ಆಕೆಯನ್ನು ಸಾಮಾಜಿಕ ಜಾಲತಾಣದಲ್ಲಿ The Winner On Wheels ಎಂದು ಗೌರವದಿಂದ ಕರೆಯಲಾಗುತ್ತದೆ! ಆಕೆಯ ಬದುಕೇ ಒಂದು ದಿಟ್ಟ ಹೋರಾಟದ ಕಥೆ. ಆಕೆಯ ಕತೆಯನ್ನು ಯು ಟ್ಯೂಬ್‌ನ ಟೆಡ್ ಟಾಕ್ ಮೂಲಕ ಕೇಳಿ ನಾನು ಕಣ್ಣೀರು ಸುರಿಸಿದ್ದೇನೆ. ನೀವೂ ಆಕೆಯ ಬಾಯಲ್ಲೇ ಅವಳ ಕೇಳಿ….
ನಾನು ವಿರಾಲಿ ಮೋದಿ. ಅಪ್ಪಟ ಭಾರತೀಯಳು. ನಮ್ಮ ಕುಟುಂಬದವರು ಮೂಲತಃ ಮುಂಬೈಯವರು. ನಾನು ನನ್ನ ಅಪ್ಪ ಮತ್ತು ಅಮ್ಮನ ಜೊತೆ ಅಮೆರಿಕದ ಪೆನಿಸಿಲ್ವೇನಿಯಾ ನಗರದಲ್ಲಿ ವಾಸವಾಗಿದ್ದೇನೆ. ಅಮೆರಿಕದಲ್ಲಿ ನೆಲೆಸಿದ್ದರೂ ನಾವು ಮೂಲವನ್ನು ಮರೆಯುವವರಲ್ಲ. ಪ್ರತೀ ರಜೆಯಲ್ಲಿ ನಾನು ಮುಂಬೈಗೆ ಬಂದು ಅಜ್ಜ ಅಜ್ಜಿಯ ಜೊತೆ ಕಾಲ ಕಳೆಯುತ್ತೇನೆ. ಮಾಡೆಲಿಂಗ್ ಮತ್ತು ಆಕ್ಟಿಂಗ್ ಇವು ನನ್ನ ಕನಸುಗಳು. ರೆಕ್ಕೆ ಬಿಚ್ಚಿ ಹಾರಾಡುವ ನನ್ನ ಕನಸುಗಳಿಗೆ ಮಿತಿಯೇ ಇರಲಿಲ್ಲ!
ಹಾಗೆ 2006ರ ರಜೆಯಲ್ಲಿ ಮುಂಬೈಗೆ ಬಂದಿದ್ದೆ. ನನಗೆ ಆಗ ಹದಿನಾಲ್ಕು ವರ್ಷ. ಅಜ್ಜ ಅಜ್ಜಿಯ ಪ್ರೀತಿಯಲ್ಲಿ ಭಾರಿ ಖುಷಿ ಇತ್ತು. ಒಂದು ತಿಂಗಳು ಕಳೆದದ್ದೇ ಗೊತ್ತಾಗಲಿಲ್ಲ. ರಜೆ ಕಳೆದು ಭಾರವಾದ ಹೃದಯದಿಂದ ಮತ್ತೆ ಅಮೆರಿಕಕ್ಕೆ ಮರಳಿ ಬಂದಿದ್ದೆ. ಮತ್ತೆ ಶಾಲೆ ಆರಂಭ ಆಗುವುದರಲ್ಲಿತ್ತು.
ಕೆಲವೇ ದಿನದಲ್ಲಿ ನನಗೆ ತೀವ್ರವಾದ ಜ್ವರ ಶುರುವಾಯಿತು. ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಮಲೇರಿಯಾ ಇರಬಹುದು ಎಂದು ಔಷಧ ಕೊಟ್ಟು ಕಳುಹಿಸಿದರು. ಆದರೆ ಜ್ವರ ಮತ್ತೆ ಜಾಸ್ತಿ ಆಯಿತು. ಈ ಬಾರಿ ಕೋಮಾಕ್ಕೆ ಹೋಗಿ ಬಿಟ್ಟೆ. ಅದರ ಮಧ್ಯೆ MRI, ಬೆನ್ನುಮೂಳೆ ಪರೀಕ್ಷೆ ಎಲ್ಲವೂ ನಡೆಯಿತು. ಎಲ್ಲ ಪರೀಕ್ಷೆಯಲ್ಲಿಯೂ ಯಾವುದೇ ಕಾಯಿಲೆ ಇಲ್ಲ ಎಂದೇ ವರದಿ ಬಂದಿತು. ವೈದ್ಯರು ಏನೇ ಪ್ರಯತ್ನ ಪಟ್ಟರೂ ಕಾಯಿಲೆ ಟ್ರೇಸ್ ಆಗಲಿಲ್ಲ!
ಒಮ್ಮೆಯಂತೂ ನನ್ನ ಹೃದಯ ಬಡಿತ, ನಾಡಿ, ಉಸಿರಾಟ ಏಳು ನಿಮಿಷ ನಿಂತೇ ಹೋಯಿತು. ವೈದ್ಯರು ನಾನು ಸತ್ತೇ ಹೋದೆ ಎಂದು ಘೋಷಣೆ ಮಾಡಿದ್ದರು! ಮತ್ತೆ ನಿಧಾನಕ್ಕೆ ಉಸಿರಾಟ ಆರಂಭ ಆಯಿತು. ವೈದ್ಯರು ಕೂಡ ಆಶ್ಚರ್ಯ ಪಡಬೇಕಾಯಿತು.
ಹೆಸರೇ ಇಲ್ಲದ ಕಾಯಿಲೆ!
ಮುಂದೆ ಮತ್ತೆ 23 ದಿನಗಳ ಕೋಮಾ. ನನಗೆ ಮತ್ತು ನನ್ನ ಹೆತ್ತವರಿಗೆ ತೀವ್ರ ಯಾತನಾಮಯ ದಿನಗಳು. ಯಾವ ತಜ್ಞ ವೈದ್ಯರಿಂದಲೂ ಪತ್ತೆ ಹಚ್ಚಲು ಆಗದ ಆ ವಿಚಿತ್ರ ಕಾಯಿಲೆಯಿಂದ ನಮ್ಮ ಕುಟುಂಬವು ಹೈರಾಣ ಆಗಿತ್ತು. ಅದರ ಮಧ್ಯೆ ಮತ್ತೆ ನನ್ನ ಉಸಿರು ಮೂರು ಬಾರಿ ನಿಂತು ವೈದ್ಯರು ನನ್ನನ್ನು ಡೆಡ್ ಎಂದು ಘೋಷಣೆ ಮಾಡಿ ಆಗಿತ್ತು!
ಎಲ್ಲಾ ಜ್ವರ ನಿಯಂತ್ರಣಕ್ಕೆ ಬಂದು ನಾನು ಕೋಮಾದಿಂದ ಆಚೆ ಬಂದಾಗ ಆರು ತಿಂಗಳುಗಳು ಕಳೆದು ಹೋಗಿದ್ದವು. ಹಾಸಿಗೆಯಿಂದ ಎದ್ದು ಕುಳಿತುಕೊಳ್ಳಲು ಪ್ರಯತ್ನ ಪಟ್ಟಾಗ ಆಗಲೇ ಇಲ್ಲ. ಕುತ್ತಿಗೆಯ ಕೆಳಭಾಗ ತೀವ್ರವಾದ ನೋವು! ಇಡೀ ದೇಹವು ನನ್ನ ನಿಯಂತ್ರಣ ತಪ್ಪಿ ಹೋಗಿತ್ತು!
ಹೌದು! ಕುತ್ತಿಗೆಯ ಕೆಳಗಿನ ನನ್ನ ದೇಹದ ಪೂರ್ತಿ ಭಾಗ ಮರಗಟ್ಟಿ ಹೋಗಿತ್ತು. ಪಾರಾಲೈಸ್ ಆಗಿತ್ತು. ಮುಂದಿನ ಇಡೀ ಜೀವನ ನಾನು ವೀಲ್ ಚೇರ್ ಮೇಲೆ ಕಳೆಯಬೇಕು ಎಂದು ವೈದ್ಯರು ಹೇಳಿದ್ದು ನನಗೆ ಅಸ್ಪಷ್ಟವಾಗಿ ಕೇಳುತ್ತಿತ್ತು. ಅಭಿನಯಿಸುವ, ಮಾಡೆಲಿಂಗ್ ಮಾಡುವ ನನ್ನ ಕನಸುಗಳು ಬೂದಿ ಆಗಿ ಹೋಗಿದ್ದವು! ಕೊನೆಗೂ ನನ್ನ ಕಾಯಿಲೆಗೆ ಹೆಸರು ದೊರೆಯಲಿಲ್ಲ!
ವೀಲ್ ಚೇರ್ ಇನ್ನು ನನ್ನ ಒಡನಾಡಿ!
ಜೋರಾಗಿ ಶಬ್ದ ಮಾಡುತ್ತಾ ಅಳುತ್ತ ಕುಳಿತೆ. ಎಷ್ಟು ದಿನ ಅಳುವುದು? ನನ್ನ ಫ್ರೆಂಡ್ಸ್ ನನ್ನನ್ನು ಬಿಟ್ಟು ಹೋಗಿದ್ದರು. ನಾನು ಆಳವಾದ ಡಿಪ್ರೆಶನ್‌ಗೆ ಹೊರಟು ಹೋಗಿದ್ದೆ. ಎಷ್ಟೋ ಬಾರಿ ಸಾಯಬೇಕು ಅನ್ನಿಸುತ್ತಿತ್ತು. ಆಗೆಲ್ಲ ನನ್ನ ಸಹಾಯಕ್ಕೆ ಬರುವವಳು ನನ್ನ ಅಮ್ಮನೇ.
ಬೇಟಿ ಹಾರ್ ಮತ್ ಮಾನಿಯೇ!
“ಬೇಟಿ, ಹಾರ್ ಮತ್ ಮಾನಿಯೆ! ಹಮ್ ಹೈ ಆಪ್ಕೆ ಸಾಥ್” ಅನ್ನುತ್ತಿದ್ದರು ಅಮ್ಮ. Accept yourself as you are ಅನ್ನುತ್ತಿದ್ದರು ಅಮ್ಮ. ನನ್ನ ಹೆತ್ತವರು ತಮ್ಮ ಅಮೆರಿಕದ ಮನೆಯನ್ನು ಮಾರಿ ಭಾರತಕ್ಕೆ ಹಿಂದಿರುಗುವ ತೀರ್ಮಾನ ಮಾಡಿದರು. ನಾನು ನಿಧಾನವಾಗಿ ವೀಲ್ ಚೇರನ್ನು ನನ್ನ ಒಡನಾಡಿ ಮಾಡಿಕೊಂಡೆ. ವಾಶ್ ರೂಮಿಗೆ ಹೋಗುವಾಗ ನನ್ನ ಅಮ್ಮ ನನ್ನನ್ನು ಹೊತ್ತುಕೊಂಡು ಹೋಗುತ್ತಿದ್ದರು. ನಾನು ನಿಧಾನವಾಗಿ ಮಾನಸಿಕವಾಗಿ ಸ್ಟ್ರಾಂಗ್ ಆಗುತ್ತಿದ್ದೆ. ನನ್ನ ಅಮ್ಮ ನನ್ನನ್ನು ಸೋಲಲು ಬಿಡುವುದಿಲ್ಲ ಎಂಬ ನಂಬಿಕೆ ಬಲವಾಗಿತ್ತು.
ಮರಳಿ ಭಾರತಕ್ಕೆ! ಹೋರಾಟದ ಎರಡನೇ ಹಂತ!
ನನ್ನನ್ನು ವೀಲ್ ಚೇರ್ ಮೇಲೆ ಕೂರಿಸಿಕೊಂಡು ನನ್ನ ಕುಟುಂಬವು ವಿಮಾನದ ಮೂಲಕ ದೆಹಲಿಗೆ ಬಂದು ಇಳಿಯಿತು. ಅಲ್ಲಿಂದ ರೈಲಿನ ಮೂಲಕ ಮುಂಬೈ ಕಡೆಗೆ ಪ್ರಯಾಣ. ಮುಂಬೈಯಲ್ಲಿ ರೈಲು ನಿಂತಾಗ ನನ್ನನ್ನು ವೀಲ್ ಚೇರ್ ಜೊತೆಗೆ ಇಳಿಸಲು ಅಮ್ಮ ಇಬ್ಬರು ಹಮಾಲಿಗಳನ್ನು ಕರೆದರು. ಅವರು ನನ್ನನ್ನು ಕೆಳಗೆ ಇಳಿಸುವ ನೆಪದಲ್ಲಿ ನನ್ನ ಮೈ ಮೇಲೆಲ್ಲ ಕೈ ಹಾಕಿದರು. ನಾನು ಬೊಬ್ಬೆ ಹೊಡೆದು ಪ್ರತಿಭಟನೆ ಮಾಡಬೇಕು ಎಂದುಕೊಂಡರೂ ಯಾಕೋ ಧ್ವನಿ ಹೊರಬರಲಿಲ್ಲ. ನಾನು ಅದನ್ನು ನಿರೀಕ್ಷೆ ಮಾಡಿರಲಿಲ್ಲ!
ಎರಡನೆಯ ಅಭಿಯಾನಕ್ಕೆ ಸಿದ್ಧತೆ!
ಮನೆಗೆ ಬಂದು ನಾನು ನಡೆದ ಘಟನೆಯನ್ನು ಹೆತ್ತವರ ಜೊತೆ ವಿಸ್ತಾರವಾಗಿ ವಿವರಿಸಿದೆ. ಪೊಲೀಸ್ ಕಂಪ್ಲೇಂಟ್ ಕೊಟ್ಟು ಪರಿಹಾರ ಆಗುವ ಸಮಸ್ಯೆ ಅದಲ್ಲ. ಭಾರತದಲ್ಲಿ ನನ್ನ ಹಾಗೆ ಕಷ್ಟ ಪಡುವ 27 ಮಿಲಿಯನ್ ವಿಶೇಷ ಚೇತನ ಮಕ್ಕಳು ಇದ್ದಾರೆ. ಅವರೆಲ್ಲರೂ ಒಂದಲ್ಲ ಒಂದು ಬಾರಿ ಈ ರೀತಿಯ ದೌರ್ಜನ್ಯಕ್ಕೆ ಒಳಪಡುವ ಸಾಧ್ಯತೆಯು ಇತ್ತು. ಪ್ರತೀ ಬಸ್ ಸ್ಟಾಂಡ್, ರೈಲ್ವೇ ಸ್ಟೇಷನ್ ಮತ್ತು ವಿಮಾನ ನಿಲ್ದಾಣಗಳಲ್ಲಿ ರ‍್ಯಾಂಪ್ ಇದ್ದರೆ ಅಥವಾ ಉಚಿತವಾದ ವೀಲ್ ಚೇರ್ ಇದ್ದರೆ ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಪರಿಹಾರ ಮಾಡಬಹುದು ಎಂಬ ನಿರ್ಧಾರಕ್ಕೆ ಬಂದೆವು. ಅದನ್ನು ಯಾರು ಮಾಡಬೇಕು?
ಭಾರತ ಸರಕಾರದ ಮೇಲೆ ಆಗ್ರಹ!
ನನ್ನ ಹೆತ್ತವರು ನನ್ನ ಹೆಸರಲ್ಲಿ ಭಾರತ ಸರಕಾರದ ಮೇಲೆ ಕೋರ್ಟ್‌ನಲ್ಲಿ ಆಗ್ರಹದ ಕೇಸನ್ನು ದಾಖಲು ಮಾಡಿದರು. ನಾನು ಸಾಮಾಜಿಕ ಜಾಲತಾಣದಲ್ಲಿ My Train Too ಎಂಬ ಹ್ಯಾಶ್ ಟ್ಯಾಗ್ ಹಾಕಿಕೊಂಡು ಒಂದು ಅಭಿಯಾನವನ್ನು ಆರಂಭ ಮಾಡಿದೆ. ಈ ಅಭಿಯಾನದ ಉದ್ದೇಶವನ್ನು ಹಲವು ಟಿವಿ ಚಾನೆಲ್ ಮೂಲಕ ಹಂಚಿಕೊಂಡೆ. ಅತ್ಯಂತ ಪ್ರಬಲವಾದ ಜನಾಭಿಪ್ರಾಯ ರೂಪುಗೊಂಡಿತು. ಹತ್ತು ಲಕ್ಷ ಜನರು ಈ ಅಭಿಯಾನದ ಪರವಾಗಿ ವೋಟ್ ಮಾಡಿದರು. ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿತು!
ನಮ್ಮ ಅಭಿಯಾನ ಗೆದ್ದಿತು!
ಭಾರತ ಸರಕಾರ ಆರಂಭದ ಹಂತದಲ್ಲಿ ಆಯ್ದ ಆರು ರೈಲ್ವೇ ನಿಲ್ದಾಣಗಳಲ್ಲಿ, ಆರು ವಿಮಾನ ನಿಲ್ದಾಣಗಳಲ್ಲಿ ಹಾಗೂ ಹತ್ತಾರು ಬಸ್ ನಿಲ್ದಾಣಗಳಲ್ಲಿ ರ‍್ಯಾಂಪ್ ಮತ್ತು ಉಚಿತವಾದ ವೀಲ್ ಚೇರ್ ಸೌಲಭ್ಯವನ್ನು ಮಾಡಿತು ಮತ್ತು ಉಳಿದ ಎಲ್ಲ ಕಡೆಗಳಲ್ಲಿ ಈ ಸೌಲಭ್ಯವನ್ನು ವಿಸ್ತರಿಸುವ ಭರವಸೆಯನ್ನು ಕೋರ್ಟಿಗೆ ನೀಡಿತು. ಒಬ್ಬ ಅಸಾಮಾನ್ಯ ಹುಡುಗಿಯಾದ ನನ್ನ ಮತ್ತು ನನ್ನ ಪೋಷಕರ ಹೋರಾಟವು ದೇಶದಲ್ಲಿ ಬದಲಾವಣೆಯ ಗಾಳಿ ಬೀಸಲು ಕಾರಣ ಆಯಿತು!
ಇನ್ನೊಂದು ಅಭಿಯಾನಕ್ಕೆ ಚಾಲನೆ!
ಒಂದು ಅಭಿಯಾನದ ಗೆಲುವು ಇನ್ನೊಂದು ಅಭಿಯಾನಕ್ಕೆ ದಾರಿ ಮಾಡಿಕೊಟ್ಟಿತು. ಹೋಟೆಲುಗಳಲ್ಲಿ ನನ್ನ ಹಾಗಿರುವ ವಿಶೇಷ ಚೇತನರಿಗೆ ಕಿರುಕುಳವು ಆಗುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಅದಕ್ಕೆ My Restaurant Too! ಎಂಬ ಹ್ಯಾಶ್ ಟ್ಯಾಗ್ ಜೊತೆಗೆ ಇನ್ನೊಂದು ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. ಹೋಟೆಲುಗಳಲ್ಲಿ ಕೂಡ ನಮಗೆ ಪ್ರತ್ಯೇಕ ಆದ ಕೊಠಡಿ ಒದಗಿಸಬೇಕು. ರ‍್ಯಾಂಪ್ ಇರಬೇಕು ಮತ್ತು ಉಚಿತ ವೀಲ್ ಚೇರ್ ಇರಬೇಕು ಎನ್ನುವ ನನ್ನ ಆಗ್ರಹಕ್ಕೆ ಕೋರ್ಟು ಬೆಂಬಲ ನೀಡುವ ಎಲ್ಲ ಭರವಸೆ ಇದೆ.
ಬೂದಿಯಿಂದ ಎದ್ದು ಬಂದ ನನ್ನ ಕನಸುಗಳು!
ಒಂದೊಂದು ಅಭಿಯಾನವನ್ನು ಗೆಲ್ಲುತ್ತ ಹೋದಂತೆ ನನ್ನ ಆತ್ಮವಿಶ್ವಾಸ ಹೆಚ್ಚುತ್ತಾ ಹೋಯಿತು. ನನ್ನ ಪದವಿ ಶಿಕ್ಷಣ ಕೂಡ ಮುಗಿಯಿತು. ನಾನು ಮಾಡೆಲಿಂಗ್ ಕ್ಷೇತ್ರದಲ್ಲಿ ಈಗ ಬ್ಯುಸಿ ಆಗಿದ್ದೇನೆ. 2014ರಲ್ಲಿ ನನಗೆ ‘ಮಿಸ್ ಇಂಡಿಯಾ ವೀಲ್ ಚೇರ್’ ಸೌಂದರ್ಯದ ಕಿರೀಟ ದೊರೆತಿದೆ. ‘ರೈಸಿಂಗ್ ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿ ನನ್ನನ್ನು ಹುಡುಕಿಕೊಂಡು ಬಂದಿದೆ.
ಬಿಬಿಸಿಯು ನಡೆಸಿರುವ ಜಗತ್ತಿನ 100 ಶಕ್ತಿಶಾಲಿಯಾದ ಮಹಿಳೆಯರ ಸಮೀಕ್ಷೆಯಲ್ಲಿ ನನಗೆ ಪ್ರಮುಖವಾದ ಸ್ಥಾನವು ದೊರೆತಿದೆ. ಸಲ್ಮಾನ್ ಖಾನ್ ನಟಿಸುವ ಮುಂದಿನ ಹಿಂದಿ ಸಿನೆಮಾದಲ್ಲಿ ನನಗೆ ಒಂದು ಒಳ್ಳೆಯ ಪಾತ್ರವು ದೊರೆತಿದೆ. ನನ್ನ ಲೈಫ್ ಈಗ ಯು ಟರ್ನ್ ಪಡೆಯುತ್ತ ಮುಂದೆ ಹೋಗುತ್ತಿದೆ. ನಾನೀಗ ವೀಲ್ ಚೇರ್ ಮೇಲೆ ಕುಳಿತುಕೊಂಡು ಇಡೀ ಭಾರತವನ್ನು ಸುತ್ತುತ್ತಾ ನನ್ನ ಹಾಗೆ ಇರುವ ಸಾವಿರಾರು ಅಸಹಾಯಕ ಮಂದಿಗೆ ಧೈರ್ಯವನ್ನು ತುಂಬುವ ಕೆಲಸ ಮಾಡುತ್ತಿದ್ದೇನೆ.
ಅಮ್ಮ ಹೇಳಿದ ಮಾತು ಈಗಲೂ ನೆನಪಿದೆ – ಬೇಟಿ, ಹಾರ್ ಮತ್ ಮಾನಿಯೆ!
ಇದನ್ನೂ ಓದಿ | ಕ್ಯಾನ್ಸರ್ ರೋಗಿಗಳ ಅನ್ನ ನೀಡುವ ದೇವತಾಮನುಷ್ಯ: 30 ವರ್ಷಗಳಿಂದ ನಿಲ್ಲದ ಸಾವ್ಲಾ ಸೇವೆ