ಮಾರ್ಚ್ 23, 1931 ಸೂರ್ಯೋದಯದ ಹೊತ್ತು!
ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ನೀರವ ಮೌನ ಆವರಿಸಿತ್ತು! ಸ್ವಾತಂತ್ರ್ಯದ ಕಿಡಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರನ್ನು ಗಲ್ಲಿಗೇರಿಸಲು ಎಲ್ಲ ವ್ಯವಸ್ಥೆಗಳು ಪೂರ್ತಿ ಆಗಿದ್ದವು! ಕೋರ್ಟು ನಿಗದಿಪಡಿಸಿದ ಸಮಯಕ್ಕಿಂತ ಸಾಕಷ್ಟು ಮೊದಲೇ ಅವರನ್ನು ಗಲ್ಲಿಗೆ ಹಾಕಲು ಬ್ರಿಟಿಷ್ ಅಧಿಕಾರಿಗಳು ತವಕಪಡುತ್ತಿದ್ದರು! ಅದಕ್ಕೆ ಕಾರಣ ಜೈಲಿನ ಹೊರಗೆ ಮತ್ತು ಒಳಗೆ ಹೊತ್ತಿ ಉರಿಯುವ ಸನ್ನಿವೇಶವು ನಿರ್ಮಾಣವಾಗಿತ್ತು. ಯಾವ ಹೊತ್ತಿಗೂ ಪರಿಸ್ಥಿತಿ ಕೈ ಮೀರುವ ಸನ್ನಿವೇಶ ಇತ್ತು! ಇಡೀ ದೇಶವು ಭಗತ್ ಸಿಂಗ್ ಮತ್ತು ಅವನ ಗೆಳೆಯರ ಪರವಾಗಿ ನಿಂತಿತ್ತು!
ಅವರು ಮಾಡಿದ ಅಪರಾಧ ಏನು?
ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಮೇಲೆ ಬ್ರಿಟಿಷ್ ಸರಕಾರ ಹಲವು ಮೊಕದ್ದಮೆಗಳನ್ನು ಜಡಿದು ಜೈಲಿನಿಂದ ಬಿಡುಗಡೆ ಆಗದ ಹಾಗೆ ಸಂಚು ರೂಪಿಸಿತ್ತು.
ಸಾಕಷ್ಟು ಹಿಂದೆ ಪೊಲೀಸ್ ಸ್ಟೇಷನ್‌ನಲ್ಲಿ ಪೊಲೀಸ್ ಅಧಿಕಾರಿ ಸ್ಯಾಂಡರ್ಸನ್ ಹತ್ಯೆಯನ್ನು ಈ ಗೆಳೆಯರು ಮಾಡಿದ್ದರು. ಭಗತ್ ಸಿಂಗ್ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ಬಾಂಬು ತಯಾರಿ ಮಾಡುವ ಕಾರ್ಖಾನೆ ಸ್ಥಾಪನೆ ಮಾಡಿ ಯುವಕರಿಗೆ ತರಬೇತು ನೀಡುತ್ತಿದ್ದ! ಅದಕ್ಕಿಂತ ಹೆಚ್ಚಾಗಿ ಕೇಂದ್ರ ಶಾಸನ ಸಭೆಯ ಜನ ವಿರೋಧಿ ಕಾಯಿದೆಯ ವಿರುದ್ಧ ಪ್ರತಿಭಟಿಸಲು ಅಸೆಂಬ್ಲಿ ಹಾಲ್‌ನಲ್ಲಿ ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ತ ಅವರು ಬಾಂಬ್ ಎಸೆದು ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯನ್ನು ಕೂಗುತ್ತ ಉದ್ದೇಶಪೂರ್ವಕವಾಗಿ ಸೆರೆ ಸಿಕ್ಕಿದ್ದರು. ಅವರಿಗೆ ತಪ್ಪಿಸಿಕೊಂಡು ಹೋಗುವ ಅವಕಾಶ ಖಂಡಿತ ಇತ್ತು. ಆದರೆ ಆಗಲೇ ದೇಶಕ್ಕಾಗಿ ಹುತಾತ್ಮನಾಗುವ ತವಕ ಭಗತ್ ಸಿಂಗ್‌ನಲ್ಲಿ ಎದ್ದು ಕಾಣುತ್ತಿತ್ತು!
ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಭಗತ್ ಸಿಂಗ್ ನ್ಯಾಯಾಧೀಶರ ಮುಂದೆ ಹೇಳಿದ ಮಾತುಗಳು ಪತ್ರಿಕೆಗಳ ಮೂಲಕ ಇಡೀ ಭಾರತವನ್ನು ತಲುಪಿದ್ದವು! ಭಗತ್ ಸಿಂಗ್ ಆಗಲೇ ಲೆಜೆಂಡ್ ಆಗಿದ್ದ!
ಭಗತ್ ಸಿಂಗ್‌ಗೆ ತಾಯಿ ಬರೆದ ಪತ್ರದಲ್ಲಿ ಏನಿತ್ತು?
ಗಲ್ಲುಕಂಬಕ್ಕೆ ಏರುವಾಗ ಭಗತ್‌ಗೆ ಇನ್ನೂ 23 ವರ್ಷ! ಆತನನ್ನು ನ್ಯಾಯವಾದ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ರದ್ದು ಪಡಿಸಬೇಕು ಎಂದು ಒಂದು ದೊಡ್ಡ ಮಟ್ಟದ ಸಹಿ ಸಂಗ್ರಹ ಆಂದೋಲನವು ನಡೆದಿತ್ತು! ಆದರೆ, ಆಗಿನ ಹೆಚ್ಚಿನ ಹಿರಿಯ ನಾಯಕರು ಅದಕ್ಕೆ ಸಹಿ ಮಾಡಲು ಒಪ್ಪಲಿಲ್ಲ!
ಭಗತ್ ಮತ್ತು ಅವನ ಗೆಳೆಯರನ್ನು ‘ಬೀದಿ ಬದಿಯ ಹೋರಾಟಗಾರರು’ ಎಂದು ಬಹಳ ಕೆಟ್ಟದಾಗಿ ಬಿಂಬಿಸಲಾಯಿತು!ಭಗತ್ ಸಿಂಗ್ ಸೆರೆಮನೆಯಲ್ಲಿ ಇದ್ದಾಗ ಅವನ ತಾಯಿ ವಿದ್ಯಾವತಿ ಮಗನಿಗೆ ಪತ್ರ ಬರೆಯುತ್ತಾರೆ. ಅದರಲ್ಲಿ ಇದ್ದ ಪ್ರಮುಖ ವಾಕ್ಯಗಳು..
“ಮಗ ಭಗತ್, ನಿನ್ನ ನಿಲುವನ್ನು ಎಂದಿಗೂ ಬದಲಿಸಬೇಡ. ಪ್ರಪಂಚವೇ ಮರೆಯಲಾಗದ ಸಾವು ಅತ್ಯುತ್ತಮ. ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯನ್ನು ಕೊನೆಯವರೆಗೂ ಕೂಗುತ್ತಿರು! ಯಾವ ತಾಯಿಗೂ ಲಭಿಸದ ಹೆಮ್ಮೆ ನನಗೆ ಉಂಟಾಗುತ್ತದೆ!” ಎಂದಿದ್ದರು ಆ ಹಿರಣ್ಯಗರ್ಭೆ!
ಆ ದಿನ ಬೆಳಗ್ಗೆ ಏನೇನಾಯಿತು?
ಜೈಲು ಅಧಿಕಾರಿಗಳು ಸೆಲ್ ಒಳಗೆ ಬಂದು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ನೇಣುಗಂಬದ ಕಡೆಗೆ ಕರೆದುಕೊಂಡು ಹೋದರು. ಒಂದಿಷ್ಟು ದುಃಖ, ವಿಷಾದ ಇಲ್ಲದೆ ಆ ಕ್ರಾಂತಿಕಾರಿ ಯುವಕರು ತಮ್ಮ ನೆಚ್ಚಿನ ‘ಸರ್ಫರೋಷಿ ಕಿ ತಮನ್ನಾ’ ಹಾಡನ್ನು ಹಾಡುತ್ತಾ ದೃಢವಾದ ಹೆಜ್ಜೆಗಳನ್ನು ಜೋಡಿಸಿದರು. ಎಲ್ಲ ಸೆಲ್ ಒಳಗಿಂದ ನೂರಾರು ಜನ ಕೈದಿಗಳು ಜೋರಾಗಿ ಅಳುತ್ತ ಅವರನ್ನು ಬೀಳ್ಕೊಟ್ಟರು.
ಮೂರೂ ಯುವಕರು ನಗು ನಗುತ್ತಾ ನೇಣು ಗಂಬ ಹತ್ತಿದರು. ಮೂವರೂ ಪರಸ್ಪರ ಆಲಿಂಗಿಸಿಕೊಂಡರು.
ನೇಣುಗಂಬಕ್ಕೆ ಮುತ್ತಿಕ್ಕಿದರು. ತಾಯಿಗೆ ಮಾತು ಕೊಟ್ಟ ಹಾಗೆ ಗಟ್ಟಿಯಾಗಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಯನ್ನು ಹಲವು ಬಾರಿ ಕೂಗಿದರು. ಇದು ಇಡೀ ಜೈಲಿನ ಗೋಡೆಗಳ ನಡುವೆ ಪ್ರತಿಧ್ವನಿ ಆಯಿತು.
ಮುಖಕ್ಕೆ ಕರಿ ಮುಸುಕು ಹಾಕುವ ಮೊದಲು ಮೂವರೂ ಗಟ್ಟಿಯಾಗಿ ನಕ್ಕರು. ಅವರ ನಗುವಿನ ಅಟ್ಟಹಾಸ ನೋಡಿ ಗಲ್ಲು ಶಿಕ್ಷೆಗೆ ಬಂದ ಬ್ರಿಟಿಷ್ ಅಧಿಕಾರಿಗಳು ಮತ್ತು ನ್ಯಾಯಾಧೀಶರು ದಿಗಿಲಿಗೆ ಒಳಗಾದರು!
ಉರುಳು ಬಿಗಿಯಿತು! ಉಸಿರು ನಿಂತಿತು! ಒಂದೇ ಕ್ಷಣದಲ್ಲಿ ಮೂವರೂ ಮಹಾ ಕ್ರಾಂತಿಕಾರಿಗಳು ಭಾರತಾಂಬೆಯ ಸ್ವಾತಂತ್ರ್ಯದ ಯಜ್ಞಕ್ಕೆ ಹವಿಸ್ಸಾಗಿ ಹೋಗಿದ್ದರು!
ಸೆರೆಮನೆಯಲ್ಲಿ ಇಡೀ ದಿನ ಗಾಢವಾದ ಮೌನ ಆವರಿಸಿತ್ತು. ಆ ದಿನ ಯಾರೂ ಅನ್ನ, ನೀರು ಮುಟ್ಟಲಿಲ್ಲ!
ಬ್ರಿಟಿಷ್ ಅಧಿಕಾರಿಗಳ ಆತಂಕ ಕಡಿಮೆ ಆಗಲಿಲ್ಲ!
ಅವಧಿಗೆ ಮೊದಲೇ ಗಲ್ಲಿನ ಕೆಲಸ ಮುಗಿಸಿದ ಬ್ರಿಟಿಷ್ ಅಧಿಕಾರಿಗಳ ಆತಂಕವು ಕಡಿಮೆ ಆಗಲಿಲ್ಲ. ಕ್ರಾಂತಿಕಾರಿಗಳು ಯಾವ ಹೊತ್ತಲ್ಲಿ ಆದರೂ ಜೈಲಿನ ಮೇಲೆ ದಾಳಿ ಮಾಡಿ ಜೈಲನ್ನು ಹುಡಿ ಹುಡಿ ಮಾಡಬಹುದು ಎಂಬ ಆತಂಕ ಒಂದೆಡೆ! ಜೈಲಿನ ಒಳಗೇ ಕೆಲವು ಕ್ರಾಂತಿಕಾರಿಗಳು ಇದ್ದರು. ಅವರೇನಾದ್ರೂ ತಿರುಗಿ ಬಿದ್ದರೆ ಅಧಿಕಾರಿಗಳಿಗೆ ನಿಯಂತ್ರಣ ಮಾಡಲು ಸಾಧ್ಯವೇ ಇರಲಿಲ್ಲ.
ಅದಕ್ಕಾಗಿ ಅವರ ಶವಗಳನ್ನು ಸಟ್ಲೇಜ್ ನದಿಯ ದಡಕ್ಕೆ ಕೊಂಡು ಹೋಗಿ ಅವಸರವಸರವಾಗಿ ಸುಡಲಾಯಿತು. ಸಂಜೆಯ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆಯನ್ನು ನೋಡಿ ಸ್ಥಳೀಯ ಜನರು ಓಡೋಡಿ ಬಂದರು. ಪೊಲೀಸರನ್ನು ಹೊಡೆದು ಓಡಿಸಿದರು. ಅರ್ಧ ಸುಟ್ಟುಹೋಗಿದ್ದ ಶವಗಳನ್ನು ಹೊರಗೆಳೆದು ಮತ್ತೆ ಶಾಸ್ತ್ರೋಕ್ತವಾಗಿ ಶವಸಂಸ್ಕಾರ ಮಾಡಿದರು.
ಏನಿದ್ದರೂ ಈ ಮೂವರು ಕ್ರಾಂತಿಕಾರಿ ಯುವಕರು ನಗು ನಗುತ್ತಾ ಗಲ್ಲಿಗೇರಿ ಬ್ರಿಟಿಷ್ ಸರಕಾರವನ್ನು ನಡುಗಿಸಿದ್ದು ಖಂಡಿತವಾಗಿಯೂ ಅಮೃತ ಸ್ವಾತಂತ್ರ್ಯದ ಇತಿಹಾಸದ ಒಂದು ಭಾಗ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಒಂದಿಲ್ಲದಿದ್ದರೆ ಇನ್ನೊಂದಿಲ್ಲ: ಇಲ್ಲಿವೆ ಬೆಚ್ಚಿಬೀಳಿಸುವ ಜೀವ ಜಗತ್ತಿನ ನಾಶದ ಸತ್ಯ ಕತೆಗಳು!