Site icon Vistara News

ರಾಜ ಮಾರ್ಗ ಅಂಕಣ | ಈ ಹತ್ತು ಟೀ ನಿಮ್ಮ ಹತ್ರ ಇದ್ದರೆ ನೀವು ಬದುಕಿನಲ್ಲಿ ಗೆದ್ದಂತೆಯೇ! ಏನಿದು ಟೀ ಮಂತ್ರ?

success

ಯಶಸ್ಸು ಯಾರಿಗೆ ಬೇಡ ಹೇಳಿ? ಆದರೆ ಯಶಸ್ಸನ್ನು ಸಾಧಿಸಲು ಹೊರಟ ವ್ಯಕ್ತಿಗಳು ಈ ಹತ್ತು
‘ಟೀ’ ಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಗೆಲುವು ಖಚಿತ ಅನ್ನುವುದು ನನ್ನ ಅನಿಸಿಕೆ.

1. IDENTITY( ಅಸ್ಮಿತೆ )
ನಾವು ಬೇರೆಯವರಿಗಿಂತ ಭಿನ್ನವಾಗಿ ಇದ್ದೇವೆ ಅನ್ನುವುದೇ ನಮ್ಮ ಶಕ್ತಿ! ನಾವು ಬೇರೆಯವರಿಗಿಂತ ಭಿನ್ನವಾಗಿ ಯೋಚನೆ ಮಾಡುತ್ತೇವೆ ಅಂದರೆ ಅದು ನಮ್ಮನ್ನು ನಿರಂತರವಾಗಿ ಗೆಲ್ಲಿಸುತ್ತದೆ. ನಮ್ಮ ಯೋಚನೆಗಳು ನಮ್ಮನ್ನು ರೂಪಿಸುತ್ತವೆ ಅನ್ನುವುದು ನಿಜವಾದ ಮಾತು. ನಾವು ಬೇರೆಯವರಿಗಿಂತ ಭಿನ್ನವಾಗಿ ಯೋಚನೆ ಮಾಡುವುದರಿಂದ ನಮ್ಮ ವ್ಯಕ್ತಿತ್ವವು ಬೇರೆಯವರಿಗಿಂತ ಭಿನ್ನ ಆಗಿರುತ್ತದೆ. ಅದು ನಮಗೆ ಸಮಾಜದಲ್ಲಿ ಪ್ರತ್ಯೇಕವಾದ ಸ್ಥಾನವನ್ನು ಕಟ್ಟಿಕೊಡುತ್ತದೆ ಮತ್ತು ಗೆಲುವಿನ ಕಡೆಗೆ ಮುನ್ನಡೆಸುತ್ತದೆ.
‘ಛೇ! ನಾನು ಅವರ ಯಾಕೆ ಹಾಗಿಲ್ಲ, ಇವರ ಹಾಗೆ ಯಾಕಿಲ್ಲ?’ ಎಂದು ಯೋಚನೆ ಮಾಡುವುದನ್ನು ತಕ್ಷಣ ಬಿಟ್ಟುಬಿಡಿ. ನೀವು ನೀವಾಗಿದ್ದರೆ ಅಷ್ಟೇ ಸಾಕು!

2. CREATIVITY ( ಸೃಜನಶೀಲತೆ)
ಇದು ನಮ್ಮ ಅದ್ಭುತವೆ ಆದ ಸಾಮರ್ಥ್ಯ. ಇದು ನಮ್ಮ ಬಲ ಮೆದುಳಿನ ಚಮತ್ಕಾರ. ಬಲ ಮೆದುಳಿನಿಂದ ಯೋಚನೆ ಮಾಡುವವರು ಯಾವಾಗಲೂ ಹೊಸ ಹೊಸ ಐಡಿಯಾಗಳನ್ನು ಹುಟ್ಟುಹಾಕುತ್ತಾರೆ. ನ್ಯೂಟನ್ ತಲೆಯ ಮೇಲೆ ಆಪಲ್ ಬಿದ್ದಾಗ ಅವನು ಕೇಳಿದ ಪ್ರಶ್ನೆಗಳು ಅದು ಆತನ ಕ್ರಿಯೇಟಿವಿಟಿ. ನೂತನ ಐಡಿಯಾಗಳು ಮುಂದೆ ನೂತನ ಆವಿಷ್ಕಾರಗಳನ್ನು ಹುಟ್ಟು ಹಾಕುತ್ತವೆ. ಈ ಆವಿಷ್ಕಾರಗಳು ಮುಂದೆ ವಿಜ್ಞಾನವನ್ನು ಬೆಳೆಸಿದವು. ಇಂದು ಕಾರ್ಪೊರೇಟ್ ಜಗತ್ತಿನಲ್ಲಿ ನೂತನ ಐಡಿಯಾಗಳು ಕೋಟಿ ಕೋಟಿ ಬೆಲೆ ಬಾಳುತ್ತವೆ. ಪ್ರತಿಯೊಂದು ಕಾರ್ಪೊರೇಟ್ ಕಂಪೆನಿಗಳು ಕೂಡ ನೂತನ ಐಡಿಯಾ ಹುಟ್ಟುಹಾಕುವ ಕ್ರಿಯೇಟಿವ್ ಹೆಡ್ ಗಳನ್ನು ಹೊಂದಿರುತ್ತವೆ ಮತ್ತು ಅವರನ್ನು ಚೆನ್ನಾಗಿ ಸಾಕುತ್ತವೆ.

3. ADAPTABILITY ( ಹೊಂದಾಣಿಕೆ)
ಯಾವುದೇ ಸಂದರ್ಭ, ಸನ್ನಿವೇಶ ಮತ್ತು ವ್ಯಕ್ತಿಗಳಿಗೆ ನಾವು ಹೇಗೆ ಹೊಂದಿಕೆ ಆಗುತ್ತೇವೆ ಅನ್ನುವುದು ನಮ್ಮ ಅತ್ಯುತ್ತಮ ಕ್ವಾಲಿಟಿ. ಎಷ್ಟು ಕಷ್ಟವೋ ಹೊಂದಿಕೆ ಎನ್ನುವುದು ಎಂದು ಕವಿ ಜಿ.ಎಸ್.ಎಸ್. ಅವರು ಹೇಳಿದ್ದು ಇದೇ ಅರ್ಥದಲ್ಲಿ! ಹೊಂದಾಣಿಕೆ ಎಂದರೆ ಎಲ್ಲ ಕಡೆ ಕಾಂಪ್ರಮೈಸ್ ಮಾಡಬೇಕು ಎಂದು ಅರ್ಥವಲ್ಲ. ನಮ್ಮ ಪಾಲಿಸಿಗಳನ್ನು ಪೂರ್ತಿ ಬಿಟ್ಟುಕೊಡದೆ, ನಮ್ಮ ನಡುವಿನ ಸಂಬಂಧಗಳನ್ನು ಗೌರವಿಸುತ್ತಾ ನಾವು ಸಣ್ಣ ಪುಟ್ಟ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ! ನಾವು ಎಷ್ಟು ಆಡಾಪ್ಟ್ ಆಗುತ್ತೇವೆ ಎನ್ನುವುದು ನಮ್ಮನ್ನು ಗೆಲ್ಲಿಸುವ ಅಂಶವಾಗಿರುತ್ತದೆ.

4. RESPONSIBILITY (ಹೊಣೆಗಾರಿಕೆ)
ನಾವು ತೆಗೆದುಕೊಂಡ ಯಾವುದೇ ಕೆಲಸವನ್ನು ಹೊಣೆಗಾರಿಕೆಯಿಂದ ಮಾಡಲು ಕಲಿಯುವುದು ತುಂಬ ಅಗತ್ಯವಾಗಿದೆ. ಈ ಹೊಣೆಗಳನ್ನು ಸಣ್ಣ ಪ್ರಾಯದಲ್ಲಿಯೇ ನಿಭಾಯಿಸಲು ಕಲಿತರೆ ಒಳ್ಳೇದು. ಒಳ್ಳೆ ಅಪ್ಪನಾಗಲು, ಅಮ್ಮನಾಗಲು, ಒಳ್ಳೆಯ ಗಂಡ, ಒಳ್ಳೆಯ ಹೆಂಡತಿಯಾಗಲು, ಒಳ್ಳೆಯ ನಾಯಕನಾಗಲು, ಒಳ್ಳೆಯ ಮ್ಯಾನೇಜರ್ ಆಗಲು ಅದಕ್ಕೆ ಸಂಬಂಧಪಟ್ಟ ಹೊಣೆಗಾರಿಕೆಗಳನ್ನು ನಿಭಾಯಿಸಲು ಕಲಿತರೆ ಯಶಸ್ಸು ಖಂಡಿತ.

5. PUNCTUALITY (ಸಮಯ ಪ್ರಜ್ಞೆ)
ಎಷ್ಟೋ ಜನರು ಸೋಲುವಂತಹ ಏರಿಯಾ ಇದು. ಸಮಯವನ್ನು ನಿರ್ವಹಣೆ ಮಾಡುವುದು ಸುಲಭ ಅಲ್ಲ. ತುಂಬಾ ಶಕ್ತಿಶಾಲಿಯಾದ ಇಚ್ಛಾಶಕ್ತಿಯು ಇದ್ದರೆ ಮಾತ್ರ ಸಮಯವನ್ನು ಗೆಲ್ಲಬಹುದು. ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಗಳು ಆರಂಭವಾಗಿ ದಶಕಗಳು ಕಳೆದರೂ ಅವರು ನಡೆಸುವ ಒಂದೊಂದು ಕಾರ್ಯಕ್ರಮ ಕೂಡ ಸಮಯಕ್ಕೆ ಸರಿಯಾಗಿ ಆರಂಭವಾಗಿ, ಸಮಯಕ್ಕೆ ಸರಿಯಾಗಿ ಮುಗಿಯುವುದು ಅವರ ಹೆಗ್ಗಳಿಕೆ. ಅದು ದೊಡ್ಡ ಸಮ್ಮೇಳನ ಆಗಿರಲಿ, ನುಡಿಸಿರಿ ಆಗಲಿ, ವಿರಾಸತ್ ಆಗಲಿ ಆಳ್ವರು ಸಮಯವನ್ನು ಮೀರಿದ್ದೇ ಇಲ್ಲ. ಹೊತ್ತಿಗೆ ತಡ ಮಾಡಿ ಬಂದ ರಾಜ್ಯದ ಮುಖ್ಯಮಂತ್ರಿಯನ್ನು ಕೂಡ ವೇದಿಕೆಯ ಕೆಳಗೆ ಕೂರಿಸಿ ಅವರು ಕಾರ್ಯಕ್ರಮ ಮಾಡಿದ್ದಾರೆ. ಈ ‘ ಟೀ’ ಗೆಲ್ಲಲು ತುಂಬಾ ಪರಿಶ್ರಮ ಬೇಕು. ಆದರೆ ಅಸಾಧ್ಯವಲ್ಲ.

6. CREDIBILITY (ವಿಶ್ವಾಸಾರ್ಹತೆ)
ಇವತ್ತು ಯಾವುದೇ ವಸ್ತುವನ್ನು ನಾವು ಖರೀದಿ ಮಾಡಲು ಹೊರಟಾಗ ಅದೇ ಬ್ರಾಂಡ್ ಬೇಕು, ಇದೇ ಬ್ರಾಂಡ್ ಬೇಕು ಎಂದು ಹುಡುಕುತ್ತೇವೆ. ಉದಾಹರಣೆಗೆ ಕೈ ಗಡಿಯಾರ ಬೇಕಾದರೆ ಟೈಟಾನ್, ಮೊಬೈಲ್ ಬೇಕಾದರೆ ಸಾಮಸಂಗ್, ಬೈಕ್ ಬೇಕಾದರೆ ಹೊಂಡಾ…. ಹೀಗೆ! ಯಾಕೆ ನಾವು ಬ್ರಾಂಡ್‌ಗಳ ಹಿಂದೆ ಹೋಗುತ್ತೇವೆ ಅಂದರೆ ಅವುಗಳು ಸೃಷ್ಟಿಸಿರುವ ವಿಶ್ವಾಸಾರ್ಹತೆ! ಹಾಗೆಯೇ ನಾವು ಬೇರೆಯವರಿಗೆ ಕೊಡುವ ಮಾತು ಮತ್ತು ಭರವಸೆಗಳು ಎಷ್ಟು ಉಳಿಸಿಕೊಡುತ್ತೇವೆ, ಜನರು ನಮ್ಮನ್ನು ಎಷ್ಟು ನಂಬುತ್ತಾರೆ ಅನ್ನುವುದು ನಮ್ಮ ಬ್ರಾಂಡ್ ವ್ಯಾಲ್ಯೂ. ಅದು ಹೆಚ್ಚಾದಷ್ಟು ನಾವು ಗೆಲ್ಲುತ್ತೇವೆ.

7. ACCOUNTABILITY ( ಬದ್ಧತೆ)
ಇಂದು ಕಾರ್ಪೊರೇಟ್ ಕಂಪೆನಿಗಳು ತಮ್ಮ ಪ್ರತಿಯೊಬ್ಬ ನೌಕರರಲ್ಲಿ ಹುಡುಕುವುದು ಬದ್ಧತೆಯನ್ನು ಅಂದರೆ ನೀವು ನಂಬಲೇ ಬೇಕು! ನಿಮಗೆ ನೀಡಿದ ಯಾವುದೇ ಒಂದು ಪ್ರಾಜೆಕ್ಟ್, ಯಾವುದೇ ಟಾಸ್ಕ್‌ಗಳನ್ನು ನೀವು ಟೈಮ್ ಬೌಂಡರಿಯಲ್ಲಿ ಎಷ್ಟು ಚೆನ್ನಾಗಿ ಪೂರ್ತಿ ಮಾಡುತ್ತೀರಿ ಅನ್ನುವುದು ನಿಮ್ಮ ಬದ್ಧತೆ. ರಿಸ್ಕ್ ಫ್ಯಾಕ್ಟರ್ ಇದ್ದರೂ, ಸವಾಲುಗಳು ಎದುರಾದರೂ ನೀವು ಅವುಗಳನ್ನು ಹೇಗೆ ಗೆಲ್ಲುತ್ತೀರಿ ಅನ್ನುವುದೇ ನಿಮ್ಮ ಬದ್ಧತೆ.
ವಾಜಪೇಯಿ ಪ್ರಧಾನಿ ಆಗಿದ್ದಾಗ ಪೋಕ್ರಾನಿನಲ್ಲಿ ನಡೆದ ಅಣು ಪರೀಕ್ಷೆಯ ಹೊಣೆಯನ್ನು ಆಗಿನ ವಿಜ್ಞಾನಿ ಅಬ್ದುಲ್ ಕಲಾಂ ಅವರು ಎಷ್ಟು ಚೆನ್ನಾಗಿ ನಿಭಾವಣೆ ಮಾಡಿದರು ಅನ್ನುವುದನ್ನು ಇಡೀ ಭಾರತ ಮೆಚ್ಚಿಕೊಂಡಿತ್ತು.

8. ACCEPTABILITY (ಸ್ವೀಕಾರಾರ್ಹತೆ)
ಒಂದು ಗುಂಪಲ್ಲಿ ಅಥವಾ ಸಮಾಜದಲ್ಲಿ ನಾವು ಕೆಲಸ ಮಾಡುವಾಗ ಎಲ್ಲರ ವಿಶ್ವಾಸವನ್ನು ಗೆಲ್ಲುವುದು ಸುಲಭ ಅಲ್ಲ. ಸ್ವಾತಂತ್ರ್ಯ ಹೋರಾಟದ ಕಾಲದ ಶಿಖರ ಬಿಂದುವಿನಲ್ಲಿ ಇಡೀ ಭಾರತದ ಮೂವತ್ತಮೂರು ಕೋಟಿ ಜನರು ಗಾಂಧಿಯವರ ಮಾತನ್ನು ಶ್ರದ್ಧೆಯಿಂದ ಆಲಿಸುತ್ತಿತ್ತು. ಅದಕ್ಕೆ ಕಾರಣ ಗಾಂಧಿಯವರು ಭಾರತಕ್ಕೆ ಸ್ವಾತಂತ್ರ್ಯ ಖಂಡಿತವಾಗಿಯೂ ಗಳಿಸಿಕೊಡುತ್ತಾರೆ ಎನ್ನುವ ನಂಬಿಕೆ. ಹಾಗೆ ಒಂದು ತಂಡದ ಪ್ರಶ್ನಾತೀತ ನಂಬಿಕೆಯನ್ನು ಇವತ್ತಿನ ಕಾಲದಲ್ಲಿ ಗೆಲ್ಲುವುದು ಖಂಡಿತ ಸುಲಭ ಅಲ್ಲ. ಯಾಕೆಂದರೆ ಪ್ರತೀ ಒಬ್ಬರೂ ತಮ್ಮ ತಮ್ಮ ಇಗೋ ಮಟ್ಟದಿಂದ ಕೆಳಗೆ ಬರುವುದೇ ಇಲ್ಲ. ಆದರೆ ಇತರರ ವಿಶ್ವಾಸವನ್ನು ದೀರ್ಘಕಾಲ ಉಳಿಸಿಕೊಳ್ಳುವುದು ತುಂಬಾ ಕಷ್ಟ ಆದರೂ ಅಸಾಧ್ಯ ಅಲ್ಲ.

9. FLEXIBILITY (ನಮನೀಯತೆ)
ಇವತ್ತಿನ ಕಾಲದಲ್ಲಿ ಹೆಚ್ಚು ಪಾಲಿಸಿ ಬೌಂಡ್ ಆದ ವ್ಯಕ್ತಿಗಳು ಗೆಲ್ಲುವ ಅವಕಾಶಗಳು ಕಡಿಮೆ. ತಮ್ಮ ಪಾಲಿಸಿಗಳ ಬಗ್ಗೆ ತುಂಬಾ ರಿಜಿಡ್ ಆಗುವುದು ಬೇಡ ಅನ್ನುವವನು ನಾನು. ಸಣ್ಣ ಪುಟ್ಟದಾದ ಹೊಂದಾಣಿಕೆಗಳು ಇಂದು ಅಗತ್ಯ. ವಾಜಪೇಯಿ ಅಂತಹ ಮಹಾ ನಾಯಕರು ಹದಿಮೂರು ರಾಜಕೀಯ ಪಕ್ಷಗಳ ಜೊತೆ ಸರಕಾರ ನಡೆಸುವ ಅನಿವಾರ್ಯತೆ ಬಂದಾಗ ಎಷ್ಟೊಂದು ಹೊಂದಾಣಿಕೆ ಮಾಡಬೇಕಾಯಿತು ಎಂಬುದನ್ನು ನಾವು ನೋಡಿದ್ದೇವೆ. ಈ ಹೊಂದಾಣಿಕೆಗಳು ನಮ್ಮ ಸಂಬಂಧಗಳನ್ನು ಉಳಿಸಿಕೊಳ್ಳಲು ನಮಗೆ ಸಹಾಯ ಮಾಡುವುದರ ಜೊತೆಗೆ ಟೀಮ್ ಶಕ್ತಿಯನ್ನು ಬಲಪಡಿಸಲು ನಮಗೆ ಸಹಾಯ ಮಾಡುತ್ತದೆ.

10. ORIGINALITY ( ಸ್ವಂತಿಕೆ)
ಇದು ಇಂದು ನಿಜವಾದ ಗೆಲುವಿನ ಗುಟ್ಟು. ದೂರದಿಂದ ಯಾವುದೇ ಸಿನೆಮಾದ ಹಾಡುಗಳನ್ನು ಕೇಳುವಾಗ ಅದು ವಿಜಯಪ್ರಕಾಶ್ ಅವರ ಧ್ವನಿಯಾ, ಬಾಲು ಸರ್ ಅವರ ಧ್ವನಿಯಾ, ಯೇಸುದಾಸ್ ಅವರ ಧ್ವನಿಯಾ, ಸೋನು ನಿಗಮ್ ಅವರ ಧ್ವನಿಯಾ ಎಂದು ಪತ್ತೆ ಹಚ್ಚುವುದು ಕಷ್ಟ ಆಗುವುದಿಲ್ಲ ಅಲ್ಲವಾ? ಯಾಕೆಂದರೆ ಅದು ಅವರದ್ದೇ ಒರಿಜಿನಾಲಿಟಿ! ಅದನ್ನು ಯಾರೂ ಕಾಪಿ ಮಾಡುವುದು ಸಾಧ್ಯವೇ ಇಲ್ಲ. ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಹೊಡೆತಗಳನ್ನು, ಅಮಿತಾಬ್ ಬಚ್ಚನ್ ಧ್ವನಿಯನ್ನು ಬಹಳ ಮಂದಿ ಕಾಪಿ ಮಾಡಲು ಪ್ರಯತ್ನ ಮಾಡಿ ಸೋತಿದ್ದಾರೆ. ಆದ್ದರಿಂದ ನಮ್ಮದೇ ಆದ ಸ್ವಂತದ ಪ್ರತಿಭೆಯನ್ನು ನಾವು ಬೆಳೆಸುತ್ತಾ ಹೋದರೆ ನಾವು ಖಂಡಿತ ಲೆಜೆಂಡ್ ಆಗಬಹುದು.

ಈ ಹತ್ತು ‘ಟೀ’ ಗಳು ನಮ್ಮ ಪರ್ಸನಾಲಿಟಿಯನ್ನು ಬಿಲ್ಡ್ ಮಾಡುವುದರ ಜೊತೆಗೆ ನಮ್ಮ ಯಶಸ್ಸನ್ನು ಖಾತರಿ ಪಡಿಸುವುದು ಖಂಡಿತ. ನಿಮಗೆ ಶುಭವಾಗಲಿ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ದುಡ್ಡನ್ನು ನಾವು ರೂಲ್‌ ಮಾಡಬೇಕು, ದುಡ್ಡು ನಮ್ಮನ್ನು ರೂಲ್‌ ಮಾಡುವಂತೆ ಆಗಬಾರದು

Exit mobile version