Site icon Vistara News

ರಾಜ ಮಾರ್ಗ ಅಂಕಣ | ನೈಟಿಂಗೇಲ್ ಮತ್ತು ರೋಸ್: ಮನ ಕರಗಿಸುವ ಒಂದು ಪುಟ್ಟ ಹಕ್ಕಿಯ ತ್ಯಾಗದ ಕತೆ!

ಇಂಗ್ಲಿಷ್ ಭಾಷೆಯ ಪ್ರಮುಖ ಕತೆಗಾರರಾದ ಆಸ್ಕರ್ ವೈಲ್ಡ್ ಅವರ ಮಾಸ್ಟರ್ ಪೀಸ್ ಕಥೆ ‘ನೈಟಿಂಗೇಲ್‌ ಆ್ಯಂಡ್‌ ರೋಸ್ ‘ ಹಲವು ಬಾರಿ ಓದಿ ಕಣ್ಣೀರು ಸುರಿಸಿದ್ದೇನೆ. ನಮ್ಮ ಜೀವನಕ್ಕೆ ಬೇಕಾದ ಹಲವು ಸಂಗತಿಗಳು ಈ ಕತೆಯಲ್ಲಿವೆ. ಮೊದಲು ಒಂದು ಕತೆ ಓದಿಕೊಂಡು ಬರೋಣ.

ಒಬ್ಬ ಕಾಲೇಜು ಹುಡುಗನ ಮುಗ್ಧ ಪ್ರೇಮಕಥೆ
ಇಂಗ್ಲೆಂಡ್‌ನಲ್ಲಿ ವಿದ್ಯಾರ್ಥಿ ಆಗಿದ್ದ ಒಬ್ಬ ಮುಗ್ಧ ಕಾಲೇಜು ಹುಡುಗ ತನ್ನ ಪ್ರಾಯಕ್ಕೆ ಸರಿಯಾಗಿ ಅದೇ ಕಾಲೇಜಿನ ಒಂದು ಹುಡುಗಿಯನ್ನು ಪ್ರೀತಿ ಮಾಡುತ್ತಾನೆ. ಒಮ್ಮೆ ಧೈರ್ಯ ಮಾಡಿ ಅವಳ ಮುಂದೆ ನಿಂತು ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ. ನಾಳೆ ಸಂಜೆ ನಡೆಯಲಿರುವ ಪಾರ್ಟಿಯಲ್ಲಿ ನನ್ನ ಜೊತೆ ಡ್ಯಾನ್ಸ್ ಮಾಡುತ್ತೀಯಾ ಎಂದು ಕೇಳುತ್ತಾನೆ. ಅವಳು ಅದೇ ಕಾಲೇಜಿನ ಪ್ರೊಫೆಸರ್ ಮಗಳು. ತುಂಬಾ ಧಿಮಾಕಿನ ಹುಡುಗಿ. ಅವಳು ಒಂದು ಕಂಡೀಷನ್ ಮೇಲೆ ಅವನ ಜೊತೆ ಡ್ಯಾನ್ಸ್ ಮಾಡಲು ಒಪ್ಪಿಕೊಳ್ಳುತ್ತಾಳೆ.

ಅವಳಿಗೆ ಚಂದದ ಕೆಂಪು ಗುಲಾಬಿ ಬೇಕಂತೆ!
ತನ್ನ ಡ್ರೆಸ್‌ಗೆ ಮ್ಯಾಚ್ ಆಗುವಂತೆ ಒಂದು ಕೆಂಪು ಗುಲಾಬಿ ಹೂ ತಂದು ಕೊಟ್ಟರೆ ಖಂಡಿತ ಅವನ ಜೊತೆ ಡ್ಯಾನ್ಸ್ ಮಾಡುತ್ತೇನೆ ಎಂಬುದು ಅವಳ ಷರತ್ತು. ಹುಡುಗ ಒಪ್ಪಿಕೊಳ್ಳುತ್ತಾನೆ ಮತ್ತು ಗುಲಾಬಿ ತೋಟಕ್ಕೆ ಬರುತ್ತಾನೆ. ಆದರೆ ಅವನ ಆಶ್ಚರ್ಯಕ್ಕೆ ಇಡೀ ತೋಟದಲ್ಲಿ ಒಂದೇ ಒಂದು ಕೆಂಪು ಗುಲಾಬಿ ಹೂ ಇರುವುದಿಲ್ಲ. ಎಲ್ಲವೂ ಬಿಳಿ ಗುಲಾಬಿ ಹೂವುಗಳು. ಇಡೀ ಲಂಡನ್ ಸುತ್ತಾಡಿದರೂ ಒಂದೇ ಒಂದು ರೆಡ್ ರೋಸ್ ಇಲ್ಲ ಅಂದರೆ ಇಲ್ಲ! ಅವನು ನಿರಾಸೆಯಾಗಿ ಜೋರಾಗಿ ಅಳುತ್ತಾನೆ.

ಆಗ ಮರದ ಮೇಲೆ ಕೂತು ಆತನ ಅಳುವನ್ನು ಕೇಳಿದ ಒಂದು ಪುಟ್ಟ ಕಪ್ಪು ನೈಟಿಂಗೇಲ್‌ ಅವನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅವನ ನೆರವಿಗೆ ಬರುತ್ತದೆ. ತನಗೆ ಒಂದು ಗುಲಾಬಿ ಹೂ ಬೇಕೆಂದು ಅದು ಎಲ್ಲ ಗುಲಾಬಿ ಗಿಡಗಳನ್ನು ವಿನಂತಿ ಮಾಡುತ್ತದೆ.

ಎದುರಾಯಿತು ಕಠಿಣ ಸವಾಲು!
ಆಗ ಆ ಗುಲಾಬಿ ಗಿಡಗಳು ‘ಇಲ್ಲಿ ಜೋರಾಗಿ ಚಳಿ ಇರುವ ಕಾರಣ ನನ್ನ ರಕ್ತ ನಾಳಗಳು ಹೆಪ್ಪುಗಟ್ಟಿವೆ. ನನ್ನ ಚೈತನ್ಯ ಶಕ್ತಿಯು ಉಡುಗಿ ಹೋಗಿದೆ. ಸಾರಿ, ನನ್ನ ಬಳಿ ಕೆಂಪು ಗುಲಾಬಿ ಇಲ್ಲ!’ ಎಂದವು. ಆಗ ಆ ಪುಟ್ಟ ಹಕ್ಕಿಯು ಆ ಪ್ರೀತಿ ಮಾಡುವ ಹುಡುಗನ ಕಷ್ಟವನ್ನು ಹೇಳಿ ದಯವಿಟ್ಟು ಹೇಗಾದರೂ ಮಾಡಿ ಒಂದು ಕೆಂಪು ಗುಲಾಬಿಯನ್ನು ಕೊಡುವಂತೆ ಮತ್ತೆ ಒತ್ತಾಯ ಮಾಡಿತು.

ಆಗ ಗುಲಾಬಿ ಗಿಡವು ‘ ಒಂದು ಉಪಾಯ ಇದೆ. ಆದರೆ ನಿನ್ನ ಜೀವಕ್ಕೆ ತುಂಬಾ ರಿಸ್ಕ್ ಇದೆ.
ಆ ಉಪಾಯ ಏನೆಂದರೆ ನನ್ನ ಗಿಡದ ಮುಳ್ಳಿಗೆ ನಿನ್ನ ಹೃದಯವನ್ನು ಚುಚ್ಚಿ ಚುಚ್ಚಿ ಬಿಸಿರಕ್ತವನ್ನು ಹೊರಗೆ ಚಿಮ್ಮಿಸಬೇಕು. ಅದರಿಂದ ನನ್ನ ಬಿಳಿ ಗುಲಾಬಿಗೆ ನೀನು ಬಿಸಿ ರಕ್ತವನ್ನು ಪೈಂಟ್ ಮಾಡಿದರೆ ಕೆಂಪು ಗುಲಾಬಿ ಹೂವು ನಿನಗೆ ಸಿಗಬಹುದು!’ ಎಂದಿತು. ಹಕ್ಕಿ ಹಿಂದೆ ಮುಂದೆ ನೋಡದೆ ಒಪ್ಪಿಕೊಂಡು ಬಿಟ್ಟಿತು. ಯಾರದೋ ಕನಸನ್ನು ನನಸು ಮಾಡುವ ಹುಚ್ಚು ಆವೇಶವು ಅದರ ತಲೆಯಲ್ಲಿ ತುಂಬಿ ತುಳುಕುತ್ತಿತ್ತು.

ಪುಟ್ಟ ಹಕ್ಕಿಯ ಪ್ರೀತಿಯ ಆಲಾಪಕ್ಕೆ ಬಿಳಿ ಗುಲಾಬಿ ಕೆಂಪಾಯಿತು!
ರಾತ್ರಿ ಆರಂಭ ಆದ ಕೂಡಲೇ ಆ ಪುಟ್ಟ ಹಕ್ಕಿಯು ಬಂದು ಆ ಗುಲಾಬಿ ಗಿಡದ ಮೇಲೆ ಕೂತಿತು. ತನ್ನ ಎಳಸು ಹೃದಯವನ್ನು ಗುಲಾಬಿಯ ಮುಳ್ಳಿಗೆ ಚುಚ್ಚಿ ಬಿಸಿ ರಕ್ತವನ್ನು ಹೊರಗೆ ತೆಗೆಯಿತು. ತನ್ನ ರೆಕ್ಕೆಯಿಂದ ಆ ರಕ್ತವನ್ನು ಬಿಳಿ ಗುಲಾಬಿಯ ಪಕಳೆಗಳಿಗೆ ಹಚ್ಚಲು ತೊಡಗಿತು. ತೀವ್ರವಾದ ನೋವನ್ನು ಮರೆಯಲು ಹಕ್ಕಿ ಜೋರಾಗಿ ಪ್ರೇಮಗೀತೆಯನ್ನು ಹಾಡಲು ತೊಡಗಿತು. ಹುಣ್ಣಿಮೆಯ ರಾತ್ರಿಯಲ್ಲಿ ಹಕ್ಕಿಯ ನೋವಿನ ಗೀತೆಯನ್ನು ಆಲಿಸುವವರು ಯಾರೂ ಇರಲಿಲ್ಲ! ಹೃದಯದಿಂದ ಚಿಮ್ಮಿದ ರಕ್ತವನ್ನು ಹಕ್ಕಿಯು ತನ್ನ ರೆಕ್ಕೆಗಳಿಂದ ಗುಲಾಬಿಯ ಪಕಳೆಗಳಿಗೆ ಹಚ್ಚುತ್ತಾ ಹೋಗುತ್ತದೆ.

ಆ ಪುಟ್ಟ ಹಕ್ಕಿಯ ಹಾಡಿನಲ್ಲಿ ಹಲವು ಭಾವನೆಗಳು!
ಒಂದೆಡೆ ತೀವ್ರವಾದ ನೋವು! ಮತ್ತೊಂದೆಡೆ ಹುಡುಗನ ಪ್ರೀತಿ ಉಳಿಸುವ ಖುಷಿ! ಇನ್ನೊಂದೆಡೆ ಹೃದಯ ಹಿಂಡುವ ವೇದನೆ! ಮತ್ತೂ ಒಂದೆಡೆ ಯಾರದ್ದೋ ಪ್ರೀತಿಯ ಅರಮನೆ ಕಟ್ಟುವ ಕನಸು!

ಬೆಳಿಗ್ಗೆ ಆಗುವಾಗ ಹಕ್ಕಿಯ ಹಾಡು ನಿಂತು ಹೋಯಿತು. ಹಕ್ಕಿ ತನ್ನ ಹೃದಯದ ರಕ್ತವೆಲ್ಲ ಖಾಲಿಯಾಗಿ ಉಸಿರು ನಿಂತು ಸತ್ತು ನೆಲಕ್ಕೆ ಬಿದ್ದಿತ್ತು. ಆದರೆ ಬೆಳಗಿನ ಸೂರ್ಯನ ಕಿರಣಗಳನ್ನು ಸ್ವಾಗತಿಸಲು ಸುಂದರವಾದ ಒಂದೇ ಒಂದು ಕೆಂಪು ಬಣ್ಣದ ಗುಲಾಬಿ ಹೂವು ಗಿಡದಲ್ಲಿ ಅರಳಿ ನಿಂತಿತ್ತು. ಆ ಪುಟ್ಟ ಹಕ್ಕಿಯು ತನ್ನ ಪ್ರಾಣವನ್ನು ಬಲಿ ಕೊಟ್ಟು ಕೆಂಪು ಗುಲಾಬಿ ಹೂವನ್ನು ಕಟ್ಟಿಕೊಟ್ಟಿತ್ತು.

ಹಕ್ಕಿಯ ತ್ಯಾಗವು ವ್ಯರ್ಥವಾಯಿತು!
ಬೆಳಿಗ್ಗೆ ತನ್ನ ಹಾಸ್ಟೆಲ್ ಕೋಣೆಯಿಂದ ಹೊರಟು ಆ ತೋಟಕ್ಕೆ ಬಂದ ಕಾಲೇಜು ಹುಡುಗನು ಆ ಕೆಂಪು ಗುಲಾಬಿ ಹೂ ನೋಡಿ ಭಾರೀ ಖುಷಿ ಪಡುತ್ತಾನೆ. ಅದನ್ನು ಕಿತ್ತು ಒಂದೇ ಉಸಿರಿಗೆ ಆ ಹುಡುಗಿಯ ಮನೆಗೆ ಓಡುತ್ತಾನೆ. ಓಡುತ್ತ ಹೋಗುವಾಗ ಆತನ ಕಣ್ಣ ಮುಂದೆ ಬಣ್ಣ ಬಣ್ಣದ ಕನಸುಗಳು ಮೂಡಿಬರುತ್ತಿದ್ದವು.

ಆದರೆ ಆ ಅವಕಾಶವಾದಿ ಹುಡುಗಿಯು ಚಂದದ ಡ್ರೆಸ್ ಹಾಕಿಕೊಂಡು ಬೇರೆ ಒಬ್ಬ ಹುಡುಗನ ಜೊತೆ ಪಾರ್ಟಿಗೆ ಹೊರಡಲು ಕಾಯುತ್ತಿದ್ದಳು. ಆ ಕೆಂಪು ಗುಲಾಬಿಯನ್ನು ಆಕೆ ಗಟಾರಕ್ಕೆ ಎಸೆದು ಆತನ ಪ್ರೀತಿಯನ್ನು ಧಿಕ್ಕರಿಸಿ ಬೇರೊಬ್ಬನ ಜೊತೆಗೆ ಹೊರಟೇ ಬಿಡುತ್ತಾಳೆ!

ನಮ್ಮೀ ಜೀವನವು ಕೂಡ ಯಾರದ್ದೋ ತ್ಯಾಗದ ಭಿಕ್ಷೆ!
ನಮ್ಮ ಜೀವನದ ಪ್ರತಿಯೊಂದು ಖುಷಿಯ ಕ್ಷಣಗಳು ಯಾರದ್ದೋ ತ್ಯಾಗದ ಫಲವಾಗಿ ಇರುತ್ತವೆ. ಇಂದು ನಾವು ಏನಾಗಿದ್ದೇವೋ ಅದಕ್ಕೆ ನೂರಾರು ಜನರ ದುಡಿಮೆ, ತ್ಯಾಗ, ಪ್ರಾರ್ಥನೆ, ಸೇವೆಗಳ ಫಲವೇ ಕಾರಣ ಆಗಿರುತ್ತದೆ. ಜಗತ್ತಲ್ಲಿ ಎಷ್ಟೋ ಜನರು ಒಂದಿಷ್ಟು ಸ್ವಾರ್ಥವಿಲ್ಲದೆ ನಮ್ಮ ನೆರವಿಗೆ ಬಂದಿರುತ್ತಾರೆ. ನಮ್ಮ ಕನಸನ್ನು ಪೂರ್ತಿ ಮಾಡಲು ಅವರ ಉಸಿರನ್ನು ಧಾರೆಯೆರೆದು ಕೊಟ್ಟಿರುತ್ತಾರೆ. ಅಂತವರನ್ನು ಮರೆತರೆ ಅಥವಾ ಧಿಕ್ಕರಿಸಿ ಮುನ್ನಡೆದರೆ ಮುಂದೆ ನಮ್ಮ ಜೀವನದಲ್ಲಿ ದುಃಖಪಡುವ ಕಾಲ ಬರುವುದು ಖಂಡಿತ. ಅಂತಹ ನೂರಾರು ವಿಷಾದಗಳು ನಮ್ಮ ಖುಷಿಯ ಕ್ಷಣಗಳನ್ನು ಖಾಲಿ ಮಾಡಬಹುದು. ಯೋಚಿಸಿ ನೋಡಿ.

ನಿಮ್ಮ ಖುಷಿಯ ಕಲರವದಲ್ಲಿ ಉಸಿರು ತುಂಬಿದ ನೈಟಿಂಗೇಲ್ ಪಕ್ಷಿಯ ಹಾಗಿರುವ ವ್ಯಕ್ತಿಗಳ ತ್ಯಾಗ ಮತ್ತು ಬಲಿದಾನಗಳು ವ್ಯರ್ಥ ಆಗಬಾರದು ಅಲ್ವಾ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಕ್ಯಾನ್ಸರ್‌ ರೋಗಿಗಳಿಗೆ ಅನ್ನ ನೀಡುವ ದೇವತಾ ಮನುಷ್ಯ: 30 ವರ್ಷಗಳಿಂದ ನಿಲ್ಲದ ಸಾವ್ಲಾ ಸೇವೆ

Exit mobile version