‘ನಾನು ಎಂದಿಗೂ ಶ್ರೀ ರಾಮದೇವರ (Lord Sriramachandra) ಜೊತೆಗೆ ಇದ್ದೇನೆ. ನಾನು ದೇವರ ಜೊತೆಗೆ ಇದ್ದಾಗ ನನಗೆ ಯಾರ ಭಯ? ರಾಮ ದೇವರು ಈ ಕೋರ್ಟು ಕೇಸನ್ನು ಖಂಡಿತವಾಗಿ ಗೆಲ್ಲಿಸುತ್ತಾರೆ. ನಾನು ಇರಲಿ, ಇಲ್ಲದಿರಲಿ, ನಮ್ಮೆಲ್ಲರ ಕನಸಿನ ರಾಮ ಮಂದಿರವು ಅಯೋಧ್ಯೆಯಲ್ಲಿ (Ayodhya Rama Mandir) ತಲೆಯೆತ್ತಿ ನಿಲ್ಲುವುದು ಖಂಡಿತ’: ಈ ಮಾತುಗಳನ್ನು ಮಾಧ್ಯಮದವರ ಮುಂದೆ ಹೇಳುವಾಗ ಅವರ ಕಣ್ಣಲ್ಲಿ ಅಪಾರವಾದ ಅಭಿಮಾನ ಮತ್ತು ಸಂತೋಷ ಕಂಡುಬಂದಿತ್ತು. ಅವರು ಕಳೆದ ಎರಡು ದಶಕಗಳಿಂದ ಅಯೋಧ್ಯೆಯ ಕರಸೇವಕಪುರಂ (Ayodhya Karasevakapuram) ಎಂಬಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ (Vishwa hindu Parishat) ಆಫೀಸಿನ ಒಂದು ಧೂಳು ತುಂಬಿದ ಪುಟ್ಟ ಕೊಠಡಿಯಲ್ಲಿ ವಾಸವಾಗಿರುವ 75 ವರ್ಷದ ವೃದ್ಧರು (ರಾಜ ಮಾರ್ಗ ಅಂಕಣ). ಅವರನ್ನು ‘ರಾಮ ಲಲ್ಲಾನ ನಿಕಟ ಸ್ನೇಹಿತ’ (Ram Lallas Close Friend) ಎಂದು ಗೌರವದಿಂದ ಕೋರ್ಟು ಕರೆಯಿತು. ಅವರೇ ತ್ರಿಲೋಕಿನಾಥ್ ಪಾಂಡೆ (Triloki Nath Pandey).
ಪಾಂಡೆಯವರು ಉತ್ತರಪ್ರದೇಶದ ಬಲಿಯಾ ಎಂಬ ಊರಿಗೆ ಸಂಬಂಧಿಸಿದವರು. ಅವರದ್ದು ಕೃಷಿಕರ ಕುಟುಂಬ. ಹೆತ್ತವರ ನಾಲ್ಕು ಜನ ಮಕ್ಕಳಲ್ಲಿ ಇವರೇ ಹಿರಿಯರು. ಸ್ಥಳೀಯ ಶಾಲೆ ಮತ್ತು ಕಾಲೇಜಿನಲ್ಲಿ ಓದಿದವರು. ಸ್ವಲ್ಪ ದಿನ ಹಿಂದಿ ಅಧ್ಯಾಪಕರಾಗಿ ಪಾಠ ಹೇಳಿದವರು. ನಂತರ ಅವರು ಯಾವ ಉದ್ಯೋಗವನ್ನೂ ಮಾಡಿದವರಲ್ಲ.
ವಿದ್ಯಾರ್ಥಿಯಾಗಿ ಇದ್ದಾಗಲೇ ಆರೆಸ್ಸೆಸ್ ಅವರು ಸಂಪರ್ಕಕ್ಕೆ ಬಂದ ಕಾರಣ ಪೂರ್ಣ ಕಾಲದ ಪ್ರಚಾರಕ ಆದರು. 1980ರ ನಂತರ ವಿಶ್ವ ಹಿಂದೂ ಪರಿಷತ್ತಿನ ಹೊಣೆ ತೆಗೆದುಕೊಂಡರು. ಉತ್ತರಪ್ರದೇಶ ರಾಜ್ಯದಲ್ಲಿ ಅಯೋಧ್ಯೆಯ ರಾಮ ಜನ್ಮ ಭೂಮಿಯ ಬಗ್ಗೆ ಅರಿವು ಮೂಡಿಸಲು ಇಡೀ ರಾಜ್ಯವನ್ನು ಸುತ್ತಾಡಿದರು. ಮತಾಂತರ ಮತ್ತು ಹಿಂದೂ ಒಗ್ಗಟ್ಟಿನ ಬಗ್ಗೆ ಜಾಗೃತಿ ಮೂಡಿಸಿದರು. ಸಂಸಾರದ ಗೊಡವೆಯನ್ನು ಮಾಡದೆ ತಮ್ಮ ಬದುಕಿನ ಬಹುಭಾಗವನ್ನು ಹಿಂದುತ್ವದ ಪ್ರಚಾರಕ್ಕೆ ಕಳೆದರು. ಜೋಳಿಗೆಯನ್ನು ಬಗಲಿಗೆ ಹಾಕಿಕೊಂಡು ಬರಿಗಾಲಿನ ಪರಿವ್ರಾಜಕನಂತೆ ಊರೂರು ಸುತ್ತಿದರು.
ಶ್ರೀರಾಮ ದೇವರ ನಿಕಟ ಸ್ನೇಹಿತ
ದಶಕಗಳ ಹಿಂದೆಯೇ ಅಯೋಧ್ಯೆಯ ವಿವಾದವು ಕೋರ್ಟಿನ ಮೆಟ್ಟಿಲು ಏರಿತ್ತು. ಅದು ಹಿಂದುಗಳ ಶತಮಾನಗಳ ರಕ್ತ ಚೆಲ್ಲಿದ ಹೋರಾಟ. ಇಡೀ ಹಿಂದೂ ಸಮಾಜವು ಜಾಗೃತವಾಗಿ ಕೋರ್ಟ್ ಕಲಾಪಗಳನ್ನು ಗಮನಿಸುತ್ತಿದ್ದ ದಿನಗಳು ಅವು. ವಿಚಾರಣೆಯ ಟ್ರಯಲ್ ನಡೆಯುವಾಗ ಯಾವುದೇ ದೇವರು ಅಥವಾ ವಿಗ್ರಹವನ್ನು ಕಾನೂನಿನ ಪರಿಭಾಷೆಯಲ್ಲಿ ಬಹಳ ಗೌರವಪೂರ್ವಕವಾಗಿ ಕೋರ್ಟು ಕರೆಯುವುದು ‘ನ್ಯಾಯ ಶಾಸ್ತ್ರೀಯ ವ್ಯಕ್ತಿ’ ಎಂದು!
ದೇವಳದ ಟ್ರಸ್ಟಿ ಅಥವಾ ವ್ಯವಸ್ಥಾಪಕರು ಸಾಮಾನ್ಯವಾಗಿ ದೇಗುಲದ ಆಸ್ತಿಗಳನ್ನು ನಿರ್ವಹಣೆ ಮಾಡುವುದರಿಂದ ಅವರನ್ನು ‘ದೇವರ ನಿಕಟ ಸ್ನೇಹಿತ’ ಎಂದು ಕೋರ್ಟು ಅವರನ್ನು ಸಂಬೋಧನೆ ಮಾಡುತ್ತದೆ. ಅದೊಂದು ಗೌರವಾನ್ವಿತ ಹುದ್ದೆ ಮತ್ತು ಹೊಣೆಗಾರಿಕೆ. ಕೋರ್ಟಿನಲ್ಲಿ ವಿಚಾರಣೆ ನಡೆಯುವ ಎಲ್ಲಾ ಸಂದರ್ಭಗಳಲ್ಲಿಯೂ ಅವರು ಹಾಜರಿರಬೇಕು. ಮತ್ತು ಕೋರ್ಟಿನ ಎಲ್ಲಾ ದಾಖಲೆಗಳಿಗೆ ಸಹಿ ಮಾಡಬೇಕು.
ಪಾಂಡೆ ಅವರಿಗಿಂತ ಮೊದಲು ಇಬ್ಬರು ಆ ಹುದ್ದೆಯನ್ನು ನಿರ್ವಹಣೆ ಮಾಡಿದ್ದರು. ಒಬ್ಬರು ಹೈಕೋರ್ಟಿನ ನ್ಯಾಯಾಧೀಶರು. ಅವರು ಅಕಾಲಿಕವಾಗಿ ನಿಧನರಾಗಿದ್ದರು. ಮತ್ತೋರ್ವರು ನಿವೃತ್ತ ಯುನಿವರ್ಸಿಟಿ ಅಧ್ಯಾಪಕರು ಅರ್ಧದಲ್ಲಿ ಬಿಟ್ಟುಹೋಗಿದ್ದರು. ಅದೇ ಹುದ್ದೆ ಪಾಂಡೆ ಅವರಿಗೆ ಅರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ದೊರೆಯಿತು.
ಅದು ಕೋಟಿ ಹಿಂದೂಗಳ ಧಾರ್ಮಿಕ ಭಾವನೆಯ ಹುದ್ದೆ
ಕೋಟಿ ಕೋಟಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬರದಂತೆ ಅವರು ತಮ್ಮ ಕರ್ತವ್ಯವನ್ನು ಬಹಳ ಸಮರ್ಥವಾಗಿ ನೆರವೇರಿಸಿದರು ಮತ್ತು ಆ ಕೇಸು ಗೆಲ್ಲುವತನಕ ಒಂದು ದಿನವೂ ವಿಶ್ರಾಂತಿ ಪಡೆಯಲಿಲ್ಲ.
ಪಾಂಡೆ ಅವರಿಗೆ ರಾಮಮಂದಿರದ ಕನಸು ಬಿಟ್ಟು ಬೇರೆ ಯಾವ ಯೋಚನೆಯೂ ಇರಲಿಲ್ಲ.
ಅವರಿಗೆ ಅಪಾರವಾದ ಜ್ಞಾಪಕ ಶಕ್ತಿ ಇದೆ. ಅವರು ಪ್ರತೀ ದಿನದ ನಡೆದ ಕೋರ್ಟಿನ ನಡಾವಳಿಗಳನ್ನು ಯಥಾವತ್ತಾಗಿ ಮತ್ತು ನಿಖರವಾಗಿ ಹೇಳಬಲ್ಲವರು. ಅವರ ತಾಳ್ಮೆ ಅಂತೂ ಅದ್ಭುತ.
ದಶಕಗಳ ಕಾಲ ಕೋರ್ಟಿನ ವಾದಗಳು ನಡೆಯುವಾಗ ಕೊನೆಯ ಬೆಂಚಿನಲ್ಲಿ ಸುಮ್ಮನೆ ಕುಳಿತುಕೊಳ್ಳುವುದು ಸುಲಭ ಅಲ್ಲ. ಅವರಿಗೆ ಆರ್ಥ್ರೈಟಿಸ್ ಸಮಸ್ಯೆ ಇತ್ತು. ಒಮ್ಮೆ ಹೃದಯಾಘಾತ ಕೂಡ ಆಗಿತ್ತು. ಆದರೂ 2010ರ ನಂತರದ ಸುಪ್ರೀಂ ಕೋರ್ಟಿನ ಒಂದು ದಿನದ ಬೈಟಕ್ ಕೂಡ ತಪ್ಪಿಸಿಕೊಂಡದ್ದೇ ಇಲ್ಲ. ದೂರದಿಂದ ಪ್ರಯಾಣ ಮಾಡಿ ದೆಹಲಿಗೆ ಬರುತ್ತಿದ್ದರು. ಕೊನೆಯ 40 ದಿನಗಳ ಕಾಲ ಮ್ಯಾರಥಾನ್ ಹಿಯರಿಂಗ್ ನಡೆದಾಗಲೂ ಅವರು ಕೋರ್ಟಲ್ಲಿ 100% ಹಾಜರಾಗಿದ್ದರು. ವಕೀಲರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುತ್ತಿದ್ದರು. ರಾಮ ಮಂದಿರದ ಪರವಾಗಿ ಯಾವ ದಾಖಲೆಗಳು ಬೇಕಾದರೂ ತಕ್ಷಣವೇ ತಂದು ಕೊಡುತ್ತಿದ್ದರು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಭಾರತದ ಹಾಕಿ ಕ್ಯಾಪ್ಟನ್ ರಾಣಿ ರಾಂಪಾಲ್; ನಕ್ಷತ್ರಗಳೇ ಅವಳ ಪಾಲಿಗೆ ಗಡಿಯಾರ!
ತೀರ್ಪು ಬಂದಾಗ ಸಣ್ಣ ಮಗುವಿನ ಹಾಗೆ ಕಣ್ಣೀರು ಸುರಿಸಿದರು!
ಸುಪ್ರೀಂ ಕೋರ್ಟಿನ ತೀರ್ಪು ದೇವಳದ ಪರವಾಗಿ ಬಂದಾಗ ಪಾಂಡೆಯವರಿಗೆ ದುಃಖ ತಡೆದುಕೊಳ್ಳಲು ಆಗಲೇ ಇಲ್ಲ. ಅವರು ಪುಟ್ಟ ಮಗುವಿನ ಹಾಗೆ ಆನಂದ ಬಾಷ್ಪ ಸುರಿಸಿದರು. ಅದರ ನಂತರವೂ ಅವರು ಪ್ರಚಾರಕ್ಕೆ ಬರಲಿಲ್ಲ. ಮಾಧ್ಯಮಗಳ ಮುಂದೆ ಪೋಸು ಕೊಡಲಿಲ್ಲ. ಅತ್ಯಂತ ಸರಳವಾಗಿ ಪ್ರಚಾರ ಇಲ್ಲದೆ ಬದುಕಿದರು.
ಅಯೋಧ್ಯೆಯ ದೇಗುಲದ ಸಮೀಪದ ಒಂದು ಪುಟ್ಟದಾದ ಕೊಠಡಿಯಲ್ಲಿ ಅವರು ವಾಸವಾಗಿದ್ದರು. ಅವರ ಬಳಿ ಒಂದೆರಡು ಜೊತೆ ಬಟ್ಟೆ ಬಿಟ್ಟರೆ ಬೇರೇನೂ ಇರಲಿಲ್ಲ! ಊರವರು ಯಾರಾದರೂ ಊಟ, ತಿಂಡಿಗೆ ಕರೆದರೆ ಹೋಗುತ್ತಿದ್ದರು. ಇಲ್ಲವಾದರೆ ರಾಮ ನಾಮ ಜಪ ಮಾಡಿ ನೀರು ಕುಡಿದು ಮಲಗಿ ಬಿಡುತ್ತಿದ್ದರು.
‘ ರಾಮ ಲಲ್ಲಾ ನನಗೆ ವಹಿಸಿ ಕೊಟ್ಟಿದ್ದ ಹೊಣೆಯನ್ನು ತುಂಬ ಚೆನ್ನಾಗಿ ನಿರ್ವಹಣೆ ಮಾಡಿದ್ದೇನೆ. ಸುಪ್ರೀಂ ಕೋರ್ಟಿನ ಕೊನೆಯ ತೀರ್ಪು ರಾಮಮಂದಿರದ ಪರವಾಗಿ ಬಂದಾಗ ಅದು ನನ್ನ ಜೀವಮಾನದ ಮರೆಯಲಾಗದ ಕ್ಷಣ’ ಎಂದವರು ಹೇಳಿದ್ದಾರೆ. ಅವರು ತನ್ನ 75ರ ಪ್ರಾಯದಲ್ಲಿ 2021ರಲ್ಲಿ ಶ್ರೀರಾಮನ ಪಾದ ಸೇರಿದರು.
ತಮ್ಮ ಇಡೀ ಬದುಕನ್ನು ಹಿಂದೂತ್ವ ಮತ್ತು ಶ್ರೀರಾಮನ ಸೇವೆಯಲ್ಲಿ ಕಳೆದಿರುವ ತ್ರಿಲೋಕಿನಾಥ್ ಪಾಂಡೆ ಅವರ ಬಗ್ಗೆ ನಮಗೆ ಹೆಮ್ಮೆ ಮತ್ತು ಅಭಿಮಾನ ಇರಬೇಕು. ಮುಂದಿನ ವರ್ಷ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಉದ್ಘಾಟನೆ ಆಗುವಾಗ ಇಂತಹವರ ಕೊಡುಗೆಗಳನ್ನು ನೆನಪು ಖಂಡಿತ ಮಾಡಿಕೊಳ್ಳಬೇಕು.