Site icon Vistara News

ರಾಜ ಮಾರ್ಗ ಅಂಕಣ |ಎಂ = ಮ್ಯೂಸಿಕ್ = ಮಂಗೇಶ್ಕರ್! ಈ ಕುಟುಂಬ ಸಮರ್ಪಿಸಿದ್ದು 1 ಲಕ್ಷಕ್ಕೂ ಅಧಿಕ ಅಮರ ಹಾಡುಗಳನ್ನು!

Lata mangeshkar

ಗೋವಾದಲ್ಲಿ ಇರುವ ಮಂಗೇಶಿ ದೇವಸ್ಥಾನಕ್ಕೆ ಕುಳಾವಿಗಳಾದ ಒಂದು ಕುಟುಂಬವು ಮುಂದೆ ಮಂಗೇಶ್ಕರ್ ಎಂಬ ಉಪನಾಮವನ್ನು ಪಡೆಯಿತು. ಈ ಕುಟುಂಬವು ಭಾರತೀಯ ಸಂಗೀತಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ಭಾರಿ ದೊಡ್ಡ ಪುಸ್ತಕವನ್ನೇ ಬರೆಯಬೇಕು ಎಂದು ಆಸೆ ಇದೆ. ಅದನ್ನು ಸಂಕ್ಷಿಪ್ತ ಮಾಡಿ ಇಲ್ಲಿ ದಾಖಲು ಮಾಡುತ್ತಿದ್ದೇನೆ!

ಅಪ್ಪ ದೀನಾನಾಥ್ ಮಂಗೇಶ್ಕರ್ ಸಂಗೀತ ಗುರು ಆಗಿದ್ದರು. ನಾಟಕ ಮಂಡಳಿಯಲ್ಲಿ ಹಾರ್ಮೋನಿಯಂ ಮೇಷ್ಟ್ರು ಆಗಿದ್ದರು. ಮರಾಠಿ ರಂಗಭೂಮಿಯಲ್ಲಿ ಅವರದ್ದು ಬಹಳ ದೊಡ್ಡ ಹೆಸರು. ಆದರೆ ಬಡತನ ಬೆಂಬಿಡದ ಭೂತ ಆಗಿತ್ತು.

ಅವರು ಸಣ್ಣ ಪ್ರಾಯದಲ್ಲಿ ತೀರಿ ಹೋದಾಗ ಲತಾಗೆ ಕೇವಲ 13 ವರ್ಷ. ಅದರಿಂದಾಗಿ ಆಕೆ ಇಡೀ ಕುಟುಂಬದ ಹೊಣೆಯನ್ನು ಸಣ್ಣ ಪ್ರಾಯದಲ್ಲಿ ಹೊರಬೇಕಾಯಿತು. ಆಕೆ ಸಿನೆಮಾದಲ್ಲಿ ಹಾಡಲು ಆರಂಭ ಮಾಡುವಾಗ ಆಕೆಗೆ ಕೇವಲ 13 ವರ್ಷ! ಬಾಲ್ಯದ ಅಪಮಾನ, ಹಸಿವು ಎಲ್ಲವನ್ನೂ ಮೆಟ್ಟಿ ನಿಂತ ಲತಾ ಅದರ ಬಿಸಿಯನ್ನು ತನ್ನ ಕುಟುಂಬಕ್ಕೆ ತಾಗದ ಹಾಗೆ ನೋಡಿಕೊಂಡವರು. ಈ ಒತ್ತಡದಲ್ಲಿ ತಾನು ಮದುವೆಯನ್ನೇ ಮರೆತೆ ಎಂದು ಲತಾ ಹೇಳಿದ್ದಾರೆ.

ಎಪ್ಪತ್ತು ವರ್ಷಗಳ ಅವಧಿಯಲ್ಲಿ ಆಕೆ ಹಾಡಿದ್ದು ಇಪ್ಪತ್ತು ಭಾಷೆಗಳಲ್ಲಿ 50,000 ಹಾಡುಗಳನ್ನು! ಆ ಹಾಡುಗಳ ವೈವಿಧ್ಯದ ಬಗ್ಗೆ ದೊಡ್ಡ ಗ್ರಂಥವನ್ನೇ ಬರೆಯಬಹುದು. ಭಾರತದ ಕೋಗಿಲೆ ಎಂದು ಕರೆಸಿಕೊಂಡ ಆಕೆ ಅತೀ ಹೆಚ್ಚು ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆ ಬರೆದದ್ದು ಮಾತ್ರವಲ್ಲ 81 ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕೊನೆ ಕೊನೆಗೆ ನನಗೆ ಅವಾರ್ಡ್ ಕೊಡುವುದೇ ಬೇಡ ಎಂದು ಲತಾ ಜ್ಯೂರಿಗಳನ್ನು ವಿನಂತಿ ಮಾಡಿದ್ದೆ ಮಾಡಿದ್ದು! ಹಿನ್ನೆಲೆ ಗಾಯನಕ್ಕೆ ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ಅವರು ಪಡೆದಿದ್ದಾರೆ. ಎಲ್ಲ ಪದ್ಮ ಪ್ರಶಸ್ತಿಗಳು ಮತ್ತು ಭಾರತರತ್ನ ಕಿರೀಟ ಅವರ ಶೋ ಕೇಸಲ್ಲಿ ಇವೆ!

ಆಕೆಯ ಮೊದಲ ತಂಗಿ ಮೀನಾ ಖಾಡಿಲ್ಕರ್ ಎರಡೇ ವರ್ಷಗಳ ಅಂತರದಲ್ಲಿ ಹುಟ್ಟಿದವರು. ಆಕೆ ಕೂಡ ಹಿಂದೀ ಮತ್ತು ಮರಾಠಿ ಭಾಷೆಗಳಲ್ಲಿ ಐವತ್ತು ವರ್ಷಗಳ ಅವಧಿಯಲ್ಲಿ ಸಾವಿರಾರು ಹಾಡು ಹಾಡಿದ್ದಾರೆ. ಅಕ್ಕ ಲತಾ ಬಗ್ಗೆ ಎರಡು ಅದ್ಭುತವಾದ ಪುಸ್ತಕ ಬರೆದಿದ್ದಾರೆ.

‘ಮೊತೀ ತೀಚಿ ಸಾವಳಿ'(ನಾನು ಆಕೆಯ ನೆರಳು) ಮರಾಠಿ ಭಾಷೆಯಲ್ಲಿ ಇದೆ. ‘ದೀದಿ ಔರ್ ಮೀ’ ಕೂಡ ಅವರು ಬರೆದ ಅದ್ಭುತ ಪುಸ್ತಕ. ಈ ಎರಡೂ ಪುಸ್ತಕಗಳನ್ನು ಸ್ವತಃ ಲತಾ ಬಿಡುಗಡೆ ಮಾಡಿದ್ದಾರೆ.

ಲತಾ ಅವರ ಎರಡನೇ ತಂಗಿ ಆಶಾ ಭೋಂಸ್ಲೆ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ! ಆಕೆ ಕೂಡ ಹಾಡಿದ್ದು ಇಪ್ಪತ್ತು ಭಾಷೆಗಳಲ್ಲಿ 12,000 ಹಾಡುಗಳನ್ನು! ಹಿನ್ನೆಲೆ ಗಾಯನಕ್ಕೆ ಎರಡು ರಾಷ್ಟ್ರಪ್ರಶಸ್ತಿ, ಒಟ್ಟು 76 ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು, ಹಲವು ಪದ್ಮ ಪ್ರಶಸ್ತಿಗಳು ಆಕೆಗೆ ದೊರೆತಿವೆ. ಮಾಧುರ್ಯಕ್ಕೆ ಲತಾ ಹೆಸರಾದರೆ ವೈವಿಧ್ಯಕ್ಕೆ ಆಶಾ ದೊಡ್ಡ ಹೆಸರು!

ಆಶಾ ಮತ್ತು ಲತಾ ಮಧ್ಯೆ ದೊಡ್ಡ ಕಲಹ ಇದೆ ಎಂಬ ಗುಮಾನಿಯು ಮುಂಬೈಯಲ್ಲಿ ಒಂದು ಕಾಲದಲ್ಲಿ ಹರಡಿತ್ತು! ಆದರೆ ಸ್ವತಃ ಲತಾ ಅದನ್ನು ನಿರಾಕರಿಸಿದರು. ಅದರ ಜೊತೆಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರಕಾರಗಳು ಸ್ಥಾಪನೆ ಮಾಡಿದ ಲತಾ ಮಂಗೇಶ್ಕರ್ ಹೆಸರಿನ ಎರಡೂ ಪ್ರಶಸ್ತಿಗಳನ್ನು ಆಶಾ ಭೋಂಸ್ಲೆ ಪಡೆದಿದ್ದಾರೆ!

ಲತಾ ಅವರ ಮೂರನೇ ತಂಗಿ ಉಷಾ ಮಂಗೇಷ್ಕರ್ ಕೂಡ ಸಾವಿರಾರು ಹಿಂದೀ ಮತ್ತು ಮರಾಠಿ ಹಾಡುಗಳನ್ನು ಹಾಡಿದ್ದಾರೆ. ವಿಶೇಷವಾಗಿ ಭಕ್ತಿಗೀತೆಗಳನ್ನು ಹಾಡುವುದರಲ್ಲಿ ಅವರಿಗೆ ದೊಡ್ಡ ಹೆಸರು ಇದೆ. ಹಿನ್ನೆಲೆ ಗಾಯನಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಅವರಿಗೆ ದೊರೆತಿದೆ. ತನ್ನ ದೊಡ್ಡ ಅಕ್ಕನ ಹಾಗೆ ಅವರು ಮದುವೆ ಆಗದೇ ಉಳಿದರು!

ಈ ಮಂಗೇಶ್ಕರ್ ಸೋದರಿಯರ ಒಬ್ಬನೇ ಸೋದರ ಹೃದಯನಾಥ. ಅವರೂ ಗಾಯಕ, ಸಂಗೀತ ನಿರ್ದೇಶಕ ಎಲ್ಲವೂ ಆಗಿದ್ದಾರೆ. ಹಿಂದೀ ಮತ್ತು ಮರಾಠಿ ಭಾಷೆಯಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ ಮತ್ತು ಅಷ್ಟೇ ಹಾಡುಗಳನ್ನು ಸುಂದರವಾಗಿ ಕಂಪೋಸ್ ಮಾಡಿದ್ದಾರೆ. ಅವರಿಗೆ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಕೂಡ ದೊರೆತಿದೆ. ಪದ್ಮಶ್ರೀ ಪ್ರಶಸ್ತಿಯು ಅವರಿಗೆ ದೊರೆತಿದೆ.

ಹೀಗೆ ಎಂ ಅಂದರೆ ಮ್ಯೂಸಿಕ್, ಮೆಲಡಿ ಮತ್ತು ಮಂಗೇಷ್ಕರ್ ಎಲ್ಲವೂ ಆಗಿದೆ ಎಂದು ನನ್ನ ಭಾವನೆ!

ಮಂಗೇಶ್ಕರ್ ಕುಟುಂಬವು ಭಾರತೀಯ ಸಂಗೀತಕ್ಕೆ ಮತ್ತು ಸಮಗ್ರ ಭಾರತೀಯ ಸಂಸ್ಕೃತಿಗೆ ಕೊಟ್ಟ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.

ಿಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅವನಿಯ ಕಾಲುಗಳಲ್ಲಿ ಶಕ್ತಿಯೇ ಇಲ್ಲ; ಆದರೆ, ಇಡೀ ದೇಶ ಎದ್ದು ನಿಂತು ಸಲಾಂ ಅನ್ನುತ್ತಿದೆ!

Exit mobile version