Site icon Vistara News

ರಾಜ ಮಾರ್ಗ ಅಂಕಣ : ಅಪ್ಪ ಕೂಲಿ ಕಾರ್ಮಿಕ, ಅಮ್ಮ ಕುರುಡಿ, ಮಗ ಕಿವುಡ…ಆದರೂ ಕನಸು ದೊಡ್ಡದು!

raja-marga-column story-of ias offficer whose father was a labourer, mother is blind, He himself is deaf, But….

raja-marga-column story-of ias offficer whose father was a labourer, mother is blind, He himself is deaf, But….

ಇದು IAS ಪಾಸಾಗಲು ಹದಿನೈದು ವರ್ಷಗಳ ಹೋರಾಟ ಮಾಡಿದ ಮನೀರಾಮ್ ಅವರ ಕಥೆ! ಅವರು ಖಂಡಿತವಾಗಿಯೂ ಗ್ರೇಟ್! SKY IS THE LIMIT FOR HIS PASSION OF ACHIEVING IAS! ಮನೀರಾಮ್ ಶರ್ಮಾ ಅವರ ಹೋರಾಟದ ಕಥೆಯನ್ನು ಕೇಳಿದರೆ ನೀವು ಖಂಡಿತವಾಗಿ ಶಾಭಾಶ್ ಎನ್ನುತ್ತೀರಿ!

ಪೂರ್ತಿ ಕಿವುಡುತನ ಇರುವ ಹುಡುಗನಿಗೆ ಓದುವ ಆಸೆ!

ಹುಟ್ಟಿದ್ದು ರಾಜಸ್ಥಾನದ ಒಂದು ಪುಟ್ಟ ಊರಿನಲ್ಲಿ. ಅಪ್ಪ ಕೂಲಿ ಕಾರ್ಮಿಕ. ಅಮ್ಮ ಪೂರ್ತಿ ಕುರುಡಿ ಮತ್ತು ಕಿವುಡಿ. ಅವರ ಕುಟುಂಬದಲ್ಲಿ ಯಾರೂ ಶಾಲೆಯ ಮುಖವನ್ನು ನೋಡಿರಲಿಲ್ಲ. ಬಡತನವೇ ಅವರ ಮನೆಯ ಬಹು ದೊಡ್ಡ ಆಸ್ತಿ! 5ನೆಯ ವರ್ಷದಲ್ಲಿ ಮಗನಿಗೆ ಕಿವಿ ಕೇಳುವ ಸಾಮರ್ಥ್ಯ ಕಡಿಮೆ ಆಯಿತು. 9ನೆಯ ವರ್ಷಕ್ಕೆ ಪೂರ್ತಿಯಾಗಿ ಕಿವುಡುತನ! ಹೆತ್ತವರಿಗೆ ಆತಂಕ ಆರಂಭ. ಆದರೆ ಅವರಿಗೆ ಮಗ ಓದಬೇಕೆಂದು ಆಸೆ. ಅವರಿದ್ದ ಊರಲ್ಲಿ ಶಾಲೆ ಇರಲಿಲ್ಲ. 4 ಕಿಲೋಮೀಟರ್ ದೂರದ ಶಾಲೆ. ನಡೆದುಕೊಂಡು ಹೋಗಬೇಕು. ಬೇರೆ ದಾರಿ ಇಲ್ಲ. ವಾಹನದ ವ್ಯವಸ್ಥೆ ಇಲ್ಲ. ರಸ್ತೆ ಕೂಡ ಇರಲಿಲ್ಲ.

ಕಿವುಡುತನ ಮೆಟ್ಟಿ ನಿಲ್ಲಲು ಮನೀರಾಮ್ ನಿರಂತರ ಪ್ರಯತ್ನ!

ಸ್ಕೂಲಿನಲ್ಲಿ ಅಧ್ಯಾಪಕರೊಂದಿಗೆ ಮತ್ತು ಸಹಪಾಠಿಗಳೊಂದಿಗೆ ಬೆರೆಯಲು ಕಿವುಡುತನವು ಅಡ್ಡಿ ಆಯಿತು. ಅಪಮಾನ, ನಾಚಿಕೆ, ಕೀಳರಿಮೆ ಎಲ್ಲವೂ ಸೇರಿ ಪಡಬಾರದ ಕಷ್ಟ ಪಟ್ಟರು. ಆಗ ಅವರಿಗೆ ಇದ್ದ ಒಂದೇ ಒಂದು ಕನಸೆಂದರೆ ಹೆತ್ತವರಿಗೆ ಆಧಾರವಾಗಬೇಕು ಎಂಬುದು ಮಾತ್ರ.

ಶಾಲೆಯಲ್ಲಿ ಶಿಕ್ಷಕರ ಮಾತು ಒಂದಿಷ್ಟೂ ಕೇಳುತ್ತಿರಲಿಲ್ಲ. ಅವರ ದೇಹಭಾಷೆಯನ್ನು ನೋಡಿ ಅರ್ಥ ಮಾಡಲು ಪ್ರಯತ್ನಪಟ್ಟರು. ಹೆಚ್ಚು ಪಠ್ಯಪುಸ್ತಕ ಓದಿದರು. ಹೆಚ್ಚು ಬರೆದು ಕಲಿತರು. ನಿಧಾನಕ್ಕೆ ಆತ್ಮವಿಶ್ವಾಸವು ಚಿಗುರಿತು. SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೆ ರ‍್ಯಾಂಕ್ ಬಂತು! PUCಯಲ್ಲಿ ರಾಜ್ಯಕ್ಕೆ ಏಳನೇ ರ‍್ಯಾಂಕ್ ಬಂತು! ಮುಂದೆ ತುಂಬಾ ಓದಬೇಕು ಎನ್ನುವ ನಿರ್ಧಾರವು ಆಗಲೇ ಗಟ್ಟಿಯಾಗಿತ್ತು.

ಅಪ್ಪ ಮಗನನ್ನು ಆಲ್ವಾರ್ ನಗರದ ಸರಕಾರಿ ಕಾಲೇಜಿಗೆ ಸೇರಿಸಿದರು. ಖರ್ಚಿಗೆ ತಿಂಗಳಿಗೆ 25 ರೂಪಾಯಿ ಕಳುಹಿಸುತ್ತಿದ್ದರು. ಮಗ ಬಾಡಿಗೆ ರೂಮಲ್ಲಿ ತಾನೇ ಅಡಿಗೆ ಮಾಡಿ ಓದತೊಡಗಿದರು. BA ಪದವಿಯಲ್ಲಿ ವಿವಿಗೆ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ ಪಡೆದರು!

ನಿಧಾನಕ್ಕೆ ಚಿಗುರಿತು ಐಎಎಸ್ ಕನಸು!

ಅದೇ ಹೊತ್ತಿಗೆ ಶಾಲೆಯೊಂದರಲ್ಲಿ ಗುಮಾಸ್ತನ ಕೆಲಸವು ದೊರೆಯಿತು. ಆಗ ಕೆಲವು ಐಎಎಸ್ ಅಧಿಕಾರಿಗಳ ಪರಿಚಯ ಆಯಿತು. ಇದರಿಂದ ಹೊಸ ಕನಸು ಚಿಗುರಿತು. ಒಂದೇ ವರ್ಷಕ್ಕೆ ಗುಮಾಸ್ತನ ಕೆಲಸಕ್ಕೆ ರಾಜೀನಾಮೆಯನ್ನು ನೀಡಿ ಮತ್ತೆ ಓದಲು ಶುರುಮಾಡಿದರು. ಆತನ ಮೆಮೊರಿ ಪವರ್ ಅದ್ಭುತವೇ ಆಗಿತ್ತು. ಜ್ಞಾನ ದಾಹಕ್ಕೆ ಮಿತಿಯೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಹೋರಾಟದ ಸಂಕಲ್ಪವು ಇತ್ತು!

ಹಾಗಿರುವಾಗ ಸೋಲು ಕೂಡ ಹತ್ತಿರ ಬರಲು ಹೆದರುತ್ತದೆ!

ರಾಜನೀತಿ ಶಾಸ್ತ್ರದಲ್ಲಿ MA, ಕೆ ಸೆಟ್ ಮತ್ತು ನೆಟ್ ಪರೀಕ್ಷೆಗಳನ್ನು ಅವರು ಒಂದೇ ಉಸಿರಿಗೆ ಪೂರ್ತಿ ಮಾಡಿದರು. ತನ್ನ ಶಿಕ್ಷಣದ ವೆಚ್ಚಕ್ಕೆ ಟ್ಯೂಷನ್ ಮಾಡಿ ಹಣವನ್ನು ತಾವೇ ಹೊಂದಿಸಿಕೊಂಡರು. Ph.D ಕೂಡ ಪೂರ್ತಿಯಾಯಿತು.
ಮುಂದೆ ಐದು ವರ್ಷ ಟೆಂಕ್ ನಗರದ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದರು. ವಿದ್ಯಾರ್ಥಿಗಳು ತಮ್ಮ ಡೌಟನ್ನು ಒಂದು ಚೀಟಿಯಲ್ಲಿ ಬರೆದುಕೊಟ್ಟಾಗ ಸರಿಯಾದ ಉತ್ತರವನ್ನು ಕೊಡುತ್ತಿದ್ದರು ಮನೀರಾಂ. ಅಲ್ಲಿಯೇ RAS ಪರೀಕ್ಷೆ (ಕರ್ನಾಟಕದ KAS ತತ್ಸಮಾನ ಪರೀಕ್ಷೆ) ಬರೆದು ಪಾಸಾದರು. ಆಗ ಮುಜರಾಯಿ ಇಲಾಖೆಯಲ್ಲಿ ಅಧಿಕಾರಿ ಹುದ್ದೆಯು ದೊರೆಯಿತು. ಇನ್ನು ಬಾಕಿ ಇರುವುದು ಒಂದೇ ಒಂದು ದೊಡ್ಡ ಕನಸು, ಹೌದು, ಅದು ಐಎಎಸ್!

ಯಾವ IAS ವಿದ್ಯಾರ್ಥಿ ಕೂಡ ಇಷ್ಟೊಂದು ಕಷ್ಟಪಟ್ಟ ನಿದರ್ಶನ ಇಲ್ಲ!

ಅದು 15 ವರ್ಷಗಳ ನಿರಂತರ ಹೋರಾಟ. ತಪಸ್ಸು ಅಂದರೆ ಹೆಚ್ಚು ಸರಿ. ಬರೇ ಹುಚ್ಚು ಸಾಹಸ ಅಂತ ನೀವು ಕರೆದರೂ ಸರಿಯೇ!

ಮನೀರಾಮ್ 1995ರಲ್ಲಿ ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಫೇಲ್ ಆದರು. ಆದರೆ ಪ್ರಯತ್ನವನ್ನು ಮಾತ್ರ ಕೈ ಬಿಡಲಿಲ್ಲ. ಹತ್ತು ವರ್ಷ ಮತ್ತೆ ಓದಿದರು. 2005ರಲ್ಲಿ ಎರಡನೇ ಬಾರಿ ಐಎಎಸ್ ಪರೀಕ್ಷೆ ಬರೆದರು ಮತ್ತು 27ನೇ ರ‍್ಯಾಂಕ್ ಪಡೆದು ತೇರ್ಗಡೆ ಆದರು. ಆದರೆ ಕಿವುಡುತನದ ಕಾರಣಕ್ಕೆ ಸರಕಾರದ ಸಣ್ಣ ಇಲಾಖೆಯಲ್ಲಿ ಅಧಿಕಾರಿ ಹುದ್ದೆಯು ದೊರೆಯಿತು.‌ ಮಹತ್ವಾಕಾಂಕ್ಷೆ ಇರುವವರು ತಮ್ಮ ಕನಸಿನೊಂದಿಗೆ ಎಂದಿಗೂ ರಾಜಿ ಆಗುವುದಿಲ್ಲ!

ಮನೀರಾಮ್ ರಾಜೀನಾಮೆಯನ್ನು ಕೊಟ್ಟರು ಮತ್ತೆ 2006ರಲ್ಲಿ ಐಎಎಸ್ ಪರೀಕ್ಷೆಯನ್ನು ಮೂರನೇ ಬಾರಿ ಬರೆದರು. 978ನೆಯ ರ‍್ಯಾಂಕ್ ಪಡೆದು ಪಾಸಾದರು!

ಸಾಧಕನ ಕುರ್ಚಿಯಲ್ಲಿ…

ದೇವರು ಕೊಟ್ಟರೂ ಪೂಜಾರಿ ಬಿಡ!

ಆದರೆ ಈ ಬಾರಿ ಮನೀರಾಮ್ ಅವರಿಗೆ ಇನ್ನೊಂದು ಸಮಸ್ಯೆಯು ಎದುರಾಯಿತು. ವೈದ್ಯಕೀಯ ಮಂಡಳಿಯ ಅಧಿಕಾರಿಗಳು ಸಂದರ್ಶನದಲ್ಲಿ ಫಿಟ್ನೆಸ್ ಪ್ರಮಾಣಪತ್ರ ಕೊಡಲು ಒಪ್ಪಲೇ ಇಲ್ಲ. ‘ ಕಿವುಡುತನ ಇರುವವರು ಫೋನ್ ಅಟೆಂಡ್ ಮಾಡಲು ಸಾಧ್ಯವೇ ಇಲ್ಲ. ಬೇರೆಯವರ ಮಾತುಗಳನ್ನು ಆಲಿಸುವುದು ಹೇಗೆ ಸಾಧ್ಯ? ನಿಮಗೆ ಐಎಎಸ್ ಅಧಿಕಾರಿ ಹುದ್ದೆ ನೀಡುವುದು ಹೇಗೆ?’ ಎನ್ನುವುದು ಅವರ ಪ್ರಶ್ನೆ. ಒಮ್ಮೆ ಆಕಾಶದಿಂದ ಪಾತಾಳಕ್ಕೆ ದೂಡಿದ ಅನುಭವ ಮನೀರಾಮ್ ಅವರಿಗೆ ಆಯಿತು.

ಬೇರೆ ಯಾರಾದರೂ ಆಗಿದ್ದರೆ ತನ್ನ ಕನಸುಗಳನ್ನು ಕೈಬಿಡುತ್ತಿದ್ದರು! ಆದರೆ ಮನೀರಾಮ್ ಬಿಡಬೇಕಲ್ಲ!

ದೆಹಲಿಯ ರಾಮಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಕಿವುಡುತನಕ್ಕೆ ಶಸ್ತ್ರಚಿಕಿತ್ಸೆಯ ಮೂಲಕ ಶಾಶ್ವತ ಪರಿಹಾರವು ಲಭ್ಯವಿದೆ. ಅದಕ್ಕೆ ಏಳೂವರೆ ಲಕ್ಷ ರೂಪಾಯಿ ವೆಚ್ಚ ಆಗುತ್ತದೆ ಎಂಬ ಮಾಹಿತಿಯು ದೊರೆಯಿತು. ಅದುವರೆಗೆ ಉಳಿತಾಯದ ಹಣ, ಬ್ಯಾಂಕಲ್ಲಿ ಸಾಲ ಮಾಡಿದ ಹಣ ಹೊಂದಿಸಿ ಶಸ್ತ್ರಚಿಕಿತ್ಸೆ ನಡೆಯಿತು.ಆಗ 50% ಶ್ರವಣ ಸಾಮರ್ಥ್ಯವು ಮರಳಿತು. ಮತ್ತೆ ಒಂದು ವರ್ಷ ಸ್ಪೀಚ್ ಥೆರಪಿ ಆಯಿತು.

ಅವರ ಇಚ್ಛಾಶಕ್ತಿಯ ಎದುರು UPSC ಶರಣಾಯಿತು!

2010ರಲ್ಲಿ ನಾಲ್ಕನೆಯ ಬಾರಿಗೆ ಐಎಎಸ್ ಪರೀಕ್ಷೆಯನ್ನು ಬರೆದರು ಮನೀರಾಂ. ಈ ಬಾರಿ ಪಾಸಾಯಿತು ಮತ್ತು ಫಿಟ್ನೆಸ್ ಪ್ರಮಾಣವೂ ದೊರೆಯಿತು! ಅವರ ಇಚ್ಛಾ ಶಕ್ತಿಯ ಎದುರು UPSC ಶರಣಾಯಿತು! ಅವರು ತನ್ನ ಅದ್ಭುತವಾದ ಕನಸನ್ನು ಗೆದ್ದಾಗಿತ್ತು!

ಅವರಿಗೆ ಪಲವಾಲ್ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ನೇಮಕ ದೊರೆಯಿತು. ನಂತರ ಪ್ರಧಾನಮಂತ್ರಿಯವರ ಕಾರ್ಯಾಲಯದಲ್ಲಿ ಬಹುದೊಡ್ಡ ಅಧಿಕಾರಿ ಹುದ್ದೆ. ಮನೀರಾಮ್ ಅವರ ಶ್ರೇಷ್ಠ ಸೇವೆಯನ್ನು ಗುರುತಿಸಿ ಅಂದಿನ ರಾಷ್ಟ್ರಪತಿ ರಮಾನಾಥ್ ಕೋವಿಂದ ಅವರಿಂದ ಪ್ರಶಸ್ತಿಯು ದೊರೆತಿದೆ!

ಭರತ ವಾಕ್ಯ

ಈಗ ನೀವೇ ಹೇಳಿ. ಅತ್ಯಂತ ಪ್ರಬಲವಾದ ಇಚ್ಛಾಶಕ್ತಿ, ಬಹಳ ದೊಡ್ಡ ಕನಸು, ಸಾಧನೆಯ ಹಸಿವು, ಸೇವಾ ಮನೋಭಾವ, ಬದುಕು ಕಟ್ಟುವ ಹಂಬಲಗಳು ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಒಂದು ಕನಸಿನ ಪರೀಕ್ಷೆಗಾಗಿ 15 ವರ್ಷ ಉಸಿರು ಕಟ್ಟಿ ಓದಿದ, ನಾಲ್ಕು ಬಾರಿ ಪರೀಕ್ಷೆ ಬರೆದು ಕೊನೆಗೂ ಗೆದ್ದ ಮನೀರಾಮ್ ಬದುಕು ಯಾರಿಗೆ ಸ್ಫೂರ್ತಿ ಕೊಡುವುದಿಲ್ಲ ಹೇಳಿ!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಲೈಂಗಿಕ ಸಂತ್ರಸ್ತರ ಆಶಾಕಿರಣ ಸುನೀತಾ ಕೃಷ್ಣನ್; ಆಕೆಯ ಹೋರಾಟ ನಮ್ಮ ಕಲ್ಪನೆಗೂ ಮೀರಿದ್ದು!

Exit mobile version