Site icon Vistara News

ರಾಜ ಮಾರ್ಗ ಅಂಕಣ | ಆ ಮಹಾ ಮಾತೆ ಇಲ್ಲದೆ ಹೋಗಿದ್ದರೆ ಎಡಿಸನ್‌ ಮಹಾ ವಿಜ್ಞಾನಿ ಆಗುತ್ತಲೇ ಇರಲಿಲ್ಲ!

thomas alva edison

thomas alva edison

ಅಮೆರಿಕದ ಒಂದು ಹಳ್ಳಿಯ ಶಾಲೆಯ ಮೂರನೆಯ ತರಗತಿಯಲ್ಲಿ ಒಬ್ಬ ತುಂಟ ಹುಡುಗ ಕೂತಿದ್ದ. ಅವನಿಗೆ ಒಂದಿಷ್ಟೂ ಕಲಿಯುವ ಆಸಕ್ತಿಯು ಇರಲಿಲ್ಲ. ಆದರೆ ಪ್ರತೀ ದಿನವೂ ವಿಜ್ಞಾನ ಶಿಕ್ಷಕಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿಬಿಡುತ್ತಿದ್ದ. ಆತನೇ ಥಾಮಸ್ ಆಲ್ವಾ ಎಡಿಸನ್.

ಅವನ ಪ್ರಶ್ನೆಗಳು ಕುತೂಹಲದ್ದೆ ಆಗಿದ್ದವು. ಹಾರುವ ಹಕ್ಕಿಗಳಿಗೆ ಎಂಜಿನ್ ಫಿಟ್ ಮಾಡಿದವರು ಯಾರು? ಕೋಳಿ ಮರಿಯು ಮೊಟ್ಟೆಯ ಒಳಗೆ ಹೇಗೆ ಹೋಯಿತು? ಮೋಡಗಳು ಚಲಿಸುವಾಗ ಯಾಕೆ ಕೆಳಗೆ ಬೀಳುವುದಿಲ್ಲ?‌ ಈ ರೀತಿಯ ಪ್ರಶ್ನೆಗಳಿಗೆ ಶಿಕ್ಷಕಿಯು ಉತ್ತರ ಕೊಡುವುದು ಹೇಗೆ? ಅವನ ಪ್ರಶ್ನೆಗಳು ಪ್ರಾಮಾಣಿಕ ಆಗಿದ್ದವು. ಆದರೆ ಶಿಕ್ಷಕರಿಗೆ ತರಗತಿಯಲ್ಲಿ ಅವನ ಪ್ರಶ್ನೆಗಳಿಂದ ಇರಿಸು ಮುರಿಸು ಆಗುತ್ತಿತ್ತು. ಎಷ್ಟೋ ಪ್ರಶ್ನೆಗಳಿಗೆ ಉತ್ತರ ಶಿಕ್ಷಕರಿಗೇ ಗೊತ್ತಿರಲಿಲ್ಲ.

ಆದರೆ ಒಮ್ಮೆ ಒಬ್ಬ ಶಿಕ್ಷಕಿಯು ತಾಳ್ಮೆಯನ್ನು ಕಳೆದುಕೊಂಡು ಅವನಿಗೆ ಸಿಟ್ಟಿನಲ್ಲಿ Addled Mind boy (ಮೂರ್ಖ) ಎಂದು ಬೈದುಬಿಟ್ಟರು. ಅವನ ಪ್ರೋಗ್ರೆಸ್ ರಿಪೋರ್ಟನಲ್ಲಿ Good For Nothing ಎಂದು ಷರಾ ಕೂಡ ಬರೆದರು. ಎಡಿಸನ್‌ಗೆ ಅದರ ಅರ್ಥ ಗೊತ್ತಿರಲಿಲ್ಲ. ಅವನು ಮನೆಗೆ ಬಂದು ತನ್ನ ಅಮ್ಮನ ಬಳಿ ಅದರ ಅರ್ಥವನ್ನು ಕೇಳಿದಾಗ ಅವರು ನಿಜವಾದ ಅರ್ಥವನ್ನು ಮರೆಮಾಚಿ ಗಟ್ಟಿಯಾಗಿ ನಕ್ಕು ಬಿಟ್ಟರು.

ಮುಂದೆ ಅದೇ ಶಾಲೆಯಲ್ಲಿ ಇನ್ನೊಂದು ಘಟನೆಯು ನಡೆಯಿತು. ಇನ್ನೊಬ್ಬರು ಶಿಕ್ಷಕಿಯು ಅವನ ಬಗ್ಗೆ ಒಂದು ಪತ್ರವನ್ನು ಬರೆದು ಅದನ್ನು ಮುಚ್ಚಿದ ಕವರಿನಲ್ಲಿ ಇಟ್ಟು ಅವನ ಅಮ್ಮನಿಗೆ ಕೊಡಲು ಹೇಳಿದ್ದರು. ಮಗ ಅದನ್ನು ಅಮ್ಮನಿಗೆ ತಂದುಕೊಟ್ಟು ಕೈ ಕಟ್ಟಿ ನಿಂತನು. ಅಮ್ಮ ಆ ಪತ್ರವನ್ನು ಓದಿ ಆನಂದ ಬಾಷ್ಪ ಸುರಿಸಿದರು.

ಏನಿದೆ ಆ ಪತ್ರದಲ್ಲಿ ಎಂದು ಮಗ ಕೇಳಿದಾಗ ಅಮ್ಮ ಹೇಳುತ್ತಾರೆ – “ನಿನ್ನ ಟೀಚರ್ ಬರೆದಿದ್ದಾರೆ, ನಿನ್ನ ಮಗ ಭಾರಿ ಜೀನಿಯಸ್. ಅವನ ಬುದ್ಧಿವಂತಿಕೆಗೆ ನಮ್ಮ ಶಾಲೆ ಸಣ್ಣದಾಯ್ತು. ಅವನು ಮುಂದೆ ಖಂಡಿತ ಮಹಾ ಮೇಧಾವಿ ಆಗುತ್ತಾನೆ ಎಂದು ಬರೆದಿದ್ದಾರೆ” ಎಂದರು. ಆ ಹುಡುಗನಿಗೆ ಭಾರಿ ಖುಷಿ ಆಯಿತು. ಆಗ ಅವನಿಗೆ ಏಳು ವರ್ಷ ಆಗಿತ್ತು.

ಮುಂದೆ ಎಡಿಸನಗೆ 21 ವರ್ಷ ಆದಾಗ ಅವನ ಅಮ್ಮ ತೀರಿ ಹೋದರು. ಆಗ ಅಮ್ಮನ ಹಳೆಯ ಟ್ರಂಕನ್ನು ಅವನು ಹುಡುಕುತ್ತಿದ್ದಾಗ ಅದೇ ಪತ್ರವು ಮತ್ತೆ ಅವನ ಕೈಗೆ ದೊರೆಯಿತು. ಅವನಿಗೆ ತಟ್ಟನೆ ಕುತೂಹಲವು ಮೂಡಿ ಆ ಪತ್ರವನ್ನು ಓದುತ್ತಾ ಕಣ್ಣೀರು ಸುರಿಸುತ್ತಾನೆ.

ಎಡಿಸನ್‌ನ ಅಮ್ಮ ನ್ಯಾನ್ಸಿ

ಅದರಲ್ಲಿ ಬರೆದಿತ್ತು “ನಿಮ್ಮ ಮಗನಿಗೆ ಮೆಮೊರಿ ಇಲ್ಲ. ಅವನು ಕಲಿಯುವುದರಲ್ಲಿ ದಡ್ಡ. ಅವನು ಮುಂದೆ ಜೀವನದಲ್ಲಿ ಏನೂ ಸಾಧನೆ ಮಾಡಲು ಸಾಧ್ಯವೇ ಇಲ್ಲ!” ಎಂದು ಬರೆದಿತ್ತು.

================

ಒಮ್ಮೆ ಅಮ್ಮ ನ್ಯಾನ್ಸಿ Addled Mind Boy ಎಂದು ಕರೆದ ಟೀಚರ್ ಮುಂದೆ ನಿಂತು ಸವಾಲನ್ನು ಹಾಕಿ ಬಂದಿದ್ದರು.

“ನನ್ನ ಮಗನನ್ನು ನೀನು ಅಪಮಾನ ಮಾಡಿ ತಪ್ಪು ಮಾಡಿದೆ. ಅವನನ್ನು ಮುಂದೆ ನಾನು ಮಹಾ ವಿಜ್ಞಾನಿ ಆಗಿ ನಾನು ರೂಪಿಸುತ್ತೇನೆ. ಮುಂದೆ ಇಡೀ ಜಗತ್ತು ಅವನ ಸಾಧನೆಯನ್ನು ನೆನಪು ಮಾಡಿಕೊಳ್ಳುತ್ತದೆ. ನಿನ್ನನ್ನು ಯಾರೂ ನೆನಪು ಮಾಡಿಕೊಳ್ಳುವುದಿಲ್ಲ” ಎಂದು ಸವಾಲು ಎಸೆದು ಬಂದಿದ್ದರು!

ಎಡಿಸನ್‌ಗೆ ಅಮ್ಮ ನ್ಯಾನ್ಸಿ ಅಂದ್ರೆ ಪಂಚಪ್ರಾಣ. ಮೂರನೇ ತರಗತಿಯಲ್ಲಿ ಇದ್ದಾಗ ಅಪಮಾನವಾದ ಕಾರಣ ಶಾಲೆ ಬಿಟ್ಟ ಅವನಿಗೆ ಮುಂದೆ ತಾಯಿಯೇ ಟೀಚರ್ ಆದರು. ಆಕೆ ಸ್ವತಃ ಟೀಚರ್ ಆಗಿದ್ದರು. ಅವನಿಗೆ ಗಣಿತ, ವಿಜ್ಞಾನ, ಇಂಗ್ಲಿಷ್, ಭೂಗೋಳ ಶಾಸ್ತ್ರಗಳನ್ನು ಕಲಿಸಿದರು. ಓದಲು ಸಾವಿರಾರು ವಿಜ್ಞಾನ ಪುಸ್ತಕಗಳನ್ನು ಮಗನಿಗೆ ತಂದುಕೊಟ್ಟರು. ಮನೆಯಲ್ಲಿಯೇ ಪ್ರಯೋಗ ಶಾಲೆಯನ್ನು ಮಾಡಿಕೊಟ್ಟರು. ಹುಡುಗನು ಅಮ್ಮನ ಕನಸಿನ ಪ್ರಕಾರ ಬೆಳೆದ.

ಅಮ್ಮ ನ್ಯಾನ್ಸಿಗೆ ಏಳು ಜನ ಮಕ್ಕಳು ಇದ್ದರು. ಎಡಿಸನ್ ಕೊನೆಯ ಮಗ. ಅದರಲ್ಲಿ ಮೂರು ಜನರು ಬಾಲ್ಯದಲ್ಲಿ ತೀರಿಹೋಗಿದ್ದರು. ಎಡಿಸನ್‌ಗೆ ಕೂಡ ಹತ್ತಾರು ಆರೋಗ್ಯದ ಸಮಸ್ಯೆಗಳು ಕಾಡಿದ್ದವು. ಅವನಿಗೆ ಡಿಸಲೆಕ್ಸಿಯಾ ಎಂಬ ಮಾನಸಿಕ ಕಾಯಿಲೆಯು ಇತ್ತು. 13ನೆಯ ವರ್ಷಕ್ಕೆ ವಿಚಿತ್ರವಾದ ಜ್ವರವು ಬಂದು ಆತನಿಗೆ ಕಿವುಡುತನ ಉಂಟಾಗಿತ್ತು. ಅಂತಹ ಮಗನನ್ನು ತಾಯಿ ನ್ಯಾನ್ಸಿ ತುಂಬಾ ಪ್ರೀತಿಯಿಂದ ಮತ್ತು ತಾಳ್ಮೆಯಿಂದ ಬೆಳೆಸಿದರು ಮತ್ತು ಆ ಶಿಕ್ಷಕಿಗೆ ಸವಾಲು ಹಾಕಿದ ಹಾಗೆ ಮಹಾವಿಜ್ಞಾನಿ ಆಗಿ ರೂಪಿಸಿದರು.

ಎಡಿಸನ್ ಮಾಡಿದಷ್ಟು ಆವಿಷ್ಕಾರಗಳನ್ನು ಜಗತ್ತಿನಲ್ಲಿ ಇದುವರೆಗೆ ಬೇರೆ ಯಾವ ವಿಜ್ಞಾನಿಯೂ ಮಾಡಿಲ್ಲ.

1103ರಷ್ಟು ಆವಿಷ್ಕಾರಗಳು ಆತನ ಹೆಸರಲ್ಲಿ ಇವೆ! ಮುನ್ನೂರಕ್ಕೂ ಅಧಿಕ ಪೇಟೆಂಟನ್ನು ಪಡೆದ ಜಗತ್ತಿನ ಏಕೈಕ ವಿಜ್ಞಾನಿ ಆತ! ಜಗತ್ತಿಗೆ ಬೆಳಕನ್ನು ಕೊಡುವ ಎಲೆಕ್ಟ್ರಿಕ್ ಬಲ್ಬು, ಸಂಗೀತವನ್ನು ಕೇಳುವ ಗ್ರಾಮಾಫೋನ್ ರೆಕಾರ್ಡ್ (ಗಮನಿಸಿ, ಅವನಿಗೆ ಕಿವಿ ಕೇಳುತ್ತಿರಲಿಲ್ಲ!), ವೋಟಿಂಗ್ ಮೆಷಿನ್, ನಾವೆಲ್ಲರೂ ಸಿನೆಮಾ ನೋಡಲು ಸಹಾಯವನ್ನು ಮಾಡುವ ಕೆಲೆಡೋ ಸ್ಕೋಪ್ ಅವುಗಳಲ್ಲಿ ಪ್ರಮುಖವಾದವುಗಳು.

ತಾಯಿಯ ಬಗ್ಗೆ ಎಡಿಸನ್ ಹೇಳಿದ ಎರಡು ಮಾತು ಕೇಳಿ “ನನ್ನ ಅಮ್ಮ ನನ್ನನ್ನು ರೂಪಿಸಿದ ದೇವತೆ. ಆಕೆಯು ಮಾನಸಿಕ ಕಾಯಿಲೆಯಿಂದ ಸಾಯುವಾಗ ನನಗೆ 21 ವರ್ಷ ಮಾತ್ರ. ಮುಂದೆ ಆರು ವರ್ಷಗಳ ನಂತರ ನಾನು ಬಲ್ಬ್ ಕಂಡು ಹಿಡಿದಾಗ ಆಕೆ ಇರಬೇಕಿತ್ತು ಎಂದು ತೀವ್ರವಾಗಿ ಆಸೆ ಪಟ್ಟಿದ್ದೆ. ನನ್ನ 1100 ಅನ್ವೇಷಣೆಗಳನ್ನು ಆಕೆಯ ಕಾಲ ಬುಡದಲ್ಲಿ ಇಡಬೇಕು ಎಂದು ನನ್ನ ಆಸೆ!”

ಎಡಿಸನ್‌ನ ಮಹಾಮಾತೆ ನ್ಯಾನ್ಸಿಗೆ ನನ್ನ ಶತ ಶತ ಪ್ರಣಾಮಗಳು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ರಿಯಾಲಿಟಿ ಸ್ಪರ್ಧೆಗಳು ಮಕ್ಕಳ ಬಾಲ್ಯವನ್ನು ಕಸಿಯುತ್ತಿವೆ, ನಿಮ್ಮ ಮಕ್ಕಳ ಬಗ್ಗೆ ಹುಷಾರು!

Exit mobile version