ಉತ್ತರ ಕನ್ನಡದ ಉದ್ದಗಲಕ್ಕೂ ಹರಡಿರುವ ಹಾಲಕ್ಕಿ ಸಂಸ್ಕೃತಿಯ ಶ್ರೇಷ್ಠ ರಾಯಭಾರಿ ಆಗಿರುವ ಸುಕ್ರಿ ಬೊಮ್ಮಗೌಡ ಅವರ ಬದುಕು ಒಂದು ವಿಸ್ಮಯದ ಮೂಟೆ. ಆಕೆಯ ಜೀವನವೇ ಒಂದು ಹೋರಾಟದ ಹಾದಿ! ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ವಾಸಿಸುವ ಹಾಲಕ್ಕಿ ಜನರು ಇಂದಿಗೂ ಕೃಷಿ ಕಾರ್ಮಿಕರು. ಅವರ ಒಟ್ಟು ಜನಸಂಖ್ಯೆ ಅಂದಾಜು 15 ಲಕ್ಷ. ಅವರಿಗೆ ಸ್ವಂತ ಭೂಮಿ ಇಲ್ಲ. ಬೇರೆಯವರ ಜಮೀನಿನಲ್ಲಿ ಜೀತ ಮಾಡಿ ಬದುಕುವವರು. ಕಾಡಿಗೆ ಹೋಗಿ ಒಣಗಿದ ಕಟ್ಟಿಗೆ ಕಡಿದು ತಲೆಯ ಮೇಲೆ ಮೂಟೆ ಕಟ್ಟಿ ಪೇಟೆಯಲ್ಲಿ ಮಾರಿದರೆ ಅವರಿಗೆ ಆ ದಿನದ ಹೊಟ್ಟೆಪಾಡು ಇದೆ. ಇಲ್ಲವಾದರೆ ಉಪವಾಸವೇ ಗತಿ.
ಬಡತನದಲ್ಲಿಯೇ ಹಾಡು ಕಲಿತ ಅಜ್ಜಿ
ಅಂತಹ ಜನಾಂಗದಲ್ಲಿ ಹುಟ್ಟಿದ ಸುಕ್ರಜ್ಜಿ ತಮ್ಮ ತಾಯಿ ಮತ್ತು ಅಕ್ಕನ ಮೂಲಕ ಹಾಲಕ್ಕಿ ಜಾನಪದ ಹಾಡುಗಳನ್ನು ಕಲಿತರು. ಶಾಲೆಗೇ ಹೋಗದ ಅವರಿಗೆ ಓದಲು, ಬರೆಯಲು ಬಾರದಿದ್ದರೂ ಅಸಂಖ್ಯಾತ ಜಾನಪದ ಹಾಡುಗಳನ್ನು ತುಂಬಾ ಚಂದವಾಗಿ ಕಂಠಸ್ಥ ಮಾಡಿಕೊಂಡರು.
ಹಾಲಕ್ಕಿ ಸಂಪ್ರದಾಯದಂತೆ ಅವರಿಗೆ 16ನೇ ವಯಸ್ಸಿಗೆ ಮದುವೆ ಆಯಿತು. ಅವರ ಗಂಡ ಬೊಮ್ಮಗೌಡ ಕೂಡ ಕೃಷಿ ಕಾರ್ಮಿಕ. ಮದುವೆ ಆಗುವಾಗ ಅವರ ವಯಸ್ಸು 44 ವರ್ಷ. ಗಂಡನ ವಿಪರೀತ ಕುಡಿತದ ಚಟವು ಆಕೆಗೆ ಯಕ್ಷ ಪ್ರಶ್ನೆಯೇ ಆಗಿ ಉಳಿಯಿತು. ಕೆಲವೇ ವರ್ಷಗಳ ನಂತರ ಗಂಡನು ಕುಡಿತದ ಪರಿಣಾಮದಿಂದ ಸಾವನ್ನಪ್ಪಿದ್ದಾಗ ಸುಕ್ರಜ್ಜಿ ದಿಕ್ಕು ಕಾಣದೆ ಅನಾಥರಾದರು. ಭವಿಷ್ಯದ ಕರಾಳತೆಯು ಆಕೆಯ ಮುಂದೆ ಭೂತಾಕಾರವಾಗಿ ನಿಂತಿತು.
ಅಜ್ಜಿ ತುಳಿದ ಹೋರಾಟದ ಹಾದಿ
ಬದುಕಿನ ಹೋರಾಟಕ್ಕೆ ಇಳಿದ ಅಜ್ಜಿ ಮುಂದೆ ಚುನಾವಣೆಗೆ ಸ್ಪರ್ಧಿಸಿ ಬಡಗೇರಿ ಗ್ರಾಮ ಪಂಚಾಯತಿಯ ಸದಸ್ಯರಾದರು. ತನ್ನ ಹಾಗೆಯೆ ಸಂತ್ರಸ್ತರಾದ ಹಾಲಕ್ಕಿ ಜನರನ್ನು ಸಂಘಟನೆ ಮಾಡಿ ಅವರ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸಿದರು. ಬರಿಗಾಲಲ್ಲಿ ಮೈಲುಗಟ್ಟಲೆ ನಡೆದರು. ಗಟ್ಟಿ ದನಿಯಲ್ಲಿ ಹಾಲಕ್ಕಿ ಹಾಡುಗಳನ್ನು ಹಾಡಿದರು. ಪ್ರತೀ ಒಬ್ಬರಿಂದಲೂ ಹಾಡಿಸಿದರು.
ಹಾಲಕ್ಕಿ ಸಂಸ್ಕೃತಿಯ 5000 ಶ್ರೇಷ್ಠ ಜಾನಪದ ಹಾಡುಗಳು ಆಕೆಯ ಸ್ಮರಣೆಯಲ್ಲಿ ಇಂದಿಗೂ ಇವೆ. ಹಾಲಕ್ಕಿ ಸಂಸ್ಕೃತಿಯ ಸಂಕೇತವಾದ ಮಣಿಸರಗಳನ್ನು ಕುತ್ತಿಗೆಯಲ್ಲಿ ಧರಿಸಿ, ಹಾಲಕ್ಕಿ ಶೈಲಿಯ ಒಕ್ಕಲಗೇಟ್ ಶೈಲಿಯಲ್ಲಿ ಸೀರೆಯನ್ನು ಗಟ್ಟಿ ಕಟ್ಟಿ, ಗುಮಟೆ ಎಂಬ ಚರ್ಮ ವಾದ್ಯವನ್ನು ನುಡಿಸುತ್ತ, ಆಕೆ ಹಾಡುತ್ತಾ, ಎಲ್ಲರನ್ನೂ ಕುಣಿಸುತ್ತ ಹೋರಾಟಕ್ಕೆ ಇಳಿದರೆ ಎಲ್ಲರಿಗೂ ಆನೆ ಬಲ ಬಂದಂತೆ ಆಗುತ್ತಿತ್ತು.
ಮದ್ಯಪಾನ ವಿರೋಧಿ ಚಳುವಳಿಯಲ್ಲಿ ಅಜ್ಜಿ
ಆಕೆ ನಾಯಕತ್ವವನ್ನು ನೀಡಿದ ಮದ್ಯಪಾನದ ವಿರೋಧಿ ಚಳುವಳಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಇಂಪ್ಯಾಕ್ಟ್ ಮಾಡಿತು. ಅನಧಿಕೃತ ಶರಾಬು ಅಂಗಡಿಗಳು ಬಂದ್ ಆದವು. ಹಾಲಕ್ಕಿ ಮಹಿಳೆಯರು ಬೀದಿಗೆ ಇಳಿದ ಕಾರಣ ಸರಕಾರವೂ ಎಚ್ಚೆತ್ತುಕೊಂಡಿತು.
ಕಾಲ್ನಡಿಗೆಯಲ್ಲಿ ಅಂಕೋಲಾದಿಂದ ಕಾರವಾರದವರೆಗೆ ಹೊರಟ ಕೋಟೆ ಬಾವಿ ಚಳುವಳಿ, ಉತ್ತರ ಕರ್ನಾಟಕದ ಉದ್ದಗಲಕ್ಕೂ ಹರಡಿದ ಬುಡಕಟ್ಟು ಜಿಲ್ಲಾ ಚಳುವಳಿ, ಜಿಲ್ಲೆಯ ಗಮನ ಸೆಳೆದ ಸಾಕ್ಷರತಾ ಆಂದೋಲನಗಳು.. ಇವೆಲ್ಲವೂ ಅಜ್ಜಿಯ ಸ್ಫೂರ್ತಿಯಿಂದ ಯಶಸ್ವೀ ಆದವು. ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕು ಎಂದು ಅವರು ಸರಕಾರದ ಎದೆಯ ಮೇಲೆ ಕುಳಿತು ಹಕ್ಕೊತ್ತಾಯ ಮಂಡಿಸಿದರು. ಮದ್ಯಪಾನ ವಿರೋಧಿ ಚಳುವಳಿಯು ಫಲ ನೀಡಿತು.
ಕಾಡಿನ ಅಪಾರವಾದ ಸಸ್ಯವರ್ಗವನ್ನು ಅವರಷ್ಟು ಪರಿಚಯ ಮಾಡಿಕೊಂಡವರು ಇನ್ನೊಬ್ಬರು ದೊರೆಯಲಾರರು! ಆಕೆ ನಾಟಿ ವೈದ್ಯೆ ಆಗಿಯೂ ಹೆಸರು ಮಾಡಿದ್ದಾರೆ. ಕಾಡಿನ ಸಂಸ್ಕೃತಿಯಲ್ಲಿ ಬದುಕುತ್ತಿರುವ ಹಾಲಕ್ಕಿ ಜನರಿಗೆ ಆಕೆಯ ಮದ್ದೇ ರಾಮ ಬಾಣ.
ಆಕೆಯ ಹಾಡುಗಳು ಜಗದಗಲ ಹರಡಿದವು!
1980ರ ಅವಧಿಯಲ್ಲಿ ಆಕೆಯ ಗ್ರಾಮಕ್ಕೆ ಹಂಪಿ ವಿವಿಯ ಕುಲಪತಿಗಳು ಹಾಗೂ ಖ್ಯಾತ ಜಾನಪದ ವಿದ್ವಾಂಸರಾದ ಎಚ್.ಸಿ.ಬೋರಲಿಂಗಯ್ಯ ಅವರು ಭೇಟಿ ನೀಡಿದಾಗ ಅಜ್ಜಿಯ ಹಾಡುವ ಪ್ರತಿಭೆಯನ್ನು ಕಂಡು ಮೂಕವಿಸ್ಮಿತರಾದರು.
ಅವರ ಶಿಫಾರಸ್ಸಿನಿಂದ ಕರ್ನಾಟಕ ಜಾನಪದ ಅಕಾಡೆಮಿ ಆಕೆಯ ಹಾಡುಗಳನ್ನು ಸಂಗ್ರಹದ ರೂಪದಲ್ಲಿ ಪುಸ್ತಕವನ್ನು ಮಾಡಿತು. ಕಾರವಾರ ರೇಡಿಯೊ ಆಕೆಯ ಸಾವಿರಾರು ಹಾಡುಗಳನ್ನು ಹಾಡಿಸಿ ರೆಕಾರ್ಡ್ ಮಾಡಿತು. ಕರ್ನಾಟಕದ ವಿವಿಧ ಟಿವಿ ಚಾನೆಲ್‌ಗಳು ಆಕೆಯ ಊರಿಗೆ ಭೇಟಿ ಕೊಟ್ಟು ಆಕೆಯ ಮೇಲೆ ಸಾಕ್ಷ್ಯ ಚಿತ್ರಗಳನ್ನು ಮಾಡಿದವು. ಇದರಿಂದ ಅಜ್ಜಿ ಎಲ್ಲರಿಂದಲೂ ‘ಹಾಲಕ್ಕಿ ಕೋಗಿಲೆ’ ಎಂದು ಪ್ರೀತಿಯಿಂದ ಕರೆಸಿಕೊಂಡರು. ಇದರಿಂದ ಓದಲು, ಬರೆಯಲು ಬಾರದ ಅಜ್ಜಿ ನಡೆದಾಡುವ ಲೆಜೆಂಡ್ ಆದರು.
ಹಾಲಕ್ಕಿ ಹಾಡುಹಕ್ಕಿಗೆ ಒಲಿಯಿತು ನೂರಾರು ಪ್ರಶಸ್ತಿಗಳು!
ಸುಕ್ರಜ್ಜಿಗೆ ಕರ್ನಾಟಕ ಜಾನಪದ ಅಕಾಡೆಮಿಯು ನೀಡುವ ಜಾನಪದ ಶ್ರೀ ಪ್ರಶಸ್ತಿ (1999), ನಾಡೋಜ ಪ್ರಶಸ್ತಿ (2006), ಸಂದೇಶ ಕಲಾ ಪ್ರಶಸ್ತಿ ( 2009), ಆಳ್ವಾಸ್ ನುಡಿಸಿರಿ ಪ್ರಶಸ್ತಿ ( 2009)ಗಳು ಈಗಾಗಲೇ ದೊರೆತಿವೆ. ಇವೆಲ್ಲದಕ್ಕೂ ಕಿರೀಟ ಇಟ್ಟಂತೆ 2017ರ ಪದ್ಮಶ್ರೀ ಪ್ರಶಸ್ತಿ ಆಕೆಗೆ ಒಲಿದು ಬಂದಿದೆ. ತನ್ನ ಸಾಂಪ್ರದಾಯಕ ಹಾಲಕ್ಕಿ ದಿರಸಿನಲ್ಲಿ ರಾಷ್ಟ್ರಪತಿಯ ಮುಂದೆ ನಿಂತು ಅಜ್ಜಿಯು ಪದ್ಮಶ್ರೀ ಪ್ರಶಸ್ತಿ ಪಡೆದ ಕ್ಷಣವು ಅತ್ಯಂತ ಸ್ಮರಣೀಯ ಆಗಿದೆ!
ಆಕೆಯ ಬದುಕಿನ ಹೋರಾಟದ ಕತೆಯು ಕರ್ನಾಟಕ ಸರಕಾರದ ಎಂಟನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸ್ಥಾನವನ್ನು ಪಡೆದಿದೆ. ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಅವರ ಹೋರಾಟವು ಇನ್ನೂ ಜೀವಂತ ಇದೆ. ಅದಕ್ಕಾಗಿ ತನಗೆ ದೊರೆತ ಪದ್ಮಶ್ರೀ ಪ್ರಶಸ್ತಿಯನ್ನು ಸರಕಾರಕ್ಕೆ ಮರಳಿಸಲು ಕೂಡ ಆಕೆ ಮುಂದಾಗಿದ್ದರು.
ಅಂದ ಹಾಗೆ ಈಗ ಅಜ್ಜಿಗೆ 82 ವರ್ಷ ಪ್ರಾಯ! ಆಕೆಗೆ ಆಗಾಗ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಆದರೂ ಅವರ ಜೀವನೋತ್ಸಾಹ ಈಗಲೂ ಹಾಗೆಯೇ ಇದೆ. ಆಕೆ ನೂರ್ಕಾಲ ಬಾಳಲಿ ಎಂಬುದೇ ಪ್ರಾರ್ಥನೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಇಂಚಿಂಚಾಗಿ ಕೊಲ್ಲುವ ಖಿನ್ನತೆ, ಅದರಿಂದ ಹೊರಬರಲು ಇಲ್ಲಿವೆ ಸರಳ ಸೂತ್ರಗಳು