Site icon Vistara News

ರಾಜ ಮಾರ್ಗ ಅಂಕಣ | ಮರಣಕ್ಕೂ ಗೌರವ ತಂದ ಷರೀಫ್‌ ಚಾಚಾ: ಅವರು ಅಂತ್ಯಸಂಸ್ಕಾರಗೈದ ಅನಾಥ ಶವಗಳು 25,000!

mohammad sharif

ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾರಾಸಗಟಾಗಿ ಟೀಕಿಸುವವರು ಕೂಡ ಒಂದು ಅಂಶವನ್ನು ನಿರಾಕರಣೆ ಮಾಡಲು ಸಾಧ್ಯವೇ ಇಲ್ಲ! ಕಳೆದ ಹಲವು ವರ್ಷಗಳಿಂದ ಪದ್ಮ ಪ್ರಶಸ್ತಿಗಳನ್ನು ಪಡೆದವರ ಪಟ್ಟಿಯನ್ನು ಒಮ್ಮೆ ನೋಡಿದಾಗ ಹೆಚ್ಚು ಯೋಗ್ಯರಾದ ಸಾಧಕರಿಗೆ ಪ್ರಶಸ್ತಿಗಳು ದೊರೆತಿವೆ ಎಂದು ತುಂಬಾ ಖಚಿತವಾಗಿ ಹೇಳಬಹುದು. ಅದರಲ್ಲಿ ಹೆಚ್ಚಿನವರು ತೆರೆಯ ಮರೆಯಲ್ಲಿಯೇ ಇದ್ದು ಸಾಧನೆ ಮಾಡಿದವರು. ಯಾರ ಶಿಫಾರಸು ಪತ್ರವನ್ನು ಕೂಡ ತಾರದವರು. ತಮ್ಮ ಜಾತಿಗಳ ಲಾಬಿಯನ್ನು ಮಾಡದವರು. ಅದರಲ್ಲಿ ಕೆಲ ಸಾಧಕರಿಗೆ ಪ್ರಶಸ್ತಿಯು ಬಂದ ನಂತರವೇ ಅವರಿಗೆ ಪ್ರಶಸ್ತಿಯು ಬಂದಿದೆ ಎಂದು ಗೊತ್ತಾದದ್ದು! ಅಷ್ಟರ ಮಟ್ಟಿಗೆ ಪದ್ಮಪ್ರಶಸ್ತಿಗಳ ಮೌಲ್ಯವು ಹೆಚ್ಚಾಗಿದೆ ಎನ್ನುವುದು ನಿರ್ವಿವಾದ!

2020ರ ಪದ್ಮಶ್ರೀ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಒಮ್ಮೆ ಅವಲೋಕನ ಮಾಡಿದಾಗ ಅದರಲ್ಲಿ 102 ಹೆಸರು ಇದೆ. ಆದರೆ ಆ ಒಂದು ಹೆಸರು ನನಗೆ ರೋಮಾಂಚನ ಉಂಟು ಮಾಡಿದೆ. ಅವರು ಕಳೆದ ಮೂರು ದಶಕಗಳಿಂದ ಮಾಡುತ್ತಾ ಇರುವ ಅದ್ಭುತ ಮಾನವೀಯ ಅಂತಃಕರಣದ ಸೇವೆಗೆ ನನ್ನಲ್ಲಿ ಶಬ್ದಗಳೇ ಇಲ್ಲ!

ಅವರ ಹೆಸರು ಮೊಹಮ್ಮದ್ ಷರೀಫ್. ಅವರನ್ನು ಜನರು ಪ್ರೀತಿಯಿಂದ ಕರೆಯುವುದು ಷರೀಫ್ ಚಾಚಾ ಎಂದು. ಅವರ ವಯಸ್ಸು ಅಂದಾಜು 87 ಆಗಿರಬಹುದು. ಮೂಲತಃ ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯ ನಿವಾಸಿ. ತುಂಬಾ ಶಾಲೆಗೆ ಹೋಗಿ ಕಲಿತವರು ಅಲ್ಲ.

ಅವರು ಒಬ್ಬ ಸಾಮಾನ್ಯ ಬೈಸಿಕಲ್ ಮೆಕ್ಯಾನಿಕ್‌. ಪ್ರತೀ ತಿಂಗಳ ಆದಾಯವು ಹೆಚ್ಚು ಕಡಿಮೆ 3,000 ರೂ.ಮಾತ್ರ! ಅದರಲ್ಲಿ ಅವರ ಅವಿಭಕ್ತ ಕುಟುಂಬದ ಖರ್ಚು ವೆಚ್ಚ ಹೋಗಬೇಕು. ಎರಡೇ ಎರಡು ಕೊಠಡಿಗಳ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಅವರ ವಾಸ. ಇದಿಷ್ಟು ಅವರ ಹಿನ್ನೆಲೆ.

ಪದ್ಮಶ್ರೀ ಸ್ವೀಕರಿಸಿದ ಕ್ಷಣ

ಆದರೆ ಇಂದು ಷರೀಫ್ ಚಾಚಾ ಭಾರಿ ಸುದ್ದಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ತುಂಬಾ ಅದ್ಭುತವಾಗಿದೆ. ಅದಕ್ಕೂ ಒಂದು ಹಿನ್ನೆಲೆ ಇದೆ.

1992ರಲ್ಲಿ ಅವರ ಹಿರಿಯ ಮಗ ರಯಿಸ್ ಖಾನ್ ಕೆಲಸವನ್ನು ಹುಡುಕಿಕೊಂಡು ಪಕ್ಕದ ಜಿಲ್ಲೆ ಸುಲ್ತಾನಪುರಕ್ಕೆ ಹೋಗಿದ್ದರು. ಆಗ ಅವರ ವಯಸ್ಸು ಕೇವಲ 25 ವರ್ಷ. ಆದರೆ ಮುಂದೆ ಅವರು ನಿಗೂಢವಾಗಿ ಕಣ್ಮರೆ ಆದರು. ಒಂದು ತಿಂಗಳ ಪೊಲೀಸ್ ಹುಡುಕಾಟ ಫಲವನ್ನು ನೀಡಲಿಲ್ಲ. ಸುದೀರ್ಘ ಹುಡುಕಾಟದ ನಂತರ ಅವರ ಮಗನ ಶವವು ಎಲ್ಲೋ ಒಂದು ರಸ್ತೆಯ ಪಕ್ಕದಲ್ಲಿ ಅನಾಥವಾಗಿ ಬಿದ್ದದ್ದು ಪತ್ತೆ ಆಯಿತು. ಕ್ರೂರ ಪ್ರಾಣಿಗಳು ಆ ಶವದ ಮುಕ್ಕಾಲು ಭಾಗವನ್ನು ತಿಂದು ಮುಗಿಸಿದ್ದವು.

ಷರೀಫ್ ಚಾಚಾ ಅವರಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ! ಮಗನ ಶವ ಸಂಸ್ಕಾರವನ್ನು ಮುಗಿಸಿ ಬಂದು ಕೂತ ಅವರು ಒಂದು ಗಟ್ಟಿಯಾದ ನಿರ್ಧಾರಕ್ಕೆ ಬಂದಿದ್ದರು. ಇನ್ನು ಮುಂದೆ ನನ್ನ ಜಿಲ್ಲೆ ಮತ್ತು ಸುತ್ತಲ ಜಿಲ್ಲೆಗಳಲ್ಲಿ ಯಾವ ಹೆಣವೂ ಸರಿಯಾದ ಸಂಸ್ಕಾರ ಆಗದೇ ಅನಾಥ ಆಗಬಾರದು ಎಂದು ಅವರ ಸಂಕಲ್ಪ ಗಟ್ಟಿ ಆಗಿತ್ತು!

ಪೊಲೀಸ್ ಠಾಣೆಗೆ ಹೋಗಿ ಕಾನೂನಿನ ಮಾಹಿತಿಯನ್ನು ಪಡೆದುಕೊಂಡು ಬಂದರು. ಯಾವ ಅಡ್ರೆಸ್ ಇಲ್ಲದ ಹಾಗೂ ವಾರಸುದಾರರನ್ನು ಪಡೆಯಲು ವಿಫಲವಾದ ಶವಗಳನ್ನು 72 ಗಂಟೆಯ ನಂತರ ವಿಲೇವಾರಿ ಅಥವಾ ಸಂಸ್ಕಾರ ಮಾಡುವ ಕೆಲಸವನ್ನು ಪೊಲೀಸರು ದಾನಿಗಳ ನೆರವಿನಿಂದ ನೆರವೇರಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಈಗ ಷರೀಫ್ ಚಾಚಾ ಅಂತಹ ಶವಗಳ ಸಂಸ್ಕಾರದ ಹೊಣೆಯನ್ನು ಹೊರಲು ಮುಂದಾದರು.

ನಿರಂತರ ಆಸ್ಪತ್ರೆ, ಮೋರ್ಚರಿ, ಪೊಲೀಸ್ ಠಾಣೆ, ರೈಲ್ವೆ ನಿಲ್ದಾಣ ಅವರು ಅಲೆದರು. ಅಂತಹ ಅನಾಥ ಶವಗಳನ್ನು ಪತ್ತೆ ಮಾಡಿದರು. ಅವರವರ ಧರ್ಮದ ಸಂಪ್ರದಾಯಗಳ ಪ್ರಕಾರ ಶವ ಸಂಸ್ಕಾರವನ್ನು ಮಾಡಲು ಹೊರಟರು. ಹಿಂದೂಗಳ ಶವವನ್ನು ಅಗ್ನಿಗೆ ಒಪ್ಪಿಸಲು ಅಂದಾಜು 3,000 ರೂಪಾಯಿ ಖರ್ಚು ಬೇಕಾಗಿತ್ತು. ಮುಸ್ಲಿಮರ ಶವವನ್ನು ದಫನ ಮಾಡಲು ಅಂದಾಜು 5,000 ರೂಪಾಯಿ ಖರ್ಚು ಆಗುತ್ತಿತ್ತು. ಷರೀಫ್ ಚಾಚಾ ಅವರಿಗೆ ದುಡ್ಡಿನ ಸಮಸ್ಯೆಗಳು ತೀವ್ರವಾಗಿ ಇದ್ದ ಕಾರಣ ಹಲವು ದಾನಿಗಳ ಮೊರೆ ಹೋಗಬೇಕಾಯಿತು. ಆರಂಭದಲ್ಲಿ ನೂರಾರು ಜನರ ಕುಹಕದ ಮಾತು ಎದುರಾಯಿತು. ಆದರೆ ಅವರ ಉದ್ದೇಶವು ಚೆನ್ನಾಗಿದ್ದ ಕಾರಣ ಮುಂದೆ ಅದೇ ಜನರು ಅವರ ನೆರವಿಗೆ ನಿಂತರು.

ಅವರ ಮೂರು ಜನ ಆಪ್ತ ಸ್ನೇಹಿತರು ಸಂತೋಷ್, ಇಸ್ಮಾಯಿಲ್, ಶ್ಯಾಮ್ ವಿಶ್ವಕರ್ಮ ಚಾಚಾ ಅವರ ನೆರವಿಗೆ ನಿಂತರು. ಕಳೆದ 28 ವರ್ಷಗಳ ಅವಧಿಯಲ್ಲಿ ಷರೀಫ್ ಚಾಚಾ ಮಣ್ಣು ಮಾಡಿದ ಅಥವಾ ಅಗ್ನಿಸ್ಪರ್ಶ ಮಾಡಿದ ಅನಾಥ ಶವಗಳ ಸಂಖ್ಯೆಯು 25,000 ದಾಟಿದೆ ಎಂದು ಜಿಲ್ಲಾಡಳಿತವೇ ಲೆಕ್ಕ ಕೊಟ್ಟಿದೆ! ಅದರಲ್ಲಿ ಹೆಚ್ಚಿನ ಶವಗಳು ಹಿಂದೂಗಳದ್ದು ಅನ್ನುವುದು ಕೂಡ ಅದ್ಭುತ! ಷರೀಫ್ ಚಾಚಾ ಅದರ ಯಾವ ಲೆಕ್ಕವನ್ನೂ ಇಟ್ಟವರಲ್ಲ!

ಕೊಳೆತು ಹೋಗಿರುವ, ರೋಗಗ್ರಸ್ತವಾದ, ಅಪಘಾತದಲ್ಲಿ ಪೂರ್ತಿ ಹುಡಿ ಆದ, ರಕ್ತ ಸಿಕ್ತವಾದ ಶವಗಳು ಕೂಡ ಷರೀಫ್ ಚಾಚಾ ಅವರ ಸುಪರ್ದಿಗೆ ದೊರೆಯುತ್ತವೆ. ಅವರು ಯಾವ ಹೇಸಿಗೆಯನ್ನು ಮಾಡದೆ ಅದು ತನ್ನ ಕರ್ತವ್ಯ ಎಂದು ಭಾವಿಸಿಕೊಂಡು ಶವ ಸಂಸ್ಕಾರದ ಕೆಲಸವನ್ನು ಮಾಡುತ್ತಿದ್ದಾರೆ. ಅಯೋಧ್ಯೆ ಮತ್ತು ಅದರ ಆಸುಪಾಸಿನ ಜಿಲ್ಲೆಯಲ್ಲಿ ಎಲ್ಲಿ ಅನಾಥವಾದ ಶವಗಳು ದೊರೆತರೂ ಚಾಚಾ ಅವರಿಗೆ ಮೊದಲ ಕರೆಯು ಬರುತ್ತದೆ. ತಕ್ಷಣ ಅವರು ತನ್ನ ಹಳೆಯ ರಿಕ್ಷಾ ಟೆಂಪೋ ತೆಗೆದುಕೊಂಡು ಹೊರಡುತ್ತಾರೆ. ಪ್ರತೀ ಶವ ಸಂಸ್ಕಾರ ಮಾಡುವ ಹೊತ್ತಲ್ಲಿ ಕೂಡ ತನ್ನ ಮಗನ ದುರಂತ ಸಾವನ್ನು ನೆನೆದು ಶರೀಫ್ ಚಾಚಾ ಗದ್ಗದಿತ ಆಗುತ್ತಾರೆ ಎಂದು ಅವರ ಗೆಳೆಯರು ಹೇಳುತ್ತಾರೆ.

ಅಯೋಧ್ಯೆಯಲ್ಲಿ ಯಾರನ್ನು ಕೇಳಿದರೂ ಷರೀಫ್ ಚಾಚಾ ಅವರಿಗೆ ಗೊತ್ತಿದೆ. ಅವರಿಗೆ ಈಗ 87 ವರ್ಷ ದಾಟಿದೆ. ಆರೋಗ್ಯ ಕೈಕೊಟ್ಟಿದೆ. ಆರ್ಥಿಕ ಪರಿಸ್ಥಿತಿ ಇನ್ನೂ ಕೆಟ್ಟಿದೆ. ಅವರ ನಂತರ ಅವರ ಎರಡನೇ ಮಗ ಅಪ್ಪನ ಸೇವಾ ಕಾರ್ಯವನ್ನು ಮುಂದುವರಿಸುವ ಮನಸ್ಸು ಮಾಡಿದ್ದಾರೆ. ಸಾವಿನಾಚೆಗೂ ಜೀವಿಗಳಿಗೆ ಘನತೆಯ ಬದುಕು ಕಟ್ಟಿಕೊಡುವ ಷರೀಫ್ ಚಾಚಾ ಅವರಿಗೆ 2020ರ ಪದ್ಮಶ್ರೀ ಪ್ರಶಸ್ತಿಯು ದೊರೆತದ್ದು ಅತ್ಯಂತ ನ್ಯಾಯಯುತ ಎಂದು ನನಗೆ ಅನ್ನಿಸುತ್ತದೆ. ನಿಮಗೆ?

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಮಕ್ಕಳಲ್ಲಿ ತೃಪ್ತಿ, ಮಾನವೀಯತೆ ಬೆಳೆಸಿದರೆ ಭ್ರಷ್ಟಾಚಾರ ತಡೀಬಹುದು ಅಂದ್ರು ಜ. ಸಂತೋಷ್‌ ಹೆಗ್ಡೆ

Exit mobile version