Site icon Vistara News

Raja Marga Column : ಅಜೀಂ ಪ್ರೇಮ್‌ಜಿ ಎಂಬ ಭಾರತದ ಭಾಗ್ಯ; ದಾನ ಮಾಡುವುದನ್ನು ಇವರಿಂದ ಕಲೀಬೇಕು!

Azim Premji a great Philonthropist

ಅಜೀಂ ಪ್ರೇಂಜಿ (Azim Hashim Premji) ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ವಿಪ್ರೋ ಕಂಪೆನಿಯ (Wipro Limited) ಮೂಲಕ ಜಗತ್ತಿನ ಶ್ರೇಷ್ಠ ಉದ್ಯಮಿಗಳ ಪಟ್ಟಿಯಲ್ಲಿ (Indian businessman) ಸ್ಥಾನ ಪಡೆದವರು ಅವರು. 1945 ಜುಲೈ 24ರಂದು ಜನಿಸಿದ ಅಜೀಂ ಪ್ರೇಂಜಿ ಅವರು ಅತ್ಯಂತ ಪರಿಶ್ರಮದಿಂದ ಈ ಎತ್ತರವನ್ನು ತಲುಪಿದವರು. ಅವರ ತಂದೆ ಶ್ರದ್ಧಾವಂತ ಮುಸ್ಲಿಂ ಆಗಿದ್ದು ಅಕ್ಕಿ ವ್ಯಾಪಾರಿ ಆಗಿದ್ದರು. ಪಾಕಿಸ್ತಾನ್ ರಚನೆ ಆದಾಗ ಮೊಹಮದ್ ಆಲಿ ಜಿನ್ನಾ ಅವರು ಅವರನ್ನು ಪಾಕಿಸ್ತಾನಕ್ಕೆ ಬಂದು ನೆಲೆಸುವಂತೆ ಆಮಂತ್ರಣ ಮಾಡಿದ್ದರು. ಆದರೆ ಅದನ್ನು ನಿರಾಕರಣೆ ಮಾಡಿ ಅವರು ಭಾರತದಲ್ಲಿಯೇ ಉಳಿದರು. ಅದು ಭಾರತದ ಭಾಗ್ಯ (Raja Marga Column) ಎಂದೇ ಹೇಳಬಹುದು.

ವಿದೇಶದಲ್ಲಿ ಕಲಿತು ಬಂದ ಅಜೀಂ ಪ್ರೇಂಜಿ ಅವರು ವಿಪ್ರೋ ಸಾಫ್ಟ್ ವೇರ್ ಕಂಪನಿ (Wipro software Company) ಆರಂಭ ಮಾಡಿದರು. 1999-2005ರ ಅವಧಿಯಲ್ಲಿ ಅವರು ಭಾರತದ ನಂಬರ್ ಒನ್ ಉದ್ಯಮಿಯಾಗಿ ಇದ್ದರು ಎಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿತ್ತು! ಅವರೇ ಸ್ಥಾಪನೆ ಮಾಡಿದ ವಿಪ್ರೋ ಸಾಫ್ಟ್‌ವೇರ್ ಕಂಪೆನಿಯ 84% ಶೇರ್‌ಗಳು ಅವರ ಹೆಸರಲ್ಲಿ ಇದ್ದವು! ಏಷಿಯಾ ವೀಕ್ ಪತ್ರಿಕೆ ಮಾಡಿದ ಸಮೀಕ್ಷೆಯಲ್ಲಿ ಅವರು ಏಷಿಯಾದ ಟಾಪ್ ಟೆನ್ ಪಟ್ಟಿಯಲ್ಲಿ ಇದ್ದರು. ಟೈಮ್ಸ್ ಮ್ಯಾಗಜೀನ್ ನಡೆಸಿದ ಸಮೀಕ್ಷೆಯಲ್ಲಿ ಅವರು ಜಗತ್ತಿನ ನೂರು ಅತ್ಯಂತ ಪ್ರಭಾವೀ ಉದ್ಯಮಿಗಳಲ್ಲಿ ಸ್ಥಾನ ಪಡೆದಿದ್ದರು. ಭಾರತದಲ್ಲಿ ಅವರು ಎರಡನೇ ಸ್ಥಾನದಲ್ಲಿ ದೀರ್ಘ ಅವಧಿಗೆ ವಿರಾಜಮಾನ ಆಗಿದ್ದರು.

ಉನ್ನತ ಉದ್ಯಮಿಗಳ ಸಾಲಿನಲ್ಲಿ ಅಜೀಮ್‌ ಪ್ರೇಮ್‌ ಜಿ

CSR ಚಟುವಟಿಕೆಯಲ್ಲಿ ಅಜೀಂ ಎಲ್ಲರಿಗಿಂತ ಮುಂದೆ!

ತನ್ನ ಆದಾಯದಲ್ಲಿ ಒಂದು ರೂಪಾಯಿ ಕೂಡ ಕಪ್ಪು ಹಣ ಇಲ್ಲ ಎಂದು ಅವರು ಘಂಟಾ ಘೋಷವಾಗಿ ಹೇಳಿದ್ದಾರೆ! ಅತೀ ಹೆಚ್ಚು ಆದಾಯ ತೆರಿಗೆಯನ್ನು ಕಟ್ಟುವ ಭಾರತದ ಉದ್ಯಮಿಗಳ ಪಟ್ಟಿಯಲ್ಲಿ ಅವರು ಟಾಪ್ ಮೋಸ್ಟ್ ಸ್ಥಾನದಲ್ಲಿ ಇದ್ದಾರೆ. ಅದೇ ರೀತಿ CSR ಚಟುವಟಿಕೆಯಲ್ಲಿ ಕೂಡ ಅವರು ಸಾಕಷ್ಟು ಮುಂದೆ ಇದ್ದಾರೆ. ಹಾಗೆಯೇ ಸಾವಿರಾರು ಮಂದಿ ಯುವಜನತೆಗೆ ಉದ್ಯೋಗ ನೀಡಿದ ಹೆಮ್ಮೆ ಹೊಂದಿದ್ದಾರೆ.

ಅಜೀಂ ಪ್ರೇಂಜಿ ಅವರು ಇತರ ಉದ್ಯಮಿಗಳ ಹಾಗಲ್ಲ. ಅವರ ಆದ್ಯತೆಗಳು ಮತ್ತು ಯೋಚನೆಗಳು ಇತರರಿಗಿಂತ ತುಂಬಾ ಭಿನ್ನವಾಗಿವೆ. ಅವರು ಒಂದು ಮಹಾ ಉದ್ದೇಶ ಹೊತ್ತುಕೊಂಡು 2000ರಲ್ಲಿ ಅಜೀಂ ಪ್ರೇಂಜಿ ಫೌಂಡೇಶನ್ (Azim Premji Foundation) ಸ್ಥಾಪನೆ ಮಾಡಿದರು. ತನ್ನ ಆದಾಯದ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಆ ಫೌಂಡೇಷನ್‌ಗೆ ದಾನ (philanthropist) ಮಾಡಿದರು!

ಅವರು ತನ್ನ ಫೌಂಡೇಶನ್‌ನಲ್ಲಿ ಹೂಡಿಕೆ ಮಾಡಿರುವ ಮೊತ್ತ 2,87,000 ಕೋಟಿ ರೂಪಾಯಿಗಿಂತ ಹೆಚ್ಚು! ಅವರ ಆದ್ಯತೆ ಬೇರೆಯವರ ಹಾಗೆ ಸಮಾಜ ಸೇವೆ ಮಾತ್ರ ಅಲ್ಲ. ಅವರು ಕನಸು ಕಂಡ ಕ್ಷೇತ್ರ ಪ್ರಾಥಮಿಕ ಶಿಕ್ಷಣದ ಗುಣಮಟ್ಟ! ಈ ಕ್ಷೇತ್ರದ ಬಗ್ಗೆ ಅವರ ಯೋಚನೆ ಮತ್ತು ದೃಷ್ಟಿಕೋನಗಳು ತುಂಬಾ ಪ್ರಖರವಾಗಿ ಇವೆ. ಅವರದೇ ಮಾತುಗಳನ್ನು ಕೇಳುತ್ತಾ ಹೋಗೋಣ…

ಪ್ರಾಥಮಿಕ ಶಿಕ್ಷಣದ ಗುಣಮಟ್ಟವೇ ಅವರ ಆದ್ಯತೆ

ದೇಶವು ಬಲಿಷ್ಠವಾಗಲು ಗಟ್ಟಿ ಮಾಡಬೇಕಾದದ್ದು ಶೈಕ್ಷಣಿಕ ಗುಣಮಟ್ಟವನ್ನು. ಅದರಲ್ಲಿಯೂ ಪ್ರಾಥಮಿಕ ಶಾಲೆಗಳ ಗುಣಮಟ್ಟವನ್ನು. ಸರಕಾರ ತನ್ನ ಅನುದಾನಗಳ ಮೂಲಕ ಶಾಲೆಗಳ ಭೌತಿಕ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದೆ. ಶಾಲೆಗೆ ಕಟ್ಟಡ, ಮೈದಾನ, ಶೌಚಾಲಯ, ಗ್ರಂಥಾಲಯ ಅತ್ಯಂತ ಅಗತ್ಯ ಹೌದು.

ಆದರೆ ಅದಕ್ಕಿಂತ ಹೆಚ್ಚು ಮುಖ್ಯ ಆದದ್ದು ಮಾನವ ಸಂಪನ್ಮೂಲದ ಅಭಿವೃದ್ಧಿ! ಶಿಕ್ಷಕರ ಉನ್ನತೀಕರಣ, ಗುಣಮಟ್ಟ ಅಭಿವೃದ್ಧಿ, ಶಿಕ್ಷಕರ ತರಬೇತಿಗಳು, ಅದಕ್ಕೆ ಪೂರಕವಾದ ಪಠ್ಯಪುಸ್ತಕಗಳು, ಪೂರಕಪಠ್ಯ ಚಟುವಟಿಕೆಗಳು, ಸ್ಮಾರ್ಟ್ ಕ್ಲಾಸ್ ರೂಂಗಳು, ಶೈಕ್ಷಣಿಕ ಸಂಶೋಧನೆಗಳು, ಕಂಪ್ಯೂಟರ್ ತರಬೇತಿಗಳು, ಸುಂದರವಾದ ಪ್ರಯೋಗಾಲಯಗಳು, ವಿದ್ಯಾರ್ಥಿಗಳ ಕೈಗೆ ಎಟುಕುವ ಗ್ರಂಥಾಲಯ………..ಇವುಗಳ ಬಗ್ಗೆ ಸರಕಾರದ ಕಾಳಜಿ ಸಾಲದು. ಅದನ್ನು ನಾವು ನಮ್ಮ ಫೌಂಡೇಶನ್ ವತಿಯಿಂದ ಮಾಡುತ್ತಿದ್ದೇವೆ ಎನ್ನುತ್ತಾರೆ ಅಜೀಂ ಪ್ರೇಂಜಿ.

ಅಜೀಂ ಪ್ರೇಂಜಿ ಮಾಡಿದ ಶೈಕ್ಷಣಿಕ ಕ್ರಾಂತಿ

ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ (ಪಾಂಡಿಚೇರಿ)ಗಳ ಸಾವಿರಾರು ಪ್ರಾಥಮಿಕ ಶಾಲೆಗಳನ್ನು ನಾವು ಆಯ್ಕೆ ಮಾಡಿಕೊಂಡು ಅವುಗಳನ್ನು ಮಾದರಿ ಶಾಲೆ ಮಾಡಲು ಹೊರಟಿದ್ದೇವೆ. ಅವುಗಳನ್ನು ಮುಗ್ಧ ಮಕ್ಕಳ ಸ್ಫೂರ್ತಿಯ ತಾಣಗಳಾಗಿ ರೂಪಿಸುವುದು ನಮ್ಮ ಉದ್ದೇಶ. ಹ್ಯಾಪಿ ಸ್ಕೂಲ್ ನಮ್ಮ ಕನಸಿನ ಯೋಜನೆ.

ಶಿಕ್ಷಣವು ಪರೀಕ್ಷಾ ಆಧಾರಿತ ಆಗಬಾರದು. ಅದು ಜ್ಞಾನ ಮತ್ತು ಕೌಶಲ್ಯ ಆಧಾರಿತ ಆಗಿರಬೇಕು. ಮಕ್ಕಳು ತಮ್ಮ ಶಿಕ್ಷಕರ ಜೊತೆ, ಸಹಪಾಠಿಗಳ ಜೊತೆಗೆ, ಸುತ್ತಲಿನ ಪರಿಸರದ ಜೊತೆಗೆ, ಪ್ರಾಣಿ ಪಕ್ಷಿಗಳ ಜೊತೆಗೆ ಹೇಗೆ ವರ್ತಿಸಬೇಕು ಎಂದು ಕಲಿಯದೆ ಶಿಕ್ಷಣವು ಪೂರ್ತಿ ಆಗುವುದೇ ಇಲ್ಲ.

ಈ ಮಹಾ ಉದ್ದೇಶಕ್ಕಾಗಿ ಅವರ ಫೌಂಡೇಶನ್ ಪ್ರತೀ ವರ್ಷ ಕೋಟಿ ಕೋಟಿ ರೂ.ಗಳ ಅನುದಾನವನ್ನು ಶಾಲೆಗಳಿಗೆ ಸುರಿಯುತ್ತಿದೆ.

Azim Premji a great Philonthropist Recieving padmavibhushana

ಅಜೀಂ ಪ್ರೇಂಜಿ ಹೇಳಿದ ಮೊಲದ ಕಥೆ

ಪ್ರಾಥಮಿಕ ಶಾಲೆಗಳ ಗುಣಮಟ್ಟದ ಬಗ್ಗೆ ಅವರಿಗೆ ಇರುವ ಕಾಳಜಿ ಮತ್ತು ಪ್ರೀತಿಗಳು ನಿಜಕ್ಕೂ ಶ್ಲಾಘನೀಯ ಆಗಿವೆ. ಅವರು ಒಂದು ಕಡೆ ಹೇಳಿದ ಮೊಲದ ಕತೆಯು ಇಂದಿನ ಶಾಲೆಗಳ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ನೀವೂ ಕೇಳಿ..

ಒಂದೂರಲ್ಲಿ ಒಂದು ಮೊಲಗಳ ಶಾಲೆ ಇತ್ತು. ಅದಕ್ಕೆ ಒಂದು ಮೊಲದ ಮರಿಯು ಹೊಸದಾಗಿ ಸೇರ್ಪಡೆ ಆಗಿತ್ತು. ಇಡೀ ವರ್ಷ ಅಲ್ಲಿ ಕಲಿತ ಮೇಲೆ ಅದಕ್ಕೆ ಪುಟಿಯುವ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಬಂತು. ಆದರೆ ಈಜುವ ಪರೀಕ್ಷೆಯಲ್ಲಿ ಅದಕ್ಕೆ ಸೊನ್ನೆ ಮಾರ್ಕ್ ಬಂತು!

ಆಗ ಮೊಲದ ಪೋಷಕರಿಗೆ ಆತಂಕ ಆಯಿತು. ಅವರು ತಮ್ಮ ಮರಿಗೆ ಹೇಳಿದರು- ನೋಡು ಮಗು, ನೀನು ಹೇಗೂ ಪುಟಿಯುವುದರಲ್ಲಿ ಚಾಂಪಿಯನ್ ಆಗಿದ್ದೀ. ಇನ್ನು ಮುಂದೆ ಪುಟಿಯುವುದನ್ನು ಮರೆತು ಬಿಡು! ನಿನ್ನನ್ನು ಸ್ವಿಮ್ಮಿಂಗ್ ಕ್ಲಾಸಿಗೆ ಸೇರಿಸುತ್ತೇವೆ. ನಮಗೆ ರಿಸಲ್ಟ್ ಬೇಕು ಎಂದರು.

ಅದೇ ರೀತಿ ಮೊಲವು ಸ್ವಿಮ್ಮಿಂಗ್ ಕ್ಲಾಸಿಗೆ ಸೇರಿತು. ಪುಟಿಯುವುದನ್ನು ಮರೆತಿತು. ಇಡೀ ವರ್ಷ ಸ್ವಿಮ್ಮಿಂಗ್ ಕಲಿತರೂ ಅದಕ್ಕೆ ಸ್ವಿಮ್ಮಿಂಗ್ ಬರಲಿಲ್ಲ. ಅದು ಅದರ ಸ್ವಭಾವ ಆಗಿರಲಿಲ್ಲ. ಅಲ್ಲಿಗೆ ಮೊಲದ ಮರಿಯು ತನ್ನ ಸ್ವಾಭಾವಿಕ ಕೌಶಲವಾದ ಪುಟಿಯುವುದನ್ನು ಪೂರ್ತಿ ಕಳೆದುಕೊಂಡಿತು!

ಇದು ಅಜೀಂ ಪ್ರೇಂಜಿಯವರು ನಮ್ಮ ಶಿಕ್ಷಣ ವ್ಯವಸ್ಥೆಗೆ ಹಿಡಿದ ಕೈಗನ್ನಡಿ!

ನಮ್ಮ ದೇಶದ ಪ್ರಾಥಮಿಕ ಶಾಲೆಗಳಲ್ಲಿ ಇಂದು ಆಗುತ್ತಿರುವುದು ಅದೇ ಅಲ್ಲವೇ? ಇತ್ತೀಚೆಗೆ ಅವರು ಉನ್ನತ ಶಿಕ್ಷಣವನ್ನು ಸಪೋರ್ಟ್ ಮಾಡಲು ಹಲವು ವಿವಿಗಳನ್ನು ಹುಟ್ಟು ಹಾಕುತ್ತಿದ್ದಾರೆ. ಅವರು ಅಜೀಂ ಪ್ರೇಂಜಿ ವಿವಿಯನ್ನು ಹುಟ್ಟು ಹಾಕಿ ಅದನ್ನು ಕುಲಾಧಿಪತಿ ಆಗಿ ಮುನ್ನಡೆಸುತ್ತಿದ್ದಾರೆ. ಅವರ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಕ್ಷಕರು ಐಟಿ ಕ್ಷೇತ್ರದಲ್ಲಿ ಪಡೆಯುವ ಸಂಬಳ ಪಡೆಯುತ್ತಿರುವುದು ಬಹಳ ದೊಡ್ಡ ಸುದ್ದಿ.

Azim Premji a great Philonthropist Recieving padmavibhushana

ಅಜೀಂ ಪ್ರೇಂಜಿ ಅವರಿಗೆ ಈಗ 78 ವರ್ಷ. ಅವರು ಭಾರತದ ಅಭಿಮಾನದ ಉದ್ಯಮಿ ಎಂದು ನನಗೆ ಅನಿಸುತ್ತದೆ. ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಈಗಾಗಲೇ ದೊರೆತಿದ್ದು ಭಾರತ ರತ್ನ ಪ್ರಶಸ್ತಿಯು ಮಾತ್ರ ಬಾಕಿ ಇದೆ ಮತ್ತು ಅದಕ್ಕೆ ಅವರು ಅತ್ಯಂತ ಅರ್ಹರಾಗಿದ್ದಾರೆ!

ಇದನ್ನೂ ಓದಿ: Raja Marga Column : ಅವಳಿಗೆ ಬುದ್ಧಿ ಕಲಿಸಬೇಕು ಸರ್!; ಆಸ್ಪತ್ರೇಲಿ ಮಲಗಿದ್ರೂ ಅವನಿಗೆ ಅವಳದ್ದೇ ಚಿಂತೆ!

Exit mobile version