ಮತ್ತು ಪೂರ್ಣ ಸಸ್ಯಾಹಾರಿ ಆಗಿದ್ದರು. ಅದರಿಂದ ತನ್ನ ಒಬ್ಬ ಸಹೋದ್ಯೋಗಿಗೆ ಹೊಣೆಯನ್ನು ಕೊಟ್ಟು ಅವರನ್ನು ನಿಯೋಗದ ಜೊತೆ ಹೋಟೆಲಿಗೆ ಕಳುಹಿಸಿದರು.

ಮರುದಿನ ಹೋಟೆಲು ಬಿಲ್ಲು ಬಂತು. ಊಟ, ತಿಂಡಿ, ವಾಸ್ತವ್ಯ ಖರ್ಚುಗಳ ಜೊತೆಗೆ ಕುಡಿತದ ಬಿಲ್ಲು 500/ ಬಂದಿತ್ತು! ಅವರಿಗೆ ಭಾರೀ ಸಿಟ್ಟು ಬಂತು. ತನ್ನ ಸಹೋದ್ಯೋಗಿಯನ್ನು ಕರೆದು “ಏನ್ರೀ ಈ ಬಿಲ್ಲು?” ಎಂದು ಗುಡುಗಿದರು. ಅದಕ್ಕೆ ಅವರ ಸಹೋದ್ಯೋಗಿ “ಸರ್, ಅವರು ಅಮೆರಿಕದವರು, ಕುಡಿತ ಇಲ್ಲದೆ ಅವರು ಊಟವನ್ನು ಮಾಡುವುದೇ ಇಲ್ಲ” ಎಂದರು.

ಎಚ್ ಎನ್ ಸರ್ ಅವರಿಗೆ ಈಗ ಪಾಪಪ್ರಜ್ಞೆಯು ಕಾಡಿತು! ವಿದ್ಯಾದಾನವನ್ನು ಮಾಡುವ ಸಂಸ್ಥೆಯೊಂದು ಕುಡಿತದ ಬಿಲ್ಲು ಕೊಡುವುದು ಸರಿಯಲ್ಲ ಎನ್ನುವುದು ಅವರ ಪಾಪ ಪ್ರಜ್ಞೆಗೆ ಕಾರಣ ಆಗಿತ್ತು! ಕೊನೆಗೆ ಅವರು ಕುಡಿತದ ಬಿಲ್ಲು 500 ರೂ.ವನ್ನು ತನ್ನ ಕಿಸೆಯಿಂದ ಕೊಟ್ಟು ಉಳಿದ ಬಿಲ್ಲನ್ನು ವಿವಿಯಿಂದ ಚುಕ್ತಾ ಮಾಡಿದರು!

ಆಸ್ಪತ್ರೆಯ ಬಿಲ್ ಕೂಡ ಕ್ಲೈಮ್ ಮಾಡಿಲ್ಲ!
ಇನ್ನೊಂದು ಘಟನೆಯು ಇನ್ನೂ ಅದ್ಭುತ ಆಗಿದೆ. 1983ರ ಹೊತ್ತಿಗೆ ಅವರು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಆದರು. ಒಮ್ಮೆ ಅವರಿಗೆ ಒಂದು ಆರೋಗ್ಯದ ಸಮಸ್ಯೆಯು ಬಂದು ಅವರು ಆಸ್ಪತ್ರೆಗೆ ದಾಖಲಾದರು. ಅವರಿಗೆ ಒಂದು ದೊಡ್ಡ ಶಸ್ತ್ರಚಿಕಿತ್ಸೆ ಕೂಡ ಆಯಿತು. ಅವರು ವಿಧಾನ ಪರಿಷತ್ ಸದಸ್ಯರಾದ ಕಾರಣ ಅವರು ತನ್ನ ಆಸ್ಪತ್ರೆಯ ಬಿಲ್ಲನ್ನು ಸರಕಾರದ ಮೂಲಕ ಭರಿಸಲು ಅವಕಾಶ ಇತ್ತು. ವಿದೇಶದ ಒಂದು ಆಸ್ಪತ್ರೆಯಲ್ಲಿ ಕೂಡ ಚಿಕಿತ್ಸೆಗೆ ಅವಕಾಶ ಅವರಿಗೆ ಇತ್ತು.

ಆದರೆ ಎಚ್ ಎನ್ ಸರ್ ಅದನ್ನು ಉಪಯೋಗ ಮಾಡಲು ಒಪ್ಪಲೇ ಇಲ್ಲ. ಸರಕಾರಿ ಆಸ್ಪತ್ರೆಗೆ ಅವರು ಅಡ್ಮಿಟ್ ಆದರು. ತನ್ನ ಎಲ್ಲ ಬಿಲ್ ತಾನೇ ಭರ್ತಿ ಮಾಡಿ ಆದರ್ಶ ಮೆರೆದರು! ಅಷ್ಟೂ ಅವಧಿಯಲ್ಲಿ ಸರಕಾರಿ ಕಾರು, ಡ್ರೈವರ್, ಕಚೇರಿ ಖರ್ಚು ಯಾವುದೂ ಉಪಯೋಗ ಮಾಡಲೇ ಇಲ್ಲ!

ಅವರು ನ್ಯಾಷನಲ್ ಕಾಲೇಜು ಪ್ರಿನ್ಸಿಪಾಲ್ ಆಗಿದ್ದಾಗ ಎಲ್ಲಾ ಪ್ರಾಧ್ಯಾಪಕರು ಬೆಳಿಗ್ಗೆ ಮತ್ತು ಮಧ್ಯಾಹ್ನ ಕಾಲೇಜಿಗೆ ಬಂದ ತಕ್ಷಣ ಸಹಿ ಪುಸ್ತಕದಲ್ಲಿ ಸಹಿ ಮಾಡಿ ತರಗತಿಗೆ ಹೋಗಬೇಕಾದ ನಿಯಮ ಇತ್ತು. ಇದನ್ನು ಎಚ್ ಎನ್ ಸರ್ ವಿರೋಧ ಮಾಡಿದರು. ಹೀಗೆ ಮಾಡಿದರೆ ಅದು ಶಿಕ್ಷಕರ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ ಎಂದು ಗಟ್ಟಿಯಾಗಿ ಕಾರಣ ಕೊಟ್ಟು ಆ ಪದ್ಧತಿಯನ್ನು ರದ್ದು ಮಾಡಿದರು!

ಇನ್ನೊಮ್ಮೆ ಪರೀಕ್ಷೆ ಮಾಡುವ ಸಂದರ್ಭ. ಶಿಕ್ಷಕರು ಪರೀಕ್ಷೆ ಹಾಲ್ ಮೇಲ್ವಿಚಾರಣೆ ಮಾಡುವುದು ಸರಿಯಲ್ಲ, ನಾನು ವಿದ್ಯಾರ್ಥಿಗಳ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಹೇಳಿ ಮೇಲ್ವಿಚಾರಣೆ ಇಲ್ಲದೆ ಪರೀಕ್ಷೆ ಮಾಡಿದರು! ವಿದ್ಯಾರ್ಥಿಗಳಿಗೆ ಅವರ ಕಾಳಜಿ ಮತ್ತು ಪ್ರಾಮಾಣಿಕತೆ ಇಷ್ಟ ಆಯಿತು. ಅಷ್ಟೂ ವಿದ್ಯಾರ್ಥಿಗಳು ಕಾಪಿ ಮಾಡುವ ಅವಕಾಶ ಇದ್ದರೂ ಕಾಪಿ ಮಾಡದೆ ಪರೀಕ್ಷೆ ಬರೆದರು! ತಮ್ಮ ಗುರುವಿನ ಭರವಸೆಯನ್ನು ಉಳಿಸಿಕೊಂಡರು!

‘ನಾನು ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವುದೇ ಇಲ್ಲ!’ ಅನ್ನುವುದು ಅವರ ಜೀವನದ ಧ್ಯೇಯವಾಕ್ಯ. ಅವರ ಆತ್ಮಚರಿತ್ರೆಯ ಪುಸ್ತಕದಲ್ಲಿ ಇಂತಹ ನೂರಾರು ಪ್ರೇರಣೆಗಳು ಸಿಗುತ್ತವೆ!

1984ರಲ್ಲಿ ಅವರಿಗೆ ಭಾರತ ಸರಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 2005ರಲ್ಲಿ ಅವರು ತನ್ನ ಅಂತ್ಯಸಂಸ್ಕಾರಕ್ಕೆ ಒಂದು ಸಮಿತಿಯನ್ನು ಮಾಡಿ ಆ ಸಮಿತಿಗೆ ಖರ್ಚಿನ ಹಣವನ್ನು ಮೊದಲೇ ಸಂದಾಯ ಮಾಡಿದರು. ತನ್ನ ಸಾವು ಕೂಡ ಪರಾವಲಂಬಿ ಆಗಬಾರದು ಎನ್ನುವುದು ಅವರ ಕಾಳಜಿ ಆಗಿತ್ತು! ಮುಂದೆ 2005ರಲ್ಲಿ ಅವರು ನಿಧನರಾದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಬಂಗಾಳದ ಸಿಂಹಿಣಿ ಪ್ರೀತಿಲತಾ ವಡ್ಡೆದಾರ್‌ ರಕ್ತಕ್ರಾಂತಿ ಕಥೆ

Exit mobile version