Site icon Vistara News

ರಾಜ ಮಾರ್ಗ ಅಂಕಣ | ನೇತಾಜಿ ಪ್ರಾಣ ಉಳಿಸಲು ತನ್ನ ಗಂಡನನ್ನೇ ಕೊಂದು ಹಾಕಿದ ನೀರಾ ಆರ್ಯ!

Neera Arya
ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಚಾರ ಪಡೆಯದ ಯಶೋಗಾಥೆ!
ಸೆರೆಮನೆಯಲ್ಲಿ ಆಕೆಯ ಮೊಲೆಯನ್ನೇ ಕತ್ತರಿಸಿ ಹಾಕಿದ ಬ್ರಿಟಿಷ್ ಜೈಲರ್!
ನಾನು ಬರೆದ ಸಾವಿರಾರು ಕಥೆಗಳಲ್ಲಿ ನನಗೇ ಕಣ್ಣೀರು ತರಿಸಿದ ಕೆಲವೇ ಕಥೆಗಳಲ್ಲಿ ಇದೂ ಒಂದು!

ನೀರಾ ಆರ್ಯ ಅವರ ದೇಶಪ್ರೇಮ, ಸ್ವಾಭಿಮಾನ ಮತ್ತು ಹೋರಾಟದ ಕಿಚ್ಚು ಯಾರಿಗಾದರೂ ಸ್ಫೂರ್ತಿ ಕೊಡುವಂತದ್ದು! ಅವರ ಕಥೆಯನ್ನು ಅವರದ್ದೇ ಮಾತಲ್ಲಿ ಕೇಳುತ್ತ ಹೋಗೋಣ.

ನಾನು ನೀರಾ ಆರ್ಯ. ಹುಟ್ಟಿದ್ದು ಉತ್ತರ ಪ್ರದೇಶದ ಭಾಘಪಥ್ ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ. ನನ್ನ ತಂದೆ ಒಬ್ಬ ಯಶಸ್ವೀ ವ್ಯಾಪಾರಿ ಆಗಿದ್ದರು. ನನಗೆ ದೇಶಪ್ರೇಮದ ಸ್ಫೂರ್ತಿ ತುಂಬಿದ್ದು ಅವರೇ.

ನಾನು ಪ್ರೀತಿ ಮಾಡಿ ಮದುವೆ ಆದದ್ದು ಶ್ರೀಕಾಂತ್ ನಿರಂಜನ್ ದಾಸ್ ಎಂಬವರನ್ನು. ಅವರು ಬ್ರಿಟಿಷ್ ಸೇನೆಯಲ್ಲಿ ಪತ್ತೇದಾರರು ಆಗಿದ್ದರು. ಮುಂದೆ ನಾನು ನೇತಾಜಿ ಸುಭಾಸಚಂದ್ರ ಬೋಸರ ಸ್ವಾತಂತ್ರ್ಯದ ಹೋರಾಟದಿಂದ ಸ್ಫೂರ್ತಿ ಪಡೆದು ಕೋಲ್ಕೊತಾದಲ್ಲಿ ಅವರನ್ನು ಭೇಟಿ ಆದೆ. ಅವರು ನನಗೆ ಅವರ INA ಯ ರಾಣಿ ಝಾನ್ಸಿ ರೆಜಿಮೆಂಟನ ಹೊಣೆಯನ್ನು ಕೊಟ್ಟರು. ಆಗ ನನ್ನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಆರಂಭ ಆಯಿತು.

ಬ್ರಿಟಿಷರು ನೇತಾಜಿ ಸುಭಾಸರ ಹೋರಾಟದಿಂದ ಕಂಗೆಟ್ಟಿದ್ದರು. ಅವರು ನೇತಾಜಿಯವರನ್ನು ಪತ್ತೆ ಹಚ್ಚುವ ಮತ್ತು ಸಾಧ್ಯವಾದರೆ ಹತ್ಯೆ ಮಾಡುವ ಹೊಣೆಯನ್ನು ನನ್ನ ಗಂಡನಿಗೆ ಕೊಟ್ಟಿದ್ದರು. ಅದಕ್ಕಾಗಿ ಅವರು ನನ್ನನ್ನು ದಿನವೂ ಪೀಡಿಸಲು ತೊಡಗಿದರು. ನಾನು ಏನೂ ಹೇಳುವುದಿಲ್ಲ ಎಂದು ಅವರಿಗೆ ಹೇಳಿದ್ದೆ! ಯಾಕೆಂದರೆ, ನನಗೆ ನೇತಾಜಿ ದೇವರಿಗೆ ಸಮನಾಗಿದ್ದರು!

ಮುಂದೆ ಒಂದು ದಿನ ನನ್ನ ಗಂಡ ನೇತಾಜಿಯವರನ್ನು ಟ್ರೇಸ್ ಮಾಡಿ ಅವರ ಜೀಪಿನ ಮೇಲೆ ಗುಂಡು ಹಾರಿಸಿದರು. ಗುಂಡು ಗುರಿ ತಪ್ಪಿ ಜೀಪ್ ಡ್ರೈವರ್ ಪ್ರಾಣ ತೆಗೆಯಿತು. ನೇತಾಜಿ ಪ್ರಾಣ ಉಳಿಯಿತು. ಆಗ ನನ್ನ ಗಂಡ ಮತ್ತೆ ನೇತಾಜಿ ಮೇಲೆ ಆಕ್ರಮಣಕ್ಕೆ ಮುಂದಾದಾಗ ನನಗೆ ಬೇರೆ ದಾರಿ ಇರಲಿಲ್ಲ. ನನ್ನ ಹರಿತವಾದ ಖಡ್ಗದಿಂದ ನನ್ನ ಗಂಡನ ಪ್ರಾಣವನ್ನು ತೆಗೆಯಲು ನಾನು ಹಿಂದೆ ಮುಂದೆ ನೋಡಲಿಲ್ಲ! ನನ್ನ ದೇಶದ್ರೋಹಿ ಗಂಡ ನನ್ನ ಎಲ್ಲ ಕನಸುಗಳನ್ನು ಸುಟ್ಟು ಹಾಕಿ ನನ್ನ ಮುಂದೆ ಹೆಣವಾಗಿ ಮಲಗಿದ್ದರು! ನಾನು ನಿರ್ಭಾವುಕಳಾಗಿ ನಿಂತಿದ್ದೆ!

ಮುಂದೆ ಗಂಡನ ಹತ್ಯೆಯ ಆಪಾದನೆ ಹೊರಿಸಿ ನನ್ನನ್ನು ಬ್ರಿಟಿಷ್ ಸರಕಾರವು ಕೋಲ್ಕೊತಾದಲ್ಲಿ ಬಂಧಿಸಿತು. ವಿಚಾರಣೆಯ ಪ್ರಹಸನ ನಡೆಯಿತು. ನನಗೆ ಜೀವಾವಧಿಯ ಕಾಲಾಪಾನಿ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ದೂಡಿತು. ನಾನು ಒಂದಿಷ್ಟೂ ವಿಷಾದ ಇಲ್ಲದೆ ಶಿಕ್ಷೆ ಎದುರಿಸಲು ಮಾನಸಿಕವಾಗಿ ಸಿದ್ಧತೆ ನಡೆಸಿದೆ.

ಅಂಡಮಾನ್ ಸೆಲ್ಯುಲರ್ ಜೈಲಿನ ಸಣ್ಣ ಉಸಿರುಗಟ್ಟುವ ಕೊಠಡಿಯಲ್ಲಿ ನನ್ನನ್ನು ಬ್ರಿಟಿಷರು ಬಂಧಿಸಿಟ್ಟರು. ಕಿಟಕಿ, ಬಾಗಿಲು ಇಲ್ಲದ ಇಲ್ಲದ, ಬೆಳಕನ್ನೇ ಕಾಣದ ಕೊಠಡಿ ಅದು. ನನ್ನ ಕೈಗಳಿಗೆ, ಕಾಲುಗಳಿಗೆ, ಕುತ್ತಿಗೆಗೆ ಕಬ್ಬಿಣದ ಸರಪಣಿ ಬಿಗಿಯಲಾಗಿತ್ತು. ದಿನವೂ ಜೈಲರ್ ಬಂದು ನೇತಾಜಿ ಎಲ್ಲಿದ್ದಾರೆ ಎಂದು ಕೇಳುವುದು, ಮಾಹಿತಿ ನೀಡಿದರೆ ಬಿಡುಗಡೆ ಮಾಡುವ ಆಮಿಷ ಒಡ್ಡುವ ಸಂಗತಿಗಳು ನಡೆಯುತ್ತಿದ್ದವು. ಆದೇ ಹೊತ್ತಿಗೆ ನೇತಾಜಿ ವಿಮಾನ ಅಪಘಾತ ಆಗಿ ಅವರು ಕಣ್ಮರೆ ಆದ ಸುದ್ದಿ ಬಂದು ನನ್ನ ಕಿವಿಗೆ ಅಪ್ಪಳಿಸಿತು. ನಾನು ಇಡೀ ದಿನ ಕಣ್ಣೀರು ಸುರಿಸುತ್ತ ಸುಸ್ತಾಗಿದ್ದೆ. ಜೈಲಿನ ಹಿಂಸೆಗಿಂತ ಆ ನೋವು ನನಗೆ ಹೆಚ್ಚಾಗಿತ್ತು.

ನೀರಾ ಆರ್ಯ

ಆ ರಾತ್ರಿ ಜೈಲರ್ ಎರಡು ಪೊಲೀಸರ ಜೊತೆಗೆ ನನ್ನ ಸೆರೆಮನೆಗೆ ಬಂದಿದ್ದ. ಒಬ್ಬ ಕಮ್ಮಾರನನ್ನು ಕರೆದುಕೊಂಡು ಬಂದಿದ್ದ. ನನ್ನ ಮೈ ಮೇಲೆ ಎರಡು ಕಂಬಳಿ ಎಸೆದ. ಸೆರೆಮನೆಯಲ್ಲಿ ಚಳಿ ಹೆಚ್ಚಿತ್ತು. ನಾನು ಹೊದ್ದುಕೊಂಡು ಗುಬ್ಬಚ್ಚಿಯ ಹಾಗೆ ಕುಳಿತೆ. ಆಗಲೂ ಜೈಲರ್ ನೇತಾಜಿ ಎಲ್ಲಿ? ಎಂದು ಕ್ರೂರವಾಗಿ ಕೇಳಿದ. ನಾನು ವಿಮಾನ ಅಪಘಾತ ಆಗಿದೆ, ನೇತಾಜಿ ಇನ್ನಿಲ್ಲ ಎಂದು ಹೇಳಿದೆ.

ಜೈಲರ್ ನೀವು ಭಾರತೀಯರು ನಮ್ಮನ್ನು ಸುಲಭವಾಗಿ ಮೋಸ ಮಾಡುತ್ತೀರಿ. ನೇತಾಜಿ ಖಂಡಿತ ಸತ್ತಿಲ್ಲ. ಎಲ್ಲಿದ್ದಾರೆ ಹೇಳು ಎಂದು ಮತ್ತೆ ಘರ್ಜಿಸಿದ! ನಾನು ಅವನ ಮುಖಕ್ಕೆ ಉಗಿದೆ. ಅವನ ಅಹಂ ಬೆಂಕಿ ಆಯ್ತು. ಅವನು ಕಮ್ಮಾರನಿಗೆ ಏನೋ ಸೂಚನೆ ಕೊಟ್ಟು ಹೊರಗೆ ಹೋದ.

ಕಮ್ಮಾರ ತನ್ನ ಹರಿತವಾದ ಉಳಿಯಿಂದ ಮತ್ತು ಭಾರವಾದ ಸುತ್ತಿಗೆಯಿಂದ ನನ್ನ ಕೈಯ್ಯ ಸರಪಣಿ ಕಡಿದುಹಾಕಿದ. ಉದ್ದೇಶಪೂರ್ವಕ ಕೈಯ್ಯ ಚರ್ಮ ಕಿತ್ತು ಬರುವಂತೆ ಮಾಡಿದ. ನಾನು ನೋವಿನಲ್ಲಿ ಅವುಡು ಕಚ್ಚಿದೆ. ಮುಂದೆ ಆತ ನನ್ನ ಕಾಲಿನ ಸರಪಣಿ ಕತ್ತರಿಸಿದ. ಉದ್ದೇಶಪೂರ್ವಕ ನನ್ನ ಕಾಲಿನ ಎಲುಬುಗಳ ಮೇಲೆ ಸುತ್ತಿಗೆಯ ಪೆಟ್ಟುಗಳು ಬಿದ್ದವು. ನನ್ನ ಆಕ್ರಂದನ ಮುಗಿಲು ಮುಟ್ಟಿತ್ತು. ನನ್ನ ರಕ್ಷಣೆಗೆ ಬರುವವರು ಅಲ್ಲಿ ಯಾರೂ ಇರಲಿಲ್ಲ.

ಹೊರಗೆ ಹೋಗಿದ್ದ ಜೈಲರ್ ಮತ್ತೆ ಒಳಗೆ ಬಂದು ಅದೇ ಪ್ರಶ್ನೆ ಕೇಳಿದ. ನೇತಾಜಿ ವಿಳಾಸ ಕೊಡುವಂತೆ ಒತ್ತಡ ಹಾಕಿದ. ನನ್ನ ಪಿತ್ತ ನೆತ್ತಿಗೇರಿತು. ಅವನ ಮುಖಕ್ಕೆ ಮತ್ತೆ ಉಗಿದು ಹೇಳಿದೆ – ನೇತಾಜಿ ನನ್ನ ಹೃದಯದಲ್ಲಿ ಇದ್ದಾರೆ!

ಈಗ ಅವನು ಗಾಯಗೊಂಡ ಹುಲಿ ಆಗಿದ್ದ. ನನ್ನನ್ನು ಕಾಲಿನಿಂದ ಒದ್ದ. ಕಮ್ಮಾರನಿಗೆ ಜೋರಾಗಿ ಆಜ್ಞೆ ಮಾಡಿದ – ಅವಳ ಹೃದಯದಿಂದ ನೇತಾಜಿಯನ್ನು ಕಿತ್ತು ತೆಗೆಯಿರಿ!

ಆ ಎರಡು ಪೊಲೀಸರು ಆ ಆಜ್ಞೆಗೆ ಕಾದು ಕೂತ ಹಾಗೆ ನನ್ನ ಮೈಮೇಲೆ ಎರಗಿದರು! ನನ್ನ ಬಟ್ಟೆಯನ್ನು ಕಿತ್ತು ಹಾಕಿದರು. ನಾನು ಇದ್ದ ತ್ರಾಣ ಎಲ್ಲ ಒಟ್ಟು ಮಾಡಿ ಕೊಸರಾಟ ನಡೆಸಿದೆ. ಎಲ್ಲವೂ ವ್ಯರ್ಥ ಆಯಿತು.

ಆ ಕಮ್ಮಾರ ಹುಲ್ಲು ಕತ್ತರಿಸುವ ಬ್ಲೇಡ್ ತಂದಿದ್ದ. ಅದರಿಂದ ನನ್ನ ಬಲಭಾಗದ ಮೊಲೆಯನ್ನು ಕತ್ತರಿಸಿ ಬಿಸಾಡಿದ. ರಕ್ತ ಝಿಲ್ ಎಂದು ಚಿಮ್ಮಿತು. ನನ್ನ ಚೀತ್ಕಾರ ಇಡೀ ಅಂಡಮಾನ್ ಸೆರೆಮನೆಯ ಗೋಡೆಗಳ ನಡುವೆ ಉಡುಗಿ ಹೋಯಿತು! ನಾನು ನೋವಿನಿಂದ ಕೋಮಾಕ್ಕೆ ಕುಸಿದಿದ್ದೆ.

ಮುಂದೆ ಏನಾಯಿತು ಎಂದು ನನಗೆ ತಿಳಿಯಲೇ ಇಲ್ಲ. ನಾನು ದೈಹಿಕ ಮತ್ತು ಮಾನಸಿಕ ನೋವಿನಿಂದ ಕುಸಿದು ಹೋಗಿದ್ದೆ. ಮತ್ತೆ ಎರಡು ವರ್ಷ ನಾನು ಅದೇ ಸೆರೆಮನೆಯಲ್ಲಿ ಚಿತ್ರಹಿಂಸೆ ಅನುಭವಿಸಿದೆ. ಮುಂದೆ 1947 ಆಗಸ್ಟ್ 15 ಭಾರತ ಸ್ವಾತಂತ್ರ್ಯ ಪಡೆದ ನಂತರ ನನ್ನ ಬಿಡುಗಡೆ ಆಯಿತು. ನಾನು ಹೈದರಾಬಾದಿಗೆ ಹೋಗಿ ಹೂವಿನ ವ್ಯಾಪಾರ ಮಾಡುತ್ತ ನನ್ನ ಬದುಕಿನ ಉಳಿದ ಅವಧಿಯನ್ನು ಕಳೆದೆ.

==============================

ಈ ರೀತಿಯ ದುರಂತದ ಬದುಕನ್ನು ಎದುರಿಸಿದ ಧೀರ ಮಹಿಳೆ ನೀರಾ ಆರ್ಯ 1998ರವರೆಗೆ ಬದುಕಿದ್ದರು. ಸಾಯುವಾಗ ಅವರಿಗೆ 96 ವರ್ಷ ಪ್ರಾಯ ಆಗಿತ್ತು. ಸ್ವಾತಂತ್ರ್ಯದ ನಂತರ ಅವರು ಅಜ್ಞಾತವಾಗಿ ಬದುಕಿದ ಕಾರಣ ಅವರ ನೋವಿನ ಕತೆಯು ಎಲ್ಲಿಯೂ ಹೆಚ್ಚು ದಾಖಲಾಗದೆ ಉಳಿಯಿತು. ಆದರೆ ನೀರಾ ಆರ್ಯ ಅವರ ಬಗ್ಗೆ ಪುಸ್ತಕಗಳು ಈಗ ಬರಲು ತೊಡಗಿವೆ. ಅವರ ಬದುಕಿನ ಮೇಲೆ ಬೆಳಕು ಚೆಲ್ಲುವ ಸಿನೆಮಾ ಕೂಡ ಸಿದ್ಧವಾಗುತ್ತಾ ಇದೆ ಅನ್ನುವುದು ಸ್ವಾಗತಾರ್ಹ. ನೀರಾ ಆರ್ಯ ಅವರ ತ್ಯಾಗ ಮತ್ತು ರಾಷ್ಟ್ರಪ್ರೇಮಗಳು ಹೆಚ್ಚು ಪ್ರಚಾರ ಪಡೆಯಬೇಕು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಸರ್‌ ಎಂ.ವಿ: ಒಬ್ಬ ವ್ಯಕ್ತಿ, ನೂರಾರು ಸಂಸ್ಥೆಗಳು! ಅವರು ಆಧುನಿಕ ಕನ್ನಡ ನಾಡಿನ ನಿರ್ಮಾತೃ

Exit mobile version