Site icon Vistara News

ರಾಜ ಮಾರ್ಗ ಅಂಕಣ : ನೀವು ನಂಬಲೇಬೇಕು! 7 ಸಾವಿರ ವರ್ಷದ ಹಿಂದೆಯೇ ಭಾರತದಲ್ಲಿ 7,32,000 ಗುರುಕುಲಗಳಿದ್ದವು!

gurukula Education System

ಶಿಕ್ಷಣ ಕ್ಷೇತ್ರಕ್ಕೆ ಭಾರತದ ಮಹೋನ್ನತ ಕೊಡುಗೆ ಗುರುಕುಲ ಪದ್ಧತಿ (ಭಾಗ-1)

ವಿಶ್ವದ ಜ್ಞಾನವಲಯಕ್ಕೆ (Education sector) ಭಾರತದ ಮಹೋನ್ನತ ಕೊಡುಗೆಗಳನ್ನು ಎಂದು ನಾವು ಪಟ್ಟಿಮಾಡಲು ಹೊರಟಾಗ ನಮಗೆ ಸಿಗುವ ಮೊದಲ ಮಾದರಿ ಎಂದರೆ ಗುರುಕುಲ ಶಿಕ್ಷಣ ಪದ್ಧತಿ (Gurukula Education system). ಇಡೀ ಜಗತ್ತು ಕಣ್ಣು ತೆರೆದು ನೋಡುವ ಹೊತ್ತಿನಲ್ಲಿ ಭಾರತವು ಜ್ಞಾನ ಶಿಖರವನ್ನು ಏರಿ ಆಗಿತ್ತು! ಭಾರತಕ್ಕೆ ಬಂದ ಯಾವುದೇ ವಿದೇಶೀ ಯಾತ್ರಿಕರು ಭಾರತದ ಜ್ಞಾನ ಶಿಖರಗಳ ಬಗ್ಗೆ ಬೆರಗು ಪಡುತ್ತಾ ಬರೆದಿರುವುದನ್ನು ಓದುತ್ತಾ ಹೋದಾಗ ನಮಗೆ ಹೆಮ್ಮೆ ಮೂಡುತ್ತದೆ. ಅದಕ್ಕೆಲ್ಲ ಕಾರಣ ಆದದ್ದು ಭಾರತದ ಗುರುಕುಲ ಶಿಕ್ಷಣ ಪದ್ಧತಿ (ರಾಜ ಮಾರ್ಗ ಅಂಕಣ)

ಪ್ರಾಚೀನ ಭಾರತದಲ್ಲಿ ಇದ್ದವು 7,32,000 ಗುರುಕುಲಗಳು!

ಭಾರತದಲ್ಲಿ ಗುರುಕುಲಗಳ ಪರಂಪರೆಯು ನಮಗೆ ಪರಿಚಯ ಆಗುವುದು ಕ್ರಿಸ್ತ ಪೂರ್ವ 5000ನೇ ಇಸವಿಯಲ್ಲಿ! ಅಂದರೆ ಈಗಕ್ಕಿಂತ 7000 ವರ್ಷಗಳ ಹಿಂದೆ. ಅಂದರೆ ಗ್ರೀಸ್, ಈಜಿಪ್ಟ್, ರೋಮ್ ವಿವಿಗಳು ಆರಂಭವಾಗುವ ಸಾವಿರಾರು ವರ್ಷಗಳ ಮೊದಲೇ ಭಾರತದಲ್ಲಿ ಜ್ಞಾನವು ಭಾರೀ ಮುಂದುವರಿದಿತ್ತು. ಜಗತ್ತಿನ ಅತ್ಯಂತ ಪುರಾತನವಾದ ವಿವಿಗಳಾದ ನಳಂದಾ ಮತ್ತು ತಕ್ಷಶಿಲಾಗಳು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಹಂಚುತ್ತಿದ್ದವು. ವಿದೇಶದ ವಿದ್ಯಾರ್ಥಿಗಳು ಕೂಡ ಜ್ಞಾನವನ್ನು ಅರಸಿಕೊಂಡು ಭಾರತಕ್ಕೆ ಬರುತ್ತಿದ್ದ ಉದಾಹರಣೆಗಳು ಇದ್ದವು.

ತಕ್ಷಶಿಲಾ ವಿವಿ ಹೀಗಿತ್ತು

ಪರಂಪರೆಯನ್ನು ಬೆಳಗಿದ ಮಹಾ ಗುರುಗಳು

ಅದರಲ್ಲಿಯೂ ತಕ್ಷಶಿಲಾ ಜಗತ್ತಿನ ಅತೀ ದೊಡ್ಡ ವಿವಿ ಆಗಿತ್ತು. ಜಗತ್ತಿನ ಎಲ್ಲ ಜ್ಞಾನವನ್ನು ಆಪೋಶನ ಮಾಡಿಕೊಂಡ ಸಾವಿರಾರು ವಿದ್ವಾಂಸರು ಅಲ್ಲಿ ಗುರುಗಳಾಗಿ ಪಾಠ ಮಾಡುತ್ತಿದ್ದರು. ಒಬ್ಬೊಬ್ಬ ಗುರುಗಳು ಹತ್ತಾರು ವಿಷಯಗಳಲ್ಲಿ ಪಾರಮ್ಯ ಪಡೆದಿದ್ದರು. ಸುಮಾರು ಆರುವತ್ತು ವಿಷಯಗಳನ್ನು ಅಲ್ಲಿ ಕಲಿಯುವ ಅವಕಾಶ ಇತ್ತು! ವಿದೇಶಗಳಿಂದ ಜ್ಞಾನವನ್ನು ಹುಡುಕಿ ಬರುವ ವಿದ್ಯಾರ್ಥಿಗಳಿಗೆ ಅಲ್ಲಿ ಪ್ರವೇಶ ಪರೀಕ್ಷೆ ಇತ್ತು. ಒತ್ತಡ ಇಲ್ಲದೆ ಕಲಿಯುವ ವ್ಯವಸ್ಥೆಯು ಅಲ್ಲಿ ಇತ್ತು. ಶಿಸ್ತು ಮತ್ತು ಅನುಶಾಸನಕ್ಕೆ ತುಂಬಾ ಮಹತ್ವ ಇತ್ತು. ಅಲ್ಲಿ ಕಲಿತು ಹೊರಬರುವ ವಿದ್ಯಾರ್ಥಿಗಳು ಜಗತ್ತನ್ನೆ ಗೆಲ್ಲುವ ಸಾಮರ್ಥ್ಯ ಪಡೆಯುತ್ತಿದ್ದರು. ಅಲ್ಲಿ ಪಡೆಯುವ ಜ್ಞಾನಕ್ಕೆ ಆಕಾಶವೇ ಮಿತಿ ಆಗಿತ್ತು.

ನಳಂದ ವಿಶ್ವವಿದ್ಯಾಲಯ

ಅದು ಆಶ್ರಮ ವ್ಯವಸ್ಥೆ ಆಗಿತ್ತು

ಗುರುಗಳು ಕಾಡಿನ ನಡುವೆ ಸುಂದರವಾದ ಪರಿಸರವನ್ನು ಆರಿಸಿಕೊಂಡು ಅಲ್ಲಿ ತಮ್ಮ ಗುರುಕುಲವನ್ನು ಸ್ಥಾಪನೆ ಮಾಡುತ್ತಿದ್ದರು. ಅಲ್ಲಿ ಎಲ್ಲರಿಗೂ ಮುಕ್ತವಾದ ಪ್ರವೇಶವು ದೊರೆಯುತ್ತಿತ್ತು. ಯಾವುದೇ ಶುಲ್ಕ ಇಲ್ಲದ ಶಿಕ್ಷಣ ವ್ಯವಸ್ಥೆ ಅದು. ಯಾರೂ ವಿದ್ಯೆಯನ್ನು ಮಾರಬಾರದು ಎನ್ನುವುದನ್ನು ಆಗಿನ ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿತ್ತು. ಅಲ್ಲಿ ಒತ್ತಡವಿಲ್ಲದ ಶಿಕ್ಷಣ ವ್ಯವಸ್ಥೆ ಇತ್ತು. ಪರೀಕ್ಷೆಗಳು ಇರಲೇ ಇಲ್ಲ.

ಗುರುಕುಲದಲ್ಲಿ ಸಮಾನತೆ ಇತ್ತು

ಗುರುಕುಲ ಪದ್ಧತಿಯಲ್ಲಿ ಸಮಾನತೆ ಇತ್ತು. ಯಾವ ಗುರುಕುಲದಲ್ಲಿ ಅರಸನ ಮಗನಾದ ಕೃಷ್ಣನು ಕಲಿಯುತ್ತಿದ್ದನೋ ಅದೇ ಗುರುಕುಲದಲ್ಲಿ ಬಡವನಾದ ಕುಚೇಲನೂ ಕಲಿಯುತ್ತಿದ್ದನು. ಅರಸನ ಮಕ್ಕಳಾದರೂ ಅವರು ಏಳು ವರ್ಷಗಳ ಕಾಲ ಆಶ್ರಮದಲ್ಲಿ ಇದ್ದು ಗುರುವಿನ ಸೇವೆಯನ್ನು ಮಾಡುತ್ತ ಜ್ಞಾನವನ್ನು ಪಡೆಯಬೇಕಾಗಿತ್ತು. ರಾಜ ಮಹಾರಾಜರ ಮಕ್ಕಳಾದರೂ ಅವರು ಮಧ್ಯಾಹ್ನದ ಊಟವನ್ನು ಭಿಕ್ಷೆಯ ಮೂಲಕ ಸಂಪಾದನೆ ಮಾಡಬೇಕಾಗಿತ್ತು. ಅದರಿಂದ ಅವರ ಅಹಂಕಾರ ನಾಶ ಆಗುತ್ತಿತ್ತು. ರಾತ್ರಿ ಮಲಗುವ ಮೊದಲು ಗುರುವಿನ ಮತ್ತು ಗುರುಪತ್ನಿಯ ಕಾಲು ಒತ್ತುತ್ತ ಅವರ ಸೇವೆಯನ್ನು ಮಾಡಬೇಕಾಗಿತ್ತು. ಅಲ್ಲಿ ಬುದ್ಧಿವಂತ, ದಡ್ಡ ಎಂಬ ವರ್ಗೀಕರಣ ಇರಲಿಲ್ಲ. ಪ್ರತಿಯೊಬ್ಬರೂ ಅವರವರ ವೇಗದಲ್ಲಿ ಕಲಿಯುವ ಅವಕಾಶ ಇತ್ತು.

ಅನುಭವದ ಒರತೆಯೇ ಗುರುಕುಲ ಶಿಕ್ಷಣ

ಅಲ್ಲಿ ಬಾಯಿಪಾಠವನ್ನು ಮಾಡಿಸುವುದಕ್ಕಿಂತ ಅನುಭವವೇ ಗುರುವಾಗಿ ಮುನ್ನಡೆಸುತ್ತಿತ್ತು. ಗುರುಗಳು ಶಿಷ್ಯಂದಿರ ಮೂಲಕ ಕೃಷಿಯ ಮತ್ತು ತೋಟದ ಕೆಲಸಗಳನ್ನು ಮಾಡಿಸುತ್ತಿದ್ದರು. ಗುರುಕುಲದಲ್ಲಿ ಬಹುದೊಡ್ಡ ಗೋಶಾಲೆಯು ಇರುತ್ತಿತ್ತು. ಶಿಷ್ಯರು ಯಾವ ಹೇಸಿಗೆಯನ್ನೂ ಪಟ್ಟುಕೊಳ್ಳದೆ ಗೋ ಶಾಲೆಯ ಸ್ವಚ್ಛತೆ ಮೊದಲಾದ ಕೆಲಸಗಳನ್ನು ಮಾಡಬೇಕಾಗಿತ್ತು. ಕೃಷಿ, ತೋಟಗಾರಿಕೆ, ಏತ ನೀರಾವರಿ, ತರಕಾರಿ ತೋಟ, ಜೇನು ಕೃಷಿ, ಮಳೆ ನೀರು ಕೊಯ್ಲು, ನಕ್ಷತ್ರ ವನ, ಮೂಲಿಕಾ ವನ, ಸೌರ ಗಡಿಯಾರ, ಮೊದಲಾದವುಗಳನ್ನು ಗುರುಗಳು ತಮ್ಮ ಶಿಷ್ಯಂದಿರ ಮೂಲಕ ಮಾಡಿಸುತ್ತಿದ್ದರು. ಗುರುಗಳು ಇಡೀ ಹಗಲು, ರಾತ್ರಿ ತನ್ನ ಶಿಷ್ಯರ ಜೊತೆಗೆ ಇದ್ದು ಮಾರ್ಗದರ್ಶನ ಮಾಡುತ್ತಿದ್ದರು. ಗುರು ಶಿಷ್ಯ ಸಂಬಂಧಗಳಿಗೆ ಅಲ್ಲಿ ನಿಜವಾದ ಮೌಲ್ಯವು ಇರುತ್ತಿತ್ತು.

‘ಶಿಷ್ಯಾದ್ ಇಚ್ಛೆತ್ ಪರಾಜಯಂ’ ( ಶಿಷ್ಯನಿಂದ ಪರಾಜಯವು ಪ್ರಾಪ್ತಿ ಆಗಲಿ) ಎನ್ನುವುದು ಪ್ರತೀ ಒಬ್ಬ ಗುರುವಿನ ಮಂತ್ರವೇ ಆಗಿತ್ತು.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಒಬ್ಬ ಗುರುವಿನ ಸಂಕಲ್ಪಗಳು; ವಿದ್ಯಾರ್ಥಿಗಳು ಮೆಚ್ಚುವ ಶಿಕ್ಷಕನಾಗುವುದು ನನ್ನ ಆದ್ಯತೆ

ಪರಿಸರದ ಶಿಶುವಾಗಿ ಕಲಿಕೆ

ಎಳವೆಯಲ್ಲಿ ತನ್ನ ಹೆತ್ತವರನ್ನು ಬಿಟ್ಟು ಗುರುಕುಲವನ್ನು ಪ್ರವೇಶ ಮಾಡಿದ ಮಕ್ಕಳಿಗೆ ಮುಂದಿನ ಏಳು ವರ್ಷಗಳ ಕಾಲ ನಾಗರಿಕತೆಯ ಸಂಪರ್ಕವೇ ಇರಲಿಲ್ಲ. ಅವರು ಪರಿಸರದ ಶಿಶುಗಳಾಗಿ ಕಲಿಯಬೇಕು ಎಂದು ಗುರುಗಳ ಅಭಿಪ್ರಾಯ ಆಗಿತ್ತು. ದಟ್ಟವಾದ ಕಾಡಿನ ನಡುವೆ ಪ್ರಾಣಿ, ಪಕ್ಷಿಗಳ ಕಲರವದ ಹಿನ್ನೆಲೆಯಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಕಲಿಯುವ ವ್ಯವಸ್ಥೆ ಇತ್ತು. ಬದುಕಿಗೆ ಪೂರಕವಾದ ಪರಿಸರ ಶಿಕ್ಷಣ, ಕೃಷಿ ಶಿಕ್ಷಣ, ಜಲ ಶಿಕ್ಷಣ….ಇವೆಲ್ಲವನ್ನೂ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಪ್ರಾಂಜಲ ಮನಸ್ಸಿನಿಂದ ಧಾರೆ ಎರೆದು ಕೊಡುತ್ತಿದ್ದರು.

(ಮುಂದುವರಿಯುತ್ತದೆ)

Exit mobile version