Site icon Vistara News

ರಾಜ ಮಾರ್ಗ ಅಂಕಣ : ಆ ಒಂದು ತಪ್ಪು ಭಾರತೀಯ ಸಿನಿಮಾ ರಂಗದ ಸಿಂಡ್ರೆಲಾ ಮೀನಾ ಕುಮಾರಿ ಬದುಕಿಗೇ ಮುಳ್ಳಾಯಿತು!

Meena kumari actress

ಪ್ರತಿಯೊಬ್ಬರ ಬದುಕಿನಿಂದ ಕೂಡ ಬೇಕಾದಷ್ಟು ಸಂದೇಶಗಳನ್ನು ನಾವು ಪಡೆಯಲು ಸಾಧ್ಯ ಇದೆ. ಹಿಂದಿ ಸಿನಿಮಾ ರಂಗವನ್ನು 33 ವರ್ಷಗಳ ಕಾಲ ಅನಭಿಷಿಕ್ತ ರಾಣಿಯಾಗಿ ಆಳಿದ, 92 ಹಿಟ್ ಸಿನಿಮಾಗಳನ್ನು ಸಾಲು ಸಾಲಾಗಿ ಬಾಲಿವುಡ್ಡಿಗೆ ನೀಡಿದ, ಹನ್ನೆರಡು ಬಾರಿ ಫಿಲ್ಮ್‌ ಫೇರ್ ಪ್ರಶಸ್ತಿಗೆ ನಾಮಕರಣಗೊಂಡ, ನಾಲ್ಕು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದ, ಭಾರತದಲ್ಲೇ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿಗೆ ನಾಮಕರಣ ಆದ ಸಿನಿಮಾದಲ್ಲಿ ಅಭಿನಯಿಸಿದ, ಹಿಂದಿ ಸಿನಿಮಾದ ಪ್ರೇಕ್ಷಕರಿಂದ ‘ಟ್ರಾಜಿಡಿ ಕ್ವೀನ್’ (Tragedy queen) ಎಂದು ಕರೆಸಿಕೊಂಡ ಮೀನಾ ಕುಮಾರಿಯ (Actress Meena Kumari) ಬದುಕು ಯಾಕೆ ದುರಂತವಾಯಿತು? ಅದರಿಂದ ನಾವು ಕಲಿಯುವುದು (ರಾಜ ಮಾರ್ಗ ಅಂಕಣ) ಬಹಳಷ್ಟು ಇದೆ!

ಪಾಕೀಜಾ – ಮರೆಯಲಾಗದ ಸಿನಿಮಾ

1972ರಲ್ಲಿ ಅವಳ ಕೊನೆಯ ಸಿನಿಮಾ ಆದ ‘ಪಾಕೀಜಾ’ ವನ್ನು ಮುಂಬೈಯ ‘ಮರಾಠಾ ಮಂದಿರ’ ಎಂಬ ವೈಭವದ ಥಿಯೇಟರಿನಲ್ಲಿ ಕುಳಿತು ನೋಡಿದಾಗ ನನಗೆ 6 ವರ್ಷ! ಏನೇನೂ ಅರ್ಥವಾಗದ ವಯಸ್ಸು ಅದು. ಆದರೆ ಆಕೆಯ ಅಭಿನಯ ಸಾಮರ್ಥ್ಯಗಳು, ಭಾವುಕತೆ, ನೃತ್ಯಗಳು ಎಲ್ಲವೂ ಅದ್ಭುತವೆ ಆಗಿದ್ದವು! ಅದರ ಮುಜರಾ ಹಾಡು ಮತ್ತು ನೃತ್ಯಗಳು ಅದ್ಭುತವಾಗಿ ಇದ್ದವು.

ಅದಾಗಿ ಕೆಲವೇ ದಿನಗಳ ಒಳಗೆ ‘ಮೀನಾ ಕುಮಾರಿ ಇನ್ನಿಲ್ಲ!’ ಎಂಬ ಶೀರ್ಷಿಕೆಯ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದಾಗ ನನಗೆ ಅರಿವಿಲ್ಲದಂತೆ ಕಣ್ಣೀರು ಗಲ್ಲವನ್ನು ತೋಯಿಸಿತ್ತು! ಆಗ ಆಕೆಗೆ ಕೇವಲ 38 ವರ್ಷ! ಆಕೆಯ ಸಾವು ಕೂಡ ಆಕೆಯ ಟ್ರಾಜಿಡಿ ಸಿನಿಮಾಗಳ ಹಾಗೆ ಒಂದು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.

Meena kumari grave

ಮೀನಾ ಕುಮಾರಿ ಪರಿಪೂರ್ಣ ಕಲಾವಿದೆ

ಆಕೆಯ ಮೊದಲ ಹೆಸರು ಮಹಜಾಬೀನ್ ಬಾನೂ. ತಂದೆ ಆಲಿ ಭಕ್ಷ್ ರಂಗ ಕಲಾವಿದ. ತಾಯಿ ಕಾಮಿನಿ ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ್ ಅವರ ವಂಶದವಳು. ಮನೆಯಲ್ಲಿ ತೀರಾ ಬಡತನದ ಕಾರಣ ಅವಳು ತನ್ನ ಐದನೇ ವರ್ಷಕ್ಕೆ ಸಿನಿಮಾದಲ್ಲಿ ಬಾಲನಟಿ ಆಗಿ ಅಭಿನಯ ಮಾಡಬೇಕಾಯಿತು. ಆಕೆ ಹುಟ್ಟು ಪ್ರತಿಭಾವಂತೆ. ಕವಿ, ಗಾಯಕಿ, ನೃತ್ಯಪಟು ಎಲ್ಲವೂ ಆಗಿದ್ದಳು. ಎಲ್ಲವನ್ನೂ ಯಾವುದೇ ಗುರು ಇಲ್ಲದೆ ಕಲಿತವಳು. ಒಬ್ಬಳು ಅದ್ಭುತ ಪ್ರತಿಭೆಯ, ಪರಿಪೂರ್ಣ ನಟಿ. ಅವಳಿಗೆ ಅಳುವುದಕ್ಕೆ ಗ್ಲಿಸರಿನ್ ಬೇಕಾಗಿರಲಿಲ್ಲ. ಭಾವಪೂರ್ಣವಾದ ಕಣ್ಣುಗಳು, ಆರ್ದ್ರವಾದ ಧ್ವನಿ, ನಡುಗುವ ತುಟಿಗಳು, ಉದ್ದವಾದ ತೋಳುಗಳು, ನೃತ್ಯಕ್ಕೆ ಹೇಳಿ ಮಾಡಿಸಿದ ಬಳ್ಳಿಯ ಹಾಗಿದ್ದ ಮೈಕಟ್ಟು, ಗುಂಗುರು ಕೂದಲು ಆಕೆಯನ್ನು ಮಹಾನ್ ತಾರೆಯಾಗಿ ಮಾಡಿದವು.

ಬೈಜೂ ಬಾವ್ರಾ ಎಂತಹ ಸಿನಿಮಾ ಅಂತೀರಿ!

ಆರಂಭದ ಕೆಲವು ದಿನಗಳಲ್ಲಿ ಹಿನ್ನೆಲೆ ಗಾಯಕಿ ಆಗಿ ಗುರುತಿಸಿಕೊಂಡ ಮೀನಾ ಕುಮಾರಿ ಮುಂದೆ ಬೈಜೂ ಬಾವ್ರಾ ಸಿನಿಮಾದ ಮೂಲಕ ಇಡೀ ಫಿಲ್ಮಿ ಜಗತ್ತಿಗೆ ಪರಿಚಯ ಆದಳು. ಆಗ ಅವಳಿಗೆ ಕೇವಲ 13 ವರ್ಷ! ನಂತರ ಸಾಲು ಸಾಲಾಗಿ ಬಂತು ನೋಡಿ ಸೂಪರ್ ಹಿಟ್ ಚಿತ್ರಗಳು. ಮೇರೆ ಅಪ್ನೆ, ಆರತಿ, ಪರಿಣೀತಾ, ಸಾಹಿಬ್ ಬೀಬಿ ಔರ್ ಗುಲಾಮ್, ದಿಲ್ ಏಕ್ ಮಂದಿರ್, ದಿಲ್ ಆಪ್ನಾ ಪ್ರೀತ್ ಪರಾಯಾ, ಕಾಜಲ್, ಚಾಂದ್, ದೋ ಬಿಘಾ ಜಮೀನ್, ಚಾಂದನಿ ಚೌಕ್, ಇಲ್ಜಾಮ್, ಫೂಲ್ ಔರ್ ಪತ್ತರ್, ಆಜಾದ್, ಶಾರದಾ, ಬಂದಿಶ್, ಏಕ್ ಹೀ ರಾಸ್ತಾ, ಮೇಮ್ ಸಾಬ್, ನಯಾ ಅಂದಾಜ್ ಹೀಗೆ ಎಲ್ಲವೂ ಕ್ಲಾಸಿಕ್ ಆದ ಸಿನಿಮಾಗಳು.

ಮೀನಾ ಕುಮಾರಿ ಬಾಲಿವುಡ್ಡನ್ನು ರೂಲ್ ಮಾಡಿದಳು

ಆಕೆಯ ಯಾವ ಸಿನಿಮಾವು ಕೂಡ ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆ ಇಲ್ಲ! ಸಾಹೀಬ್ ಬೀವಿ ಔರ್ ಗುಲಾಮ್ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಕರಣ ಆದ ಮೊದಲ ಸಿನಿಮಾ! ದೋ ಬೀಘಾ ಜಮೀನ್ ಅಂತಾರಾಷ್ಟ್ರೀಯ ಫಿಲ್ಮ್ ಉತ್ಸವಕ್ಕೆ ಆಯ್ಕೆ ಆದ ಮೊದಲ ಸಿನಿಮಾ! ಬೈಜೂ ಬಾವ್ರಾ ಸಿನಿಮಾಕ್ಕೆ ಫಿಲ್ಮ್ ಫೇರ್ ಸಂಸ್ಥೆಯ ಚೊಚ್ಚಲ ಪ್ರಶಸ್ತಿಯ ಕಿರೀಟವು ದೊರೆತಿತ್ತು!

Meena kumari grave

1963ರ ಫಿಲ್ಮ್ ಫೇರ್ ‘ಅತ್ಯುತ್ತಮ ನಟಿ’ ಪ್ರಶಸ್ತಿಗೆ ಆಕೆಯದ್ದೇ ಮೂರು ಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು! ಫೂಲ್ ಔರ್ ಪತ್ತರ್ ಹತ್ತಾರು ಸಿನಿಮಾ ಮಂದಿರಗಳಲ್ಲಿ ಗೋಲ್ಡನ್ ಜುಬಿಲಿಯನ್ನು ಆಚರಣೆ ಮಾಡಿತ್ತು! ಆಕೆಯ 18 ಸಿನಿಮಾಗಳು ಆ ಕಾಲಕ್ಕೆ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಟ್ ಮಾಡಿದ್ದವು!

ಆಗಿನ ಮಹಾನಟರಾದ ದೇವ್ ಆನಂದ್, ರಾಜಕಪೂರ್, ದಿಲೀಪ್ ಕುಮಾರ್, ರಾಜಕುಮಾರ್, ಅಶೋಕ್ ಕುಮಾರ್, ಸುನೀಲ್ ದತ್ತ, ಗುರುದತ್ತ, ಧರ್ಮೇಂದ್ರ, ಶಮ್ಮಿ ಕಪೂರ್ ಇವರೆಲ್ಲರೂ ಆಕೆಯೊಂದಿಗೆ ಅಭಿನಯಿಸಲು ತುದಿಗಾಲಿನಲ್ಲಿ ನಿಂತಿದ್ದರು. ದೊಡ್ಡ ದೊಡ್ಡ ನಿರ್ಮಾಪಕರು ಅವಳ ಡೇಟ್ಸ್ ಹೊಂದಾಣಿಕೆ ಮಾಡಲು ವರ್ಷಗಟ್ಟಲೆ ಕಾಯಲು ಸಿದ್ಧರಾಗಿದ್ದರು!

Meena Kumari was the most celebrated and iconic actress of Hindi films during those years! Almost 20 years!

Meena kumari grave

ಅಂತಹ ಮಹಾನ್ ನಟಿ ಎಲ್ಲಿ ತಪ್ಪು ಮಾಡಿದಳು?

ಅಂತಹ ಮೀನಾ ಕುಮಾರಿ ತನ್ನ ಜೀವನದಲ್ಲಿ ಒಂದು ತಪ್ಪು ಮಾಡಿದಳು. ಕಮಲ್ ಆಮ್ರೋಹಿ ಎಂಬ ಪ್ರಸಿದ್ಧ ಸಿನಿಮಾ ನಿರ್ದೇಶಕನನ್ನು ಪ್ರೀತಿಸಿ ಮದುವೆ ಆದಳು. ಆಗ ಅವನಿಗೆ 34 ವರ್ಷವಾಗಿತ್ತು ಮತ್ತು ಅವನಿಗೆ ಮೊದಲೇ ಮದುವೆ ಆಗಿ ಮೂರು ಮಕ್ಕಳು ಇದ್ದರು. ಅವಳಿಗೆ ಕೇವಲ 18 ವರ್ಷ! ಅವರು ತಮ್ಮ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆದರೆ ಒಂದು ದಿನ ಅವಳ ಅಪ್ಪನಿಗೆ ವಿಷಯವು ಗೊತ್ತಾದಾಗ ಮನೆಯಲ್ಲಿ ಕುರುಕ್ಷೇತ್ರ ಯುದ್ಧವೇ ನಡೆದುಹೋಯಿತು! ಅವನ ಚಿತ್ರಗಳಲ್ಲಿ ನಟಿಸುವುದು ಬೇಡ, ಡೈವೋರ್ಸ್ ಕೊಡು ಎಂದು ಅಪ್ಪ ಹೇಳಿದಾಗ ಅವಳು ಸುತಾರಾಂ ಒಪ್ಪಲಿಲ್ಲ. ಅಪ್ಪ ಅವಳನ್ನು ಮನೆಯಿಂದ ಹೊರ ಹಾಕಿದರು!

ಗಂಡನ ಪ್ರೀತಿಯ ನಾಟಕ ಅವಳನ್ನು ದಾರಿ ತಪ್ಪಿಸಿತು!

ಗಂಡ ಕಮಲ್ ಆಮ್ರೊಹಿ ಮೊದಲು ಪ್ರೀತಿಯ ನಾಟಕ ಮಾಡಿದ. ನಂತರ ಅವನ ಇಗೋ ಮತ್ತು ದುರಹಂಕಾರಗಳು ಮಾತಾಡಲು ತೊಡಗಿದವು. ಅವಳಿಗೆ ನೂರಾರು ಶರ್ತಗಳನ್ನು ಹೊರಿಸಿದ ಆತನು ಬೇರೆಯವರಿಂದ ಅವಳ ಬಗ್ಗೆ
ಪತ್ತೇದಾರಿಕೆ ಮಾಡಿಸಿದನು. ಸಾರ್ವಜನಿಕ ವೇದಿಕೆಯಲ್ಲಿ ಅಪಮಾನ ಮಾಡಿದ! ದೈಹಿಕ ಹಿಂಸೆ ಕೊಡಲು ಆರಂಭಿಸಿದ.

ಪತಿ ಕಮಲ್‌ ಆಮ್ರೋಹಿ ಜತೆಗೆ ಮೀನಾ ಕುಮಾರಿ

ಮೀನಾ ಕುಮಾರಿ ನೋವಿನಿಂದ ಹೊರಬರಲು ಆಗದೇ ಒದ್ದಾಡಿದಳು. ತಾನು ತುಂಬಾ ಪ್ರೀತಿ ಮಾಡಿದ ಗಂಡ ಈ ರೀತಿ ಹಿಂಸೆ ಕೊಡಲು ತೊಡಗಿದಾಗ ಮೀನಾ ಕುಮಾರಿ ಭರವಸೆಯನ್ನು ಕಳೆದುಕೊಂಡಳು. ಯಾರನ್ನು ನಂಬಿ ಅವಳು ಮನೆ, ಹೆತ್ತವರನ್ನು ಬಿಟ್ಟು ಬಂದಿದ್ದಳೋ ಅವನೇ ಆಕೆಯ ಪಾಲಿಗೆ ವಿಲನ್ ಆದ. ಆಕೆ ಕಷ್ಟಪಟ್ಟು ದುಡಿದ ದುಡ್ಡು ಅವನು ಖಾಲಿ ಮಾಡಿದ. ಕುಡಿತ, ನಿದ್ದೆ ಮಾತ್ರೆ ಎಲ್ಲವೂ ಆಕೆಗೆ ಅಭ್ಯಾಸ ಆಯಿತು. ಆಕೆ ಬದುಕುವ ಭರವಸೆ ಕಳೆದುಕೊಂಡಳು.

ಮೀನಾ ಕುಮಾರಿ ತನ್ನ ಸಿನಿಮಾಗಳ ಹಾಗೆ ಟ್ರಾಜಿಕ್ ಅಂತ್ಯ ಕಂಡಳು!

ಕ್ರಾನಿಕ್ ಇನ್ಸೋಮ್ನಿಯಾ ಎಂಬ ಕಾಯಿಲೆಯು ಕೇವಲ 38ನೆಯ ವಯಸ್ಸಿಗೆ ಅವಳ ಉಸಿರನ್ನು ನಿಲ್ಲಿಸಿಬಿಟ್ಟಿತು! ಹೀಗೆ ಮೀನಾ ಕುಮಾರಿ ಎಂಬ ಮಹಾನ್ ತಾರೆಯ ಅಂತ್ಯವು ಕಣ್ಣೀರ ಕಥೆಯಾಗಿ ಹೋಯಿತು. ಕನ್ನಡದ ಕಲ್ಪನಾ, ಮಂಜುಳಾ, ಮಲಯಾಳಂ ಸಿನಿಮಾದ ಶೋಭಾ ಮೊದಲಾದವರು ಮಾಡಿದ ತಪ್ಪನ್ನೇ ಆಗಿ ಮಾಡಿದ್ದಳು.

ಮೀನಾ ಕುಮಾರಿ ಸಮಾಧಿ

ಅವಳ ಸಮಾಧಿಯ ಮೇಲಿನ ಆ ಎರಡು ವಾಕ್ಯಗಳು….

ಮೀನಾ ಕುಮಾರಿಯ ಸಮಾಧಿಯ ಮೇಲೆ ಕೆತ್ತಲ್ಪಟ್ಟ ಎರಡೇ ಎರಡು ವಾಕ್ಯಗಳು ನಮ್ಮ ಹೃದಯವನ್ನು ಕರಗಿಸಿಬಿಡುತ್ತವೆ.

‘ಅವಳು ತನ್ನ ಜೀವನವನ್ನು ಮುರಿದ ಪಿಟೀಲು, ಅಪೂರ್ಣ ಹಾಡು ಮತ್ತು ಒಡೆದ ಹೃದಯದೊಂದಿಗೆ ಮುಗಿಸಿ ಹೊರಟಳು! ಆದರೆ ಒಂದೇ ಒಂದು ವಿಷಾದವೂ ಇಲ್ಲ!’

ಅವಳಿಗೆ ಒಂದೆರಡು ಹನಿ ಕಣ್ಣೀರನ್ನು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ : ರಾಜ ಮಾರ್ಗ ಅಂಕಣ :‌ ಯಾವತ್ತಾದ್ರೂ ತುಂಬ ಡಿಪ್ರೆಸ್‌ ಆದಾಗ ನೀವು ಈ ಕಪ್ಪು ಜಿಂಕೆ ಕಥೆ ಓದಿಬಿಡಿ ಸಾಕು!

Exit mobile version