Site icon Vistara News

ರಾಜ ಮಾರ್ಗ ಅಂಕಣ : ಲೈಂಗಿಕ ಸಂತ್ರಸ್ತರ ಆಶಾಕಿರಣ ಸುನೀತಾ ಕೃಷ್ಣನ್; ಆಕೆಯ ಹೋರಾಟ ನಮ್ಮ ಕಲ್ಪನೆಗೂ ಮೀರಿದ್ದು!

Raja Marga column : Sunita Krishnan ; Ray of hope for sexually harrassed woman

Raja Marga column : Sunita Krishnan ; Ray of hope for sexually harrassed woman

ಸುನೀತಾ ಕೃಷ್ಣನ್ ಅವರನ್ನು ನಾನು ಮೊದಲು ನೋಡಿದ್ದು ಆಮಿರ್ ಖಾನ್ ನಡೆಸುತ್ತಿದ್ದ ‘ಸತ್ಯಮೇವ ಜಯತೇ’ ಟಿವಿ ಕಾರ್ಯಕ್ರಮದಲ್ಲಿ. ನಂತರ ಅಮಿತಾಭ್ ಬಚ್ಚನ್ ಅವರ ಮಹಾ ಟಿವಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮದ ವೇದಿಕೆಯಲ್ಲಿ. ಅವರು ದಿಟ್ಟತನ, ಧೈರ್ಯ, ಸಾಮಾಜಿಕ ಕಳಕಳಿ, ಬದ್ಧತೆ ಮತ್ತು ಹೋರಾಟದ ಸಂಕೇತವಾಗಿ ನನಗೆ ಅಂದು ಕಂಡಿದ್ದರು. ಸಾಧ್ಯವಾದರೆ ಒಮ್ಮೆಯಾದರೂ ಅವರನ್ನು ಭೇಟಿ ಮಾಡಬೇಕು ಎನ್ನುವುದು ನನ್ನ ಕನಸು. ಆಕೆಯ ಬದುಕೇ ಒಂದು ಅದ್ಭುತ ಹೋರಾಟ!

ಬಾಲ್ಯದಿಂದಲೂ ಆಕೆಗೆ ಸಮಾಜಸೇವೆಯ ತೀವ್ರ ಆಕಾಂಕ್ಷೆ!

ಆಕೆ ಹುಟ್ಟಿದ ಊರು ಬೆಂಗಳೂರು. ಆಕೆಯ ಹೆತ್ತವರು ಕೇರಳದ ಪಾಲಕ್ಕಾಡ್ ಮೂಲದವರು. ಅವರ ತಂದೆ ಸರ್ವೇ ಇಲಾಖೆಯ ಅಧಿಕಾರಿ ಆಗಿದ್ದ ಕಾರಣ ಅವರು ಇಡೀ ಭಾರತವನ್ನು ಸುತ್ತಬೇಕಾಯಿತು. ಓದಿದ್ದೆಲ್ಲವೂ ಸೆಂಟ್ರಲ್ ಶಾಲೆಗಳಲ್ಲಿ. ಆಕೆಯ ಸಮಾಜಸೇವೆಯ ಹಂಬಲ ಬಾಲ್ಯದಿಂದಲೂ ಪ್ರಕಟವಾಗಿತ್ತು.

8ನೇ ವಯಸ್ಸಿಗೆ ಅವರು ವಿಕಲಚೇತನ ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದರು. 12ನೇ ವಯಸ್ಸಿಗೆ ಕೊಳೆಗೇರಿಯ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಅಂತಹ ಉತ್ಸಾಹದ ಹುಡುಗಿ 15 ವರ್ಷ ಪ್ರಾಯಕ್ಕೆ ಬಂದಾಗ ಅವರ ಜೀವನದ ಕರಾಳ ಅಧ್ಯಾಯವೊಂದು ನಡೆದು ಹೋಯಿತು.

15ನೇ ವಯಸ್ಸಿಗೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು!

ದಲಿತರ ಕೇರಿಗೆ ಸಾಕ್ಷರತೆಯ ಪಾಠಕ್ಕೆ ಹೋಗಿದ್ದಾಗ 8 ಗಂಡಸರು ಆಕೆಯ ಮೇಲೆ ಸಾಮೂಹಿಕ ರೇಪ್ ಮಾಡಿದರು! ಪುರುಷ ಪ್ರಧಾನ ಮಾನಸಿಕತೆ ಅವರನ್ನು ಹೊಸಕಿ ಹಾಕಿತು. ಅವರ ಮೇಲೆ ತೀವ್ರ ದೈಹಿಕ ಆಕ್ರಮಣ ನಡೆದ ಕಾರಣ ಅವರ ಒಂದು ಕಿವಿ ಆಲಿಸುವ ಸಾಮರ್ಥ್ಯ ಕಳೆದುಕೊಂಡಿತು. ಒಂದು ತಿಂಗಳಿಗೂ ಹೆಚ್ಚು ಆಕೆ ಆಸ್ಪತ್ರೆಗೆ ಅಡ್ಮಿಟ್ ಆದರು. ಆಕೆಯ ಸಮಾಜಸೇವೆಯ ತುಡಿತವೇ ಆಕೆಗೆ ಮುಳುವಾಗಿ ಹೋಯಿತು.

ಹೆತ್ತವರ ಬೆಂಬಲ ಪಡೆದು ಎದ್ದು ನಿಂತರು ಸುನೀತಾ!

ಬೇರೆ ಯಾರಾದರೂ ಆಗಿದ್ದರೆ ಅಳುತ್ತ ಕುಸಿದು ಬಿಡುತ್ತಿದ್ದರು. ಖಂಡಿತವಾಗಿ ಮೂಲೆಯನ್ನು ಸೇರುತ್ತಿದ್ದರು. ಆದರೆ ಸುನೀತಾ ತನ್ನ ಹೆತ್ತವರ ಬೆಂಬಲ ಪಡೆದು ಎದ್ದು ನಿಲ್ಲುತ್ತಾರೆ ಮತ್ತು ತನ್ನ ಶಿಕ್ಷಣವನ್ನು ಮುಂದುವರಿಸುತ್ತಾರೆ.

ಅತ್ಯಾಚಾರ ಮಾಡಿದ ಮಂದಿಯ ಮೇಲೆ ಪೊಲೀಸ್ ಕಂಪ್ಲೇಂಟ್ ಯಾಕೆ ಕೊಟ್ಟಿಲ್ಲ ಅನ್ನುವುದು ನನಗೆ ಅರ್ಥವಾಗಿಲ್ಲ! ಎಲ್ಲ ಹೆತ್ತವರ ಹಾಗೆ ಆಕೆ ಮರ್ಯಾದೆಗೆ ಹೆದರಿರಬಹುದು ಅನ್ನೋದು ನನ್ನ ಅನಿಸಿಕೆ. ಆದರೆ ಮುಂದೆ ಆಕೆಯ ಪೂರ್ಣ ಬದುಕು ಹೋರಾಟಕ್ಕೆ ಮೀಸಲಾಯಿತು!

ತನ್ನ ಹಾಗೆ ಲೈಂಗಿಕ ಸಂತ್ರಸ್ತರ ಪರವಾದ ಹೋರಾಟವನ್ನು ಆಕೆ ರೂಪಿಸುತ್ತಾರೆ!

ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಪರಿಸರ ವಿಜ್ಞಾನ ಪದವಿ, ಮಂಗಳೂರಿನ ರೋಶನಿ ನಿಲಯದಲ್ಲಿ MSW ಸ್ನಾತಕೋತ್ತರ ಪದವಿಯನ್ನು ಆಕೆ ಪಡೆಯುತ್ತಾರೆ. ತನ್ನ ಬದುಕನ್ನು ರೂಪಿಸುವ ಮತ್ತು ತನ್ನ ಹಾಗೆ ಲೈಂಗಿಕ ತುಳಿತಕ್ಕೆ ಒಳಗಾದವರ ಬದುಕು ಕಟ್ಟುವ ಕೆಲಸ ಆರಂಭಿಸುತ್ತಾರೆ.

ಅವರು ಮೊದಲ ಹೋರಾಟವನ್ನು ಆರಂಭಿಸಿದ್ದು 1996ರಲ್ಲಿ. ಆಗ ಅವರಿಗೆ ಕೇವಲ 24 ವರ್ಷ. ಹೈದರಾಬಾದ್ ನಗರದ ವಿಸ್ತಾರಕ್ಕಾಗಿ ಅಲ್ಲಿನ ಮಹಾನಗರಪಾಲಿಕೆಯು ಕೊಳೆಗೇರಿ ನಿವಾಸಿಗಳ ಗುಡಿಸಲುಗಳ ಮೇಲೆ ಬುಲ್ಡೋಜರ್ ಹತ್ತಿಸಲು ಮುಂದಾಗಿತ್ತು. ಆಗ ಆಕೆ ಮುಂದೆ ನಿಂತು ಪ್ರತಿಭಟಿಸುತ್ತಾರೆ. ಕೊಳೆಗೇರಿ ನಿವಾಸಿಗಳನ್ನು ಸಂಘಟಿಸಿ ಹೋರಾಡುತ್ತಾರೆ. ಅವರ ಸಂಕಲ್ಪ ಶಕ್ತಿಯ ಮುಂದೆ ಹೈದರಾಬಾದ್ ಮಹಾನಗರ ಪಾಲಿಕೆ ಶರಣಾಯಿತು! ಅವರು ಗೆದ್ದ ಮೊದಲ ಹೋರಾಟ ಅದು! ಆಗ ಅವರಿಗೆ ಅವರ ಹಾಗೇ ಯೋಚಿಸುವ ಒಬ್ಬ ಕ್ರಿಶ್ಚಿಯನ್ ಪಾದ್ರಿಯ ಪರಿಚಯವಾಗುತ್ತದೆ. ಅವರಿಬ್ಬರೂ ಸೇರಿ ಮುಂದಿನ ಹೋರಾಟಕ್ಕೆ ಸಿದ್ಧರಾಗುತ್ತಾರೆ.

ತಾನು ಯಾವ ಲೈಂಗಿಕ ದೌರ್ಜನ್ಯಕ್ಕೆ 15ನೇ ಸಣ್ಣ ವಯಸ್ಸಲ್ಲಿ ವಿಕ್ಟಿಮ್ ಆಗಿದ್ದೆನೋ ಅದೇ ರೀತಿ ಸಂತ್ರಸ್ತರಾದವರ ನೆರವಿಗೆ ಅವರು PRAJWALA ಎಂಬ NGO ಸ್ಥಾಪನೆ ಮಾಡುತ್ತಾರೆ. ಆಗ ಹೈದರಾಬಾದ್ ನಗರದಲ್ಲಿ ನಡೆದ ಇನ್ನೊಂದು ಘಟನೆಯು ಅವರ ಹೋರಾಟವನ್ನು ಮತ್ತೊಂದು ಎತ್ತರಕ್ಕೆ ಕರೆದುಕೊಂಡು ಹೋಯಿತು.

ಲೈಂಗಿಕ ಕಾರ್ಯಕರ್ತೆಯರ ಪರವಾದ ತೀವ್ರ ಹೋರಾಟ

‘ಮೆಹಬೂಬ್ ಕೀ ಮೆಹಂದಿ’ ಎನ್ನುವುದು ಅಲ್ಲಿಯ ಒಂದು ರೆಡ್ ಲೈಟ್ ಏರಿಯಾ. ಅಲ್ಲಿ ಸಾವಿರಾರು ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದ ಸ್ತ್ರೀಯರು ಇದ್ದರು. ಎಷ್ಟೋ ಮಂದಿಗೆ HIV ಪಾಸಿಟಿವ್ ಇತ್ತು. ಹಲವರಿಗೆ ಮಕ್ಕಳಿದ್ದರು. ಅವರಿಗೆ ಬೇರೆ ಯಾವ ವೃತ್ತಿಯೂ ಗೊತ್ತಿರಲಿಲ್ಲ. ಸರಕಾರವು ಯಾವುದೋ ಕಾರಣಕ್ಕೆ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿತು. ಈಗ ಸುನೀತಾ ಅವರ ಹೋರಾಟಕ್ಕೆ ನಿಜವಾದ ವೇದಿಕೆಯು ದೊರೆಯಿತು. ಆಕೆ ಅಲ್ಲಿ ನಡೆಸಿದ ಬಹುದೊಡ್ಡ ಹೋರಾಟವು ಇಡೀ ಜಗತ್ತಿನ ಗಮನ ಸೆಳೆಯಿತು. ತನ್ನ ಬಂಗಾರ, ಮನೆಯ ಪಾತ್ರೆಗಳನ್ನು ಮಾರಿ ಆಕೆ ಹಣ ಸಂಗ್ರಹಿಸಿದ್ದರು. ದೇಶ, ವಿದೇಶದ ವೇದಿಕೆಗಳಲ್ಲಿ ನಿರಂತರ ಭಾಷಣಗಳು, ಜನಜಾಗೃತಿ ಕಾರ್ಯಕ್ರಮಗಳು ನಡೆದವು. ಈ ಹೋರಾಟಕ್ಕಾಗಿ ಜಾಗೃತಿ ಮೂಡಿಸಲು ಆಕೆ ವಿದೇಶಗಳಿಗೆ ಹೋದರು. ನಿಧಿ ಸಂಗ್ರಹವೂ ನಡೆಯಿತು. ನ್ಯಾಯಾಂಗ ಹೋರಾಟವೂ ನಡೆಯಿತು.

ಗೆದ್ದೇ ಬಿಟ್ಟರು ಸುನೀತಾ ಕೃಷ್ಣನ್!

ನಿರಂತರ ಹೋರಾಟದ ಪರಿಣಾಮವಾಗಿ ಲೈಂಗಿಕ ವೃತ್ತಿಯಲ್ಲಿದ್ದ 3200 ಮಹಿಳೆಯರಿಗೆ ಆಸರೆಯ ಸೂರು ದೊರೆಯಿತು. ಅವರ ಮಕ್ಕಳಿಗೆ ಶಾಲೆಯು ತೆರೆಯಿತು. ದುಡಿಯುವ ಕೈಗಳಿಗೆ ಉದ್ಯೋಗ ದೊರೆಯಿತು. ಬೇರೆ ಬೇರೆ ಕಡೆ ಸೆಕ್ಸ್ ವ್ಯೂಹಕ್ಕೆ ಬಲಿಯಾಗಿದ್ದ, ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆಯರಿಗೆ ಬೇಕಾದ ವಸತಿ, ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ಸುನೀತಾ ನಿರಂತರ ದುಡಿದರು. ಕಾನೂನು ಹೋರಾಟಗಳನ್ನು ಗೆದ್ದರು. ಅವರ ಸೇವಾಸಂಸ್ಥೆ PRAJWALA ಈಗಾಗಲೇ 12,000 ಅಂತಹ ಸ್ತ್ರೀಯರನ್ನು ಗುರುತಿಸಿದೆ ಮತ್ತು ಅವರ ನೆರವಿಗೆ ನಿಂತಿದೆ! ಇದು ಈ ರೀತಿಯ ಉದ್ದೇಶವಿರುವ ಜಗತ್ತಿನ ಅತೀ ದೊಡ್ಡ NGO ಎಂದು ಕೀರ್ತಿಯನ್ನು ಪಡೆಯಿತು. ಸುನೀತಾ ಕೃಷ್ಣನ್ ನಿಜವಾಗಿ ಅವರ ಬದುಕಿನ ಆಶಾಕಿರಣವಾಗಿ ನಿಂತರು.

ಲೈಂಗಿಕ ಸಂತ್ರಸ್ತರ ಪಾಲಿಗೆ ಆಕೆ ಆಶಾಕಿರಣ

ಅವರ PRAJWALA ಸಂಸ್ಥೆಯು ಈಗಾಗಲೇ 17 ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದೆ ಮತ್ತು 200 ಉದ್ಯೋಗಿಗಳನ್ನು ಹೊಂದಿದೆ. ಅಸಂಖ್ಯಾತ ಸ್ವಯಂಸೇವಾ ಕಾರ್ಯಕರ್ತರು, ದಾನಿಗಳು ಅದರ ನೆರವಿಗೆ ನಿಂತಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಮಕ್ಕಳಿಗೆ ಕಾರ್ಪೆಂಟರಿಂಗ್, ವೆಲ್ಡಿಂಗ್, ಪ್ರಿಂಟಿಂಗ್, ಮೇಸ್ತ್ರಿ, ಹೌಸ್ ಕೀಪಿಂಗ್ ಮೊದಲಾದ ತರಬೇತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಸುನೀತಾ ಮಾಡುತ್ತಿದ್ದಾರೆ. ತಮ್ಮ ಗಂಡ ರಾಜೇಶ್ ಅವರ ಬೆಂಬಲ ಪಡೆದು 14 ಕಿರುಚಿತ್ರಗಳನ್ನು ಸುನೀತಾ ನಿರ್ಮಿಸಿದ್ದಾರೆ ಮತ್ತು ಅವುಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸ್ಕ್ರೀನಿಂಗ್ ಮಾಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಅನಾಮಿಕ’ ಎಂಬ ಕಿರುಚಿತ್ರ ಹಲವು ವಿಶ್ವಮಟ್ಟದ ಪ್ರಶಸ್ತಿಗಳನ್ನು ಗೆದ್ದಿದೆ. ಹತ್ತಾರು ಪುಸ್ತಕಗಳನ್ನು ಸುನೀತಾ ಬರೆದಿದ್ದಾರೆ.

ಆಕೆಯ ಮೇಲೆ ದೈಹಿಕ ದಾಳಿ ಕೂಡ ನಡೆಯಿತು!

ಈ ರೀತಿಯ ಹೋರಾಡುವ ಮಂದಿಗೆ ಶತ್ರುಗಳು ಸೃಷ್ಟಿ ಆಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ! ಅವರ ಮೇಲೆ 17 ಬಾರಿ ಶತ್ರುಗಳು, ದುಷ್ಕರ್ಮಿಗಳು ಮಾರಣಾಂತಿಕ ದಾಳಿ ನಡೆಸಿದ್ದಾರೆ. ಆಸಿಡ್ ದಾಳಿಗಳು ನಡೆದಿವೆ. ದೈಹಿಕವಾಗಿ ಆಕೆಯನ್ನು ಮುಗಿಸುವ ಪ್ರಯತ್ನಗಳೂ ನಡೆದಿವೆ. ಅವೆಲ್ಲವನ್ನು ಕೂಡ ಸುನೀತಾ ಗೆದ್ದು ಬಂದಿದ್ದಾರೆ. ಅಮಿತಾಭ್ ಬಚ್ಚನ್ ಅವರ ಶೋದಲ್ಲಿ ಆಕೆ ಹೇಳಿದ ಒಂದು ಮಾತು ಇನ್ನೂ ನನಗೆ ನೆನಪಿದೆ – ‘ಜಬ್ ತಕ್ ಮೇರಿ ಸಾಸ್ ಹೈ, ತಬ್ ತಕ್ ಮೇ ಅಪ್ನಿ ಜಿಂದಗಿ ಕಮಿಟ್ ಕರೂಂಗಿ!’

ಆಕೆಯ ಹೋರಾಟಕ್ಕೆ ಒಲಿಯಿತು ಪದ್ಮಭೂಷಣ ಪ್ರಶಸ್ತಿ!

ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಕ್ಷಣ

ಇಂತಹ ಉಕ್ಕಿನ ಮಹಿಳೆಗೆ 2016ರ ಪದ್ಮಭೂಷಣ ಪ್ರಶಸ್ತಿ ನೀಡಿ ಭಾರತ ಸರ್ಕಾರವು ಗೌರವ ಕೊಟ್ಟಿತು. ಮದರ್ ತೆರೆಸಾ ಪ್ರಶಸ್ತಿ, ಶ್ರೀ ಸತ್ಯಸಾಯಿ ಪ್ರಶಸ್ತಿ ಸೇರಿದಂತೆ ನೂರಾರು ಶ್ರೇಷ್ಠ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಇಂಡಿಯನ್ ಟೈಂಸ್ ಪತ್ರಿಕೆ ಅವರನ್ನು ಜಗತ್ತಿನ ಅತೀ ಶ್ರೇಷ್ಠ ಹನ್ನೊಂದು ಮಾನವ ಹಕ್ಕು ಹೋರಾಟಗಾರರಲ್ಲಿ ಒಬ್ಬರು ಎಂದು ಹೆಸರಿಸಿದೆ!

ಸುನೀತಾ ಕೃಷ್ಣನ್ ಬದುಕು ಮತ್ತು ಹೋರಾಟಗಳು ಸಾವಿರ ಸಾವಿರ ಮಂದಿಗೆ ಅದ್ಭುತ ಪ್ರೇರಣೆ ನೀಡಿದೆ ಅಲ್ಲವೇ?

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕಣ್ಣೇ ಇಲ್ಲದಿದ್ದರೂ ಜಗತ್ತು ಕಣ್‌ ಕಣ್‌ ಬಿಟ್ಟು ನೋಡುವ ಉದ್ಯಮ ಸಾಮ್ರಾಜ್ಯ ಕಟ್ಟಿದ ಶ್ರೀಕಾಂತ್‌ ಬೊಳ್ಳ!

Exit mobile version