ಅಂದು 1989 ಡಿಸೆಂಬರ್ 16. ಪಾಕಿಸ್ಥಾನದ ಪೇಶಾವರ್ ಮೈದಾನದಲ್ಲಿ ಭಾರತ-ಪಾಕಿಸ್ತಾನ ನಡುವೆ ಏಕದಿನ ಪಂದ್ಯ ಏರ್ಪಾಟು ಆಗಿತ್ತು. ಆದರೆ ಜೋರು ಮಳೆ ಸುರಿದ ಕಾರಣ ಇಡೀ ಮೈದಾನದಲ್ಲಿ ನೀರು ನಿಂತಿತ್ತು. ಆದರೆ ಅದು ಹೈ ವೋಲ್ಟೇಜ್ ಪಂದ್ಯ ಆಗಿದ್ದ ಕಾರಣ 30,000 ಪ್ರೇಕ್ಷಕರು ಬಂದು ಕೂತಾಗಿತ್ತು. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಖವನ್ನು ಉಳಿಸಿಕೊಳ್ಳಲು ಪಂದ್ಯವನ್ನು ನಡೆಸಲೇ ಬೇಕಾಗಿತ್ತು.
ಅಂದಿನ ಪಂದ್ಯವನ್ನು 20 ಓವರ್‌ಗಳ ಪ್ರದರ್ಶನ ಪಂದ್ಯ ಎಂಬ ಒಪ್ಪಂದದಲ್ಲಿ ಮ್ಯಾಚ್ ಆರಂಭ ಆಯಿತು. ಮೊದಲು ಪಾಕ್ ಇಪ್ಪತ್ತು ಓವರ್ ಪೂರ್ತಿ ಆಡಿ ನಾಲ್ಕು ವಿಕೇಟಿಗೆ 157 ಸ್ಕೋರ್ ಮಾಡಿತು. ಆ ದಿನಗಳಲ್ಲಿ ಅದು ಬಹುದೊಡ್ಡ ಟಾರ್ಗೆಟ್ ಆಗಿತ್ತು.
ಮುಂದೆ ಭಾರತದ ಚೇಸಿಂಗ್ ಆರಂಭ ಆಯಿತು. ಒಂದು ಹಂತದಲ್ಲಿ ಮೂರು ವಿಕೆಟ್ ನಷ್ಟಕ್ಕೆ ಭಾರತ 88 ಮಾಡಿತ್ತು. ನಾಯಕ ಶ್ರೀಕಾಂತ್ ಮತ್ತು ಸಚಿನ್ ಕ್ರೀಸ್‌ನಲ್ಲಿ ಇದ್ದರು. ಸಚಿನ್ ಆಗ ವಿಶ್ವ ಕ್ರಿಕೆಟ್ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಮಾತ್ರ. ವಯಸ್ಸು ಇನ್ನೂ 16 ಮಾತ್ರ! ಆಗ ಪ್ರತೀ ಓವರಿಗೆ 15 ಸ್ಕೋರ್ ಮಾಡುವ ಸವಾಲಿತ್ತು.
ಆಗ ಮುಸ್ತಾಕ್ ಅಹಮದ್ ಅವರ ಒಂದು ಓವರಿನಲ್ಲಿ ಸಚಿನ್ ಎರಡು ಬೌಂಡರಿ, ಒಂದು ಸಿಕ್ಸ್ ಹೊಡೆದಾಗ ಎಲ್ಲ ಕಡೆಯಲ್ಲೂ ಮೌನ ಆವರಿಸಿತ್ತು. ಮುಂದೆ ಬೌಲಿಂಗ್ ಮಾಡಲು ಬಂದವರು ಅಬ್ದುಲ್ ಖಾದಿರ್. ಪಾಕಿಸ್ತಾನದ ಪ್ರಖ್ಯಾತ ಲೆಗ್ ಸ್ಪಿನ್ನರ್. ಆತ ನಿವೃತ್ತಿಯ ಅಂಚಿನಲ್ಲಿ ಇದ್ದರು.
ಆತ ಸಚಿನ್ ಹತ್ತಿರಕ್ಕೆ ಬಂದು ನಿಂತು “ಹುಡುಗ, ಈಗ ಮುಸ್ತಾಕ್ ಬೌಲಿಂಗ್‌ನಲ್ಲಿ ಹೊಡೆದೆಯಲ್ಲ. ನನಗೂ ಹಾಗೆ ಹೊಡೆಯುವೆಯಾ?” ಎಂದು ಕೇಳಿದರು.
ಆಗ ಸಚಿನ್ “ನೀವು ದೊಡ್ಡವರು. ನಾನು ನಿಮ್ಮ ಮಗನ ಪ್ರಾಯದವನು. ನೀವು ಜಗತ್ತಿನ ಬೆಸ್ಟ್ ಸ್ಪಿನ್ನರ್. ನೀವು ನನಗೆ ಹೊಡೆಯುವಂತೆ ಬೌಲಿಂಗ್ ಮಾಡುವುದಿಲ್ಲ ಬಿಡಿ!” ಎಂದರು.
ಆಗ ಅಬ್ದುಲ್ ಖಾದಿರ್ ಸಚಿನ್ ಕಿವಿಯಲ್ಲಿ ಏನೋ ಹೇಳಿ ಬೌಲಿಂಗ್ ಕ್ರೀಸಿಗೆ ಬಂದು ಬೌಲಿಂಗ್ ಆರಂಭ ಮಾಡಿದರು. ಆ ಓವರಿನಲ್ಲಿ ಸಚಿನ್ ಮೂರು ಸಿಕ್ಸರ್, ಒಂದು ಬೌಂಡರಿ ಚಚ್ಚಿದರು! ಆ ಓವರಿನಲ್ಲಿ ಸಚಿನ್ ಸಿಡಿಸಿದ್ದು ಬರೋಬ್ಬರಿ 28 ರನ್! ನಾಲ್ಕು ಸಿಕ್ಸರ್, ಒಂದು ಬೌಂಡರಿ! ಸಚಿನ್ ಕೇವಲ 18 ಎಸೆತಗಳಲ್ಲಿ 50 ರನ್ ಪರ್ವತವನ್ನು ಪೇರಿಸಿ ಬಿಟ್ಟಿದ್ದರು. ಆಗ ಅದೇ ಅಬ್ದುಲ್ ಖಾದಿರ್ ಬಂದು ಸಚಿನರನ್ನು ಅಭಿನಂದಿಸಿದರು! ದುರದೃಷ್ಟವಶಾತ್ ಭಾರತ ಆ ಪಂದ್ಯವನ್ನು ಸೋತಿತು.
ಆದರೆ ಸಚಿನ್ ಕಿವಿಯಲ್ಲಿ ಅಬ್ದುಲ್ ಖಾದಿರ್ ಉಸಿರಿದ್ದು ಏನು ಅನ್ನುವುದನ್ನು ಮುಂದೆ ಸ್ವತಃ ಸಚಿನ್ ಒಂದು ಟಿವಿಯ ಸಂದರ್ಶನದಲ್ಲಿ ಹೇಳಿದ್ದಾರೆ.
ಅಬ್ದುಲ್ ಖಾದಿರ್ ಸಚಿನ್ ಹತ್ತಿರ ಬಂದು “ನೀನು ನನ್ನ ಮಗನ ಪ್ರಾಯ ಎಂದು ಹೇಳಿ ನನ್ನ ಭಾವನೆಗಳನ್ನು ಬಡಿದು ಎಬ್ಬಿಸಿದ್ದಿ ಹುಡುಗ! ನಿನಗೆ ನಾನು ಎಂದಿನಂತೆ ಬೌಲಿಂಗ್ ಮಾಡುವೆ. ಆದರೆ ನೀನು ನನ್ನನ್ನು ಅತಿ ಸಾಧಾರಣ ಬೌಲರ್ ಎಂದು ಭಾವಿಸಿಕೊಂಡು ಆಡು!” ಎಂದು ಕಿವಿಯಲ್ಲಿ ಹೇಳಿದ್ದರು. ಸಚಿನ್ ಅದನ್ನು ಮನಸಲ್ಲಿ ಇಟ್ಟುಕೊಂಡು ಅಂದು ಅಬ್ದುಲ್ ಖಾದಿರ್ ಅವರನ್ನು ದಂಡಿಸಿದ್ದರು!
ಪಂದ್ಯ ಮುಗಿದ ನಂತರ ಅಬ್ದುಲ್ ಖಾದಿರ್ ಟಿವಿ ಕ್ಯಾಮೆರಾ ಮುಂದೆ ಹೇಳಿದ ಮಾತು ಇನ್ನೂ ಅದ್ಭುತ ಆಗಿತ್ತು.
“ಸಚಿನ್ ನನ್ನ ಮಗನ ಪ್ರಾಯದ ಹುಡುಗ. ಅವನ ಟೈಮಿಂಗ್ ಮತ್ತು ಕೌಶಲಗಳು ಅದ್ಭುತವೇ ಆಗಿದೆ. ಆತ ಮುಂದೆ ಬಹಳ ಎತ್ತರಕ್ಕೆ ಬೆಳೆಯುತ್ತಾನೆ ಅನ್ನುವುದು ಖಂಡಿತ. ನನಗೆ ಎಲ್ಲಕಿಂತ ಹೆಚ್ಚಾಗಿ ಆತನ ವಿನಯಶೀಲತೆಯು ಕನೆಕ್ಟ್ ಆಯಿತು!” ಎಂದು ಮಾತು ಮುಗಿಸಿದ್ದರು.
ಮುಂದೆ ಅಬ್ದುಲ್ ಖಾದಿರ್ ಸಚಿನ್ ಬಗ್ಗೆ ಹೇಳಿದ ಭವಿಷ್ಯವು ನಿಜ ಆಯಿತು. ಹಾಗೆಯೇ ಹೃದಯವಂತ ಲೆಜೆಂಡ್ ಬೌಲರ್ ಅಬ್ದುಲ್ ಖಾದಿರ್ 2019ರಲ್ಲಿ ನಿಧನ ಹೊಂದಿದರು.
ಇದನ್ನೂ ಓದಿ | ರಾಜ ಮಾರ್ಗ | ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!