(ನಿನ್ನೆಯ ಸಂಚಿಕೆಯಿಂದ ಮುಂದುವರಿದಿದೆ)
೩೧) ದಾಸರು ಬರೆದ ಅಷ್ಟೂ ಪದ್ಯಗಳಲ್ಲಿ ಅಂತ್ಯ ಪ್ರಾಸ ಅಥವಾ ಆರಂಭಿಕ ಪ್ರಾಸ ಇದೆ. ಆ ಪದ್ಯವನ್ನು ನೆನಪಿಟ್ಟುಕೊಳ್ಳುವುದು ಇದರಿಂದ ಸುಲಭ ಆಗುತ್ತದೆ.
ದೃಶ್ಯ ಚಿತ್ರಣದಿಂದ ಹೆಚ್ಚು ನೆನಪು
೩೨) ಚಿಕ್ಕಂದಿನಲ್ಲಿ ನಾವು ಕೇಳಿದ ಪ್ರಾಣಿ ಪಕ್ಷಿಗಳ ಕತೆಗಳು, ವಿಶೇಷವಾಗಿ ಪಂಚತಂತ್ರದ ಕಥೆಗಳು, ಈಸೋಪನ ಕಥೆಗಳು ಮರೆತು ಹೋಗುವುದಿಲ್ಲ. ಅದಕ್ಕೆ ಕಾರಣ ಅದರಲ್ಲಿರುವ ಕಲ್ಪನೆ ಮತ್ತು ಮೌಲ್ಯಗಳು. ಕತೆಯಲ್ಲಿ ಬರುವ ಆನೆ, ಕುದುರೆ, ಕೋತಿ, ಸಿಂಹ ಇತ್ಯಾದಿಗಳನ್ನು ಮಕ್ಕಳು ನೋಡದಿದ್ದರೂ ಕಲ್ಪನೆ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾರೆ. ಅದೇ ಕತೆಯನ್ನು ಹಾಡಿನ ಮೂಲಕ ಅಥವಾ ನೃತ್ಯದ ಮೂಲಕ ಅಥವಾ ಅಭಿನಯದ ಮೂಲಕ ಹೇಳಿದರೆ ಆ ಕತೆಯು ಮರೆತುಹೋಗುವುದಿಲ್ಲ!
೩೩) ಸಣ್ಣ ಪ್ರಾಯದಲ್ಲಿ ತಾಯಿ, ಅಜ್ಜಿ ಅಥವಾ ಅಜ್ಜನ ಕಾಲಿನ ಮೇಲೆ ಮಲಗಿ ಕತೆಗಳನ್ನು ಕೇಳಿದ ಮಕ್ಕಳ ಕಲ್ಪನಾಶಕ್ತಿಯು ಅದ್ಭುತ ಆಗಿರುತ್ತದೆ! ಅದರಿಂದ ಮುಂದೆ ಅವರು ರೀಸನಿಂಗ್ ಮತ್ತು ಲಾಜಿಕಲ್ ಥಿಂಕಿಂಗ್ ಸುಲಭವಾಗಿ ಕಲಿಯುತ್ತಾರೆ. ಅಂತವರು ಐಎಎಸ್, ಐಪಿಎಸ್ ಮೊದಲಾದ ಪರೀಕ್ಷೆಗಳನ್ನು ಸುಲಭವಾಗಿ ತೇರ್ಗಡೆ ಹೊಂದುತ್ತಾರೆ ಅನ್ನುತ್ತದೆ ಮನೋವಿಜ್ಞಾನ!
ಹೆಸರುಗಳನ್ನು ನೆನಪಿಟ್ಟುಕೊಳ್ಳೋದು ಹೇಗೆ?
೩೪) ವ್ಯಕ್ತಿಗಳ ಹೆಸರು ಮತ್ತು ಮುಖಗಳು ನಿಮಗೆ ಮರೆತು ಹೋಗುವುದು ಕಾಮನ್! ಅದು ನನ್ನ ಸಮಸ್ಯೆ ಕೂಡಾ. ನಿಮ್ಮ ಬಾಲ್ಯದ ಸ್ನೇಹಿತರು ಅಥವ ನಿಮ್ಮ ಪೂರ್ವ ವಿದ್ಯಾರ್ಥಿಗಳು ನಿಮ್ಮ ಮುಂದೆ ಬಂದು ನಿಂತಾಗ ಅವರ ಹೆಸರು ಹೊಟ್ಟೆಯಲ್ಲಿ ಇದ್ದು ನೆನಪಿಗೆ ಬಾರದ ಸಂಕಟ ಇದೆಯಲ್ಲ ಅದನ್ನು ಅನುಭವ ಮಾಡಿದವರಿಗೆ ಮಾತ್ರ ಗೊತ್ತು! ಅದಕ್ಕೆ ನಾನು ಕಂಡುಕೊಂಡ ಪರಿಹಾರಗಳು ಮೂರು. ಒಂದು ಯಾವುದೇ ವ್ಯಕ್ತಿ ನನಗೆ ಹೊಸದಾಗಿ ಭೇಟಿ ಆದಾಗ ಹೆಸರನ್ನು ಸರಿಯಾಗಿ ಕೇಳಿಸಿಕೊಳ್ಳುತ್ತೇನೆ. ಉದಾಹರಣೆಗೆ ಅವರ ಹೆಸರು ಪ್ರಿಯಾಂಕ ಅಂತಾದರೆ ಥಟ್ಟನೆ ಪ್ರಿಯಾಂಕ ಚೋಪ್ರಾ ಅಥವಾ ಪ್ರಿಯಾಂಕ ಗಾಂಧಿ ಎಂದು ಒಂದು ಸಣ್ಣ ಜೋಕ್ ಮಾಡುತ್ತೇನೆ. ನಂತರ ಆ ಹೆಸರನ್ನು ನನ್ನ ಮೆಮೊರಿಯಲ್ಲಿ ಹಿಂದೆ ಇರುವ ಪ್ರಿಯಾಂಕ ಎಂಬ ಹೆಸರು ಇರುವ ಇತರರ ಜೊತೆಗೆ ಮೈಂಡಲ್ಲಿ ಟ್ಯಾಗ್ ಮಾಡಿಬಿಡುತ್ತೇನೆ! ನಂತರ ಆ ಹೆಸರು ದೇವರಾಣೆಗೂ ಮರೆತು ಹೋಗುವುದಿಲ್ಲ! ಎರಡನೇ ತಂತ್ರ ಎಂದರೆ ಅವರ ಹೆಸರಿನ ಅರ್ಥ ತಿಳಿದುಕೊಳ್ಳುತ್ತೇನೆ. ಉದಾಹರಣೆಗೆ ರಾಜೀವ್ ಅಂದರೆ ಕಮಲ ಎಂದು ಅರ್ಥ. ನಾನು ಅವರ ಮುಖದಲ್ಲಿ ಕಮಲದ ಮೂಗು, ಕಮಲದ ಕಣ್ಣು, ಕಮಲದ ಕಿವಿ.. ಹೀಗೆಲ್ಲ ಕಲ್ಪನೆ ಮಾಡಿಕೊಂಡು ಮೈಂಡಲ್ಲಿ ಸ್ಟೋರ್ ಮಾಡಿಕೊಳ್ಳುತ್ತೇನೆ. ಮತ್ತೆ ಆ ಹೆಸರು ಮರೆತು ಹೋಗುವುದಿಲ್ಲ! ಶ್ರೀನಿವಾಸ ಅಂದರೆ ತಿರುಪತಿಯ ಶ್ರೀನಿವಾಸ ಅನ್ನುತ್ತೇನೆ ಮತ್ತು ಅವರ ಹಣೆಯಲ್ಲಿ ತಿರುಪತಿಯ ಉದ್ದ ನಾಮ ಕಲ್ಪನೆ ಮಾಡಿಕೊಂಡು ಬಿಡುತ್ತೇನೆ!ಆದರೆ ಕೆಲವು ಹೆಸರುಗಳಿಗೆ ಅರ್ಥ ಹುಡುಕುವುದು ಕಷ್ಟ! ಈ ತಂತ್ರ ಎಲ್ಲ ಕಡೆಯಲ್ಲಿಯೂ ಗೆಲ್ಲುವುದಿಲ್ಲ!
ಮೂರನೇ ತಂತ್ರ ಎಂದರೆ ಅವರ ಹೆಸರಿನ ಸ್ಪೆಲ್ಲಿಂಗ್ ಹೇಳುವುದು. ಉದಾಹರಣೆಗೆ ಉಷಾ ಎಂಬ ಹೆಸರು ಇದ್ದರೆ ಯು ಎಸ್ ಎಚ್ ಎ ಎಂದು ಬಿಡುತ್ತೇನೆ! ಮತ್ತು ಹಲವು ಬಾರಿ ಹಾಗೆಯೇ ಸಂಬೋಧನೆ ಮಾಡುತ್ತೇನೆ. ಅದು ಮತ್ತೆ ಮರೆಯುವುದಿಲ್ಲ.
ಅದರ ಜೊತೆಗೆ ಆ ಹೆಸರುಗಳನ್ನು ಪುನರಾವರ್ತನೆ ಮಾಡುತ್ತಾ ಇರುವುದರಿಂದ ಮತ್ತು ಮತ್ತೆ ಮತ್ತೆ ಭೇಟಿ ಆಗುವುದರಿಂದ ಆ ಹೆಸರುಗಳು ಮರೆತು ಹೋಗುವುದಿಲ್ಲ. ನಾನು ಶಿಕ್ಷಕನಾಗಿ ಬೆಳಿಗ್ಗೆ ಮೊದಲ ಪೀರಿಯಡ್ ಹಾಜರಿ ಕರೆಯುವಾಗ ನಂಬರ್ ಕರೆಯದೆ ಎಲ್ಲರ ಹೆಸರು ಕರೆಯುತ್ತೇನೆ. ಹಾಗೆ ನನ್ನ ಇಡೀ ಪೀರಿಯಡ್‌ನಲ್ಲಿ ಪ್ರತೀ ಒಬ್ಬರ ಹೆಸರನ್ನು ಕನಿಷ್ಠ ಎರಡು ಬಾರಿಯಾದರೂ ಕರೆಯುತ್ತೇನೆ.
ಹಾಗೆಯೇ ಎಲ್ಲ ಎಸೆಸೆಲ್ಸಿ ಬ್ಯಾಚಗಳ ಫೋಟೋಸ್ ನಮ್ಮ ಹತ್ತಿರ ಇದ್ರೆ ಮತ್ತು ಆ ಫೋಟೊಗಳನ್ನು ನಾವು ವಾರಕ್ಕೊಮ್ಮೆ ನೋಡುತ್ತಾ ಬಂದರೆ, ಅದರ ಜೊತೆಗೆ ಹೆಸರುಗಳನ್ನು ನೆನಪಿಸುತ್ತಾ ಬಂದರೆ ಸಾವಿರ ಸಾವಿರ ಹೆಸರು ನೆನಪಿನಲ್ಲಿ ಖಂಡಿತ ಉಳಿಯುತ್ತದೆ.
ಡೈರಿ ಬರೆಯೋದರಿಂದ ನೆನಪು ಹೆಚ್ಚಾಗುತ್ತದೆ
೩೫) ಪ್ರತೀ ದಿನ ಡೈರಿಯನ್ನು ಬರೆಯುವವರು ಅದ್ಭುತ ಮೆಮೊರಿ ಪಡೆಯುತ್ತಾರೆ. ದಿನವೂ ನೀವು ಭೇಟಿ ಮಾಡಿದ ಹೊಸಬರ ಹೆಸರುಗಳನ್ನು, ನಡೆದ ಘಟನೆಯನ್ನು ಬರೆಯುತ್ತ ಬಂದರೆ ನಿಮ್ಮ ಗೋಲ್ಡನ್ ಮೆಮೊರಿ ಬಗ್ಗೆ ನೀವೇ ಹೆಮ್ಮೆ ಪಡುತ್ತೀರಿ! ಮುಂದೆ ನಿಮ್ಮ ಆತ್ಮಚರಿತ್ರೆ ಬರೆಯುವ ಸಂದರ್ಭದಲ್ಲಿ ಆ ಡೈರಿಗಳು ನಮಗೆ ತುಂಬಾ ಉಪಯೋಗ ಆಗುತ್ತವೆ.
ಸುಮ್ನೆ ದಿನಾ ಡಿಕ್ಷನರಿ ನೋಡ್ತಾ ಇರಿ
೩೬) ಭಾಷಾ ಕಲಿಕೆಯಲ್ಲಿ ಡಿಕ್ಷನರಿ ಉಪಯೋಗವು ನಿಮ್ಮ ಶಬ್ದ ಭಂಡಾರವನ್ನು (Vocabulary) ಹೆಚ್ಚು ಮಾಡುತ್ತದೆ. ಬಾಲ್ಯದಲ್ಲಿ ನಮ್ಮ ಅಧ್ಯಾಪಕರು ನಮಗೆ ದಿನವೂ ಐದು ಹೊಸ ಶಬ್ದಗಳನ್ನು ಪರಿಚಯ ಮಾಡಿ ಅವುಗಳನ್ನು ಆ ದಿನಪೂರ್ತಿ ಅವಕಾಶ ಸಿಕ್ಕಿದ ಎಲ್ಲ ಕಡೆಗಳಲ್ಲಿ ಬಳಕೆ ಮಾಡಲು ತರಬೇತು ಕೊಟ್ಟಿದ್ದರು. ಅದರಿಂದಾಗಿ ಶಬ್ದ ಪ್ರಯೋಗದಲ್ಲಿ ನಾವು ಪರಿಣತರು ಆಗಲು ಸಾಧ್ಯ ಆಯಿತು. ಅದರ ಪೂರ್ತಿ ಕ್ರೆಡಿಟ್ ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಸಲ್ಲಬೇಕು! ಪ್ರೈಮರಿ ಶಾಲೆಗಳ ಶಿಕ್ಷಕರು ಮನಸು ಮಾಡಿದರೆ ನಿಮ್ಮ ತರಗತಿಗಳಲ್ಲಿ ಅದ್ಬುತ ಪ್ರತಿಭೆಗಳನ್ನು ಬೆಳೆಸಬಹುದು. ಬರೀ ಪಾಠ ಮಾಡುವುದು ಮಾತ್ರ ನಮ್ಮ ಹೊಣೆ ಅಲ್ಲ.
೩೭) ರಾತ್ರಿ ಮಲಗುವ ಹೊತ್ತಿನಲ್ಲಿ ನಮಗೆ ತಕ್ಷಣ ನಿದ್ರೆ ಬರುವುದಿಲ್ಲ. ಹತ್ತರಿಂದ ಹದಿನೈದು ನಿಮಿಷ ಗ್ಯಾಪ್ ನಿಮಗೆ ಸಿಗಬಹುದು. ಆಗ ಇಡೀ ದಿನ ನಿಮಗೆ ಆದ ಅನುಭವಗಳನ್ನು ಒಮ್ಮೆ ನೆನಪು ಮಾಡಿಕೊಂಡು ಮಲಗಿದರೆ ಅದು ನಿಮ್ಮ ಶಾಶ್ವತ ಮೆಮೊರಿಯನ್ನು ಹೆಚ್ಚು ಮಾಡುತ್ತದೆ.
೩೮) ಶಿಕ್ಷಕರು ತರಗತಿಯಲ್ಲಿ ಬಳಸುವ ಧ್ವನಿ, ಬೆಳಕಿನ( ಆಡಿಯೋ ವಿಶ್ಯುವಲ್) ಮಾದರಿಗಳು ಮಕ್ಕಳ ಕಲಿಕೆಯನ್ನು ಹೆಚ್ಚು ಮಾಡುತ್ತವೆ ಮತ್ತು ಬಲಿಷ್ಠ ಮೆಮೊರಿಯನ್ನು ಖಾತರಿ ಮಾಡುತ್ತವೆ. ನಮ್ಮ ಪಂಚೇಂದ್ರಿಗಳಲ್ಲಿ ಕಣ್ಣು ಮತ್ತು ಕಿವಿ ಒಟ್ಟು ಸೇರಿ 97% ಕಲಿಕೆಯನ್ನು ಪೂರ್ತಿ ಮಾಡುತ್ತವೆ ಅಂದರೆ ನಿಮಗೆ ನಂಬಲು ಕಷ್ಟ ಆಗಬಹುದು! ಆದರೆ ಅದು ಸತ್ಯ. ಶಿಕ್ಷಕರು ತರಗತಿಯಲ್ಲಿ ಬಳಸುವ ಚಾರ್ಟ್, ಮ್ಯಾಪ್, ಗ್ಲೋಬ್, ವಿಜ್ಞಾನದ ಮಾಡೆಲ್, ಗಣಿತದ ಕಲಿಕಾ ಚಟುವಟಿಕೆಗಳು ಇವೆಲ್ಲ ಮಕ್ಕಳಲ್ಲಿ ಮೆಮೊರಿ ಪವರನ್ನು ಉದ್ದೀಪನ ಮಾಡುತ್ತವೆ.
ಮೊಬೈಲ್ ನೋಡುವುದರಿಂದಲೂ ಲಾಭ ಇದೆ
೩೯) ಚಿತ್ರಗಳು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತವೆ ಮತ್ತು ನೆನಪನ್ನು ಹೆಚ್ಚುಮಾಡುತ್ತವೆ. ಅದರಲ್ಲಿ ಕೂಡ ಬಣ್ಣ ತುಂಬಿದ ಚಿತ್ರಗಳು ಹೆಚ್ಚು ಪರಿಣಾಮಕಾರಿ! ಮಕ್ಕಳೇ ಮಾಡಿದ ಚಿತ್ರಗಳು ಇನ್ನೂ ಹೆಚ್ಚು ಪರಿಣಾಮಕಾರಿ! ಅದರಲ್ಲಿ ಕೂಡ ಚಲಿಸುವ ಚಿತ್ರಗಳು( ವಿಡಿಯೊ) ಮತ್ತು ಹೆಚ್ಚು ಪರಿಣಾಮಕಾರಿ! ಅದರಲ್ಲಿ ಕೂಡ ಆಡಿಯೊ ಇರುವ ವಿಡಿಯೊಗಳು ಅದ್ಭುತ ಪರಿಣಾಮ ಬೀರುತ್ತವೆ! ಅದರ ಜೊತೆಗೆ ಮ್ಯೂಸಿಕ್ ಇರುವ ವಿಡಿಯೊ ಮಕ್ಕಳಿಗೆ ತುಂಬಾ ಇಷ್ಟ ಆಗುತ್ತವೆ ಮತ್ತು ಮರೆತು ಹೋಗುವುದೇ ಇಲ್ಲ! ಮಕ್ಕಳು ಕಾರ್ಟೂನ್ ನೋಡುತ್ತ ಟಿವಿಯ ಮುಂದೆ ಕೂತರೆ (ತುಂಬಾ ಹೊತ್ತಲ್ಲ) ಹೆತ್ತವರು ಬಯ್ಯದೆ ಸಪೋರ್ಟ್ ಮಾಡಿ. ಅದರಿಂದ ಮಕ್ಕಳ ಮೆಮೊರಿ ಶಾರ್ಪ್ ಆಗುತ್ತದೆ.
ಸ್ನೇಹಿತರೇ, ನಾನು ಬರೆದದ್ದೆಲ್ಲ ವೈಜ್ಞಾನಿಕ ಮತ್ತು ಮನೋವೈಜ್ಞಾನಿಕ ಸತ್ಯಗಳು. ಮತ್ತು ನಾನು ಪ್ರಾಕ್ಟಿಕಲ್ ಆಗಿ ತರಗತಿಯಲ್ಲಿ ಮತ್ತು ನನ್ನ ತರಬೇತಿಯಲ್ಲಿ ಅಳವಡಿಸಿಕೊಂಡ ಸಂಗತಿಗಳು. ಇನ್ನೂ ಕಲಿಕೆ ಮತ್ತು ಮೆಮೊರಿಗೆ ಸಂಬಂಧ ಪಟ್ಟ ನೂರಾರು ವಿಷಯಗಳು ಇವೆ. ಅವುಗಳ ಬಗ್ಗೆ ಮುಂದೆ ಬರೆಯುತ್ತೇನೆ. ಧನ್ಯವಾದಗಳು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಗೋಲ್ಡನ್ ಮೆಮೊರಿ-2: ಒಮ್ಮೆ ಓದಿದ್ದು ಮರೆತೇ ಹೋಗದಂತಿರಲು ಈ ಟಿಪ್ಸ್ ಪಾಲಿಸಿ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ| ಗೋಲ್ಡನ್ ಮೆಮೊರಿ ಪವರ್ ನಿಮ್ಮದಾಗಬೇಕೆ?: ಈ ಸರಳ ಅಂಶಗಳನ್ನು ಗಮನಿಸಿ ಸಾಕು