Site icon Vistara News

ರಾಜ ಮಾರ್ಗ : ಬಲಗಾಲು ಕತ್ತರಿಸುವಾಗ ಆಕೆ ಚೀರಿ ಚೀರಿ ಕೇಳಿದ್ದು ಒಂದೇ ಪ್ರಶ್ನೆ: ಡಾಕ್ಟರ್‌ ನಾನು ಮತ್ತೆ ಡ್ಯಾನ್ಸ್‌ ಮಾಡಬಹುದಾ?

sudhachandran

ಆ ಕಲಾವಿದೆ ಮೂಲತಃ ತಮಿಳುನಾಡಿನವರು. ನಾಲ್ಕನೇ ವಯಸ್ಸಿಗೇ ಭರತನಾಟ್ಯ ಕ್ಲಾಸಿಗೆ ಸೇರಿದವರು. ಅತೀ ಸಣ್ಣ ವಯಸ್ಸಿಗೇ ಭರತ ನಾಟ್ಯವನ್ನು ಕಲಿತು ಆಕೆ ನೂರಾರು ಸ್ಟೇಜ್ ಶೋ ಕೊಟ್ಟಾಗಿತ್ತು! ಆಕೆ ಕಲಿಕೆಯಲ್ಲಿ ಕೂಡ ಮುಂದೆ ಇದ್ದಳು. ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಅಂಕಗಳು ಬಂದಾಗ ಮನೆಯವರು ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಲು ತಿರುಚ್ಚಿಗೆ ಹೊರಟಿದ್ದರು.

ಅರ್ಧ ದಾರಿಯಲ್ಲಿ ಅವರಿದ್ದ ಬಸ್ ಮತ್ತು ಎದುರಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಬಸ್ ಡ್ರೈವರ್ ಹಿಂದಿನ ಸೀಟಿನಲ್ಲಿ ಕೂತಿದ್ದ ಆ 18 ವರ್ಷದ ಹುಡುಗಿಯ ಬಲಗಾಲು ತುಂಬಾ ಡ್ಯಾಮೇಜ್ ಆಗಿತ್ತು. ಆಸ್ಪತ್ರೆಗೆ ಹೋದಾಗ ವೈದ್ಯರು ಬ್ಯಾಂಡೇಜ್ ಸುತ್ತಿ ಒಂದು ವಾರ ಬಿಟ್ಟು ಬರಲು ಹೇಳಿದ್ದರು. ಆದರೆ ನಾಲ್ಕೇ ದಿನ ಆಗುವಾಗ ಅಸಾಧ್ಯ ನೋವು ಮತ್ತು ಕಾಲಿನ ಮಾಂಸ ಕಿತ್ತು ಬಂದಿತ್ತು. ಪಾದದ ಭಾಗ ದುರ್ವಾಸನೆ ಬರಲು ಆರಂಭ ಆಗಿತ್ತು!

ಮತ್ತೆ ಬೇರೆ ಆಸ್ಪತ್ರೆಗೆ ಹೋದಾಗ ವೈದ್ಯರು ಬ್ಯಾಂಡೇಜ್ ತೆಗೆದು ನೋಡಿದಾಗ ಬಲಗಾಲು ಪೂರ್ತಿ ಗ್ಯಾಂಗ್ರೀನ್ ಆಗಿತ್ತು. ವೈದ್ಯರು ಒಂದೇ ಮಾತು ಹೇಳಿದರು – ಸಾರಿ. ಬಲಗಾಲು ಕತ್ತರಿಸಲೇ ಬೇಕು! ಇಲ್ಲವಾದರೆ ಜೀವಕ್ಕೆ ಅಪಾಯ ಇದೆ.

ಅಪ್ಪ ಅಮ್ಮನಿಗೆ ಅವಳನ್ನು ಸಂತೈಸಲು ತುಂಬಾ ಕಷ್ಟ ಆಯಿತು. ಏನಿದ್ದರೂ ಪ್ರಾಣ ಉಳಿಸಬೇಕು ಎಂಬ ಕಾರಣಕ್ಕೆ ಕಾಲು ಕತ್ತರಿಸಲು ಅವರು ಮಗಳನ್ನು ಒಪ್ಪಿಸಿದರು. ಆಪರೇಶನ್ ಥಿಯೇಟರಿನಲ್ಲಿ ಅನಿಸ್ತೀಷಿಯಾ ಕೊಟ್ಟು ವೈದ್ಯರು ಬಲಗಾಲು ಕತ್ತರಿಸುವಾಗ ಆ ಹುಡುಗಿ ಚೀರಿ ಚೀರಿ ಒಂದೇ ಪ್ರಶ್ನೆ ಕೇಳಿದರು – “ಡಾಕ್ಟರ್, ನಾನು ಮತ್ತೆ ಡ್ಯಾನ್ಸ್ ಮಾಡಲು ಸಾಧ್ಯವೇ?”

ವೈದ್ಯರು ” ಆತ್ಮಬಲ ಇದ್ದರೆ ಖಂಡಿತ ಮಾಡಬಹುದು”ಎಂದು ಹೇಳಿದರು.

ಮುಂದೆ ಆಕೆಯ ಬದುಕಿನ ಕತ್ತಲೆಯ ದಿನಗಳು!
ಮುಂದಿನ ಆರು ತಿಂಗಳು ಆಕೆಯ ಬದುಕಿನಲ್ಲಿ ಕೆಟ್ಟ ದಿನಗಳು. ದಿನದ ಹೆಚ್ಚು ಹೊತ್ತು ವೀಲ್ ಚೇರ್ ಮೇಲೆ ಕಳೆಯುವ ಪ್ರಸಂಗ! ವಾಶ್ ರೂಮ್ ಹೋಗಬೇಕಾದರೆ ಕೂಡ ಅಮ್ಮ ಆಧರಿಸಬೇಕಾದ ಅನಿವಾರ್ಯತೆ! ಅಪಮಾನಕ್ಕೆ ಹೆದರಿ ಶಾಲೆಗೆ ಹೋಗಲು ಹಿಂಜರಿಯುವ ತಾಪತ್ರಯ! ಆದರೆ ಮುಂದೆ ಡ್ಯಾನ್ಸ್ ಮಾಡಬೇಕು ಎಂಬ ಹಂಬಲ ಹೆಚ್ಚಾಗುತ್ತ ಹೋಯಿತು. ಕೆಲವೊಮ್ಮೆ ಜೋರಾಗಿ ಅಳುವುದು, ಮಧ್ಯರಾತ್ರಿ ಕೆಟ್ಟ ಕನಸು ಬಿದ್ದು ಕಿಟಾರನೆ ಕಿರುಚಿ ಎದ್ದು ಕೂರುವುದು….!

ಕತ್ತಲೆಯ ಗವಿ ದಾಟಿ ತೂರಿಬಂದ ಒಂದು ಬೆಳಕಿನ ಆಶಾಕಿರಣ!
ಒಂದು ದಿನ ಪತ್ರಿಕೆಯಲ್ಲಿ ಜೈಪುರದ ಡಾಕ್ಟರ್ ಸೇಥಿ ಅವರ ಬಗ್ಗೆ ಒಂದು ಲೇಖನ ಪ್ರಕಟ ಆಗಿತ್ತು. ಅವರು ಕೃತಕ ಕಾಲು ಫಿಟ್ ಮಾಡಿ ನಡೆಯಲು ಸಹಾಯ ಮಾಡುತ್ತಿದ್ದರು. ಅವರಿಗೆ ಆಕೆ ಸ್ವತಃ ಫೋನ್ ಮಾಡಿ ಮಾತಾಡಿದರು. ಒಂದೇ ವಾರಕ್ಕೆ ಜೈಪುರಕ್ಕೆ ಹೋಗಿ ಅವರ ಮುಂದೆ ಕೂತಾಗಿತ್ತು! ಆಗಲೂ ಆಕೆ ಕೇಳಿದ್ದು ಅದೇ ಪ್ರಶ್ನೆ – ಡಾಕ್ಟರೇ, ನನಗೆ ಡ್ಯಾನ್ಸ್ ಮಾಡಬೇಕು!

ಡಾಕ್ಟರ್ ಸೇಥಿ ಆಕೆಯ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಒಂದು ವಾರದಲ್ಲಿ ಆಕೆಯ ಬಲಗಾಲಿಗೆ ತಕ್ಕಮಟ್ಟಿಗೆ ಪರ್ಯಾಯವಾದ ಒಂದು ಚರ್ಮದ ಕಾಲು ಮಾಡಿಕೊಟ್ಟರು. ಆಕೆಯ ಕಾಲಿಗೆ ಫಿಟ್ ಮಾಡಿ ಆಶೀರ್ವಾದ ಮಾಡಿ ಕಳುಹಿಸಿದರು.

ಮತ್ತೆ ಆರಂಭವಾಯಿತು ಬಿರುಸಿನ ನೃತ್ಯ ತರಬೇತಿ!
ಮತ್ತೆ ತನ್ನ ಊರಿಗೆ ಬಂದ ಆಕೆ ಮೊದಲಿಗಿಂತ ಹೆಚ್ಚು ಆಸಕ್ತಿಯಿಂದ ನೃತ್ಯ ತಯಾರಿ ಆರಂಭಿಸಿದಳು. ಮೊದಲು ಹೆಜ್ಜೆ ಎತ್ತುವುದು ಕಷ್ಟ ಆಗುತ್ತಿತ್ತು. ಗಾಯವಾಗಿ ರಕ್ತ ಸುರಿಯುತ್ತಿತ್ತು. ಅಸಾಧ್ಯವಾದ ನೋವು. ಆದರೆ ಆ ನೋವನ್ನು ಮುಖದಲ್ಲಿ ತೋರಿಸುವ ಹಾಗಿರಲಿಲ್ಲ. ಹಸಿವು, ನಿದ್ದೆ ಮರೆತು ಆಕೆ ದಿನಕ್ಕೆ ಹತ್ತು ಗಂಟೆ ನೃತ್ಯದಲ್ಲಿ ಮುಳುಗಿದಳು.

ಆ ದಿನ ಕಡೆಗೂ ಬಂದೇ ಬಿಟ್ಟಿತು!
ಒಂದೇ ಕಾಲಿನಿಂದ ನೃತ್ಯ ಮಾಡುವ ಧೈರ್ಯ ಬಂದಾಗ ಆಕೆ ಮುಂಬೈಯಲ್ಲಿ ಸ್ಟೇಜ್ ಶೋ ಕೊಡುವ ದಿನಾಂಕವನ್ನು ಪ್ರಕಟಿಸುತ್ತಾಳೆ.
ದಿನಾಂಕ ಜನವರಿ 28,1984!
ಸ್ಥಳ – ಮುಂಬೈಯ ಕಲಾಮಂದಿರ.

ಕಿಕ್ಕಿರಿದ ಸಭಾಂಗಣದಲ್ಲಿ ಆಕೆ ಮೂರು ಘಂಟೆ ಸ್ಟೇಜ್ ಶೋ ಕೊಟ್ಟಿದ್ದಳು. ಆಕೆಯ ಬಲಗಾಲು ಕೃತಕ ಎಂದು ಯಾರಿಗೂ ಗೊತ್ತಾಗದ ಹಾಗೆ ಆಕೆ ಮೈ ಮರೆತು ನೃತ್ಯ ಮಾಡಿದ್ದಳು. ಸೇರಿದ ಜನ ಸಂದೋಹ ಎದ್ದು ನಿಂತು ಅವಳಿಗೆ ಸುರಿದ ಚಪ್ಪಾಳೆಗೆ ಕಲಾಮಂದಿರದ ಗೋಡೆಗಳು ಸಾಕ್ಷಿ ಆಗಿದ್ದವು!

ಆಕೆ ಸುಧಾಚಂದ್ರನ್! ತನ್ನ ವಿಕಲತೆಯನ್ನು ಗೆದ್ದವಳು!

ಮುಂದೆ ಅವಳ ಬದುಕೇ ಬದಲಾಯಿತು. ಆಕೆಯ ಬದುಕನ್ನು ಆಧಾರವಾಗಿ ಇಟ್ಟುಕೊಂಡು ತೆಲುಗಿನಲ್ಲಿ ಮಯೂರಿ ಎಂಬ ಸಿನೆಮಾ ಬಂದಿತು. ಅದರಲ್ಲಿ ಆಕೆಯ ಬದುಕಿನ ಪಾತ್ರವನ್ನು ಆಕೆಯೇ ಮಾಡಿದ್ದು ದಾಖಲೆ! ಮುಂದೆ ಅದು ಹಿಂದಿಯಲ್ಲಿ ‘ನಾಟ್ಯ ಮಯೂರಿ ‘ ಎಂಬ ಹೆಸರಿನಲ್ಲಿ ಸಿನೆಮಾ ಆಗಿ ಜನಪ್ರಿಯ ಆಯಿತು.
ಮುಂದೆ ಅವರು ನೂರಾರು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯ ಮಾಡಿದರು! ನೂರಾರು ಸ್ಟೇಜ್ ಶೋ ನೀಡಿದರು. ಈಗಲೂ ನೀಡುತ್ತಿದ್ದಾರೆ. ಹಲವು ಚ್ಯಾರಿಟಿ ಶೋಗಳನ್ನು ನೀಡಿ ಸಾವಿರಾರು ವಿಕಲ ಚೇತನ ಮಕ್ಕಳ ಕನಸುಗಳಿಗೆ ಬಣ್ಣ ತುಂಬಿಸುತ್ತಿದ್ದಾರೆ.

2009ರಲ್ಲಿ ನಾನು ಒಮ್ಮೆ ಬೆಂಗಳೂರಿನಲ್ಲಿ ಅವರ ಮೂರು ಗಂಟೆಯ ನೃತ್ಯ ಶೋ ನೋಡಿ ಮೂಕವಿಸ್ಮಿತ ಆಗಿದ್ದೆ. ನೃತ್ಯದಲ್ಲಿ ಆಕೆಗೆ ಇರುವ ಆಸಕ್ತಿ ಮತ್ತು ಪ್ರೀತಿ, ಆಕೆಯ ತೀವ್ರ ಭಾವನೆಗಳು ಎಲ್ಲವೂ ನನಗೆ ಅವಿಸ್ಮರಣೀಯ ಅನುಭವ ನೀಡಿದ್ದವು. ಆಕೆಯನ್ನು ಭೇಟಿ ಮಾಡಿ ಮಾತುಕತೆ ಕೂಡ ನಡೆಸಿದ್ದೆ. ನಾಟ್ಯ ಮಯೂರಿ ಸುಧಾ ಚಂದ್ರನ್ ಬದುಕು ಸಾವಿರಾರು ಮಂದಿಗೆ ಪ್ರೇರಣೆ ಆಗಿದೆ.

ಇದನ್ನು ಓದಿ | ರಾಜ ಮಾರ್ಗ ಅಂಕಣ | ಒಂದು ಮಹಾ ವ್ಯಕ್ತಿ- ಒಂದು ಮಹಾ ಪುಸ್ತಕ: ದ ಲಾಸ್ಟ್ ಲೆಕ್ಚರ್ ಪುಸ್ತಕ ಬರೆದ ರಾಂಡಿ ಪಾಷ್ ಕತೆ!

Exit mobile version