Site icon Vistara News

ರಾಜ ಮಾರ್ಗ ಅಂಕಣ: The Kerala Story ಎಂಬ ಅದ್ಭುತ ಸಿನಿಮಾ ಮತ್ತು ಅದಾ ಶರ್ಮಾ ಎಂಬ ಪ್ರತಿಭಾವಂತ ನಟಿ

Raja Marga column: The kerala Story and story of beautiful Adah Sharma

Raja Marga column: The kerala Story and story of beautiful Adah Sharma

ಸಿನಿಮಾಗಳು ಕೇವಲ ಮನರಂಜನೆಗೆ ಅಂದವರು ಯಾರು? ಎಷ್ಟೋ ಸಿನಿಮಾಗಳು ತಮ್ಮ ಕಂಟೆಂಟ್ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ನೂರಾರು ಉದಾಹರಣೆಗಳು ಇವೆ. ಅವುಗಳಿಗೆ ಇತ್ತೀಚಿನ ಒಂದು ಸೇರ್ಪಡೆ – The Kerala Story !

ಮೇ 5ರಂದು ದೇಶದಾದ್ಯಂತ ಬಿಡುಗಡೆ ಆದ ಈ ಸಿನಿಮಾ ಈಗಲೂ ತುಂಬಿದ ಗೃಹಗಳಿಗೆ ಪ್ರದರ್ಶಿತ ಆಗ್ತಾ ಇದೆ. ಹೆಚ್ಚು ಕಾಲೇಜಿನ ಯುವಕ – ಯುವತಿಯರು ಈ ಸಿನಿಮಾವನ್ನು ಕಣ್ಣೀರು ಸುರಿಸುತ್ತ ನೋಡುತ್ತಿದ್ದಾರೆ ಅಂದರೆ ಅದು ದೊಡ್ಡ ಮಟ್ಟದ ಯಶಸ್ಸು. ಸುದೀಪ್ತೊ ಸೇನ್ ಎಂಬ ವರ್ಸಟೈಲ್ ನಿರ್ದೇಶಕ ನಿರ್ದೇಶನ ಮಾಡಿದ ಈ ಸಣ್ಣ ಬಜೆಟ್ ಸಿನಿಮಾ ಹತ್ತು ದಿನಗಳಲ್ಲಿ 200 ಕೋಟಿ ಸಂಪಾದನೆ ಮಾಡಿ ಇನ್ನೂ ಮುಂದುವರಿಯುತ್ತಿದೆ!

The Kerala Story ಥೀಮ್ ಏನು?

ಕೇರಳದಲ್ಲಿ (ಮತ್ತು ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ) ಕಾಲೇಜುಗಳಲ್ಲಿ ಕಲಿಯುತ್ತಿರುವ ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರನ್ನು ಲವ್ ಜಿಹಾದ್ ನೆಪದಲ್ಲಿ ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಮದುವೆಯ ನಾಟಕ ಮಾಡಲಾಗುತ್ತದೆ. ನಂತರ ಜಿಹಾದಿ ಶಕ್ತಿಗಳು ಆ ಹುಡುಗಿಯರನ್ನು ವಿದೇಶಗಳಿಗೆ ಕರೆದುಕೊಂಡು ಹೋಗಿ ಅವರನ್ನು ISIS (Islamic State of Iraq and Syria) ಎಂಬ ಭಯೋತ್ಪಾದನಾ ಸಂಸ್ಥೆಗೆ ಸೇರಿಸಿ ಹ್ಯೂಮನ್ ಬಾಂಬ್ ಆಗಿ ತರಬೇತಿ ನೀಡುತ್ತಾರೆ. ಅವರ ಮೂಲ ಉದ್ದೇಶವು ಜಗತ್ತಿನಾದ್ಯಂತ ಅಶಾಂತಿಯನ್ನು ಸೃಷ್ಟಿ ಮಾಡುವುದೇ ಆಗಿದೆ. ಈವರೆಗೆ ಕೇರಳದಲ್ಲಿ ಸಾವಿರಾರು ಹುಡುಗಿಯರು ಮತಾಂತರ ಆಗಿರುವುದು ಮತ್ತು ಕಣ್ಮರೆ ಆಗಿರುವುದು ಪೊಲೀಸ್ ರೆಕಾರ್ಡಲ್ಲಿ ಇದೆ! ಅದರಲ್ಲಿ ಮೂವರು ಹುಡುಗಿಯರ ಕತೆಯನ್ನು ಆಧರಿಸಿ ಈ ಸಿನಿಮಾ ರೂಪಿಸಲಾಗಿದೆ. ವಾಸ್ತವಕ್ಕೆ ತುಂಬಾ ಹತ್ತಿರವಾಗಿ ನಿರೂಪಣೆ ಇದೆ. ಸಂವೇದನೆ ಇರುವವರಿಗೆ ಬೆನ್ನು ಮೂಳೆಯಲ್ಲಿ ಹಲವು ಬಾರಿ ಚಳಕ್ ಎನ್ನಿಸುವ ದೃಶ್ಯಗಳು ಸಿನಿಮಾದಲ್ಲಿ ಇವೆ. ಜಿಹಾದಿ ಕ್ರೌರ್ಯ ನಮ್ಮಲ್ಲಿ ಆಕ್ರೋಶವನ್ನು ಉಂಟುಮಾಡುತ್ತದೆ.

ಆ ಮೂವರಲ್ಲಿ ಒಬ್ಬಳು ಶಾಲಿನಿ ಉನ್ನಿಕೃಷ್ಣನ್!

ಬ್ರೈನ್ ವಾಶ್‌ಗೆ ಬಲಿಯಾಗುವ ಮೂವರು ಹುಡುಗಿಯರಲ್ಲಿ ಒಬ್ಬಳು ಶಾಲಿನಿ ಉನ್ನಿಕೃಷ್ಣನ್. ಕೇರಳದ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಅವಳು. ನರ್ಸಿಂಗ್ ಕಾಲೇಜಿಗೆ ಕಲಿಯಲು ಬರುವ ಆ ಮುಗ್ಧ ಹುಡುಗಿಯ ಕಥೆ ನಮ್ಮದೇ ಸುತ್ತಮುತ್ತ ಇರುವ ಹುಡುಗಿಯ ಕಥೆ ಎಂದೇ ಅನ್ನಿಸುತ್ತದೆ. ಪ್ರೀತಿಯ ನಾಟಕಕ್ಕೆ ಬಲಿಯಾಗುವ ಅವಳು ಮುಂದೆ ಫಾತಿಮಾ ಆಗಿ ಮತಾಂತರ ಆಗುತ್ತಾಳೆ. ಮುಂದೆ ಅವಳ ಬದುಕು ಅವಳು ಎಣಿಸಿದ ಹಾಗೆ ಇರುವುದಿಲ್ಲ. ಅವಳ ಗಂಡ ಎಂಬ ಪ್ರಾಣಿ ಅವಳನ್ನು ಬಲವಂತವಾಗಿ ಸಿರಿಯಾ ಕಡೆಗೆ ಕರೆದುಕೊಂಡು ಬರುವುದು, ಅಲ್ಲಿ ಅವಳ ಮೇಲೆ ನಡೆಯುವ ದೌರ್ಜನ್ಯಗಳು, ಹಿಂಸೆಗಳು, ಅತ್ಯಾಚಾರಗಳು ಇವುಗಳನ್ನು ವಿವರಿಸಲು ನನ್ನಲ್ಲಿ ಶಬ್ದಗಳು ಇಲ್ಲ. ನೀವು ಸಿನಿಮಾ ನೋಡಿಯೇ ಅದನ್ನು ಫೀಲ್ ಮಾಡಿಕೊಳ್ಳಬೇಕು. ಇಡೀ ಥಿಯೇಟರ್‌ನಲ್ಲಿ ನೀರವ ಮೌನದಲ್ಲಿ ಯುವಜನತೆ ಈ ಸಿನಿಮಾ ನೋಡುತ್ತಾರೆ ಅಂದರೆ ಅದು ಸಿನಿಮಾದ ಇಂಪ್ಯಾಕ್ಟ್!

ಅದಾ ಶರ್ಮಾ ಎಂಬ ಪ್ರತಿಭಾವಂತ ನಟಿ

ಇಡೀ ಸಿನಿಮಾದಲ್ಲಿ ಜೊತೆ ಜೊತೆಗೆ ಸಾಗುವ ಮೂರು ಹುಡುಗಿಯರ ಪಾತ್ರಗಳು ಇವೆ. ಅದರಲ್ಲಿಯೂ ಶಾಲಿನಿ ಪಾತ್ರವು ನಿಮ್ಮನ್ನು ನಿಧಾನವಾಗಿ ಆವರಿಸುತ್ತಾ ಹೋಗುತ್ತದೆ. ಆ ಪಾತ್ರವನ್ನು ಮಾಡಿದವಳು ಮುಂಬೈಯ ಅದಾ ಶರ್ಮಾ ಎಂಬ ಮೋಹಕ ನಟಿ. ಅವಳ ಎತ್ತರದ ವ್ಯಕ್ತಿತ್ವ, ಬಟ್ಟಲು ಕಣ್ಣುಗಳು, ಉದ್ದವಾದ ಜಡೆ, ಮಲಯಾಳಂ ಅಸೆಂಟ್ ಇರುವ ಹಿಂದಿ ಭಾಷೆ, ಅವಳ ಮುಗ್ಧತೆ…ಎಲ್ಲವೂ ಆ ಪಾತ್ರಕ್ಕೆ ಪೂರಕವಾಗಿ ಇವೆ. ಆ ಪಾತ್ರಕ್ಕೆ ಅವಳು ತನ್ನನ್ನೇ ಸಮರ್ಪಣೆ ಮಾಡಿಕೊಂಡ ಹಾಗೆ ನಮಗೆ ಅನ್ನಿಸುತ್ತದೆ. ಆ ಸಿನಿಮಾ ಮುಗಿಸಿ ಹೊರಬಂದ ಎಷ್ಟೋ ದಿನಗಳ ನಂತರವೂ ನಮಗೆ ಶಾಲಿನಿಯ ಪ್ರಭಾವದಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ. ಅದು ಅದಾ ಶರ್ಮಾ ಎಂಬ ನಟಿಯ ತಾಕತ್ತು.

ಅದಾ ಶರ್ಮಾ

ಆಕೆಯು ಮಹಾ ಪ್ರತಿಭಾವಂತೆ ಅನ್ನೋದು ಖರೆ!

ಅದಾ ಶರ್ಮಾ ಹುಟ್ಟಿದ್ದು ಮುಂಬೈಯಲ್ಲಿ, ಒಂದು ಸಂಪ್ರದಾಯಸ್ಥ ತಮಿಳು ಬ್ರಾಹ್ಮಣ ಕುಟುಂಬದಲ್ಲಿ. ಅವಳ ತಂದೆ ಎಸ್ ಎಲ್ ಶರ್ಮಾ ಅವರು ಭಾರತೀಯ ಮರ್ಚೆಂಟ್ ನೇವಿಯಲ್ಲಿ ಕ್ಯಾಪ್ಟನ್ ಆಗಿದ್ದವರು. ಅಮ್ಮ ಮಲಯಾಳಿ. ಆಕೆ ಕೂಡ ಕ್ಲಾಸಿಕಲ್ ಡ್ಯಾನ್ಸ್ ಟೀಚರ್ ಮತ್ತು ಮಲ್ಲಕಂಬ ಕೋಚ್! ಹಾಗೆ ಮಗಳಿಗೆ ಅಮ್ಮನೇ ಪ್ರೇರಣೆ. ಮೂರನೇ ವಯಸ್ಸಿಗೇ ನೃತ್ಯ ತರಬೇತಿಗೆ ಸೇರಿದವಳು ಅದಾ ಶರ್ಮಾ!

ಮುಂದೆ ಅವಳಿಗೆ ಓದು ಇಷ್ಟವಾಗಲಿಲ್ಲ. ಸಿನಿಮಾದಲ್ಲಿ ಅಭಿನಯಿಸುವ ಹುಚ್ಚು ತಲೆಗೆ ಹತ್ತಿತು. ಹಲವು ನಿರ್ಮಾಪಕರ ಬಳಿಗೆ ಅವಕಾಶ ಕೇಳಿಕೊಂಡು ಹೋದದ್ದು, ಹೆಚ್ಚಿನ ಕಡೆ ರಿಜೆಕ್ಟ್ ಆದದ್ದು, ಅಪಮಾನ ಆದದ್ದು ಅವಳ ಸಂಕಲ್ಪ ಶಕ್ತಿಗೆ ಸವಾಲು ಆದವು. ಆದರೆ ಅದಾ ಶರ್ಮಾ ಸೋಲನ್ನು ಒಪ್ಪಿಕೊಳ್ಳುವ ಹುಡುಗಿ ಅಲ್ಲ! 2008ರಲ್ಲಿ ಬಿಡುಗಡೆ ಆದ ವಿಕ್ರಮ್ ಭಟ್ ನಿರ್ದೇಶನದ 1920 ಎಂಬ ಹಾರರ್ ಫಿಲ್ಮ್ ಅವಳ ಮೊದಲ ಸಿನಿಮಾ ಆಯ್ತು. ಆ ಸಿನೆಮಾಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಒಲಿಯಿತು.

ಅದಾ ಶರ್ಮಾ

ಮುಂದೆ 15 ವರ್ಷಗಳಲ್ಲಿ ತೆಲುಗು, ತಮಿಳು, ಹಿಂದೀ, ಮಲಯಾಳಂ ಭಾಷೆಯ ದೊಡ್ಡ ಬ್ಯಾನರ್‌ಗಳ ಸಿನಿಮಾಗಳಲ್ಲಿ ಆಕೆ ಮಿಂಚಿದರು. ರಣ ವಿಕ್ರಮ ಎನ್ನುವ ಪುನೀತ್ ರಾಜಕುಮಾರ್ ಅಭಿನಯದ ಕನ್ನಡ ಸಿನಿಮಾದಲ್ಲಿ ಕೂಡ ಅವರು ನಾಯಕಿಯಾಗಿ ಮಿಂಚಿದ್ದರು.

ಅಭಿನಯ ಕಲೆಗೆ ಪೂರಕವಾಗಿ ಅಮೆರಿಕಕ್ಕೆ ಹೋಗಿ ಸಲ್ಸಾ ಎಂಬ ಇಟಾಲಿಯನ್ ಡ್ಯಾನ್ಸ್ ಕಲಿತು ಬಂದರು. ಕಥಕ್ ನೃತ್ಯವನ್ನು ಶಾಸ್ತ್ರೀಯವಾಗಿ ಕಲಿತರು. ಜಾಝ್ ನೃತ್ಯ, ಬೆಲ್ಲಿ ನೃತ್ಯ ಎಲ್ಲವನ್ನೂ ಕಲಿತರು. ಸಿಲಂಬಮ್ ಎನ್ನುವ ಒಂದು ಯುದ್ಧಕಲೆಯನ್ನು ಕೂಡ ಉತ್ಸಾಹದಿಂದ ಕಲಿತರು.

ಒಂದು ಡಜನ್ ಸಿನೆಮಾಗಳು, ಐದು ವೆಬ್ ಸೀರೀಸ್‌ಗಳು, ಐದು ಶಾರ್ಟ್ ಫಿಲಂಗಳು, ನಾಲ್ಕು ಮ್ಯೂಸಿಕ್ ವೀಡಿಯೋಗಳ ಹಿನ್ನೆಲೆಯ ಜೊತೆಗೆ ಅದಾ ಶರ್ಮಾ ತನ್ನ 15 ವರ್ಷಗಳ ಅಭಿನಯ ವೃತ್ತಿಯನ್ನು ದಾಟಿ ಬಂದಿದ್ದಾರೆ.

ಅದಕ್ಕೆ ಶಿಖರ ಬಿಂದುವಾಗಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮಾ ಗೆದ್ದಿದ್ದಾರೆ! ಅವಳ ಪಾತ್ರ ಶಾಲಿನಿ ಉನ್ನಿಕೃಷ್ಣನ್ ಗೆದ್ದಿದೆ! ಹಾಗೆಯೇ ಕೇರಳ ಸ್ಟೋರಿ ಸಿನೆಮಾ ಕೂಡ!

ಒಮ್ಮೆ ಸಿನಿಮಾ ನೋಡಿ ಅವಳಿಗೆ ಒಂದು ಶಾಭಾಷ್ ಹೇಳಿ

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ನಿಮ್ಮ ಮೇಲೆ ಯಾರಾದ್ರೂ ಸವಾರಿ ಮಾಡ್ತಾರೆ ಅಂದರೆ ಅದಕ್ಕೆ ನೀವೇ ಕಾರಣ!

Exit mobile version