Site icon Vistara News

Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Raja Marga Column Chandro Tomar Sharp Shooter

Raja Marga Column : ಉತ್ತರ ಪ್ರದೇಶದ ಭಾಗಪಥ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯು ಜೋಹ್ಹರಿ. ಅಲ್ಲಿಯ ಒಬ್ಬರು ಅಜ್ಜಿ ಶೂಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹೆಸರು ಮಾಡಿದ್ದರು. ಆಕೆ ಬದುಕಿದ್ದಾಗ ಜಗತ್ತಿನ ಅತ್ಯಂತ ಹಿರಿಯ ಶಾರ್ಪ್‌ ಶೂಟರ್ (Worlds oldest Sharp Shooter) ತಪ್ಪಿದ್ದೆ ಇಲ್ಲ ಅನ್ನೋದು ಅವರ ಹಿರಿಮೆ! ವಯಸ್ಸು ಆಕೆಯ ಮಟ್ಟಿಗೆ ಬರೇ ಒಂದು ನಂಬರ್ ಆಗಿ ಬಿಟ್ಟಿದೆ! ಅವರ ಹೆಸರು ಚಂದ್ರಾ ತೋಮರ್‌ (Chandro tomar) ಜನ ಅವರನ್ನು ಪ್ರೀತಿಯಿಂದ ‘ಶೂಟರ್ ಅಜ್ಜಿ’ (Shooter Ajji) ಎಂದು ಕರೆಯುತ್ತಾರೆ! ಏಕೆಂದರೆ ಎಂಬತ್ತರ ಹರೆಯದಲ್ಲಿ ಕೂಡ ಅವರು ಚಾಂಪಿಯನ್‌ಷಿಪ್ ಸೋತವರಲ್ಲ!

ಆಕೆ ತುಂಬಿದ ಮನೆಯ ಅಜ್ಜಿ!

ಆಕೆ ಹಳ್ಳಿಯ ಹೆಂಗಸು. ಶಾಲೆಗೆ ಹೋದವರಲ್ಲ. ತುಂಬಿದ ಮನೆಗೆ ಸೊಸೆಯಾಗಿ ಬಂದವರು. ಪ್ರೀತಿಸುವ ಗಂಡ, 5 ಮಕ್ಕಳು, 12 ಮೊಮ್ಮಕ್ಕಳು ಇರುವ ಸಂಸಾರದಲ್ಲಿ ಅವರು ಮುಳುಗಿ ಬಿಟ್ಟಿದ್ದರು. ಮನೆ ವಾರ್ತೆ, ಮನೆಯವರ ಕ್ಷೇಮ, ಅಡುಗೆ ಮಾಡುವುದು, ದನಗಳ ಚಾಕರಿ ಇಷ್ಟೆ ಗೊತ್ತು ಅವರಿಗೆ. ಶೂಟಿಂಗ್ ಬಗ್ಗೆ ಯೋಚನೆಯನ್ನು ಕೂಡ ಮಾಡಿದವರಲ್ಲ.

Raja Marga Column Chandra tomar

ಅವರ ಬದುಕಿನಲ್ಲಿ ತಿರುವು ಬಂದಾಗ ವಯಸ್ಸು 67!

ಅವರ ಹಳ್ಳಿಯಲ್ಲಿ ಒಂದು ಶಾರ್ಪ್ ಶೂಟರ್ ಕ್ಲಬ್ ಇತ್ತು. ಅದಕ್ಕೆ ಅವರ ಮೊಮ್ಮಗಳು ಶಿಫಾಲಿ ಆಸಕ್ತಿಯಿಂದ ಹೋಗಿ ಸೇರಿದ್ದರು. ಅಲ್ಲಿ ಹುಡುಗರೇ ಹೆಚ್ಚು ಬರುತ್ತಿದ್ದ ಕಾರಣ ಮೊಮ್ಮಗಳಿಗೆ ಜೊತೆಯಾಗಿ ಅಜ್ಜಿ ಹೋಗುತ್ತಿದ್ದರು. ದೂರದಲ್ಲಿ ನಿಂತು ಶೂಟಿಂಗ್ ನೋಡುವುದು ಮಾತ್ರ ಅಜ್ಜಿಯ ಕೆಲಸ. ಒಂದು ದಿನ ಮೊಮ್ಮಗಳು ಗನ್ ಲೋಡ್ ಆಗದೆ ಕಷ್ಟ ಪಡುತ್ತಿದ್ದಳು. ಹತ್ತಿರ ಬಂದ ಅಜ್ಜಿ ಯಾವುದೋ ಒಂದು ಮಾಯೆಯಿಂದ ಗನ್ ಲೋಡ್ ಮಾಡಿದ್ದು ಮಾತ್ರವಲ್ಲ ಬುಲ್ ಐಗೆ ಗುರಿಯಿಟ್ಟು ಶೂಟ್ ಮಾಡಿಬಿಟ್ಟರು. ಅದು ಪರ್ಫೆಕ್ಟ್ ಶೂಟ್ ಆಗಿತ್ತು! ಆ ಕ್ಲಬ್ಬಿನ ಕೋಚ್ ಫಾರೂಕ್ ಪಠಾಣ್ ಮತ್ತು ಎಲ್ಲಾ ಹುಡುಗರು ಬಿಟ್ಟ ಕಣ್ಣು ಬಿಟ್ಟು ಬೆರಗಾಗಿ ನಿಂತರು! ಅದು ಅಜ್ಜಿಯ ಜೀವನದ ಮೊದಲ ಶೂಟ್ ಆಗಿತ್ತು ಮತ್ತು ಆಗ ಅವರ ವಯಸ್ಸು ಕೇವಲ 67 ಆಗಿತ್ತು!

ಶೂಟ್ ಮಾಡಲು ಸ್ಪಷ್ಟವಾದ ದೃಷ್ಟಿ ಮತ್ತು ಕೈಗಳ ನಿಯಂತ್ರಣಗಳು ಇರಬೇಕು. ಅದು ಆ ವಯಸ್ಸಲ್ಲಿ ಅಜ್ಜಿಗೆ ಹೇಗೆ ಸಾಧ್ಯವಾಯಿತು? ನನಗಂತೂ ಅರ್ಥವಾಗದ ಪ್ರಶ್ನೆ!

Raja Marga Column : ಅಜ್ಜಿ ಮತ್ತು ಮೊಮ್ಮಗಳ ಶೂಟಿಂಗ್ ತರಬೇತಿ!

ಮುಂದೆ ಅಜ್ಜಿ ಮೊಮ್ಮಗಳ ಜೊತೆಗೆ ಶೂಟರ್ ಕ್ಲಬ್ಬಿಗೆ ಸೇರಿದರು. 1200 ಡಾಲರ್ ಬೆಲೆಯ ಪಿಸ್ತೂಲನ್ನು ಹಠ ಹಿಡಿದು ತರಿಸಿಕೊಂಡರು. ಮನೆಯ ಅಂಗಳದಲ್ಲಿ ಪ್ರೈವೇಟ್ ಶೂಟರ್ ರೇಂಜ್ ಸಿದ್ಧವಾಯಿತು. ಅಜ್ಜಿಯ ಉತ್ಸಾಹ ದಿನದಿಂದ ದಿನಕ್ಕೆ ಅಧಿಕವಾಯಿತು. ಮನೆಕೆಲಸ ಮುಗಿಸಿಕೊಂಡು ಮಧ್ಯಾಹ್ನ ಅಜ್ಜಿ ಗನ್ ಹಿಡಿದು ತರಬೇತಿಗೆ ಇಳಿದರೆ ಜಗತ್ತನ್ನೇ ಮರೆತು ಬಿಡುತ್ತಿದ್ದರು. ಮನೆಯ ಎಲ್ಲರ ಪೂರ್ಣ ಬೆಂಬಲವು ಅವರಿಗೆ ದೊರೆಯಿತು ಮತ್ತು ಸಾಧನೆಗಳ ಮೆರವಣಿಗೆಯು ಆಗಲೇ ಶುರುವಾಗಿ ಬಿಟ್ಟಿತು!
1999ರಿಂದ ನಿರಂತರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಅಜ್ಜಿಗೆ ಈವರೆಗೆ 30 ರಾಷ್ಟ್ರಮಟ್ಟದ ಸ್ವರ್ಣ ಪದಕಗಳು ದೊರೆತಿವೆ!

Raja Marga Column Chandra tomar

ಅಜ್ಜಿ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು!

2010ರಲ್ಲಿ ವಿಶ್ವ ಹಿರಿಯರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ರೈಫಲ್ ಮತ್ತು ಪಿಸ್ತೂಲ್ ಎರಡೂ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದಿರುವ ಅಜ್ಜಿ ಮುಂದೆ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು. ಅವರು ಗೆದ್ದಿರುವ ಒಟ್ಟು 146 ಶೂಟಿಂಗ್ ಪದಕಗಳು ಅವರ ಶೋಕೇಸಲ್ಲಿ ಇವೆ! ಅದರಲ್ಲಿ ರಾಷ್ಟ್ರಮಟ್ಟದ ಪದಕಗಳು ಮೂವತ್ತಕ್ಕೂ ಹೆಚ್ಚು! 88ರ ಹರೆಯದಲ್ಲಿ ಕೂಡ ರಾಷ್ಟ್ರ ಮತ್ತು ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಆಕೆ ಪದಕದ ಮೇಲೆ ಪದಕಗಳನ್ನು ಗೆದ್ದಿದ್ದಾರೆ. ಮುಂದೆ ಅದೇ ಜೋಹರಿ ಶೂಟಿಂಗ್ ಕ್ಲಬ್ಬಿನ ಮುಖ್ಯ ಕೋಚ್ ಆಗಿ ಅಜ್ಜಿ ದೀರ್ಘಕಾಲ ದುಡಿದರು.

ತಾಪ್ಸಿ ಪನ್ನು ಜತೆ ಚಂದ್ರಾ ತೋಮರ್‌

ಇಡೀ ಕುಟುಂಬವೇ ಶೂಟರ್ ಕುಟುಂಬ ಆಯಿತು!

ಅವರಿಂದ ಸ್ಫೂರ್ತಿ ಪಡೆದು ಅವರ ಸೊಸೆ ಸೀಮಾ ತೋಮರ್, ಮೊಮ್ಮಗಳು ಶಿಫಾಲಿ ಇಬ್ಬರು ಕೂಡ ವಿಶ್ವ ಮಟ್ಟದ ಶೂಟರ್ ಆಗಿ ಬೆಳೆದಿದ್ದಾರೆ. ಅವರ ತಂಗಿ ಪ್ರಕಾಶಿ ತೋಮರ್ ಕೂಡ ಇಂದು ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದಾರೆ. ಅಜ್ಜಿಯ ಸ್ಫೂರ್ತಿಯಿಂದ ಮುಂದೆ ಇಡೀ ತೋಮರ್ ಕುಟುಂಬ ಶೂಟರ್ ಕುಟುಂಬವೇ ಆಗಿಬಿಟ್ಟಿದೆ! ನಾನು ಸಾಯುವ ತನಕ ಶೂಟಿಂಗ್ ಬಿಡುವುದಿಲ್ಲ ಎಂದು ಅಜ್ಜಿ ಗನ್ನು ಹಿಡಿದು ನುಡಿದರೆ ಅವರ ಕಂಗಳಲ್ಲಿ ಗೆದ್ದ ನಗು ಕಾಣುತ್ತಿತ್ತು!

ಇದನ್ನೂ ಓದಿ : Raja Marga Column : ಲಸಿಕೆ ಪ್ರಯೋಗಕ್ಕಾಗಿ ಮಗನ ಪ್ರಾಣವನ್ನೇ ಒತ್ತೆ ಇಟ್ಟ ಎಡ್ವರ್ಡ್‌ ಜೆನ್ನರ್‌!

ಅಜ್ಜಿಯ ಸಾಧನೆ ಜನಪ್ರಿಯ ಸಿನೆಮಾ ಆಯಿತು!

ಅಂದ ಹಾಗೆ ಅಜ್ಜಿಯ ಬದುಕು ಮತ್ತು ಸಾಧನೆಯಿಂದ ಸ್ಫೂರ್ತಿ ಪಡೆದು ಹಿಂದಿಯಲ್ಲಿ ‘ಸಾಂಡ ಕಿ ಆಂಖ್ ‘ಎಂಬ ಸಿನಿಮಾ(2019) ಕೂಡ ಬಂದಿದ್ದು ಅದರಲ್ಲಿ ಪ್ರಖ್ಯಾತ ನಟಿಯರಾದ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಅವರು ಪ್ರಮುಖವಾದ ಪಾತ್ರಗಳನ್ನು ಮಾಡಿದ್ದರು.

ಅಂತಹ ಅಜ್ಜಿ ಚಂದ್ರೋ ತೋಮರ್ 2021ನೆಯ ಇಸವಿಯಲ್ಲಿ ತನ್ನ 89ನೇ ವಯಸ್ಸಿಗೆ ನಿಧನರಾದರು. ಅತ್ಯಂತ ಬಡ ಕುಟುಂಬದಿಂದ ಬಂದ, ಶಾಲೆಗೆ ಹೋಗದೆ ಈ ಸಾಧನೆ ಮಾಡಿದ ಶೂಟರ್ ದಾದಿ ನಿಜಕ್ಕೂ ಗ್ರೇಟ್ ಅಲ್ವಾ?

#image_title
Exit mobile version