ಕ್ರಿಕೆಟ್ ಲೆಜೆಂಡ್ ಆಟಗಾರರಾದ ರಾಹುಲ್ ದ್ರಾವಿಡ್ ಅವರಿಗೆ ಕಳೆದ ವರ್ಷ ಬೆಂಗಳೂರು ವಿವಿಯು ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಆದರೆ ಎಲ್ಲರೂ ಆಶ್ಚರ್ಯಪಡುವಂತೆ ದ್ರಾವಿಡ್ ಈ ಗೌರವವನ್ನು ನಿರಾಕರಣೆ ಮಾಡಿದರು! ಅದಕ್ಕೆ ಅವರು ಕೊಟ್ಟ ಕಾರಣವು ಕೂಡ ಸರಿಯಾಗಿಯೇ ಇತ್ತು.
ʻʻನನ್ನ ಹೆಂಡತಿ ಡಾಕ್ಟರ್. ಆ ಉನ್ನತ ಪದವಿಯನ್ನು ಪಡೆಯಲು ಅವರು ವರ್ಷಾನುಗಟ್ಟಲೆ ಹಗಲು ರಾತ್ರಿ ಅಭ್ಯಾಸ ಮಾಡಿದ್ದಾರೆ. ನನ್ನ ಅಮ್ಮ ಓರ್ವ ಕಲಾ ಶಿಕ್ಷಕಿ ಆಗಿದ್ದರು. ಅವರು ಡಾಕ್ಟರೇಟ್ ಪಡೆಯಲು 50 ವರ್ಷ ಸಾಧನೆಯನ್ನು ಮಾಡಿದ್ದಾರೆ. ನಾನು ಓರ್ವ ಕ್ರಿಕೆಟರ್. ನನ್ನ ರಾಷ್ಟ್ರಕ್ಕಾಗಿ ಒಂದಷ್ಟು ಹೊತ್ತು ಕ್ರಿಕೆಟ್ ಆಟವನ್ನು ಆಡಿದ್ದೇನೆ. ಅದಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಕೂಡ ಪಡೆದಿದ್ದೇನೆ. ಕ್ರಿಕೆಟಲ್ಲಿ ಅಂತಹ ದೊಡ್ಡದಾದ ಅಧ್ಯಯನ ನಾನೇನೂ ಮಾಡಿಲ್ಲ. ಆದ್ದರಿಂದ ನನಗೆ ಈ ಗೌರವ ಡಾಕ್ಟರೇಟ್ ಬೇಡ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳುʼʼ ಎಂದು ಮಾತು ಮುಗಿಸಿದರು.
ಜಗತ್ತಿನ ಮಹಾ ವಿಜ್ಞಾನಿ ಆಗಿದ್ದ ಆಲ್ಬರ್ಟ್ ಐನ್‌ಸ್ಟೀನ್ 1951ರಲ್ಲಿ ಇಸ್ರೇಲ್ ದೇಶದ ಪ್ರಧಾನ ಮಂತ್ರಿ ಆಗುವ ಆಮಂತ್ರಣವನ್ನು ಪಡೆದಿದ್ದರು. ನಾನೊಬ್ಬ ಸಾಮಾನ್ಯ ಭೌತ ವಿಜ್ಞಾನಿ. ನನಗೆ ಆಡಳಿತ ಏನೇನೂ ಗೊತ್ತಿಲ್ಲ ಎಂದು ಹೇಳಿ ಅವರು ಇಸ್ರೇಲ್ ಪ್ರಧಾನಿಯ ಹುದ್ದೆಯನ್ನು ನಯವಾಗಿ ನಿರಾಕರಣೆ ಮಾಡಿದ್ದರು!
ಅದೇ ರೀತಿ ಪೇರಲ್ಮನ್ ಎಂಬ ಮೇಧಾವಿ ಗಣಿತಜ್ಞ ತನಗೆ ನೊಬೆಲ್ ಪ್ರಶಸ್ತಿ ದೊರೆತಾಗ ಅದರ ಜೊತೆಗೆ ದೊರೆತ ಅಪಾರ ಮೊತ್ತದ ಹಣವನ್ನು ನಿರಾಕರಣೆ ಮಾಡಿದ್ದರು! ನನಗೆ ದುಡ್ಡಿನ ಅವಶ್ಯಕತೆಯೇ ಇಲ್ಲ ಅನ್ನುವುದು ಅವರ ಅಭಿಪ್ರಾಯ ಆಗಿತ್ತು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸರ್ದಾರ್ ಪಟೇಲರು ಭಾರತದ ಮೊದಲ ಪ್ರಧಾನಿ ಆಗುವ ಎಲ್ಲಾ ಅವಕಾಶ ಪಡೆದಿದ್ದರು. ಕಾಂಗ್ರೆಸ್ ಕಾರ್ಯಕಾರಿಣಿಯು ಅವರಿಗೆ ಭಾರಿ ಬಹುಮತವನ್ನು ಕೊಟ್ಟಿತ್ತು. ಆದರೆ ಗಾಂಧೀಜಿ ನೆಹರೂ ಪ್ರಧಾನಿ ಆಗಲಿ ಎಂದರು. ಅದಕ್ಕೆ ಅವರದ್ದೇ ಆದ ಕಾರಣಗಳು ಇದ್ದವು. ಅದ್ಯಾವುದನ್ನೂ ಪಟೇಲರು ಪ್ರಶ್ನೆ ಮಾಡಲು ಹೋಗಲಿಲ್ಲ. ಗಾಂಧೀಜಿ ಮಾತಿಗೆ ಒಪ್ಪಿ ಪ್ರಧಾನಿಯ ಹುದ್ದೆಯ ಗೌರವವನ್ನು ನೆಹರೂ ಅವರಿಗೆ ಕೊಟ್ಟು ತೆರೆಯ ಮರೆಯಲ್ಲಿ ನಿಂತರು.
ಅಬ್ದುಲ್ ಕಲಾಂ ಅವರಿಗೆ ಭಾರತರತ್ನ ಪ್ರಶಸ್ತಿಯು ಬಂದಾಗ ಅವರು ಪ್ರಶಸ್ತಿ ಸ್ವೀಕಾರ ಮಾಡಿ ಹೇಳಿದ ಮಾತು ನನಗೆ ವಿಸ್ಮಯ ಮೂಡಿಸಿದೆ- ನನಗೆ ಏನೂ ಸಂತೋಷ ಆಗ್ತಾ ಇಲ್ಲ. ಏಕೆಂದರೆ ನನ್ನ ಗುರುಗಳಾದ ವಿಕ್ರಮ ಸಾರಾಭಾಯಿ ಅವರಿಗೆ ನನಗಿಂತ ಮೊದಲು ಭಾರತ ರತ್ನ ಪ್ರಶಸ್ತಿ ದೊರೆಯಬೇಕಿತ್ತು! ಆಗ ನನಗೆ ನಿಜವಾಗಿಯೂ ಸಂತೋಷ ಆಗುತ್ತಿತ್ತು!
ಬಹಳ ವರ್ಷಗಳ ಹಿಂದೆ ಬಳಕೆದಾರರ ವೇದಿಕೆಯ ಸಂಚಾಲಕರಾದ ಉಡುಪಿಯ ಡಾ. ರವೀಂದ್ರನಾಥ್ ಶಾನುಭೋಗ ಅವರಿಗೆ ಅತ್ಯಂತ ಪ್ರತಿಷ್ಠಿತ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿ ನೀಡಬೇಕು ಎಂದು ಸಮಿತಿಯವರು ತೀರ್ಮಾನಿಸಿ ಆಗಿತ್ತು. ಅವರನ್ನು ಒಪ್ಪಿಸಲು ಸಮಿತಿಯ ಪದಾಧಿಕಾರಿಗಳ ಜೊತೆ ನಾನು ಅವರ ಆಫೀಸಿಗೆ ಹೋಗಿದ್ದೆ. ಆ ಪ್ರಶಸ್ತಿಯು ಅತ್ಯಂತ ಪ್ರತಿಷ್ಠಿತ ಆಗಿತ್ತು ಮತ್ತು ಆ ಪ್ರಶಸ್ತಿಗೆ ಅವರು ಅತ್ಯಂತ ಅರ್ಹರಾಗಿದ್ದರು.
ಆದರೆ ಶಾನುಭೋಗರು ಆ ಗೌರವ ಪ್ರಶಸ್ತಿಯನ್ನು ಬಹಳ ಸ್ಪಷ್ಟವಾದ ಮಾತಲ್ಲಿ ನಿರಾಕರಣೆ ಮಾಡಿದ್ದರು. ಅದಕ್ಕೆ ಅವರು ನೀಡಿದ ಕಾರಣವೂ ಅದ್ಭುತ ಆಗಿತ್ತು.
ನಾನು ಯಾವುದೇ ಖಾಸಗಿ ರಂಗದ ಮತ್ತು ಸರ್ಕಾರಿ ವಲಯದ ಪ್ರಶಸ್ತಿ ಪಡೆಯುವುದಿಲ್ಲ ಎಂದು ಸಂಕಲ್ಪ ಮಾಡಿದ್ದೇನೆ. ನಾನು ಯಾರದಾದರೂ ಹಂಗಲ್ಲಿ ಬಿದ್ದರೆ ನನ್ನ ಹೋರಾಟಕ್ಕೆ ಮುಂದೆ ತೊಂದರೆ ಆಗಬಹುದು!
ಮುಂದೆ ಇನ್ನೊಂದು ಶ್ರೇಷ್ಠವಾದ ಖಾಸಗಿ ರಂಗದ ದೊಡ್ಡ ಪ್ರಶಸ್ತಿ ಅವರ ಕಾಲ ಬುಡಕ್ಕೆ ಬಂದಾಗ, ಸ್ವೀಕಾರ ಮಾಡಲು ಒತ್ತಾಯ ಹೆಚ್ಚಿದಾಗ ಅವರು ಮತ್ತೆ ನಿರಾಕರಿಸಿ ತನ್ನ ಬಳಕೆದಾರ ಹೋರಾಟದ ದೊಡ್ಡ ಫಲಾನುಭವಿಗಳಾದ ಶ್ರೀಮತಿ ಅಕ್ಕು ಮತ್ತು ಲೀಲಾ ಅವರಿಗೆ ಪ್ರಶಸ್ತಿಯನ್ನು ಕೊಡಿಸಿ ತಾವು ಕೆಳಗೆ ಕೂತು ಸಂಭ್ರಮಪಟ್ಟಿದ್ದರು.
ಹೀಗೆ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ನಿರಾಕರಣೆ ಮಾಡಿ ದೊಡ್ಡವರಾದ ಅನೇಕ ಮಹನೀಯರು ಇದ್ದಾರೆ. ಆ ಪ್ರಶಸ್ತಿಗಿಂತಲೂ ಅವರ ವ್ಯಕ್ತಿತ್ವ ದೊಡ್ಡದು ಅನ್ನುವುದು ನನ್ನ ಅಭಿಪ್ರಾಯ. ಸಣ್ಣ ಸಣ್ಣ ಪ್ರಶಸ್ತಿಗಳಿಗೂ ಲಾಬಿ ಮಾಡುವ, ಶಿಫಾರಸು ಮಾಡಿಸುವ ಮಂದಿಯನ್ನ ನೋಡಿದಾಗ ಈ ಮೇಲಿನವರು ನಿಜವಾಗಿಯೂ ಗ್ರೇಟ್ ಎಂದು ನನಗೆ ಅನ್ನಿಸಿದೆ. ಅವರಿಗೆ ನನ್ನ ನಮಸ್ಕಾರಗಳು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಪಂಡಿತ್ ಬಿರ್ಜು ಮಹಾರಾಜ್: ಕಥಕ್ ನೃತ್ಯ ಪ್ರಕಾರಕ್ಕೆ ತಾರಾಮೌಲ್ಯ ತಂದುಕೊಟ್ಟ ಮಹಾ ಗುರು