Site icon Vistara News

ರಾಜ ಮಾರ್ಗ ಅಂಕಣ | ಲಕ್ಕಿ ಮ್ಯಾನ್‌ ಮತ್ತು ರಿವೈಂಡೆಡ್‌ ಲೈಫ್‌! ಹೀಗೆ ನಾವೂ ಮರಳಿ ಜೀವಿಸೋ ಅವಕಾಶ ಸಿಕ್ಕರೆ ಚೆನ್ನಾಗಿತ್ತಲ್ವ?

lucky man poster

ಈ ವಾರ ಬಿಡುಗಡೆಯಾದ ಲಕ್ಕಿ ಮ್ಯಾನ್ ಕನ್ನಡ ಸಿನೆಮಾವನ್ನು ವಿಮರ್ಶೆ ಮಾಡಲು ನಾನು ಹೋಗುವುದಿಲ್ಲ! ಅದು ನನ್ನ ಬರವಣಿಗೆಯ ಉದ್ದೇಶವೇ ಅಲ್ಲ. ಆದರೆ ಅದು ತೆರೆದು ತೋರಿಸಿದ ಒಂದು ಥೀಮ್ ಇದೆಯಲ್ಲ ಅದು ಯಾರನ್ನಾದರೂ ಅಲುಗಾಡಿಸುವಂತದ್ದು! ಅದನ್ನು ಸರಿಯಾಗಿ ನಾವು ಅರ್ಥ ಮಾಡಿಕೊಂಡರೆ ನಮ್ಮ ಬದುಕು ಖಂಡಿತವಾಗಿ ಬದಲಾಗಬಹುದು.

ಎರಡೇ ಸಾಲಿನಲ್ಲಿ ಅದರ ಕತೆ ಹೇಳಿ ಬಿಡುತ್ತೇನೆ. ಬಾಲ್ಯದಿಂದಲೂ ಬೆಸ್ಟ್ ಗೆಳೆಯರು ಆಗಿರುವ ಅರ್ಜುನ್ ಮತ್ತು ಅನು ಮುಂದೆ ಮದುವೆ ಕೂಡ ಆಗುತ್ತಾರೆ. ಆದರೆ ಪ್ರೀತಿಯ ಫೀಲ್ ಬಾರದೇ ಒದ್ದಾಡುತ್ತಾರೆ. ಅದೇ ಹೊತ್ತಿಗೆ ಅರ್ಜುನ್ ತನ್ನ ಕಾಲೇಜಿನ ಕ್ರಷ್ ಆಗಿದ್ದ ಮೀರಾ ಎಂಬ ಹುಡುಗಿಯನ್ನು ಮತ್ತೆ ಮೀಟ್ ಆಗುತ್ತಾನೆ. ಅವನು ಅವಳ ಪ್ರೀತಿಗೆ ಶರಣಾಗುತ್ತಾನೆ. ಆಗ ಅರ್ಜುನ್ ಮತ್ತು ಅನು ಕುಟುಂಬದಲ್ಲಿ ಬಿರುಕು ಉಂಟಾಗಿ ಡೈವೋರ್ಸ್ ತನಕ ಹೋಗುತ್ತದೆ.

ಆಗ ಆವನ ಜೀವನದಲ್ಲಿ ದೇವರು (ಪುನೀತ್ ರಾಜಕುಮಾರ್) ಪ್ರವೇಶ ಆಗುತ್ತದೆ. ಅವನ ಕತೆಯನ್ನು ಕೇಳಿ ದೇವರು ಅವನಿಗೆ ಆತನ ಬದುಕನ್ನು ರಿವೈಂಡ್ ಮಾಡಿ ಮತ್ತೆ ಬದುಕುವ ಅವಕಾಶವನ್ನು ಕೊಡುತ್ತಾರೆ. ಅವನ ತಪ್ಪುಗಳನ್ನು ಅವನೇ ಸರಿಪಡಿಸುವ ಅವಕಾಶಗಳನ್ನು ಕೊಡುತ್ತಾರೆ.

ಮುಂದೇನಾಯ್ತು? ನೀವೇ ಸಿನೆಮಾ ನೋಡಿ!

ಹಾಗೇನಾದರೂ ನಮ್ಮ ಜೀವನದಲ್ಲಿ ಅವಕಾಶ ಸಿಕ್ಕಿದ್ದರೆ? ಒಂದು ಕ್ಯಾಸೆಟನ್ನು ರಿವೈಂಡ್ ಮಾಡಿ ಮತ್ತೆ ಹಾಡುಗಳನ್ನು ಮೊದಲಿನಿಂದ ಕೇಳಲು ಸಾಧ್ಯ ಆದ ಹಾಗೆ ನಮ್ಮ ಜೀವನವನ್ನು ರಿವೈಂಡ್ ಮಾಡಿ ಮತ್ತೆ ಬದುಕಲು ಸಾಧ್ಯ ಆದರೆ..?

ಅದೊಂದು ಸುಂದರವಾದ ಕಲ್ಪನೆ. ಇದು ಸಾಧ್ಯವೇ ಎಂದು ಯೋಚನೆ ಮಾಡುವುದನ್ನು ಬಿಟ್ಟು ಒಂದರ್ಧ ಘಂಟೆ ಕಣ್ಣು ಮುಚ್ಚಿ ಆರಾಮವಾಗಿ ಕುಳಿತು ಹಾಗೆಯೇ ಕಲ್ಪನಾ ಲೋಕದಲ್ಲಿ ವಿಹಾರ ಮಾಡಿಬಿಡಿ!

ಸುಂದರವಾದ ಬಾಲ್ಯದ ಮಧುರ ಕ್ಷಣಗಳನ್ನು ಮತ್ತೆ ಅನುಭವಿಸುತ್ತ ಅವುಗಳನ್ನು ನಿಮ್ಮ ಭಾವಕೋಶದಲ್ಲಿ ಸಂಗ್ರಹ ಮಾಡಿಕೊಳ್ಳಿ. ನೀವು ಬೆಳೆಯುತ್ತ ಹೋದಂತೆ ಕಳೆದುಕೊಂಡ ಮುಗ್ಧತೆಯನ್ನು ಮತ್ತೆ ಸಂಪಾದನೆ ಮಾಡಲು ಸಾಧ್ಯವೇ ಎಂದು ಯೋಚಿಸಿ!

ನೀವು ಬಾಲ್ಯದಿಂದ ಸಂಪಾದನೆ ಮಾಡಿಕೊಂಡ ಗೆಳೆಯ, ಗೆಳತಿಯರು ಇಂದು ನಿಮ್ಮ ಜೊತೆಗೆ ಇದ್ದಾರಾ ಎಂದು ಒಮ್ಮೆ ಕಣ್ಣು ಹಾಯಿಸಿ. ಯಾರಾದರೂ ವಿರಸ ಮಾಡಿಕೊಂಡು ಬಿಟ್ಟು ಹೋಗಿದ್ದರೆ ಮತ್ತೆ ಅವರನ್ನು ನಿಮ್ಮ ಬದುಕಿನಲ್ಲಿ ಸೆಳೆಯಲು ನಿಮ್ಮ ಪ್ರಯತ್ನ ಆರಂಭಿಸಿ.

ನಿಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಯಾರನ್ನಾದರೂ ನೀವು ಹರ್ಟ್ ಮಾಡಿದ್ದರೆ ಅವರ ಒಂದು ಲಿಸ್ಟ್ ಮಾಡಿ. ನೀವೇ ಅವರಿಗೆ ಕಾಲ್ ಮಾಡಿ ಕ್ಷಮೆ ಕೇಳಲು ಮರೆಯಬೇಡಿ. ಸಾರಿ ಕಣೋ, ಸಾರಿ ಕಣೆ ಎನ್ನುವುದು ನಿಮ್ಮಿಂದಲೇ ಆರಂಭ ಆಗಲಿ!

ಮಳೆಯಲ್ಲಿ ನೆನೆಯುವ, ಮಣ್ಣಲ್ಲಿ ಆಟವಾಡುವ, ನಕ್ಷತ್ರಗಳನ್ನು ಎಣಿಸುವ, ಗಿಡ ಮರಗಳನ್ನು ಸ್ಪರ್ಶ ಮಾಡುವ, ಮರಳಿನ ಅರಮನೆ ಕಟ್ಟುವ ಅನುಭವ ನೀವು ಬಾಲ್ಯದಲ್ಲಿ ಮಿಸ್ ಮಾಡಿದ್ದೀರಿ ಅಂತಾದರೆ ವಿಷಾದ ಪಡಬೇಡಿ! ಅವುಗಳನ್ನು ನೀವು ಈಗಲೂ ಮಾಡಬಹುದು!

ನೀವು ಕಾಲೇಜು ಅಥವ ಪ್ರೌಢಶಾಲೆಯ ಹಂತದಲ್ಲಿ ಯಾವುದೇ ಹುಡುಗ ಅಥವಾ ಹುಡುಗಿಯನ್ನು ಪ್ರೀತಿಸಿ ಅವರಿಗೆ ಪ್ರೊಪೋಸ್ ಮಾಡಲು ಧೈರ್ಯ ಇಲ್ಲದೆ ನೊಂದಿದ್ದರೆ ಬೇಸರ ಮಾಡಬೇಡಿ. ಅವರಿಗೆ ಇಂದೇ ನೇರವಾಗಿ ಕಾಲ್ ಮಾಡಿ ನಿಮ್ಮ ಪ್ರೀತಿಯ ಬಗ್ಗೆ ಹೇಳಿ ಗಟ್ಟಿಯಾಗಿ ನೆಗಾಡಿ! ಮತ್ತು ಅದು ಕ್ರಷ್ ಕಣ್ರೋ ಎಂದು ಹೇಳುವುದನ್ನು ಖಂಡಿತ ಮರೆಯಬೇಡಿ!

ನೀವು ವಿದ್ಯಾರ್ಥಿ ಆಗಿದ್ದಾಗ ಬರೆದಿಟ್ಟ ಅಪೂರ್ಣ ಕತೆ ಅಥವ ಕವನಗಳನ್ನು ಹುಡುಕಿ ತೆಗೆಯಿರಿ. ಕೀಳರಿಮೆಯಿಂದ ಯಾರಿಗೂ ತೋರಿಸಲು ಸಂಕೋಚ ಪಟ್ಟದನ್ನು ನೆನೆದು ದುಃಖ ಪಡಬೇಡಿ. ಅವುಗಳನ್ನು ಮತ್ತೆ ಬರೆಯಿರಿ ಮತ್ತು ಪತ್ರಿಕೆಗಳಿಗೆ ಸೆಂಡ್ ಮಾಡಿ!

ನಿಮ್ಮ ಗಂಡ ಅಥವಾ ಹೆಂಡತಿಯ ಜೊತೆ ಜಗಳ ಮಾಡಿದ್ದರೆ ಅವರ ಜೊತೆ ಒಂದು ಕ್ಷಣ ಕೂತು ಬಿಡಿ. ಇಬ್ಬರೂ ಕಣ್ಣು ಮುಚ್ಚಿ ಪರಸ್ಪರ ಕೈಗಳನ್ನು ಮೆದುವಾಗಿ ಹಿಡಿದು ಪ್ರೀತಿಯನ್ನು ಫೀಲ್ ಮಾಡಿ! ನಿಮ್ಮ ಮೊದಲ ಭೇಟಿ, ಮೊದಲ ಸ್ಪರ್ಶ, ಮೊದಲ ಪ್ರೀತಿ… ಹೀಗೆ ಇಬ್ಬರೂ ನೆನಪು ಮಾಡುತ್ತಾ ಹೋಗಿ ಮತ್ತು ನಿಮ್ಮ ಬಾಳ ಸಂಗಾತಿಗೆ ಮತ್ತೆ ಪ್ರೊಪೋಸ್ ಮಾಡಿ!

ನಿಮ್ಮ ಪ್ರೀತಿಪಾತ್ರರಿಗೆ ನೀವು ಮುಚ್ಚಿಟ್ಟ ವಿಷಯಗಳು, ಹೇಳಿದ ಸುಳ್ಳು ಇದ್ದರೆ ಅವೆಲ್ಲವನ್ನೂ ಅವರಿಗೆ ನೇರವಾಗಿ ಈಗ ಹೇಳಿ ಮತ್ತು ಕ್ಷಮೆಯನ್ನು ಕೇಳಲು ಹಿಂಜರಿಯಬೇಡಿ!

ನೀವು ಯಾರಿಗಾದರೂ ಪ್ರೀತಿಯವರಿಗೆ ಉಪಕಾರ ಮಾಡಿ ಅದು ಇನ್ನೂ ನಿಮ್ಮ ಮನಸ್ಸಲ್ಲಿ ಇದ್ದರೆ ಅದನ್ನು ಪ್ರೀತಿ ಎಂಬ ರಬ್ಬರ್ ತೆಗೆದುಕೊಂಡು ಅಳಿಸಿ ಹಾಕಿ!

ನಿಮಗೆ ಯಾರದ್ದಾದರೂ ಅನುದ್ದೇಶಿತವಾದ ತಪ್ಪುಗಳನ್ನು ಕ್ಷಮಿಸಲು ಬಾಕಿ ಇದ್ದರೆ ಮತ್ತು ಅವರು ನಿಮ್ಮ ಕ್ಷಮೆಗೆ ಅರ್ಹರು ಎಂದು ನಿಮಗೆ ಕನ್ವಿನ್ಸ್ ಆದರೆ ಅವರಿಗೆ ಮೆತ್ತಗೆ ಒಂದು ಲವ್ ಯು ಮೆಸೇಜ್ ಹಾಕಿ ಕ್ಷಮಿಸಿದ್ದೇನೆ ಕಣೋ ಎಂದು ಹೇಳಿ!

ನಿಮಗೆ ಯಾರ ಮೇಲಾದರೂ ಸುಟ್ಟು ಬಿಡುವ ಸಿಟ್ಟು ಇದ್ದರೆ ಅವರ ಹೆಸರಿಗೆ ಒಂದು ದೀರ್ಘವಾದ ಪತ್ರ ಬರೆದು ಸಿಟ್ಟು ಹೊರ ಹಾಕಿ! ಆದರೆ ಪತ್ರವನ್ನು ಅವರಿಗೆ ಪೋಸ್ಟ್ ಮಾಡದೆ ಹರಿದು ಹಾಕಿ!

ನಿಮಗೆ ಯಾರಿಗಾದರೂ ಖುಷಿಯನ್ನು ಹಂಚುವ ಕೆಲಸ ಇನ್ನೂ ಬಾಕಿ ಇದೆ ಎನ್ನಿಸಿದರೆ ಅದಕ್ಕೆ
ಮುಹೂರ್ತವನ್ನು ಕಾಯದೆ ಇಂದೇ ನಿಮ್ಮ ಜೀವನದ ಕೊನೆಯ ದಿನ ಎಂದು ಎಣಿಸಿ ತಕ್ಷಣ ಮಾಡಿ ಮುಗಿಸಿ!

ನಮಗೆಲ್ಲ ಖಂಡಿತವಾಗಿಯೂ ಗೊತ್ತಿರುವ ಸತ್ಯ ಏನೆಂದರೆ ಸಿನಿಮಾ ಅಂದರೆ ಕಲ್ಪನೆ ಅಥವಾ ಭ್ರಮೆ! ಅಂದರೆ ನಮ್ಮ ಜೀವನವನ್ನು ರಿವೈಂಡ್ ಮಾಡಿ ಮತ್ತೆ ಬದುಕುವ ಅವಕಾಶವು ನಮಗೆ ಖಂಡಿತವಾಗಿಯೂ ಸಿಗುವುದಿಲ್ಲ!

ಅದಕ್ಕಾಗಿ ವಿಷಾದ, ನೋವು ಬೇಡ. ಈ ಕಲ್ಪನೆಯೇ ಇಷ್ಟು ಖುಷಿ ಕೊಡುತ್ತಿದೆ ಅನ್ನುವುದು ನಿಮಗೆ ಈಗ ಗೊತ್ತಾಯಿತು. ಇದನ್ನು ಸಾಕ್ಷಾತ್ಕಾರ ಮಾಡುವ ಅವಕಾಶ, ನಿಮ್ಮ ಜೀವನದ ಪ್ರತೀ ಕ್ಷಣವನ್ನೂ ಆನಂದಿಸುವ ಅನೇಕ ಅವಕಾಶಗಳು ಇನ್ನೂ ನಿಮ್ಮ ಜೀವನದಲ್ಲಿ ಮುಕ್ತವಾಗಿವೆ!

ಅದಕ್ಕಾಗಿ ನೀವು ನಂಬಿದ ದೇವರಿಗೆ ಒಂದು ಸುಂದರವಾದ ಥ್ಯಾಂಕ್ಸ್ ಹೇಳಿ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಬ್ದುಲ್ ಖಾದಿರ್ ಆವತ್ತು ಸಚಿನ್ ಕಿವಿಯಲ್ಲಿ ಹೇಳಿದ್ದೇನು? Next ಓವರಲ್ಲೇ 28 ರನ್‌ ಚಚ್ಚಿದ್ದು ಹೇಗೆ?

Exit mobile version