Site icon Vistara News

ರಾಜ ಮಾರ್ಗ ಅಂಕಣ | ರಕ್ಷಾಬಂಧನದ ಗೌರವ ಕಾಪಾಡಿದ ಮೊಗಲ್ ದೊರೆ ಹುಮಾಯೂನ್

humayoon Karnavathi

ಆಕೆ ಚಿತ್ತೂರಿನ ರಜಪೂತ ರಾಣಿಯಾದ ಕರ್ಣಾವತಿ. ಹಲವು ಕಡೆ ಕರ್ಮಾವತಿ ಎಂಬ ಉಲ್ಲೇಖ ಕೂಡ ದೊರೆಯುತ್ತದೆ. 15ನೆಯ ಶತಮಾನದಲ್ಲಿ ಮೇವಾಡವು ಚಿತ್ತೂರು ರಾಜ್ಯದ ರಾಜಧಾನಿ ಆಗಿತ್ತು. ರಾಣಾ ಸಂಗನು ಚಿತ್ತೂರು ರಾಜ್ಯದ ಧೀರ ರಜಪೂತ ಅರಸನಾಗಿದ್ದ. ಆತನ ಪತ್ನಿಯೇ ಈ ಕರ್ಣಾವತಿ. ಹೇಳಿ ಕೇಳಿ ರಜಪೂತರು ಮಹಾನ್ ರಾಷ್ಟ್ರಪ್ರೇಮಿಗಳು ಮತ್ತು ಸ್ವಾಭಿಮಾನಿಗಳು.

1526ರಲ್ಲಿ ದೆಹಲಿಯಲ್ಲಿ ಮೊಗಲ್ ದೊರೆಯಾದ ಬಾಬರನ ಆಳ್ವಿಕೆ ಆರಂಭವಾಯಿತು. ಆತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಸಲುವಾಗಿ ರಜಪೂತರ ರಾಜ್ಯವನ್ನು ಕಬಳಿಸಲು ಪ್ರಯತ್ನ ಮಾಡಿದ. ಆಗ ಎಲ್ಲಾ ರಜಪೂತರು ರಾಣಾ ಸಂಗನ ನೇತೃತ್ವದಲ್ಲಿ ಒಟ್ಟು ಸೇರಿ ಮೊಗಲರನ್ನು ಎದುರಿಸಿದರು. ಆದರೆ ಭೀಕರವಾದ ಯುದ್ಧದಲ್ಲಿ ಬಾಬರನ ಸೈನ್ಯದ ಕೈಮೇಲಾಯಿತು. ರಾಣಾ ಸಂಗನು ಗಾಯಗೊಂಡು ಮರಣಿಸಿದ. ಚಿತ್ತೂರು ಅನಾಥವಾಯಿತು. ರಾಣಿ ವಿಧವೆ ಆದಳು.

ಆದರೆ ರಾಣಿ ಕರ್ಣಾವತಿಯು ಸುಲಭದಲ್ಲಿ ಸೋಲು ಒಪ್ಪಿಕೊಳ್ಳುವ ಮಹಿಳೆ ಆಗಿರಲಿಲ್ಲ. ತನ್ನ ಇಬ್ಬರು ಮಕ್ಕಳಾದ ವಿಕ್ರಮಜಿತ ಮತ್ತು ಉದಯ ಸಿಂಗ್ ಅವರ ರಕ್ಷಣೆಯ ಭಾರವೂ ಆಕೆಯ ಮೇಲಿತ್ತು. ಆಕೆ ತನ್ನ ದೊಡ್ಡ ಮಗ ವಿಕ್ರಮಜಿತನನ್ನು ಮೇವಾಡದ ರಾಜನಾಗಿ ಘೋಷಿಸಿ ತಾನೇ ರಾಜ್ಯಭಾರವನ್ನು ಮಾಡಲು ತೊಡಗಿದಳು. ತನ್ನ ಪ್ರಜೆಗಳಿಗೆ ಧೈರ್ಯ ತುಂಬುವ ಎಲ್ಲ ಪ್ರಯತ್ನಗಳನ್ನೂ ಮಾಡಿದಳು.

ಆಗ ಪರಿಸ್ಥಿತಿಯ ಲಾಭ ಪಡೆಯುವ ದೃಷ್ಟಿಯಿಂದ ಗುಜರಾತಿನ ಬಹದ್ದೂರ್ ಷಾ ಎಂಬ ಶಕ್ತಿಶಾಲಿಯಾದ ಅರಸನು ಚಿತ್ತೂರಿನ ಮೇಲೆ ದಾಳಿ ಮಾಡಿದ. ರಾಣಿಯ ಸೈನ್ಯವು ಆಗಲೇ ಗಾಯಗೊಂಡು ಸಂಕಟ ಪಡುತ್ತಿತ್ತು. ರಾಜಕುಮಾರರು ಇಬ್ಬರೂ ಸಣ್ಣವರು.

ಆದರೆ ರಾಣಿಯು ತನ್ನ ರಜಪೂತ ಸೈನಿಕರಿಗೆ “ನಾವು ಹೋರಾಡೋಣ. ನೀವು ನನ್ನ ಚಿಂತೆಯನ್ನು ಮಾಡುವುದು ಬೇಡ. ನಮ್ಮ ಚಿತ್ತೂರಿಗಾಗಿ ಎದೆ ಕೊಟ್ಟು ಹೋರಾಟ ಮಾಡಿ” ಎಂದು ಧೈರ್ಯ ತುಂಬುವ ಕರೆಕೊಟ್ಟಳು.

ಆಕೆ ಪನ್ನಾ ಎಂಬ ದಾಸಿಯ ಸಹಾಯ ಪಡೆದು ತನ್ನ ಇಬ್ಬರೂ ಮಕ್ಕಳನ್ನು ತನ್ನ ತವರುಮನೆಗೆ ಕಳುಹಿಸಿದಳು. ತನ್ನ ಸೈನ್ಯಕ್ಕೆ ಧೈರ್ಯ ತುಂಬಿಸಿ ಕುದುರೆ ಏರಿ ಕತ್ತಿ ಝಳಪಿಸುತ್ತಾ ಯುದ್ಧಕ್ಕೆ ಇಳಿದೇ ಬಿಟ್ಟಳು. ಆದರೆ ಬಹದ್ದೂರ್ ಷಾನ ಬಹುದೊಡ್ಡ ಸೈನ್ಯದ ಮುಂದೆ ರಜಪೂತರ ಸೈನ್ಯ ಸೋಲುವ ಹಂತಕ್ಕೆ ಬಂದಿತು. ಆತನ ಸೇನೆಯು ಚಿತ್ತೂರಿನ ಕೋಟೆಯನ್ನು ಪ್ರವೇಶ ಮಾಡಿತು.

ಆಗ ರಕ್ಷಾಬಂಧನದ ಪರ್ವ ಕಾಲ. ತನ್ನ ರಾಜ್ಯವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ರಾಣಿಯು ಮೊಗಲ್ ದೊರೆಯಾದ ಹುಮಾಯೂನನ ನೆನಪು ಮಾಡಿಕೊಂಡಳು. ಆತನಿಗೆ ಒಂದು ಪತ್ರವನ್ನು ಬರೆದಳು.

ಅದರ ಜೊತೆ ರಕ್ಷಾಬಂಧನವನ್ನು ಇಟ್ಟು “ಅಣ್ಣಾ, ನಾನು ಕಷ್ಟದಲ್ಲಿ ಇದ್ದೇನೆ. ಸಹಾಯ ಮಾಡು” ಎಂದು ಎರಡೇ ಸಾಲು ಬರೆದು ದೆಹಲಿಗೆ ದೂತರ ಮೂಲಕ ಕಳುಹಿಸಿಕೊಟ್ಟಳು.

ಆ ಪತ್ರವನ್ನು ಓದಿದ ಕೂಡಲೇ ಮೊಗಲ್ ದೊರೆ ಹುಮಾಯೂನನ ಮನಸ್ಸು ಕರಗಿಹೋಯಿತು. ಅಣ್ಣಾ ಎಂಬ ಶಬ್ದವೇ ಅವನನ್ನು ಗಾಢವಾಗಿ ತಟ್ಟಿತು. ಆತ ಕೂಡಲೇ ತನ್ನ ದೊಡ್ಡದಾದ ಸೇನೆಯನ್ನು ಸಿದ್ಧಗೊಳಿಸಿ ಚಿತ್ತೂರಿನ ಕಡೆಗೆ ಹೊರಟನು. ಆನೆ, ಕುದುರೆ, ರಥಗಳು ಸೇರಿದ ಸೈನ್ಯವು ಚಿತ್ತೂರಿನ ಕಡೆಗೆ ವೇಗವಾಗಿ ಹೊರಟಿತು. ಆದರೆ ಆತ ಚಿತ್ತೂರನ್ನು ತಲುಪುವಾಗ ದುರಂತವು ನಡೆದು ಹೋಗಿತ್ತು!

ರಾಣಿಯ ಕೋಟೆಯನ್ನು ಬಹದ್ದೂರ್ ಷಾ ಸೂರೆ ಮಾಡಿ ಆಗಿತ್ತು. ಅರಮನೆ ಕೂಡ ಆತನ ವಶ ಆಗಿತ್ತು. ರಾಣಿ ಕರ್ಣಾವತಿ ತನ್ನ ಇತರ ರಾಣಿಯರ ಜೊತೆಗೆ ಜೋಹಾರ್ ಪದ್ಧತಿಯನ್ನು ಅನುಸರಿಸಿ ಚಿತೆಯನ್ನು ಏರಿ ಆಗಿತ್ತು! ಧಗಧಗಿಸುವ ಚಿತೆಯ ಮುಂದೆ ದೊರೆ ಹುಮಾಯೂನನು ಕಣ್ಣೀರು ಸುರಿಸುತ್ತ ನಿಂತ. ತನ್ನ ಅಣ್ಣನ ಕರ್ತವ್ಯದ ಭಾಗವಾಗಿ ಬಹದ್ದೂರ್ ಷಾನ ಜೊತೆಗೆ ಯುದ್ಧ ಮಾಡಿ ಅವನನ್ನು ಸೋಲಿಸುತ್ತಾನೆ. ಆ ರಾಜ್ಯವನ್ನು ರಾಣಿಯ ಹಿರಿಯ ಮಗನಾದ ವಿಕ್ರಮಜಿತನಿಗೆ ಒಪ್ಪಿಸಿ ಅವನಿಗೆ ಪಟ್ಟ ಕಟ್ಟುತ್ತಾನೆ. ನಂತರ ದೆಹಲಿಗೆ ಹಿಂದಿರುಗುತ್ತಾನೆ.

ಮೊಗಲ್ ದೊರೆಯಾದ ಹುಮಾಯೂನನು ರಾಣಿ ಕರ್ಮಾವತಿಯ ರಕ್ಷಾಬಂಧನದ ಗೌರವವನ್ನು ಎತ್ತಿ ಹಿಡಿದು ಇತಿಹಾಸದಲ್ಲಿ ಬಹುದೊಡ್ಡ ಸ್ಥಾನ ಪಡೆದ.

ಇದನ್ನೂ ಓದಿ| ರಾಜ ಮಾರ್ಗ | ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!

Exit mobile version