ಒಬ್ಬ ತಂದೆ ಮತ್ತು ಮಗ ಸೇರಿ ಒಂದು ರಸಮಂಜರಿ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದರು. ವೇದಿಕೆಯಲ್ಲಿ ಬೇರೆ ಬೇರೆ ಕಲಾವಿದರು ಬೇರೆ ಬೇರೆ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು.
ಅದನ್ನು ನೋಡುತ್ತ ಅಪ್ಪ ತಮಾಷೆಗೆ ತನ್ನ ಮಗನಿಗೆ ಕೇಳಿದರು, “ಮಗಾ. ಅಲ್ಲಿ ನೋಡು. ವೇದಿಕೆಯಲ್ಲಿ ತುಂಬಾ ಜನ ಕಲಾವಿದರು ಬೇರೆ ಬೇರೆ ಸಂಗೀತ ವಾದ್ಯ ನುಡಿಸುತ್ತ ಇದ್ದಾರೆ. ನಿನಗೆ ಯಾವುದನ್ನು ನುಡಿಸಬೇಕು ಎಂದು ಆಸೆ ಆಗ್ತಾ ಇದೆ?”
ಅದಕ್ಕೆ ಚೂಟಿ ಮಗ ಅಂದ ” ಅಪ್ಪ. ನನಗೆ ಅದ್ಯಾವುದೂ ಬೇಡ. ಅಲ್ಲಿ ವೇದಿಕೆಯಲ್ಲಿ ಒಬ್ಬ ಮುಂದೆ ನಿಂತು ತನ್ನ ಎರಡು ಕೈಗಳನ್ನು ಆಡಿಸುತ್ತಾ ಇದ್ದಾನಲ್ವಾ? ನಾನು ಅವನಾಗಬೇಕು”
ಆಗ ಅಪ್ಪ ನಗುತ್ತಾ ಹೇಳುತ್ತಾನೆ, “ಮಗಾ, ಅವನು ಸಂಗೀತ ನಿರ್ದೇಶಕ. ಅವನ ಕೆಲಸ ಸುಲಭ ಅಂತ ಭಾವಿಸಬೇಡ. ಅವನು ಆ ಹಂತಕ್ಕೆ ಹೋಗಬೇಕಾದರೆ ಬೇರೆಲ್ಲ ವಾದ್ಯಗಳನ್ನು ನುಡಿಸಲು ಕಲಿತು ಕೊನೆಯದಾಗಿ ಆ ಹಂತಕ್ಕೆ ಹೋಗಿದ್ದಾನೆ!” ಅಂದ.
ಜೀವನದಲ್ಲಿ ಕೂಡ ಹೀಗೆ ಆಗುತ್ತದೆ. ನಮಗೆ ತುಂಬಾ ಗ್ಲಾಮರ್ ಇರುವ ಯಶಸ್ಸು ಕಣ್ಣಿಗೆ ರಾಚುತ್ತದೆ! ಒಬ್ಬಾತ ಮಾಡಿದ ದುಡ್ಡು, ಪಡೆದ ಅಧಿಕಾರ, ಏರಿದ ಅಂತಸ್ತು, ಕಟ್ಟಿದ ಅರಮನೆಯಂತಹ ಮನೆ, ಮಾಡಿದ ಸಾಧನೆಗಳು… ಇವೆಲ್ಲವೂ ಬಹುಬೇಗ ನಮ್ಮನ್ನು ಆಕರ್ಷಣೆ ಮಾಡುತ್ತವೆ. ಆದರೆ ಅದರ ಹಿಂದೆ ಇರುವ ಪರಿಶ್ರಮ, ಬೆವರು, ತ್ಯಾಗ, ಹೋರಾಟ, ಸಂಘರ್ಷ, ಆತನ ಜೀವನದ ಏಳುಬೀಳು, ಎದುರಿಸಿದ ಅಪಮಾನ, ಅನುಭವಿಸಿದ ನೋವು.. ಇವ್ಯಾವುದೂ ನಮಗೆ ಸುಲಭದಲ್ಲಿ ನೆನಪಿಗೆ ಬರುವುದಿಲ್ಲ!
ಸಾಧಕರ ಯಶಸ್ಸಿನ ಹಿಂದಿದೆ ನಿರಂತರವಾದ ಪರಿಶ್ರಮ!
೧) ವಿಜಯ ಸಂಕೇಶ್ವರ್ ಅವರು ತನ್ನ 26ನೇ ವಯಸ್ಸಿಗೆ ಸಾಲ ಮಾಡಿ ಮೊದಲ ಟ್ರಕ್ ಖರೀದಿ ಮಾಡಿದರು. ಈಗ 3500 ಟ್ರಕ್ ಮತ್ತು 400 ಲಕ್ಸುರಿ ಬಸ್ಸುಗಳ ಮಾಲೀಕರಾಗಿ ಭಾರತಕ್ಕೆ ನಂಬರ್ ಒನ್ ಆಗಿದ್ದಾರೆ!
೨) ಅಮಿತಾಬ್ ಬಚ್ಚನ್ ಅಭಿನಯ ಮಾಡಿದ ಮೊದಲ ಏಳು ಸಿನೆಮಾಗಳು ಪೂರ್ತಿ ನೆಲಕಚ್ಚಿದವು! ಆತ ಎಲ್ಲ ಕಡೆಯಲ್ಲಿ ರಿಜೆಕ್ಟ್ ಆಗುತ್ತಾರೆ! ಈಗ ಒಂದು ಸಿನಿಮಾಕ್ಕೆ ಹತ್ತು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ!
೩) ಹೈದರಾಬಾದ್ ನಗರದ ಗಲ್ಲಿಗಳಲ್ಲಿ ಬೈಸಿಕಲ್ ಹಿಂದೆ ಉಪ್ಪಿನಕಾಯಿ ಭರಣಿ ಇಟ್ಟು ಮನೆ ಮನೆಗೆ ಉಪ್ಪಿನಕಾಯಿ ಮಾರುತ್ತಾ ಇದ್ದ ಹುಡುಗ ರಾಮೋಜಿ ರಾವ್! ಮುಂದೆ ನೂರಾರು ಕೋಟಿ ರೂಪಾಯಿ ಬೆಲೆಬಾಳುವ, ಏಷಿಯಾದ ನಂಬರ್ ಒನ್ ಸ್ಟುಡಿಯೋ ಕಟ್ಟಿ ಮುಗಿಸಿದರು!
೪) ಮುಂಬೈಯ ಕ್ರಿಕೆಟ್ ಪಂದ್ಯದಲ್ಲಿ ಬಾಲ್ ಬಾಯ್ ಆಗಿದ್ದ ಹುಡುಗ ಸಚಿನ್ ತೆಂಡೂಲ್ಕರ್! ಮುಂದೆ ನೂರು ಶತಕಗಳ ಸರದಾರ ಎಂದು ಕರೆಸಿಕೊಂಡು ಭಾರತ ರತ್ನವನ್ನು ಪಡೆದರು! ಕ್ರಿಕೆಟಿನ ದೇವರು ಆದರು!
ಈ ಯಶೋಗಾಥೆಗಳ ಹಿಂದೆ…!
ಮೇಲೆ ಹೇಳಿದ ರೀತಿಯ ನೂರಾರು ಉದಾಹರಣೆಗಳನ್ನು ಶ್ರೇಷ್ಠ ಭಾಷಣಕಾರರು ಮತ್ತು ವಿಕಸನ ತರಬೇತುದಾರರು ತಮ್ಮ ಕಾರ್ಯಕ್ರಮಗಳಲ್ಲಿ ಸಾಲು ಸಾಲಾಗಿ ಹೇಳುತ್ತಾರೆ! ಭಾಷಣಗಳ ಉದ್ದೇಶ ಮೋಟಿವೇಶನ್ ಆದಾಗ ಇದು ಅನಿವಾರ್ಯ! ಇಂತಹ ನೂರಾರು ಯಶೋಗಾಥೆಗಳನ್ನು ನಾನು ಕೂಡ ನನ್ನ ಪ್ರತೀ ಕಾರ್ಯಕ್ರಮಗಳಲ್ಲಿ ಹೇಳುತ್ತೇನೆ.
“ಒಂದಾನೊಂದು ಕಾಲದಲ್ಲಿ ಒಬ್ಬ ಗುಡಿಸಲಲ್ಲಿ ಹುಟ್ಟಿದ ಸಾಮಾನ್ಯ ವ್ಯಕ್ತಿ ಅರ್ಧ ಹೊಟ್ಟೆಯಲ್ಲಿ ದುಡಿಯುತ್ತ ಇದ್ದನು ಎಂಬಲ್ಲಿ ಆರಂಭವಾಗಿ ಮುಂದೆ ಭಾರೀ ದೊಡ್ಡ ಶ್ರೀಮಂತನಾದ” ಎಂಬಲ್ಲಿಗೆ ಈ ಯಶೋಗಾಥೆಗಳು ಮುಗಿಯುತ್ತವೆ! ಆದರೆ ಈ ಆರಂಭದ ಮತ್ತು ಅಂತ್ಯದ ಬಿಂದುಗಳ ನಡುವೆ ಇರುವ ಆತನ ಹೋರಾಟ, ಪರಿಶ್ರಮ, ಬೆವರು, ಅಪಮಾನ, ಸೋಲುಗಳು ಇದ್ಯಾವುದನ್ನೂ ನಾವು ಗಮನಿಸುವುದೇ ಇಲ್ಲ!
ವಿಜಯ ಸಂಕೇಶ್ವರ್ ಒಂದು ಟ್ರಕ್‌ನಿಂದ ಆರಂಭವಾಗಿ 3500 ಟ್ರಕ್ ತಲುಪುವ ದಾರಿಯಲ್ಲಿ ಪಟ್ಟ ನೋವು ಮತ್ತು ಹೋರಾಟ ನನಗೆ ಮುಖ್ಯವಾಗಬೇಕು. ಅವರ ದಾವಣಗೆರೆಯ ಗೋದಾಮು ಸುಟ್ಟು ಹೋಗಿ ಅವರು ಕೋಟಿ ಕೋಟಿ ದುಡ್ಡು ಕಳೆದುಕೊಂಡದ್ದು, ಗದಗ್ ಮಾರ್ಕೆಟ್‌ನಲ್ಲಿ ಮೊದಲ ಆರ್ಡರ್ ಪಡೆಯಲು ಹೋರಾಟ ಮಾಡಿದ್ದು, ಅಪ್ಪನ ಮನೆಯನ್ನು ಬಿಟ್ಟುಹೋಗಿ ಒಬ್ಬಂಟಿಯಾಗಿ ಸವಾಲುಗಳನ್ನು ಎದುರಿಸಿದ್ದು, ರಿಸ್ಕ್ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡದೆ ಅಪಾಯವನ್ನು ಮೈ ಮೇಲೆ ಎಳೆದುಕೊಂಡದ್ದು…. ಇವೆಲ್ಲವೂ ನನಗೆ ಮುಖ್ಯ ಆಗುತ್ತವೆ.
ಆರಂಭದ ಮತ್ತು ಅಂತ್ಯದ ಬಿಂದುಗಳ ನಡುವಿನ ಕಠಿಣ ಪರಿಶ್ರಮದ ಹಾದಿ ನನಗೆ ಮುಖ್ಯ! ನಾನು ಓದಿರುವ ಸಾವಿರಾರು ಆತ್ಮಚರಿತ್ರೆಯ ಪುಸ್ತಕಗಳಲ್ಲಿ ನಾನು ಹುಡುಕುವುದು ಆ ಹೋರಾಟದ ಹಾದಿಯನ್ನು ಹೊರತು ಅಂತಿಮ ಗೆಲುವನ್ನು ಅಲ್ಲವೇ ಅಲ್ಲ!
ಗಾಂಧಿಜಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಅನ್ನುವ ಯಶಸ್ಸಿನ ವಾಕ್ಯಕ್ಕಿಂತ, ಗಾಂಧಿ ಅವರು ಹೇಗೆ ರಾಷ್ಟ್ರಪಿತ ಆದರು? ಅನ್ನುವುದು ನನಗೆ ಅತೀ ಮುಖ್ಯವಾದ ಸಂಗತಿ!
ಯಾಕೆಂದರೆ ಯಶಸ್ಸು ಒಂದು ನಿಲ್ದಾಣ ಅಲ್ಲ. ಅದೊಂದು ನಿರಂತರ ಪ್ರಯಾಣ!
Because Success is not the DESTINATION, it’s the continuous JOURNEY!
ಯಶಸ್ಸು ಒಂದು ಉತ್ಪನ್ನ ಅಲ್ಲ. ಅದೊಂದು ಪರಿಷ್ಕರಣಗೊಳ್ಳುತ್ತಾ ಇರುವ ಪ್ರಕ್ರಿಯೆ!
Success is not the PRODUCT. It’s the continuous REFINING PROCESS!
ರೋಮ್ ನಗರವು ಒಂದು ರಾತ್ರಿಯಲ್ಲಿ ಕಟ್ಟಲ್ಪಟ್ಟಿತು ಅಂದರೆ ದಯವಿಟ್ಟು ನಂಬಬೇಡಿ. ಜಗತ್ತಿನ ಸೌಂದರ್ಯದ ಪರಾಕಾಷ್ಠೆ ಆಗಿರುವ ಆಗ್ರಾದ ತಾಜಮಹಲ್ ಕಟ್ಟಲು 22,000 ಕಾರ್ಮಿಕರು ತಮ್ಮ ಹಗಲು ರಾತ್ರಿಗಳ ದುಡಿಮೆಯಿಂದ 22 ವರ್ಷ ಶ್ರಮಿಸಿದ್ದಾರೆ ಅನ್ನುವುದೇ ಭರತವಾಕ್ಯ!
ಯಾವುದೇ ಸಾಧನೆಯು ಪೂರ್ತಿ ಆಗುವ ದಾರಿಯಲ್ಲಿ ಆ ಸಾಧಕನು ಎದುರಿಸಿದ ಸವಾಲುಗಳನ್ನು, ಅನುಭವಿಸಿದ ಅಪಮಾನಗಳನ್ನು ನಾವು ನಿಜವಾಗಿ ಅಧ್ಯಯನ ಮಾಡಬೇಕು. ಬರೇ ಗೆಲುವಿಗೆ ಮಾತ್ರ ಆಸೆಪಟ್ಟು ಅದರ ಕನಸುಗಳನ್ನು ಕಾಣುತ್ತ ಕೂತರೆ ಅಂತಿಮ ಗೆಲುವಿನ ಥ್ರಿಲ್ ನಾವು ಕಳೆದುಕೊಳ್ಳುತ್ತೇವೆ!
ಕಷ್ಟಪಟ್ಟು ಸಂಪಾದನೆ ಮಾಡಿರುವ ಗೆಲುವು ಖುಷಿ ಕೊಟ್ಟಷ್ಟು ಅದೃಷ್ಟದ ಮೂಲಕ ಪಡೆದ ಗೆಲುವು ಖುಷಿ ಕೊಡುವುದಿಲ್ಲ! ಸಾಧಕರ ಸಾಧನೆಯ ಎರಡು ಬಿಂದುಗಳ ನಡುವೆ ಇರುವ ಬದುಕಿನ ಹೋರಾಟಗಳು ನನಗೆ ಪ್ರೇರಣೆ ಕೊಟ್ಟಷ್ಟು ಅಂತಿಮವಾಗಿ ಪಡೆದ ಗೆಲುವು ಕೊಡುವುದಿಲ್ಲ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಬುದ್ಧಿವಂತಿಕೆ ಒಂದೇ ನಿಮ್ಮ ಮಗುವಿನ ಆಸ್ತಿ ಅಲ್ಲ, ಅದಕ್ಕೆ ಬೇಕು ಈ ನಾಲ್ಕು Qಗಳು