Site icon Vistara News

ರಾಜ ಮಾರ್ಗ ಅಂಕಣ: ರಸ್ತೆ ಬದಿ ತರಕಾರಿ ಮಾರಿ ಉಚಿತ ಆಸ್ಪತ್ರೆ ಕಟ್ಟಿದ ಸುಭಾಷಿಣಿ ಮಿಸ್ತ್ರಿ

subhashini mistri

#image_title

ಕೊರೊನಾ ನಂತರದಲ್ಲಿ ನಮಗೆ ಭಾರತೀಯರಿಗೆ ಆಸ್ಪತ್ರೆಗಳ ಪ್ರಾಮುಖ್ಯತೆಯು ನಿಧಾನವಾಗಿ ಅರಿವಾಗತೊಡಗಿದೆ. ನಮ್ಮಲ್ಲಿ ಸುಸಜ್ಜಿತವಾದ ಸರಕಾರಿ ಆಸ್ಪತ್ರೆಗಳನ್ನು ನಿರ್ಮಿಸುವ ಕೆಲಸ ಗಂಭೀರವಾಗಿ ಆಗದಿರುವುದರಿಂದ ನಾವು ಈಗ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಕೋಲ್ಕೊತಾದಲ್ಲಿ ತರಕಾರಿ ಮಾರಿ ಒಂದು ಸಂಪೂರ್ಣ ಉಚಿತ ಆಸ್ಪತ್ರೆಯನ್ನು ಕಟ್ಟಿದ ಸುಭಾಷಿಣಿ ಮಿಸ್ತ್ರಿ ಅವರ ಸಾಧನೆಯು ನಿಜಕ್ಕೂ ಅದ್ಭುತ ಎಂದೇ ನನ್ನ ಭಾವನೆ. ಇಡೀ ಜೀವನದಲ್ಲಿ ಬಡತನ, ಹಸಿವು, ಸಂಕಷ್ಟಗಳ ದಾರಿ ಕ್ರಮಿಸಿ, ಕೊನೆಗೆ ತನ್ನ ಕನಸನ್ನು ಪೂರ್ತಿ ಮಾಡಿದ ಆಕೆಯ ಕಥೆಯು (ರಾಜ ಮಾರ್ಗ ಅಂಕಣ) ತುಂಬಾನೇ ರೋಚಕವಾಗಿದೆ!

ಆಕೆ 24ನೇ ವರ್ಷಕ್ಕೇ ವಿಧವೆ ಆದವರು

ಆಕೆಯ ಹೆತ್ತವರಿಗೆ ಒಟ್ಟು 14 ಜನ ಮಕ್ಕಳು. ಬಂಗಾಳದಲ್ಲಿ ಆಗ ತೀವ್ರ ಬರಗಾಲ. ಹಸಿವಿನಿಂದ ಏಳು ಮಕ್ಕಳು ಸತ್ತುಹೋದರು. ಈಕೆಯು ಶಾಲೆಗೇ ಹೋಗಲಿಲ್ಲ. 12ನೆಯ ವರ್ಷಕ್ಕೆ ಕೂಲಿ ಕಾರ್ಮಿಕರಾದ ಚಂದ್ರರೊಂದಿಗೆ ಮದುವೆ. ಹತ್ತು ವರ್ಷಗಳ ಅವಧಿಯಲ್ಲಿ ನಾಲ್ಕು ಮಕ್ಕಳು ಹುಟ್ಟಿದರು. 24 ವರ್ಷಕ್ಕೆ ಕಾಲಿಡುವ ಮೊದಲೇ ಆಕೆ ಗಂಡನನ್ನು ಕಳೆದುಕೊಂಡು ವಿಧವೆ ಆಗುತ್ತಾರೆ.

ಗಂಡನಿಗೆ ಕಾಯಿಲೆ ಬಂದಾಗ ಸರಕಾರಿ ಆಸ್ಪತ್ರೆಯ ವೈದ್ಯರು ಹಣವಿಲ್ಲದ ಕಾರಣ ಸರಿಯಾಗಿ ಚಿಕಿತ್ಸೆ ಕೊಟ್ಟಿರಲಿಲ್ಲ ಎನ್ನುವುದು ಅವರ ಆಪಾದನೆ! ಒಂದು ಸಣ್ಣ ಗುಡಿಸಲಲ್ಲಿ ಸಣ್ಣ ಸಣ್ಣ ನಾಲ್ಕು ಮಕ್ಕಳನ್ನು ಮಡಿಲಲ್ಲಿ ಮಲಗಿಸಿ ಆಕೆಯಾದರೂ ಏನು ಮಾಡಲು ಸಾಧ್ಯ?

ಆಸ್ಪತ್ರೆ ಕಟ್ಟುವ ಕನಸು ಆರಂಭ

ಬೇರೆ ದಾರಿ ಇಲ್ಲದೆ ಆಕೆ ತನ್ನ ಎರಡು ಮಕ್ಕಳನ್ನು ಅನಾಥಾಶ್ರಮಕ್ಕೆ ಸೇರಿಸಿದರು. ನಾಲ್ಕು ಮನೆಗಳಲ್ಲಿ ಮುಸುರೆ ತಿಕ್ಕುವ ಕೆಲಸದಿಂದ ತಿಂಗಳಿಗೆ 100 ರೂ. ಆದಾಯ ಬರುತ್ತಿತ್ತು. ಮುಸುರೆಯ ಮನೆಗಳಿಂದ ಮನೆಗೆ ತಂಗಳು, ಅಂಬಲಿ ಬಂದು ಹಸಿವು ನೀಗುತ್ತಿತ್ತು. ಸಂಬಳದ ಅಷ್ಟೂ ಹಣವನ್ನು ಅಂಚೆ ಇಲಾಖೆಯಲ್ಲಿ ಆರ್.ಡಿ. ಖಾತೆ ತೆರೆದು ಆಕೆ ಉಳಿತಾಯ ಮಾಡತೊಡಗಿದರು. ಗಂಡ ತೀರಿ ಹೋದಾಗಲೇ ಒಂದು ಸಂಪೂರ್ಣ ಉಚಿತ ಆಸ್ಪತ್ರೆಯನ್ನು ತೆರೆಯಬೇಕು ಎನ್ನುವ ಸಂಕಲ್ಪವು ಆಕೆಯಲ್ಲಿ ಗಟ್ಟಿಯಾಗಿತ್ತು. ಮುಂದೆ ಇಟ್ಟಿಗೆ ಕೆಲಸ, ಕೂಲಿ ಕೆಲಸ, ರಸ್ತೆ ಬದಿ ತರಕಾರಿ ಮಾರುವ ಕೆಲಸ ಎಲ್ಲವನ್ನೂ ಮಾಡಿದರು. ಹಸಿವು ಮರೆತೇಬಿಟ್ಟರು. ಅವರ ಆಸ್ಪತ್ರೆಯ ಕನಸು ದಿನದಿಂದ ದಿನಕ್ಕೆ ಗಟ್ಟಿಯಾಗತೊಡಗಿತು. ಮುಂದೆ ಒಂದು ಬಾಡಿಗೆಯ ಅಂಗಡಿಯಲ್ಲಿ ತರಕಾರಿ ವ್ಯಾಪಾರವು ಸಾಗಿತು.

ಸುಭಾಷಿಣಿ ಮಿಸ್ತ್ರಿ ತಾನು ಕಟ್ಟಿದ ಆಸ್ಪತ್ರೆಯ ಎದುರು

ಒಂದೊಂದು ಹನಿಯು ಸೇರುತ್ತಾ ಹೋಯಿತು

ಇಪ್ಪತ್ತು ವರ್ಷಗಳ ಅವಿರತ ದುಡಿಮೆಯಿಂದ 20,000 ರೂ. ಉಳಿತಾಯವು ಅವರ ಖಾತೆಯಲ್ಲಿ ಸಂಗ್ರಹವಾಗಿತ್ತು. 1992ರಲ್ಲಿ 10, 000ರೂ. ವಿನಿಯೋಗ ಮಾಡಿ ಒಂದು ಎಕರೆಯಷ್ಟು ಭೂಮಿಯನ್ನು ಖರೀದಿಸಿದರು.

ಹ್ಯೂಮಾನಿಟಿ ಟ್ರಸ್ಟ್ ಸ್ಥಾಪನೆ ಆಯಿತು

ಅಷ್ಟು ಹೊತ್ತಿಗೆ ಯಾರದೋ ಸಲಹೆ ಮೇರೆಗೆ ನೆರೆಯ ಹಲವರನ್ನು ಸೇರಿಸಿ ಹ್ಯುಮಾನಿಟಿ ಟ್ರಸ್ಟ್ ಎಂಬ NGO ಸ್ಥಾಪಿಸಿದರು. 20 x20 ಚದರ ಅಡಿ ವಿಸ್ತೀರ್ಣದ ಒಂದು ತಾತ್ಕಾಲಿಕ ಶೆಡ್ ತೆರೆದು ಆಸ್ಪತ್ರೆಯ ಬೋರ್ಡು ಹಾಕಿಯೇ ಬಿಟ್ಟರು! ಆದರೆ ವೈದ್ಯರು ಬೇಡವೇ? ವೈದ್ಯಕೀಯ ಸಲಕರಣೆ ಇಲ್ಲದೆ ಆಸ್ಪತ್ರೆ ನಡೆಸುವುದು ಹೇಗೆ?

ಸಾಲು ಸಾಲು ಸವಾಲುಗಳು

ಮುಂದೆ ಸುಭಾಷಿಣಿ ಅವರು ಇನ್ನಷ್ಟು ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು. ಬುದ್ಧಿವಂತನಾಗಿದ್ದ ಕಿರಿಯ ಮಗ ಅಜಯ್ MBBS ಮುಗಿಸಿಬಂದಿದ್ದ. ಮಗಳದ್ದು ನರ್ಸಿಂಗ್ ಕೋರ್ಸ್ ಆಗಿತ್ತು. ಇನ್ನೂ ಐದು ವೈದ್ಯರು ವಾರಕ್ಕೆ 4-6 ಘಂಟೆ ಉಚಿತ ಸೇವೆ ಕೊಡಲು ಮುಂದೆ ಬಂದರು. ಈ ಅಜ್ಜಿ ಮನೆ ಮನೆಗೆ ಹೋಗಿ ಜನರಲ್ಲಿ ಉಳಿಕೆಯಾಗಿದ್ದ ಔಷಧ, ಮಾತ್ರೆಗಳನ್ನು ಸಂಗ್ರಹ ಮಾಡಿ ತಂದರು. ನೂತನ ಕಟ್ಟಡದ ಶಂಕುಸ್ಥಾಪನೆ ಆಯ್ತು. ಮತ್ತೆ ಭಿಕ್ಷಾಪಾತ್ರೆಯನ್ನು ಹಿಡಿದು ಅವರು ಹೊರಟೇ ಬಿಟ್ಟರು.

ಅಜ್ಜಿಗೆ ವಿಶ್ರಾಂತಿ, ನಿದ್ರೆ ಮರೆತೇ ಹೋಗಿತ್ತು!

ಪದ್ಮಶ್ರೀ ಪ್ರಶಸ್ತಿ ಪ್ರದಾನ

ದಾನ ರೂಪವಾಗಿ ಕಲ್ಲು, ಮರ, ಮರಳು, ಸಿಮೆಂಟು ಬಂದವು. ಹಲವರು ಬಂದು ಶ್ರಮದಾನ ಮಾಡಿದರು. ಸ್ಥಳೀಯ ಎಂಪಿ ಮಾಲಿನಿ ಭಟ್ಟಾಚಾರ್ಯ ಅವರು ಆಕೆಯ ನೆರವಿಗೆ ನಿಂತರು. ನೋಡು ನೋಡುತ್ತಿದ್ದಂತೆ ಒಟ್ಟು 18,000 ಚದರಡಿ ವಿಸ್ತೀರ್ಣದ ಎರಡು ಅಂತಸ್ತಿನ ಹ್ಯೂಮಾನಿಟಿ ಆಸ್ಪತ್ರೆ ಎದ್ದು ನಿಂತಿತು! 1996ರಲ್ಲಿ ಘನವೆತ್ತ ಪಶ್ಚಿಮ ಬಂಗಾಳದ ರಾಜ್ಯಪಾಲರು ಬಂದು ಅಜ್ಜಿಯ ಕನಸಿನ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು!

ಮುಂದೆ ಆಕೆಯು ಪಶ್ಚಿಮ ಬಂಗಾಳ ಸರಕಾರದ ಎದೆಯ ಮೇಲೆ ಕೂತು ಅವರು ತನ್ನ ಆಸ್ಪತ್ರೆಗೆ ತಜ್ಞರಾದ ವೈದ್ಯರನ್ನು ನೇಮಕ ಮಾಡಿಸಿಕೊಂಡರು. ಹ್ಯುಮಾನಿಟಿ ಆಸ್ಪತ್ರೆಯು ಇಂದು ಗ್ರಾಮಾಂತರ ಭಾಗದ ಸಂಪೂರ್ಣ ಉಚಿತ ಮತ್ತು ಸುಸಜ್ಜಿತ ಆಸ್ಪತ್ರೆ ಆಗಿದೆ.

2009ರಲ್ಲಿ ಅವರಿಗೆ ವಿಶ್ವಮಟ್ಟದಲ್ಲಿ ‘ಬಲಿಷ್ಠ ಉಕ್ಕಿನ ಮಹಿಳೆ ಪ್ರಶಸ್ತಿ’ ಒಲಿದಿದೆ. 2018ರಲ್ಲಿ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರನ್ನು ಗೌರವಿಸಿದೆ. ಅಜ್ಜಿ ತನ್ನ ಕನಸನ್ನು ಪೂರ್ತಿ ಮಾಡಿ ಈಗ ಬಾಯ್ತುಂಬಾ ನಗುತ್ತಿದ್ದಾರೆ. ಅವರಿಗೆ ಈಗ 80 ವರ್ಷ.

ಇದನ್ನೂ ಓದಿ : ರಾಜಮಾರ್ಗ ಅಂಕಣ: ಸೋಷಿಯಲ್ ಮೀಡಿಯಾ ಚಾರಿಟಿ; ಕಾಳಜಿ ಜತೆಗೆ ಇರಲಿ ತುಸು ಎಚ್ಚರ!

Exit mobile version