Site icon Vistara News

ರಾಜ ಮಾರ್ಗ ಅಂಕಣ : 700 ಸಿನಿಮಾಗಳಲ್ಲಿ ನಟನೆ ; ಪ್ರೇಮ್‌ ನಝೀರ್‌ ದಾಖಲೆ ಮುರಿಯುವ ಗಂಡು ಇನ್ನೂ ಹುಟ್ಟಿಲ್ಲ!

Prem Nazir

ಈಗಿನ ನಮ್ಮ ಸಾಕಷ್ಟು ಮಾಸ್ ಹೀರೋಗಳು ಹತ್ತಿಪ್ಪತ್ತು ವರ್ಷಗಳ ಅವಧಿಯಲ್ಲಿ 100-120ರಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿ ಅಷ್ಟಕ್ಕೆ ಸುಸ್ತು ಹೊಡೆಯುತ್ತಾರೆ! ತಮ್ಮ ವರ್ಚಸ್ಸನ್ನು ಕಳೆದುಕೊಂಡ ನಂತರ ಸವಕಲು ನಾಣ್ಯವೇ ಆಗುತ್ತಾರೆ. ಆದರೆ ಈ ಮಲಯಾಳಂ ಸಿನಿಮಾ ಸೂಪರ್ ಸ್ಟಾರ್ (Malayalam Super Star) ಅಭಿನಯಿಸಿದ್ದು ಬರೋಬ್ಬರಿ 700ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ! ಅವುಗಳಲ್ಲಿ 90% ಸಿನಿಮಾಗಳಲ್ಲಿ ಅವರು ಹೀರೋ ಆಗಿಯೇ ಅಭಿನಯ ಮಾಡಿದ್ದಾರೆ! 1952ರಿಂದ 1985ರವರೆಗೆ ಅಂದಾಜು ಮೂವತ್ತಮೂರು ವರ್ಷಗಳ ಅವಧಿಯಲ್ಲಿ ಆತನಿಗೆ ಮಲಯಾಳಂ ಸಿನಿಮಾ ರಂಗದಲ್ಲಿ ಸ್ಪರ್ಧೆಯೇ ಇರಲಿಲ್ಲ! ಒಂದೊಂದು ವರ್ಷ 30-40 ಸಿನಿಮಾಗಳಲ್ಲಿ ಅಭಿನಯ ಮಾಡುವುದು ಸುಲಭ ಅಲ್ಲ (ರಾಜ ಮಾರ್ಗ ಅಂಕಣ).

ಎವರ್‌ಗ್ರೀನ್‌ ಹೀರೊ ಪ್ರೇಮ್ ನಝೀರ್

ಮಲಯಾಳಂ ಚಿತ್ರರಂಗದಲ್ಲಿ ‘ಎವರ್ ಗ್ರೀನ್ ಹೀರೋ’ (Evergreen Hero) ಎಂದು ಕರೆಸಿಕೊಂಡವರು ಪ್ರೇಮ್‌ ನಝೀರ್‌ (Prem Nazir). ಅವರು ಕ್ರಿಯೇಟ್ ಮಾಡಿದ್ದು ಹತ್ತಾರು ಗಿನ್ನೆಸ್ ದಾಖಲೆಗಳನ್ನು (Guinness record)! ಅವರು ಅಭಿನಯ ಮಾಡಿದ ಸಿನಿಮಾಗಳ ಸಕ್ಸಸ್ ರೇಟ್ ಕೂಡ 80% ಆಗಿತ್ತು. ರೊಮ್ಯಾಂಟಿಕ್, ಐತಿಹಾಸಿಕ, ಜಾನಪದ, ಪೌರಾಣಿಕ, ಆಕ್ಷನ್ ಮೊದಲಾದ ಎಲ್ಲ ವೈವಿಧ್ಯಮಯ ಸಿನಿಮಾಗಳಲ್ಲಿ ಅವರು ಅಭಿನಯ ಮಾಡಿದ್ದಾರೆ.

ಮಲಯಾಳಂ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ದೀರ್ಘ ಕಾಲದಲ್ಲಿ ಮೆರೆದ ಪ್ರೇಮ್ ನಝೀರ್ ಕಾಲೇಜು ದಿನಗಳಲ್ಲಿ ನಾಟಕದ ಕಲಾವಿದ ಆಗಿ ಮಿಂಚಿದವರು. 1951ರಲ್ಲಿ ಅವರು ಶೇಕ್ಸ್‌ಪಿಯರ್ ಬರೆದ The Merchant of Venice ನಾಟಕದಲ್ಲಿ ಶೈಲಾಕ್ ಪಾತ್ರದಲ್ಲಿ ನೂರಾರು ಬಾರಿ ಅಭಿನಯ ಮಾಡಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದವರು. 1952ರಲ್ಲಿ ‘ಮರು ಮಕಲ್ ‘ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ ಅವರು 1985ರಲ್ಲಿ ‘ವೆಲ್ಲಾನಿಕ ಪಟ್ಟನಮ್’ ಸಿನಿಮಾದ ಮೂಲಕ ತನ್ನ ಚಿತ್ರಗಳ ಪ್ರಯಾಣ ಮುಗಿಸಿದರು. ಅಂದರೆ ಒಟ್ಟು ಮೂವತ್ತಮೂರು ವರ್ಷ ಅವರೇ ಮಲಯಾಳಂ ಸಿನಿಮಾ ರಂಗಕ್ಕೆ ಸ್ಟಾರ್!

ಎಷ್ಟೇ ವಯಸ್ಸಾದರೂ ರೊಮ್ಯಾನ್ಸ್‌ ಮಾಡಲು ಹಿಂದೆ ಮುಂದೆ ನೋಡಿಲ್ಲ!

ಅವರ ಚಿತ್ರ ಜೀವನದಲ್ಲಿ ಪ್ರೇಮ್ ನಝೀರ್ ಅವರು ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದಾರೆ.

ಸಾಮಾಜಿಕ, ಪತ್ತೆದಾರ, ಪೌರಾಣಿಕ, ಐತಿಹಾಸಿಕ, ಕಲಾತ್ಮಕ, ಜಾನಪದ, ತಿಳಿಹಾಸ್ಯ, ರೊಮ್ಯಾಂಟಿಕ್, ಕಥಾ ಪ್ರಧಾನ ಮೊದಲಾದ ಎಲ್ಲ ಜಾನರಿನ ವೈವಿಧ್ಯಮಯ ಸಿನೆಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಪ್ರತೀ ದಿನಕ್ಕೆ ಮೂರು ಮೂರು ಶಿಫ್ಟ್‌ಗಳಲ್ಲಿ ಅಭಿನಯಿಸಿದರೂ ಅವರು ಒಂದಿಷ್ಟು ದಣಿವು ಇಲ್ಲದೆ ಮತ್ತೆ ಬಂದು ಕ್ಯಾಮೆರಾದ ಮುಂದೆ ನಿಲ್ಲುತ್ತಿದ್ದರು. ಹಾಗೆ ಅವರು ಚಿರಂಜೀವಿ ನಟ! ಹಾಗೆಯೇ ಗಿನ್ನೆಸ್ ವಿಶ್ವ ದಾಖಲೆಯ ಮೇರುನಟ!

ಅವರ ದಾಖಲೆಗಳ ವಿವರ ನೋಡಿದರೆ ನೀವು ಖಂಡಿತ ಅಚ್ಚರಿ ಪಡುತ್ತೀರಿ

  1. ಒಟ್ಟು ಏಳುನೂರು ಸಿನಿಮಾಗಳಲ್ಲಿ ಅಭಿನಯ. ಅದರಲ್ಲೂ 570 ಸಿನಿಮಾಗಳಲ್ಲಿ ಹೀರೋ ಆಗಿ ಅಭಿನಯ! ಎರಡೂ ದಾಖಲೆಗಳು.
  2. ತಮ್ಮ ಚಿತ್ರ ಜೀವನದಲ್ಲಿ 85 ನಾಯಕಿಯರ ಜೊತೆಗೆ ಅಭಿನಯ ಕೂಡ ಗಿನ್ನೆಸ್ ದಾಖಲೆ!
  3. ಖ್ಯಾತ ನಟಿ ಶೀಲಾ ಜೊತೆಗೆ ಅವರು 130 ಯಶಸ್ವೀ ಸಿನಿಮಾಗಳಲ್ಲಿ ಹೀರೋ! ಈ ದಾಖಲೆಯನ್ನು ಮುಂದೆ ಕೂಡ ಯಾರೂ ಮುರಿಯುವ ಹಾಗೆ ಇಲ್ಲ!
  4. ಖ್ಯಾತ ಹಾಸ್ಯನಟ ಆಡೂರ್ ಬಾಸಿ ಜೊತೆಗೆ ನೂರಕ್ಕಿಂತ ಹೆಚ್ಚು ಚಿತ್ರಗಳು!
  5. 1973ರಲ್ಲಿ 30 ಚಿತ್ರ ಬಿಡುಗಡೆ, 1977ರಲ್ಲಿ ಮತ್ತೆ 30, 1979ರಲ್ಲಿ ಬರೋಬ್ಬರಿ 39 ಸಿನಿಮಾ! ಎಲ್ಲವೂ ದಾಖಲೆ
  6. ಒಟ್ಟು 40 ಸಿನಿಮಾಗಳಲ್ಲಿ ದ್ವಿಪಾತ್ರದ ನಿರ್ವಹಣೆಯೂ ದಾಖಲೆ! ಮೂರು ಸಿನಿಮಾಗಳಲ್ಲಿ ತ್ರಿಪಾತ್ರ ನಿರ್ವಹಣೆ.
  7. ಕರ್ನಾಟಕ ಸಂಗೀತ ಆಳವಾಗಿ ಅಭ್ಯಾಸ ಮಾಡಿದ್ದ ಅವರು ಹಲವು ಹಾಡುಗಳನ್ನು ಹಾಡಿದ್ದಾರೆ.
  8. ಒಬ್ಬನೇ ನಟನಿಗೆ ಅತೀ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆ ಅದು ಯೇಸುದಾಸ್ ಹೆಸರಿನಲ್ಲಿ ಇದೆ. ಪ್ರೇಮ್ ನಝೀರ್ ಅವರಿಗಾಗಿ ಯೇಸುದಾಸ್ ಹಾಡಿದ್ದು ಹಲವು ಸಾವಿರ ಹಾಡುಗಳನ್ನು!
  9. ರಾಮ, ಕೃಷ್ಣ, ಅಯ್ಯಪ್ಪ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಕೂಡ ಅವರು ಸೊಗಸಾಗಿ ಅಭಿನಯ ಮಾಡಿದ್ದಾರೆ.
  10. ತನ್ನ ಪ್ರಭಾವಗಳನ್ನು ಬಳಸಿ ನೂರಾರು ಹೊಸ ಕಲಾವಿದರನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡಿದ್ದು ಪ್ರೇಮ್ ನಝೀರ್ ಅವರ ಸಾಧನೆ. ಜಯನ್, ಸತ್ಯನ್, ಜಯಸುಧಾ, ಮೋಹನ್ ಲಾಲ್, ಮಮ್ಮುಟ್ಟಿ ಮೊದಲಾದ ಹಲವು ಅತ್ಯುತ್ತಮ ಕಲಾವಿದರು ಪ್ರೇಮ್ ನಝೀರ್ ಅವರ ಶಿಫಾರಸ್ಸು ಬಳಸಿಕೊಂಡು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿ ಮುಂದೆ ಮಿಂಚಿದವರು.
  11. ಸಾವಿರಾರು ಮಂದಿಗೆ ಪ್ರಚಾರ ಬಯಸದೇ ಅವರು ಸಹಾಯ ಮಾಡಿದ್ದ ಉದಾಹರಣೆಗಳು ಇವೆ.
  12. ತನ್ನ ಜೊತೆ ಅಭಿನಯ ಮಾಡಿದ ಎಲ್ಲ ನಟಿಯರ ಜೊತೆ ಅವರ ಬಗ್ಗೆ ಗಾಸಿಪ್ ಹರಡಿದರೂ ಅದ್ಯಾವುದನ್ನೂ ತಲೆಗೆ ಹಚ್ಚಿ ಕೊಳ್ಳದೆ ಕಲೆಯಲ್ಲಿ ಮುಳುಗಿ ಬಿಟ್ಟವರು ಪ್ರೇಮ್ ನಝೀರ್.
  13. ಅವರ ಯಾವುದೇ ಸಿನಿಮಾ ಸೋತರೂ ಆ ಸಿನಿಮಾದ ನಿರ್ಮಾಪಕರನ್ನು ಅವರೇ ಸಂಪರ್ಕ ಮಾಡಿ ಇನ್ನೊಂದು ಸಿನಿಮಾಕ್ಕೆ ಡೇಟ್ ಕೊಟ್ಟು ಸಂಭಾವನೆ ಪಡೆಯದೆ ಅಭಿನಯ ಮಾಡುತ್ತಿದ್ದರು.
  14. 55ನೇ ವರ್ಷದಲ್ಲಿ ಕೂಡ ಅವರು ಕಾಲೇಜು ಹುಡುಗನ ಹಲವು ಪಾತ್ರಗಳನ್ನು ಮಾಡಿದ್ದಾರೆ.

ಪ್ರೇಮ್ ನಝೀರ್ ಸಾಯುವ ಮೊದಲು ಹೇಳಿದ ಮಾತು

ಇಷ್ಟೆಲ್ಲ ದಾಖಲೆಗಳನ್ನು ಸೃಷ್ಟಿಸಿದ ಪ್ರೇಮ್ ನಝೀರ್ 1989ರಲ್ಲಿ ನಿಧನರಾಗುವ ದಿನ ಹೇಳಿದ ಮಾತು ನಿಜಕ್ಕೂ ಶ್ಲಾಘನೀಯ: ‘ನನ್ನ ಇನ್ನೂ ಕೆಲವು ಕನಸಿನ ಪಾತ್ರಗಳು ಬಾಕಿ ಆಗಿವೆ. ದೇವರು ಇನ್ನೊಂದು ಜನ್ಮ ಕೊಟ್ಟರೆ ಆ ಕನಸುಗಳನ್ನು ಪೂರ್ತಿ ಮಾಡಿಯೇ ಮಾಡುತ್ತೇನೆ!’

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಾನು ಆಜಾದ್‌, ಇನ್ನೆಂದೂ ನಿಮ್ಮ ಕೈಗೆ ಸಿಗಲಾರೆ; ಆ ಕ್ರಾಂತಿಕಾರಿ ಸಾವಿನಲ್ಲೂ ಮಾತು ಉಳಿಸಿಕೊಂಡಿದ್ದ!

Exit mobile version