ಆಕೆ ಪ್ರೀತಿಲತಾ ವಡ್ಡೆದಾರ್!
ಹುಟ್ಟಿದ್ದು ಬಂಗಾಳದ ಚಿತ್ತಗಾಂಗ್ ಜಿಲ್ಲೆಯ ಒಂದು ಹಳ್ಳಿಯಲ್ಲಿ. 1911ರ ಮೇ ಐದರಂದು ಆಕೆಯ ಜನನ ಆಗಿತ್ತು. ಅವರ ತಂದೆ ಮುನಿಸಿಪಾಲಿಟಿಯಲ್ಲಿ ಒಬ್ಬ ಸಾಮಾನ್ಯ ಗುಮಾಸ್ತ ಆಗಿದ್ದರು. ತುಂಬಾ ಬಡತನದ ಕುಟುಂಬ ಅದು. ಆದರೆ ಪ್ರೀತಿಲತಾ ತುಂಬಾ ಬುದ್ಧಿವಂತೆ. ಆಕೆ ಢಾಕಾದ ಈಡನ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಮುಗಿಸುತ್ತಾರೆ. ಮುಂದೆ ತತ್ವಶಾಸ್ತ್ರದಲ್ಲಿ ರ‍್ಯಾಂಕ್ ಸಹಿತ ಪದವಿ ಪಡೆಯುತ್ತಾರೆ.
ಸ್ಫೂರ್ತಿ ನೀಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕಥೆ!
ಆಗಲೇ ಆಕೆಗೆ ಕೈಗೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಹೋರಾಟದ ಪುಸ್ತಕ ಬಂದಿತ್ತು. ಆ ಪುಸ್ತಕವು ಆಕೆಯ ಬದುಕನ್ನೇ ಬದಲಾವಣೆ ಮಾಡಿತು ಅನ್ನಬಹುದು. ಮುಂದೆ ಆಕೆ ಕಾಲೇಜಿನಲ್ಲಿ ಕ್ರಾಂತಿಕಾರಿ ಭಾಷಣ ಆರಂಭ ಮಾಡಿದರು. ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಆಕೆಯ ಹೆಸರು ಕೇಳಿಬರಲು ತೊಡಗಿತು. ಇದನ್ನೇ ಕಾರಣ ಮಾಡಿಕೊಂಡು ಆಗಿನ ಕಲ್ಕತ್ತ ವಿವಿಯ ಬ್ರಿಟಿಷ್ ಅಧಿಕಾರಿಗಳು ಆಕೆ ರ‍್ಯಾಂಕ್ ಪಡೆದಿದ್ದರೂ ಆಕೆಗೆ ಪದವಿ ನೀಡಲು ನಿರಾಕರಿಸಿದರು!
ನನಗೆ ನಿಮ್ಮ ಪದವಿಯ ಭಿಕ್ಷೆ ಬೇಡ ಎಂದು ಸಿಡಿದು ನಿಂತರು ಪ್ರೀತಿ ಲತಾ! ಮುಂದೆ ಒಂದು ಪ್ರಾಥಮಿಕ ಶಾಲೆಯಲ್ಲಿ ಒಂದು ವರ್ಷ ಪಾಠ ಮಾಡಿದರು.
ಸೂರ್ಯಸೇನರಿಂದ ಕ್ರಾಂತಿಯ ದೀಕ್ಷೆ!
ಆಗ ಬಂಗಾಳದಲ್ಲಿ ಸಶಸ್ತ್ರ ಕ್ರಾಂತಿಕಾರಿ ಚಟುವಟಿಕೆಗಳ ‘ಮಾಸ್ಟರ್ ಮೈಂಡ್ ‘ಆಗಿದ್ದವರು ಸೂರ್ಯಸೇನರು. ಅವರ ಬಗ್ಗೆ ತಿಳಿದು ಅವರನ್ನು ಭೇಟಿ ಮಾಡಿ ತನಗೂ ಹೋರಾಟದಲ್ಲಿ ಒಂದು ಅವಕಾಶ ಕೊಡಬೇಕು ಎಂದು ಆಕೆ ವಿನಂತಿ ಮಾಡಿದರು. ಆಗ ಬಂಗಾಳದಲ್ಲಿ ಸೂರ್ಯಸೇನರ ‘ಇಂಡಿಯನ್ ರಿಪಬ್ಲಿಕ್ ಆರ್ಮಿ’ಯು ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸುತ್ತಿತ್ತು. ಅಲ್ಲಿದ್ದ ಯುವಕ, ಯುವತಿಯರಿಗೆ ಸೂರ್ಯಸೇನರು ಶಸ್ತ್ರಾಸ್ತ್ರ ತರಬೇತಿಗಳನ್ನು ಕೊಡುತ್ತಿದ್ದರು. ಎಲ್ಲ ಕ್ರಾಂತಿಕಾರಿಗಳು ಅವರನ್ನು ಗೌರವದಿಂದ ‘ಮಾಸ್ಟರ್ ದಾ’ ಎಂದು ಕರೆಯುತ್ತಿದ್ದರು.
ಆದರೆ ಸೂರ್ಯಸೇನ್ ಅವರಿಗೆ ಈ ಸಣಕಲು ಮಹಿಳೆಯ ಮೇಲೆ ಯಾಕೋ ವಿಶ್ವಾಸ ಬರಲಿಲ್ಲ. ನಿಮಗೆ ಇಂಡಿಯನ್ ರಿಪಬ್ಲಿಕ್ ಆರ್ಮಿಗೆ ಪ್ರವೇಶ ಕೊಡುವುದಿಲ್ಲ ಎಂದು ಬಿಟ್ಟರು!
ಪ್ರೀತಿಲತಾ ಅವರಿಗೆ ಕಣ್ಣು ತುಂಬಾ ನೀರು ಬಂತು. ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿ ಆಕೆಯು ಮನೆಯಿಂದ ಆಗಲೇ ಹೊರಬಂದಿದ್ದರು. ಆದರೆ ಸೂರ್ಯ ಸೇನರು ಆಕೆಯನ್ನು ಸೇರಿಸಿಕೊಳ್ಳಲು ಒಪ್ಪಲೇ ಇಲ್ಲ. ಆಗ ಆಕೆ ‘ನೀವು ನನ್ನನ್ನು ಸೇರಿಸಿಕೊಳ್ಳದಿದ್ದರೆ ಬೇಡ, ನಾನು ಇಲ್ಲಿಯೇ ಇರುತ್ತೇನೆ. ನೀವು ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ’ ಎಂದು ಹೇಳಿ ಅಲ್ಲಿಯೇ ಉಳಿದರು! ಅಂದು ಮನೆ ಬಿಟ್ಟು ಬಂದ ಅವರು ಮತ್ತೆ ತನ್ನ ಮನೆಗೆ ಜೀವಂತ ಹೋಗಲೇ ಇಲ್ಲ!
ಸಣಕಲು ಶರೀರದಲ್ಲಿ ಬುಲೆಟ್ ಪವರ್!
ಸೂರ್ಯಸೇನರು ಆಕೆಗೆ ಕೊಟ್ಟ ಮೊದಲ ಕ್ರಾಂತಿಕಾರಿ ಪ್ರಾಜೆಕ್ಟ್ ಎಂದರೆ ಜಲಾಲಾಬಾದ್ ದಾಳಿಯ ಸಣ್ಣ ಹೊಣೆಗಾರಿಕೆ. ಅದನ್ನು ಆಕೆ ಎಷ್ಟು ಚೆನ್ನಾಗಿ ನಿಭಾಯಿಸಿದರು ಎಂದರೆ ಸ್ವತಃ ಸೂರ್ಯಸೇನರೆ ಮೂಗಿನ ಮೇಲೆ ಬೆರಳು ಇಟ್ಟರು! ಇಷ್ಟೊಂದು ಸಣಕಲು ಆಗಿದ್ದ 20 ವರ್ಷದ ಈ ಹುಡುಗಿಯು ಸಾಮಾನ್ಯಳಲ್ಲ, ಬೆಂಕಿ ಚೆಂಡು ಎಂದು ಅವರಿಗೆ ಅರ್ಥ ಆಗಿ ಹೋಯಿತು!
ಹಾಗೆಯೇ ಪ್ರೀತಿಲತಾ ಅವರಿಗೆ ಇಂಡಿಯನ್ ರಿಪಬ್ಲಿಕ್ ಆರ್ಮಿಯ ಪ್ರವೇಶವೂ ದೊರೆಯಿತು. ಯುದ್ಧ ತರಬೇತು ಕೂಡ ಆರಂಭ ಆಯಿತು. ಅಂದಿನಿಂದ ಆಕೆ ಸೂರ್ಯಸೇನರ ಕ್ರಾಂತಿಕಾರಿ ಸೇನೆಯ ಪ್ರಮುಖ ನಾಯಕಿ ಆಗಿ ರೂಪುಗೊಂಡಳು!
ಬ್ರಿಟಿಷ್ ಸರಕಾರವನ್ನು ನಡುಗಿಸಿದ ಚಿತ್ತಗಾಂಗ್ ಶಸ್ತ್ರಾಸ್ತ್ರ ಲೂಟಿ!
ಆಗ ಸೂರ್ಯಸೇನರ ಕ್ರಾಂತಿಕಾರಿ ಸೇನೆಯ ತರಬೇತಿಗೆ ಆಧುನಿಕ ಶಸ್ತ್ರಾಸ್ತ್ರಗಳ ಅಗತ್ಯ ಇತ್ತು. ಅದೇ ಹೊತ್ತಿಗೆ ಬಂಗಾಳದ ಚಿತ್ತಗಾಂಗ್‌ನಲ್ಲಿ ಬ್ರಿಟಿಷ್ ಸರಕಾರದ ಆಧುನಿಕ ಶಸ್ತ್ರಾಸ್ತ್ರಗಳ ಕೋಠಿಯು ಇತ್ತು. ಅದನ್ನು ಲೂಟಿ ಮಾಡುವ ಮೆಗಾ ಪ್ರಾಜೆಕ್ಟ್‌ನ ನೀಲಿ ನಕಾಶೆಯನ್ನು ಸೂರ್ಯಸೇನರು ಸಿದ್ಧ ಮಾಡಿದರು. ಹತ್ತಾರು ಯುವ ಕ್ರಾಂತಿಕಾರಿಗಳ ಸೈನ್ಯವು ಸೂರ್ಯ ಸೇನರ ಆಜ್ಞೆಗಳನ್ನು ಪಾಲಿಸಲು ಹೊರಟುನಿಂತಿತು.
1930ರ ಏಪ್ರಿಲ್ 18ರಂದು ನಡೆದ ಈ ಘಟನೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖವಾದ ಘಟನೆಯಾಗಿ ದಾಖಲಾಯಿತು. ಆಗ ಆ ಸೇನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಇದೇ ಪ್ರೀತಿಲತಾ!
ಈ ಕ್ರಾಂತಿಯು ಒಂದು ಹಂತದಲ್ಲಿ ವಿಫಲ ಆದರೂ ಬ್ರಿಟಿಷ್ ಸರಕಾರ ನಡುಗಿದ್ದು ಸುಳ್ಳಲ್ಲ! ಆ ರಕ್ತಸಜ್ಜಿತ ಕ್ರಾಂತಿಯಲ್ಲಿ ಇಂಡಿಯನ್ ರಿಪಬ್ಲಿಕ್ ಆರ್ಮಿಯ 12 ಕ್ರಾಂತಿಕಾರಿಗಳು ಹುತಾತ್ಮರಾದರು. ಪ್ರೀತಿಲತಾ ತಪ್ಪಿಸಿಕೊಂಡು ಬಂದರು.
ಯುರೋಪ್ ಕ್ಲಬ್ಬಿನ ರಕ್ತಪಾತ!
1932ರ ಹೊತ್ತಿಗೆ ಇನ್ನೊಂದು ಶಸ್ತ್ರ ಕ್ರಾಂತಿಗೆ ಚಿತ್ತಗಾಂಗ್ ನಗರವು ಸಾಕ್ಷಿ ಆಯಿತು. ಆ ಜಿಲ್ಲೆಯ ಪಹರ್ಥಳಿ ಎಂಬಲ್ಲಿ ಬ್ರಿಟಿಷರು ನಡೆಸುತ್ತಿದ್ದ ಒಂದು ಯುರೋಪಿಯನ್ ಕ್ಲಬ್ ಇತ್ತು. ಅದರಲ್ಲಿ ‘ಭಾರತೀಯರಿಗೆ ಮತ್ತು ನಾಯಿಗಳಿಗೆ ಪ್ರವೇಶ ಇಲ್ಲ!’ ಎಂಬ ಬೋರ್ಡನ್ನು ಬ್ರಿಟಿಷರು ಹಾಕಿದ್ದರು. ಇದು ಭಾರತಕ್ಕೆ ಅಪಮಾನ ಎಂದು ಸೂರ್ಯ ಸೇನರು ಅಭಿಪ್ರಾಯಕ್ಕೆ ಬಂದರು. ಕ್ರಾಂತಿಕಾರಿಗಳು ಒಟ್ಟು ಸೇರಿ ಆ ಯುರೋಪಿಯನ್ ಕ್ಲಬ್ಬನ್ನು ಉಡಾಯಿಸಬೇಕು ಎಂದು ಪ್ಲಾನ್ ರೆಡಿ ಆಯಿತು. ಅದರ ನಾಯಕತ್ವ ದೊರೆತದ್ದು ಇದೇ ಪ್ರೀತಿಲತಾ ಅವರಿಗೆ!
1932 ಸೆಪ್ಟೆಂಬರ್ 23ರಂದು 12 ಕ್ರಾಂತಿಕಾರಿಗಳು ಆ ಯುರೋಪಿಯನ್ ಕ್ಲಬ್ಬಿನ ಮೇಲೆ ಬಾಂಬ್ ದಾಳಿ ನಡೆಸಿದರು. ಸ್ವತಃ ಪ್ರೀತಿಲತಾ ಪುರುಷ ವೇಷ ಧರಿಸಿ ಮುಂದೆ ನಿಂತಿದ್ದರು! ತುಂಬಾ ಹೊತ್ತು ಗುಂಡಿನ ದಾಳಿ ನಡೆಯಿತು. ಗುಂಡುಗಳು ಎರಡೂ ಕಡೆಯಿಂದ ಹಾರಿದವು. 13 ಬ್ರಿಟಿಷರು ಗಾಯಗೊಂಡರು ಮತ್ತು ಓಡಿಹೋದರು! ಒಬ್ಬ ಯುರೋಪಿಯನ್ ಮಹಿಳೆ ಪ್ರಾಣ ಕಳೆದುಕೊಂಡರು. ಪ್ರೀತಿಲತಾ ಕೂಡ ಗಾಯಗೊಂಡರು. ಆದರೂ
ಸಿಂಹಿಣಿಯಂತೆ ಮುಂದೆ ನುಗ್ಗಿದ್ದರು. ತನ್ನ ಜೊತೆ ಇದ್ದ ಯುವ ಪಡೆಗೆ ಧೈರ್ಯ ತುಂಬಿದರು.
ಆ ದಾಳಿಯ ಸುದ್ದಿಯು ದೊರೆತ ತಕ್ಷಣ ಬ್ರಿಟಿಷ್ ಪೊಲೀಸರು ಅಲ್ಲಿಗೆ ಧಾವಿಸಿಬಂದು ಆ ಪ್ರದೇಶವನ್ನು ಸುತ್ತುವರಿದರು. ಅವರಲ್ಲಿ ಅತ್ಯಾಧುನಿಕ ಶಸ್ತ್ರಗಳು ಇದ್ದವು. ಅವರ ಕೈ ಮೇಲಾಗುವ ಲಕ್ಷಣ ಕಂಡುಬಂದಿತು. ಆಗ ಒಂದು ಕ್ಷಣ ಕೂಡ ಯೋಚನೆ ಮಾಡದೆ ಪ್ರೀತಿಲತಾ ತಾನು ಮೊದಲೇ ತಂದಿದ್ದ ಸೈನೈಡ್ ಕ್ಯಾಪ್ಸೂಲ್ ನುಂಗಿ ಅಲ್ಲಿಯೇ ಪ್ರಾಣ ಬಿಟ್ಟರು! ಕೊನೆಗೂ ಪೊಲೀಸರ ಕೈಗೆ ಸಿಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಬಂಗಾಳದ ಆ ಬೆಂಕಿ ಚೆಂಡು ಅಲ್ಲಿಯೇ ತನ್ನ ಉಸಿರನ್ನು ಚೆಲ್ಲಿ ಹುತಾತ್ಮರಾದರು. ಆಗ ಆಕೆಯ ವಯಸ್ಸು ಕೇವಲ 21 ಮಾತ್ರ!
ಕೊನೆಗೂ ಆಕೆಗೆ ನ್ಯಾಯ ಸಿಕ್ಕಿತು!
ಮುಂದೆ ಭಾರತ ಸ್ವಾತಂತ್ರ್ಯ ಪಡೆದ ನಂತರ ಅದೇ ಯುರೋಪಿಯನ್ ಕ್ಲಬ್ ಎದುರು ಆಕೆಯ ಎತ್ತರದ ಪುತ್ತಳಿ ನಿರ್ಮಾಣವಾಯಿತು. ಆಕೆಗೆ ಬಂಗಾಳವು ‘ಬಂಗಾಳದ ಮೊದಲ ಬಲಿದಾನಿ ಮಹಿಳೆ’ ಎಂಬ ಬಿರುದು ಕೊಟ್ಟು ಗೌರವಿಸಿತು. ಅದೆಲ್ಲಕ್ಕಿಂತ ಹೆಚ್ಚಾಗಿ ಬ್ರಿಟಿಷ್ ಅಧಿಕಾರಿಗಳು ಕಿತ್ತುಕೊಂಡಿದ್ದ ಆಕೆಯ ಪದವಿಯ ಪ್ರಮಾಣಪತ್ರವನ್ನು 2012ರಲ್ಲಿ ಆಕೆಯ ಕುಟುಂಬಸ್ಥರಿಗೆ ಕಲ್ಕತ್ತ ವಿವಿಯು ನೀಡಿ ಆಕೆಯ ಕುಟುಂಬದ ಕ್ಷಮೆ ಯಾಚಿಸಿತು. ಅಂದರೆ ಬರೋಬ್ಬರಿ 82 ವರ್ಷಗಳ ನಂತರ ಆಕೆಗೆ ನ್ಯಾಯವು ದೊರೆಯಿತು ಅನ್ನುವುದು ಕೂಡ ಒಂದು ಇತಿಹಾಸ!
ಪ್ರೀತಿಲತಾ ಅವರ ಬದುಕು ಮತ್ತು ಹೋರಾಟಗಳು ಈಗಿನ ಯುವಜನತೆಗೆ ಪಠ್ಯಪುಸ್ತಕದ ಭಾಗ ಆಗಲಿ ಎನ್ನುವುದು ನನ್ನ ಕೋರಿಕೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನೇತಾಜಿ ಪ್ರಾಣ ಉಳಿಸಲು ತನ್ನ ಗಂಡನನ್ನೇ ಕೊಂದು ಹಾಕಿದ ನೀರಾ ಆರ್ಯ!