Site icon Vistara News

ರಾಜ ಮಾರ್ಗ ಅಂಕಣ: ವಜ್ರಮುನಿ ಸಿನಿಮಾದಲ್ಲಷ್ಟೇ ಖಳ, ನಿಜ ಬದುಕಲ್ಲಿ ಅಪ್ಪಟ ವಜ್ರ!

Raja Marga column: villain on screen, Real hero off screen.

Raja Marga column: villain on screen, Real hero off screen.

1970ರ ದಶಕ. ರಾಜಕುಮಾರ್ ಅಭಿನಯದ ‘ಪ್ರೇಮದ ಕಾಣಿಕೆ’ ಸಿನಿಮಾ ಆಗ ಎಲ್ಲಾ ಕಡೆ ರಿಲೀಸ್ ಆಗಿತ್ತು. ಅದರಲ್ಲಿ ಖಳನಾಗಿ ನಟಿಸಿದ್ದ ವಜ್ರಮುನಿ ಒಂದು ಟೆಂಟ್ ಥಿಯೇಟರಲ್ಲಿ ಜನರ ಮಧ್ಯೆ ಕೂತು ಸಿನಿಮಾ ನೋಡಿ ಖುಷಿ ಪಡುತ್ತಿದ್ದರು. ಸಿನೆಮಾ ಮುಗಿದು ಹೊರಬರುವ ಹೊತ್ತಿಗೆ ಎಲ್ಲಿಂದಲೋ ಓಡಿ ಬಂದ ಒಬ್ಬಳು ಅಜ್ಜಿ ಅವರ ಕಾಲರ್ ಹಿಡಿದು “ಏನೋ, ಧೂರ್ತ! ಹುಡುಗಿಯರಿಗೆ ಯಾಕೋ ತ್ರಾಸ ಮಾಡ್ತೀಯ? ನಿಂಗೆ ಅಕ್ಕ, ತಂಗಿ ಯಾರೂ ಇಲ್ಲವೇನೋ!” ಎಂದು ಕಪಾಳಕ್ಕೆ ಎರಡು ಏಟು ಹೊಡೆದೇ ಬಿಟ್ಟರು! ವಜ್ರಮುನಿ ಮೆಲ್ಲನೆ ಗಲ್ಲ ಸವರುತ್ತ
“ಥಾಂಕ್ಸ್ ಅಜ್ಜಿ, ನನಗಿಂದು ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಬಂದಷ್ಟೇ ಖುಷಿ ಆಯ್ತು!” ಎಂದಿದ್ದರು.
ಅದು ವಜ್ರಮುನಿ ಅವರ ಅಭಿನಯದ ಮತ್ತು ಸಜ್ಜನಿಕೆಯ ಒಂದು ಝಲಕ್!

1970-2000ರ ನಡುವೆ ಕನ್ನಡದ ಅನಿವಾರ್ಯ ನಟ!

ಆ ಮೂರು ದಶಕಗಳಲ್ಲಿ ಸಿನಿಮಾ ನೋಡುತ್ತ ಬಂದವರಿಗೆ ವಜ್ರಮುನಿ ಅನಿವಾರ್ಯ ಖಳ ನಟ. 30 ವರ್ಷಗಳಲ್ಲಿ ಅವರು ನಟಿಸಿದ್ದು 200ಕ್ಕಿಂತ ಹೆಚ್ಚಿನ ಸಿನಿಮಾಗಳು! ಆ ಬೆಂಕಿಯನ್ನು ಉಗುಳುವ ಕಣ್ಣುಗಳು, ಹಲ್ಲು ಕಡಿಯುತ್ತ ಡೈಲಾಗ್ ಸಿಡಿಸುವ ಕ್ರೌರ್ಯ, ದಪ್ಪ ಮೀಸೆ, ಸುರುಳಿಯಾದ ಗುಂಗುರು ಕೂದಲು, ಅಗಲವಾದ ಹಣೆ, ಜಮೀನುದಾರನ ಪಾತ್ರಕ್ಕೆ ಹೇಳಿ ಮಾಡಿಸಿದ ಒಂದು ಟಿಪಿಕಲ್ ಲುಕ್! ಅವರನ್ನು ಮೀರಿಸುವ ಖಳನಟ ಕನ್ನಡದಲ್ಲಿ ಆಗ ಬೇರೆ ಯಾರೂ ಇರಲಿಲ್ಲ. ಇದು ಬಹುಜನರ ಅನಿಸಿಕೆ. ನಾಟಕ ರಂಗದಲ್ಲಿ ಕೂಡ ಅವರು ಖಳ ಪಾತ್ರಗಳಿಗೆ ಭಾರೀ ಹೆಸರು ಮಾಡಿದ್ದರು .

ಬೆಂಗಳೂರು ನಗರದ ಕನಕನ ಪಾಳ್ಯದ ಕಾರ್ಪೊರೇಟರ್ ಒಬ್ಬರ ಮಗನಾಗಿ ಹುಟ್ಟಿದ ಅವರ ಮೊದಲ ಹೆಸರು ಸದಾನಂದ ಸಾಗರ್. ಸಿನಿಮಾಕ್ಕೆ ಬಂದಾಗ ಅವರ ಕುಲದೇವರ ಹೆಸರಿನ ಪ್ರಭಾವದಿಂದ ವಜ್ರಮುನಿ ಆದರು. ಪುಟ್ಟಣ್ಣ ಕಣಗಾಲರು ಅವರ ಪ್ರತಿಭೆಯ ಮೇಲೆ ನಂಬಿಕೆ ಇರಿಸಿ ‘ಮಲ್ಲಮ್ಮನ ಪವಾಡ’ ಸಿನಿಮಾದಲ್ಲಿ ಚಾನ್ಸ್ ನೀಡಿದರು. ಮುಂದೆ ಸಾಲು ಸಾಲು ಖಳಪಾತ್ರಗಳು.

ಹೀರೋನಷ್ಟೇ ಇಮೇಜ್‌ ಹೊಂದಿದ್ದ ವಿಲನ್‌ ವಜ್ರಮುನಿ!

ವಜ್ರಮುನಿ ಅವರ ಪಾತ್ರ ವೈವಿಧ್ಯ ಅದ್ಭುತ!

ಅದು ಸಾಮಾಜಿಕ, ಐತಿಹಾಸಿಕ, ಬಾಂಡ್, ಕಾಲ್ಪನಿಕ, ಪೌರಾಣಿಕ, ಜಾನಪದ……ಯಾವ ಕಥೆ ಆದರೂ ಅದಕ್ಕೆ ವಜ್ರಮುನಿ ತಕ್ಷಣವೆ ಹೊಂದಿಕೆ ಆಗಿಬಿಡುತ್ತಿದ್ದರು. ದೂರ್ವಾಸ, ಭೃಗು, ರಾವಣ, ಮೂಕಾಸುರ, ವಿಜ್ಞಾನಿ, ರಾಜಕಾರಣಿ, ಕುತಂತ್ರಿ, ಕಾಲೇಜು ಹುಡುಗ, ಕಿಲಾಡಿ, ಜೂಜುಕೋರ, ಉದ್ಯಮಿ, ಜಮೀನ್ದಾರ, ಕುಡುಕ, ಲಂಪಟ, ಪಿಂಪ್….. ಹೀಗೆ ಅವರು ಮಾಡದ ಖಳಪಾತ್ರವೇ ಇರಲಿಲ್ಲ. ಕನ್ನಡ ಸಿನಿಮಾ ರಂಗದಲ್ಲಿ ಆಗ ತೂಗುದೀಪ ಶ್ರೀನಿವಾಸ್, ಧೀರೇಂದ್ರ ಗೋಪಾಲ್, ಬಾಲಕೃಷ್ಣ, ಸುಧೀರ್, ಪ್ರಭಾಕರ ಮೊದಲಾದ ಸಾಕಷ್ಟು ಖಳನಟರು ಚಾಲ್ತಿಯಲ್ಲಿ ಇದ್ದರೂ ವಜ್ರಮುನಿಯವರ ಕೀರ್ತಿ ಮತ್ತು ಬೇಡಿಕೆಗಳು ಕಡಿಮೆ ಆಗಲಿಲ್ಲ! ಆ ಕಾಲದಲ್ಲಿ ಮೂರು ಶಿಫ್ಟಲ್ಲಿ ಶೂಟಿಂಗಿನಲ್ಲಿ ಬ್ಯುಸಿ ಆಗಿದ್ದ ಒಬ್ಬನೇ ನಟ ಅಂದರೆ ಅದು ವಜ್ರಮುನಿ! ಪ್ರತಿಯೊಬ್ಬ ನಿರ್ದೇಶಕ ತನ್ನ ಸಿನಿಮಾದಲ್ಲಿ ವಜ್ರಮುನಿ ಒಂದಲ್ಲ ಒಂದು ಪಾತ್ರ ಮಾಡಬೇಕೆಂದು ಆಸೆ ಪಡುತ್ತಿದ್ದ ಕಾಲ ಅದು.

ರಾಜಕುಮಾರ್ ಅವರ ಅತೀ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದ ಕೀರ್ತಿ ಅವರದ್ದು. ಮಯೂರ, ಸಿಪಾಯಿ ರಾಮು, ಸಂಪತ್ತಿಗೆ ಸವಾಲ್, ಬಹದ್ದೂರ್ ಗಂಡು, ಮಲ್ಲಮ್ಮನ ಪವಾಡ, ದಾರಿ ತಪ್ಪಿದ ಮಗ, ಶಂಕರ್ ಗುರು, ಆಕಸ್ಮಿಕ, ಬೆತ್ತಲೆ ಸೇವೆ ……. ಸಿನಿಮಾಗಳಲ್ಲಿ ಅವರ ಅಭಿನಯವು ಸ್ಮರಣೀಯ.

ವಜ್ರಮುನಿ ಬಗ್ಗೆ ಡಾಕ್ಟರ್ ರಾಜಕುಮಾರ್ ಹೇಳಿದ್ದು ಹೀಗೆ..

“ಅವರ ಖಳ ಪಾತ್ರಗಳಿಂದ ನನ್ನ ಪಾತ್ರಕ್ಕೆ ತೂಕ ಬರುತ್ತಿತ್ತು. ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅತ್ಯುತ್ತಮ ಖಳನಟ ಪ್ರಶಸ್ತಿ ಕೊಡುವ ಸಂಪ್ರದಾಯ ಇಲ್ಲ. ಹಾಗಿದ್ದರೆ ಎಲ್ಲ ವರ್ಷಗಳೂ ಆ ಪ್ರಶಸ್ತಿಯು ವಜ್ರಮುನಿ ಅವರಿಗೆ ಸಿಕ್ಕಿರುತ್ತಿತ್ತು!”

ಇದು ವಜ್ರಮುನಿ ಅವರಿಗೆ ಸಿಕ್ಕಿದ ಅದ್ಭುತವಾದ ಪ್ರಶಸ್ತಿ. ‘ಬೆತ್ತಲೆ ಸೇವೆ’ ಸಿನೆಮಾದಲ್ಲಿ ಖಳಪಾತ್ರವಿದ್ದರೂ ಅತ್ಯುತ್ತಮ ಪೋಷಕನಟ ರಾಜ್ಯ ಪ್ರಶಸ್ತಿ ವಜ್ರಮುನಿ ಅವರಿಗೆ ಬಂದಿತು! ಪ್ರಚಂಡ ರಾವಣ ಸಿನಿಮಾದಲ್ಲಿ ಅವರ ಪಾತ್ರವನ್ನು ನಾವು ಮರೆಯಲು ಸಾಧ್ಯವೇ ಇಲ್ಲ!

ಸಿನೆಮಾದಲ್ಲಿ ವಿಲನ್, ನಿಜ ಜೀವನದಲ್ಲಿ ಅಷ್ಟೇ ಸಜ್ಜನ!

ಈ ನಟಭೈರವ ವಜ್ರಮುನಿ ಎಂಥೆಂಥ ಖಳಪಾತ್ರಗಳಲ್ಲಿ ಪರದೆಯ ಮೇಲೆ ಮೋಡಿ ಮಾಡಿದ್ದರೂ ನಿಜ ಜೀವನದಲ್ಲಿ ಅಷ್ಟೇ ಸಜ್ಜನ ಆಗಿದ್ದರು. ಯಾವುದೇ ಸಿನಿಮಾದಲ್ಲಿ ನಾಯಕಿಯ ರೇಪ್ ಮಾಡುವ ಸೀನ್ ಇದ್ದರೆ ಅವರು ಮೊದಲು ನಾಯಕಿಯ ಕ್ಷಮೆ ಕೇಳಿ ನಂತರ ಅಭಿನಯ ಮಾಡುತ್ತಿದ್ದರು! ಯಾವ ಪ್ರತಿಫಲದ ಅಪೇಕ್ಷೆ ಮಾಡದೇ ನೂರಾರು ಜನರಿಗೆ ಅವರು ಸಹಾಯ ಮಾಡಿದ ನಿದರ್ಶನಗಳು ಇವೆ. “ನನಗೆ ಬರೇ ವಿಲನ್ ಪಾತ್ರ ಬೇಡ ಕಣಪ್ಪ. ಒಳ್ಳೇ ಭಾವನೆಯ ಪಾತ್ರ ಕೊಡಿ. ಚಂದ ಮಾಡಿ ಕೊಡ್ತೇನೆ. ಬೇಕಾದರೆ ಸಂಭಾವನೆ ಕೊಡಬೇಡಿ” ಎನ್ನುತ್ತಿದ್ದ ಅವರಿಗೆ ರಾಯರು ಬಂದರು ಮಾವನ ಮನೆಗೆ, ಗೌರಿ ಕಲ್ಯಾಣ, ಭಕ್ತ ಕುಂಬಾರ ಮೊದಲಾದ ಸಿನಿಮಾಗಳಲ್ಲಿ ಸಜ್ಜನ ಪಾತ್ರಗಳು ದೊರೆತವು. ಅಂತಹ ಪಾತ್ರಕ್ಕೂ ಅವರು ನ್ಯಾಯ ಸಲ್ಲಿಸಿದ್ದಾರೆ.

2006ರಲ್ಲಿ ನಮ್ಮನ್ನಗಲಿದ ಈ ಅಪ್ಪಟ ವಜ್ರಕ್ಕೆ ನಮ್ಮ ಶ್ರದ್ಧಾಂಜಲಿ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಗು ಒಂದು ಅದ್ಭುತ ಮಾನಸಿಕ ಚಿಕಿತ್ಸೆ ಎಂದರೆ ನೀವು, ನಾವು ನಂಬಲೇ ಬೇಕು!

Exit mobile version