Site icon Vistara News

ರಾಜ ಮಾರ್ಗ ಅಂಕಣ : ಜನರ ಪ್ರೀತಿಗಾಗಿ ಏಳು ಗುಡ್ಡ ಅಗೆದು ರಸ್ತೆ ಮಾಡಿದ ಭಾಪ್ಕರ್ ಮೇಷ್ಟ್ರು

Rajaram Bhapkar Mountain Man of Maharashtra

ತನ್ನ ಹೆಂಡತಿಯ ಪ್ರೀತಿಗಾಗಿ ಇಪ್ಪತ್ತೆರಡು ವರ್ಷ ಗುಡ್ಡವನ್ನು ಅಗೆದು ರಸ್ತೆಯನ್ನು ಮಾಡಿದ ಬಿಹಾರದ ‘ದಶರಥ್ ಮಾಂಝಿ’ (Dasharath Manzhi) ಸಾಧನೆಯು ನಮಗೆಲ್ಲ ಗೊತ್ತಿದೆ. ಅವರನ್ನು ಮೌಂಟನ್ ಮ್ಯಾನ್ (Mountain Man) ಎಂದು ಭಾರತವು ಕರೆದಿತ್ತು. ಅದೇ ರೀತಿ ತನ್ನ ಹುಟ್ಟೂರ ಜನರ ಸಂಕಷ್ಟಗಳಿಗೆ ಸ್ಪಂದಿಸಿ, 57 ವರ್ಷಗಳ ಕಾಲ ನಿರಂತರವಾಗಿ ಬೆವರು ಹರಿಸಿ ಏಳು ಗುಡ್ಡಗಳನ್ನು ಅಗೆದು, 40 ಕಿಲೋಮೀಟರ್ ಉದ್ದದ ರಸ್ತೆಯನ್ನು ನಿರ್ಮಿಸಿದ ಒಬ್ಬ ಮೇಷ್ಟ್ರ ಕಥೆ (ರಾಜ ಮಾರ್ಗ) ಇನ್ನೂ ರೋಮಾಂಚಕ ಆಗಿದೆ. ಅವರು ರಾಜಾರಾಂ ಭಾಪ್ಕರ್ (Rajaram bhapkar). ಒಬ್ಬರು ಮೇಷ್ಟ್ರು ಹೇಗೆ ಇರಬೇಕು ಎನ್ನುವುದಕ್ಕೆ ಒಂದು ಅತ್ಯುನ್ನತ ಮಾದರಿ.

He is the real man with the MISSION!

ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ (Ahmed Nagar district) ಗುಂಡೇಗಾಂವ್ ಎಂಬ ಹಳ್ಳಿಯಲ್ಲಿ ನಡೆದ ಕಥೆ ಇದು. ನಮ್ಮ ಇಂದಿನ ಹೀರೋ ಭಾಪ್ಕರ್ ಹುಟ್ಟಿದ್ದು ಅದೇ ಗ್ರಾಮದಲ್ಲಿ. ಅದು ಸ್ವಾತಂತ್ರ್ಯಪೂರ್ವದ ಕಾಲ. ಅವರ ಪೋಷಕರಿಗೆ ಏಳು ಜನ ಮಕ್ಕಳು. ಅದರಲ್ಲಿ ಇವರು ಕೊನೆಯವರು. ಅವರ ಕುಟುಂಬದಲ್ಲಿ ಬೇರೆ ಯಾರೂ ಓದಿರಲಿಲ್ಲ. ಅಮ್ಮನ ಆಸೆಗೆ ಕಟ್ಟುಬಿದ್ದು ಅವರು ಏಳನೇ ತರಗತಿವರೆಗೆ ಓದುತ್ತಾರೆ. ಒಂದು ವರ್ಷ ಶಿಕ್ಷಕರ ತರಬೇತಿ ಮುಗಿಸಿ 17ನೆಯ ವರ್ಷಕ್ಕೆ ಸರಕಾರಿ ಶಾಲೆಯ ಶಿಕ್ಷಕರಾದರು. ಇನ್ನೂ ಸರಿಯಾಗಿ ಮೀಸೆ ಮೂಡದ ಈ ಮೇಸ್ಟ್ರನ್ನು ಗ್ರಾಮದವರು ‘ಭಾಪ್ಕರ್ ಗುರೂಜಿ’ (Bhapkar guruji) ಎಂದು ಪ್ರೀತಿಯಿಂದ ಕರೆಯಲು ಶುರು ಮಾಡಿದರು. ಗಾಂಧೀಜಿ ಮತ್ತು ವಿನೋಬಾ ಭಾವೆಯವರ ಪ್ರಭಾವಕ್ಕೆ ಒಳಗಾದ ಕಾರಣ ಅವರಲ್ಲಿ ಸೇವಾ ಮನೋಭಾವ ಇತ್ತು. ಉದ್ದ ತೋಳಿನ ಬಿಳಿ ಅಂಗಿ, ಪೈಜಾಮ ಮತ್ತು ಗಾಂಧಿ ಟೋಪಿ ಅವರ ಶಾಶ್ವತವಾದ ಡ್ರೆಸ್ ಕೋಡ್ ಆಗಿತ್ತು.

ಪೇಟೆಗೆ ಹೋಗಲು ಜನರು ಏಳು ಗುಡ್ಡಗಳನ್ನು ಹತ್ತಿ ಇಳಿಯಬೇಕಾಗಿತ್ತು!

ಭಾಪ್ಕರ್ ಮೇಷ್ಟ್ರ ಹುಟ್ಟೂರಾದ ಗುಂಡೆಗಾಂವ್ ತುಂಬಾನೇ ಹಿಂದುಳಿದ ಹಳ್ಳಿ ಆಗಿತ್ತು. ಅಂಚೆ ಕಚೇರಿ, ವಿದ್ಯುತ್, ಆಸ್ಪತ್ರೆ, ಅಂಗಡಿ, ಮಾರುಕಟ್ಟೆ…… ಯಾವುದೂ ಇರಲಿಲ್ಲ. ಹತ್ತಿರದ ಪೇಟೆ ಅಂದರೆ ಅಹಮದ್ ನಗರ. ಅದು 30 ಕಿ.ಮೀ. ದೂರವಿತ್ತು. ಅಲ್ಲಿಗೆ ತಲುಪಲು ರಸ್ತೆಗಳೇ ಇಲ್ಲ. ಪೇಟೆಗೆ ಹೋಗಲು ಗ್ರಾಮದವರು ಏಳು ಗುಡ್ಡಗಳನ್ನು ಹತ್ತಿ ಇಳಿಯಬೇಕು. ಯಾರದಾದರೂ ಆರೋಗ್ಯ ಹಾಳಾದರೆ ಎತ್ತಿನ ಗಾಡಿಯಲ್ಲಿ ಅಥವಾ ಕುದುರೆಯ ಮೇಲೆ ಕೂರಿಸಿ ಪೇಟೆ ತಲುಪಲು ಏಳು ಗಂಟೆ ಬೇಕು. ಅಲ್ಲಿಗೆ ತಲುಪುವಾಗ ರೋಗಿಯು ಬದುಕಿ ಉಳಿಯುವ ಸಾಧ್ಯತೆ ತುಂಬಾ ಕಡಿಮೆಯಿತ್ತು. ಹಳ್ಳಿಯ ಮಕ್ಕಳು ಶಾಲೆಗೆ ಹೋಗಲು ಹತ್ತಾರು ಮೈಲು ಕಾಡಿನ ದಾರಿ ನಡೆಯಬೇಕು. ‘ಸಂತೋಷಾ ‘ ಎಂಬ ಗುಡ್ಡ 700 ಮೀಟರ್ ಎತ್ತರ ಇತ್ತು.

ಶ್ರಮದಾನದ ಮೂಲಕ ರಸ್ತೆ ಮಾಡಲು ಹೊರಟಾಗ ನಿರಾಸೆ

ನಗರಕ್ಕೆ ಸಂಪರ್ಕ ರಸ್ತೆಯನ್ನು ಮಾಡಲು ಹಲವು ಬಾರಿ ಪಂಚಾಯತ್ ಅಧಿಕಾರಿಗೆ ಅರ್ಜಿ ಕೊಟ್ಟರೂ ಯಾವ ಪ್ರಯೋಜನ ಆಗಿರಲಿಲ್ಲ. ಇದರಿಂದ ನೊಂದು ಕೊಂಡ ಮೇಷ್ಟ್ರು ಊರಿನವರನ್ನು ಸೇರಿಸಿ ಶ್ರಮದಾನದ ಮೂಲಕ ರಸ್ತೆಯನ್ನು ನಿರ್ಮಿಸುವ ಪ್ರಸ್ತಾವ ಅವರ ಮುಂದೆ ಇಟ್ಟರು. ಆದರೆ ಜನರ ಅಭಿಪ್ರಾಯಗಳು ಅತ್ಯಂತ ನಿರಾಶಾದಾಯಕ ಆಗಿದ್ದವು. ಸ್ವತಃ ಮೇಷ್ಟ್ರ ಮನೆಯವರು “ನಿಮಗೆ ಹುಚ್ಚಾ?” ಎಂದು ಕೇಳಿದ್ದರು. ಆದರೆ ಅವರು ಅದಕ್ಕೆಲ್ಲಾ ಕಿವಿಯನ್ನು ಕೊಡುವವರು ಅಲ್ಲ.

ಒಬ್ಬರೇ ಗುಡ್ಡ ಅಗೆಯಲು ಆರಂಭ ಮಾಡಿದರು!

1957ರ ಒಂದು ದಿನದ ಶುಭ ಮುಂಜಾನೆಯಲ್ಲಿ ಮೇಷ್ಟ್ರು ಗುದ್ದಲಿ, ಪಿಕ್ಕಾಸೆಗಳನ್ನು ಹಿಡಿದು ಬಂದು ಗುಡ್ಡವನ್ನು ಅಗೆಯಲು ಆರಂಭ ಮಾಡಿಯೇ ಬಿಟ್ಟರು. ಆದರೆ ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಮೇಷ್ಟ್ರ ಕೆಲಸವು ನಿಲ್ಲಲಿಲ್ಲ!

ಅವರು ಶಿಕ್ಷಕರಾದ ಕಾರಣ ಹಗಲು ಹೊತ್ತು ಮಕ್ಕಳಿಗೆ ಪಾಠ ಮಾಡುವವರು. ಬೆಳಗ್ಗೆ ಮತ್ತು ಸಂಜೆ, ಕೆಲವೊಮ್ಮೆ ಇಡೀ ರಾತ್ರಿ ಅವರ ಕೆಲಸ ನಡೆಯುತ್ತಿತ್ತು. ರಜಾ ದಿನಗಳಲ್ಲಿ ನಿಬಿಡ ಕೆಲಸ. ಅವರ ಬದ್ಧತೆಯನ್ನು ನೋಡಿದ ಗ್ರಾಮಸ್ಥರು ನಿಧಾನವಾಗಿ ಅವರೊಂದಿಗೆ ಸೇರಿಕೊಂಡರು. ಬಹಳ ಉತ್ಸಾಹದಲ್ಲಿ ರಸ್ತೆ ಮಾಡುವ ಕೆಲಸ ಮುಂದುವರಿಯಿತು.
ಭಾಪ್ಕರ್ ಮೇಷ್ಟ್ರ ಇಚ್ಛಾಶಕ್ತಿಯ ಮುಂದೆ ಗುಡ್ಡ ಕೂಡ ನಿಧಾನವಾಗಿ ಕರಗಿತು! ತನ್ನೊಂದಿಗೆ ದುಡಿಯುವ ಊರಿನವರಿಗೆ ಅವರು ತಮ್ಮ ಸಂಬಳದಿಂದ ದಿನಗೂಲಿ ನೀಡುತ್ತಿದ್ದರು.

ಇವರೇ ರಾಜಾರಾಂ ಭಾಪ್ಕರ್

ಹೊಸ ಎಂಜಿನಿಯರ್ಸ್ ಬಳಕೆ!

ಒಮ್ಮೆ ತುಂಬಾ ಆಳವಾದ ಕಣಿವೆಯಲ್ಲಿ ರಸ್ತೆ ಕೊರೆಯುವ ಕೆಲಸ ಕಷ್ಟ ಆಗತೊಡಗಿತು. ಆಗ ಮೇಷ್ಟ್ರು ಕೆಲವು ಎಂಜಿನಿಯರ್‌ಗಳ ಸಲಹೆ ಕೇಳಿದರು. ಆದರೆ ಅವರ್ಯಾರೂ ಊರಿನವರ ಸಹಾಯಕ್ಕೆ ಬರಲಿಲ್ಲ. ಆಗ ಮೇಷ್ಟ್ರು ಹೊಸ ಐಡಿಯಾ ಮಾಡಿದರು. ಎರಡು ಕತ್ತೆಗಳನ್ನು ತರಿಸಿದರು. ಅವುಗಳ ಬೆನ್ನಿನ ಮೇಲೆ ಜಲ್ಲಿಯನ್ನು ಚೀಲದಲ್ಲಿ ತುಂಬಿದರು. ಅದಕ್ಕೆ ಎರಡು ರಂಧ್ರ ಕೊರೆದು ಕತ್ತೆಗಳನ್ನು ನಿಧಾನವಾಗಿ ಕಣಿವೆ ಇಳಿಯಲು ಬಿಟ್ಟರು. ಆಗ ಜಲ್ಲಿ ಹದವಾಗಿ ಉದುರಿ ರಸ್ತೆ ಚಂದ ಆಯಿತು. ಆ ಕತ್ತೆಗಳನ್ನು ತಮ್ಮ ‘ಇಂಜಿನಿಯರ್ಸ್’ ಎಂದು ಮೇಷ್ಟ್ರು ಕರೆದರು!

ಮೇಷ್ಟ್ರ ಇಚ್ಛಾಶಕ್ತಿಯ ಮುಂದೆ ಗುಡ್ಡ ಕರಗಿತು!

ನಂಬಿದರೆ ನಂಬಿ, ಬರೋಬ್ಬರಿ 57 ವರ್ಷಗಳ ಕಾಲ ಈ ರಸ್ತೆಯ ನಿರ್ಮಾಣದ ಕೆಲಸವು ನಡೆಯಿತು! ಏಳು ಗುಡ್ಡಗಳನ್ನು ಪೂರ್ತಿ ಮಣಿಸಲಾಯಿತು! 40 ಕಿ.ಮೀ. ಉದ್ದವಾದ ರಸ್ತೆಯು ಪೂರ್ತಿ ಆಯಿತು! ಆ ರಸ್ತೆಯ ಮೇಲೆ ವಾಹನಗಳು ಓಡಾಡಲು ಶುರು ಆದವು. ಈಗ ಅವರ ಊರಿನಿಂದ ಅಹಮದ್ ನಗರಕ್ಕೆ ಕೇವಲ 45 ನಿಮಿಷದಲ್ಲಿ ಹೋಗಲು ಸಾಧ್ಯ ಆಗಿದೆ! ಸುತ್ತ ಮುತ್ತಲಿನ 40 ಗ್ರಾಮಗಳ ಜನರಿಗೆ ಈಗ ಆ ರಸ್ತೆ ಉಪಯೋಗ ಆಗುತ್ತಿದೆ.
ನಮ್ಮ ಮೇಷ್ಟ್ರು ಈಗ ನಿವೃತ್ತರಾಗಿದ್ದಾರೆ. ಈಗಲೂ ಗುಡಿಸಲಿನ ಹಾಗಿರುವ ಮನೆಯಲ್ಲಿ ವಾಸವಾಗಿದ್ದಾರೆ. ತಮ್ಮ ಸಂಬಳ ಮತ್ತು ಪಿಂಚಣಿಯ ಬಹುದೊಡ್ಡ ಭಾಗವನ್ನು ಅವರು ಆ ರಸ್ತೆ ನಿರ್ಮಾಣಕ್ಕಾಗಿ ಖರ್ಚು ಮಾಡಿದ್ದಾರೆ. ಸರಕಾರದಿಂದ ಒಂದು ರೂಪಾಯಿ ಕೂಡ ಅನುದಾನ ಪಡೆಯದೆ ರಸ್ತೆ ನಿರ್ಮಿಸಿದ ಖುಷಿ ಅವರಿಗೆ ಇದೆ. ಓರ್ವ ವಿಶೇಷ ಚೇತನ ಮಹಿಳೆಯನ್ನು ಮದುವೆ ಆಗಿದ್ದಾರೆ. ಮೇಷ್ಟ್ರಿಗೆ ಕಣ್ಣು ಕಿವಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪ್ರತೀ ದಿನ ಮನೆಯ ಮುಂದೆ ಒಂದು ಬಂಡೆಯ ಮೇಲೆ ಕುಳಿತು ತಾವು ಮಾಡಿದ ರಸ್ತೆಯ ಉದ್ದಕ್ಕೂ ಒಮ್ಮೆ ದೃಷ್ಟಿ ಹಾಯಿಸಿ ಕಣ್ಣು ತುಂಬಿಸಿಕೊಳ್ಳುತ್ತಾರೆ. ಅವರಿಗೆ ಹೃದಯ ತುಂಬಿ ಬರುತ್ತದೆ.

ರಾಜಾರಾಂ ಭಾಪ್ಕರ್

2015ರಲ್ಲಿ ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಸಚಿನ್ ತೆಂಡುಲ್ಕರ್ ಅವರು ಸೇರಿ ರಾಜಾರಾಂ ಸರ್ ಅವರನ್ನು ಸನ್ಮಾನ ಮಾಡಿದ್ದಾರೆ.

ಅಂದು ಸಚಿನ್ ಹೇಳಿದ ಮಾತು ಹೀಗಿತ್ತು. “ನಾನು ರನ್ನುಗಳ ಪರ್ವತವನ್ನು ಏರಿ ವಿಶ್ವ ದಾಖಲೆಯನ್ನು ಮಾಡಿರಬಹುದು. ಆದರೆ ರಾಜಾರಾಂ ಭಾಪ್ಕರ್ ಗುರೂಜಿ ಮಾಡಿದ ಸಾಧನೆ ಅದಕ್ಕಿಂತ ಹಿರಿದು!” ಅಂತಹ ಮೇಷ್ಟ್ರಿಗೆ ಒಂದು ಸೆಲ್ಯೂಟ್ ಹೇಳೋಣ ಅಲ್ಲವೇ?

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಭಾರತೀಯ ಟೆಸ್ಟ್‌ ಕ್ರಿಕೆಟ್‌ನ ಅನಭಿಷಿಕ್ತ ದೊರೆ ಸುನಿಲ್‌ ಗವಾಸ್ಕರ್‌ಗೆ HBD!

Exit mobile version