Site icon Vistara News

ರಾಜ ಮಾರ್ಗ ಅಂಕಣ | ಟೈಮ್ಸ್ ಕಿಡ್ ಆಫ್ ದಿ ಇಯರ್ ಗೀತಾಂಜಲಿ ರಾವ್: 17ನೇ ವಯಸ್ಸಿಗೆ ವಿಶ್ವ ವಿಖ್ಯಾತಿ!

Geethanjali Rao

ಅಮೆರಿಕಾದ ಅತ್ಯಂತ ಜನಪ್ರಿಯ ಪತ್ರಿಕೆ ಟೈಮ್ಸ್! ಅದರ ಸುಂದರ ಮುಖಪುಟದಲ್ಲಿ ಸ್ಥಾನವನ್ನು ಪಡೆಯುವುದು ಯಾರಿಗಾದರೂ ಒಂದು ವಿಶೇಷವಾದ ಗೌರವವೇ ಹೌದು! ಅದರಲ್ಲಿಯೂ ಒಂದು ಜಾಗತಿಕ ಸ್ಪರ್ಧೆಯಲ್ಲಿ ಗೆದ್ದು TIMES KID OF THE YEAR ಪ್ರಶಸ್ತಿಯನ್ನು ಪಡೆಯುವುದು ಮತ್ತು ಅದರ ಮೂಲಕ ಟೈಮ್ಸ್ ಪತ್ರಿಕೆಯ ಮುಖಪುಟ ಅಲಂಕರಿಸುವುದು ನಿಜಕ್ಕೂ ಗ್ರೇಟ್! ಆ ಸ್ಪರ್ಧೆಯಲ್ಲಿ ಜಾಗತಿಕವಾಗಿ ಐದು ಸಾವಿರ ಮಕ್ಕಳು ಭಾಗವಹಿಸಿದ್ದರು ಎನ್ನುವುದು ಅವಳ ನಿಜವಾದ ಖದರು! ತನ್ನ ಸರಣಿ ಸಂಶೋಧನೆಗಳ ಮೂಲಕ ಈ ಗೌರವವನ್ನು ಪಡೆದ ಆ ಹುಡುಗಿಯು ಭಾರತೀಯ ಮೂಲದವಳು ಅನ್ನುವುದು ನಮಗೆಲ್ಲರಿಗೂ ನಿಜ ರೋಮಾಂಚನ! ಆಕೆಯ ವಯಸ್ಸು ಕೇವಲ 17 ಅನ್ನುವುದು ಇನ್ನೂ ದೊಡ್ಡ ಸೆನ್ಸೇಷನ್!

ಆಕೆಯ ಹೆಸರು ಗೀತಾಂಜಲಿ ರಾವ್.
ಆಕೆಯ ತಂದೆ, ತಾಯಿ ಇಬ್ಬರೂ ಭಾರತೀಯ ಮೂಲದವರು.

ಗೀತಾಂಜಲಿ ಅಮೆರಿಕಾದ ಕೊಲರೆಡೋ ಎಂಬ ಪ್ರಾಂತ್ಯದಲ್ಲಿ ವಾಸವಾಗಿರುವ ರಾಮ ರಾವ್ ಮತ್ತು ಭಾರತೀ ರಾವ್ ದಂಪತಿಗಳ ಮಗಳು. ಹೆತ್ತವರು ಭಾರತೀಯ ಮೂಲದವರು. ಚಿಕ್ಕಂದಿನಿಂದ ವಿಜ್ಞಾನ ಅವಳ ಪ್ಯಾಶನ್. ತನ್ನ ಹತ್ತನೇ ವರ್ಷದ ಹುಟ್ಟುಹಬ್ಬಕ್ಕೆ ಅವಳು ಹೆತ್ತವರೊಂದಿಗೆ ಬೇಡಿಕೆ ಇಟ್ಟು ಪಡೆದದ್ದು ‘ಕಾರ್ಬನ್ ನ್ಯಾನೋ ಟ್ಯೂಬ್’ ಎಂಬ ಉಪಕರಣದ ಉಡುಗೊರೆಯನ್ನು! ಅದರಿಂದ ನೀರಿನಲ್ಲಿ ಸೀಸದ ಪ್ರಮಾಣವು ವ್ಯತ್ಯಾಸವಾಗಿ ಕುಡಿಯುವ ನೀರು ಮಲಿನವಾಗುವುದನ್ನು ಅವಳು ಪತ್ತೆ ಮಾಡಿದ್ದಳು! ಅದು ಅತ್ಯಂತ ನಾವೀನ್ಯದ ಸಂಶೋಧನೆ ಆಗಿ ವಿಜ್ಞಾನಿಗಳ ಗಮನ ಸೆಳೆಯಿತು!

ವರ್ಷಕ್ಕೊಂದು ಆವಿಷ್ಕಾರ ಆಕೆಯ ಸ್ಟೈಲ್!
ತನ್ನ ಹದಿಮೂರರ ಪ್ರಾಯದಲ್ಲಿಯೇ ಗೀತಾಂಜಲಿ ‘ಎಪಿಯೋನ್’ ಎಂಬ ನೂತನ ಸಾಧನವನ್ನು ಕಂಡು ಹಿಡಿದಳು. ನಾವು ತೆಗೆದುಕೊಳ್ಳುವ ಪೇನ್ ಕಿಲ್ಲರ್ ಮಾತ್ರೆಗಳು ಚಟ ಆಗದಂತೆ ತಡೆಯಲು ಆ ಸಾಧನ ಉಪಯುಕ್ತ ಆಯಿತು!

ಗೀತಾಂಜಲಿ ತನ್ನ ಹದಿನಾಲ್ಕರ ಹರೆಯದಲ್ಲಿ ‘ಸೈಬರ್ ಬುಲ್ಲಿ’ ಎಂಬ ಹೆಸರಿನ ಒಂದು App ಸಂಶೋಧನೆ ಮಾಡಿದಳು. ಅದು ಮೊಬೈಲಿನಲ್ಲಿ ಹುಡುಗಿಯನ್ನು ಚುಡಾಯಿಸುವ ಕಿಡಿಗೇಡಿತನದ ಹುಡುಗರನ್ನು ಪತ್ತೆ ಮಾಡಲು ಉಪಯುಕ್ತ ಆಗಿದೆ! ಹೀಗೆ ಪ್ರತೀ ವರ್ಷಕ್ಕೆ ಒಂದೊಂದು ಸಂಶೋಧನೆಯನ್ನು ಮಾಡುತ್ತಲೆ ಬಂದಿರುವ ಗೀತಾಂಜಲಿ ಈಗಾಗಲೇ ತನ್ನ ಕ್ಯೂಟ್ ಕ್ಯೂಟ್ ಸಂಶೋಧನೆಗಳ ಮೂಲಕ ಜಗತ್ತಿನ ವಿಜ್ಞಾನಿಗಳ ಗಮನ ಸೆಳೆದಾಗಿದೆ!

ಪರಿಸರ ವಿಜ್ಞಾನ, ಜೈವಿಕ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಭಾವನಾತ್ಮಕ ಬುದ್ಧಿವಂತಿಕೆ…ಹೀಗೆ ಅವಳ ಸಂಶೋಧನಾ ಕ್ಷೇತ್ರಗಳು ಪ್ರತೀ ವರ್ಷವೂ ವಿಸ್ತಾರಗೊಳ್ಳುತ್ತ ಹೋಗುತ್ತಿವೆ. ಯೂ ಟ್ಯೂಬ್‌ನಲ್ಲಿ ಅವಳ ಟೆಡ್ ಟಾಕ್ ಸರಣಿಯನ್ನು ನೋಡುತ್ತ ನಾನಂತೂ ಆಕೆಯ ಫ್ಯಾನ್ ಆಗಿ ಬಿಟ್ಟಿದ್ದೇನೆ.

ಟೈಮ್ಸ್ ಮ್ಯಾಗಜೀನ್ ಖ್ಯಾತ ಹಾಲಿವುಡ್ ನಟಿ ಆಂಜೆಲಿನಾ ಜೋಲಿಯ ಮೂಲಕ ಆಕೆಯ ಸಂದರ್ಶನವನ್ನು ಮಾಡಿಸಿದ್ದು, ಅದು ಕೂಡ ಯು ಟ್ಯೂಬ್‌ ನಲ್ಲಿ ಭಾರೀ ವೈರಲ್ ಆಗಿದೆ! ಕಣ್ಣು ರೆಪ್ಪೆ ಮಿಟುಕಿಸುತ್ತ ಆಕೆ ಚಟಪಟನೆ ಅರಳು ಹುರಿದಂತೆ ಮಾತನಾಡುವ ಪರಿಗೆ ನೀವು ಫಿದಾ ಆಗುವುದು ಖಂಡಿತ. ಆಕೆಯ ಲೋಕ ಜ್ಞಾನ, ವೈಜ್ಞಾನಿಕ ಚಿಂತನೆ, ಪರಿಣಾಮಕಾರಿಯಾದ ವಿಷಯ ಮಂಡನೆ ನಿಜಕ್ಕೂ ಅದ್ಭುತವೇ ಆಗಿವೆ!

ಆಕೆಯ ಯಶಸ್ಸಿನ ಐದು ಮೆಟ್ಟಿಲುಗಳು!
ಆಕೆ ತನ್ನ ಯಶಸ್ಸಿನ ಐದು ಮೆಟ್ಟಿಲುಗಳನ್ನು ಆಂಜೆಲಿನಾ ನಡೆಸಿದ ಸಂದರ್ಶನದಲ್ಲಿ ತೆರೆದಿಟ್ಟದ್ದು ಹೀಗೆ – Observe, Brain storm, Research, Build and Communicate.

Forbes ಪತ್ರಿಕೆಯ ಜಾಗತಿಕ ಮಟ್ಟದ ಪ್ರಶಸ್ತಿ!
ಇದೆಲ್ಲದರ ಜೊತೆಗೆ ಅಮೆರಿಕಾದ ಇನ್ನೊಂದು ಲೀಡ್ ಪತ್ರಿಕೆ FORBES ಅವಳನ್ನು FORBES 30 UNDER 30 ಪ್ರಶಸ್ತಿಯ ಮೂಲಕ ಗೌರವಿಸಿದೆ. “50 ವರ್ಷಗಳಿಂದ ನಿಂತ ನೀರಾಗಿದ್ದ ಸಾಮಾಜಿಕ, ಶೈಕ್ಷಣಿಕ ಕೊಳೆಯನ್ನು ತೊಳೆದು ಹಾಕಲು ಕೊರೊನಾ ಒಂದು ವರದಾನವೇ ಸರಿ!” ಎಂದಾಕೆ ಆ ಪ್ರಶಸ್ತಿ ಸ್ವೀಕಾರ ಮಾಡುವಾಗ ಹೇಳಿದ್ದಾಳೆ! ಎಷ್ಟೊಂದು ಪ್ರಬುದ್ಧವಾದ ಮಾತು! ಯಾವುದೂ ಬರೆದು ಕೊಟ್ಟ ಸ್ಕ್ರಿಪ್ಟ್ ಅಲ್ಲ!

ಎಳೆಯ ಸಂಶೋಧಕರಿಗೆ ನಿನ್ನ ಸಂದೇಶವೇನು? ಎಂದು ಕೇಳಿದಾಗ ಅವಳು ಹೇಳಿದ ಉತ್ತರ ಅತ್ಯಂತ ಮಾರ್ಮಿಕ ಆಗಿತ್ತು. “ನಿಮ್ಮ ಸುತ್ತಲಿನ ಎಲ್ಲಾ ಸಮಸ್ಯೆಗಳನ್ನೂ ಒಂದೇ ಉಸಿರಲ್ಲಿ ಬಗೆಹರಿಸುತ್ತೇವೆ ಎನ್ನುವ ಹಟ ಬೇಡ. ನಿಮಗೆ ಯಾವುದು ಕುತೂಹಲ ಉಂಟು ಮಾಡುತ್ತದೋ ಅದೊಂದನ್ನೇ ಆರಿಸಿಕೊಂಡು ಹೊರಡಿ. ನನಗೆ ಆವಿಷ್ಕಾರ ಮಾಡಲು ಸಾಧ್ಯ ಆಗುವುದಾದರೆ ನಿಮಗೇಕೆ ಆಗುವುದಿಲ್ಲ?”ಎನ್ನುತ್ತಾಳೆ ನಮ್ಮ ಗೀತಾಂಜಲಿ! ಆಕೆಯ ಐಕ್ಯೂ ಅತೀ ಹೆಚ್ಚು ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮುಂದೊಂದು ದಿನ ಅವಳು ನೊಬೆಲ್ ಪ್ರಶಸ್ತಿ ಪಡೆಯುತ್ತಾಳೆ ಅನ್ನುವುದು ನನ್ನ ಭವಿಷ್ಯ! ನನ್ನ ಭವಿಷ್ಯ ನಿಜವಾಗಲಿ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ: ಅವರು ಬರೆದ ಎಲ್ಲ 900 ಹಿಂದಿ ಹಾಡುಗಳು ಸೂಪರ್‌ಹಿಟ್!

Exit mobile version