Site icon Vistara News

ರಾಜ ಮಾರ್ಗ ಅಂಕಣ | ಸಂತೂರ್ ಸಾಮ್ರಾಟ ಶಿವಕುಮಾರ್ ಶರ್ಮಾ: ಮಾಧುರ್ಯಕ್ಕೆ ಇನ್ನೊಂದು ಹೆಸರು!

shivakumar sharma

ಸಂತೂರ್‌ ಸಾಮ್ರಾಟ್‌ ಶಿವ ಕುಮಾರ್‌ ಶರ್ಮಾ ಅವರು ಬದುಕಿದ್ದಿದ್ದರೆ ಇಂದು (ಜನವರಿ 13) 84 ವರ್ಷ ತುಂಬುತ್ತಿತ್ತು. ನೂರು ತಂತಿಗಳ ಅಪೂರ್ವ ವಾದ್ಯವಾದ ಸಂತೂರಿಗೆ ಜಾಗತಿಕ ಮಾನ್ಯತೆಯನ್ನು ತಂದುಕೊಟ್ಟ ಮೇರು ಕಲಾವಿದ ಅವರು. ಅವರ ಶಾಸ್ತ್ರೀಯ ಸಂಗೀತದ ಪ್ರಸ್ತುತಿಯನ್ನು ಕೇಳುತ್ತಾ ಹೋದಂತೆ ನಾನಂತೂ ಮೂಕ ವಿಸ್ಮಿತನಾಗಿದ್ದೇನೆ. ಅವರು ತಬಲಾ ವಾದನವನ್ನು ಕೂಡ ಶಾಸ್ತ್ರೀಯವಾಗಿ ಕಲಿತಿದ್ದಾರೆ.

ಶಿವ ಕುಮಾರ್‌ ಶರ್ಮಾ ಅವರು ಜಮ್ಮು ಕಾಶ್ಮೀರದ ಒಂದು ಸಣ್ಣ ಸಾಂಸ್ಕೃತಿಕ ಗ್ರಾಮದಿಂದ ಬಂದವರು. ಅವರ ತಂದೆ ಪಂಡಿತ್ ಉಮಾದತ್ತ ಶರ್ಮಾ. ಅವರು ಕೀರ್ತಿ ಪಡೆದ ಸಂಗೀತ ವಿದ್ವಾಂಸರು. ಡೋಗ್ರಿ ಅವರ ಮಾತೃ ಭಾಷೆ. ಐದನೇ ವರ್ಷದಲ್ಲಿ ತಂದೆಯಿಂದ ಸಂಗೀತ ಪಾಠವು ಆರಂಭ. ಅಪ್ಪನಿಗೆ ಮಗ ಸಂಗೀತದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಇತ್ತು. 13ನೆಯ ಸಣ್ಣ ವಯಸ್ಸಿಗೆ ಮಗನ ಕೈಯ್ಯಲ್ಲಿ ಸಂತೂರು ಎಂಬ ಮಹಾ ವಾದ್ಯವನ್ನು ಇಟ್ಟು ಅಪ್ಪ ಆಶೀರ್ವಾದ ಮಾಡಿದರು. ಅದುವರೆಗೆ ಇಡೀ ದೇಶದಲ್ಲಿ ಸಂತೂರು ವಾದ್ಯವನ್ನು ಗೆದ್ದ ಕಲಾವಿದರು ಯಾರೂ ಇರಲಿಲ್ಲ.

ರಕ್ತಗತವಾಗಿ ಬಂದ ಸಂಗೀತವು ಬಳುವಳಿ ಆಗಿತ್ತು. ಸತತ ಪ್ರಯತ್ನದಿಂದ ಸಂತೂರು ಅವರ ಕೈ ಹಿಡಿಯಿತು. ಮಾಧುರ್ಯದ ಅಲೆಯನ್ನು ಹುಟ್ಟು ಹಾಕಿತು. 17ನೆಯ ವಯಸ್ಸಿಗೆ ಮುಂಬೈಯಲ್ಲಿ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ಕಛೇರಿಯನ್ನು ನೀಡಿದಾಗ ಸೇರಿದ ಸಂಗೀತ ಪ್ರೇಮಿಗಳು ಶಾಭಾಶ್ ಅಂದರು. 1956ರ ಶಾಂತಾರಾಮ್ ನಿರ್ದೇಶನದ ಝನಕ್ ಝನಕ್ ಪಾಯಲ್ ಬಾಜೆ ಸಿನಿಮಾದಲ್ಲಿ ಒಂದು ದೃಶ್ಯಕ್ಕೆ ಹಿನ್ನೆಲೆ ಸಂಗೀತ ಒದಗಿಸುವ ಅವಕಾಶ ದೊರೆಯಿತು. ಅದು ಕೂಡ ಸೂಪರ್ ಹಿಟ್ ಆಯಿತು.

ಅದೇ ಹೊತ್ತಿಗೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕೊಳಲು ವಾದಕ ಹರಿ ಪ್ರಸಾದ್ ಚೌರಾಸಿಯಾ, ಗಿಟಾರ್ ವಾದಕ ಬ್ರಿಜ್ ಭೂಷಣ ಕಬ್ರಾ ಅವರ ಗೆಳೆತನ ದೊರಕಿತು. ಅವರು ಮೂವರೂ ಸೇರಿ Call Of The Valley ಎಂಬ ಹೆಸರಿನ ಒಂದು ಆಲ್ಬಂ ಹೊರತಂದರು. ಅದು ಸೂಪರ್ ಹಿಟ್ ಆಯಿತು ಮತ್ತು ಪ್ಲಾಟಿನಂ ಡಿಸ್ಕ್ ಪಡೆಯಿತು. ಪಂಡಿತ್ ಶಿವಕುಮಾರ್ ಶರ್ಮಾ ಗಾಯಕಿ, ಗತ್ಕಾರಿ ಮತ್ತು ಲಯಕಾರಿ ಎಲ್ಲದರಲ್ಲೂ ಗೆದ್ದರು.

ಮುಂದೆ ಶಿವಕುಮಾರ್ ಶರ್ಮಾ ಮತ್ತು ಹರಿಪ್ರಸಾದ್ ಚೌರಾಸಿಯಾ ಸೇರಿ ಹಲವು ಹಿಂದಿ ಸಿನಿಮಾಗಳಿಗೆ ‘ಶಿವ್ ಹರಿ’ ಎಂಬ ಹೆಸರಿನಲ್ಲಿ ಸಂಗೀತ ನಿರ್ದೇಶನ ಮಾಡಿದರು. ಸಿಲ್ಸಿಲಾ, ಫಾಸಲೆ, ಡರ್, ಚಾಂದಿನಿ, ಲಮ್ಹೆ ಮೊದಲಾದ ಸಿನಿಮಾಗಳಿಗೆ ಶಿವ್ ಹರಿ ಅವರ ಸಂಗೀತ ನಿರ್ದೇಶನ ಇದ್ದು ಅವೆಲ್ಲವೂ ಭಾರೀ ಹಿಟ್ ಆಗಿವೆ. ಸಿಲ್ ಸಿಲಾ ಹಿಂದೀ ಸಿನಿಮಾದ ಹಾಡುಗಳಿಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿತು. ಉಸ್ತಾದ್ ಬಿಸ್ಮಿಲ್ಲಾ ಖಾನ್, ಉಸ್ತಾದ ವಿಲಾಯತ್ ಖಾನ್, ಝಾಕೀರ್ ಹುಸೇನ್, ಅಲ್ಲಾ ರಖಾ, ಹರಿ ಪ್ರಸಾದ್ ಚೌರಾಸಿಯಾ ಅವರೊಂದಿಗೆ ಶಿವಕುಮಾರ್ ಶರ್ಮಾ ಅವರ ಜುಗಲಬಂದಿ ಕಾರ್ಯಕ್ರಮಗಳ ವಿಡಿಯೋಗಳನ್ನು ಯು ಟ್ಯೂಬ್ ವೇದಿಕೆಯಲ್ಲಿ ನೋಡಿದಾಗ ರೋಮಾಂಚನ ಆಗುತ್ತದೆ. ಸಂಗೀತದ ದೈವಿಕ ಸ್ಪರ್ಶಕ್ಕೆ ನಾವು ನಮಗೆ ಅರಿವಿಲ್ಲದಂತೆ ಒಳಗಾಗುತ್ತೇವೆ.

ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ದೊರೆತಿವೆ. ಅಮೆರಿಕಾದ ಬಾಲ್ಟಿಮೋರ್ ಎಂಬ ಪ್ರಾಂತ್ಯವು ಅವರಿಗೆ ಗೌರವ ಸಿಟಿಜನ್ ಶಿಪ್ ನೀಡಿದೆ. ಭಾರತದ ಎಲ್ಲಾ ರಾಷ್ಟ್ರೀಯ ಸಂಗೀತ ಮಹೋತ್ಸವಗಳ ವೇದಿಕೆಯಲ್ಲಿ ಶರ್ಮಾ ಅವರ ಸಂಗೀತ ಕಛೇರಿ ಇರುತ್ತಿತ್ತು ಮತ್ತು ಅದು ಸ್ಟಾರ್ ಆಕರ್ಷಣೆ ಆಗಿರುತಿತ್ತು!

ನೂರಾರು ದೇಶಗಳ ಸಂಗೀತದ ವೇದಿಕೆಗಳಲ್ಲಿ ಅವರ ಸಂತೂರ್ ಮಾಧುರ್ಯವನ್ನು ಕೇಳುವುದೇ ಚಂದ. ಅವರಿಗೆ ಅಮೆರಿಕ, ಫ್ರಾನ್ಸ್, ಇಟಲಿ, ಜರ್ಮನಿ, ಲಂಡನ್ ಮೊದಲಾದ ಕಡೆ ಕೂಡ ಸಾವಿರಾರು ಅಭಿಮಾನಿಗಳು ಇದ್ದಾರೆ.

“ಸಂಗೀತವು ಕೇವಲ ಮನೋರಂಜನೆಗಾಗಿ ಅಲ್ಲ. ಅದು ಒಂದು ದಿವ್ಯವಾದ ಆರಾಧನೆ. ನನ್ನ ಸಂಗೀತ ಕಚೇರಿಯಲ್ಲಿ ಕುಳಿತು ಸಂಗೀತ ಆಲಿಸುವ ಶ್ರೋತೃಗಳು ಆಧ್ಯಾತ್ಮಿಕ ಸ್ಪರ್ಶಕ್ಕೆ ಒಳಗಾದರೆ ಮಾತ್ರವೆ ನನಗೆ ಸಮಾಧಾನ” ಎಂದಿದ್ದಾರೆ ಶರ್ಮಾ ಅವರು. ಸಂಗೀತಕ್ಕೆ ಭಾಷೆಯು ಬೇಕಾಗಿಲ್ಲ ಎಂದು ನನಗೆ ಅವರಿಂದ ಅರ್ಥವಾಗಿದೆ.

ಇಂದು ( ಜನವರಿ 13) ಅವರ ಹುಟ್ಟಿದ ಹಬ್ಬ. ಕಳೆದ ವರ್ಷ ಮೇ 10ರಂದು ಅವರು ವಿಧಿವಶರಾದದ್ದು ಸಂಗೀತಪ್ರಿಯರಿಗೆ ತುಂಬಲಾಗದ ನಷ್ಟ ಆಗಿದೆ. ಅವರ ಕೈಯಲ್ಲಿ ಹಿತವಾಗಿ ತಬ್ಬಿಕೊಂಡು ಕೂತಿರುತ್ತಿದ್ದ ಸಂತೂರ್ ವಾದ್ಯ ಮತ್ತು ಆದರ ಎಣೆ ಇಲ್ಲದ ಮಾಧುರ್ಯಕ್ಕೆ ಶರಣಾಗಿ ಪಂಡಿತ್ ಜಿಯವರಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | Vivekananda Jayanti: ವಿವೇಕಾನಂದ ಮತ್ತು ಅವರ ಮೇಲಿನ ಮೂರು ಪ್ರಭಾವಗಳು

Exit mobile version