ನನ್ನನ್ನು ತೀವ್ರವಾಗಿ ಕಾಡಿದ ಈ ಮಾನವೀಯ ಅಂತಃಕರಣದ ಕತೆಯನ್ನು ತಮ್ಮ ಮುಂದೆ ಇಡಲು ತುಂಬಾ ಹೆಮ್ಮೆ ಪಡುತ್ತಿದ್ದೇನೆ. ಅವರು ಹರಕ್ ಚಾಂದ್ ಸಾವ್ಲಾ. ಮೂಲತಃ ದೆಹಲಿಯವರು. ಮುಂದೆ ತಮ್ಮ ಕುಟುಂಬದೊಂದಿಗೆ ಅವರು ಮುಂಬೈಗೆ ಬಂದು ಒಂದು ಹೋಟೆಲ್ ಉದ್ಯಮ ಆರಂಭ ಮಾಡುತ್ತಾರೆ. ವ್ಯಾಪಾರ ಚೆನ್ನಾಗಿ ಕೈ ಹಿಡಿಯಿತು ಮತ್ತು ಅವರು ತಮ್ಮ ಕುಟುಂಬದ ಜೊತೆಗೆ ನೆಮ್ಮದಿಯಿಂದ ಬದುಕುತ್ತಿದ್ದರು. ಒಮ್ಮೆ ಅವರ ಬದುಕಲ್ಲಿ ಕೂಡ ಒಂದು ತಿರುವು ಬಂದೇ ಬಿಟ್ಟಿತು!
ಕ್ಯಾನ್ಸರ್ ರೋಗಿಗಳ ಹಸಿವು ಅವರ ನಿದ್ದೆ ಕೆಡಿಸಿತು!
ಅವರು ದಿನವೂ ಮಧ್ಯಾಹ್ನದ ಹೊತ್ತಿಗೆ ಮುಂಬೈಯ ಪ್ರಸಿದ್ಧ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಮುಂದೆ ಸರತಿಯ ಸಾಲಿನಲ್ಲಿ ನಿಲ್ಲುತ್ತಿದ್ದ ರೋಗಿಗಳ ಮುಖದಲ್ಲಿ ಇರುವ ದುಗುಡವನ್ನು ಗಮನಿಸುತ್ತಿದ್ದರು. ಸಣ್ಣ ಸಣ್ಣ ಮಕ್ಕಳು ಕೂಡ ಕ್ಯಾನ್ಸರ್ ಕಾಯಿಲೆಗೆ ಒಳಗಾಗುತ್ತಿದ್ದರು. ಸುತ್ತಮುತ್ತಲಿನ ಪಟ್ಟಣಗಳ ನೂರಾರು ಮಂದಿ ದಿನವೂ ಬಂದು ಆ ಆಸ್ಪತ್ರೆಯ ಮುಂದೆ ಕ್ಯೂ ನಿಲ್ಲುತ್ತಿದ್ದರು. ಕೆಲವೊಮ್ಮೆ ಬೆಳಿಗ್ಗೆ ಕ್ಯೂ ನಿಂತರೆ ಸಂಜೆಯವರೆಗೆ ಬಿಸಿಲಲ್ಲಿ ನಿಲ್ಲಬೇಕಾಗುತಿತ್ತು. ಮಳೆಗಾಲದಲ್ಲಿ ಕೂಡ ಅದೇ ಪಾಡು. ಆ ಜನರ ಕಣ್ಣಲ್ಲಿ ಇದ್ದ ಅವ್ಯಕ್ತ ಭೀತಿ ಮತ್ತು ಆತಂಕಗಳು ಅವರ ನಿದ್ದೆ ಕೆಡಿಸಿದವು! ನೆಮ್ಮದಿಯು ಹಾಳಾಯಿತು. ಆ ಜನರ ಹಸಿವು ಇಂಗಿಸಲು ಏನಾದರೂ ಮಾಡಬೇಕು ಎಂಬ ತುಡಿತ ಹೆಚ್ಚಾದಂತೆ ಅವರು ತಮ್ಮ ಕುಟುಂಬದ ಜೊತೆಗೆ ಚರ್ಚಿಸಿ ತಕ್ಷಣ ನಿರ್ಧಾರಕ್ಕೆ ಬಂದರು.
ಟಾಟಾ ಆಸ್ಪತ್ರೆಯ ಮುಂದೆ ಆರಂಭ ಆಯ್ತು ಉಚಿತ ಊಟದ ವ್ಯವಸ್ಥೆ!
ನಿರ್ಧಾರ ಏನೋ ಆಯ್ತು. ಆದರೆ ಅವರ ಹತ್ತಿರ ಯಾವುದೇ ಯೋಜನೆ ಇರಲಿಲ್ಲ. ತುಂಬಾ ದುಡ್ಡು ಕೂಡ ಇರಲಿಲ್ಲ. ಆದರೆ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲು ಸಾಧ್ಯವೇ ಇರಲಿಲ್ಲ! ಮೊದಲ ಹೆಜ್ಜೆಯಾಗಿ ಅವರು ತಮ್ಮ ಒಳ್ಳೆಯ ವ್ಯಾಪಾರ ಬರುತ್ತಿದ್ದ ಹೋಟೆಲನ್ನು ಬಾಡಿಗೆಗೆ ಕೊಟ್ಟರು. ತಮ್ಮ ಕೆಲವು ಗೆಳೆಯರಿಂದ ಆರ್ಥಿಕ ನೆರವು ಪಡೆದರು. ಅದು ಕೂಡ ಕಡಿಮೆ ಆದಾಗ ಮತ್ತೆ ಸಾಲ ಮಾಡಿದರು. ಒಂದು ಒಳ್ಳೆಯ ದಿನದಂದು ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಮುಂದೆ ಹಸಿದು ನಿಂತಿದ್ದ ರೋಗಿಗಳಿಗೆ, ಮಕ್ಕಳಿಗೆ ಮತ್ತು ಅವರ ಸಂಬಂಧಿಕರಿಗೆ ಉಚಿತ ಊಟದ ವ್ಯವಸ್ಥೆ ಆರಂಭ ಆಯಿತು. ಸ್ವತಃ ಸಾವ್ಲಾ ಅವರು ಮುಂದೆ ನಿಂತು ಹಸಿದವರಿಗೆ ಊಟ ಬಡಿಸಿದರು. ಅಂದು ರಾತ್ರಿ ಅವರಿಗೆ ಏನೋ ಧನ್ಯತೆಯ ಭಾವ. ರಾತ್ರಿ ನೆಮ್ಮದಿಯ ನಿದ್ರೆ. ಅಂದು ಊಟ ಮಾಡಿದವರ ಸಂಖ್ಯೆ 70!
ತುಂಬಾ ಪ್ರೀತಿಯಿಂದ ಬಡಿಸುತ್ತಿದ್ದ ಕಾರಣ ಮರುದಿನದಿಂದ ಜನರ ಸಂಖ್ಯೆಯು ಹೆಚ್ಚಾಯಿತು. ಸಾವ್ಲಾ ಅವರ ಸೇವಾ ಮನೋಭಾವವನ್ನು ನೋಡಿದ ಹಲವು ದಾನಿಗಳು ಮುಂದೆ ಬಂದು ಧನಸಹಾಯ ಮಾಡಿದರು. ಆಗ ಆರಂಭ ಆದದ್ದೇ ‘ಮಾನವ ಸಹಯೋಗಿ ವೆಲ್ಫೇರ್ ಸಂಸ್ಥೆ!’
ಕಳೆದ ಮೂವತ್ತು ವರ್ಷಗಳಿಂದ ನಿಲ್ಲದ ಅನ್ನದಾನ ಸೇವೆ!
70 ಜನರಿಂದ ಆರಂಭವಾದ ಅನ್ನದಾನ ಸೇವೆ ಮುಂದೆ ನೂರು, ಇನ್ನೂರು, ಮುನ್ನೂರು..ಹೀಗೆ ಏರುತ್ತ ಈಗ 700 ಜನರವರೆಗೂ ತಲುಪಿದೆ! ಬೇಸಿಗೆ, ಮಳೆಗಾಲ, ಚಳಿಗಾಲ ಯಾವ ಅವಧಿಯಲ್ಲಿ ಕೂಡ ಈ ಸೇವೆಯು ನಿಂತಿಲ್ಲ! ತೀವ್ರ ಕೊರೊನಾ ಸಂದರ್ಭದಲ್ಲಿ ಕೂಡ ಅನ್ನದಾನ ಸೇವೆಯನ್ನು ಅವರು ನಿಲ್ಲಿಸಿಲ್ಲ ಅನ್ನುವುದು ಸಾವ್ಲಾ ಅವರ ಹೆಗ್ಗಳಿಕೆ! ಹಲವು ಜನ ಸ್ವಯಂಸೇವಕರು ಅವರಿಗೆ ಊಟ ಬಡಿಸಲು ಈಗ ನೆರವು ನೀಡುತ್ತಿದ್ದಾರೆ. ಅವರು ಯಾರನ್ನೂ ನೆರವು ನೀಡಿ ಎಂದು ಕೇಳದಿದ್ದರೂ ತೆರೆಮರೆಯ ಹಲವು ದಾನಿಗಳು ಅವರಿಗೆ ನೆರವು ನೀಡುತ್ತಾ ಬಂದಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಈ ಅನ್ನದಾನದ ಸೇವೆಯು ನಿಂತಿಲ್ಲ ಅಂದರೆ ನಿಜಕ್ಕೂ ಅವರು ಗ್ರೇಟ್! ಪ್ರತೀ ತಿಂಗಳೂ ಅವರಿಗೆ 8-10 ಲಕ್ಷ ರೂಪಾಯಿ ಖರ್ಚು ಬರುತ್ತಿದ್ದು ಯಾವತ್ತೂ ದುಡ್ಡಿಗೆ ತೊಂದರೆ ಆಗಿಲ್ಲ ಅನ್ನುತ್ತಾರೆ ಸಾವ್ಲಾ ಸರ್!
ಸೇವಾ ಚಟುವಟಿಕೆಯ ವಿಸ್ತರಣೆ!
ತನ್ನ ಸೇವಾ ಮನೋಭಾವದಿಂದ ದೊರೆತ ಜನರ ಪ್ರೀತಿ ಮತ್ತು ಬೆಂಬಲದಿಂದ ಸಂಭ್ರಮಪಟ್ಟ ಅವರು ಮುಂದೆ ಇನ್ನಷ್ಟು ಸೇವಾ ಕ್ಷೇತ್ರವನ್ನು ವಿಸ್ತರಿಸಿದರು. ಮೂರು ಜನ ಸೇವಾಸಕ್ತ ವೈದ್ಯರನ್ನು ಸಂಪರ್ಕಿಸಿ, ಅವರ ಮನಸನ್ನು ಒಲಿಸಿ ಅದೇ ಜಾಗದಲ್ಲಿ ಒಂದು ಉಚಿತ ತಪಾಸಣಾ ಕ್ಲಿನಿಕ್ ಆರಂಭ ಮಾಡಿದರು. ಮೂರು ಜನ ಔಷಧ ವ್ಯಾಪಾರಿಗಳ ಬೆಂಬಲ ಪಡೆದು ಒಂದು ಔಷಧ ಬ್ಯಾಂಕ್ ಸ್ಥಾಪನೆ ಮಾಡಿದರು. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಆಟವಾಡಲು ಒಂದು ಆಟಿಕೆಗಳ ಬ್ಯಾಂಕ್ ಮಾಡಿದರು. ಪ್ರತೀ ವರ್ಷ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಒಂದು ದಿನದ ಉಚಿತ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಪರಿಪಾಠ ಆರಂಭ ಮಾಡಿದರು. ತನ್ನ ಮಾನವ ಸಹಯೋಗ ವೆಲ್ಫೇರ್ ಅಸೋಸಿಯೇಶನ್ ಮೂಲಕ ಏನೆಲ್ಲ ಮಾಡಲು ಸಾಧ್ಯ ಇದೆಯೋ ಅದನ್ನೆಲ್ಲ ಮಾಡುತ್ತಾ ಹೋದರು. ತಮ್ಮ ಸೇವಾ ಚಟುವಟಿಕೆಗಳಿಗೆ ನಿಧಿಯನ್ನು ಸಂಗ್ರಹ ಮಾಡಲು ಜೀವನ ಜ್ಯೋತಿ ಟ್ರಸ್ಟ್ ( ರಿ) ಅವರು ಸ್ಥಾಪನೆ ಮಾಡಿದರು.
ತನ್ನ ಮಾನವ ಸಹಯೋಗ ಸಂಸ್ಥೆ ಮತ್ತು ಜೀವನ ಜ್ಯೋತಿ ಟ್ರಸ್ಟ್ ಮೂಲಕ ಅವರು ಮಧ್ಯಾಹ್ನದ ಹೊತ್ತು ಹಸಿದು ಬರುವ ಲಕ್ಷಾಂತರ ಮಂದಿಗೆ ಹೊಟ್ಟೆ ತುಂಬ ಊಟ ಬಡಿಸಿದ ಸೇವೆಯಿಂದ ಸಂತೃಪ್ತಿ ಪಟ್ಟಿದ್ದಾರೆ. ಇತ್ತೀಚೆಗೆ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಮಂತ್ರಣ ಪಡೆದಿದ್ದರು. ಅಲ್ಲಿ ದೊರೆತ ಅಷ್ಟೂ ದುಡ್ಡನ್ನು ಕೂಡ ತನ್ನ ಸೇವಾ ಕಾರ್ಯಕ್ಕೆ ಅವರು ವಿನಿಯೋಗ ಮಾಡಿದ್ದಾರೆ.
ಈಗ ಹರಕ್ ಚಾಂದ್ ಸಾವ್ಲಾ ಅವರಿಗೆ 57 ವರ್ಷ.
“ಸ್ವಾರ್ಥ ಇಲ್ಲದ ಯಾವುದೇ ಸೇವಾ ಯೋಜನೆಯು ದುಡ್ಡಿನ ಕೊರತೆಯಿಂದ ನಿಲ್ಲುವುದಿಲ್ಲ ಎಂದು ನಾನು ಪ್ರೂವ್ ಮಾಡಿದ್ದೇನೆ. ಹಸಿದವರ ರೂಪದಲ್ಲಿ ಬರುವ ದೇವರು ಯಾವತ್ತೂ ನನ್ನ ಕೈ ಬಿಟ್ಟಿಲ್ಲ!” ಅನ್ನುತ್ತಾರೆ ಅವರು.
ಅವರಿಗೆ ಒಮ್ಮೆ ಧನ್ಯವಾದ ಹೇಳೋಣ ಅಲ್ಲವೇ?
(ಇಂಟರ್‌ನೆಟ್‌ನಲ್ಲಿ ದೊರೆತ ಒಂದು ಕತೆಯಿಂದ ಸ್ಫೂರ್ತಿ ಪಡೆದಿದ್ದೇನೆ)
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಮೌಂಟ್ ಎವರೆಸ್ಟ್ ಹತ್ತಿ ನಿಂತ ಮಾರ್ಕ್ ಇಂಗ್ಲಿಸ್‌ಗೆ ಎರಡೂ ಕಾಲು ಇರಲಿಲ್ಲ! ಹೇಗೆ ಸಾಧ್ಯ ಇದು?