Site icon Vistara News

ರಾಜ ಮಾರ್ಗ ಅಂಕಣ | ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎನ್ನುವುದಕ್ಕೆ ಸಾರ್ವಕಾಲಿಕ ಮಾದರಿ ಉಳ್ಳಾಲ ಶ್ರೀನಿವಾಸ ಮಲ್ಯರು

US Mallya

1946ರ ಹೊತ್ತಿಗೆ ಉಡುಪಿ ಮತ್ತು ದಕ್ಷಿಣಕನ್ನಡ ಉಭಯ ಜಿಲ್ಲೆಗಳು ಒಂದೇ ಲೋಕಸಭಾ ಕ್ಷೇತ್ರ ಆಗಿತ್ತು. 1946ರಿಂದ 1965ರವರೆಗಿನ ಸುದೀರ್ಘ ಅವಧಿಯಲ್ಲಿ (ಒಟ್ಟು 18 ವರ್ಷ) ಮಂಗಳೂರು ಲೋಕಸಭಾ ಕ್ಷೇತ್ರದ ಎಂಪಿ ಆಗಿದ್ದವರು ಉಳ್ಳಾಲ ಶ್ರೀನಿವಾಸ ಮಲ್ಯರು. ಅವರು ಮಾಡಿದ ಅಭಿವೃದ್ಧಿಯ ಕೆಲಸಗಳು, ವಿಧಾಯಕ ಕಾಮಗಾರಿಗಳು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ. ಲೋಕಸಭೆಯಲ್ಲಿ ಅತ್ಯಂತ ಪ್ರಭಾವಿ ಎಂಪಿ ಆಗಿದ್ದರೂ, ಪ್ರಧಾನಿ ಜವಾಹರ ಲಾಲ್ ನೆಹರೂ, ಚಕ್ರವರ್ತಿ ರಾಜಗೋಪಾಲಾಚಾರಿ,ಲಾಲ್ ಬಹಾದ್ದೂರ್ ಶಾಸ್ತ್ರೀ, ಪಟೇಲ್ ಮೊದಲಾದವರ ಆಪ್ತ ವಲಯದಲ್ಲಿ ಇದ್ದರೂ ಯಾವುದೇ ಮಂತ್ರಿ ಪದವಿಯ ಅಪೇಕ್ಷೆಯನ್ನು ಮಾಡದೆ ತನ್ನ ಲೋಕಸಭಾ ಕ್ಷೇತ್ರಕ್ಕೆ ಅತ್ಯಂತ ಗಣನೀಯವಾದ ಕೊಡುಗೆ ನೀಡಿದ ಶ್ರೀನಿವಾಸ ಮಲ್ಯರನ್ನು ನಾವು ಮರೆಯುವುದು ಹೇಗೆ?

ಆಗರ್ಭ ಶ್ರೀಮಂತ ಕುಟುಂಬದ ಹಿನ್ನೆಲೆ!
ಮಲ್ಯರು ಜನಿಸಿದ್ದು 1902ರ ನವಂಬರ್ 21ರಂದು. ಅವರದ್ದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬ. ಕೊಂಕಣಿ ಅವರ ಮಾತೃಭಾಷೆ. ಮಂಗಳೂರಿನ ರಥಬೀದಿಯ ಸಮೀಪ ಇರುವ ಬಜಿಲಕೇರಿಯಲ್ಲಿ ಅವರು ಹುಟ್ಟಿದ ಮನೆ ಇದೆ. ಅವರ ತಂದೆ ಬಂಡಸಾಲೆ ಹೊಂದಿದ್ದು ಬಹು ದೊಡ್ಡ ವ್ಯಾಪಾರಿ ಆಗಿದ್ದರು. ಅವರ ಕುಟುಂಬ ಶತಮಾನಗಳಷ್ಟು ಹಿಂದೆ ಉಳ್ಳಾಲದಿಂದ ಮಂಗಳೂರಿಗೆ ವಲಸೆ ಬಂದಿತ್ತು. ಮಲ್ಯರು ಮೊದಲು ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಮೆಟ್ರಿಕ್ ಮುಗಿಸಿ ನಂತರ ಪದವಿಯನ್ನು ಪಡೆಯಲು ಮಂಗಳೂರಿನ ಸರಕಾರಿ ಕಾಲೇಜಿಗೆ ಸೇರಿದರು.

ಶ್ರೀನಿವಾಸ ಮಲ್ಯ

ಗಾಂಧೀಜಿಯ ಪ್ರಭಾವದಿಂದ ಶಿಕ್ಷಣ ತೊರೆದರು!
ಆಗ 1920ರ ಆಗಸ್ಟ್ 19ರಂದು ಮಂಗಳೂರಿಗೆ ಗಾಂಧೀಜಿ ಬಂದು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ್ದರು. ಆಗ ಸ್ವಾತಂತ್ರ್ಯ ಹೋರಾಟಗಾರರ ಲೀಡರ್ ಆಗಿದ್ದ ಕಾರ್ನಾಡು ಸದಾಶಿವರಾಯರು ಯುವಕ ಶ್ರೀನಿವಾಸ ಮಲ್ಯರನ್ನು ಸ್ವಾತಂತ್ರ್ಯದ ಹೋರಾಟಕ್ಕೆ ಧುಮುಕಲು ಪ್ರೇರಣೆ ನೀಡಿದರು. ತಮ್ಮ ಪದವಿ ಶಿಕ್ಷಣದ ಆಸೆಯನ್ನು ತೊರೆದು ಮಲ್ಯರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಖಾದಿ ಬಟ್ಟೆ ಧರಿಸಿದರು. ತಲೆಗೆ ಗಾಂಧಿ ಟೋಪಿ ಬಂದಿತು. 1930ರ ಉಪ್ಪಿನ ಸತ್ಯಾಗ್ರಹ, 1942ರ ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕ್ವಿಟ್ ಇಂಡಿಯಾ ಚಳುವಳಿ ಹೊತ್ತಿನಲ್ಲಿ ಸೆರೆಮನೆಯ ವಾಸ ಅನುಭವಿಸಿದರು. ಮತ್ತೆ ಸುದೀರ್ಘ ಅವಧಿಗೆ ಮುಂಬೈಯಲ್ಲಿ ಅವರು ಭೂಗತ ಆದರು .

ಮಂಗಳೂರಿನ ಮೊದಲ ಸಂಸದ
1946ರ ಹೊತ್ತಿಗೆ ಭಾರತಕ್ಕೆ ಸ್ವಾತಂತ್ರ್ಯದ ಸಾಧ್ಯತೆಯು ಗೋಚರ ಆಗತೊಡಗಿತು. ಆಗ ಕಾಂಗ್ರೆಸ್ ಪಕ್ಷವು ನಡುಗಾಲದ ಸರಕಾರವನ್ನು ರಚಿಸಿತು. ಆಗ ಮೊದಲ ಬಾರಿ ಮಲ್ಯರು ಎಂಪಿ ಆಗಿ ದೆಹಲಿಯ ಪಾರ್ಲಿಮೆಂಟ್ ಭವನವನ್ನು ಪ್ರವೇಶ ಮಾಡಿದರು. ಹೃದಯದಲ್ಲಿ ರಾಷ್ಟ್ರಪ್ರೇಮ, ಕಾಂಗ್ರೆಸ್ ಪಕ್ಷದ ಮೇಲೆ ಇದ್ದ ಅಚಲವಾದ ನಂಬಿಕೆ ಅವರನ್ನು ಮುಂದೆ ಗೆಲ್ಲಿಸುತ್ತಾ ಹೋಯಿತು. 1952, 1957 ಮತ್ತು 1962 ಹೀಗೆ ಪ್ರತೀ ಚುನಾವಣೆಯಲ್ಲಿ ಮಲ್ಯರು ಸುಲಭವಾಗಿ ಗೆದ್ದು ಬಂದರು. ನಾನು ಆಗಲೇ ಹೇಳಿದ ಹಾಗೆ ಅವರ ಲೋಕಸಭಾ ಕ್ಷೇತ್ರವು ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿತ್ತು!

1951ರಲ್ಲಿ ಲಾಲ್‌ ಬಹಾದ್ದೂರ ಶಾಸ್ತ್ರಿ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆದಾಗ ಮಲ್ಯರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದರು. ಮುಂದೆ ಕೇಂದ್ರ ಸರ್ಕಾರದ ಮುಖ್ಯ ಸಚೇತಕ ಆದರು. ಆದರೆ ಯಾವುದೇ ಮಂತ್ರಿ ಪದವಿಯು ಅವರ ಕಾಲಬುಡಕ್ಕೆ ಬಂದಾಗಲೂ ಸ್ವೀಕರಿಸಲು ಹಿಂದೇಟು ಹಾಕಿದರು. ಅಧಿಕಾರದ ಸ್ಥಾನಗಳಿಗೆ ಆಸೆ ಪಡಲಿಲ್ಲ. ಅಂದು ಕಾಂಗ್ರೆಸ್ ಪಕ್ಷದ ನೀತಿ ನಿರೂಪಣೆಯ ನೇತೃತ್ವ ವಹಿಸಿದ್ದ ‘ಕಾಂಗ್ರೆಸ್ ಸಿಂಡಿಕೇಟ್’ ಸದಸ್ಯರಾಗಿ ಕಿಂಗ್ ಮೇಕರ್ ಆದರು. ನೆಹರೂ ನಂತರ ಶಾಸ್ತ್ರೀಜಿ ಪ್ರಧಾನಿಯಾಗಿ ಆಯ್ಕೆ ಆಗಲು, ಇಂದಿರಾ ಗಾಂಧಿ ಸಂಸ್ಕೃತಿ ಮಂತ್ರಿ ಆಗಿ ಮೊದಲ ಬಾರಿಗೆ ಆಯ್ಕೆ ಆಗಲು ಮಲ್ಯರ ಅಭಿಪ್ರಾಯವು ನಿರ್ಣಾಯಕ ಆಗಿತ್ತು ಎಂದರೆ ನಿಮಗೆ ನಂಬಲು ಕಷ್ಟ ಆಗಬಹುದು.

ಬಜಪೆಯ ಹಳೆ ವಿಮಾನನಿಲ್ದಾಣ

ಕರಾವಳಿಗೆ ಹರಿದು ಬಂತು ಭಾರಿ ಕೊಡುಗೆಗಳು!
ಆದರೆ ಇಂದು ನಾವು ಶ್ರೀನಿವಾಸ ಮಲ್ಯ ಅವರನ್ನು ನೆನಪಿಸಲು ಮುಖ್ಯವಾದ ಕಾರಣ ಅವರ ಅಭಿವೃದ್ದಿಯ ಕೆಲಸಗಳು. ತನ್ನ ಸಂಸದ ಕ್ಷೇತ್ರಕ್ಕೆ ಅವರು ಅತೀ ಹೆಚ್ಚು ಕೊಡುಗೆಗಳನ್ನು ತೆಗೆದುಕೊಂಡು ಬಂದರು. ಕೇಂದ್ರ ಸರಕಾರದ ವಿವಿಧ ಮಂತ್ರಾಲಯಗಳನ್ನು ಸುತ್ತಿ ಅನುದಾನ ತರುವುದರಲ್ಲಿ ಅವರಿಗೆ ಅವರೇ ಸಮ!

ಅವರ ವಿಶೇಷ ಮುತುವರ್ಜಿಯಿಂದ ಮಂಗಳೂರು ಬಂದರು, ಮಂಗಳೂರು ಆಕಾಶವಾಣಿ, ಸರ್ಕ್ಯುಟ್ ಹೌಸ್, ಬಜಪೆ ವಿಮಾನ ನಿಲ್ದಾಣ, ಮಂಗಳೂರು ರಸಗೊಬ್ಬರ ಕಾರ್ಖಾನೆ(ಎಂಸಿಎಫ್), ಮಂಗಳೂರು- ಬೆಂಗಳೂರು ರೈಲು ಮಾರ್ಗ, ವೆನ್ಲಾಕ್ ಆಸ್ಪತ್ರೆಯ ನವೀಕರಣ, ಎರಡು ರಾಷ್ಟ್ರೀಯ ಹೆದ್ದಾರಿಗಳು, ಹತ್ತಾರು ಸೇತುವೆಗಳು, ಸುರತ್ಕಲ್ NITK.. ಹೀಗೆ ದೊಡ್ಡ ದೊಡ್ಡ ಕೊಡುಗೆಗಳು ಕರಾವಳಿಗೆ ಹರಿದು ಬಂದವು!

ನವಮಂಗಳೂರು ಬಂದರು ಪ್ರದೇಶ

ಸುರತ್ಕಲ್ NITK ಒಲಿದದ್ದು ಹೇಗೆ?
ಸುರತ್ಕಲ್ಲಿನ NITK (ಅದರ ಮೊದಲ ಹೆಸರು KREC) ಅವರು ಕರಾವಳಿ ಕರ್ನಾಟಕಕ್ಕೆ ನೀಡಿದ ಬಹು ದೊಡ್ಡ ಕೊಡುಗೆ. ಆಗ ಶಾಸ್ತ್ರೀಜಿ ಕೇಂದ್ರ ಮಾನವ ಸಂಪನ್ಮೂಲ ಮಂತ್ರಿ ಆಗಿದ್ದರು. ದಕ್ಷಿಣ ಭಾರತಕ್ಕೆ ಒಂದೇ ಒಂದು ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜು ಮಂಜೂರು ಆದ ಸುದ್ದಿ ಮಲ್ಯರಿಗೆ ಅದು ಹೇಗೋ ತಿಳಿಯಿತು. ಅವರು ಶಾಸ್ತ್ರೀ ಅವರ ಮುಂದೆ ಹೋಗಿ ಅದನ್ನು ಮಂಗಳೂರಿಗೆ ಕೊಡಬೇಕು ಎಂದು ಧರಣಿ ಕೂತರು. ಶಾಸ್ತ್ರೀಜಿ ಅವರು ತುಂಬಾನೇ ನಯವಾಗಿ “ಇಲ್ಲ ಇಲ್ಲ, ಅದನ್ನು ಹೈದರಾಬಾದ್ ಅಥವಾ ಚೆನ್ನೈಯಲ್ಲಿ ಮಾಡೋಣ, ನಿಮ್ಮಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ನೀವು ಹಟ ಮಾಡಬೇಡಿ” ಅಂದರು. ಆದರೆ ಮಲ್ಯರು ಘಂಟೆಗಟ್ಟಲೆ ಕುಳಿತಲ್ಲಿಂದ ಏಳಲೇ ಇಲ್ಲ! ಶಾಸ್ತ್ರಿಗಳಿಗೆ ಉಭಯ ಸಂಕಟ ಆರಂಭ ಆಯಿತು.

ಒಂದಿಷ್ಟು ಶರ್ತಗಳನ್ನು ಮುಂದಿಟ್ಟು ತಾನು ಒಂದು ವಾರದಲ್ಲಿ ಸಮೀಕ್ಷೆ ಮಾಡಲು ಬರುತ್ತೇನೆ, ನಿಮಗೆ ಈಗ ಭರವಸೆ ಕೊಡುವುದಿಲ್ಲ ಎಂದರು ಶಾಸ್ತ್ರೀಜಿ. ಮಲ್ಯರು ಅಲ್ಲಿಂದ ತಮ್ಮ ಮಂಗಳೂರಿನ ಗೆಳೆಯರಾದ ಕುಡ್ವ ಮೊದಲಾದವರನ್ನು ಸಂಪರ್ಕ ಮಾಡಿ ಮಾರ್ಗದರ್ಶನ ಮಾಡಿದರು. ಶಾಸ್ತ್ರಿಯವರು ಸಮೀಕ್ಷೆ ಮಾಡಲು ಸುರತ್ಕಲ್ಲಿಗೆ ಬಂದಾಗ ಮಲ್ಯರು ಮಾಡಿದ ಭಾರಿ ವ್ಯವಸ್ಥೆಯನ್ನು ನೋಡಿ ಬೆರಗಾದರು.

ಮುಂದೆ ಶಾಸ್ತ್ರಿಯವರ ಕೈಯಿಂದ NITK ಸಂಸ್ಥೆಗೆ ಶಂಕುಸ್ಥಾಪನೆಯು ಆಯಿತು. ಎಲ್ಲಿಗೋ ಮಂಜೂರು ಆಗಿದ್ದ NITK (ಮೊದಲ ಹೆಸರು KREC) ಸುರತ್ಕಲ್‌ಗೆ ಬಂದ ಕಥೆ ಇದು! ಇಂದು ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಟ್ಟ ಸಂಸ್ಥೆ ಅದು. ಈಗಲೂ ಮಂಗಳೂರು ಕಡೆಗೆ ಪ್ರಯಾಣಿಸುವಾಗ ಹೆದ್ದಾರಿಯ ಪಕ್ಕದಲ್ಲಿ ಮೈಚಾಚಿ ಮಲಗಿರುವ ಭವ್ಯವಾದ NITKಯ ಕ್ಯಾಂಪಸ್ ನೋಡುವಾಗ ರೋಮಾಂಚನ ಆಗುತ್ತದೆ. ಮಲ್ಯರ ಬಗ್ಗೆ ಅಭಿಮಾನ ಮೂಡುತ್ತದೆ.

ಮಂಗಳೂರಿನಿಂದ ಕುಂದಾಪುರಕ್ಕೆ ಹೋಗಲು ಬೇಕಿತ್ತು 10 ಘಂಟೆ!
ಆಗ ಮಂಗಳೂರಿನಿಂದ ಕಾರವಾರಕ್ಕೆ ಹೋಗುವ ದಾರಿಯಲ್ಲಿ 16 ಹೊಳೆಗಳು ಅಡ್ದ ಇದ್ದವು. ಮಂಗಳೂರಿನಿಂದ ಕುಂದಾಪುರಕ್ಕೆ ನಡುವೆ ಆರು ಹೊಳೆಗಳು. ದಾಟಿ ಹೋಗಲು ಬಸ್ಸು ಇಳಿದು ಫೆರ‍್ರಿ ಬೋಟ್ ಏರಬೇಕು ಮತ್ತು ಅಲ್ಲಿ ಪುನಃ ಬೇರೆ ಬಸ್ ಕಾಯಬೇಕು. ಹಾಗೆ ಹೀಗೆ ಅಂತ ಮಂಗಳೂರಿನಿಂದ ಕುಂದಾಪುರ ತಲುಪಲು ಕನಿಷ್ಠ 10 ಘಂಟೆಯ ಅವಧಿಯು ಬೇಕಿತ್ತು. ಮಲ್ಯರ ಕಾಲದಲ್ಲಿ ನೇತ್ರಾವತಿ, ಕೂಳೂರು, ಮೂಲ್ಕಿ, ಉದ್ಯಾವರ, ಬ್ರಹ್ಮಾವರ, ಕಲ್ಯಾಣಪುರ, ಗಂಗೊಳ್ಳಿಯ ಸೇತುವೆಗಳು ಪೂರ್ತಿ ಆದವು. ಈಗ ಕೇವಲ ಎರಡು ಘಂಟೆಯಲ್ಲಿ ಮಂಗಳೂರಿನಿಂದ ಕುಂದಾಪುರಕ್ಕೆ ಹೆದ್ದಾರಿಯ ಮೂಲಕ ತಲುಪಲು ಸಾಧ್ಯ ಆಗಿದೆ. ಮತ್ತೆ ಮತ್ತೆ ಮಲ್ಯರು ನೆನಪಾಗುವುದು ಇಂತಹ ಕಾರಣಕ್ಕೆ!

ಶ್ರೀನಿವಾಸ್ ಮಲ್ಯರು ಮಾಡಿದ ಅಭಿವೃದ್ಧಿ ಕೆಲಸಗಳಿಂದ ಇಂದು ಕರಾವಳಿ ಕರ್ನಾಟಕವು ಭಾರಿ ಅಭಿವೃದ್ಧಿಯನ್ನು ಹೊಂದಲು ಸಾಧ್ಯವಾಯಿತು. ಅವರ ದೂರದೃಷ್ಟಿ ಮತ್ತು ಸಂಕಲ್ಪ ಶಕ್ತಿಗಳು ಅಸಾಧಾರಣ ಆಗಿದ್ದವು.

1965ರ ಡಿ.19ರಂದು ಶ್ರೀನಿವಾಸ ಮಲ್ಯರು ದೆಹಲಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಇಡೀ ರಾಷ್ಟ್ರವು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು. ಅವರಿಗೆ ಮಕ್ಕಳು ಇರಲಿಲ್ಲ.

ಮಲ್ಯರನ್ನು ಮಂಗಳೂರು ಮರೆಯಲಿಲ್ಲ!
ಮುಂದೆ ಮಂಗಳೂರಿನ NMPT ಮತ್ತು ಪದುವಾ ಪ್ರೌಢಶಾಲೆಗಳ ಮುಂಭಾಗದಲ್ಲಿ ಅವರ ಆಳೆತ್ತರದ ಪ್ರತಿಮೆಗಳು ಅನಾವರಣ ಆದವು. NITK ಸಂಸ್ಥೆಯಲ್ಲಿ ಅವರ ಹೆಸರಿನ ಒಂದು ಸುಸಜ್ಜಿತವಾದ ಸಭಾಂಗಣ ಇದೆ. 2002ರಲ್ಲಿ ಜಿಲ್ಲಾಡಳಿತವು ಅವರ ಜನ್ಮ ಶತಾಬ್ದಿಯನ್ನು ಅತ್ಯಂತ ಅದ್ದೂರಿ ಆಗಿ ಆಚರಿಸಿ ಅವರನ್ನು ಗೌರವಿಸಿತು. ನಗರದ ಕೇಂದ್ರದಲ್ಲಿ ಇರುವ ಪಡೀಲ್- ಪಂಪವೆಲ್ ಜೋಡಿಸುವ ರಸ್ತೆಗೆ ಅವರ ಹೆಸರಿಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕರಾವಳಿ ಕರ್ನಾಟಕದ ಪ್ರತೀ ಒಬ್ಬರೂ ಅವರನ್ನು ಹೃದಯದಲ್ಲಿ ಧಾರಣೆ ಮಾಡುವ ಅಗತ್ಯ ಇದೆ. ಈಗಿನ ಜನಾಂಗಕ್ಕೆ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಕೊಡುಗೆಗಳು ಮರೆತು ಹೋಗಬಾರದು. ಉಳ್ಳಾಲ ಶ್ರೀನಿವಾಸ ಮಲ್ಯ ಅವರಿಗೆ ನಮ್ಮೆಲ್ಲರ ಭಾವಸ್ಪರ್ಶದ ಶೃದ್ಧಾಂಜಲಿ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಹುಡುಗಿಯರು ಸಿನಿಮಾದಲ್ಲಿ ನಟಿಸುವುದೇ ಅಪರಾಧ ಎಂಬ ಕಾಲದಲ್ಲಿ ಆಕೆ ಸೂಪರ್ ಸ್ಟಾರ್ ಆಗಿ ಮೆರೆದಿದ್ದರು!

Exit mobile version